Thursday, December 27, 2012

ಪವನ್'s ಡೈರೀಸ್ - ೧

ಕಾಲೇಜೆಂದರೆ ಹುಡುಗಿಯರು, ಸ್ನೇಹಿತರು, ಸಿನಿಮಾ, ಹೊಡೆದಾಟ ಇಷ್ಟೇ ಎಂದುಕೊಂಡಿದ್ದ ವಯಸ್ಸು, ಶಾಲೆಯಲ್ಲಾದರೆ ಒಂದು ಮಧ್ಯಾಹ್ನ ತಪ್ಪಿಸಿಕೊಂಡರೆ ವದೆ ಬೀಳುತಿತ್ತು, ಮನೆಯಿಂದ ಅಪ್ಪ ಅಮ್ಮನ ಕರೆದು ಕೊಂಡು ಬಾ ಎಂಬ ಆರ್ಡರ್ ಕೂಡ ಇರುತಿತ್ತು. ಆದ್ರೆ ಕಾಲೇಜಿನಲ್ಲಿ ಅದೆಲ್ಲ ಇಲ್ಲ, ನಮಗಿಷ್ಟಾ ಬಂದಿದ್ದೇ ಮಾಡಬಹುದು. ನಮ್ ಕಾಲೇಜು ಹಾಗೆ ಇತ್ತು ಬಿಡಿ, ಪ್ರಾಕ್ಸಿ ಹಾಕಲೇ ಒಂದಷ್ಟು ಪಂಡಿತರಿದ್ದರು, ಪರೇಶ, ಪ್ರಕಾಶ, ಪವನ, ಪ್ರವೀಣ, ಪ್ರದೀಪ ಎಲ್ರುಗೂ ಒಬ್ಬನೇ ಪ್ರೆಸೆಂಟ್ ಸರ್ ಅಂತಿದ್ದ.ಆ ತರಹ ಪಂಡಿತರು ಐದಾರು ಜನ ಇದ್ರು ನಮ್ ಕ್ಲಾಸಲ್ಲಿ, ಕ್ಲಾಸಲಿ ಕೂರಲಿ ಇಷ್ಟವಿಲ್ಲದಿದ್ರೆ ಮಗಾ ಪ್ರಾಕ್ಸಿ ಹಾಕ್ಬಿಡೋ ಅಂತ ಹೇಳಿ ಹೋಗೋದಷ್ಟೆ, ಒಬ್ಬ ಪಂಡಿತ ಇಲ್ಲ ಮಗ ನಾನು ಪ್ರದೀಪಂಗೆ ಹಾಕ್ತಾ ಇದ್ದೀನಿ ಅಂದ್ರೆ ಇನ್ನೊಬ್ಬ ಪಂಡಿತ ಸಿಕ್ತಾ ಇದ್ದ. ಒಟ್ನಲ್ಲಿ ನಾನು ಕ್ಲಾಸಲ್ಲಿ ಕೂರದೆ ಇದ್ರು ಅಟ್ಟೆಂಡನ್ಸ್ ಮಾತ್ರ ಪಕ್ಕ ಇರ್ತಿತ್ತು.

Monday, December 24, 2012

ತಿರುಪತಿ ಪ್ರಸಂಗ


ಇಂಜಿನಿಯರಂಗ್ ಏಳನೆಯ ಸೆಮಿಸ್ಟರ್ ಪರೀಕ್ಷೆಯ ಕಡೆಯ ದಿನ. ಮೊದಲು ನಿರ್ಧರಿಸಿದಂತೆ ಗೆಳೆಯರೆಲ್ಲರ ತಿರುಪತಿ ಪ್ರಯಾಣ. ನನ್ನ ಗೆಳೆಯನ ತಂಗಿಯ ಮದುವೆ ಇದ್ದರಿಂದ ನಾನು ಬಸ್ಸಿನಲ್ಲಿ ಲೇಟಾಗಿ ಹೊರಡುವುದು ಮತ್ತು ನನ್ನ ಸಹಪಾಠಿಗಳೆಲ್ಲ ರೈಲಿನಲ್ಲಿ ಪ್ರಯಾಣ ಮಾಡುವುದು ಎಂದು ಮೊದಲೇ ನಿರ್ಧರಿಸಿದ್ದೆವು. ಅಂದುಕೊಂಡಂತೆ ಪರೀಕ್ಷೆ ಮುಗಿದೊಡನೆ ಎಲ್ಲ ರೈಲಿನಲ್ಲಿ ಹೊರಟರು, ನಾನು ನನ್ನ ಗೆಳೆಯನ ತಂಗಿ ಮದುವೆ ಮುಗಿಸಿ ಸುಮಾರು 10:30 ಕ್ಕೆ ಮೆಜೆಸ್ಟಿಕ್ ತಲುಪಿದೆ. ಅಂದು ಶುಕ್ರವಾರವಾದ್ದರಿಂದ ಎಲ್ಲ ಬಸ್ಸುಗಳು ತುಂಬಿ ಹೋಗಿದ್ದವು. ರಿಸರ್ವೇಶನ್ ಸೀಟುಗಳೇ ಹೆಚ್ಚಿದ್ದವು. ಅಂತೂ ಇಂತು ಆಂದ್ರದ ಕಂಡಕ್ಟರ್ ಅನ್ನಯ್ಯ ಒಬ್ಬನಿಗೆ 50 ಹೆಚ್ಚಿಗೆ ಕೊಟ್ಟು ಸೀಟು ಗಿಟ್ಟಿಸಿದೆ. ಮೆಜೆಸ್ಟಿಕ್ಕಿನಲ್ಲಿ ಇಂತಹ ಧಂಧೆಯೇ ನಡೆಯುತ್ತದೆ. ಸೀಟು ಹಿಡಿದು ಕೊಡುವುದು. ಮೊದಲೆ ಕಂಡಕ್ಟರ್ ಹತ್ರ ಡೀಲ್ ಕುದುರಿಸಿ ಟಿಕೆಟ್ ಖರೀದಿಸಿ ನಂತರ ಆ ಟಿಕೆಟ್ಟನ್ನು ಬೇರೆಯವರಿಗೆ ಮಾರುವುದು ಇವೆಲ್ಲ. ಹೇಗೋ ಉದರ ನಿಮಿತ್ತಂ ಬಹುಕೃತ ವೇಷಃ ಅಂದುಕೊಂಡು ಪ್ರಯಾಣ ಶುರು ಮಾಡಿದೆ.

Thursday, December 13, 2012

ನೊರೆಗುಳ್ಳೆಯ ಬದುಕು

ಪ್ರತಿಕ್ಷಣವೂ ನಮ್ಮದು ನೊರೆಗುಳ್ಳೆಯ ಬದುಕು
ಸಾವಿನಾಕ್ರಮಣ ಎಲ್ಲಿಂದ ಬರುವುದೊ
ಡಾಂಬರು ರಸ್ತೆಯೋ ಹರಿವ ನದಿಯೋ
ಸುಟ್ಟು ಕರಕಲಾಗಿಸೋ ಬೆಂಕಿಯೋ
ಮರೆಯಾಗಬಹುದು ಜೀವ ಅರಿಯದಂತೆ ಒಡೆದು

ಪ್ರತಿಕ್ಷಣವೂ ನಮ್ಮದು ನೊರೆಗುಳ್ಳೆಯ ಬದುಕು
ಕಟ್ಟಡದೊಳು ನಿದ್ರಿಸುವ ನೆಮ್ಮದಿಯೆ ಇಲ್ಲ
ಆಗಬಹುದದು ನೆಲಸಮ ಕ್ಷಣಮಾತ್ರದಲ್ಲಿ
ಹರಿಯುವ ನದಿಯಲಿ ಈಜುವಂತಿಲ್ಲ
ಪ್ರವಾಹದ ಪರಿಯದು ಎಂದು ನುಗ್ಗುವುದೋ
ಮರೆಯಾಗಬಹುದು ಜೀವ ಅರಿಯದಂತೆ ಒಡೆದು

ಪ್ರತಿಕ್ಷಣವೂ ನಮ್ಮದು ನೊರೆಗುಳ್ಳೆಯ ಬದುಕು
ಬೆಳಕ ನೀಡುವ ವಿದ್ಯುತ್ ಕೋಪಗೊಳ್ಳಲುಬಹುದು
ಬಿಸಿನೀರ ಬದಲು ಸಾವು ಸುರಿಸಲುಬಹುದು
ವೇಗದಲಿ ವಾಹನವ ಚಲಿಸುತಿದ್ದಾಗ
ಒಮ್ಮೆಲೆಯೆ ಬ್ರೇಕುಗಳು ಕೆಲಸ ಮರೆಯಲುಬಹುದು
ಮರೆಯಾಗಬಹುದು ಜೀವ ಅರಿಯದಂತೆ ಒಡೆದು

ಪ್ರತಿಕ್ಷಣವೂ ನಮ್ಮದು ನೊರೆಗುಳ್ಳೆಯ ಬದುಕು
ಹತ್ತನೆಯ ಮಹಡಿಯೊಳು ಲಿಫ್ಟಿನಲೊಮ್ಮೆ
ಇಹಲೋಕಕು ಕೂಡ ಲಿಫ್ಟು ಪಡೆಯಲುಬಹುದು
ಚರಮಗೀತೆಯ ಹಾಡಲು ಸಂಗೀತ ಬೇಕಿಲ್ಲ
ವಿಧಿಯ ಸಾಹಿತ್ಯದೊಳು ನಮ್ಮ ಹೆಸರು ಇದ್ದರೆ ಸಾಕು
ಮರೆಯಾಗಬಹುದು ಜೀವ ಅರಿಯದಂತೆ ಒಡೆದು

ಪವನ್ ಪಾರುಪತ್ತೇದಾರ :-

ಕನಸಲ್ಲಿ ಗಿರೀಶ

ಎಡವಿದ್ದೆ ಮೊನ್ನೆ
ಒಸರುತ್ತಿತ್ತೊಂದಷ್ಟು ರಕ್ತ
ಕೃಷ್ಣನ ಹರಿಷಿನದ ಹೆಜ್ಜೆಯಂತೆ
ನಾ ರಕ್ತದೊಳು ಚಿತ್ರಣ ಬಿಡಿಸಿದ್ದೆ
ಹೆಬ್ಬರಳು ಹರಿದು ಹೋಗಿತ್ತು
ಆದರೂ ಮರುದಿನದ ಕಬಡಿಯ ಚಿಂತೆ

ಪಲ್ಟಿ ಹೊಡೆಯುವ ಕನಸು
ಅಂಗಳದಲಿ ಎದುರಾಳಿಯ ಮಣ್ಣುಮುಕ್ಕಿಸುವಾಸೆ
ಎದುರಾಳಿ ಮುತ್ತಿದಾಗ ಛಂಗನೆಗರುವಾಸೆ
ಕನಸ ಕಾಣುತ್ತಲೇ ಎಡವಿಬಿಟ್ಟಿದ್ದೆ
ಹೆಬ್ಬರಳು ಹರಿದು ಹೋಗಿತ್ತು
ಆದರೂ ಮರುದಿನದ ಕಬಡಿಯ ಚಿಂತೆ

ಅಮ್ಮ ಬೈದಿದ್ದಳು ಕದಲದಿರೆಂದು
ಅಪ್ಪನಿಗೂ ನನ್ನ ಬೆರಳಿನದೇ ಚಿಂತೆ
ತಂಗಿಯಂತೂ ಗಾಯ ನೋಡಿದಾಗೆಲ್ಲ ಬೆಚ್ಚು
ವೈದ್ಯ ಮಾಡಿಸಿ ಬಿಳಿಯ ಬಟ್ಟೆ ಹಾಕಿದ್ದಾಯಿತು
ನೋವಿನಲ್ಲೆ ನಿದಿರೆ ಹತ್ತಿಬಿಟ್ಟಿತ್ತು
ಆದರೂ ಮರುದಿನದ ಕಬಡಿಯ ಚಿಂತೆ

ಕನಸಲ್ಲಿ ಗಿರೀಶ ಬಂದಿದ್ದ
ಕಾಲು ಸರಿಯಿಲ್ಲದಿದ್ದರೂ ಒಲಿಂಪಿಕ್ ವಿಜಯಿ
ಹಿಂದೆಯೇ ಮಾಲತಕ್ಕ ಬೇರೆ
ಪೋಲಿಯೋ ಲಸಿಕೆ ಮರೆತಿದ್ದ ಅವರಪ್ಪ
ಅದಕವಳು ಪಡೆದ ಉಡುಗರೆ ಪದ್ಮಶ್ರೀ
ಸತ್ತು ಗೆದ್ದು ಬಂದ ನಿಕೋಲಸ್ ಹೇಳಿದ
ಅಮ್ಮನ ಪ್ರೀತಿಯ ಶಕ್ತಿ ಏನೆಂದು

ಮರುದಿನ ಎದ್ದಾಗ ಹೊಸದೊಂದು ಲೋಕ
ಬೆರಳಿಗಚ್ಚಿದ್ದ ಬಿಳಿಯ ಬಟ್ಟೆ ಬಿಚ್ಚಿಹೋಗಿತ್ತು
ಮನದ ಮೂಲೆಯಲ್ಲಿದ್ದ ನೋವೆಂಬ ಭೂತ
ಹೆದರಿ ನಡುಗಿ ರಾತ್ರಿಯೆ ಮಾಯವಾಗಿತ್ತು
ಜಿಗಿ ಜಿಗಿದು ಹೊರಟೆ ಅಂದು ಕಬಡಿ ಆಡಲು
ಕನಸಲ್ಲಿ ಬಂದ ವೀರರಿಗೆ ಧನ್ಯವಾದ ತಿಳಿಸುತ

ಪವನ್ ಪಾರುಪತ್ತೇದಾರ :-

ಕೊಲ್ಲದಿರು ನನ್ನ

ಕೊಲ್ಲದಿರು ನನ್ನ
ಚೂಪಾದ ನೋಟದಲಿ ದ್ವೇಷವನು ಬೀರದೆ
ಬುಸುಗುಡುವ ನಾಗನಿಗೆ ಪೈಪೋಟಿ ತೋರದೆ
ಅಳಿದುಳಿದ ಉಸಿರನ್ನು ಅಲ್ಲಿಗೇ ನಿಲ್ಲಿಸಿ
ಉಶ್ಚ್ವಾಸ ನಿಶ್ಚ್ವಾಸ ಏನನ್ನು ಮಾಡಿಸದೆ
ಕೊಲ್ಲದಿರು ನನ್ನ

ಕೊಲ್ಲಲು ನಿನಗೇನು ಆಯುಧವು ಬೇಕಿಲ್ಲ
ನಿನ್ನ ಪ್ರೀತಿಯ ಮಾತುಗಳ ನಿಲ್ಲಿಸಿಬಿಡು ಸಾಕು
ಕಿರುನಗೆಯ ಮೆಲ್ಲಗೆ ನಿನ್ನೊಳಗೆ ಬಚ್ಚಿಟ್ಟುಬಿಡು
ಹುಡುಕುತ್ತಾ ಹುಡುಕುತ್ತ ಸತ್ತುಬಿಡುವೆ ನಾನು

ಬದುಕೋದು ಮರೆತಿರುವೆ ನಿನ್ನ ಸಂಗವ ಸೇರಿ
ಒಮ್ಮೊಮ್ಮೆ ಅನುಮಾನ ಬದುಕಲೇನು ಬೇಕೆಂದು
ಆಮ್ಲಜನಕಕೆ ನೀ ಪೈಪೋಟಿ ನೀಡಿರುವೆ
ನಿನ್ನ ಇರುವಿಕೆಯೆ ಸಾಕು ಇನ್ನೇನು ಬೇಕಿಲ್ಲ

ಕೊಲ್ಲದಿರು ನನ್ನ
ಎಲ್ಲ ಗುಟ್ಟನ್ನು ಹೇಳಿಬಿಟ್ಟಿರುವೆ ನಾನು
ನನ್ನ ಕೊಲ್ಲಲಿನ್ನು ಬಹಳ ಸುಲಭ ನಿನಗೆ
ನಿನ್ನ ಬಿಟ್ಟೊಂದು ಕ್ಷಣ ಇರಲಾರದೀ ಜೀವ
ನನ್ನ ನಾ ಹುಡುಕಲು ನಿನ್ನೊಳಗೆ ಬರಬೇಕು
ಕೊಲ್ಲದಿರು ನನ್ನ

ಪವನ್ ಪಾರುಪತ್ತೇದಾರ :-

Sunday, November 11, 2012

ಬಕೇಟುಗಳು


ಮುಸಿ ಮುಸಿ ನಗು ದುರಾಸೆಯ ನೋಟ
ಎಲ್ಲವೂ ಗೂತ್ತೆಂದು ಬಿಂಬಿಸಿಕೊಳ್ಳುವ 
ಮ್ಯಾನೇಜರ್ ಹಿಂದಿಂದೆಯೇ ನಾಯಿಯ ಹಾಗೆ
ಮ್ಯಾನೇಜರ್ ಗೂ ಗೊತ್ತು ನಾಲಾಯಕ್ಕು ಇವನೆಂದು
ಆದರೂ ಬಿಡನು ಬಿಟ್ಟಿ ಕೆಲಸಗಾರನ
ಹೆಸರೇನಿಡಬೇಕಿವನಿಗೆ ಹೊಳೆಯದಿದ್ದಾಗ
ಇಟ್ಟರನಿಸುತ್ತದೆ ಮುದ್ದಾಗಿ ಬಕೆಟ್ಟು ಎಂದು

ವೀಕೆಂಡು ಸಿನಿಮಾ ಟಿಕೆಟ್ಟು ಇವನದೆ
ಹಾಗೇ ಪಕ್ಕದ ಪಬ್ಬಿನ ಬಿಲ್ಲೂ ಸಹ
ಮಡದಿ ಮನೆಯಲಿಲ್ಲದಿದ್ದಾಗ ಅಡುಗೆಯವ
ತನ್ನ ಕಾರಲ್ಲೆ ಪಿಕಪ್ಪು ಡ್ರಾಪು
ಮ್ಯಾನೇಜರ್ರಿನ ಎನ್ಸೈಕ್ಲೋಪೀಡಿಯ ಸಹ
ಹೆಸರೇನಿಡಬೇಕಿವನಿಗೆ ಹೊಳೆಯದಿದ್ದಾಗ
ಇಟ್ಟರನಿಸುತ್ತದೆ ಮುದ್ದಾಗಿ ಬಕೆಟ್ಟು ಎಂದು

ಅಕ್ಕಪಕ್ಕದವರು ಅತಂತ್ರ
ಇವನು ಮಾತ್ರ ಯಾವಾಗ್ಲು ಸ್ವತಂತ್ರ
ಪಿಂಕ್ ಸ್ಲಿಪ್ಪಿನ ಚಿಂತೆಯಿಲ್ಲ
ಅಪ್ರೇಸಲ್ಲುಗಳ ಗೊಡವೆಯಿಲ್ಲ
ಸಿಕ್ಕಿದೆ ಕಂಪನಿಗೆ ಅದರ ಕೆಲಸದ ಜೊತೆ
ಮ್ಯಾನೇಜರ್ರಿಗೊಬ್ಬ ಕೆಲಸದಾಳು
ಹೆಸರೇನಿಡಬೇಕಿವನಿಗೆ ಹೊಳೆಯದಿದ್ದಾಗ
ಇಟ್ಟರನಿಸುತ್ತದೆ ಮುದ್ದಾಗಿ ಬಕೆಟ್ಟು ಎಂದು

ಪವನ್ ಪಾರುಪತ್ತೇದಾರ :-

ಕಹಿ ಕನಸು


ಮೊನ್ನೆ ಎಂದೋ ಕನಸಲಿ ಬಂದಿದ್ದಳು
ಹೃದಯ ಚಿವುಟಿ ನೋಯಿಸಿದ್ದ ಹುಡುಗಿ
ಇನ್ನೆಂದೂ ಕಷ್ಟ ಕೊಡುವುದಿಲ್ಲವೆಂದೂ
ಮತ್ತೆ ತನ್ನೊಡನೆ ಇರಬೇಕೆಂದಲೂ
ಕಾಡಿ ಬೇಡಿದ್ದಳು

ನನ್ನ ಹೃದಯವೋ ಇನ್ನೂ ಮರೆತಿಲ್ಲ
ಬಡಿಯುವಾಗೊಮ್ಮೆ ನಿಂತು ನೆನೆಸುತ್ತದೆ
ಅಂದು ಎನ್ನ ಚಿವುಟಿದವಳಿವಳೆಂದು
ಏಕಾಂತದಲಿ ಎಷ್ಟು ಚೀರಿದರೂ ನೋವು ಕುಗ್ಗಿಲ್ಲ
ನದಿಯೊಳು ಮುಳುಗಿ ಅತ್ತರೂ ಕಣ್ಣೀರು ನಿಂತಿಲ್ಲ
ಕೊಚ್ಚಿಹೋಗಿಲ್ಲ ಕಣ್ಣೀರು ಕಾವೇರಿಯೊಡನೆ

ಯಾರಿಗೆ ಬೇಕು ಆ ನೋವಿನ ಪ್ರೀತಿ
ಕಣ್ಣೀರು ಬತ್ತಿಸಿ ಬರಡಾಗಬೇಕ
ಚೀರಿ ಚೀರಿ ಧ್ವನಿ ಹರಿದು ಕಿರಕಲಾಗಬೇಕ
ಕಳ್ಳಿಗಿಡವದು ನಮ್ಮ ನಡುವೆ ಹುಟ್ಟಿಕೊಂಡಿರುವಾಗ
ತಿಳಿ ಹಾಲು ಎಂದದನ ನಾ ಕುಡಿಯಬೇಕ
ಥಟ್ಟನೆ ಎದ್ದೆ ಗಾಢ ನಿದಿರೆಯಿಂದ
ಈ ಕನಸ ಕಸದ ಬುಟ್ಟಿಗೆಸೆಯಲು
ಕಹಿ ಕನಸ ಕಸದ ಬುಟ್ಟಿಗೆಸೆಯಲು

ಪವನ್ ಪಾರುಪತ್ತೇದಾರ :-

Sunday, October 28, 2012

ನಮ್ಮ ರಾಮಿ

ಬೆಚ್ಚಗಿನ ಗೂಡು
ಒಂದಷ್ಟು ಓಣ ಹುಲ್ಲು
ಇಮಾಮಿ ಅಂಗಡಿ ಬಳಿಯಿಂದ
ಮೂಳೆ ತುಣುಕುಗಳು
ನೆಲ ಕೆರೆದು ಕೆರೆದು
ಉಗುರುಗಳ ನಡುವೆ ನೆತ್ತರು
ಜಿನುಗಿದಂತೆಲ್ಲ ಮಣ್ಣಲಿ ಮಣ್ಣಾಗಿತ್ತು

ಬಂದುಹೋಗುವರ ಮೇಲೊಂದು ಕಣ್ಣು
ಹತ್ತಿರ ಹೋದಂತೆಲ್ಲ ಮುದುರಿ ಮುದುರಿ
ಏನೋ ಬಚ್ಚಿಟ್ಟುಕೊಳ್ಳುವ ಆತುರ
ಕಣ್ಣಲಿ ಒಂದಷ್ಟು ಭಯ
ಇನ್ನಷ್ಟು ಹತ್ತಿರ ಹೋದರೆ
ಸಣ್ಣ ಕ್ರೋಧದ ಛಾಯೆ
ಬರದಿರೆನ್ನೆಡೆಗೆಂಬ ಎಚ್ಚರಿಕೆ ಮಾತು

ಮನದಲೂಂದಷ್ಟು ಭಯವಿತ್ತು ಎನಗೆ
ಆದರೂ ಧೈರ್ಯದಲಿ ಇಟ್ಟಿದ್ದೆ ಹೆಜ್ಜೆ
ನಾನೆಂದು ಅರಿತೊಡನೆ ಬಂದಿತ್ತು ಓಡಿ
ಮೈಮೇಲೆ ಎಗರುತ ಪ್ರೀತಿಯಲಿ ಒರಗುತ
ಪರಿಚಯಿಸಿತ್ತಂದು ತನ್ನಾರು ಮರಿಗಳ
ನಮ್ರತೆಯ ನಲಿವಿನಲಿ ನಮ್ಮ ರಾಮಿ

ಪವನ್ ಪಾರುಪತ್ತೇದಾರ:-

photo courtecy : Google

Tuesday, October 16, 2012

ಕೆಲಸವಿಲ್ಲದ ಸುಬ್ಬ

ಮೊದಲಿರಲಿಲ್ಲ ಇವನ ಅರಿಯುವಿಕೆಗೆ
ಕೊನೆಯಿಲ್ಲ ಇವನ ಕೊರೆಯುವಿಕೆಗೆ
ಮೀಡಿಯಾ ಎಂಬ ರೇಸು ಕುದುರೆಯ ಬೆನ್ನಿಗೆ
ತನ್ನ ಅಮೂಲ್ಯವಾದ ಸಮಯವನ್ನೆಲ್ಲ ತೆತ್ತಿಬಿಟ್ಟಿದ್ದ
ತನಗೆ ತೋರಿಸಿದ್ದೆ ನಿಜ ಎಂಬ
ಮಾಯೆಯೊಳು ಬಂಧಿಯಾಗಿದ್ದ

ಸಭೆಯಿರಲಿ ಸಮಾರಂಭವಿರಲಿ
ಸಂತೆ ಹುಟ್ಟುತಿತ್ತು ಇವನ ಮಾತಲ್ಲೆ
ಬಿಕರಿಯಾಗುತಿತ್ತಲ್ಲಿ ಮೀಡಿಯಾದ ಸರಕುಗಳು
ಅವರವರ ಭಾವದ ಅನುಭವದ ಹಾಗೆ
ಸತ್ಯಾಸತ್ಯತೆಯ ವ್ಯತ್ಯಾಸ ತಿಳಿದಿಲ್ಲ
ಒಳ ಹೊರಗಳ ಮರ್ಮ ಅರಿತಿಲ್ಲ
ಒದರುತಿದ್ದ ಅಲ್ಲೆಲ್ಲ ತಾ ನೋಡಿದ ವಿಷಯಗಳ
ಗಟ್ಟು ಹೊಡೆದ ಪುಟ್ಟ ಮಗುವಂತೆ

ಟಿವಿ ೯ ಇವನಿಗೆ ರಾಜಕೀಯದ ಮೇಷ್ಟ್ರು
ಸುವರ್ಣ ನ್ಯೂಸ್ ಆಧ್ಯಾತ್ಮದ ಅವತಾರ
ಕಸ್ತೂರಿ ಇವನಿಗೆ ಕಷ್ಟಗಳ ಪರಿಹಾರಿ
ಜನಶ್ರೀ ಜನಗಳ ತಿಳುವಳಿಕೆಗೆ ದಾರಿ
ಪಬ್ಲಿಕ್ಕು ತಂದೆಂದು ನಂಬಿರುವ ಮೂಢ
ಹೊರಬಂದು ಅರಿಬೇಕು ಬಹಳಷ್ಟು ಗಾಢ
ನಮ್ಮ ನಡುವೆಯೇ ಇರುವರು ಇಂತವ್ರು ಬಹಳ
ಅವರ ಕೈಗೆ ಸಿಕ್ಕರೆ ಆಗಿಬಿಡಿ ವಿರಳ
ಸುಮ್ನೆ ತಮಾಷೆಗೆ ಪವನ್ ಪಾರುಪತ್ತೇದಾರ :-

picture courtecy : indologygoa.wordpress.com

Monday, October 15, 2012

ಹೇಗಿರಲಿ ಗೆಳತಿ ನಿನ್ನಗಲಿ

ಹೇಗಿರಲಿ ಗೆಳತಿ ನಿನ್ನಗಲಿ
ನಿನ್ನ ನಲ್ಮೆಯ ಮಾತುಗಳಿಲ್ಲದೆ
ನಿನ್ನ ಪ್ರೀತಿಯ ಬೈಗುಳಗಳಿಲ್ಲದೆ
ನಿನ್ಮುಂದೆ ದಡ್ಡತನ ತೋರಿಸಿಕೊಳ್ಳದೆ
ನಿನ್ನೊಡನೆ ನನ್ನ ಮನ ಬೆಸೆದುಕೊಳ್ಳದೆ
ಹೇಗಿರಲಿ ಗೆಳತಿ ನಿನ್ನಗಲಿ

ಅಂದು ನಾ ಕೇಳಿದ್ದೆ
ಏನು ಬೇಕೆಂದು ನಿನಗೆ
ಭೂರಮೆಯ ಕಂಗೊಳಿಸಿ ಹಾಲ್ಚೆಲ್ಲಿದಂತ
ಹುಣ್ಣಿಮೆ ಚಂದ್ರನೇ ಸಾಕಾ
ತಂದಿಡಲು ಸಿದ್ಧವಿದ್ದೆ ನಾ ನಿನ್ನ ಮನೆಮುಂದೆ
ಅದಕೆ ನೀ ಮುಗುಳ್ನಗುತ
ನನ್ನ ಗಲ್ಲವನು ಹಿಡಿದು
ಅಮಾವಾಸ್ಯೆಯಂದೂ ನಗುವ ಈ ಚಂದಿರನೆ ಸಾಕೆಂದಾಗ
ಕಳೆದುಹೋಗಿದ್ದ ನನ್ನ ಹುಡುಕಲು
ಅಮವಾಸ್ಯೆಯನ್ನೆ ಮರೆತೆಯಲ್ಲ ಗೆಳತಿ
ಈಗ ನೀ ಹೀಗೆ ಒಮ್ಮೆಲೆ ಮರೆಯಾದರೆ
ನನ್ನ ಬದುಕೂ ಸಹ ಅಮವಾಸ್ಯೆ ಆದೀತು
ಹೇಗಿರಲಿ ಗೆಳತಿ ನಿನ್ನಗಲಿ

ಒಮ್ಮೆ ಬೈದೊಡನೆ ನಿನ್ನ ಮುಖ ಕಾದ ಕೆಂಡ
ಮತ್ತೊಮ್ಮೆ ಹೊಗಳಿದರೆ ನಾಚುವ ಗುಲಾಬಿ
ಹೀಯಾಳಿಸಿದಾಗೆಲ್ಲ ಮೂತಿ ತಿರುಗಿಸುವಾಟ
ಹೀಗೆಳೆದು ಬಿಟ್ಟರೆ ಬಿಡುತಿದ್ದೆ ಊಟ
ಬಂದುಬಿಡು ಗೆಳತಿ ಅಗಲಿರಲಾರೆ ನಿನ್ನ
ಕಾದ ಕೆಂಡದ ಮೇಲೆ ಅಡುಗೆ ಮಾಡಿ ಬಡಿಸುವೆ
ನಾಚಿದ ಗುಲಾಬಿಯನ್ನು ನಿನ್ನ ಮುಡಿಯಲ್ಲಿ ಮುಡಿಸುವೆ
ತಿರುಗಿತಿಹ ಮೂತಿಯನು ತಡೆಹಿಡಿದು ನಿಲ್ಲಿಸುವೆ
ಪ್ರೀತಿಯ ಪದಗಳಲಿ ನಿನ್ನ ಮನ ತಣಿಸುವೆ
ಹೇಗಿರಲಿ ಗೆಳತಿ ನಿನ್ನಗಲಿ

ಪವನ್ ಪಾರುಪತ್ತೇದಾರ

photo courtecy : weirdlyrandom.tumblr.com

************************************************

Thursday, October 11, 2012

Winks which i can never forget.....

Me and cat venki were feeling very bored to attend classes. We both were more afraid that records were not completed. If we go to lab session surely mam going to humiliate us and throw us out of the lab, so better decided to bunk and go to Bellary mining boy Arun’s room, Arun hails from mining district Bellary, he s a relative of mining biggie Jana reddy, he had all the luxury needed for a college boy to get ruined. Computer, TV, refrigerator, etc. in a student’s room it is really fascinating, even though he was our classmate, he was very rare face in classes. Instead of getting down at our college stop we continued 3 more stops in the same bus to got down at Arun’s place.
Mobile phones were very new at that time, I was not having any, Arun had some high end mobile phone at that time, Cat had the mobile but always his balance would be empty. So we called from a coin booth to Arun, he was more than happy to see us joining him by bunking college. He said on phone with a surprise tone come mama come always my room doors open for you. We felt relieved that he is in the room usually he won’t stay in room in college hours.

Wednesday, October 10, 2012

ಲೂನ ಸಿ.ಕೆ.ಎಫ್ ೭೨೭೯

ನಮ್ಮ ತಾತನ ಸಿಂಗಲ್ ಸೀಟ್ ಲೂನ ಆಗ ತಾನೆ ಮೆಕ್ಯಾನಿಕ್ ಮುರುಗ ರಿಪೇರಿ ಮಾಡಿಕೊಟ್ಟಿದ್ದ, ಅದನ್ನ ಮನೆಯವರೆಲ್ಲರಿಗೂ ಓಡಿಸೋ ಹುಚ್ಚು ನಮ್ಮ ತಾತನನ್ನೂ ಸೇರಿಸಿ, ತಾತನಿಗಾಗಲೆ ೭೫ ವರ್ಷ, ಹಿಂದೆಂದೋ ಬಹಳಷ್ಟು ಹಳ್ಳಿಗಳಿಗೆ ಇದೇ ಲೂನಾದಲ್ಲಿ ತಿರುಗಾಡಿ ಎಲೆಕ್ಟ್ರಿಕ್ ಕೆಲಸ ಮಾಡಿದ್ದು ಉಂಟು. ರಿಪೇರಿ ಆಗಿ ಸುಮಾರು ವರ್ಷ ಮೂಲೆಯಲ್ಲಿ ಬಿದ್ದಿದ್ದ ಲೂನಾ, ನಮ್ಮ ಅಂಗಡೀಲೇ ಮೆಕ್ಯಾನಿಕ್ ಶಾಪ್ ಇಟ್ಟಿದ್ದ ಮುರುಗನ ಕಣ್ಣು ಕುಕ್ಕಿತ್ತು. ಇಸ್ಮಾಯಿಲ್ ಭಾಯ್ ಈ ನಡುವೆ ಮನೆಗೆ ಬಂದಿದ್ದು ನೋಡಿದ ಮುರುಗ, ಏನ್ ಸಾಯಬ್ರೆ ಈ ಕಡೆ ಅಂದನಂತೆ, ಅದಕ್ಕೆ ಇಸ್ಮಾಯಿಲ್, ಐನೋರು ಲೂನ ಮಾರ್ತೀನಿ ಅಂದಿದ್ರು ಅದಕ್ಕೆ ಬಂದಿದ್ದೆ ಅಂದಿದ್ದಾನೆ, ತಕ್ಷಣ ಮನೆಗೆ ಓಡಿ ಬಂದ ಮುರುಗ ಅಪ್ಪನಿಗೆ ಬುದ್ಧಿ ಹೇಳಿ ಕಮ್ಮಿ ಖರ್ಚಲ್ಲಿ ರಿಪೇರಿ ಮಾಡಿ ಕೊಡೋ ಮಾತು ಕೊಟ್ಟಿದ್ದ, ಆ ಮಾತಿನಂತೆ ೧೦ ವರ್ಷದಿಂದ ನಿಂತಿದ್ದ ಲೂನ ಅಂದು ಹೊರಗೆ ಬಂದಿತ್ತು ಅದೂ ಒಂದೇ ಕಿಕ್ಕಿಗೆ ಸ್ಟಾರ್ಟ್ ಆಗೋ ರೀತಿ, ಮನೆಯಲ್ಲಿ ಎಲ್ರುಗೂ ಸಂತೋಷವೋ ಸಂತೋಷ.

Friday, October 5, 2012

Get Well Soon...!!!

I guess that day was not mine. Whole day i went through very bad experiences, starting with my dad, who blasted me early morning for getting up late, it was early morning 7o clock, dad came to my room and said get up Praveen, its already 7, I said dad I was studying till 2o clock yesterday I can’t get up please don’t disturb me, he din leave me, he pulled my blanket and woke me up, I felt very bad and started to argue with him, my voice was very arrogant and rude, my dad said keep in mind you are talking to your dad, I said whats the difference you are also talking to your son, u disturbed my sleep, listening to these words dad became silent, I rushed into bathroom saying never disturb my sleep again and closed the door rapidly.

Came out of bathroom dressed myself, here comes a plate uppit ( upma ) which I hate to the core, mom had some urgent work so she could not prepare any other breakfast, uppit was easy to prepare so she prepared this which I cant eat even one spoon, I said mom I don’t want this breakfast I will have in canteen, mom scolded saying in canteen they will put soda for all they cook which is not good for health, so have uppit and go to college, I shouted on my mom throwing the breakfast plate on floor saying who will have this concrete kind of thing, and left to coll, I could see my moms eyes were filled with water, I went to college as if I dint see anything.

On time I was in college, but my girlfriend did not come yet, when I tried calling her I got a busy tone from her, when I sent the message she did not reply, it was already 5 mins classes has started, then entered the class, madam looked at me strangely and asked Praveen why are you late? I was speechless looking at her avatar, I said in a flickering tone mam I missed the bus, just came, she wondered oooh.. who was that who standing near the gate from past 15mins, I came to know that she has seen me standing near the gate. I said mam very sorry, I was waiting for my friend, she replied in a harsh tone I know I know come inside and sit in the first bench. I felt humiliated at that time, her tone was so harsh.

First hour is done mam left the class,I shifted to my usual last bech. I saw my girlfriend coming, I went to her saying hi, she was not talking to me, I said hi again, she turned to me with a furious look, and again turned towards opposite side, one more sir came for next class, I was little confused thinking why my girlfriend is angry on me, I checked my mobile phone, I saw 4 missed calls from her, I could not check my cell phone as I was in first bench, mams eyes were most of the times on the not usual first bencher. I sent a mess to her explaining the reason for not receiving the call, she did not respond. At the lunch hour again I went to her asking sorry, she again showed her cruel face to me felt very bad, she said go to hell, you cant receive the phone call cant respond to my messages why the hell you want to be my boyfriend. I tried explaining her all over again she pushed me away in front of all classmates, I was speechless, my eyes filled with tears, my lips started shivering, if I had stayed a min more I would collapsed, decided to bunk the afternoon classes, and reached home.

Mom asked, Praveen, why did you came early? Any problem, and touched my forehead, oh my god! U got the fever my son, be in the room I will call the doctor, she said. I went to room and collapsed on my bead, mom called doctor and dad, both came in ten mins, doctor gave me injection, dad asked me to take rest, and all went out of my room. I checked my mobile, there was a message from my girlfriend, it said, I have found a new boyfriend you better stay away from me, I was dumped by her, my heart became heavy, I started crying I was crying very hard, suddenly felt somebody coming near my room, I ran to bath room and washed my face, left my face with water without wiping it from towel, my mom came with the coffee, dad was accompanying her, she gave me coffee, dad asked Praveen rub your face with towel, I tried to took towel, mom called, Praveen come here let me wipe your tears first then you wipe the water yourself, I felt surprised, mom how did you recognize my tears in water? !! dad smiled gently came near me put his hands on my head rubbing it, and said, she is mom my dear son not girlfriend….

I realized my mistakes I did till that time, cried loudly in mom and dad’s arms, I was feeling like I am in a basket of comfort and love, meanwhile a message popped up on my mobile, i checked very curiously, it was my friend sending me get well soon message :) :)
Get well soon guys :) :)

Pavan Parupattedara

Thursday, October 4, 2012

ಪ್ರೀತಿಯ ಹುಚ್ಚಾಟಗಳು

ಅದು ಹೊಸ ಟಚ್ ಸ್ಕ್ರೀನ್ ಮೊಬೈಲ್ ಇರಬಹುದು ರಸ್ತೆಯ ಮೇಲೆ ತರಚುತ್ತ ೫೦ ಅಡಿ ದೂರದಲ್ಲಿ ಬಿದ್ದಿತ್ತು. ಪಲ್ಸರ್ ೨೨೦ ಮೂತಿ ಒಡೆದು ಹ್ಯಾಂಡಲ್ ಬಂದು ಸೀಟಿನ ಮೇಲೆ ಬಿದ್ದಿತ್ತು. ಅಲ್ಲೇ ನಿಂತಿದ್ದ ಪ್ರವೀಣನ ಮುಖವೆಲ್ಲ ಬೆವರು, ನಿಂತಲ್ಲೆ ನಡುಗುತಿದ್ದ, ಬಂದವರೆಲ್ಲ ಏನಾಯ್ತು ಏನಾಯ್ತು ಅಂತ ಘಾಬರಿಯಿಂದ ಕಥೆ ಕೇಳುವುದು ಪ್ರವೀಣನಿಗೆ ಬಯ್ಯೋದು ಆಗುತಿತ್ತು. ಪ್ರತಿ ಸಾರಿ ಬೈಸಿಕೊಳ್ಳುವಾಗಲೂ ತನ್ನಿಂದಾದ ತಪ್ಪಿಗೆ ತನ್ನನ್ನು ತಾನೇ ಶಪಿಸಿಕೊಳ್ಳುತಿದ್ದ.ಕಣ್ಣೀರ ಧಾರೆ ಗಳಗಳನೆ ಹರಿಯುತಿತ್ತು. ಅಷ್ಟರಲ್ಲೆ ಯಾರೋ ಆಂಬುಲನ್ಸ್ ಗೆ ಫೋನ್ ಮಾಡ್ರಿ ಅಂದ್ರು ಮತ್ತೊಬ್ರು ೧೦೮ ಕರೆ ಮಾಡಿದ್ದೀವಿ ಇನ್ನೈದು ನಿಮಿಷದಲ್ಲಿ ಬರುತ್ತೆ ಅಂದ್ರು.ಇಷ್ಟಕ್ಕೆಲ್ಲ ಕಾರಣ ಪಕ್ಕದಲ್ಲೇ ರಕ್ತದ ಮಡುವಲ್ಲಿ ಬಿದ್ದಿದ್ದ ಕಾವ್ಯ ಎಂದು ಹೇಳಿದರೂ ಯಾರೂ ನಂಬದ ಪರಿಸ್ಥಿತಿ. ಹೇಳಿಯಾದರೂ ಏನು ಉಪಯೋಗ, ಆಗಿದ್ದು ಆಗೋಗಿದೆ ಇನ್ನು ಮುಂದಿನ ಕೆಲಸ ನೋಡ್ಬೇಕು, ಪ್ರವೀಣನಿಗು ತನಗೇ ಗೊತ್ತಿಲ್ಲದಂತೆ ಹಣೆಯ ಮೇಲಿಂದ ಮಂಡಿ ಮತ್ತು ಮುಂಗೈಗಳಿಂದ ರಕ್ತ ಸುರಿಯುತಿತ್ತು.ಅಷ್ಟರಲ್ಲೆ ಗುಯ್ಯ್ ಗುಟ್ಟುತ್ತ ಆಂಬುಲನ್ಸ್ ಬಂತು, ಕಾವ್ಯಳಂತೆ ನಾನು ಸಹ ಹೀಗೆ ಬಿದ್ದಿದ್ದರೆ ಚೆನ್ನಾಗಿರುತಿತ್ತು ಅಂದುಕೊಂಡು ಪ್ರವೀಣ ಅಂಬುಲನ್ಸ್ ಹತ್ತಿದ.

ಪ್ರಶ್ನೆ ಯಾವುದು???

ಚರಕವ ಸುತ್ತಿ ತಾಯಿ ಭಾರತಿಗೆ
ಸೀರೆ ನೇಯ್ದ ಕಲಾವಿದನೊಬ್ಬ
ಇಂದು ಆ ಸೀರೆಗಾಗಲೆ ೬೫ ವರ್ಷ
ಅಂದು ಅಪ್ಪಟ ಎಂದ ಈ ಸೀರೆಯ ನೂಲು
ಕದ್ದ ಮಾಲಿರಬಹುದೆ
ಕೇಳೋಣವೆಂದರೆ ಇಂದು ಅವನಿಲ್ಲ

ಬಾಯಲ್ಲಿ ರಾಮನಾಮ ಭಜನೆ
ಸಾಯುವಾಗಲೂ ಅದೇ ಕಡೆಯ ಮಾತು
ಹೇ ರಾಮ್ ಎಂದಾಗ ಚಿಮ್ಮಿದ ರಕ್ತದ ಕಲೆ
ಇನ್ನೂ ಅಳಿಸಲಾಗಲಿಲ್ಲ
ಆ ರಕ್ತವನ್ನೆ ಬಸಿದು ಬಸಿದು
ತಮ್ಮ ರಾಜಕೀಯದ ಇಂಜಿನ್ನುಗಳಿಗೆ ಸುರಿದು
ಮೈಲೇಜನೇರಿಸಿಕೊಳ್ಳುತ್ತಿರುವವರು ಎಷ್ಟೋ

ಅಲ್ಲಿ ಅವನ ನೆತ್ತರು ಮಾತ್ರವಲ್ಲ
ಮತ್ತೊಬ್ಬನ ಹತಾಷೆಯ ಬೆವರ ಹನಿ ಸಹ ಇತ್ತು
ಇಂದು ಅದು ಕೂಡ ತಿರುಚಿದ ಚರಿತ್ರೆ
ಗಬ್ಬರ್ ಸಿಂಗಿಗಿಂತಲೂ ಕ್ರೂರಿಯೊಬ್ಬನನ್ನು
ಹುಟ್ಟು ಹಾಕಿದ ಅಮರ ಚರಿತ್ರೆ

ಸತ್ತವನ ಅಂದರು ದೇಶಪ್ರೇಮಿ
ಅಧಿಪತ್ಯಕ್ಕೆ ಹಾತೊರಿಯುತಿದ್ದ ಕರ್ಮಯೋಗಿ
ಕೊಂದವನು ತನ್ನತನವನು ಉಳಿಸಿಕೊಳ್ಳುವ
ಭರದಲಿ ಎಲ್ಲವನು ಮರೆತ ಉದ್ವೇಗಿ
ಆದರು ಉತ್ತರವಿಲ್ಲದ ಪ್ರಶ್ನೆ ಇಂದಿಗೂ ಇದೆ
ವಿಪರ್ಯಾಸವೆಂದರೆ ಆ ಪ್ರಶ್ನೆಏನೆಂಬುದು ಯಾರಿಗೂ ಗೊತ್ತಿಲ್ಲ...

ಅಂಚೆಯ ಮೆಲುಕು

ತಾತನಿಗಾಗಲೆ ಬಹಳ ಹೆಸರು
ವಾರಕ್ಕೆರಡಾದರು ಅಂಚೆ ಬರುತಿತ್ತು
ಪಟೇಲ್ ಇಸ್ಮಾಯಿಲರೊಡನಾಡಿದ್ದ ಜೀವ
ಅಂಚೆಯಣ್ಣ ರಸ್ತೆಗೆ ಬಂದನೆಂದರೆ ಸಾಕು
ಬೀದಿ ಹುಡುಗರೆಲ್ಲ ಹೋ ಎಂದು ಹಿಂದೆ

ಅಂಚೆಯಣ್ಣನಿಗೋ ಭಯವೆಂದರೆ ಭಯ
ಮೂಟೆಯಿಂದೇನಾದರು ಪತ್ರ ಮಾಯವಾದೀತೆಂದು
ಮಕ್ಕಳ ಮೇಲೆಲ್ಲ ಹೌಹಾರಿ ಕಿರುಚುತ
ತಂದುಕೊಡುತಿದ್ದ ತಾತನಿಗಂಚೆ

ಜಗುಲಿ ಮೇಲೆಯೆ ಕುಳಿತಿದ್ದ ತಾತನಿಗೆ
ಅಂಚೆ ಬಂದೊಡನೆ ಎನೇನೋ ತಳಮಳ
ಮೈಸೂರಿನಿಂದ ಮಗನು ಬರೆದಾನೋ
ಹೈದರಾಬಾದಿಂದ ಗೆಳೆಯ ಬರೆದಾನೋ
ಹೆಮ್ಮೆಯಿಂದಲಿ ತಾತ ಒಡೆದು ಓದಲೇನೋ ಚೆನ್ನ

ಮೊದಲ ಸಾಲಲ್ಲೆ ಬರೆದವರ ಕ್ಷೇಮ
ಎರಡನೆ ಸಾಲಲ್ಲಿ ಓದುವವರ ಕ್ಷೇಮ
ಮುಂದೆ ಒಂದಷ್ಟು ವಿಷಯ ಆಪ್ಯಾಯತೆ
ಕೊನೆಯಲ್ಲಿ ಮಕ್ಕಳಿಗೆ ಆಶೀರ್ವಾದಗಳು
ದೂರದಲ್ಲಿದ್ದರೂ ಪ್ರೀತಿಗಿಲ್ಲ ಕೊರತೆ

ತಾತ ಬರುವರು ಈಗ ತಿಥಿಯಂದು ಮಾತ್ರ
ಅಂಚೆ ಕೂಡ ಕೇವಲ ನೋಟೀಸಿಗಷ್ಟೆ ಸೀಮಿತ
ಬೀದಿ ಮಕ್ಕಳಲ್ಲಿ ಹುಮ್ಮಸ್ಸೆ ಇಲ್ಲ
ಅಂಚೆಯಣ್ಣ ಇರಲಿ ಲಗೋರಿ ಆಡಲು ಕೂಡ
ಮಿಂಚೆಯಲ್ಲೀಗ ಮರೆಯಾಗಿದೆ ಕ್ಷೇಮ
ನೀವು ಕ್ಷೇಮ ಎಂದು ಭಾವಿಸುವ ಬಂಧಗಳ ಕೊರತೆ

Friday, September 7, 2012

ಕೆರೆಯ ಕಲ್ಪನೆಯ ಹಮ್ಮು

ನಿಂತ ನೀರದು ಬಿಂಬ ತೋರಲು
ಹರಿವ ನೀರದು ಬಿಂಕ ತೋರುವುದು
ಎರಡಕ್ಕೂ ಅದರದೇ ಆದ ಹೆಮ್ಮೆ
ಇದಕ್ಕೆ ನಿಂತದ್ದೇ ಆದರೆ ಅದಕ್ಕೆ ಹರಿದದ್ದೆ

ಮನುಜನ ಜಡವನ್ನೆಲ್ಲ ಒಂದೆಡೆ
ಗುಡ್ಡೆ ಮಾಡಿ ಅವಿಸಿಬಿಡುವ ಚಾಣಾಕ್ಷತನ
ಕೊಳಕನ್ನೆಲ್ಲ ತನ್ನೊಡಲಲ್ಲಿ ತುಂಬಿಕೊಂಡು
ಹೂಳೆತ್ತಿಸಿಕೊಳ್ಳದೆ ತುಂಬು ಬಸುರಿಯಾದ ಹೆಮ್ಮೆ
ನಿಂತ ನೀರಿಗಾದರೆ

ಕಾಡೆನದೆ ಮೇಡೆನದೆ ಬೆಟ್ಟದಲಿ ಗುಡ್ಡದಲಿ
ತೆವಳುತಾ ಕುಂಟುತಾ ಗುದ್ದಾಡಿ ಹೊಡೆದಾಡಿ
ಕಲ್ಲುಗಳ ಪುಡಿಮಾಡಿ ಮರಳಿನ ಖನಿ ಮಾಡಿ
ಮನುಜನಿಗೆ ನೆರವಾಗಿ ಸಾಗರವ ಸೇರುವ ಹೆಮ್ಮೆ
ಹರಿವ ನೀರಿಗಿದೆ

ನಿಂತ ಕೆರೆಯಾಗದೆ ಹರಿವ ನದಿಯಾಗು ಗೆಳೆಯ
ನೋವಿನ ಕಾಡನು ಎದುರಿಸಿ ಮುಂದೆನಡಿ
ಕಷ್ಟಗಳ ಕೋಟಲೆಯ ಧೈರ್ಯದಲಿ ಮಾಡು ಪುಡಿ
ಸ್ವಂತಿಕೆಯ ಎತ್ತಿ ಹಿಡಿ ಸಂಘದಲಿ ನೀನು ದುಡಿ
ಗುರಿಯ ಸೇರುವ ಸಮಯ ಹೆಮ್ಮೆಯಿರಲಿ ನಿನಗೆ
ನಿಂತ ನೀರಾಗದೆ ಹರಿವ ನದಿಯಾದೆನೆಂದು
ನಿಂತ ನೀರಾಗದೆ ಹರಿವ ನದಿಯಾದೆನೆಂದು

ಪವನ್ ಪಾರುಪತ್ತೇದಾರ :-

ಗುರಿ...??

ತಲೆಗೂದಲು ಕೆದರಿ
ಮುಖವೆಲ್ಲವೂ ಬೆವರಿದೆ
ಗುರಿಯೆಂಬುದು ಇನ್ನೂ ಮರೀಚಿಕೆ
ದಾರಿಯೇ ಇನ್ನೂ ನಿಶ್ಚಯವಾಗಿಲ್ಲ
ಏಕಾಂಗಿಯ ಈ ಪಯಣದಲಿ
ಗುರಿ ಮುಟ್ಟಿದರೆ ಸಾಕು ಸಾರ್ಥಕ
ಸತ್ತರೂ ಸರಿಯೆ ಸೋಲು ಬೇಕಿಲ್ಲ
ಕಿರಾತಕರು ಅಲ್ಲಲ್ಲಿ ಕೀಟಲೆಯ ಮಾಡಿಹರು
ಅಂಕುಡೊಂಕಿನ ದಾರಿಯಿದು ಡೊಂಕಾಗಿ ನಡೆ ಎಂದು
ಬುದ್ಧಿಜೀವಿಗಳೆಲ್ಲ ದಡ್ಡರಾಗಿಹರು
ಅಡ್ಡದಾರಿಯ ನನ್ನಂತ ಯುವಕರಿಗೆ ತೋರಿಹರು
ಆದರೂ ಹೊರೆಟಿಹೆನು ವಿಧಿಯ ಒಮ್ಮೆಲೆ ನಂಬಿ
ಅನಿಸುತಿದೆ ಗುರಿಯೆಡೆಗೆ ಸಾಗುತಿಹೆನೆಂದು
ಧ್ಯೇಯವನು ಮರೆಯದೇ ಧೃಢವಾಗಿ ಅವುಚಿರಲು

ಕಲ್ಲುಮುಳ್ಳುಗಳಿಲ್ಲಿ ಹೆಜ್ಜೆ ಹೆಜ್ಜೆಗೆ ನೂರು
ನಂಬಿಕೆಯ ಚಪ್ಪಲಿಯೂ ಮೋಸ ಮಾಡಿದೆ ಈಗ
ಹುಡುಕಿದರೂ ಸಿಗದಲ್ಲ ನಂಬಿಕೆಯ ಅಂಗಡಿ
ಮಾರುವವರಾರು ಇಲ್ಲ ಜಗದಲ್ಲಿ
ಜೀವವೂ ನಂಬದು ಬಡಿಯುವ ಹೃದಯವ
ಗೊತ್ತಾಗದದಕೆ ಎಂದು ನಿಲ್ಲಿಸುವುದೆಂದು
ಆದರೂ ನಂಬಿರುವೆ ಈ ನನ್ನ ವಿಧಿಯನ್ನು
ಅನಿಸುತಿದೆ ಗುರಿಯೆಡೆಗೆ ಸಾಗುತಿಹೆನೆಂದು
ಧ್ಯೇಯವನು ಮರೆಯದೇ ಧೃಢವಾಗಿ ಅವುಚಿರಲು

ಪವನ್ ಪಾರುಪತ್ತೇದಾರ :-

Thursday, August 16, 2012

ಮಸಿ ಬಳಿಯಬೇಕಿತ್ತು


ನನ್ನ ಮನದ ಮೇಲೊಂದಿಷ್ಟು
ಮಸಿ ಬಳಿಯಬೇಕಿತ್ತು
ಸಂತಸದ ಕ್ಷಣಗಳ ಅಳಿಸಿ ಹಾಕಲು
ಕೆಂಪಾಗಿರುವ ನೆನಪುಗಳ ಕಪ್ಪಾಗಿಸಲು
ಅವಳ ಹೆಸರ ಎದೆಯ ಮೇಲಿಂದೂರೆಸಲು
ಮಸಿ ಬಳಿಯಬೇಕಿತ್ತು

ನೆನ್ನೆಯಷ್ಟೇ ಲಾಲ್ ಭಾಗಿನಲ್ಲಿ ಸುತ್ತಿದ್ದೆವು
ಅಲ್ಲಿನ ಹೂಗಳ ಕಂಡು ಹೂವಾಗಬೇಕೆಂದಿದ್ದಳು
ಅಂದೇ ಹುಟ್ಟು ಅಂದೇ ಸಾವು,ಅಥವಾ ಮರುದಿನ
ಹೆಚ್ಚೆಂದರೆ ಒಂದುವಾರವಷ್ಟೇ
ನೋಡುಗರ ಕಣ್ಣುಗಳಿಗಾನಂದ ನೀಡುತ
ಸುವಾಸನೆಯ ಸುತ್ತಲೂ ನಗುನಗುತ ಬೀರುತ
ಮಣ್ಣು ಸೇರಿಬಿಡುತಿತ್ತು

ನಿನಗಂತಹ ಆತುರ ಏನಿತ್ತು ಗೆಳತಿ
ಈಗಷ್ತೆ ಮೊಗ್ಗಾಗಿ ನನ್ನೊಡನೆ ಇದ್ದೆ
ಹೂವಾಗಲಿಲ್ಲ ಸುಮ ಬೀರಲಿಲ್ಲ
ಮೊಗ್ಗಲೇ ಮೊಗೆದಷ್ಟು ಪ್ರೀತಿ ಅವಿತಿದ್ದೆ
ಪ್ರೀತಿಯ ಖನಿ ನಿನ್ನಲ್ಲಿ ಖಾಲಿಯಾಯಿತೇನು
ಒಬ್ಬನೇ ಬಿದ್ದಿರಲಿ ಈ ಪಾಪಿ ಇಲ್ಲಿ ಎಂದೆನಿಸಿ
ಬಿಟ್ಟು ಹೋಗೊ ಕೋಪ ಪ್ರೀತಿ ತರಿಸಿತ್ತೇನು

ಉತ್ತರವ ನೀಡಲು ನೀ ಇಂದು ಇಲ್ಲ
ನೆನಪುಗಳ ಸರಮಾಲೆಯಷ್ಟೆ ನನಗೆ
ಸತ್ತುಬಿಡುವಷ್ಟು ನೋವು ಸೆಳೆಯನಾ ಜವರಾಯ
ನಿನ್ನಂತೆಯೇ ನನ್ನವರ ನಾ ಬಿಟ್ಟುಬರಲೇನು
ಅಮ್ಮನ ಅಕ್ಕರೆ ಅಪ್ಪನ ಪ್ರೀತಿ
ಅದಕ್ಕಿಂತ ಹೆಚ್ಚಿನ ನಂಬಿಕೆಯ ಬಿಡಲೇನು

ಫ್ಯಾನಿನಲಿ ನೇತಾಡಿ ನೋವ ನೀಡಿರುವೆ
ವಾಸಿಯಾಗದ ದೊಡ್ಡ ಗಾಯ ಮಾಡಿರುವೆ
ಫ್ಯಾನಿಗಾದರೂ ಒಂದಷ್ಟು ಕರುಣೆ ಇರಬೇಕಿತ್ತು
ಫ್ಯಾನಿಗಾದರೂ ಒಂದಷ್ಟು ಕರುಣೆ ಇರಬೇಕಿತ್ತು

ಗೆಳೆಯನ ನೋವಿಗಾಗಿ ಪವನ್ ಪಾರುಪತ್ತೇದಾರ.....:(

Thursday, July 26, 2012

ಹೇ ಬೆಡಗಿ ನಿನ್ ಹೆಸರು ಏನು

ಅಂದು ಚಂದ್ರ ರಜೆ ಹಾಕಿದ್ದ
ಬೀದಿ ದೀಪಗಳಿಗೆ ನಿದ್ದೆಯ ಸಮಯ
ಉದ್ದನೆಯ ಡಾಂಬರ ರಸ್ತೆ
ವಾಹನಗಳು ನಿರ್ಜೀವ
ನಿಶ್ಯಬ್ಧಕ್ಕೆ ಸವಾಲೆನ್ನುವ ಮೌನ
ಕಗ್ಗತ್ತಲಲಿ ಒಬ್ಬ ಸುಂದರಿ

ಊರು ಗೊತ್ತಿಲ್ಲ ಕೇರಿ ಗೊತ್ತಿಲ್ಲ
ಕಣ್ಣು ಸ್ವಲ್ಪ ಐಬು ಇರಬಹುದು
ಹೋದ ದಾರಿಯಲ್ಲೆ ಮತ್ತೆ ಪ್ರಯಾಣ
ಆಗಾಗ ಕುಸಿದು ಬೀಳುತಿದ್ದಾಳೆ
ರೋಗಿಯೂ ಕುಂಟಿಯೂ ಆಗಿರಬಹುದು

ಪ್ರತಿಮನೆಯ ಬಾಗಿಲೂ ತಟ್ಟುತಿದ್ದಾಳೆ
ಕೆಲವರು ಒಳಗೆ ಕರೆದರು
ಸ್ವಲ್ಪ ಸಮಯದ ಬಳಿಕ ಈಕೆಯೇ ಹೊರಗೆ
ಕೆಲವರು ಸ್ವಾಗತಿಸುತಿದ್ದಾರೆ
ಈಕೆಗದು ಕೇಳಿಸಲೇ ಇಲ್ಲ
ಈಕೆ ಕಿವುಡಿಯೂ ಆಗಿರಬಹುದು

ನನಗಂತೂ ನಿಲ್ಲದ ಕುತೂಹಲ
ಅವಳಾರು ಅವಳಾರು
ಮನದ ಗೊಂದಲವ ತಡೆಯಲಾಗದೆ ನಾನು
ತಡೆಹಿಡಿದು ಕೇಳಿದೆ ನೀ ಯಾರು ನೀನು

ಮುಗುಳ್ನಗೆಯ ಬೀರುತ ನುಡಿದಳಾ ಬೆಡಗಿ
ನನ್ ಹೆಸರು " ಬದುಕು " ಹುಡುಕುತಿಹೆ ಅವಕಾಶ

ಪವನ್ ಪಾರುಪತ್ತೇದಾರ :)

 

Sunday, July 8, 2012

ತಗಡಿನ ಡಬ್ಬ ಮತ್ತು ದೇಹ


ಬಿದ್ದಿತ್ತೊಂದು ತಗಡಿನ ಡಬ್ಬ
ಶೆಟ್ಟಿ ಅಂಗಡಿಯ ಹೊರಗೆ
ಎಷ್ಟು ಸಾವಿರ ಕಿಲೋ ಅಕ್ಕಿ ಹಿಡಿದಿತ್ತೋ
ಎಷ್ಟು ಸಾವಿರ ಕಿಲೋ ಬೇಳೆ ತುಂಬಿತ್ತೋ
ಇಂದದಕೆ ಮರಣ ಶಯ್ಯೆ
ಇನ್ನೇನು ಪೀರ್ ಸಾಬಿ ಸುತ್ತಿಗೆಯೊಂದಿಗೆ ಬರುವ
ಜಜ್ಜಿ ಕುಟ್ಟಿ ಪುಟ್ಟಗೆ ಮಡಚಿ
ಶೆಟ್ಟಿಗೊಂದಷ್ಟು ಕೈ ಬೆಚ್ಚಗೆ ಮಾಡಿ
ಶಿವಾಜಿನಗರದ ಗುಜರಿಗೆ ಸೇರಿಸಬಹುದು

ಶಿವಾಜಿನಗರವೆಂಬ ತಗಡು ಶವಾಗಾರದಲ್ಲಿ
ತಗಡಿನ ಡಬ್ಬಕ್ಕೊಂದು ಮರುಹುಟ್ಟು
ವಿಕಾರವಾದರೂ ಹೊಸ ಆಕಾರ
ತುಕ್ಕು ಹಿಡಿದ ಜಾಗಕ್ಕೆಲ್ಲ ಲಪ್ಪದ ಆಧಾರ
ಹೊಸಬಣ್ಣ ಹೊಸರೂಪು ಹೊಸಜಾಗದ ಪ್ರಯಾಣಕ್ಕೆ
ಶೆಟ್ಟಿ ಅಂಗಡಿಯ ತಗಡಿನ ಡಬ್ಬ ಮತ್ತೆ ಈಗ ಸಿದ್ಧ

ಅದೇ ದಿನ ಶೆಟ್ಟಿಯಂಗಡಿಯ ಹೊರಗೊಂದು ದೇಹ
ಸಿಂಗಾರ ಮಾಡಿತ್ತು ಬಣ್ಣ ಬಣ್ಣದ ಹೂಗಳಿಂದ
ಅದಕ್ಕೆಂದೆ ಹೊಸದಾದ ವಾಹನ
ಸುತ್ತಲೂ ಜನರು ಅದರ ಬಗ್ಗೆಯೇ ಮಾತು
ತಮಟೆಯ ನಿನಾದ ಮನೆಯವರ ಆಕ್ರಂದನ
ನಡುವೆಯೇ ತೆರಳಿತ್ತು ಸುಡುಗಾಡ ಕಡೆಗೆ

ಕಟ್ಟಿಗೆಯ ಸಿಂಹಾಸಸ ಬೆರಣಿಗಳ ಒಡವೆಗಳು
ತುಪ್ಪ ಸುರಿಯುತಿಯರು ದೇಹದ ಮೇಲೆಲ್ಲ
ಮಂತ್ರ ಓದುವನೊಬ್ಬ ಮಡಿಕೆ ಹಿಡಿಯುವನೊಬ್ಬ
ಕೊಳ್ಳಿ ಇಟ್ಟು ದೇಹಸುಟ್ಟು ಭಸ್ಮಮಾಡಿಹರಿಲ್ಲಿ

ಶೆಟ್ಟಿಯಂಗಡಿಯಿಂದ ಒಂದೇ ದಿನಕ್ಕೆ ಇಬ್ಬರು ಹೊರಗೆ
ತಗಡಿನ ಡಬ್ಬ ಮತ್ತು ಮನುಜನ ದೇಹ
ದೇಹ ಮಣ್ಣಿಗಾದರೆ ಡಬ್ಬ ಮತ್ತೆ ಕೆಲಸಕ್ಕೆ

ನೇತ್ರದಾನವಾದರೂ ಮಾಡಿ, ಪವನ್ ಪಾರುಪತ್ತೇದಾರ....!

Thursday, June 14, 2012

ವೈತರಣಿ


ಎಷ್ಟು ಪವಿತ್ರನಾಗಿದ್ದ ಅವನು
ಕಷ್ಟದಲಿ ಇದ್ದರೂ ನಿಷ್ಠನಾಗಿದ್ದ
ಹಿರಿಯರಿಗೆ ಗೌರವ ಕಿರಿಯರಿಗೆ ಮನ್ನಣೆ
ಹೆಂಗಳೆಯರೆಂದರೆ ಅಮ್ಮನದೇ ಅಕ್ಕರೆ

ಎಷ್ಟು ಮುಗ್ಧನಾಗಿದ್ದ ಅವನು
ಮಗುವೂ ಒಮ್ಮೊಮ್ಮೆ ನಾಚುವಂತಿದ್ದ
ಎಲ್ಲವನು ತಿಳಿದು ಏನನ್ನು ತೋರದೆ
ಲೋಕದಲಿ ತಾನಿನ್ನೂ ವಿದ್ಯಾರ್ಥಿ ಎಂದಿದ್ದ

ಇಂದು ಹಾಗಿಲ್ಲ
ನದಿಯು ದಿಕ್ಕ ಬದಲಿಸಿದಂತೆ
ಹುಣ್ಣಿಮೆ ಕಳೆದು ಅಮವಾಸ್ಯೆ ಬಂದಂತೆ
ತೋರ್ಪಡಿಕೆ ಅಸೂಯೆಯ ಕಲ್ಮಶವ ತುಂಬುವ
ವೈತರಣಿಯಾದನಲ್ಲ

ಬರಬಾರದಿತ್ತೇನೋ ಆಸ್ತಿ ಐಶ್ವರ್ಯ
ಬರಬಾರದಿತ್ತೇನೋ ಹೆಸರು ಮರ್ಯಾದೆ
ಒಳ್ಳೆತನ ಹರಿಸಿ ದಣಿವಾಯಿತೇನೊ ಮನವು
ನಿಂತು ಸುಖ ಪಡುವ ಮನಸು ಮಾಡಿದನಲ್ಲ

ವೈತರಣಿಯಾದನಲ್ಲ

ಪವನ್ ಪಾರುಪತ್ತೇದಾರ :-

ಎಡಗೈಯ ಹಿಡಿಯಷ್ಟು ಪುಟ್ಟದೊಂ ಹೃದಯ

ಎಡಗೈಯ ಹಿಡಿಯಷ್ಟು ಪುಟ್ಟದೊಂ ಹೃದಯ
ಮತ್ತೊಂದು ಹೃದಯವ ಹುಡುಕುತಲಿ ಸುತ್ತಿತ್ತು
ಇರಲಿಲ್ಲ ಅದಕೆಂದು ಅಂತಸ್ತಿನ ಹಂಗು
ಸುಳಿದಿಲ್ಲ ಚಿಂತೆಯದು ಜಾತಿಗೀತಿಯದು
ಮಿಡಿಯುತಾ ಬಡಿಯುತಾ
ನಿಮಿಷಕೆಪ್ಪತ್ತೆರಡು ಬಾರಿ
ಜೊತೆಗಾಗಿ ನಿರ್ಮಲ ಹೃದಯವ ತಡಕಿತ್ತು

ಬಂದವು ಹೃದಯಗಳು ನೂರಾರು ನೂರಾರು
ಹತ್ತಿರ ಬಂದೊಡನೆ ಬಡಿತವೂ ಜೋರು
ಒಂದೊಂದು ಹೃದಯಕ್ಕೆ ಒಂದೊಂದು ಆಸೆ
ಕೇಳಿತೊಂ ಹೃದಯ ಯಾವ ಕಾರಿದೆ
ಮತ್ತೊಂದು ಕೇಳಿತು ನಿನ್ನಮನೆ ಹೇಗಿದೆ

ಹೆದರಿಯೇ ಉತ್ತರಿಸಿತು ಈ ಪುಟ್ಟ ಹೃದಯ

ಹಿಡಿಯಷ್ಟು ಹೃದಯದ ತುಂಬೆಲ್ಲ ಪ್ರೀತಿ
ಅದ ಬಿಟ್ಟು ಬೇರೆ ಏನಿಲ್ಲ ಒಡತಿ
ಸರಿದವು ಹೃದಯಗಳು ಈ ಮಾತ ಕೇಳಿ
ಕಾರು ಮನೆ ಅಷ್ಟೆ ಬದುಕೆಂದು ಹೇಳಿ

ಆಗಲೆ ಸಿಕ್ಕಿತ್ತು ಮುದ್ದಾದ ಹೃದಯ
ಹಿಡಿಯಷ್ಟು ಹೃದಯದ ಪ್ರೀತಿ ಸಾಕೆಂದು
ಇಟ್ಟಿತದು ಒಂದು ಪುಟ್ಟನೆಯ ಷರತ್ತು
ಬಂದು ಕೇಳೆಂದು ತನ್ನಪ್ಪ ಹೃದಯವನು

ಅಪ್ಪನ ಮನೆಯದೋ ದಟ್ಟನೆಯ ಕಾಡು
ಆಸೆಯೆಂಬ ಮುಳ್ಳಿನ ಪೊದೆಗಳ ನಡುವೆ
ಒಪ್ಪಿಸಲಪ್ಪನಾ ಹೃದಯವ ನುಗ್ಗಿತಾ ಪೊದೆಯಲಿ
ಹಿಡಿಯಷ್ಟು ಹೃದಯಕೆ ನೆಟ್ಟಿತು ಮುಳ್ಳಲಿ

ನೋವಲೆ ಕೇಳಿತು ಮುದ್ದಾದ ಮರಿ ಹೃದಯ
ಒಪ್ಪಲಿಲ್ಲವಲ್ಲ ಆ ಕಟುವಾದ ಹಿರಿ ಹೃದಯ
ಮುಳ್ಳುಗಳ ನಡುವಲಿ ನೋವಿನಲಿ ಮಿಡಿಯುತ
ಮತ್ತೆ ಮರಳಿತು ತನ್ನ ಎದೆಯ ಮನೆಗೂಡಿಗೆ

ಮತ್ತದೇ ಬಡಿತ ಮತ್ತದೇ ಮಿಡಿತ
ಎಪ್ಪತ್ತೆರಡು ಲೆಕ್ಕವದು ಇಂದಿಗೂ ತಪ್ಪಿಲ್ಲ
ಪ್ರತಿ ಬಾರಿ ಬಡಿತದಲು ನೋವ ಹಿಮ್ಮೇಳ
ಪ್ರಿಯತಮೆಯು ಕೊಟ್ಟ ಪ್ರೀತಿ ಬಹುಮಾನ

ಪ್ರಿಯತಮೆಯು ಕೊಟ್ಟ ಪ್ರೀತಿ ಬಹುಮಾನ.....!

Monday, June 11, 2012

ಉತ್ತರವಿಲ್ಲದ ಪ್ರಶ್ನೆ


ಪ್ರೀತಿ ಎಂದರೇನು
ಪ್ರತಿಯೊಬ್ಬ ಮನುಜನಿಗು ಕಾಡುವ ಪ್ರಶ್ನೆ
ಹೆತ್ತಾಗ ಕಂಡಿಲ್ಲ
ಹೊತ್ತಾಗ ಕಂಡಿಲ್ಲ
ಬಿದ್ದಾಗ ಬಿಕ್ಕಳಿಸಿ ಅತ್ತಾಗ ಕಂಡಿಲ್ಲ
ಕಂಡುಕೊಂಡೆಯಾ ಗೆಳೆಯ ಪ್ರೀತಿಯ ಅರ್ಥ
ಪ್ರೇಯಸಿಯು ಒಮ್ಮೆ ಕಿರು ನಗೆಯ ಕೊಟ್ಟಾಗ

ಅಕ್ಕರೆಯ ಮಾತು ಆಡಿದಾಗ ಕಂಡಿಲ್ಲ
ಮುದ್ದಾಗಿ ಮೆಚ್ಚುಗೆಯ ಕೊಟ್ಟಾಗ ಕಂಡಿಲ್ಲ
ಸೋತಾಗ ಬೆನ್ನು ತಟ್ಟಿದಾಗ ಕಂಡಿಲ್ಲ
ಗೆದ್ದಾಗ ಹೆಮ್ಮೆಯಲಿ ಅಪ್ಪಿದರು ಕಂಡಿಲ್ಲ
ಕಂಡುಕೊಂಡೆಯಾ ಗೆಳೆಯ ಪ್ರೀತಿಯ ಅರ್ಥ
ಪ್ರೇಯಸಿಯು ಒಮ್ಮೆ ಕಿರುನಗೆಯ ಕೊಟ್ಟಾಗ

ನಿನಗಾಗಿ ಜೀವವನು ತೇಯ್ದಾಗ ಕಂಡಿಲ್ಲ
ನಿನ್ನಾಸೆ ತೀರಿಸಿದ ತ್ಯಾಗದಲು ಕಂಡಿಲ್ಲ
ನಿನ್ನೊಲವ ಒಪ್ಪಿದರು ಪ್ರೀತಿ ಅದು ಕಂಡಿಲ್ಲ
ನಿನ್ನವರ ಪ್ರೀತಿ ನಿನಗೆಂದು ಕಂಡಿಲ್ಲ
ಕಂಡುಕೊಂಡೆಯಾ ನೀನು ಪ್ರೀತಿಯ ಅರ್ಥ
ಪ್ರೇಯಸಿಯು ಒಮ್ಮೆ ಕಿರುನಗೆಯ ಕೊಟ್ಟಾಗ

ಕಂಡಿಲ್ಲ ನಾನು ಪ್ರೀತಿ ಎಂದರೇನು
ನಿನ್ನ ನಗುವಲ್ಲೇ ಅದು ಅಡಗಿರುವುದೋ ಏನು
ಎಂದಾಗ ನಿನ್ನವಳು ಮತ್ತೊಮ್ಮೆ ನಗಬಹುದು
ಆ ನಗುವು ನಿನಗಷ್ಟು ಖುಷಿ ಕೊಡಲು ಬಹುದು
ಸುಳ್ಳಿನ ಲೋಕವದು ಸೃಶ್ಠಿಸಿಹೆ ಗೆಳೆಯ
ಹೆತ್ತವರ ಪ್ರೀತಿಯ ಮರೆತಿರುವೆ ಗೆಳೆಯ

ಪವನ್ ಪಾರುಪತ್ತೇದಾರ :-

Monday, June 4, 2012

ಅವರಮ್ಮನ ಕಣ್ಣಲ್ಲಿ ನನ್ನಮ್ಮ

ಮಾಗಿದ ಕಣ್ಣುಗಳು
ಪಿಳಿ ಪಿಳಿ ನೋಟ
ಮುಖವೆಲ್ಲ ಸುಕ್ಕು
ನೆನಪು ಸರಿಯಿಲ್ಲ
ನೆನ್ನೆಯದ ನೆನೆಯಲು ಬಲು ಕಷ್ಟ ಅವಳಿಗೆ
ಆದರು ಮರೆತಿಲ್ಲ ನನ್ನಮ್ಮನ ಅವಳಮ್ಮ

ಮತ್ತದೇ ಮಾತು ನನ್ನಮ್ಮನ ಬಗ್ಗೆ
ಆಡಿದ್ದು ಹಾಡಿದ್ದು ಕುಣಿದಿದ್ದು ಬಿದ್ದಿದ್ದು
ಅಪ್ಪನ ಕೈಲಿ ಬೈಸಿಕೊಂಡಿದ್ದು
ತಮ್ಮಂದಿರ ಕೂಡ ಜಗಳವಾಡಿದ್ದು

ಈಗಲೂ ಬೈಗುಳ ಎಷ್ಟು ಸಲೀಸವಳಿಗೆ
ಮಗಳೆಂಬ ಸಲುಗೆಗೆ ಬೇಲಿ ಬೇಕೇನು
ಅಮ್ಮ ಕಲಿಯುವ ವಿಷಯ ಬಹಳಾನೆ ಬಾಕಿ ಇದೆ
ಅವಳಮ್ಮ ಹೇಳಿಕೊಡಲೆಷ್ಟು ವಿನಯ

ನೋಡಿರಲಿಲ್ಲ ಅಮ್ಮನನು ಪುಟ್ಟ ಮಗುವಾಗೆಂದು
ಅವರಮ್ಮನ ಮುಂದೆ ಮುದ್ದು ಮಗು ಇವಳು
ಹಿಂದಿಂದೆ ಹಿಂದಿಂದೆ ಅವರಮ್ಮನ ಹಿಂದೆ
ಕಾದಿಹಳು ಕಾಳಜಿಯ ಸೆರಗನ್ನು ಹಿಡಿದು

ಅಮ್ಮನಿಗೆ ಎಳ್ಳಷ್ಟು ಬೇಸರವೆ ಇಲ್ಲ
ಇದ್ದಳಲ್ಲ ಹಿಂದೆಯೂ ಅವರಮ್ಮ ಹೀಗೆಯೆ
ಅವರಮ್ಮನಿಗೊಂದಷ್ಟೂ ಭಯವಂತು ಇಲ್ಲ
ಮಗಳೆಂಬ ಸಂಬಂಧಕಂತ್ಯವದು ಸಾಧ್ಯವೆ

Sunday, May 27, 2012

ಅಲ್ಪತೃಪ್ತನಿವನು


ಸ್ಪರ್ಷದಲೆ ಸುಖದ ಸುಪ್ಪತ್ತಿಗೆಯನೇರುವ
ಅಶ್ಲೀಲ ನೋಟದಲಿ ಅಂದವನು ಕೆಣಕುವ
ನಾಚಿಕೆಯೆ ಇಲ್ಲದ ಬೈಗುಳವ ಪಡೆಯುವ
ಕೊಳಕನ್ನು ಮನವೆಲ್ಲ ತುಂಬಿಕೊಂಡಿರುವ
ಅಲ್ಪತೃಪ್ತನಿವನು

ಜಂಗುಳಿಯ ನಡುವೆ ನುಗ್ಗಿ ತಾ ಬರುವ
ಮಹಿಳೆಯರ ಮಧ್ಯದಲಿ ನುಗ್ಗಿ ಮಜ ಪಡೆವ
ಅಂಟಿದಂತೆಯೆ ನಿಂತು ಸುಖದ ಸೆರೆ ಹಿಡಿವ
ನಾರಿಯರ ಮನಸುಗಳ ಘಾಸಿ ಮಾಡಿರುವ
ಹೆಣ್ಣ ಮನವದನು ಗೆಲ್ಲಲಾಗದಿರುವ
ಅಲ್ಪತೃಪ್ತನಿವನು

ಮಹಿಳೆಯರ ಆಸನವ ಆಕ್ರಮಿಸಿ ಬಿಡುವ
ಅಕ್ಕ ಅಮ್ಮನ ನಡುವೆ ವ್ಯತ್ಯಾಸ ಮರೆವ
ವಿಕೃತಿಯ ಮನವೆಲ್ಲ ತುಂಬಿಕೊಂಡಿರುವ
ಸ್ವಚ್ಛಂದ ಪ್ರೀತಿಯ ಬೆಲೆ ತಿಳಿಯದಿರುವ
ಮೈಮೇಲೆ ಬೀಳುವ ಮೃಗವಾಗಿ ವರ್ತಿಸುವ
ಅಲ್ಪತೃಪ್ತನಿವನು

ಬದಲಿಸಿಕೊ ಓ ಮನುಜ ನಿನ್ನ ಈ ರೀತಿಯನು
ದೇವತೆಯು ಹೆಣ್ಣು ಆಟಿಕೆಯು ಅಲ್ಲ
ಪ್ರೀತಿ ಪಡಿ ಅವಳಿಂದ
ಸ್ನೇಹದಿಂದಿರವಳ ಜೊತೆ
ಅಲ್ಪತೃಪ್ತನಾಗದಿರು ಬರಿ ಸ್ಪರ್ಷದಿಂದ
ಅಲ್ಪತೃಪ್ತನಾಗದಿರು ಬರಿ ಸ್ಪರ್ಷದಿಂದ

ಇವತ್ತು ಸಿಟಿ ಬಸ್ಸಿನಲ್ಲಿ ಒಬ್ಬ ವ್ಯಕ್ತಿಯ ನಡವಳಿಕೆ ಈ ನನ್ನ ಈ ಬರಹಕ್ಕೆ ಕಾರಣ..
ಪವನ್ ಪಾರುಪತ್ತೇದಾರ

Wednesday, May 23, 2012

ಎಂಜಲೆಲೆ

ಕಿತ್ತಾಟ ನಡೆಯುತಿತ್ತಲ್ಲಿ
ಅಸ್ತಿತ್ವದ ಹುಡುಕಾಟ ನಡೆಯುತಿತ್ತು
ತನ್ನವರ ನಡುವೆಯೇ ಹೊಡೆದಾಟ
ಕೂಗಾಟ ಎಳೆದಾಟ ರಂಪಾಟ
ಹಿರಿತನದ ಬಡಿದಾಟ

ಮೊದಲು ನಾ ಬಂದಿರುವೆ ಆಮೇಲೆ ನೀ
ನಾ ಮೊದಲು ಬಂದಿದ್ದು ಆದ್ಯತೆಯು ನನಗೆ
ನಿನ್ನದೀ ಸ್ಥಳವಲ್ಲ ಏಕೆ ಬಂದಿರುವೆ
ಹಿರಿಯನು ನಾನಿಲ್ಲಿ ಕೊಡಿ ಎನಗೆ ಅವಕಾಶ
ನಮ್ಮಕಡೆ ಜನ ಜಾಸ್ತಿ ಹೊರಡು ಏಕಿರುವೆ

ನಿಂತಲ್ಲಿನಿಂದಲೇ ಬೆದರಿಕೆಯ ಮಾತು
ಎಲ್ಲರಿಗೂ ಹಸಿವು ಹೊಟ್ಟೆಬಾಕರು ಎಲ್ಲ
ತಮ್ಮ ಹೊಟ್ಟೆಯಷ್ಟೇ ತುಂಬಿದರೂ ಬಿಡರು
ನಾಳೆಗೂ ನಾಳಿದ್ದಿಗೂ ಕೂಡಿಡುವ ಆಸೆ

ಕೊಬ್ಬ ಬೆಳೆಸಿಕೊಂಡು ಬೀಗುವ ಹಂಬಲ
ಮಕ್ಕಳು ಮರಿಮಕ್ಕಳಿಗೂ ಪಾಲು ನೀಡುವಾಸೆ
ತಾನೇ ಎಲ್ಲವನ್ನೆಳೆದು ಮನೆಗೆ ಹೋಗುವಾಸೆ
ಗಬಗಬನೆ ಮಡಚಿಟ್ಟು ಇನ್ನೇನು ಹೊರಡಲು

ಛತ್ರದ ಕಾವಲುಗಾರ ಬಂದ ದೊಣ್ಣೆಯನು ಹಿಡಿದು
ಓಡಿದವು ನಾಯಿಗಳು ಎಂಜಲೆಲೆಗಳ ಬಿಟ್ಟು


ಪವನ್ ಪಾರುಪತ್ತೇದಾರ

Wednesday, May 16, 2012

ಯಂತ್ರವಾದೆಯಾ ಅಮ್ಮ


ಮಡಿಲದು ಪ್ರೀತಿಯ ಧಾರೆ ಹರಿಸಲು ಇರಲು
ಗರ್ಭದಲಿ ಮುದ್ದಾದ ಮಗುವೊಂದು ಇರಲು
ಬೇಡವಂದು ಹೀಗೆಳದು ಕೊಲ್ಲುವಾಗಲು ಕೂಡ
ನೋವ ನುಂಗಿ ಕರುಳ ಕಿವುಚಿಕೊಂಡು
ಕಣ್ಣೀರು ಸುರಿಸುವ ಯಂತ್ರವಾದೆಯಾ ಅಮ್ಮ

ಅವನಂತು ಅವಿವೇಕಿ ನೀ ಅಸಹಾಯಕಿ
ಪರಿವಾರಕಿಲ್ಲ ನಿನ್ನ ಮಗುವಿನ ಮೇಲೆ ಪ್ರೀತಿ
ಅವರಿಗೆ ಬೇಕಿತ್ತು ವಂಶೋಧ್ಧಾರಕ
ಉದ್ದಾರವಾಗಲು ಗಂಡು ಮಗುವೇ ಬೇಕ
ನೀನಾದರೊಂದಷ್ಟು ಒರಟುತನ ಮಾಡದೆ
ಹೆದರಿ ಬಲಿ ಕೊಡುವ ಯಂತ್ರವಾದೆಯೇನಮ್ಮ

ಕೇಳಬಾರದಿತ್ತೇನು ಮರು ಪ್ರಶ್ನೆಯನ್ನು
ಹೆಣ್ಣ ಬೇಡವೆನ್ನುವರ ಹೆತ್ತವಳು ಹೆಣ್ಣೇ ಅಲ್ಲವೆ
ಮನದ ಕುರುಡಿಗೆ ಸ್ವಲ್ಪ ಔಷಧಿಯ ನೀಡುವ
ಜಗದ ಕಣ್ಣುಗಳಿಗೆ ಈ ಕುರುಡರ ತೋರುವ
ಜಗ್ಗದ ಕುಗ್ಗದ ನಾರಿ ನೀನಾಗಮ್ಮ
ಯಂತ್ರವಾಗದಿರಮ್ಮ
ಬೆಳೆಸಿ ಬಲಿ ಕೊಡುವ ಯಂತ್ರವಾಗದಿರಮ್ಮ

ಸತ್ಯಮೇವ ಜಯತೆ ಮೊದಲ ಕಂತು ನೋಡಿದಾಗನಿಸಿದ್ದು

ಪವನ್ ಪಾರುಪತ್ತೇದಾರ

ಆಸೆ ಅಂಗಡಿ

ಅಪ್ಪಿತಪ್ಪಿಯೂ ಒಪ್ಪದಿರಿ
ಆಸೆಯೆಂಬ ಅಂಗಡಿಯ ಸರಕ
ತೂಕವದು ಹೆಚ್ಚಿಹದು
ಅಗ್ಗದಲಿ ಸಿಗಬಹುದು
ಮಾಡಬಹುದದು ನಿಮ್ಮ ಮನದ ಮೇಲ್ಗಾಯ

ಕಣ್ಣಿಗೊಂದಷ್ಟು ತಂಪನೆರಬಹುದು
ಮನದ ಮೂಲೆಯಲಿ ಕ್ಷಣಿಕ ಸುಖವನೀಯಬಹುದು
ಹೆಮ್ಮೆಯಲಿ ಕೊಂಡು ತೋರ್ಪಡಿಸಿಕೊಂಡು
ಪರರ ಮುಂದಷ್ಟು ಬೀಗಿ ಹಿಗ್ಗಬಹುದು

ಮುಂದೊಮ್ಮೆ ಮುಗಿವುದು ಸರಕಿನ ಸಾರ
ಆಸೆಯಂಗಡಿಯ ಸರಕು ಶಾಶ್ವತ ಅಲ್ಲ
ತಂದು ಒಡ್ಡೀತು ನಿಮಗೆ ನಿರಾಸೆಯ ಭಾವ
ನೀಡಬಹುದು ನಿಮ್ಮ ಮನಸಿಗೆ ನೋವ

ಪವನ್ ಪಾರುಪತ್ತೇದಾರ

ಬದುಕಿನ ಬಂಡಿ

ಕಾಡುತಿದೆ ಮನದಲೇನೋ ದುಗುಡ
ಮರೆತು ಬಿಡುವೆನೋ ಏನೋ ಎಂಬ ಭಯ
ಸಿಂಬಳವ ಒರೆಸಿ ಸಿಹಿಯಾದ ಮಾತಾಡಿ
ಮುದ್ದಾದ ಪದ್ಯಗಳ ನಮ್ಮುಂದೆ ಹಾಡಿ
ಬದುಕ ಬಂಡಿಗೆ ಮೊದಲ ಗೇರು ಹಾಕಿದವರ
ಮರೆತು ಬಿಡುವೆನೋ ಏನೋ ಎಂಬ ಭಯ

ರಾಶಿ ಮನೆಕೆಲಸವ ಕೊಟ್ಟು
ತಪ್ಪು ಮಾಡಿದಾಗೆಲ್ಲ ಪೆಟ್ಟು ಕೊಟ್ಟು
ಬರೆಯದೇ ಬಂದಾಗ ಬರೆಯಿಟ್ಟು
ಗೆಣ್ಣುಗಳ ಊದಿಸಿ ತೊಡೆಪಾಯಸವ ನೀಡಿ
ಬದುಕ ಬಂಡಿಗೆ ಎರಡನೇ ಗೇರು ಹಾಕಿದವರ
ಮರೆತು ಬಿಡುವೆನೋ ಏನೋ ಎಂಬ ಭಯ

ಜಿಪ್ಪು ಹಾಕದಿದ್ದಾಗ ಗುಟ್ಟಾಗಿ ಹೇಳಿ
ಶಾಲೆ ತಪ್ಪಿಸಿದಾಗ ಜೊತೆಯಲ್ಲಿ ತಿರುಗಿ
ಈಜಾಡಿ ನಲಿದಾಡಿ ಆಗಾಗ ಹೊಡೆದಾಡಿ
ಅಗಲಿಕೆಯ ಕಣ್ಣೀರ ಈಗಲು ಸುರಿಸುತಿಹ
ಬದುಕ ಬಂಡಿಗೆ ಮೂರನೇ ಗೇರು ಹಾಕಿದವರ
ಮರೆತು ಬಿಡುವೆನೋ ಏನೋ ಎಂಬ ಭಯ

ಒಲವೇ ನೀನು ಮಂದಾರವೆಂದೂ
ಕಾಣುವೆ ಅಷ್ಟೆ, ಕೈಗೆಟಕದೆಂದು
ತನ್ನತನ ತಾನೇ ಕಳೆದುಕೊಂಡಾಗಿ
ಕಣ್ಣೀರ ಪಾಠವನು ಪ್ರೀತಿಯಲಿ ತಿಳಿಸಿದ
ಬದುಕ ಬಂಡಿಗೆ ನಾಲ್ಕನೇ ಗೇರು ಹಾಕಿದವರ
ಮರೆತು ಬಿಡುವೆನೋ ಏನೋ ಎಂಬ ಭಯ

ಅಡಿಗಡಿಗೆ ನಮಸ್ಕಾರ ಆಗಾಗ ಅಲಂಕಾರ
ತೀರ್ಥ ಪ್ರಸಾದಗಳಂತೂ ಲೆಕ್ಕವೇ ಇಲ್ಲ
ಮನೆಯಲ್ಲು ದೇವರು ಗುಡಿಯಲ್ಲು ದೇವರು
ಬದುಕ ಬಂಡಿಗೆ ಐದನೇ ಗೇರು ಹಾಕಿದವರ
ಬಂಡಿಯ ವೇಗವ ಶರವೇಗ ಮಾಡಿದವರ
ಮರೆತು ಬಿಡುವೆನೋ ಏನೋ ಎಂಬ ಭಯ

ಒಮ್ಮೆ ನಿಮ್ಮ ಬದುಕ ಬಂಡಿ ರೆವೆರ್ಸ್ ಗೇರ್ ಹಾಕಿ ನೋಡಿ ಸ್ನೇಹಿತರೆ, ನಿಮ್ಮ ಕಣ್ಣು ಒದ್ದೆ ಆಗದೆ ಇರದು....

ಪವನ್ ಪಾರುಪತ್ತೇದಾರ :-

Monday, April 30, 2012

ಚಂದ್ರಮನ ಪ್ರೀತಿ

ಆಗ ತಾನೆ ಅರಳಿದ ಹೂ
ಕಾನನದ ನಡುವೆ ರಾತ್ರಿಯಲಿ ಜನ
ಸುತ್ತಲಿನ ಪರಿಸರ ಸಂತಸದಿ ನಗುತಿತ್ತು
ಬಳ್ಳಿಯಮ್ಮನಿಗೆ ಹೂ ಹೆತ್ತ ಖುಶಿಯಿತ್ತು
ಗಿಡ ಗುಂಟೆ ಪ್ರಾಣಿ ಪಕ್ಷಿ ಎಲ್ಲವೂ ಹೊಸತು
ತಲೆ ಎತ್ತಿ ನೋಡಿದರೆ ಆಗಸದ ಪರಿವಿಲ್ಲ
ಚಂದ್ರಮನ ಅಂದಕೆ ಮಿತಿಯೆಂಬುದಿಲ್ಲ

ಚಂದ್ರಮನ ನೋಡೊಡನೆ ಸಕ್ಕಿತ್ತು ಆ ಹೂವು
ಕಪ್ಪು ಮಚ್ಚೆಗಳೂ ಕೂಡ ಮುದ್ದಾಗಿ ಕಂಡಿತ್ತು
ಹಿಡಿಯಲಾದೀತೇನು ಚಂದ್ರಮನ ಸೊಬಗ
ಚಂದ್ರನಂತೆ ಅರಳಿತ್ತು ಈ ಹೂವಿನ ಮೊಗ

ದಿನ ದಿನಕು ಅರಳುವಿಕೆ ಹೆಚ್ಚೆಚ್ಚು ಆಗಲು
ಪ್ರೀತಿ ನಿವೇದನೆಗೆ ಕ್ಷಣ ಗಣನೆ ಮಾಡಲು
ಹೂವ ಗಂಧವ ಸೂಸಿ ಚಂದ್ರನಿಗೆ ಕೊಡಲು

ಚಂದಿರನು ದುಂಬಿಗಳ ವರವ ಕೊಟ್ಟಿದ್ದ
ದುಂಬಿಯದು ಹೂವಿನ ಪ್ರೀತಿ ಪಡೆದಿತ್ತು

ಇಂದು ಆ ಹೂವಿಗೆ ವಯಸು ಹೆಚ್ಚಾಗಿ
ಘಮ್ಮೆನುವ ಗಾನವು ನಿಂತುಬಿಟ್ಟಾಗಿ
ಚಂದಿರನ ನೋಡಲು ಕಷ್ಟವಾಗಿತ್ತು
ಹೂವ ಶಿರವದು ಈಗ ನೆಲವ ನೋಡಿತ್ತು
ಚಂದಿರನ ಪ್ರೀತಿ ಕಡಿಮೆಯಾಗಿತ್ತು
ದುಂಬಿಗಳ ಸ್ನೇಹ ಮುರಿದು ಬಿಟ್ಟಿತ್ತು

ವಿರಹದ ಬೇಗೆಯಲಿ ಹೂವದು ಸುಡಲು
ವಯ್ಯಾರ ಬಿನ್ನಾಣ ಮುಕ್ತವಾಗಿರಲು
ಹೂವದು ಅವಸಾನ ನೋಡಿಯಾಗಿತ್ತು
ಪ್ರೀತಿಯದು ಅಮರವಾಗುಳಿದು ಬಿಟ್ಟಿತ್ತು



ಪವನ್ ಪಾರುಪತ್ತೇದಾರ್ :-



Saturday, April 28, 2012

ಕನ್ನಡಿಗನಿಗೆ ಕನ್ನಡಿಗನೇ ಸಾರಥಿ


ಮೊನ್ನೆ ಬಹಳಾ ದಿನಗಳಾದ ಮೇಲೆ ಭಟ್ಟ ಫೋನ್ ಮಾಡಿದ್ದ, ನಾನು ತುಂಬಾ ಸಾರಿ ಅವ್ನಿಗೆ ಫೋನ್ ಮಾಡಿದ್ದೆ ಆದ್ರು ರಿಸೀವ್ ಮಾಡಿರ್ಲಿಲ್ಲ, ನಾ ಫೋನ್ ಎತ್ತಿದೊಡನೆ ಲೇ ಡಿ ಕೇ ಬೋಸ್, ಎಲ್ಲಿ ಹಾಳಾಗೋಗಿದ್ಯ ಅಂದೆ. ಒಂದು ಫೋನ್ ರಿಸೀವ್ ಮಾಡ್ಲಿಕ್ಕಾಗಲ್ವ ಅಂತ ಬೈದೆ, ಏನ್ ಮಾಡೋದು ಮಗಾ ಕೆಲಸ ಸಿಕ್ಕಾಪಟ್ಟೆ ಕಷ್ಟ ಐತಿ, ನಿಲ್ಲಂಗಿಲ್ಲ ಕೂರಂಗಿಲ್ಲ, ಮಕ್ಳು ಬಿಡೋಂಗೆ ಇಲ್ಲ, ಭಾರಿ ಕಷ್ಟ್ ಕೊಡ್ತಾರೆ ಅಂದ, ನಾನು ಸರಿ ಮಗನ ಅಂತ ಕಷ್ಟದ್ ಕೆಲ್ಸ ಏನ್ಲೆ ಮಾಡ್ತಿದ್ಯ ಅಂದೆ, ಆಗ ಭಟ್ಟನ ಉತ್ತರ ಕೇಳಿ ಮನಸ್ಸಿಗೆ ಬಹಳಾ ನೋವಾಯ್ತು, ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ಪ್ರಥಮ ದರ್ಜೆಯಲ್ಲಿ ಮುಗಿಸಿದ್ದ ಭಟ್ಟ, ವೆಂಟಿಲೇಶನ್ ರಿಪೇರಿ ಮಾಡುವ ಕೆಲಸ ಮಾಡುತಿದ್ದ, ಅವನೇ ಹೇಳಿದ ಪ್ರಕಾರ, ವೆಂಟಿಲೇಶನ್ ಕೆಲಸ ಇಲ್ದೆ ಇದ್ರೆ ಅವರ ಕಂಪನಿಯ ಆಫೀಸ್ ಬಾಯ್ ಕೂಡ ಅವನೆ, ಆ ಬ್ಯಾಂಕಿಗೆ ಹೋಗಿ ಚೆಕ್ ಹಾಕಿ ಬಾ, ಅಲ್ಲೆಲ್ಲೋ ಹೋಗಿ ಆರ್ಡರ್ ಕಾಪಿ ತೆಗೆದುಕೊಂಡು ಬಾ, ಹೀಗೆ ಎಲ್ಲ ರೀತಿಯಲ್ಲು ಅವ್ನನ್ನ ಬಳಸಿಕೊಳ್ಳುತಿದ್ದರು.


ಭಟ್ಟ ಓದಿದ್ದೆಲ್ಲ ಹುಬ್ಬಳ್ಳಿಯಲ್ಲಿ, ಕೆ.ಎಲ್.ಇ. ಶಾಲೆಯ ಬೋರ್ಡುಗಳಲ್ಲಿ ಕನ್ನಡ ಮೀಡಿಯಂ ಓದಿ ಬೆಳೆದ ಹುಡುಗ, ಅಂತಹ ದಡ್ಡ ಹುಡುಗನೇನಲ್ಲ, ಡಿಪ್ಲೋಮದಲ್ಲಿ ಮತ್ತು ಇಂಜಿನಿಯರಿಂಗ್ನಲ್ಲಿ ಮೊದಲನೆ ದರ್ಜೆಯಲ್ಲಿ ಪಾಸಾಗಿದ್ದಾನೆ. ಮನೆಯ ಕಷ್ಟಗಳನ್ನೆಲ್ಲ ಮೂಲೆಯಲ್ಲಿ ಬಿಸಾಕಿ ಅವರಪ್ಪ ಸಾಲ ಸೋಲ ಮಾಡಿ ಓದಿಸಿದ್ದಾರೆ, ಎಜುಕೇಶನ್ ಲೋನ್ ಕಟ್ಟಲೇ ಬೇಕಾದ ಅನಿವಾರ್ಯತೆ ಅವನ್ನ ಈ ಕೆಲಸಕ್ಕೆ ದೂಡಿದೆ. ಈ ಮಧ್ಯೆ ಆ ಕೋರ್ಸು ಈ ಕೋರ್ಸು ಅಂತ ಹೇಳಿದವರ ಮಾತು ಕೇಳಿ ಟೆಸ್ಟಿಂಗ್ ಕೋರ್ಸ್ ಸಹ ಮಾಡಿದ್ದಾನೆ.ಆದ್ರು ಕೆಲಸ ಇಲ್ಲಿವರೆಗೂ ಸರಿಯಾದ ಕೆಲಸ ಮಾತ್ರ ಸಿಕ್ಕಿಲ್ಲ. ಇದು ಬರೀ ನನ್ನೊಬ್ಬ ಗೆಳೆಯನ ಕಥೆಯಲ್ಲ, ಭಟ್ಟ ಎಂಬುದು ಇಲ್ಲಿ ಪಾತ್ರವಷ್ಟೇ, ಇಂತಹ ಸಾವಿರಾರು ಹುಡುಗರು ಚೆನ್ನಾಗಿ ಓದಿಯೂ ಉತ್ತಮ ಅಂಕಗಳು ಪಡೆದೂ ಸಹ, ಎಂತ ಎಂತಹುದೋ ಕೆಲಸಗಳನ್ನು ಮಾಡುತಿದ್ದಾರೆ, ವೆಂಟಿಲೇಶನ್ ಸೆರ್ವೀಸ್ ಮಾಡುವುದೇ ಆಗಿದ್ದರೆ ಭಟ್ಟ ಐ.ಟಿ.ಐ ಓದಿದ್ದರೆ ಸಾಕಾಗಿತ್ತು, ಇಂಜಿನಿಯರಿಂಗ್ ಅವಶ್ಯಕತೆಯೇ ಇರಲಿಲ್ಲ, ವಿ.ಟಿ.ಯು. ಅಡಿಯಲ್ಲಿ ಸುಮಾರು ೨೦೦ ಕಾಲೇಜುಗಳಿವೆ ಅಂದರೆ ಪ್ರತಿ ವರ್ಷ ಹೊರಬರುವ ಇಂಜಿನಿಯರುಗಳೆಷ್ಟು, ಮತ್ತು ಅವರಲ್ಲಿ ಕೆಲಸಗಳಿಗೆ ಸೇರುವರೆಷ್ಟು? ನಿಜಕ್ಕು ಅಂಕಿ ಅಂಶಗಳ ನೋಡಲು ಹೋದರೆ ಭಯವಾಗುತ್ತದೆ.

ಇನ್ನು ನಮ್ಮ ಕನ್ನಡದ ಹುಡುಗರಿಗೆ ಐ.ಟಿ. ಕಂಪನಿಗಳಲ್ಲಿ ಕೆಲಸ ಸಿಗುವುದು ಕಷ್ಟ ಆದ್ರೆ ಹೊರ ರಾಜ್ಯದವರಿಗೆ ಮಾತ್ರ, ಅದರಲ್ಲು ಫ್ರೆಷೆರ್ಸ್ ಗಳಿಗೆ ಹೇಗೆ ಕೆಲಸ ಸಿಗುತ್ತದೆ ಅನ್ನೋದು ಒಂದು ಆಶ್ಚರ್ಯ, ಅದಕ್ಕೆ ಕಾರಣ ಹೀಗೂ ಇರಬಹುದು,ಸಾಮಾನ್ಯ ಐ.ಟಿ.ಪಿ.ಎಲ್, ಮಾರುತ್ತಹಳ್ಳಿ ಇಲ್ಲೆಲ್ಲ ತೆಲುಗಿನ ಜನ ಬಾಡಿಗೆಗೆ ಇರುವುದು ಹೆಚ್ಚು, ಮತ್ತು ಬಿ.ಟಿ.ಎಂ ಲೇಔಟ್ ಸುತ್ತ ಮುತ್ತ ಉತ್ತರ ಭಾರತೀಯರು ಹೆಚ್ಚು, ಗಾರೆಪಾಳ್ಯ ಇಂತಹ ಜಾಗದಲ್ಲಿ ತಮಿಳಿಗರು,ಎಲ್ಲರೂ ಸಾಮಾನ್ಯ ಮನೆ ಮಾಡಿಕೊಂಡು ಒಂದೊಂದು ಮನೆಯಲ್ಲಿ ೫ ಜನ ೬ ಜನ ಇರ್ತಾರೆ. ೬ ಜನ ಅಂದ್ರೆ ಆರು ಬೇರೆ ಬೇರೆ ಕಂಪನಿಗಳು, ಅಲ್ಲಿ ಯಾರಾದ್ರು ಒಬ್ಬ ತನ್ನ ತಮ್ಮನೋ ಗೆಳೆಯನೋ ಕೆಲಸ ಹುಡುಕುತಿದ್ದಾನೆ ಎಂದರೆ, ಮಿಕ್ಕ ೬ ಜನ ರೂಂ ಮೇಟ್ ಗಳಿಗೆ ತಿಳಿಸುತ್ತಾನೆ, ಆಗ ಕೆಲಸ ಹುಡುಕುತ್ತಿರುವವನಿಗೆ ೬ ಅವಕಾಶಗಳು ಸಿಕ್ಕಂತೆ ಅಲ್ವೆ?? ಬೇರೆ ರಾಜ್ಯಗಳಿಂದ ಬಂದ ಅವರುಗಳ ನಡುವೆ ಒಂದು ರೀತಿಯ ಎಮೋಶಿನಲ್ ಬಾಂಡಿಂಗ್ ಮೂಡಿರುತ್ತದೆ. ಇದರಿಂದ ಲಾಭ ಅವ್ರವರ ರಾಜ್ಯದ ಹುಡುಗರಿಗೆ, ಅದಕ್ಕೆ ಎಲ್ಲಿ ನೋಡಿದರು ಮಲ್ಲುಗಳು ಎನ್ನಡಗಳು ಸಾಲೆಗಳು ತುಂಬಿರುವುದು.

ಇನ್ನು ನಮ್ಮ ಕನ್ನಡಿಗರು.ಅದ್ರಲ್ಲು ಐ.ಟಿ. ಬದುಕಿನವರು ತೀರಾ ಶುದ್ದ ಹಸ್ತರು, ತಮ್ಮ ಹತ್ತಿರದವರಿಗೇ ಆದ್ರು ಸಹಾಯ ಮಾಡುವುದಿಲ್ಲ, ಕೇಳಿದ್ರೆ ನಿನಗೆ ಟಾಲೆಂಟ್ ಇದ್ರೆ ಸಿಗುತ್ತೆ ಇಲ್ಲ ಅಂದ್ರೆ ಇಲ್ಲ ಅಂತ ಜಾರಿ ಕೊಳ್ತಾರೆ. ಎಷ್ಟೋ ಸರಿ ಕಳುಹಿಸಿದ ರೆಸೂಮ್ ಗಳನ್ನು ಹೆಚ್.ಅರ್. ತಂಡಕ್ಕೆ ಫಾರ್ವರ್ಡ್ ಸಹ ಮಾಡುವ ಗೋಜಿಗೆ ಹೋಗುವುದಿಲ್ಲ. ಇಂಟರ್ವ್ಯೂ ಅಲ್ಲಿ ಕನ್ನಡದ ಕ್ಯಾಂಡಿಡೇಟ್ ಗಳಿಗೆ ಸಾಫ್ಟ್ ಕಾರ್ನರ್ ತೋರಿಸೋದಿಲ್ಲ, ಕಾರಣ ಪ್ರೊಫೆಶಿನಲ್ ಎಥಿಕ್ಸ್ ಅಂತಾರೆ. ಹೀಗೆ ಆದ್ರೆ ನಮ್ಮ ಕನ್ನಡದ ಹುಡುಗರ ಕಥೆ ಏನು ಪಾಪ. ಎಲ್ಲರೂ ಕ್ಯಾಂಪಸ್ ಅಲ್ಲೇ ಪ್ಲೇಸ್ ಆಗುವಷ್ಟು ಬುದ್ಧಿವಂತರಿರುವುದಿಲ್ಲ, ಎಲ್ಲರಿಗೂ ಕಾಂಟಾಕ್ಟ್ಸ್ ಇರುವುದಿಲ್ಲ. ಕೆಲಸ ಹೇಗೆ ಹುಡುಕಬೇಕು ಅನ್ನೋದು ತಿಳಿದಿರುವುದಿಲ್ಲ. ಈಗೀಗ ಕನ್ನಡಿಗರ ವೇದಿಕೆಗಳು ಅಂತರ್ಜಾಲದಲ್ಲಿ ಬಹಳಷ್ಟು ಮೂಡುತ್ತಿವೆ, ದಯವಿಟ್ಟು ಎಲ್ಲ ಆ ವೇದಿಕೆಗಳಿಗೆ ಸಹಕರಿಸಿ, ಮತ್ತು ನಮ್ಮ ಕನ್ನಡಿಗರಿಗೆ ಕೆಲಸ ಕೊಡಿಸಲು ಪ್ರಯತ್ನಿಸಿ. ನಿಮ್ಮ ಕಛೇರಿಯಲ್ಲಿ ಯಾವುದೇ ಕೆಲಸ ಖಾಲಿ ಇದ್ರು ತಿಳಿಸಿ, ಕನ್ನಡಿಗನಿಗೆ ಉಪಯೊಗವಾಗಲಿ.
 ಕಡೇಮಾತು : ಎಲ್ಲ ಮಕ್ಳನ್ನು ಇಂಜಿನಿಯರೇ ಮಾಡ್ಬೇಕು ಅನ್ನೋ ಅಪ್ಪ ಅಮ್ಮನ ಆಸೆಗೆ ಇವತ್ತು ಬಹಳಷ್ಟು ಕೂಸುಗಳು ಬಡವಾಗ್ತಿವೆ.

********************************************************************************************

Tuesday, April 24, 2012

ಅವಿವೇಕಿ ಮಿತ್ರನಿಗಿಂತ ವಿವೇಕಿ ಶತ್ರು ಮೇಲು


ಪ್ರವೀಣ ಓದೋ ವಿಷಯದಲ್ಲಿ ಯಾವಾಗ್ಲೂ ಸೋಂಬೇರಿ,ಅಪ್ಪ ಅಮ್ಮ ಎಷ್ಟು ಬೈದರೂ ತನ್ನ ಲೋಕದಲ್ಲೇ ಮಗ್ನ, ಸ್ನೇಹಿತರ ಜೊತೆ ಯಾವಾಗ್ಲೂ ತಿರುಗಾಡೋದು, ಅಪ್ಪ ಅಮ್ಮನ ಹತ್ರ ಹಣ ತೆಗೆದುಕೊಂಡು ಸಿನಿಮಾ ನೋಡೋದು, ಭಾನುವಾರ ಬಂದ್ರೆ ಸಾಕು ಬೆಳಿಗ್ಗೆ ಇಂದ ಸಂಜೆಯವರೆಗೂ ಬೆಟ್ಟಿಂಗ್ನಲ್ಲಿ ಕ್ರಿಕೆಟ್ ಆಡೋದು ಇದೇ ಕೆಲಸ, ಅಪ್ಪ ಅಮ್ಮನಿಗೂ ಬುದ್ಧಿ ಹೇಳಿ ಹೇಳಿ ಸುಸ್ತಾಗಿತ್ತು. ಹುಡುಗ್ರ ಸಹವಾಸ ಬರೀ ಆಡುವುದಕ್ಕೆ ಸೀಮಿತವಾಗದೆ ದುಶ್ಚಟಗಳ ಕಡೆಯೂ ಸಹ ವಾಲಿತ್ತು. ಮನೆಗೆ ಬಂದಾಗ ಒಮ್ಮೆ ಧೂಮಪಾನದ ಘಮಲು ಅಮ್ಮನ ಮೂಗು ಬಡಿದಿತ್ತು. ಆಗಾಗ ಅಪ್ಪನ ಜೇಬಿನಿಂದ ನೋಟುಗಳು ಸಹ ಕಾಣೆಯಾಗುತಿದ್ದವು. ಅಪ್ಪ ಅಮ್ಮ ಇಬ್ಬರು ಚರ್ಚಿಸಿ ಏನು ಮಾಡುವುದು ಎಂದು ಯೋಚಿಸಿ ಒಂದು ನಿರ್ಧಾರಕ್ಕೆ ಬಂದರು.

ಮರುದಿನ ಭಾನುವಾರ ಪ್ರವೀಣ ಎಂದಿನಂತೆ ಹೇಳದೆ ಕೇಳದೆ ಕ್ರಿಕೆಟ್ ಆಡಲು ಹೊರಟು ಬಿಟ್ಟ, ಅಪ್ಪ ಅಮ್ಮ ಸೀದ ಅವರಪ್ಪನ ಮನೆಗೆ ಹೋಗಿ ಪ್ರವೀಣನ ತಾತನನ್ನು ಕರೆ ತಂದರು. ತಾತನಿಗೆ ವಯಸ್ಸು ಸುಮಾರು ೭೦ ಆಗಿದ್ದರು ಬಹಳ ಚುರುಕು, ಕಾಲ ಕಾಲಕ್ಕೆ ತಾನು ಸಹ ಬದಲಾಗಿದ್ದಂತಹ ಘಾಟಿ ಮುದುಕ. ಕಂಪ್ಯೂಟರ್, ಕ್ರಿಕೆಟ್, ಸಿನಿಮಾ ಎಲ್ಲಾದ್ರಲ್ಲು ಎತ್ತಿದ ಕೈ. ಕ್ರಿಕೆಟ್ ಆಡಲು ಹೋಗಿದ್ದ ಪ್ರವೀಣ ಎಂದಿನಂತೆ ಮನೆಗೆ ಬಂದ, ಬಂದೊಡನೆ ತಾತನನ್ನು ನೋಡಿ ಆಶ್ಚರ್ಯ ಚಕಿತನಾದ, ತಾತನ ಕಾಲಿಗೆ ನಮಸ್ಕಾರ ಮಾಡೋ ಅಂತ ಅಪ್ಪ ಹೇಳೋ ತನಕ ಇವ್ನಿಗೆ ತೋಚಲಿಲ್ಲ, ಮಾಡ್ತೀನಿ ಕೈ ಕಾಲು ತೊಳ್ಕೊಂದು ಬಂದೆ ಅಂತ ಸ್ನಾನದ ಮನೆಗೆ ಹೋಗಿ ಟೂತ್ ಪೇಸ್ಟ್ ನ ಒಂದಷ್ಟು ಬಾಯಿಗೆ ಹಾಕಿಕೊಂಡು ಮುಕ್ಕಳಿಸಿ ಬಂದ, ಬಂದೊಡನೆ ನಮಸ್ಕಾರ ಮಾಡಿದಾಗ ತಾತನಿಗೆ ಧೂಮಪಾನದ ಘಮಲು ತಿಳಿದು ಬಿಡ್ತು. ಅದೂ ಅಲ್ದೆ ಮೊದಲೇ ಪ್ರವೀಣನ ಅಪ್ಪ ಅಮ್ಮ ತಮ್ಮ ಮಗ ದಾರಿ ತಪ್ತಾ ಇದ್ದಾನೆ ಅನ್ನೋ ವಿಷಯ ಬೇರೆ ಮೊದಲೇ ಹೇಳಿದ್ರು. ವಿಷಯ ಗೊತ್ತಾದ್ರು ತಾತ ಮುಗುಮ್ಮನೆ ಇದ್ದರು.

ಮಾರನೆ ದಿನ ಪ್ರವೀಣ ಕಾಲೇಜಿಗೆ ಅಂತ ಹೊರಟಾಗ, ತಾತ ಸಹ ತಯಾರಾಗಿ ಮೊಮ್ಮಗನೊಂದಿಗೆ ಹೊರಡಲು ಸಿದ್ದರಾಗಿದ್ದರು, ಪ್ರವೀಣ ತಾತ ಹಾಗೆಲ್ಲ ನಿಮ್ಮನ್ನ ಕಾಲೇಜಿಗೆ ಬಿಡಲ್ಲ, ಬಹಳಾ ಶಿಸ್ತು ಅಲ್ಲಿ ಅಂತೆಲ್ಲ ಹೇಳ್ದ, ಅದಕ್ಕೆ ತಾತ ನಾ ನೋಡದೇ ಇರೋ ಕಾಲೇಜೇನೋ ಅದು, ನೀನ್ ಓದ್ತಾ ಇರೋ ಕಾಲೇಜು ನನ್ನ ಫೇಸ್ಬುಕ್ ಗೆಳೆಯ ಪ್ರಕಾಶ್ ರಾಜು ದು, ಅವರು ನಾನು ಇಲ್ಲಿಗೆ ಬಂದಿರೋ ಸ್ಟೇಟಸ್ ನೋಡಿದ್ರಂತೆ, ಫೋನ್ ಮಾಡಿದ್ರು ಅದಕ್ಕೆ ಬರ್ತಾ ಇದ್ದೀನಿ ಅಂತ ಪ್ರವೀಣಂಗೆ ಒಳ್ಳೆ ಟಾಂಗ್ ಕೊಟ್ಟ್ರು. ಪ್ರವೀಣನ ಮೊಬೈಲ್ ಗೆ ಅವನ ಗೆಳೆಯನ ಫೋನ್ ಬಂತು, ಏನ್ ಮಗಾ ಸಿನಿಮಾಗೆ ಟಿಕೆಟ್ ತೊಗೊಂಡು ಕಾಯ್ತಾ ಇದ್ದೀವಿ ಎಲ್ಲಿದ್ಯ ಇನ್ನ?? ಪ್ರವೀಣ,ತಾತನ ಜೊತೆ ಇದ್ದೀನಿ ಮಗಾ ಆಮೇಲೆ ಫೋನ್ ಮಾಡ್ತೀನಿ ಅಂದ. ಫೋನ್ ಕಟ್ ಆದ ಮೇಲೆ ತಾತ ಕೇಳಿದ್ರು ಏನು ಸಿನಿಮಾಗೆ ಹೋಗ್ಬೇಕ ಅಂತ, ಅದಕ್ಕೆ ಪ್ರವೀಣ ಹೌದು ನಿಮಗೆ ಹೇಗೆ ಗೊತ್ತಾಯ್ತು ತಾತ ಅಂದ, ಅದಕ್ಕೆ ರಾತ್ರಿ ನೀನು ನಿನ್ನ ಗೆಳೆಯನ ಜೊತೆ ಫೋನಲ್ಲಿ ಮಾತಾಡ್ತಾ ಇದ್ದಲ್ಲ ಆಗ ಕೇಳಿಸ್ತು ನಂಗೆ ಅಂದ್ರು. ಆದ್ರೆ ಕಾಲೇಜಿಗೆ ಚಕ್ಕರ್ ಹೊಡೆದು ಸಿನಿಮಾ ನೋಡೋದು ತಪ್ಪಲ್ವ ಅಂದ್ರು. ಪ್ರವೀಣನಿಗೆ ಉತ್ತರ ಕೊಡಲು ಆಗ್ಲಿಲ್ಲ, ಕಡೆಗೆ ತಾತ, ನಿನ್ ಸ್ನೇಹಿತನಿಗೆ ಫೋನ್ ಮಾಡಿ ಹೇಳು ನನಗೂ ಒಂದು ಟಿಕೆಟ್ ತೊಗೊ ಅಂತ ನಾನು ಬರ್ತೀನಿ ಅಂದ್ರು. ಪ್ರವೀಣನಿಗೆ ಒಂದು ಕಡೇ ಖುಷಿ ಆಯ್ತು ಮತ್ತೆ ಭಯ ಸಹ ಆಯ್ತು ಮನೇಲಿ ಹೇಳಿಬಿಟ್ರೆ ಅಂತ ಅಷ್ಟ್ರಲ್ಲಿ ತಾತ, ನೀನೇನು ಯೋಚಿಸ ಬೇಡ ಮನೇಲಿ ನಾ ಏನು ಈ ವಿಷಯ ತಿಳಿಸಲ್ಲ ಅಂದಾಗ ಸ್ವಲ್ಪ ಸಮಾಧಾನ ಆಯ್ತು.

ಸಿನಿಮಾಗೆ ತಾತ ಮೊಮ್ಮಗ ಜೊತೆಗೇ ಹೋದ್ರು, ಅಲ್ಲಿ ಅವನಿಗಾಗಿ ಕಾದಿದ್ದ ಹುಡುಗರೆಲ್ಲ ತಾತನ ನೋಡಿ ಘಾಬರಿ ಆದ್ರು, ಪ್ರವೀಣನ ಮಾತು ಕೇಳಿ ಸುಮ್ಮನಾದ್ರು. ಜೊತೆಯಲ್ಲಿದ್ದ ಹುಡುಗರ ನಡವಳಿಕೆಗಳ ಮೇಲೆ ಗಮನವಿಟ್ಟಿದ್ದ ತಾತ, ಎಲ್ಲರ ಸರಿಯಾಗಿ ಗಮನಿಸುತಿದ್ದರು. ಇಂಟರ್ವೆಲ್ ಬಿಟ್ಟಾಗ ಪ್ರವೀಣನ ಗೆಳೆಯರೆಲ್ಲ ಟಾಯ್ಲೆಟ್ಟಿನ ಪಕ್ಕ ನಿಂತು ಧೂಮಪಾನ ಮಾಡುತಿದ್ದರು, ಜೊತೆಯಲ್ಲಿ ಪ್ರವೀಣನನ್ನು ಕರೆದೊಯ್ದಿದ್ದರಿಂದ ಅವನೂ ಅವರೊಡನೆ ಭಯ ಭಯದಿಂದ ಎಲ್ಲಿ ತಾತ ಬಂದು ನೋಡುಬಿಡುತ್ತಾರೋ ಅಂದುಕೊಂಡು ಸೇದುತಿದ್ದ, ಎಲ್ಲ ಗಮನಿಸಿದ ತಾತ ಸುಮ್ಮನೆ ಏನು ನೋಡದಿದ್ದಂತೆ ಅಂಗಡಿ ಬಳಿ ಹೋಗಿ ಚಿಪ್ಸ್ ಮತ್ತು ತಂಪು ಪಾನೀಯ ತಂದರು. ಸಿನಿಮಾ ಮತ್ತೆ ಶುರುವಾಯ್ತು, ತಾತ ಪ್ರವೀಣನನ್ನು ಏನಪ್ಪ ನಿನ್ನ ಸ್ನೇಹಿತರು ಧೂಮಪಾನ ಮಾಡ್ತಾರೇನು, ವಾಸನೆ ಬರುತ್ತಿದೆ ಅಂದ್ರು, ಅದಕ್ಕೆ ಪ್ರವೀಣ ಯಾವಾಗ್ಲು ಇಲ್ಲ ತಾತ ಯಾವಾಗ್ಲಾದ್ರು ಒಮ್ಮೊಮ್ಮೆ ಅಷ್ಟೆ ಅಂದ. ಚಿಪ್ಸ್ ಮತ್ತೆ ತಂಪು ಪಾನೀಯ ಸವಿಯುತ್ತ ಸಿನಿಮ ಪಯಣ ಮುಂದುವರೆಯಿತು, ತಾತ ಮತ್ತೆ ಪ್ರವೀಣನನ್ನು ಪ್ರಶ್ನೆ ಕೇಳಿದರು, ನಿನ್ನ ಸ್ನೇಹಿತರು ಏನು ಹೇಳಿದ್ರು ಮಾಡ್ತೀಯಲ್ಲ, ಅವರು ಅಷ್ಟು ಒಳ್ಳೆಯವರೇ?? ನಿನ್ನ ಕಷ್ಟ ಕಾಲದಲ್ಲಿ ಸಹಾಯಕ್ಕೆ ಬರುವಂಥವರೇ?? ಪ್ರವೀಣ ಹೌದು ತಾತ ಬಹಳಾ ಒಳ್ಳೇ ಹುಡುಗರು, ನನಗೋಸ್ಕರ ಸ್ನೇಹಕ್ಕೋಸ್ಕರ ಪ್ರಾಣ ಬೇಕಾದ್ರು ಕೊಡ್ತಾರೆ ಅಂದ. ತಾತ ಒಮ್ಮೆ ಮನದೊಳಗೆ ನಕ್ಕು ಸುಮ್ಮನಾದರು.

ಸಿನಿಮಾ ಮುಗಿಯಿತು ಶುಭಂ ತೋರಿಸಿದರು, ಎಲ್ಲರು ಹೊರಡಲು ಶುರು ಮಾಡಿದರು, ಅಷ್ಟರಲ್ಲೆ ಮುಂದಿನ ಸೀಟಿನಲ್ಲಿದ್ದ ಒಬ್ಬ ವ್ಯಕ್ತಿ ಇದ್ದಕ್ಕಿದ್ದಂತೆ ಅಯ್ಯೊ ನನ್ನ ಪರ್ಸ್ ಕಾಣಿಸ್ತಿಲ್ಲ ಅಂತ ಕಿರುಚಲು ಶುರು ಮಾಡಿದ, ಅಲ್ಲಿದ್ದ ಜನ ಎಲ್ಲ ಗುಂಪು ಕಟ್ಟಿದರು, ಗುಂಪಿನಲ್ಲಿದ್ದ ಒಬ್ಬ ವ್ಯಕ್ತಿ ಯಾರ ಮೇಲಾದ್ರು ಅನುಮಾನ ಇದ್ಯ ಸರ್ ಅಂದ, ಆಗ ಪರ್ಸು ಕಳೆದುಕೊಂಡ ವ್ಯಕ್ತಿ ಪ್ರವೀಣನನ್ನು ತೋರಿಸಿ ಈ ಹುಡುಗನ ಮೇಲೆ ಅನುಮಾನ ನಂಗೆ ಆಗ್ಲೆ ನನ್ನ ಹಿಂದೆ ಕೈ ಹಾಕಿದ ಅನುಭವ ಆಯ್ತು ಅಂದ.ಪ್ರವೀಣನಿಗೆ ಮತ್ತು ಅವನ ಸ್ನೇಹಿತರಿಗೆ ನಡುಕ ಶುರುವಾಗಿತ್ತು. ಪ್ರವೀಣನ ಜೇಬು ಮತ್ತು ಬ್ಯಾಗ್ ಪರೀಕ್ಷೆ ಮಾಡಿದಾಗ ಪರ್ಸ್ ಸಹ ಬ್ಯಾಗಿನಲ್ಲಿತ್ತು. ಅವನ ಗೆಳೆಯರನ್ನು ಅಲ್ಲಿದ್ದವರು ಕಳ್ ನನ್ ಮಕ್ಳಾ ನೀವೇನೇನ್ ಕದ್ದೀದೀರ ತೆಗೀರಿ ಎಂದು ದಬಾಯಿಸಿದರು, ಆಗ ಪ್ರವೀಣನ ಗೆಳೆಯನಲ್ಲೊಬ್ಬ, ಸರ್ ಇವನ್ಯಾರು ಅಂತ ನಮಗೆ ಗೊತ್ತೇ ಇಲ್ಲ, ನಾವು ಸಿನಿಮಾ ನೋಡಕ್ ಬಂದಿದ್ದೀವಿ ಹೋಗ್ತೀವಿ ಅಂತ ಜಾಗ ಖಾಲಿ ಮಾಡಿಬಿಟ್ಟರು. ಅಲ್ಲಿದ್ದ ಅಷ್ಟೂ ಜನರ ಕೋಪ ಪ್ರವೀಣನ ಮೇಲೆ ತಿರುಗಿತ್ತು, ಇನ್ನೇನು ಧರ್ಮದೇಟು ಬೀಳಬೇಕು ಅನ್ನೋ ಅಷ್ಟರಲ್ಲಿ, ಪರ್ಸು ಕಳೆದುಕೊಂಡ ವ್ಯಕ್ತಿ, ಜನರ ಮುಂದೆ ನಿಂತು, ರೀ ಪರ್ಸು ಕಳ್ಕೊಂಡೋನು ನಾನು, ನಾನು ಇವನಿಗೆ ಬುದ್ಧಿ ಹೇಳ್ತೀನಿ, ಇವನನ್ನ ಪೋಲೀಸರಿಗೆ ಕೊಡ್ತೀನಿ ಅಂತ ಹೇಳಿ ತಾತನ ಜೊತೆಯಲ್ಲೇ ಚಿತ್ರ ಮಂದಿರದಿಂದ ಹೊರ ನಡೆದ.

ಹೊರಬಂದ ಮೇಲೆ ತಾತ ದಯವಿಟ್ಟು ಬಿಟ್ಟುಬಿಡಿ, ಏನೋ ಚಿಕ್ಕ ಹುಡುಗ ತಪ್ಪು ಮಾಡಿದ್ದಾನೆ ಅಂತ ಕೇಳಿಕೊಂಡರು, ಆಗ ಆ ವ್ಯಕ್ತಿ ಹಾಗೆಆಗಲಿ, ಹುಡುಗರ್ನ ಚೆನ್ನಾಗಿ ನೋಡ್ಕೋಳಿ ಹಾಳಾಗಕ್ಕೆ ಬಿಡ್ಬೇಡಿ ಎಂದು ಹೇಳಿ ಹೊರಟುಬಿಟ್ಟ. ಮನೆಗೆ ಹೋಗುವಾಗ ಪ್ರವೀಣ ತಾತನಿಗೆ, ತಾತ ನನ್ನ ಕ್ಷಮಿಸಿಬಿಡು ತಾತ, ನನ್ನ ಸ್ನೇಹಿತರನ್ನು ನಂಬಿ ನಾ ತಪ್ಪು ಮಾಡಿಬಿಟ್ಟೆ ಎಂದ, ಅದಕ್ಕೆ ತಾತ ನೀನು ನಂಬಿಕೆಗೆ ಅರ್ಹರಾದ ಸ್ನೇಹಿತರನ್ನು ಮಾಡಿಕೊಂಡಿಲ್ಲ ನನ್ನ ಮುದ್ದಿನ ಮೊಮ್ಮಗನೆ ಅದಕ್ಕೆ ಈ ರೀತಿ ಆಗಿದೆ, ಸ್ನೇಹಿತರನ್ನು ಆಯ್ದುಕೊಳ್ಳುವಾಗ ಬಹಳಾ ಹುಷಾರಾಗಿರಬೇಕು ಎಂದು ಬುದ್ಧಿವಾದ ಹೇಳಿದರು. ತಾತ ನಾನು ನಿಜವಾಗ್ಲು ಆ ಪರ್ಸ್ ಕದ್ದಿಲ್ಲ ತಾತ ದಯವಿಟ್ಟು ಮನೇಲಿ ಹೇಳ್ಬೇಡಿ ಅಂದ ಪ್ರವೀಣ, ಅದಕ್ಕೆ ತಾತ ಸುಮ್ಮನೆ ನಕ್ಕು ನೀನೇನು ಯೋಚಿಸಬೇಡಾ ನಾ ಹೇಳಲ್ಲ ಇನ್ಮೇಲೆ ಓದಿನ ಕಡೆ ಗಮನ ಕೊಡು ಇಂತಹ ಜನರ ಸಹವಾಸ ಮಾಡಬೇಡ ಅಂದ್ರು.

ಮಾರನೆಯ ದಿನ ಮುಂಜಾನೆ ಮತ್ತೆ ತಾತ ಹೊರಡಲು ಸಿದ್ಧರಾಗಿದ್ದರು.ಪ್ರವೀಣ ಸಹ ಬೀಳ್ಕೊಡಲು ಅಪ್ಪ ಅಮ್ಮನ ಜೊತೆ ಬಾಗಿಲಲಿ ನಿಂತ, ಚೆನ್ನಾಗಿ ಓದು,ಕೆಟ್ಟ ಹುಡುಗರ ಸಹವಾಸ ಮಾಡಬೇಡ ಅಂತೆಲ್ಲ ಬುದ್ಧಿಮಾತು ಹೇಳಿದ ತಾತ ಕಾರ್ ಬರುವುದನ್ನೇ ಎದುರು ನೋಡ್ತಾ ಇದ್ರು. ಕಾರ್ ಬಂತು ಕಾರಿಂದ ಡ್ರೈವರ್ ಇಳಿದು ಬಂದು ತಾತನ ಕಿಟ್ ಬ್ಯಾಗ್ ಎತ್ತುಕೊಂಡು ಹೋಗಿ ಡಿಕ್ಕಿಯಲ್ಲಿ ಹಾಕಿದ. ಪ್ರವೀಣನಿಗೆ ಇದ್ದಕ್ಕಿದ್ದಂತೆ ಶಾಕ್ ಹೊಡೆದಂತಾಯಿತು. ತಾತ ನ ಮಖ ನೋಡಿದ,ಹತ್ತಿರ ಬಂದು ಮೆಲ್ಲಗೆ ಕಿವಿಯಲ್ಲಿ ತಾತ ನೆನ್ನೆ ಇವನ ಪರ್ಸೆ ನನ್ ಬ್ಯಾಗಲ್ಲಿ ಬಂದಿದ್ದು, ಅಪ್ಪ ಅಮ್ಮನಿಗೆ ಈಗ ಹೇಳಿಬಿಟ್ರೆ ಅಂದ. ತಾತ ನಗುನಗುತ್ತ ಇವ್ನು ನಮ್ಮ ಡ್ರೈವರ್ ಸೋಮಣ್ಣ ಕಣೋ ನೆನ್ನೆ ಸಿನಿಮಾ ನೋಡ್ಬೇಕು ಅಂತಿದ್ದ ನಾನೆ ಕಾಸು ಕೊಟ್ಟು ಕಳಿಸಿದ್ದೆ ಅಂತ ಸೋಮಣ್ಣನ ಮಖ ನೋಡಿದ, ಒಮ್ಮೆ ಸೋಮಣ್ಣ ಮತ್ತೆ ತಾತ ಜೋರಾಗಿ ನಕ್ಕರು.ಪ್ರವೀಣ ತಾತನ ಇಂಟೆಲಿಜನ್ಸ್ ನೋಡಿ ದಂಗಾಗಿ ಬಿಟ್ಟಿದ್ದ. ಪ್ರವೀಣನಿಗೆ ಟಾಟಾ ಮಾಡುತ್ತ ತಾತ ಒಂದು ಮಾತು ಹೇಳಿದ್ರು, ಅದನ್ನ ಪ್ರವೀಣ ಎಂದಿಗೂ ಮರೆಯೋಹಾಗಿಲ್ಲ
" ಅವಿವೇಕಿ ಮಿತ್ರನಿಗಿಂತ ವಿವೇಕಿ ಶತ್ರು ಮೇಲು "
ಚಿತ್ರಕೃಪೆ : istockphoto.com
***********************************************************************************************

Monday, April 16, 2012

ಕೋವಿಯ ಮಾತು

ಶರವೇಗ ನನ್ನುಗುಳು
ಒಂದೊಂದು ಉಗುಳಿಗೂ ಒಂದೊಂದು ಜೀವ
ಯಾರ ಸಾವಿನ ನಾದವೋ ಹಿಡಿದವನೆ ಬಲ್ಲ
ನಿಶ್ಯಭ್ದಕ್ಕು ಬದ್ದ ನಾನು
ಸದ್ದು ಮಾಡುವುದರಲ್ಲೂ ಮುಂದು
ನಿಪುಣ ನಾ ನಿರಪರಾಧಿ ಕೂಡ
ಕೊಲ್ಲುವುದು ನನ್ನುಗುಳಾದರು ತಪ್ಪು ನನದಲ್ಲ

ನನ್ನ ಹಿಡಿಯುವವನ ಮನಸು
ಶಾಂತಿಯ ಗುಡಿಸಿಲಿನಲಿ ಇಲ್ಲ
ಕೋಪ ತಾಪಗಳ ಸೆರೆಮನೆಯಲುಂಟು
ಉದ್ವೇಗ ಮನವೆಲ್ಲ ಮೂಡಿಬಂದಿರಲು
ನಾನು ನಾನೆಂಬ ಅಹಂನ ಹಂಗಿನಲ್ಲುಂಟು
ಜೀವ ತೆಗೆದರಷ್ಟೇ ಸಮಾಧಾನ ಅವನಿಗೆ
ಸಾಯುವ ತನುಗಿಂತ ಕವಡೆಗೆ ಬೆಲೆಯುಂಟು

ಎಷ್ಟು ಸಾವು ನೋಡಿಹೆನೋ ಲೆಕ್ಕವೇ ಇಲ್ಲ
ಹೊಗೆಯಾಗಿ ನಿಟ್ಟುಸಿರ ಬಿಟ್ಟಿರುವೆ ಕೂಡ
ಮದ ಮತ್ಸರವು ನನಗಿಲ್ಲ
ನನ್ನ ಹಿಡಿದವನ ಸೊತ್ತು ಅದು
ಕೊಂದವನು ನಿರ್ದಯಿ ಸಾಯುವವ ದುರ್ದೈವಿ
ಕೋವಿಯು ನಾ ಮೂಕ ಸಾಕ್ಷಿಯಿಲ್ಲಿ
ಕೋವಿಯು ನಾ ಮೂಕ ಸಾಕ್ಷಿಯಿಲ್ಲಿ

ಹೊಸ ಪ್ರಯತ್ನ :)

ಪವನ್ ಪಾರುಪತ್ತೇದಾರ :-

Monday, April 9, 2012

ದುರಂತದ ದುರಾಸೆ


ನೂರಿದ್ದ ಜೇಬು ಸೂರಿದ್ದ ಮನೆ
ಸಾಕಾಗಿತ್ತು ಆ ಬಡಪಾಯಿಗೆ
ಆಸೆ ಎಂಬ ಮರೀಚಿಕೆಯ ಹಾದಿ
ಹೆದ್ದಾರಿಯಾಗಿ ಕಂಡಿತ್ತು
ಕಲ್ಲುಮುಳ್ಳುಗಳು ಹೂಗಳಂತೆ ಕಂಡವು
ಶತ್ರುಗಳೆಲ್ಲ ಮಿತ್ರರಂತೆ ಕಂಡರು

ಸಾವಿರದ ಆಸೆ ಬೆನ್ನು ಹತ್ತಿತ್ತು
ಸೂರು ತಾರಸಿಯಾಗುವ ಕನಸು ಹತ್ತಿತ್ತು
ನೂರು ಬರಿದಾಗಬಹುದೆಂಬ ಚಿಂತೆ ಇರಲಿಲ್ಲ
ಸೂರು ಬಿದ್ದರೆ ನೆರಳಿಲ್ಲವೆಂಬ ಅರಿವು ಇರಲಿಲ್ಲ
ದುರಾಸೆ ಎಂಬ ಭೂತ
ಮೆದುಳ ಮೇಲೆ ಸವಾರಿ ಮಾಡಿತ್ತು

ಕಂಡ ಕಂಡವರ ಬಳಿ ಕೈಚಾಚಬೇಕಾಯ್ತು
ಕರುಣೆಯ ಕನ್ನಡಿ ಒಡೆಯಬೇಕಾಯ್ತು
ನಾಚಿಕೆ ಮರ್ಯಾದೆ ಮರೆಯಬೇಕಾಯ್ತು
ತನ್ನವರ ದೂರಕ್ಕೆ ತಳ್ಳಬೇಕಾಯ್ತು

ಕಡೆಗೊಮ್ಮೆ

ಸಾವಿರವೂ ತಾರಸಿಯೂ ಸಿದ್ದವಾಗಿತ್ತು
ಸಂಬಂಧದ ಸೇತುವೆ ಒಡೆದು ಬಿಟ್ಟಿತ್ತು
ದುರಾಸೆಯು ದುರಂತವಾಗಿಬಿಟ್ಟಿತ್ತು....

ಸಂಬಂಧಗಳು ಹಣ ಕಾಸು ಮನೆ ಇವೆಲ್ಲಕ್ಕಿಂಥ ಮಿಗಿಲಾದದ್ದು, ಹಣ ಕಾಸು, ಬಂಗಲೆಯಿಂದಲೇ ಸಂಬಂಧ ಬೆಸೆದಿದ್ದರೆ ಅದು ಎಂದಿಗೂ ಶಾಶ್ವತವಲ್ಲ......

ಪವನ್ ಪಾರುಪತ್ತೇದಾರ :-

ಉಗಾದಿಯ ಜೂಜಾಟ

ಕಳೆಬಂದಿತ್ತು ಹಳ್ಳಿಯ ತೋಪಿಗೆ
ಯುಗಾದಿಯ ಜೂಜು ಹುರುಪು ತಂದಿತ್ತು
ಊರ ಯುವಕರ ಜೊತೆಗೊಬ್ಬ ಸಂಸಾರಿ
ಆಡ ಆಡುತಲೆ ಕಳೆದ ಬದುಕಿನ ಬೆಲೆಯ

ಮರದಡಿಯೆ ಮುದುಡಿದೆ ಸಂಸಾರಿ ಸಂಸಾರ
ಮಾಂಸದ ಹಣ ಕೂಡ ಜೂಜು ಪಾಲಾಯ್ತಲ್ಲ
ಹೊಸಬಟ್ಟೆ ಆಸೆಯಲಿ ಕಾದಿಹರು ಮಕ್ಕಳು
ಉಟ್ಟಬಟ್ಟೆಯೂ ಇಲ್ಲಿ ಕಳೆದುಕೊಂಡಿಹೆಯಲ್ಲ

ಮುಂಜಾನೆ ಹರಳೆಣ್ಣೆ ಮೈಯಲ್ಲ ತಿಕ್ಕುತ್ತ
ದೇಗುಲಕೆ ಹೋಗೋಣ ಎಂದಿದ್ದ ಹೆಂಡತಿಗೆ
ನಿನ್ನದೇ ಬರುವಿಕೆಗೆ ಕಾಯುತಿಯ ಅಮ್ಮನಿಗೆ
ಏನೆಂದು ಉತ್ತರವ ನೀಡುವೆಯೋ ಗೆಳೆಯ

ಮರದಡಿಯ ಆಟದ ಮರ್ಮವ ತಿಳಿಸುವೆಯ
ಮಕ್ಕಳಿಗು ಜೂಜಿನ ಪಾಲನ್ನು ನೀಡುವೆಯ
ಅಡಮಾನ ಇಡಲಲ್ಲಿ ಇನ್ನೇನು ಉಳಿದಿಲ್ಲ
ಮಾನವನೆ ಅಡಮಾನ ಇಟ್ಟು ಬರುವೆಯಾ??

ಉಗಾದಿಯಂದು ಜೂಜಾಡುತಿದ್ದ ಕೆಲವು ಅಡ್ಡೆಗಳ ತಿರುಗಿ ಬಂದೆ, ಕಳೆದುಕೊಂಡವರೆಷ್ಟೋ :(

ಪವನ್ ಪಾರುಪತ್ತೇದಾರ:-

ಆಸ್ಪತ್ರೆ

ಅದೊಂದು ಮೂಲೆಯಿಂದ ಗೂರಲಿನ ಶಬ್ಧ
ಯಾವಾಗ ತೇಲಿಹೋಗುತ್ತೋ ಆ ಬಡಪಾಯಿ ಜೀವ
ಶಕ್ತಿಯಿತ್ತೊ ಇಲ್ಲವೋ ತಿಳಿಯದು
ಅಗಾಧವಾದ ನೋವದು ಮೂಡುತಿತ್ತು
ಗೂರಲಿನ ಶಬ್ಧದಿಂದಲೇ

 ಸೂಜಿಗಳಿಗಲ್ಲಿ ತಿವಿಯುವುದಷ್ಟೇ ಕೆಲಸ
ರಕ್ತಚಿಮ್ಮುವಾಗೆಲ್ಲ ಹೊಸ ಹೊಸ ನರಚ್ಛೇದ
ಕೆಂಪು ಬಣ್ಣದ ಹತ್ತಿಯುಂಡೆ ಎಲ್ಲ ಬುಟ್ಟಿಯಲ್ಲು
ರಕ್ತ ನೆಕ್ಕುವುದಷ್ಟೇ ಹತ್ತಿಯ ಕೆಲಸ

ನೋವು ಚೀತ್ಕಾರಗಳು ಆಗಾಗ ಮಾಮೂಲು
ಕಣ್ಣೀರು ಹರಿದಿದೆ ಎಲ್ಲೆಲ್ಲೂ
ಹಣವಿದ್ದರೂ ಇಲ್ಲಿ ಬಡವರೇ ಎಲ್ಲ
ಕಿರುಚಿದಾಗೆಲ್ಲ ಹರಿಯುವುದು ಗಂಟಲೇ
ಉಸಿರಿಗಿಲ್ಲಿ ಬೆಲೆ ಒಂದೇ
ಹಣವಣ್ತನುಸಿರು ಬಂಗಾರವಲ್ಲ
ಬಡವನಾ ಉಸಿರು ಕಬ್ಬಿಣವೇನಲ್ಲ

ಪವನ್ ಪಾರುಪತ್ತೇದಾರ :-

Wednesday, March 21, 2012

ನಗು ಉಕ್ಕಿ ಬಂದಿತ್ತು


ನಗು ಉಕ್ಕಿ ಬಂದಿತ್ತು
ಮತ್ತೇನು ತೋಚದ ಮನಸ್ಸು
ಮತ್ತಷ್ಟು ಮೊಗವನ್ನರಳಿಸಿ
ಕಣ್ಣಿನಲ್ಲೊಂದು ಮಿಂಚು ಹರಿಸಿ
ಮೊಗದ ನರಗಳನೆಲ್ಲ ನಾಟ್ಯಮಾಡಿಸಿತ್ತು
ನಗು ಉಕ್ಕಿ ಬಂದಿತ್ತು

ಸಲುಗೆಯ ಮಿತಿ ನಾವು ದಾಟಿರಲೇ ಇಲ್ಲ
ಸುಮ್ಮನೆ ಇನ್ನೊಬ್ಬರ ಕೊಂಕಿಸಿಯೂ ಇಲ್ಲ
ಹೀಯಾಳಿಸುವಾಸೆ ಇಬ್ಬರಿಗು ಇರಲಿಲ್ಲ
ಕಣ್ಣಿನ ಮಾತುಗಳೆ ಇಬ್ಬರಿಗು ತಿಳಿದು
ತಂಪಿನ ಸಂಜೆಯನೂ ನಾಚಿಸುವಂತಹ
ನಗು ಉಕ್ಕಿ ಬಂತಿತ್ತು

ಹಿಂದಿನದ ನೆನೆದವು ಇಂದಿನದ ನೆನೆದವು
ನಡುವಿನ ಸಮಯದ ಮೆಲುಕು ಮೂಡಿತ್ತು
ಕಿತ್ತಾಟ ಪರದಾಟ ಹೊಡೆದಾಟ ನೆನೆದು
ಮಾತು ಬಿಟ್ಟಂತಹ ಕಹಿ ಘಳಿಗೆ ಕೂಡ
ಸಿಹಿಯಾಗಿ ಮನವನ್ನು ತಣಿಸಿಬಿಟ್ಟಿತ್ತು
ನಗುವು ಉಕ್ಕಿ ಬಂದಿತ್ತು

ಸಣ್ಣ ನಗು ಶತ್ರುವನ್ನೂ ಮಿತ್ರನನ್ನಾಗಿ ಮಾಡುತ್ತದೆ
ಪವನ್ ಪಾರುಪತ್ತೇದಾರ :) :)

ಆಡಂಬರದ ಅಬ್ಬರ


ಅಂಗುಷ್ಠದ ಕೊನೆಯಿಂದ
ಜುಟ್ಟಿನ ತುದಿಯವರೆಗೂ
ತುಂಬಿತ್ತು ಆಡಂಬರದ ಆಭರಣ
ಹೊರಗಣ ಅಂದದ ನೆಪಮಾತ್ರ
ಒಳಗಣ ಸುಪ್ತದಲಿ ಅಡಗಿತ್ತು
ಆಡಂಬರದ ಅಬ್ಬರ

ನೋಡಿದವರೆಲ್ಲ ಮೆಚ್ಚಿದರು
ಕೆಲೆವರು ಹೊಟ್ಟೆಕಿಚ್ಚಿದರು
ಇನ್ನು ಕೆಲವರು ಚುಚ್ಚಿದರು ಕೂಡ
ತಮ್ಮ ಆಡಂಬರವ ಮೆರೆದು

ಬಂಧು ಮನದಲ್ಲಿ ಪ್ರೀತಿ ಇರಲಿಲ್ಲ
ಬಂಧಿಸಿಟ್ಟಿತ್ತು ಅವರ ಮನವ
ನಿನ್ನ ಆಡಂಬರದ ವೇಷ
ಗೆಳೆಯರಲಿ ಗೆಲುವಿಲ್ಲ
ಬೆರೆಯುವ ಮನವಿಲ್ಲ
ಆಡಂಬರ ಸ್ನೇಹಕೆ ಪರದೆ ಹೆಣೆದಿತ್ತು

ತೊಟ್ಟರೆ ನೀನು ಮುಗುಳ್ನಗೆಯ ಆಭರಣ
ಗೆಳೆತನದ ಬೆಳೆಗೆ ಇಳುವರಿ ಹೆಚ್ಚು
ಹಂಚಿದಷ್ಟೂ ಕರಗಲ್ಲ ಹಣ ನೀಡಬೇಕಿಲ್ಲ
ನಿರ್ಮಿಸುವುದು ನಗುವು ಗೆಳೆತನದ ಸೇತುವೆ

ಸಮಾನ್ಯರಾಗಿರಿ ಆಡಂಬರದ ಅಬ್ಬರ ಬೇಡ

ಪವನ್ ಪಾರುಪತ್ತೇದಾರ:-

ಡಾಂಬರು ಬೇಕಿತ್ತು ಮನಕೆ

ಧೂಳು ಕೊಡವುತ್ತಾ ಸಾಗಿತ್ತು
ಜೀವನವೆಂಬ ವಾಹನ
ಅಸಮಾಧಾನದ ಧೂಳು
ಪರರ ಕಣ್ಣನು ತುಂಬಿ ಬಿಟ್ಟಿತ್ತು

ವೇಗವೇನೋ ಹೆಚ್ಚು ಹೆಚ್ಚು
ಹುಚ್ಛು ಕುದುರೆಯು ಹೆಂಡ ಕುಡಿದಂತೆ
ಇರಲಿಲ್ಲ ಚಿಂತೆ ಲೋಕದೆಡೆಗೆ
ನಡೆದಿದ್ದೇ ದಾರಿಯಾಗಿತ್ತು ಆನೆಯಂತೆ

ಅಡ್ಡ ಬಂದ ದಡ್ಡರೆಲ್ಲರ
ಹಿಂದೆ ಹಾಕಿ ಮುಂದೆ ನುಗ್ಗಿತ್ತು
ಬದುಕ ದಾರಿಯು ಸೆವೆಸುವಾಗ
ಎಗ್ಗು ತಗ್ಗುಗಳ ನುಗ್ಗಿ ನಡೆದಿತ್ತು

ಬದುಕ ದಾರಿ ತೊಳಲಾಟವಾಗಿತ್ತು
ಹಳ್ಳ ಕೊಳ್ಳಗಳ ಬೀಡಿನಂತಿತ್ತು
ಗೆಲುವೇನೋ ಸಿಗುತಿತ್ತು
ಆದರೆ ಧೂಳಿನ ಲೋಕದಲಿ
ಮುದ್ದು ಮನ ಮುಚ್ಚಿಹೋಗಿತ್ತು

ಡಾಂಬರು ಬೇಕಿತ್ತು
ಜೀವನವೆಂಬ ವಾಹನಕ್ಕೆ
ಬದುಕೆಂಬ ರಸ್ತೆಯಲಿ
ಸರಾಗವಾಗಿ ಗುಡುಗಲು
ಪ್ರೀತಿ,ಸ್ನೇಹದ ಡಾಂಬರು ಬೇಕಿತ್ತು

ಪವನ್ ಪಾರುಪತ್ತೇದಾರ :-

Thursday, March 15, 2012

ಕೊಳಾಯಿ ಆಗು ನೀನು

ಬೇಕಾದಾಗ ನಿನ್ನ ಭಾವನೆಗಳ ಧಾರೆ ಹರಿಸಿ
ಬೇಡದ್ದಾಗ ಮನದ ಕೊಳವೆಯಲಿ ಬಂಧಿಸಿಬಿಡು
ತಲೆಮೇಲೊಂದು ತಿರುಗವ ಚಕ್ರವಿಟ್ಟುಕೊ
ಯಾರಿಗೆಷ್ಟು ಭಾವ ಬೇಕೋ
ಅಷ್ಟು ಮಾತ್ರವೆ ತಿರುಗಿಸಿ ಕೊಡು

ಆಗಾಗ ಕಟ್ಟುವುದು ಕಲ್ಮಷದ ಗೂಡು
ನಿಲ್ಲಿಸದಿರು ಭಾವನೆಗಳ ಹರಿವ
ಕೊಡವಿಕೊಂಡು ಸಣ್ಣ ಧಾರೆಯಾಗಾದರು ಸುರಿ
ಕಡ್ಡಿ ತಿವಿದು ಮನ ಶುದ್ಧಿ ಮಾಡಲು
ನಿನಗಿದೆ ಒಳ್ಳೆಯ ಗೆಳೆಯರ ಬಳಗ

ನೋವ ಕೊಳವೆಯಲೆಂದು ತುಂಬಿಕೊಳ್ಳದಿರು
ಕಲ್ಮಷಕೆ ಕಾರಣ ನೋವ ನೆನಪುಗಳು
ತಲೆಮೇಲಿನ ಚಕ್ರಕೆ ಒಮ್ಮೆ ಓಘವ ನೀಡು
ಹರಿದು ಸೇರಲಿ ದೂರದ ಕಲ್ಮಷದ ಕಡಲು

ಶುದ್ಧವಾಗಿರಲಿ ನಿನ್ನ ಈ ಮನದ ಕೊಳವೆ
ದೂರವಿರಲಿ ದುರಭಿಮಾನದ ದುರ್ನಾತದಿಂದ
ಪ್ರೀತಿ ಹರಿಯಲಿ ಕೊಳವೆ ಮೂಲೆ ಮೂಲೆಯಲ್ಲಿ
ಸ್ನೇಹ ಹರಿಸು ನೀ ಮನದ ಕೊಳಾಯಲ್ಲಿ

ಪವನ್ ಪಾರುಪತ್ತೇದಾರ :-










Monday, March 12, 2012

ಅಲ್ಪ ವಿರಾಮವಿರಲಿ ಬದುಕಿನಲಿ

ಅಲ್ಪ ವಿರಾಮವಿರಲಿ ಬದುಕಿನಲಿ
ಅತಿವೇಗಕ್ಕಿರಲಿ ಕಡಿವಾಣ
ಹಿಂಜರಿಕೆ ಇರಲಿ ನಿರ್ಧಾರಗಳಿಗೆ
ಹೆದರಿಕೆಯು ಇರಲಿ ಫಲಿತಾಂಶಗಳೆಡೆಗೆ

ಈಜು ಬರುವುದು ಎಂದು ಕಡೆಗಣಿಸದಿರು ಸಾಗರವ
ಕೈ ಕಾಲು ಸೋತರೆ ನಿನ್ನುಸಿರು ನಿಂತಂತೆ
ದೇಹವೆಲ್ಲವು ಜಲಚರದ ಆಹಾರ
ನಿನ್ನ ಛಲದ ಮಂಟಪ ನೀಲಿಗಟ್ಟಾಯ್ತು

ಪ್ರಿಯತಮೆಯ ಮಾಯೆಯಲಿ ಅತಿಪ್ರೀತಿ ತೋರದಿರು
ಅತಿಯಾದ ಅಮೃತವು ವಿಷವಾಗಬಹುದು
ಅತಿ ಎಂಬ ಆಕೃತಿಯ ಛಾಯೆ ಪ್ರೀತಿಗೆ ನೀಡಿ
ಮುರಿದು ಬೀಳದಿರಲಿ ಗೆಳೆಯ ಪ್ರೀತಿಯ ಪ್ರತಿಮೆ

ರಥದ ಹಿಡಿತವು ನಿನಗೆ ಕರಗತವೆ ಆಗಿರಲಿ
ಸಣ್ಣ ಮೊಳೆಯೇ ಸಾಕು ಅಂತ್ಯ ಗೊಳಿಸಲು ಓಟ
ರಥದ ಚಕ್ರಕೆ ಹೊಸ ಚಕ್ರ ಬದಲಿಸಬಹುದು
ಬದುಕ ಚಕ್ರಕೆ ಗೆಳೆಯ ಉಂಟೆ ಬದಲು

ಕೋಟೆ ನಿರ್ಮಿಸದಿರು ಅಹಂ ನ ಇಟ್ಟಿಗೆಯಲಿ
ಸೋಲಿನ ಪನ್ನೀರಿಗೆ ಕರಗಿ ನೀರಾದೀತು
ಕಾಲ ಯಾವಾಗಲೂ ನಿನ್ನ ಯಜಮಾನ
ನಿಂತು ಗೌವರವಿಸು ಅದಕೆ ಆತುರವ ಬಿಟ್ಟು

ಅಲ್ಪ ವಿರಾಮವಿರಲಿ ಬದುಕಿನಲಿ

ಪವನ್ ಪಾರುಪತ್ತೇದಾರ :-

chitrakrupe : safestart-safetrack.com

ಹಿರಿಗೋಡೆ ಉರುಳಿದೆ

ಹಲವು ವರುಷಗಳಿಂದ
ಬಿಸಿಲೆನದೆ ಮಳೆಯೆನದೆ
ನೊಂದಾಯ್ತು ಬೆಂದಾಯ್ತು
ಕಡೆಗೊಮ್ಮೆ ವಯಸಿನ
ಪಾಷದಲಿ ಸಿಲುಕಿ
ಹಿರಿಗೋಡೆ ಉರುಳಿದೆ

ಶತ್ರುವಿನ ಶೂಲ ಎಷ್ಟು ತಾಕಿದೆಯೋ
ಹಿತಶತ್ರುವಿನ ಮಾತು ಎಷ್ಟು ನೋಯಿಸಿದೆಯೋ
ಸುತ್ತಲಿನ ಗೋಡೆಗಳು ಶಕ್ತಿ ಕುಂದಾಯ್ತು
ಒಂಟಿ ಗೋಡೆಯಿಂದ ಮನೆ ಸಾಧ್ಯವೇನು
ಎಲ್ಲಕ್ಕೂ ಉತ್ತರವ ಇಷ್ಟು ದಿನ ನೀಡಿತ್ತು
ಗೋಡೆಯಲಿ ಶಕ್ತಿ ಇದ್ದರೂ ಕುಸಿದಿತ್ತು

ಒಂದೊಂದು ಇಟ್ಟಿಗೆಯಲು ಅಡಗಿದೆ ನಿನ್ನ ಶ್ರಮ
ಇಷ್ಟು ವರುಷಗಳಾದರು ಇನ್ನು ಕರಗಿಲ್ಲ
ದೇಶದೆಡಗಿನ ನಿನ್ನಯ ಪ್ರೀತಿ ಅಭಿಮಾನ
ಕೊನೆ ಉಸಿರಿನೊರೆಗು ಕಡಿಮೆ ಆಗಲ್ಲ
ತಂಡದಲಿ ನೀನಿಂದು ಇಲ್ಲದಿರಬಹುದು
ಕಲೆಯೆಂದು ಕುಗ್ಗಲ್ಲ ಕನ್ನಡದ ಹುಡುಗ

ರಾಹುಲ್ ದ್ರಾವಿಡ್ ವಿದಾಯಕ್ಕಾಗಿ, ಪವನ್ ಪಾರುಪತ್ತೇದಾರ :-

Thursday, March 8, 2012

ಹೊಗಳುಭಟ್ಟ

ಒಂದು ಕಾಲವಿತ್ತಂತೆ
ಬಹುಪರಾಕಿಗೆ ಬಹುಮಾನ ಇತ್ತಂತೆ
ಅಸೂಯೆಯ ಅಳುಕಿಗು ಅವಮಾನದ ನೋವಿಗೂ
ಬಹುಪರಾಕ್ ಹೇಳಿದರೆ ಸಾಕಂತೆ
ಬಹುಮಾನ ಇತ್ತಂತೆ

ಅಂತರಂಗದ ಸಂತೆಯ ನೋಡುವವರಿರಲಿಲ್ಲ
ಒಳ್ಳೆಯವ ಕೆಟ್ಟವ ಎನ್ನೊ ಹಂಗಿಲ್ಲ
ತನ್ನತನ ಕಳೆದರು ಚಿಂತೆಯೇ ಇಲ್ಲ
ಎದುರಿನವ ಅಟ್ಟದಲಿ ಕೂರಬೇಕಲ್ಲ,
ಬಹುಮಾನವಷ್ಟೆ ಮೊದಲ ಆದ್ಯತೆ ನಿನಗೆ

ಕ್ರೂರಿಯೋ ದ್ರೋಹಿಯೋ ಅರಿವು ನಿನಗಿಲ್ಲ
ಪಾಪದಲಿ ಪಾಲು ನಿನಗು ಬಂತಲ್ಲ
ಬಹುಮಾನವಷ್ಟೆ ಮೊದಲ ಆದ್ಯತೆ ನಿನಗೆ

ಅಂತರಂಗದ ಸಂತೆಯಲಿ ಬಹಳಷ್ಟು ವಸ್ತುಗಳು
ಮೂಲೆಗುಂಪಾಗಿದೆ ಒಳ್ಳೆತನದಿಂದ
ತನ್ನತನ ತಾನೆ ಕಳೆದಿದೆ ಆಸೆಯಿಂದ
ಕ್ರೂರಿಗಳು ದ್ರೋಹಿಗಳು ಮೆರೆಯುವರು ನಿನ್ನಿಂದ
ಪಾಪವದು ಸುತ್ತುತಿದೆ ಹೊಗಳಿಕೆಯ ಸುಳಿಯಿಂದ

ಕೊನೆಗೂಮ್ಮೆ ನಿನಗೆ ಲಭಿಸಿದ ಫಲವೇನು??
ಬಹುಪರಾಕಿಗೊಂದು ಬಹುಮಾನ
ಹೊಗಳುಭಟ್ಟನೆಂಬ ಬಿರುದು....... !

ಪವನ್ ಪಾರುಪತ್ತೇದಾರ :-

Monday, February 20, 2012

ಶರಣಾಗತ..!!

ಪ್ರದೀಪ್ ಬಹಳ ದಿನಗಳಾದ ಮೇಲೆ ಪ್ರೀತಂ ನ ಭೇಟಿ ಆಗಿದ್ದ. ಆದರು ಭೇಟಿಯಾಗಿದ್ದ ಜಾಗವಾದರೂ ಯಾವುದು, ಚಾರ್ಮಡಿ ಘಾಟ್. ಘಟ್ಟ ಪ್ರದೇಶದ ತುತ್ತ ತುದಿಯಲ್ಲಿ ಚಾರಣ ಮಾಡುತಿದ್ದ ಪ್ರೀತಂ ಗೆ ಪ್ರದೀಪ್ ಇದ್ದಕಿದ್ದಂತೆ ಕಾಣಿಸಿಕೊಂಡಿದ್ದ. ನೋಡಿದೊಡನೆ ಪ್ರದೀಪ್ ಮತ್ತು ಪ್ರೀತಂ ಇಬ್ಬರು ಸ್ವಲ್ಪ ಗಾಬರಿಯದರು, ಪ್ರದೀಪ್ ಮಗಾ ಪ್ರೀತಂ ಅಂತ ಒಮ್ಮೆಲೇ ಅಪ್ಪಿ ಕೆನ್ನೆಗೊಂದು ಮುತ್ತು ಕೊಟ್ಟಿದ್ದ. ಇಬ್ಬರ ಆನಂದಕ್ಕು ಪಾರವೇ ಇರಲಿಲ್ಲ. ಪ್ರೀತಂ ಇನ್ನೇನು, ಏನು ಮಗಾ ಇಲ್ಲಿ ಅಂತ ಕೇಳಬೇಕು, ಅಷ್ಟರಲ್ಲಿ ಅದೇ ಪ್ರಶ್ನೆಯನ್ನ ಪ್ರದೀಪ್ ಪ್ರೀತಂ ಗೆ ಕೇಳ್ದ. ಚಾರಣ ಮಾಡ್ಕೊಂಡು ತಂಡದ ಜೊತೆ ಬಂದಿದ್ದೆ ದಾರಿ ತಪ್ಪಿ ಬಿಟ್ಟೆ ಮಗಾ ಅಂದ ಪ್ರದೀಪನ ಮಾತು ಕೇಳಿ ನಂದೂ ಅದೇ ಕಥೆ ದಾರಿ ತಪ್ಪಿದ್ದಿನಿ. ಬಾ ಒಟ್ಟಿಗೆ ದಾರಿ ಹುಡುಕೋಣ ಎಂದು ಹೇಳುತ್ತಾ, ಹಳೆಯ ಕಾಲೇಜು ದಿನಗಳನ್ನು ಮೆಲುಕು ಹಾಕುತ್ತ ಕಾಡಿನಲ್ಲಿ ನಡೆದರು.

ಪ್ರೀತಂ ಮತ್ತು ಪ್ರದೀಪ್ ಒಂದೇ ಕಾಲೇಜ್ ಒಂದೇ ಕ್ಲಾಸ್ ಒಂದೇ ಬೆಂಚ್, ಹಾಸ್ಟೆಲ್ನಲ್ಲಿ ಸಹ ಒಂದೇ ರೂಂ. ಒಬ್ಬರ ಮಧ್ಯೆ ಒಬ್ಬರಿಗೆ ಗಾಢವಾದ ಸ್ನೇಹವಿತ್ತು, ಪ್ರೀತಂ ನ ತಂದೆ ಒಬ್ಬ ಸರ್ಕಾರೀ ಅಧಿಕಾರಿ. ಮಗನಿಗೆ ದೂರದ ಕಾಲೇಜಿಗೆ ಸೀಟ್ ಸಿಕ್ಕಾಗ ಮಗನ್ನ ಹಾಸ್ಟೆಲ್ ಅಲ್ಲಿ ಇದ್ದು ಓದಲಿ ಅಂತ ಆಸೆಯಿಂದ ಸೇರಿಸಿದ್ದರು. ಹಾಸ್ಟೆಲ್ ಅಲ್ಲಿದ್ದರೆ ಎಲ್ಲ ಜನರ ಮಧ್ಯೆಯೂ ಬೆರೆಯಬಹುದು ಎಲ್ಲರ ಕಷ್ಟ ಸುಖಗಳನ್ನು ತಿಳಿಯಬಹುದು ಎಂಬುದೇ ಅವರ ಅಭಿಪ್ರಾಯ. ಓದಿನಲ್ಲೂ ಪ್ರೀತಂ ಮತ್ತು ಪ್ರದೀಪ್ ಯಾವಾಗಲು ಮುಂದೆ ಇರುತಿದ್ದರು. ಪ್ರೀತಂ ತಂದೆಗೆ ಒಂದು ಆಸೆ, ಮಗ ತನ್ನ ಹೆಸರನ್ನು ಎಲ್ಲು ಬಳಸಿಕೊಳ್ಳಬಾರದೆಂದು. ಅದಕ್ಕೆ ಪ್ರೀತಂ ಬಳಿ ಮಾತು ಸಹ ತೆಗೆದುಕೊಂಡಿದ್ದರು, ಎಂದಿಗೂ ನನ್ನ ಹೆಸರನ್ನು ಕಾಲೇಜ್ ನಲ್ಲಿ ಯಾರಿಗೂ ಹೇಳಬೇಡ ಎಂದು. ಪ್ರೀತಂ ಸಹ ಹಾಗೆ ಇದ್ದ. ಪ್ರೀತಂ ಮತ್ತು ಪ್ರದೀಪ್ ಓದಿನಲ್ಲಿ ಆಟದಲ್ಲಿ ಎಲ್ಲ ಕಡೆಯೂ ಮುಂದುವರೆಯುತ್ತಾ 4ನೆ ಸೆಮಿಸ್ಟರ್ ಮುಗಿಸಿದರು. ಅಷ್ಟರಲ್ಲಿ ಪ್ರದೀಪ್ ನ ತಂದೆ ವಿಧಿಯಾಟಕ್ಕೆ ಸಿಕ್ಕಿ ಅಪಘಾತದಲ್ಲಿ ಮೃತ ಪಟ್ಟಿದ್ದರು.

ಅಪಘಾತ ಮಾಡಿದ ವ್ಯಕ್ತಿ ಪ್ರಭಾವಿ ಆದ್ದರಿಂದ ಆತನಿಗೆ ಶಿಕ್ಷೆ ತಪ್ಪಿ ಹೋಯಿತು. ಮೊದಲೇ ತಾಯಿ ಇಲ್ದ ಪ್ರದೀಪ ತಂದೆಯೂ ಇಲ್ಲದೆ ಅನಾಥನಾಗಿಬಿಟ್ಟ. ತನ್ನ ತಂದೆಯ ಸಾವಿಗೆ ಕಾರಣನಾದ ಪ್ರಭಾವಿ ವ್ಯಕ್ತಿಯ ವಿರುದ್ಧ ಹೋರಾಡಿ ಸೋತು ಸುಣ್ಣವಾಗಿದ್ದ. ಸಮಾಜದಲ್ಲಿ ಬಡವರು ಬದುಕುವುದೇ ತಪ್ಪ ಎಂದು ದೇವರಲ್ಲಿ ಬಹಳ ಬಾರಿ ಪ್ರಶ್ನಿಸಿದ್ದ. ಮತ್ತು ಹಣವಂತರ ಮೇಲೆ ವಿರೋಧಾಭಾಸ ಮನದಲ್ಲಿ ಮೂಡಿಸಿಕೊಂಡಿದ್ದ.  ಮನೆಗೆ ಆಧಾರವಾಗಿದ್ದ ತಂದೆ ಇಲ್ಲದೆ ಪ್ರದೀಪ್ ಓದು ಶೂಲಕ್ಕೆ ಸಿಕ್ಕೋ ಸಾಧ್ಯತೆ ಇತ್ತು. ಆಗ ಗೆಳೆಯ ಪ್ರೀತಂ ಕೈ ಬಿಡಲಿಲ್ಲ, ತನ್ನಪ್ಪನಿಗೆ ವಿಷಯ ತಿಳಿಸಿ ಪ್ರದೀಪ್ ನ ವಿದ್ಯಾಭ್ಯಾಸದ ವೆಚ್ಚ ಭರಿಸಿದ್ದ,.ಕಡೆಯ ಸೆಮಿಸ್ಟರ್ ಅಲ್ಲಂತೂ ಪ್ರೀತಂ ನ ತಾಯಿ ಸಹ ಇವರು ಓದುತಿದ್ದ ಜಾಗಕ್ಕೆ ಬಂದು ಇವರನ್ನು ಹಾಸ್ಟೆಲ್ ಬಿಡಿಸಿ ಮನೆಯಲ್ಲೇ ಇರಿಸಿಕೊಂಡು ಪ್ರದೀಪ್ ನ ಸಹ ತನ್ನ ಮಗನಂತೆ ನೋಡಿಕೊಂಡರು.ಇಬ್ಬರು ಒಟ್ಟಿಗೆ ಇಂಜಿನಿಯರಿಂಗ್ ಮುಗಿಸಿದರು ಮೊಬೈಲ್ ಕಾಲ ಇಲ್ಲವಾದ್ದರಿಂದ ಮತ್ತೆ ಸಿಗೋಣ ಎಂದುಕೊಂಡು ಹೊರಟರು. ಹೊರಡುವಾಗ ಪ್ರದೀಪ್ ಪ್ರೀತಂ ನ ತಂದೆಯ ಬಗ್ಗೆ ಕೇಳಿದ್ದ ಆದರೆ ಪ್ರೀತಂ ಹೇಳಿರಲಿಲ್ಲ. ಅದೇ ಕುತೂಹಲದೊಂದಿಗೆ ಹೊರ ನಡೆದ ಪ್ರದೀಪ್ ಗೆ ತನ್ನಪ್ಪನನ್ನು ಕಿತ್ತುಕೊಂಡ ಸಮಾಜದ ಬಗ್ಗೆ  ಅಸಮಾಧಾನವಿತ್ತು. ಮತ್ತು ಸೇಡಿನ ತವಕವೂ ಇತ್ತು.

ಇಷ್ಟು ವಿಷಯಗಳನ್ನು ಮೆಲುಕು ಹಾಕಿಕೊಂಡ ನಂತರ ಪ್ರೀತಂ ಪ್ರದೀಪ್ ನ ಕೇಳಿದ. ಏನ್ ಮಗಾ ಪ್ರದೀಪ ಈಗೇನು ಮಾಡ್ತಾ ಇದ್ದೀಯ ಅಂತ. ಆಗ ಪ್ರದೀಪ್, ನಿನ್ನ ಹತ್ರ ಮುಚ್ಚು ಮರೆ ಯಾಕೆ ಗೆಳೆಯ ನನಗೆ ಸಮಾಜದಿಂದ ಆದ ಅನ್ಯಾಯ ನಿಂಗೆ ಗೊತ್ತೇ ಇದೆ, ಅದಕ್ಕೆ ಸೇಡು ತೀರಿಸಿಕೊಳ್ಳುವ ನೆವದಿಂದ ತಿವ್ರಗಾಮಿ ಆಗಿದ್ದೇನೆ. ಹಣವಿರುವರನ್ನು ಕಂಡರೆ ಲೂಟಿ ಮಾಡುತ್ತೇನೆ. ಬಡವರಿಗೆ ಹಂಚುತ್ತೇನೆ. ಸಮಾಜದಲ್ಲಿ ಸಮಾನತೆ ತರಲು ಪ್ರಯತ್ನಿಸುತಿದ್ದೇನೆ ಎಂದ. ಪ್ರೀತಂ ಅದಕ್ಕೆ ಹಿಂಸೆಯ ಮಾರ್ಗ ಎಷ್ಟು ಸರಿ ಪ್ರದೀಪ್ ಎಂದ. ಅದಕ್ಕೆ ಪ್ರದೀಪ್ ಶಾಂತಿಯಿಂದ ಏನು ಸಾಧಿಸಲಾಗೋದಿಲ್ಲ. ಇಂತಹ ಹಣವಂತರಿಗೆ ಬುದ್ಧಿ ಕಲಿಸಲು ಈ ಮಾರ್ಗವೇ ಸರಿ, ಕೊಂದು ಹಾಕಬೇಕು ಹಣವಂತರನ್ನೆಲ್ಲ ಎಂದ. ಅಷ್ಟರಲ್ಲೇ ಏನೋ ತೋಚಿದಂತಾಗಿ ಅಮ್ಮ ಅಪ್ಪ ಹೇಗಿದ್ದಾರೆ ಎಂದ, ಪ್ರೀತಂ ಸ್ವಲ್ಪ ಬೇಸರದಿಂದ ಅಪ್ಪನ್ನ ಯಾರೋ ಕೊಂದು ಬಿಟ್ರು, ಅಮ್ಮ ಅದೇ ಚಿಂತೆಯಲ್ಲೇ ಹಾಸಿಗೆ ಸೇರಿದ್ದಾಳೆ, ಮನೆಯಲ್ಲಿ ನೆಮ್ಮದಿನೇ ಇಲ್ಲ ಪ್ರದೀಪ್ ಎಂದ. ಪ್ರದೀಪ್ ಪ್ರೀತಂ ಗೆ ಸಾಂತ್ವನ ಹೇಳುತ್ತಾ ಅಪ್ಪನ ಹೆಸರು ಅವರು ಬದುಕಿರೋವರೆಗೂ ಹೇಳಿಲ್ಲ, ಅವರ ಫೋಟೋ ತೋರ್ಸಿಲ್ಲ. ಈಗಾದ್ರು ಹೇಳು ಅವ್ರ ಹೆಸರು ಹೇಳ್ಕೊಂಡು ಮುಂದಿನ ಜೀವನ ನಡೆಸ್ತೀನಿ ಅಂದ. ಪ್ರೀತಂ ಹೌದು ಪ್ರದೀಪ್, ನಿಂಗೆ ಹೇಳ್ಬೇಕು ಹೇಳದೆ ಎಷ್ಟು ದಿನ ಅಂತ ಇರ್ಲಿ ಅವರ ಹೆಸರು ಚಂದ್ರಶೇಖರ್, ತೀವ್ರಗಾಮಿ ನಿಗ್ರಹ ದಳದ ಮುಖ್ಯಸ್ಥರಾಗಿದ್ದರು ಎಂದ. ಆ ಕ್ಷಣ ಪ್ರದೀಪ್ ಗೆ ಆಕಾಶ ತಲೆಯ ಮೇಲೆ ಬಿದ್ದ ಹಾಗಾಯ್ತು ಒಂದು ಕ್ಷಣ ಕುಸಿದು ಬಿದ್ದ.

ಒಮ್ಮೆಲೇ ಪ್ರೀತಂ ನ ಕಾಲು ಹಿಡಿದು, ಕ್ಷಮಿಸು ಗೆಳೆಯ ನಿನ್ನಪ್ಪನ ಕೊಂದಿದ್ದು ನಾನೇ ಎಂದು ಅಂಗಲಾಚಿದ. ಕೈ ತುತ್ತು ಹಾಕಿದ ಅಮ್ಮನ ಹಾಸಿಗೆ ಹಿಡಿಯುವ ಪರಿಸ್ಥಿತಿ ತರಿಸಿದ್ದು ನಾನೇ. ಓದು ನಿಂತು ಹೋಗೋ ಸಮಯದಲ್ಲಿ ಸಹಾಯ ಮಾಡಿದ ದೇವರ ಕೊಂದಿದ್ದು ನಾನೇ, ಎಂದು ಚೀರಲು ಆರಂಭಿಸಿದ. ಪ್ರೀತಂ ಹೇಳು, ಇದಕ್ಕೆ ನಾ ಏನು ಶಿಕ್ಷೆ ಬೇಕಾದರು ಅನುಭವಿಸುತ್ತೇನೆ ಹೇಳು ಏನು ಮಾಡ್ಲಿ ಅಂದ. ಪ್ರೀತಂ ಪ್ರದೀಪ್ ನ ಭುಜವನ್ನು ಹಿಡಿದು, ನಿನ್ನ ಗುಂಪಿನೊಂದಿಗೆ ಎಲ್ಲ ಆಯುಧಗಳೊಂದಿಗೆ ಶರಣಾಗು ಅದೇ ನಿನ್ನ ತಪ್ಪಿಗೆ ಸರಿಯಾದ ಶಿಕ್ಷೆ ಎಂದ. ಸ್ವಲ್ಪ ಹೊತ್ತು ಮೌನವಾದ ಪ್ರದೀಪ್ ಆಯಿತು ಅಂತ ಒಪ್ಪಿ ತನ್ನ ಗುಂಪಿನವರನ್ನೆಲ್ಲ ಸೇರಿಸಿ ಶರಣಾಗುವುದಕ್ಕೆ ಒಪ್ಪಿಸಿದ. ಪ್ರೀತಂ ಅವರ ಶರಣಾಗತಿಗೆ ವೇದಿಕೆ ಸೃಷ್ಠಿ ಮಾಡಿ ಪ್ರದೀಪ್ ನ ಕರೆಸಿದ, ಪ್ರದೀಪ್ ಶರಣಾಗುವ ಮೊದಲು ಕೇಳಿದ, ಗೆಳೆಯ ನೀನೇನು ಕೆಲಸ ಮಾಡುತಿದ್ದೀಯ ಎಂದು. ಅದಕ್ಕೆ ಪ್ರೀತಂ, ನಾನು ತೀವ್ರಗಾಮಿ ನಿಗ್ರಹ ದಳದ ನಾಯಕ, ನೀನು ಕೊಂದ ನಮ್ಮಪ್ಪನ ಕೆಲಸ ನನಗೆ ಬಂದಿದೆ ಎಂದಾಗ ಪ್ರದೀಪನಿಗೆ ಮತ್ತೊಂದು ಶಾಕ್ ಬಿದ್ದಿತ್ತು

Tuesday, February 14, 2012

ಅನುಭವವೇ ನಿನಗೆ ಬದುಕಿನ ಶಾಲೆ

ನೋವೊಂದು ಮನದಲ್ಲಿ ಮನೆಯ ಮಾಡಿತ್ತು
ನಗುವ ಎಳೆಕಡಿದು ಕಲರವವ ತಂದಿತ್ತು
ಅರಳುತಿರೋ ಮೊಗವಂದು ಮುದುಡಿಯಾಗಿತ್ತು
ಅನುಭವವು ಹೊಸದೊಂದು ಪಾಠ ಕಲಿಸಿತ್ತು
ಗೆಲ್ಲೋಕೆ ಇದ್ದಿದ್ದು ನಾಲಕ್ಕೆ ಹೆಜ್ಜೆ
ಒಮ್ಮೆಲೆಗೆ ನೆಗೆದರೆ ಬರಿ ಎರಡೇ ಸಾಕು
ಎಡವಿದರೆ ಒಮ್ಮೆ ಮತ್ತೊಂದು ಹೆಚ್ಚು
ಅದಕೆಂದು ಹೆದರಿ ಕುಳಿತರೆ ಹೇಗೆ.
ಸ್ವಲ್ಪವೇ ನೀ ಮುದುಡಿ ಆಮೇಲೆ ಗರಿಗೆದರಿ  
ಹೆಜ್ಜೆ ಮೇಲೆಜ್ಜೆಯ ಇಡಲುಬಹುದಿತ್ತು
ಎಡವಿದರೆ ಸೋತಂತೆ ತಪ್ಪು ತಿಳಿದೆ ನೀನು
ಅದಕೇನೆ ಗೆಲುವು ಪರರ ಪಾಲಾಗಿತ್ತು
ಕೊಕ್ಕರೆಯು ಎತ್ತರದಿ ನೀರಿನೆಡೆ ಬಂದಾಗ
ಮೀನದು ಸಿಗದೇನೆ ಆಳ ಹೊಕ್ಕಾಗ
ಮುಗಿದು ಹೋಯಿತೇನು ಕೊಕ್ಕರೆಯ ಬಾಳು
ಮತ್ತೊಮ್ಮೆ ಮೀನು ಮೇಲೆ ಬಂದಾಗ
ತೀಕ್ಷ್ಣದ ಕಣ್ಣಿಗೆ ಚುರುಕಾದ ಗುರಿ ನೀಡಿ
ರೆಕ್ಕೆಯ ವೇಗಕೆ ಇನ್ನಷ್ಟು ಬಲ ನೀಡಿ
ಬಿಡದೆ ಹಿಡಿಯಿತು ನೋಡು ಕಲಿ ಅದರ ಛಲವ
ಸೋಲಲ್ಲೂ ಒಮ್ಮೆ ನಗುವ ಸಣ್ಣಗೆ ಬೀರು
ಎಡವಿದರೆ ಮತ್ತೆ ಹೆದರದೇ ಹಾರು 
ಅನುಭವವೇ ನಿನಗೆ ಬದುಕಿನ ಶಾಲೆ
ಅನುದಿನವು ನಿನಗೆ ಗೆಲುವಿನ ಮಾಲೆ
ಸೋತರೆ ಧೃತಿಗೆಡಡಿರಿ ಗೆಲುವಿಗೆ ಮೆಟ್ಟಿಲು ಮಾಡಿಕೊಳ್ಳಿ ಪವನ್ :-
--
regards :-

pavan kumar a n

Monday, February 13, 2012

ಪ್ರೀತ್ಸೋರ ದಿನ ಪ್ರೀತಿಗಾಗೆ ಇರ್ಲಿ……!!

ಪ್ರವೀಣ್, ನಾ ಒಂದು ವಿಷ್ಯ ಹೇಳಲಾ ನಿಂಗೆ, ಬೇಜಾರ್ ಮಾಡ್ಕೊಬಾರದು, ನಿಂಗೆ ಬೆಜಾರಾಗೋಹಾಗಿದ್ರೆ  ನಾ  ಹೇಳಲ್ಲ ಅಂತ  ಕಾವ್ಯ  ಹೇಳಿದಾಗ  ಪ್ರವೀಣನಿಗೆ ಕಾವ್ಯಾಳ ಮನಸಿನಲ್ಲಿ ನನ್ನ ಬಗ್ಗೆ ನನಗೆ ಬೇಜಾರಾಗುವಂತಹವಿಷಯ  ಏನಿರಬಹುದು  ಎಂಬ  ಕುತೂಹಲ ತುತ್ತ ತುದಿ ಮುಟ್ಟಿತ್ತು. ಅದಕ್ಕೆ  ಕಾವ್ಯಳನ್ನ, ಹೇಳು ಕಾವ್ಯ ನೀನು  ಏನೇ  ಹೇಳಿದರು ನಾನು ಬೇಜಾರು  ಮಾಡಿಕೊಳ್ಳಲ್ಲ ಅಂದ, ಅದಕ್ಕೆ ಕಾವ್ಯ, ಪ್ರವೀಣ್ ನೀನು ಅಷ್ಟೇನೂ  ಚೆನ್ನಾಗಿಲ್ಲ ಕಣೋ, ಕುಳ್ಳ,  ಕಲರ್ ಕಮ್ಮಿ, ಸಣಕಲ ಕೂಡ, ಪೆರ್ಸೋನಾಲಿಟಿನೆ ಇಲ್ಲ ನೀನು, ಒಳ್ಳೆ  ಬಟ್ಟೆ  ಹಾಕ್ಕೊಳಲ್ಲ, ನೀನು ಐರನ್ ಮಾಡಿರೋ ಬಟ್ಟೆ ಹಾಕ್ಕೊಂಡು ಕಾಲೇಜಿಗೆ ಬಂದಿದ್ದಂತೂ  ನಾ ನೋಡೇ ಇಲ್ಲ, ಯಾವಾಗಲು ಗಲೀಜು ಬಟ್ಟೆ ಹಾಕಿರ್ತ್ಯ. ನಮಕ್ಕ ಮೊನ್ನೆ ನಿನ್ ವಿಷ್ಯ ಮನೇಲಿ ಮಾತಾಡೋವಾಗ ಇದೆಲ್ಲ  ಹೇಳಿದಳು, ನಂಗು ಹೌದು ನಿಜ ಅನ್ನಿಸಿತು. ಒಳ್ಳೆ ಮೊಬೈಲ್ ಫೋನ್ ಇಲ್ಲ ಆ  ಡಬ್ಬ  1100  ಎಷ್ಟ್  ಹಳೇದಾಗಿದೆ ನೋಡು. ಕೀ ಪ್ಯಾಡ್ ಎಲ್ಲಾ ಸಮದೋಗಿದೆ. ಪ್ರದೀಪ್ ಹತ್ರ ಟಚ್ ಸ್ಕ್ರೀನ್ ಮೊಬೈಲ್  ಇಸ್ಕೊಂಡು  ಅವನ girlfriend ಮೇಘ ವೀಡಿಯೊ ನೋಡ್ತಾ ಹಾಡು ಕೇಳ್ತಾ ಕೂತಿರ್ತಾಳೆ. ಬೇಕು ಬೇಕು ಅಂತಾನೆ ನಂಗೆ ಈ ಹಾಡು ಕೇಳೆಮ್ಮ, ಈ ವೀಡಿಯೊ ನೋಡೆಮ್ಮ ಅಂತ ತೋರ್ಸಿ ಹೊಟ್ಟೆ ಉರಿಸ್ತಾಳೆ. ಹೋಗ್ಲಿ  ಒಳ್ಳೆ ಬೈಕ್  ಆದರು  ಇಟ್ಕೊಂಡಿದ್ಯ, ಅದೂ ಇಲ್ಲ 2nd ಹ್ಯಾಂಡಲ್, ಸ್ಟಾರ್ಟ್ ಮಾಡಿದ್ರೆ ಇಡೀ ಕಾಲೇಜ್ ಗೆ  ಕೇಳುತ್ತೆ, ಪ್ಲೀಸ್  ಒಂದು  ಹೊಸ ಬೈಕ್ ಮತ್ತೆ ಮೊಬೈಲ್ ತೊಗೊಳೋ, ಇನ್ಮೇಲೆ ಒಳ್ಳೆ ಬಟ್ಟೆ ಹಾಕ್ಕೋ, iron ಮಾಡ್ಕೊಂಡು ಬಟ್ಟೆ ಹಾಕ್ಕೊಂಡು ಬಾ, ಜಿಮ್ ಗೆ ಹೋಗು ಸ್ವಲ್ಪ ದಪ್ಪ ಆಗು, fair  ಅಂಡ್ ಲವ್ಲೀ ಹಾಕ್ಕೋ ಆಯ್ತಾ??.  ನನಗೋಸ್ಕರ  ಇಷ್ಟ  ಮಾಡ್ತ್ಯ  ತಾನೇ  ಅಂದಾಗ  ಪ್ರವೀಣನಿಗೆ ಆ ಕ್ಷಣದಲ್ಲಿ ಏನು ಉತ್ತರ  ಕೊಡಬೇಕು ಗೊತ್ತಾಗಿಲ್ಲ. ಸರಿ ಕಾವ್ಯ ನೀನು ಹೇಳಿದ  ಹಾಗೇ  ಮಾಡ್ತೀನಿ  ಅಂತ ಫೋನ್ ಕಟ್ ಮಾಡಿದ.
ಇಷ್ಟು ನಡೆದಿದ್ದು ಪ್ರವೀಣ ಸ್ನೇಹಿತರ ಜೊತೆ ಅಡ್ಡ ಹೊಡೆಯಲು ಹೋದಾಗ, ಇಷ್ಟು ಮಾತು ಕಥೆ ಮುಗಿಸಿ ಬರೋ ಅಷ್ಟರಲ್ಲಿ ಪ್ರವೀಣನ ಸ್ನೇಹಿತ ರಾಘು, ಮುಗೀತ ಮಗ ನಿಮ್ಮ ಮೊಬೈಲ್ ಪ್ರಣಯ ಅಂತ ಚುಡಾಯಿಸಿದ. ಪ್ರವೀಣನಿಗೆ ಮಾತನಾಡಿಸಬೇಕು ಅನ್ಸಿಲ್ಲ, ಹಾಗೇ ತನ್ನ ಹಳೆ ಬೈಕ್ ನ ಸ್ಟಾರ್ಟ್ ಮಾಡ್ಕೊಂಡು ಮನೆ ಸೇರ್ಕೊಂಡ. ಊಟ ಮುಗಿಸಿ ಮತ್ತೆ ಮೊಬೈಲ್ ಚಾಟಿಂಗ್ ಶುರು ಮಾಡಿದ, ಆಗ ಕಾವ್ಯ, ಹೇ ಪ್ರವೀಣ್ ನಂಗೆ ಮಂತ್ರಿ ಮಾಲ್ ಗೆ ಹೋಗ್ಬೇಕು ಅನ್ನಿಸ್ತಾ ಇದೆ ಈ ಶನಿವಾರ ವ್ಯಾಲಂಟೈನ್ ಡೇ ಅಲ್ವಾ ಕರ್ಕೊಂಡು ಹೋಗೋ ಅಂತ ಮೆಸೇಜ್ ಮಾಡಿದ್ದಳು. ಪ್ರವೀಣನಿಗೆ ಮಂತ್ರಿ ಮಾಲ್ ಅಂದೊಡನೆ ಸ್ವಲ್ಪ ಭಯ ಆಯ್ತು, ಕಮ್ಮಿ ಅಂದ್ರು 500 ರು ಖರ್ಚು ಮಾಡಲೇ ಬೇಕು, ಹಣ ಎಲ್ಲಿಂದ ಬರುತ್ತೆ, ಪ್ರವೀಣ ಇನ್ನೂ ಓದ್ತಾ ಇರೋ ಹುಡುಗ, ಅಪ್ಪನ  ಕೇಳಿದ್ರೆ, ಏನಕ್ಕೆ, ಎಲ್ಲಿಗೊಗ್ಬೇಕು, ಯಾರಜೊತೆ ಅಂತ ನೂರಾ ಎಂಟು ಪ್ರಶ್ನೆ ಕೇಳ್ತಾರೆ. ಅಮ್ಮನ ಹತ್ರ ಈಗಾಗಲೇ ಕೊಡ್ತೀನಿ ಕೊಡಮ್ಮ ಕೊಡ್ತೀನಿ ಕೊಡಮ್ಮ ಅಂತ ಬಹಳ ಸಾರಿ ಕೇಳಿ ತೊಗೊಂಡು ಆಗಿದೆ. ಮತ್ತೆ ಕೇಳಿದ್ರೆ ಇಲ್ಲ ಅನ್ನಲ್ಲ ಆದರು ಮನಸಿಗೆ ಬೇಜಾರು ಅಮ್ಮನಿಗೆ ಸುಳ್ಳು ಹೇಳಿ ಹಣ ತೊಗೊಳಕ್ಕೆ. ಇನ್ನು ಗೆಳೆಯರು ಎಲ್ಲ ತನ್ನತರಾನೇ ಓದ್ತಾ ಇರೋರು. ಒಂದು ಕ್ಷಣ ತಲೆ ದಿಮ್ಮೆಂತಾಗಿ, ಆಗಲಿ ಕಾವ್ಯ ಕರೆದು ಕೊಂಡು ಹೋಗ್ತೀನಿ ಅಂತ ರಿಪ್ಲೈ ಮಾಡಿಬಿಟ್ಟ. ಅದೇ ಚಿಂತೆಯಲ್ಲಿ ಮಲಗಿದ ಪ್ರವೀಣನಿಗೆ ನಿದ್ದೆ ಬಂದಿದ್ದೇ ಗೊತ್ತಾಗಲಿಲ್ಲ.
ಎರಡು ವರ್ಷದ ಹಿಂದೆ ಹೀಗಿರಲಿಲ್ಲ, ಪ್ರವೀಣ ಮತ್ತು ಕಾವ್ಯ ಹೊಸ ಪ್ರೇಮಿಗಳು, ಕಾಲೇಜಿಗೆ ನಂಬರ್ 1 ಜೋಡಿ, ಪ್ರಿನ್ಸಿಪಾಲರಿಂದ ಹಿಡಿದು ಕಸಗುಡಿಸೋ ಮುನಿಯಮ್ಮನ ತನಕ ಎಲ್ಲರಿಗೂ ಇವರ ಪ್ರೀತಿ ವಿಷಯ ಗೊತ್ತಿತ್ತು ಅಂದ್ರೆ ಅರ್ಥ ಮಾಡ್ಕೊಳಿ ಅವರ ಪ್ರೀತಿಯ ಪವರ್ ಹೇಗಿರಬಹುದು ಅಂತ. ಆಗ ಕಾವ್ಯಗೆ ಪ್ರವೀಣ ಕಪ್ಪಗಿದ್ದಾನೆ, ಕುಳ್ಳ ಅನ್ನೋ ಅರಿವಿರ್ತಾ ಇರ್ಲಿಲ್ಲ. ಕಪ್ಪು ಶ್ರೀ ಕೃಷ್ಣನ ಬಣ್ಣ, ಇಷ್ಟಕ್ಕೂ ನೀನೇನು ಅಷ್ಟು ಕಪ್ಪಗಿಲ್ಲ ಬಿಡು ಅಂತ ಇವನ ಪರ ವಹಿಸಿ ಮಾತಾಡ್ತಾ ಇದ್ಲು. ಕೆಲವು ಸಲ ಅಂತು ಅತಿರೇಕಕ್ಕೆ ಹೋಗಿ ದುನಿಯಾ ವಿಜಿ ಕಪ್ಪಗಿಲ್ವಾ ಆದರು ಸ್ಟಾರ್ ತಾನೇ ಅಂದಿದ್ದು ಇದೆ. ಬೈಕ್ ಬಗ್ಗೆ ಅಂತು ಹೊಗಳಿಕೆಯ ಸುರಿಮಳೆ. ನೀನು 1 Km ದೂರ ಇದ್ದಾಗಲೇ ನಿನ್ ಬೈಕ್ ಶಬ್ದ ನನ್ ಹಾರ್ಟ್ ಗೆ ಟಚ್ ಆಗ್ಬಿಡುತ್ತೆ ಕಣೋ ಪ್ರವೀಣ. ನೀನು ಈ ಬೈಕ್ ಸೌಂಡ್ ಚೇಂಜ್ ಮಾಡಕ್ಕೆ ಹೋಗಬೇಡ ಆಯ್ತಾ ಅಂತ ಅವಳೇ ಸಲಹೆ ಸಹ ಕೊಟ್ಟಿದ್ಲು. ದಿನಾ ಸಕತ್ ಒಳ್ಳೆ ಗೆಟಪ್ ಇರತ್ತೆ ನಿಂದು. raw ಲುಕ್ಸ್, rough ಅಂಡ್ tough ಆಗಿ ಕಾಣಿಸ್ತ್ಯ ಅಂತ ಹೇಳಿದ್ ಮೇಲಂತೂ, ಪ್ರವೀಣನ ಅಮ್ಮ ಒಗ್ದಿರೋ ಬಟ್ಟೆ ಹಾಕ್ಕೊಂಡು ಹೋಗೋ ಅಂದ್ರುನು ಹಾಕ್ಕೊಂಡು ಹೋಗ್ತಾ ಇರ್ಲಿಲ್ಲ. ಸಿಕ್ಕ ಸಿಕ್ಕ ಗೆಳೆಯರ ಹತ್ರ ಎಲ್ಲ 20 ರು  30 ರು ಸಹ ಸಾಲ ತೊಗೊತಾ ಇದ್ದ. ಅವಳ ಜೊತೆ ಐಸ್ ಕ್ರೀಂ ತಿನ್ನೋದು, ಮನೇಲಿ ಕೊಟ್ಟ ಪಾಕೆಟ್ ಹಣ ಉಳಿಸಿಕೊಂಡು 15 ದಿನಕ್ಕೊಮ್ಮೆ ಸಿನಿಮಾ ನೋಡೋದು ಎಲ್ಲ ಆಗ್ತಿತ್ತು. ಎರಡು ವರ್ಷ ಆದ್ಮೇಲೆ ಕಾವ್ಯಾಗೆ ಯಾಕೆ ಇವನ plus ಆಗಿದ್ದ ವಿಷಯಗಳೆಲ್ಲ ಮೈನಸ್ ಆಗ್ತಾ ಇದೆ ಅಂತ ಪ್ರವೀಣ ಎಷ್ಟು ತಲೆ ಕೆಡ್ಸ್ಕೊಂದ್ರು ಅರ್ಥ ಆಗ್ಲಿಲ್ಲ.
ಶನಿವಾರ ಬೆಳಿಗ್ಗೆ ಎದ್ದೊಡನೆ ಅಮ್ಮ, ಪ್ರವಿಣನಿಗೆ ಕಾಫೀ ಕೊಟ್ಟು ತಲೆಗೆ ಎಣ್ಣೆ ಇಡಲು ಶುರು ಮಾಡಿದ್ದರು. ಯಾಕಮ್ಮ ಅಂದ್ರೆ ಇವತ್ತು ನಿನ್ನ ಹುಟ್ಟಿದಬ್ಬ ಮಗಾ, ರಥಸಪ್ತಮಿ ಅಂದ್ರು, ಇಂಗ್ಲಿಷ್ ಡೇಟ್ ಪ್ರಕಾರ ನಿನ್ ಹುಟ್ಟಿದಬ್ಬ ಬೇರೆ ದಿನ, ಆದ್ರೆ ನನ್ ಪ್ರಕಾರ ಇವತ್ತೇ ಅಂತ ತಲೆಗೆ ಚೆನ್ನಾಗಿ ಎಣ್ಣೆ ಇಟ್ಟು, ಸ್ನಾನ ಮಾಡಿಸ್ತಾ ಇರ್ಬೇಕಾದ್ರೆ. ಪ್ರವೀಣ ಅಮ್ಮ ನಾ ಕಪ್ಪಗಿದ್ದೀನಿ ಅಲ್ವಮ್ಮ ಅಂದ. ಅಮ್ಮ ಯಾರ್ ಹಾಗ್ ಹೇಳಿದ್ದು ಕರ್ಕೊಂಡ್ ಬಾ ನನ್ ಮುಂದೆ, ಕಪ್ಪು ಶ್ರೀ ಕೃಷ್ಣನ್ ಬಣ್ಣ ಮಗಾ ಆದ್ರೆ ಬಗ್ಗೆ ಯೋಚನೆ ಮಾಡಬಾರದು ಅಂದ್ರು. ಪ್ರವೀಣ ಅಮ್ಮ ನಾ ಕುಳ್ಳ ಇದ್ದೀನಿ  ಅಲ್ವಮ್ಮ ಅಂದ. ಮಗನೆ ದೇಹ ಎಷ್ಟು ಬೆಳೆದರೆ ಏನಪ್ಪಾ ಪ್ರಯೋಜನ? ವ್ಯಕ್ತಿತ್ವ ಮುಖ್ಯ. ನಿನ್ನ ವ್ಯಕ್ತಿತ್ವ, ನಾಲ್ಕು  ಜನಕ್ಕೆ ಮಾದರಿಯಾಗೋ ರೀತಿ ಇದ್ರೆ ಸಾಕು, ಅಂದ್ರು. ಅದಕ್ಕೆ ಪ್ರದೀಪ ಹೌದು ಅಪ್ಪನ ಹತ್ರ ದುಡ್ಡಿಗೇನೂ ಕೊರತೆ ಇಲ್ಲ ಆದರು ನಾ ಹಣ ಕೇಳ್ದಾಗೆಲ್ಲ  ಕೊಟ್ಟು,  ಆಮೇಲೆ ಲೆಕ್ಕ ಕೇಳ್ತಾರೆ ಅದೂ ಸರಿನಾಮ್ಮ? ಮಗ ಅಂತ ಸ್ವಲ್ಪಾನು  ನಂಬಿಕೆ ಇಲ್ಲ ಅವ್ರಿಗೆ ಅಂದ. ತಲೆ ಉಜ್ಜುತ್ತ ಇದ್ದ ಅಮ್ಮ ಹಾಗೆ ಒಮ್ಮೆ ತಲೆ ಮೊಟುಕಿ, ಅಯ್ಯೋ ದಡ್ಡ,  ನಿಮ್ಮಪ್ಪ  ದುಡಿತಾ ಇರೋದು ಎಲ್ಲ ನಿಂಗೋಸ್ಕರಾನೆ ತಾನೇ? ಇನ್ನು ಯಾರಿಗೋ ಕೊಡ್ತಾರೆ?. ಆಸ್ತಿಪಾಸ್ತಿ,  ಹಣಕಾಸು  ವ್ಯವಹಾರದಲ್ಲಿ ಮಗ ಯಾವತ್ತು ಯಾಮಾರದೆ ಇರ್ಲಿ, ತೊಂದ್ರೆಲಿ ಸಿಕ್ಕಿ ಹಾಕ್ಕೊಳ್ದೇ ಇರ್ಲಿ ಅಂತ ಲೆಕ್ಕ  ಕೇಳ್ತಾರೋ ಹೊರತು ನಿನ್ ಮೇಲಿನ ಅಪನಂಬಿಕೆ ಇಂದ ಅಲ್ಲ ಕಣೋ ಅಂದ್ರು. ಸಿಗೆಕಾಯಿ ಹರಳೆಣ್ಣೆಯನ್ನು ತೆಗೆದಂತೆ, ಅಮ್ಮನ ಹಿತನುಡಿಗಳು ಪ್ರವೀಣನ ಮನದೊಳಗಿನ ಕಲ್ಮಶವನ್ನು ತೊಳೆದು ಹಾಕಿತ್ತು.
ಸ್ನಾನ ಅದೊಡನೆ ಹೊಸದಾಗಿ ಅಮ್ಮ ತಂದಿದ್ದ ಬಟ್ಟೆ ಹಾಕ್ಕೊಂಡು, ಮನೆಯಲ್ಲಿದ್ದ ಕ್ಯಾಮೆರಾ ತೊಗೊಂಡು,ಕಾವ್ಯಳನ್ನ ಭೇಟಿ ಮಾಡಕ್ಕೆ ಮುಂಚೆ ಕೆಲವು ಸ್ನೇಹಿತರನ್ನು ಭೇಟಿ ಮಾಡಿದ. ಒಬ್ಬ ಸ್ನೇಹಿತನ ಬಳಿ ಒಳ್ಳೆ ಬೈಕ್ ತೊಗೊಂಡ, ಮತ್ತೊಬ್ಬ ಸ್ನೇಹಿತನ ಬಳಿ ಮೊಬೈಲ್ ಫೋನ್ ತೊಗೊಂಡ. ಮಂತ್ರಿ ಮಾಲ್ ಹೋಗೋದಕ್ಕೆ ಕಾಯ್ತಿದ್ದ ಕಾವ್ಯ ಹೊಸ ಬೈಕ್ ನೋಡಿ ಫುಲ್ ಕುಶ್ ಆಗಿದ್ದಳು. ಬೈಕ್ ಹತ್ತಿಸಿಕೊಂಡು ಮಂತ್ರಿಯ ಬದಲಾಗಿ ಬನ್ನೇರುಘಟ್ಟ ಕಾಡಿಗೆ ಕರೆದು ಕೊಂಡು ಹೋದ. ಲಾಂಗ್ ಡ್ರೈವ್, ಅದೂ ಹೊಸ ಬೈಕಲ್ಲಿ ಅಂತ ಕಾವ್ಯ ಇನ್ನೂ ಖುಷಿಯಾಗಿದ್ದಳು ಕಾಡಿನ ಮಧ್ಯೆ ಗಾಡಿ ನಿಲ್ಲಿಸಿ, ಗಾಡಿಯ ಕೀ ಕಾವ್ಯ ಕೈಗಿಟ್ಟು, ಮೊಬೈಲ್ ಫೋನ್ ಕೊಟ್ಟು ವೀಡಿಯೊ ನೋಡ್ಕೊಂಡು ಕೂತ್ಕೋ, ಫೋಟೋಸ್ ತೆಗೆದು ಕೊಂಡು ಬರ್ತೀನಿ ಅಂತ ಹೇಳಿ ಎಲ್ಲೋ ಹೊರಟು ಬಿಟ್ಟ. ಕಾವ್ಯ ವೀಡಿಯೊ ನೋಡುತ್ತಾ ಹಾಡು ಕೇಳುತ್ತ ಕೂತಳು, ಕತ್ತಲಾಗುವ ಸಮಯ ಆಯಿತು ಆದರು ಪ್ರವೀಣ್ ಬರಲಿಲ್ಲ. ಕಾವ್ಯಾಳಿಗೆ ಭಯ ಶುರುವಾಯ್ತು. ಇದರ ಮಧ್ಯೆ ಕಾಡು ಪ್ರಾಣಿಗಳ ಕೂಗು ಬೇರೆ ಭಯ ಹೆಚ್ಚು ಮಾಡಿತ್ತು. ಹೆದರಿ ಬಳಲಿ ಕುಸಿದಿದ್ದಳು.
ಆಗ  ಪ್ರವೀಣ್ ಅಲ್ಲೇ  ಮರೆಯಲ್ಲಿದ್ದವನು ಎದುರು ಬಂದ, ಕಾವ್ಯ ಓಡಿ ಬಂದವಳೇ ಪ್ರವೀಣನ ತಬ್ಬಿ ಎಲ್ಲಿ ಹೋಗಿ ಬಿಟ್ಟಿದ್ದೆ ಅಂತ ಅತ್ತಳು.ಅದಕ್ಕೆ ಪ್ರವೀಣ್ ನಿನ್ನನ್ನೇ ಹುಡುಕ್ತ ಇದ್ದೆ, ನೀನು ಇಲ್ಲಿದ್ಯ ಇವಾಗ ಸಿಕ್ದೆ ಅಂದ. ಅರ್ಥ ಆಗದ ಕಾವ್ಯ ನೀನೆ ನನ್ನ ಇಲ್ಲಿ ಬಿಟ್ಟು ಹೋಗಿ ನೀನೆ ಮತ್ತೆ ಹುಡುಕುತಿದ್ದೆ ಅಂತಿದ್ದಿಯ ಅಂದ್ಲು. ಅದಕ್ಕೆ ಪ್ರವೀಣ ನಾನು ಬಿಟ್ಟು ಹೋದಾಗ ಇದ್ದ ಕಾವ್ಯಾಗೆ ಒಳ್ಳೆಯ ಗಾಡಿ,  ವೀಡಿಯೊ ಮತ್ತು ಹಾಡು, ಪ್ಲೇ ಮಾಡುವಂತಹ ಮೊಬೈಲ್ ಬೇಕಿತ್ತು. ಆದರೆ ಈ ಕಾವ್ಯಾಗೆ ಪ್ರವೀಣ್ ಬೇಕಾಗಿದೆ ಅಂದಾಗ, ಕಾವ್ಯಾಗೆ ತನ್ನ ತಪ್ಪು ಅರಿವಾಗಿತ್ತು. ಸಾರೀ ಪ್ರವೀಣ್ ಇನ್ನು ಮುಂದೆ ನಾನು ಆ ರೀತಿ ವರ್ತಿಸೋಲ್ಲ ಇಂತಹ ವಸ್ತುಗಳು ಮತ್ತು ಅಂದಕ್ಕಿಂತ ವ್ಯಕ್ತಿ ಮುಖ್ಯ ಅನ್ನೋ ಅರಿವಾಗಿದೆ ಅಂತ ಮನಃ ಪೂರ್ತಿಯಿಂದ ತಬ್ಬಿ ಹ್ಯಾಪಿ ವ್ಯಾಲಂಟೈನ್ ಡೇ ವಿಶ್ ಮಾಡಿದಳು. :) :)

Monday, February 6, 2012

ಆಳದಿರು ನನ್ನ


ಕೀಲಿ ಪಟವ ಕುಟ್ಟಿ ಕುಟ್ಟಿ ಸವೆದಾಗಿದೆ
ಮುಸುಕಿನಿಂದ ಎಷ್ಟೆಂದು ಮಾತನಾಡಲೇ ಗೆಳೆತಿ
ಉಸಿರುಗಟ್ಟಿಸದಿರು ದಯವಿಟ್ಟು ನನ್ನದೂ ಬದುಕಿದೆ
ನಿನ್ನವನೇ ಆದರೂ ಆಳದಿರು ನನ್ನ

ನಂಗೊತ್ತು ನನ್ನದೇ ಧ್ಯಾನದಲಿಹೆ ನೀನು
ನನಗೂನು ನಿನ್ನದೇ ಯೋಚನೆ ಬೇರೇನು
ಆದರು ಜೀವನವ ಸಾಗಿಸಲು ಕಷ್ಟ ಪ್ರಿಯೆ
ಮಾತು ಮಾತಲ್ಲೆ ಮರೆಯದಿರು ಬದುಕ

ಅಬ್ಬರದ ಆಸೆಗಳು ತುಂಬಿದೆ ನಿನ್ನಲ್ಲಿ
ಅಬ್ಬಬ್ಬ ಎನ್ವಷ್ಟು ಆಳ ಇದೆ ಬದುಕಿನಲಿ
ಬದುಕ ಸಾಗರ ಇದು ಅಂತ್ಯ ಕಾಣದ ತೀರ
ಆಸೆಯ ಮೂಟೆಯನು ಮಾಡದಿರು ಭಾರ

ಇರುವಷ್ಟು ಪ್ರೀತಿ ಕೊಡುವೆನು ನಾನು
ಇಲ್ಲದ ಪ್ರೀತಿ ಹುಡುಕಬಲ್ಲೆಯೇನು
ಇಲ್ಲ ಎಂಬುವ ಪದ ಪ್ರೀತಿಯಲಿ ಸಿಕ್ಕಲ್ಲ
ಸಮಯವೇ ಪ್ರೀತಿ ಸತ್ಯವನು ಅರಿಯಲ್ಲ

ಸಮಯ ಕೊಡಿ ಪ್ರೀತಿ ತೊಗೊಳಿ :) ಪವನ್ :

Thursday, February 2, 2012

ಅಪ್ಪನ ಬೈದು ಬಿಟ್ಟೆ ಎಂದಾಗ

 
ಅಪ್ಪನ ಬೈದು ಬಿಟ್ಟೆ ಎಂದಾಗ
ಆ ಸುಂದರಿ ಫೋನಿನಿಂದಲೇ
ಕಿಸಕ್ ಎಂದಿದ್ದಳು
ಏನಕ್ಕೆ ಬೈದೆ ಎಂದು
ಕೇಳ ಹೊರಟಳಾದರೂ
ನೀನು ಬೇಸರದಿಂದಿದ್ದೆ
ಅಪ್ಪ ತಲೆ ತಿಂತಿದ್ದ ಎಂದಾಗ
ನಗುವ ಹೊನಲು ಸುಂದರಿಯ
ಬೇಸರವ ಮರೆಸಿತ್ತು

ಬುದ್ದಿ ಇಲ್ಲದೆ ಚಡ್ಡಿ ಹಾಕದೆ
ದಿಕ್ಕೆಟ್ಟು ಓಡುವಾಗೆಲ್ಲ
ಎಲ್ಲಿ ವಾಹನದ ಚಕ್ರಕ್ಕೆ
ಮಗ ಸಿಕ್ಕಿಬಿಟ್ಟನೋ
ಎಂದು ಹಿಂದೆ ಹೋದನಲ್ಲ ಆ ಅಪ್ಪನಿಗೆ
ಬೈಗುಳ ಬೇಕಿತ್ತು ಬಿಡಿ
ಇಂದು ಕಾಲ ಚಕ್ರ
ಪ್ರೀತಿಯ ವಾಹನದಡಿ ನಿಂತಿದೆ
ಅದು ಅಪ್ಪನ ತುಳಿದು ನೋವ ಕೊಟ್ಟು
ನಗುವ ಪಥದಲ್ಲಿ ಸಾಗುತ್ತಿದೆ

ಇಷ್ಟಕ್ಕೂ ಸುಂದರಿಯ ಬೇಸರಕ್ಕೆ ಕಾರಣ
ಪ್ರಿಯ ಐಸ್ ಕ್ರೀಂ
ಕೊಡಿಸಲಿಲ್ಲವೆಂದೇ
ಕರೆದುಕೊಂಡು ಹೋಗಿದ್ದ ಸಿನಿಮ
ಚೆಂದ ಇರಲಿಲ್ಲವೆಂದೇ
ಅಪ್ಪನ ಬುದ್ದಿ ಮಾತು
ತಲೆ ತಿಂದಂತೆಯೇ
ಬುದ್ದಿ ಹೇಳದೆ ಚಡ್ಡಿಯಿಲ್ಲದೆ ನಡೆಸಿದಿದ್ದರೆ
ಪ್ರಿಯನಿಗೆ ಸುಂದರಿಯ
ಕಾಲಧೂಳು ದಕ್ಕುತ್ತಿರಲಿಲ್ಲ

ಬೆವರ ಹರಿಸಿ ಬವಣೆ ಎಣಿಸದೆ
ಮಗನಿಗಾಗಿ ಬದುಕ ತೇಯ್ದ
ಅಪ್ಪನಿಗೆ ಬೈಗುಳ ಬೇಕಿತ್ತು ಬಿಡಿ
ಅಪ್ಪ ಕೊಡಿಸಿದ ಮೊಬೈಲು
ಅಪ್ಪ ಕೊಡಿಸಿದ್ದ ವಾಚು
ಅಪ್ಪ ಕೊಡಿಸಿದ ಬ್ಯಾಗು
ಕಡೆಗೆ ಪ್ರಿಯನ ಬಳಿ ಇರುವುದು
ಅಪ್ಪ ಕೊಡಿಸಿದ ಚಡ್ಡಿಯೇ
ಎಂಬುದು ಸುಂದರಿಗೆ ಗೊತ್ತಿಲ್ಲ

ಇಂದು ಬೆಳಗ್ಗೆ ಬಸ್ ನಲ್ಲಿ ಒಬ್ಬ ಕಾಲೇಜು ವಿದ್ಯಾರ್ಥಿ ತನ್ನ ಪ್ರಿಯೆ ಜೊತೆ ಅಪ್ಪನ ಬೈದಿದ್ದು ಹೆಮ್ಮೆಯಿಂದ ಹೇಳ್ಕೊಲ್ತಿದ್ದ

ಏನು ಕಾಲ ಬಂತು ಪವನ್ :- :(

Sunday, January 29, 2012

ಭಾವ ಬಿಂದಿಗೆಯ ಭಿಕ್ಷೆ ನೀಡಮ್ಮ ಶಾರದೆ


ಭಾವ ಬಿಂದಿಗೆಯ ಭಿಕ್ಷೆ ನೀಡಮ್ಮ ಶಾರದೆ
ತುಂಬಿರಲಿ ಬಿಂದಿಗೆ ಹಲವು ಭಾವಗಳ ಜೊತೆಗೆ
ಹಾಸ್ಯದ ಮಿತಿಯಿರಲಿ ವಿರಹದ ಕುರುಹಿರಲಿ
ಸ್ನೇಹದ ಅರಿವಿರಲಿ ಪ್ರೀತಿಯ ಪರಿವಿರಲಿ
ನೋವಿನ ಲೇಪವು ಆಗಾಗ ಅಗುತಲಿ
ಕಲ್ಪನೆಯ ಶಿಲೆಯಾಗಿ ಕೆತ್ತುವ ತಂತ್ರವ
ಕಲಿಸಿ ಕೊಡು ಬಾರಮ್ಮ ಶಾರದೆ
ಭಾವ ಬಿಂದಿಗೆಯ ಭಿಕ್ಷೆ ನೀಡಮ್ಮ ಶಾರದೆ
ನೋವಿನ ಮನಸಿಗೆ ಸಾಂತ್ವಾನ ನೀಡಲಿ
ನಲಿವಿನ ಕ್ಷಣಗಳಿಗೆ ಸಾಕ್ಷಿಯೂ ಅಗಲಿ
ದಾರಿ ತಪ್ಪಿದ ಮನಕೆ ದಿಕ್ಸೂಚಿ ತೋರಲಿ 
ದಣಿದ ಹೃದಯಕ್ಕೆ ಹಿಡಿ ಧೈರ್ಯ ನೀಡಲಿ
ಎಲ್ಲ ಭಾವಗಳನು ಪದಗಳಲಿ ತುಂಬುವ  
ಭಾವ ಬಿಂದಿಗೆಯ ಭಿಕ್ಷೆ ನೀಡಮ್ಮ ಶಾರದೆ
ನೋವಾಗದಿರಲಿ ನನ್ನ ಭಾವಗಳಿಂದ
ಮಗುವಷ್ಟೇ ಮುಗ್ಧತೆ ಅಡಕವಾಗಿರಲಿ
ಅತಿರೇಕ ಎಂದಿಗೂ ಮುಟ್ಟದೆ ಇರಲಿ 
ಅರ್ಥವಾಗದ ಭಾವ ವ್ಯರ್ಥವಾದೀತು    
ಆಗದಿರಲಿ ಸೀಮಿತ ನನಗಷ್ಟೇ ನನ ಭಾವ
ಎಲ್ಲರ ಹೃದಯದಳು ಬಂಧಿಯಾಗಿರಲಿ
ಸಾಗರವ ಮೀರಿಸುವ ಅಪರಿಮಿತ ಶಕ್ತಿಯ 
ಭಾವ ಬಿಂದಿಗೆಯ ಭಿಕ್ಷೆ ನೀಡಮ್ಮ ಶಾರದೆ
ತಾಯಿ ಶಾರದೆ ಎಲ್ಲರನ್ನು ಆಶೀರ್ವದಿಸಲಿ 
ಪವನ್ :-  

Tuesday, January 24, 2012

ಅಲೆಯ ಅರ್ಭಟ


ಬಂದು ಹೋಗುವಾಗೆಲ್ಲ
ಹೊತ್ತು ಹೋಗುವೀ ಒಂದಷ್ಟು
ನೆನಪಿನ ಮರಳು
ಆಗಾಗ ಹೊತ್ತು ತರುವೆ
ಪ್ರೀತಿಯ ಕಪ್ಪೆಚಿಪ್ಪು ಶಂಖ
ಮತ್ತೊಮ್ಮೆ ಮುಳ್ಳು ಮೀನುಗಳ
ಉರುಳಿಸುತ ಬರುವೆ
ನನ್ನ ಆಸೆಗಳ ಆಕೃತಿಯ
ಚುಚ್ಚಿ ನೋಯಿಸಲು

ಹಿಡಿದಿಟ್ಟುಕೊಳ್ಳುವಾಸೆ ನನಗೆ
ಹಿಡಿದು ಬುದ್ದಿ ಹೇಳಿ
ಪ್ರೀತಿಯ ಕಪ್ಪೆ ಚಿಪ್ಪುಗಳ
ಯಾವಾಗಲು ತರಿಸಿಕೊಳ್ಳುವಾಸೆ    
ಮುಳ್ಳುಗಳ ಉರುಳಿಸುವಾಗಲೆಲ್ಲ 
ನಂಬಿಕೆಯ ಬಲೆ ಬೀಸಿ   
ಆಕೃತಿಗಳ ಉಳಿಸಿಕೊಳ್ಳುವಾಸೆ   

ಕೇಳಲು ನೀನು ನನ್ನ ಆಳಲ್ಲ
ಅಳುವ ಜನರಿಗೂ ನಡುಕ
ತರಬಲ್ಲ ನವ ಯುವಕ
ಒಮ್ಮೆ ನೀ ನುಗ್ಗಿ ಬಂದರೆ
ಮರಳು ಹೊತ್ತೊಯ್ಯುವ ರೀತಿ
ಮನುಕುಲವ ಎತ್ತೊಯ್ಯುವೆ

ಇಂದು ನಾ ನಿನಗೆ ಅವಕಾಶ ಕೊಡುವೆ
ಸಾಧ್ಯವಾದರೆ ಎತ್ತೊಯ್ಯಿ
ಮೆಚ್ಚುಗೆಯ ಬಹುಮಾನ ಕೊಡುವೆ

ಅಹಂ ನ ಕೋಟೆಯಿದೆ
ಆಸೆಯ ಮೂಟೆಯಿದೆ    
ಬರಿದು ಮಾಡಿಬಿಡು ನನ್ನ ಮನವ
ಅವನ್ನು ಇಟ್ಟುಕೊಳ್ಳಲು ನನಗು ಮನಸಿಲ್ಲ
ಜೋರಾಗಿ ಬಂದು
ಛಿದ್ರಗೊಳಿಸಿದರು ಚಿಂತೆಯಿಲ್ಲ
ನೆಮ್ಮದಿಯ ಸುಖ ಪಡೆವೆ

ಸ್ನೇಹಿತರ ಪ್ರೀತಿಯಿದೆ
ಹೆತ್ತವರ ಅಸೆ ಇದೆ
ಬಲವಾದ ನಂಬಿಕೆ ಮನವೆಲ್ಲ ತುಂಬಿದೆ  
ನೀ ಹತ್ತಾರು ಪಟ್ಟು ಜೋರಾಗಿ ನುಗ್ಗಿದರು
ನಿನ್ನಯಾ ಸೈನ್ಯವೇ ಒಟ್ಟಾಗಿ ಬಂದರೂ
ನನ್ನೀ ಆಕೃತಿಗಳು ಅಲುಗಾಡೋದಿಲ್ಲ   

ಸಾಗರದಲೆಗೆ ಸವಾಲ್ ಪವನ್ :-

Monday, January 23, 2012

ಐಶ್ವರ್ಯ ಕಳೆದು ಹೋದಾಗ….!!

ಪವನ್ ಪಾರುಪತ್ತೇದಾರ

ಪುಟ್ಟನಿಗೆ ಕ್ರಿಕೆಟ್ ಎಂದರೆ ಪ್ರಾಣ, ಹರಿದ ಚಡ್ಡಿ ಹಾಕಿಕೊಂಡು ತೂತು ಬನಿಯನ್ನಲ್ಲೇ ಮರದ ತುಂಡೊಂದನ್ನು ಹಿಡಿದು ಆಡಲು ಹೋಗುತಿದ್ದ. ಕೈಗೆ ಸಿಕ್ಕಿದ ಉದ್ದಗಿನ ವಸ್ತುಗಳೆಲ್ಲಾ ಅವನ ಕೈಲಿ ಬ್ಯಾಟ್ ಆಗಿಬಿಡುತಿತ್ತು. ಅದಕ್ಕೆ ಬಹಳಾನೆ ಉದಾಹರಣೆಗಳು. ತೆಂಗಿನ ಮೊಟ್ಟೆ, ಮರದ ರಿಪೀಸು, ಅಷ್ಟೇ ಯಾಕೆ ಅಮ್ಮನ ಮುದ್ದೆ ಕೆಲಕುವ ಕೋಲನ್ನು ಬಿಡುತ್ತಿರಲಿಲ್ಲ. ಪುಟ್ಟನ ಅಪ್ಪ ರೈತ, ಪಾರ್ಟ್ ಟೈಮ್ ಎಲೆಕ್ಟ್ರಿಕ್ ಕೆಲಸ ಸಹ ಮಾಡುತಿದ್ದರು. ಮನೆಲಿ ೨ ಸೀಮೆ ಹಸುಗಳು ಸಹ ಇದ್ದವು, ಅಪ್ಪ ಎಲೆಕ್ಟ್ರಿಕ್ ಕೆಲಸಕ್ಕೆ ಸಾಮಾನ್ಯವಾಗಿ ಸಂಜೆ ಹೋಗುತಿದ್ದರು
ಪುಟ್ಟ ಅಷ್ಟು ಹೊತ್ತಿಗೆ ಶಾಲೆಯಿಂದ ಮನೆಗೆ ಬರುತಿದ್ದ. ಬರುವಾಗಲೇ ಆಟದ ಕನಸು ಹೊತ್ತು ಬರುತಿದ್ದ ಪುಟ್ಟ ಅಪ್ಪ ಲೋ ಮಗ ನಾನು ಕೆಲಸಕ್ಕೆ ಹೋಗ್ತಾ ಇದ್ದೇನೆ ಹಸುಗಳನ್ನ ಚೆನ್ನಾಗಿ ನೋಡ್ಕೋ ಅಂತ ಹೇಳುತಿದ್ದರು. ಅಪ್ಪನ ಮಾತಿಗೆ ಇಲ್ಲ ಎನ್ನದೆ ಮುಖ ಸೊಟ್ಟಗೆ ಮಾಡ್ಕೊಂಡು ಆಯ್ತು ಅಂತಿದ್ದ. ಆಗ ಅಪ್ಪ ಲೋ ಮಗನೆ ನಿಮ್ಮೊಳ್ಳೇದಕ್ಕೆ ಕಣೋ ದುಡೀತಾ ಇರೋದು ಬೇಜಾರು ಮಾಡ್ಕೋಳದೆ ಹೋಗೋ ಅನ್ನೋರು. ಪುಟ್ಟ ಸಹ ಸ್ವಲ್ಪ ಮೂತಿ ಸೊಟ್ಟ ಮಾಡ್ಕೊಂಡು ಹಸು ಮೇಸಕ್ಕೆ ಕೆರೆ ಬಯಲಿಗೆ ಹೋಗ್ತಾ ಇದ್ದ.
ಕೆರೆ ಬಯಲಲ್ಲಿ ಪುಟ್ಟನ ತರಹವೇ ಇನ್ನೂ ಸುಮಾರು ಹುಡುಗರು ಬರುತಿದ್ದರು. ಹಸುಗಳನ್ನು ಬಯಲಲ್ಲಿ ಬಿಟ್ಟು ಎಲ್ಲರೂ ಸೇರಿ ಕಲ್ಲನ್ನು ವಿಕೆಟ್ನಂತೆ ಜೋಡಿಸಿ ತಮ್ಮಲ್ಲೇ ತಂಡಗಳನ್ನಾಗಿ ಮಾಡಿಕೊಂಡು ಸೂರ್ಯ ಬೈದು ಮನೇಗೆ ಹೋಗ್ರೋ ಅನ್ನೋವರೆಗು ಆಡುತಿದ್ದರು. ಪುಟ್ಟ ಒಳ್ಳೆಯ ಬೌಲರ್ ಆಗಿದ್ದ. ಬಹಳ ದೂರದಿಂದ ಓಡಿ ಬರದಿದ್ದರೂ ವೇಗವಾಗಿ ಚೆಂಡು ಎಸೆಯುವ ತಂತ್ರಗಾರಿಕೆ ಅವನಲ್ಲಿತ್ತು. ಆಗಾಗ ಲೆಗ್ ಸ್ಪಿನ್ ಹಾಕುತಿದ್ದ ಇದ್ದಕ್ಕಿದ್ದಂತೆ ಆಫ್ ಸ್ಪಿನ್ ಹಾಕುತಿದ್ದ. ಅವನ ಎಸತದಲ್ಲೇ ವೇಗವಾಗಿ ಸ್ಪಿನ್ ಆಗತಿದ್ದುದ್ದನ್ನು ಆಡಲಾಗದೆ ಬ್ಯಾಟಿಂಗ್ ಮಾಡುತ್ತಿರುವರೆಲ್ಲ ತತ್ತರಿಸುತಿದ್ದರು. ಎಲ್ಲಾ ಆಡಿದ ನಂತರ ಎಲ್ಲರೂ ತಮ್ಮ ತಮ್ಮ ಮನೆಗಳಿಗೆ ಹಸುಗಳನ್ನು ಕರೆದುಕೊಂಡು ಮನೆಗೆ ಮರಳುತಿದ್ದರು.
ಒಂದು ದಿನ ಫಲವಾಗಿದ್ದ  ಪುಟ್ಟನ ಒಂದು ಮನೆಯಲ್ಲಿನ ಹಸು ಕರು ಹಾಕಿತ್ತು, ಮನೆಯವರೆಲ್ಲ ಬಹಳ ಖುಷಿಯಾಗಿದ್ದರು. ಹೆಣ್ಣು ಕರು ಬೇರೆ, ಮನೆಯವರೆಲ್ಲ ಏನು ಹೆಸರಿಡಬೇಕೆಂದು ಚಿoತಿಸುತಿದ್ದರು ಅಮ್ಮ ಗೌರಿ ಎಂದಿಡೋಣ ಎಂದರು. ಅಪ್ಪ ಬೇಡ ಲಕ್ಸ್ಮಿ ಅನ್ನೋಣ ಎಂದರು. ಆಗ ಪುಟ್ಟ ಐಶ್ವರ್ಯ ಎಂದಿಡೋಣ ಅಂದ. ಅದಕ್ಕೆ ಅವರಪ್ಪ ಯಾರೋ ಅದು ಐಶ್ವರ್ಯ ಅಂದ್ರು. ಅಪ್ಪ ನಿಂಗೊತ್ತಿಲ್ವಾ, ಸಕ್ಕತ್ತಾಗಿದೆ ಹೆಸರು, ಇ ನಡುವೆ ಎಲ್ಲ ಸಿನಿಮಾಲು ಹಿರೋಯಿನ್ ಅವಳೇ, ಅಮ್ಮ ಲಕ್ಸ್ ಜಾಹಿರಾತು ನೋಡಿಲ್ವಮ ಅದರಲಿ ಬರ್ತಳಲ್ಲ ಅವಳೇ ಅಂದ, ಇದೇ ಇಡಣ ಇದೇ ಇಡಣ ಅಂತ ಹಠ ಮಾಡಿದ. ಆಗಲಿ ಎಂದು ಅಪ್ಪ ಅಮ್ಮ ಸಹ ಹೂಗುಟ್ಟಿದರು. ಐಶ್ವರ್ಯ ಅಮ್ಮನ ಬಳಿಯೇ ಇರುತಿದ್ದಳು ಯಾವಾಗಲು. ಇವನು ಮಾತನಾಡಿಸಲು ಹೋದಾಗಲೆಲ್ಲ ನೆಕ್ಕುತ್ತಿದ್ದಳು. ವರಟಾದ ನಾಲಿಗೆಯಿಂದ ನೆಕ್ಕುವಾಗ, ಪುಟ್ಟ ಖುಷಿಯಾಗಿ ಹಸು ಮನೆಯಿಂದಲೇ ಅಮ್ಮನ ಕೂಗಿ ಹೇಳುತಿದ್ದ, ಅಮ್ಮ ಐಶ್ವರ್ಯ ಅಮ್ಮ ಅದನ್ನ ನೆಕ್ಕಿದ್ರೆ ಐಶ್ವರ್ಯ ನನ್ನ ನೆಕ್ತಾ ಇದೆ ಅಂತ. ಶಾಲೆಯಲ್ಲೂ ಅದೇ ಮಾತು. ಲೋ ಮಾದೇಶ ನಮ್ಮನೆ ಹಸು ಕರು ಹಾಕೈತೆ ಗೊತ್ತ? ಹೆಸರೇನು ಹೇಳು ಐಶ್ವರ್ಯ ಗೊತ್ತಾ ಅಂದಾಗ ಮಾದೇಶ ಐಶ್ವರ್ಯನ! ಅಂತ ಬಾಯಿ ಬಿಟ್ಕೊಂಡು ಇರ್ಲಿ ಬಿಡೋಲೋ ನಮ್ಮ ಮನೆ ಹಸು ಕೂಡ ಫಲ ಆಗಿದೆ ಅದು ಕರು ಹಾಕ್ದಾಗ ಐಶ್ವರ್ಯ ಅಂತಾನೆ ಹೆಸರಿಡ್ತಿವಿ ಅಂದಿದ್ದ.
ಹೀಗೆ ಒಂದು ವಾರ ಕಳೆದಾಯ್ತು ಆಗ ಐಶ್ವರ್ಯ ಆಚೆ ಓಡಾಡೋ ಹಂತಕ್ಕೆ ಬಂದಿದ್ದಳು. ಹೊರಗೆ ಪುಟ್ಟ ಹಗ್ಗ ಕಟ್ಟಿ ಪುಟ್ಟ ಹಿಡಿದು ಬೀದಿಗೆ ಕರೆತಂದರೆ ರಸ್ತೆಯಲ್ಲಿನ ಪುಟ್ಟ ಮಕ್ಕಳೆಲ್ಲ ಬಂದು, ಐ ಹೊಸ ಕರು ಏನೋ ಪುಟ್ಟ ಇದರ ಹೆಸರು ಎಂದು ಕೇಳುತಿದ್ದರು ಪುಟ್ಟ ಐಶ್ವರ್ಯ ಅಂತ ಹೆಮ್ಮೆಯಿಂದ ಹೇಳಿಕೊಳ್ಳುತಿದ್ದ. ಇದೇ ಭರಾಟೆಯಲ್ಲಿ ಒಂದೆರಡು ಸಲಿ ಪುಟ್ಟನ ಕಾಲು ತುಳಿದಿದ್ದು ಆಗಿದೆ. ಮುಂದೆ ಸಂಜೆ ಅಪ್ಪ ಎಲ್ಲಾದರೂ ಕೆಲಸಕ್ಕೆ ಹೋದರು ಬಹಳಾ ಉತ್ಸಾಹದಿಂದ ಆಡಲು ಹೋಗುತಿದ್ದ. ಒಂದೆರಡು ಸಲಿ ಆಡುವ ಗಮನದಲ್ಲಿ ಐಶ್ವರ್ಯನ ಕಡೆ ಗಮನ ಕೊಡದೆ ಅದು ಅವರಮ್ಮನ ಬಳಿ ಹಾಲು ಕುಡಿದು ಅಪ್ಪನ ಹತ್ತಿರ ಬೈಸಿಕೊಂಡಿದ್ದ ಕೂಡ.
ಹೀಗೆ ಒಮ್ಮೆ ಪುಟ್ಟನ ಅಪ್ಪ ಎಲೆಕ್ಟ್ರಿಕ್ ಕೆಲಸ ಮಾಡಲು ಹೊರಗಡೆ ಹೋಗಬೇಕಾದ ಅನಿವಾರ್ಯತೆ ಬಂದಿತ್ತು. ಅದೇ ದಿನ ಪುಟ್ಟನ ಕ್ರಿಕೆಟ್ ತಂಡ ಬೇರೆ ಕೆರೆ ಬಯಲಿನ ಹುಡುಗರ ಜೊತೆ ಕ್ರಿಕೆಟ್ ಪಂದ್ಯ ಇಟ್ಟುಕೊಂಡಿದ್ದರು. ಶಾಲೆಯಿಂದ ಮನೆಗೆ ಬಂದೊಡನೆ ಅಪ್ಪ ಮನೆಯಲ್ಲಿ ಇಲ್ಲದಿರುವುದು ತಿಳಿಯಿತು. ನೀನೆ ಹಸುಗಳನ್ನು ಹೊತ್ತು ಮುಳುಗೊತನಕ ಮೇಯಿಸಿ ಮನೆಗೆ ಕರ್ಕೊಂಡ್ ಬರಬೇಕಂತೆ ಅಪ್ಪ ಹೇಳಿದ್ದಾರೆ ಅಂತ ಅಮ್ಮ ಹೇಳಿದರು. ವಿಷಯ ಕೇಳಿ ಸಪ್ಪೆಯಾಗಿ ಕೆರೆ ಬಯಲಿಗೆ ಹೋದ. ಅಲ್ಲಿ ಪುಟ್ಟನ ಗೆಳೆಯರೆಲ್ಲ ತಯಾರಾಗಿ ಹೊರಡಲು ಸಿದ್ದವಾಗಿದ್ದರು. ಪುಟ್ಟ ಇಲ್ಲ ಕಣ್ರೋ ನೀವು ಹೋಗಿ ಆಡಿ ನಾ ಬರಲು ಆಗಲ್ಲ. ಐಶ್ವರ್ಯ ಬೇರೆ ಬಂದಿದ್ದಾಳೆ ಈಗ ಎಲ್ಲಂದರಲ್ಲಿ ಓಡುತ್ತಾಳೆ, ಜಿಗಿಯುತ್ತಾಳೆ. ಆಮೇಲೆ ಎಲ್ಲಾದರು ಹೋದ್ರೆ ನಮಪ್ಪ ನನ್ನ ಚರ್ಮ ಸುಲಿಯುತ್ತಾರೆ ಅಂದ. ಆಗ ಗೆಳೆಯರೆಲ್ಲ ನೀನೇನು ಹೆದರಬೇಡ ಪುಟ್ಟ ಗಟ್ಟಿಯಾಗಿ ಕಟ್ಟಿ ಹಾಕೋಣ ನೀನೆ ನಮ್ಮ ತಂಡದ ಮುಖ್ಯ ಆಟಗಾರ ನೀನೆ ಬರಲಿಲ್ಲ ಅಂದರೆ ನಾವು ಗೆಲ್ಲಕ್ಕೆ ಆಗಲ್ಲ ಅಂತ ಬಲವಂತ ಮಾಡಿದರು. ಮೊದಲೇ ಕ್ರಿಕೆಟ್ ಎಂದರೆ ಪ್ರಾಣ ಅಲ್ವೇ ಪುಟ್ಟನಿಗೆ, ಐಶ್ವರ್ಯಳನ್ನು ಗಟ್ಟಿಯಾಗಿ ಕಟ್ಟಿ ಹೊರಟೆ ಬಿಟ್ಟ. ಅಲ್ಲಿ ಹೋಗಿ ಚೆನ್ನಾಗಿ ಆಡಿ ಗೆದ್ದು ಬಂದರು.
ಬಂದು ನೋಡುವಷ್ಟರಲ್ಲಿ ಐಶ್ವರ್ಯಳ ಅಮ್ಮ ಪದೇ ಪದೇ ಅಮ್ಮ ಅಮ್ಮ ಎಂದು ಕೂಗುತಿದ್ದ ಶಬ್ದ ಸ್ವಲ್ಪ ಗೊಂದಲ ಮೂಡಿಸಿತ್ತು. ಹತ್ತಿರ ಬಂದು ನೋಡುವಷ್ಟರಲ್ಲಿ, ಐಶ್ವರ್ಯ ಕಾಣಿಸುತ್ತಿರಲಿಲ್ಲ. ಪುಟ್ಟ ಪದರಿಬಿಟ್ಟಿದ್ದ. ತನಗೆ ಅರಿವಿಲ್ಲದೇನೆ ಕಣ್ಣಲ್ಲಿ ನಿರು ಸುರಿಯಲು ಶುರುವಾಯಿತು. ಪುಟ್ಟನ ಗೆಳೆಯರು ಸಹ ಅವನ ಜೊತೆ ಹುಡುಕಿದರೂ ಸಿಗಲಿಲ್ಲ. ಅಷ್ಟರಲ್ಲೇ ಸೂರ್ಯ ಮುಳುಗಿದ್ದರಿಂದ ಪುಟ್ಟನ ಗೆಳೆಯರೆಲ್ಲ ತಮ್ಮ ತಮ್ಮ ದನಕರುಗಳನ್ನು ಮನೆ ಕಡೆ ಹೊಡೆದು ಕೊಂಡು ಹೋದರು. ಪುಟ್ಟನ ತಂದೆ ಎಷ್ಟು ಹೊತ್ತಾದರೂ ಪುಟ್ಟ ಮನೆಗೆ ಬಂದಿಲ್ಲ ಅಂತ ಹುಡುಕಿ ಕೊಂಡು ಬಂದರು. ಬಂದು ಇಲ್ಲಿನ ಅವಸ್ತೆ ನೋಡಿ ಮಿಕ್ಕ ಎರಡು ಹಸುಗಳನ್ನು ಮನೆಗೆ ಕರೆದು ಕೊಂಡು ಪುಟ್ಟನ್ನು ಜೊತೆಗೆ ಕರೆ ತಂದು, ಮನೆಯಲ್ಲಿ ಚೆನ್ನಾಗಿ ಬಾರಿಸಿದರು. ಹಸು ಮೆಸೋ ಅಂದ್ರೆ ಕ್ರಿಕೆಟ್ ಆಡಲು ಹೋಗಿದ್ದ ಜ್ಞಾನ ಇಲ್ವಾ ಮೈಮೇಲೆ, ಅಂತ ಬಿದಿರಿನ ಕೋಲು ಮುರಿದು ಹೋಗುವರೆಗೂ ಹೊಡೆದರು. ಅತ್ತು ಅತ್ತು ಪುಟ್ಟನ ಕಣ್ಣು ಬತ್ತಿ ಹೋಗಿತ್ತು. ಹಸು ಮನೆಯಿಂದ ಐಶ್ವರ್ಯಳ ತಾಯಿ ಅಮ್ಮ ಅಮ್ಮ ಅಂತ ಕುಗುತ್ತಲೇ ಇತ್ತು. ಪುಟ್ಟನ ಅಮ್ಮ ಬಂದು ಪುಟ್ಟನನ್ನು ಸಮಾಧಾನ ಮಾಡಿ ಹೋಗ್ಲಿ ಬಿಡಪ್ಪ ಇನ್ನು ಅಳಬೇಡ. ಸಾಕು ಬಿಡ್ರಿ ಮಗುನ ಎಷ್ಟು ಹೊಡಿತಿರ ಅಂತ ಪುಟ್ಟನ ತಂದೆ ಮೇಲೆ ಸಹ ರೇಗಿದರು. ಆಗ ಪುಟ್ಟ ಪರವಾಗಿಲ್ಲ ಬಿಡಮ್ಮ ನನಗೆ ಅಳು ಬರ್ತಾ ಇರೋದು ಅಪ್ಪ ಹೊಡೆದಿದ್ದಕ್ಕಲ್ಲ ಪಾಪ ತಾಯಿ ಮಗುನ ಬೇರೆ ಮಾಡಿ ಬಿಟ್ಟನಲ್ಲ ಅನ್ನೋ ವಿಷಯಕ್ಕೆ ಅಂದಾಗ ಪುಟ್ಟನ ಅಪ್ಪ ಅಮ್ಮನಿಗೂ ಒಂದು ಕ್ಷಣ ಕಣ್ಣು ಒದ್ದೆಯಾಗಿತ್ತು. ಹಸುಮನೆಯಿಂದ ಅಮ್ಮ ಅಮ್ಮ ಎಂಬ ಧ್ವನಿ ಕೇಳಿದಾಗಲೆಲ್ಲ ಪುಟ್ಟನ ಅಳು ಇನ್ನು ಹೆಚ್ಚಾಗುತ್ತಲೇ ಇತ್ತು…….

******************

Wednesday, January 18, 2012

ಮನದ ಸುಕ್ಕು

ಸುಕ್ಕು ಶುರುವಾಗಿದೆ
ಹೊಳೆಯುವ ಮೊಗವೀಗ
ನಿಜ ಬಣ್ಣ ತೆರೆಯುತಿದೆ     ಸುಕ್ಕು ಶುರುವಾಗಿದೆ
ಚಂದನವ ಮೆಲ್ಲಗೆ ಮುಖವೆಲ್ಲ ಹಚ್ಚಿ
ನಿಂಬೆ ರಸದೊಂದಿಗೆ ನಯವಾಗಿ ತೊಳೆದು
ಅರೈಕೆಗಂತ್ಯವೇ ಇಲ್ಲದಂತಾದರು
ಮನದಮೇಲೆ ಸುಕ್ಕು ಶುರುವಾಗಿದೆ

ಅಪನಂಬಿಕೆಯ ಸುಕ್ಕುಅಗ್ನಾನದ ಸುಕ್ಕು
ಆಸೆಯ ಸುಕ್ಕುನಿರಾಸೆಯ ಸುಕ್ಕು
ಮುಖದ ನರಗಳನು ಬಿಗಿ ಹಿಡಿದು
ಮನದ ಮೇಲೆ ಗೀಟುಗಳನು ಎಳೆದು
ಗೊತ್ತಿಲ್ಲದಂತೆ ಮೋಸ ಶುರು ಮಾಡಿದೆ
ಸುಕ್ಕು ಶುರುವಾಗಿದೆ

ಪ್ರತಿಯೊಂದು ತಪ್ಪಿಗು ಕಾರಣ ಹೇಳಿ
ಪ್ರತಿಯೊಂದು ಮಾತಿಗು ತೇಪಯ ಹಚ್ಚಿ
ತನ್ನ ತಾನೇ ಆಡಂಭರಿಸುವ ಆಸೆಯಲಿ
ಗೆಳೆಯರ ಬಳಗದ ಮೆಟ್ಟಿ ಮೇಲೇರುತ
ನನ್ನದೇ ಗೆಲುವೆಂದು ಗರ್ವವನು ತೋರುವ
ಸುಕ್ಕು ಶುರುವಾಗಿದೆ ಸುಕ್ಕು ಶುರುವಾಗಿದೆ

ಜೀವನ ಹೀಗೆ ಅಲ್ವ ಪವನ್ :-

Tuesday, January 17, 2012

ಬುದ್ಧಿ ಮಾತು


ಚಪ್ಪಲಿಯ ಕೊನೆಯು ಕಿತ್ತು ಹೋಗಿತ್ತು
ಹಿಮ್ಮಡಿ ಅರ್ಧ ನೆಲವ ನೆಕ್ಕಿತ್ತು
ಅಂಗಿಯಲಿ ಆಕಾಶ ನೋಡ ಬಹುದಿತ್ತು
ಅರಮನೆ ತುಸು ದೂರ ನಡೆಯಬಹುದಿತ್ತು
ಆಸೆಯ ಹೊರೆಯಂತು ಹೆಗಲ ಮೇಲಿತ್ತು

ಸಗಣಿ ನೀರನು ರಾಚಿ ಅಂಗಳವ ತೊಳೆದರು
ರಂಗೋಲಿ ತುಂಬೆಲ್ಲ ಬಣ್ಣಗಳ ತುಂಬಿದರು
ಅಸೆ ಪಟ್ಟಿಯ ಎಲ್ಲ ದೇವರುಗಳ ಮುಂದಿಟ್ಟರು
ನಿನ್ನದಷ್ಟೇ ನಿನಗೆ ಲಭ್ಯವೋ ಮನುಜ

ಕೊಟ್ಟಿದ್ದು ತನಗೆಂದು ನಂಬಿ ಕೂರಲೆ ಬೇಡ
ಹೆಚ್ಚಾಗಿ ಎಂದಿಗೂ ಬಚ್ಚಿಡಲು ಬೇಡ
ಕೊಡೆ ಹಿಡಿಸಿಕೊಳ್ಳೋ ಜನರೇನೆ ಎಲ್ಲ
ಹತ್ತಿದ ಏಣಿಗೆ ಮರ್ಯಾದೆ ಇಲ್ಲ
ಸಹಕಾರ ಉಪಕಾರ ನೆನೆಯೊರೆ ಇಲ್ಲ
ಊರಿನ ಉಸಾಬರಿ ನಿನಗೆ ಬೇಕಿಲ್ಲ

ಸುಮ್ನೆ ಹೀಗೆ ಬುದ್ಧಿ ಮಾತು ಪವನ್ :-

Monday, January 9, 2012

ಬದುಕಿನ ರಂಗಮಂಚ


ನೋಡದಿರಲಿ ಯಾರು,
ಮುಖವೆಲ್ಲ ಕಪ್ಪು ಮಚ್ಚೆ
ಅಲ್ಲಲ್ಲಿ ತರಚಿದ ಗಾಯ
ಅಜ್ಞಾನದ ಅತಿರೇಕ
ಹುಚ್ಚೆದ್ದು ಕುಣಿಯಲು ಹೋಗಿ
ಬಿದ್ದ ಮೇಲಿನ ಸೂತಕ

ಕುಣಿದಿದ್ದು ಸಭೆಯಲೇ ಆದರು
ರಂಗ ಮಂಚದಲಲ್ಲ
ಬದುಕಿನ ಪುಸ್ತಕದ ಮೇಲೆ
ಪ್ರೇಕ್ಷಕರು ಕೋಟಿ ಜನ
ಎಲ್ಲರು ಹೇಳಿದರು ತಪ್ಪು ನಿನದೆಂದು
ಒಂದಷ್ಟು ಮೂಢರು
ನಿನ್ನ ಬೆಳವಣಿಗೆ ಸಹಿಸದೆ
ಬದುಕಿನ ಬೆಂಕಿಗೆ ತುಪ್ಪವನ್ನು ಹೊಯ್ದರು

ನಿನ್ನ ಬುದ್ದಿಯು ಆಗ ಲದ್ದಿ ತಿಂತಿತ್ತೆ
ಒಮ್ಮೆ ನೀ ಅರಿತವರ ನಂಬಬೇಕಿತ್ತೆ
ಮುದ್ದಿನ ಮುಖದಲೀಗ ಕಪ್ಪಗಿನ ಮಚ್ಚೆಗಳು
ಬದುಕ ಪುಟಗಳು ಈಗ ಹರಿದ ಹಾಳೆಗಳು
ಒತ್ತಾಸೆಯಾಗಿದ್ದ ಜನರು ಈಗಿಲ್ಲ
ಮೂಢರ ಸಂತೆಗೆ ನೀನೀಗ ಬೇಕಿಲ್ಲ
ತಿಳಿದಿಕೋ ಜಗವನು
ಕುಣಿಯುವ ಜಾಗವನು

ತಪ್ಪು ನಿರ್ಧಾರಗಳು ಬದುಕಿನ ದಿಕ್ಕನ್ನೇ ಬದಲಿಸುತ್ತವೆ ಪವನ್ :-

Friday, January 6, 2012

ಸರಿ ಶ್ರುತಿಯೋ ಅಪಶ್ರುತಿಯೋ


ತಂತಿ ಮೀಟುವಾಗೆಲ್ಲ ಬರಲೇಬೇಕೇನು ಇಂಪಾದ ರಾಗ
ಬದುಕಿನ ಅರಿವಿಲ್ಲದೆ ಬದುಕ ವೀಣೆ ನುಡಿಸಲು ಹೊರಟಾಗ
ಬದುಕ ವೀಣೆಯಲಿ ನೀ ಎಷ್ಟೇ ಪಳಗಿದರು
ಅಪಶ್ರುತಿಯ ರಾಗಗಳು ಮೂಡುವುದು ಹಲವಾರು
ಕಿತ್ತು ಹೋಗದು ತಂತಿ ನೀ ಹೇಗೆ ಮೀಟಿದರು
ರಾಗ ಹೊಮ್ಮುವುದಷ್ಟೇ ಅದರ ಕೆಲಸ
ಸರಿ ಶ್ರುತಿಯೋ ಅಪಶ್ರುತಿಯೋ ನುಡಿಸಿದರೆ ನೀನು
ಬೈಗುಳವೋ ಹೊಗಳಿಕೆಯೋ ಕಾಯುವುದೇ ಕೆಲಸ

ಅಭಿಮಾನ ಉಳ್ಳವರು ಅಪಶ್ರುತಿಯ ಕೇಳಿದರೂ
ಪಕ್ಕವಾದ್ಯವ ಬೆರಸಿ ಗೆಲುವನ್ನು ಕೊಡಿಸುವರು
ಅನುಮಾನ ಉಳ್ಳವರು ನೋಡಿ ನೋಡದಂತಿರುವರು
ಸರಿಶ್ರುತಿಯು ಕಂಡಾಗ ಹಿಂದೆಯೇ ಬರುವರು
ಅಹಂಕಾರ ಉಳ್ಳವರು ನಿನ್ನ ಕಡೆ ನೋಡರು
ನೀ ಒಮ್ಮೆ ಗೆದ್ದಾಗ ಧಗ ಧಗನೆ ಉರಿಯುವರು

ನಿನ್ನ ರಾಗವ ನೀನು ಸರಿಯಾಗಿ ತಿಳಿದಿಕೋ
ಜೀವನದ ತಾಳವನ್ನು ಸರಿಯಾಗಿ ಹಾಕಿಕೋ
ನಿರ್ಧಾರಗಳನ್ನೇ ಶ್ರುತಿಪೆಟ್ಟಿಗೆಯ ಮಾಡಿಕೋ
ಸರಿಯಾದ ಶ್ರುತಿಯನ್ನು ಬದುಕಿನಲಿ ತಂದುಕೋ
ರಾಗದ ಹೊಳೆಯೇ ಹರಿಯುವುದು ಬದುಕಿನಲಿ
ಸಂಗೀತದಂತೆ ಹಿತವಿಹುದು ನಿನ್ನ ಈ ಬಾಳಲಿ

ಬದುಕಿನ ರಾಗ ತಾಳ ತಪ್ಪದಿರಿ ಗೆಳೆಯರೆ ಪವನ್ :-

Monday, January 2, 2012

ಕಣ್ಣಭಾಷೆಯ ಪ್ರೀತಿಪಾಠ


ಬೇಕಿಲ್ಲ ನಿನ್ನ ಹುಸಿನೋಟ
ಬಹಳಾನೆ ತಿಳಿದಿರುವೆ ಕಣ್ಣ ಭಾಷೆಯನು
ಅರಿಯಬಲ್ಲೆನು ನಿನ್ನ ಹೃದಯದ ಕ್ರೌರ್ಯವನು

ಅಂದು ನಾ ಹೀಗಿರಲಿಲ್ಲ ಬಲು ಮುಗ್ಧನಾಗಿದ್ದೆ
ನಿನ್ನಯಾ ನೋಟಕ್ಕೆ ಮರಳಾಗಿ ಹೋಗಿದ್ದೆ
ಕಿರುನಗೆಯ ಕಾಣಿಕೆಗೆ ಕರಗಿ ನೀರಾಗಿದ್ದೆ
ಅರಿಯದೇ ಮೋಹದಲಿ ಮರೆಯಾಗಿ ಹೋಗಿದ್ದೆ

ಬಣ್ಣಬಣ್ಣದ ಮಾತು ನನಗಂತು ಹೊಸತು
ನಿನ್ನಂತೇ ನಟಿಸಲು ನನಗೆ ಬರಲಿಲ್ಲ
ಹೊರಗಡೆ ನಗುಮೊಗ ಗೆದ್ದಂತೆ ಇತ್ತು ಜಗ
ಹುಸಿನಗೆಯ ಆಯಧ ನನ್ನಲ್ಲಿ ಇರಲಿಲ್ಲ

ಬಣ್ಣಕ್ಕೆ ಬಿದ್ದಿದ್ದೆ ಬಲೆಯಲ್ಲಿ ಸಿಕ್ಕಿದ್ದೆ
ಭರವಸೆಯ ಬಾಳಿನಲಿ ಅನುಮಾನ ಇರಲಿಲ್ಲ
ನನ್ನನ್ನೇ ಮರೆತಿದ್ದೆ ನಿನ್ನನ್ನೇ ನಂಬಿದ್ದೆ
ನೀನ್ಯಾಕೋ ನಂಬಿಕೆಗೆ ಅರ್ಹಳಾಗಿಲ್ಲ

ದಿನಗಳು ಕಳೆದಾಯ್ತು ನಿಜಬಣ್ಣ ತಿಳಿದಾಯ್ತು
ಬಿಳುಪ ಹಿಂದಿನ ಕಪ್ಪು ನೀನು ಎಂದಾಯ್ತು
ನಂಬಿಕೆಟ್ಟಿಲ್ಲ ನಾನು ಬದುಕ ತಿಳಿಸಿದೆ ನೀನು
ಪ್ರೀತಿ ಪಾಠವ ಕಲಿಸಿದ ಕಹಿ ಜೇನು ನೀನು

ಯುವ ಪ್ರೇಮಿಗಳಿಗಾಗಿ ಪವನ್ :-