Thursday, December 13, 2012

ಕನಸಲ್ಲಿ ಗಿರೀಶ

ಎಡವಿದ್ದೆ ಮೊನ್ನೆ
ಒಸರುತ್ತಿತ್ತೊಂದಷ್ಟು ರಕ್ತ
ಕೃಷ್ಣನ ಹರಿಷಿನದ ಹೆಜ್ಜೆಯಂತೆ
ನಾ ರಕ್ತದೊಳು ಚಿತ್ರಣ ಬಿಡಿಸಿದ್ದೆ
ಹೆಬ್ಬರಳು ಹರಿದು ಹೋಗಿತ್ತು
ಆದರೂ ಮರುದಿನದ ಕಬಡಿಯ ಚಿಂತೆ

ಪಲ್ಟಿ ಹೊಡೆಯುವ ಕನಸು
ಅಂಗಳದಲಿ ಎದುರಾಳಿಯ ಮಣ್ಣುಮುಕ್ಕಿಸುವಾಸೆ
ಎದುರಾಳಿ ಮುತ್ತಿದಾಗ ಛಂಗನೆಗರುವಾಸೆ
ಕನಸ ಕಾಣುತ್ತಲೇ ಎಡವಿಬಿಟ್ಟಿದ್ದೆ
ಹೆಬ್ಬರಳು ಹರಿದು ಹೋಗಿತ್ತು
ಆದರೂ ಮರುದಿನದ ಕಬಡಿಯ ಚಿಂತೆ

ಅಮ್ಮ ಬೈದಿದ್ದಳು ಕದಲದಿರೆಂದು
ಅಪ್ಪನಿಗೂ ನನ್ನ ಬೆರಳಿನದೇ ಚಿಂತೆ
ತಂಗಿಯಂತೂ ಗಾಯ ನೋಡಿದಾಗೆಲ್ಲ ಬೆಚ್ಚು
ವೈದ್ಯ ಮಾಡಿಸಿ ಬಿಳಿಯ ಬಟ್ಟೆ ಹಾಕಿದ್ದಾಯಿತು
ನೋವಿನಲ್ಲೆ ನಿದಿರೆ ಹತ್ತಿಬಿಟ್ಟಿತ್ತು
ಆದರೂ ಮರುದಿನದ ಕಬಡಿಯ ಚಿಂತೆ

ಕನಸಲ್ಲಿ ಗಿರೀಶ ಬಂದಿದ್ದ
ಕಾಲು ಸರಿಯಿಲ್ಲದಿದ್ದರೂ ಒಲಿಂಪಿಕ್ ವಿಜಯಿ
ಹಿಂದೆಯೇ ಮಾಲತಕ್ಕ ಬೇರೆ
ಪೋಲಿಯೋ ಲಸಿಕೆ ಮರೆತಿದ್ದ ಅವರಪ್ಪ
ಅದಕವಳು ಪಡೆದ ಉಡುಗರೆ ಪದ್ಮಶ್ರೀ
ಸತ್ತು ಗೆದ್ದು ಬಂದ ನಿಕೋಲಸ್ ಹೇಳಿದ
ಅಮ್ಮನ ಪ್ರೀತಿಯ ಶಕ್ತಿ ಏನೆಂದು

ಮರುದಿನ ಎದ್ದಾಗ ಹೊಸದೊಂದು ಲೋಕ
ಬೆರಳಿಗಚ್ಚಿದ್ದ ಬಿಳಿಯ ಬಟ್ಟೆ ಬಿಚ್ಚಿಹೋಗಿತ್ತು
ಮನದ ಮೂಲೆಯಲ್ಲಿದ್ದ ನೋವೆಂಬ ಭೂತ
ಹೆದರಿ ನಡುಗಿ ರಾತ್ರಿಯೆ ಮಾಯವಾಗಿತ್ತು
ಜಿಗಿ ಜಿಗಿದು ಹೊರಟೆ ಅಂದು ಕಬಡಿ ಆಡಲು
ಕನಸಲ್ಲಿ ಬಂದ ವೀರರಿಗೆ ಧನ್ಯವಾದ ತಿಳಿಸುತ

ಪವನ್ ಪಾರುಪತ್ತೇದಾರ :-

No comments:

Post a Comment