Tuesday, April 24, 2012

ಅವಿವೇಕಿ ಮಿತ್ರನಿಗಿಂತ ವಿವೇಕಿ ಶತ್ರು ಮೇಲು


ಪ್ರವೀಣ ಓದೋ ವಿಷಯದಲ್ಲಿ ಯಾವಾಗ್ಲೂ ಸೋಂಬೇರಿ,ಅಪ್ಪ ಅಮ್ಮ ಎಷ್ಟು ಬೈದರೂ ತನ್ನ ಲೋಕದಲ್ಲೇ ಮಗ್ನ, ಸ್ನೇಹಿತರ ಜೊತೆ ಯಾವಾಗ್ಲೂ ತಿರುಗಾಡೋದು, ಅಪ್ಪ ಅಮ್ಮನ ಹತ್ರ ಹಣ ತೆಗೆದುಕೊಂಡು ಸಿನಿಮಾ ನೋಡೋದು, ಭಾನುವಾರ ಬಂದ್ರೆ ಸಾಕು ಬೆಳಿಗ್ಗೆ ಇಂದ ಸಂಜೆಯವರೆಗೂ ಬೆಟ್ಟಿಂಗ್ನಲ್ಲಿ ಕ್ರಿಕೆಟ್ ಆಡೋದು ಇದೇ ಕೆಲಸ, ಅಪ್ಪ ಅಮ್ಮನಿಗೂ ಬುದ್ಧಿ ಹೇಳಿ ಹೇಳಿ ಸುಸ್ತಾಗಿತ್ತು. ಹುಡುಗ್ರ ಸಹವಾಸ ಬರೀ ಆಡುವುದಕ್ಕೆ ಸೀಮಿತವಾಗದೆ ದುಶ್ಚಟಗಳ ಕಡೆಯೂ ಸಹ ವಾಲಿತ್ತು. ಮನೆಗೆ ಬಂದಾಗ ಒಮ್ಮೆ ಧೂಮಪಾನದ ಘಮಲು ಅಮ್ಮನ ಮೂಗು ಬಡಿದಿತ್ತು. ಆಗಾಗ ಅಪ್ಪನ ಜೇಬಿನಿಂದ ನೋಟುಗಳು ಸಹ ಕಾಣೆಯಾಗುತಿದ್ದವು. ಅಪ್ಪ ಅಮ್ಮ ಇಬ್ಬರು ಚರ್ಚಿಸಿ ಏನು ಮಾಡುವುದು ಎಂದು ಯೋಚಿಸಿ ಒಂದು ನಿರ್ಧಾರಕ್ಕೆ ಬಂದರು.

ಮರುದಿನ ಭಾನುವಾರ ಪ್ರವೀಣ ಎಂದಿನಂತೆ ಹೇಳದೆ ಕೇಳದೆ ಕ್ರಿಕೆಟ್ ಆಡಲು ಹೊರಟು ಬಿಟ್ಟ, ಅಪ್ಪ ಅಮ್ಮ ಸೀದ ಅವರಪ್ಪನ ಮನೆಗೆ ಹೋಗಿ ಪ್ರವೀಣನ ತಾತನನ್ನು ಕರೆ ತಂದರು. ತಾತನಿಗೆ ವಯಸ್ಸು ಸುಮಾರು ೭೦ ಆಗಿದ್ದರು ಬಹಳ ಚುರುಕು, ಕಾಲ ಕಾಲಕ್ಕೆ ತಾನು ಸಹ ಬದಲಾಗಿದ್ದಂತಹ ಘಾಟಿ ಮುದುಕ. ಕಂಪ್ಯೂಟರ್, ಕ್ರಿಕೆಟ್, ಸಿನಿಮಾ ಎಲ್ಲಾದ್ರಲ್ಲು ಎತ್ತಿದ ಕೈ. ಕ್ರಿಕೆಟ್ ಆಡಲು ಹೋಗಿದ್ದ ಪ್ರವೀಣ ಎಂದಿನಂತೆ ಮನೆಗೆ ಬಂದ, ಬಂದೊಡನೆ ತಾತನನ್ನು ನೋಡಿ ಆಶ್ಚರ್ಯ ಚಕಿತನಾದ, ತಾತನ ಕಾಲಿಗೆ ನಮಸ್ಕಾರ ಮಾಡೋ ಅಂತ ಅಪ್ಪ ಹೇಳೋ ತನಕ ಇವ್ನಿಗೆ ತೋಚಲಿಲ್ಲ, ಮಾಡ್ತೀನಿ ಕೈ ಕಾಲು ತೊಳ್ಕೊಂದು ಬಂದೆ ಅಂತ ಸ್ನಾನದ ಮನೆಗೆ ಹೋಗಿ ಟೂತ್ ಪೇಸ್ಟ್ ನ ಒಂದಷ್ಟು ಬಾಯಿಗೆ ಹಾಕಿಕೊಂಡು ಮುಕ್ಕಳಿಸಿ ಬಂದ, ಬಂದೊಡನೆ ನಮಸ್ಕಾರ ಮಾಡಿದಾಗ ತಾತನಿಗೆ ಧೂಮಪಾನದ ಘಮಲು ತಿಳಿದು ಬಿಡ್ತು. ಅದೂ ಅಲ್ದೆ ಮೊದಲೇ ಪ್ರವೀಣನ ಅಪ್ಪ ಅಮ್ಮ ತಮ್ಮ ಮಗ ದಾರಿ ತಪ್ತಾ ಇದ್ದಾನೆ ಅನ್ನೋ ವಿಷಯ ಬೇರೆ ಮೊದಲೇ ಹೇಳಿದ್ರು. ವಿಷಯ ಗೊತ್ತಾದ್ರು ತಾತ ಮುಗುಮ್ಮನೆ ಇದ್ದರು.

ಮಾರನೆ ದಿನ ಪ್ರವೀಣ ಕಾಲೇಜಿಗೆ ಅಂತ ಹೊರಟಾಗ, ತಾತ ಸಹ ತಯಾರಾಗಿ ಮೊಮ್ಮಗನೊಂದಿಗೆ ಹೊರಡಲು ಸಿದ್ದರಾಗಿದ್ದರು, ಪ್ರವೀಣ ತಾತ ಹಾಗೆಲ್ಲ ನಿಮ್ಮನ್ನ ಕಾಲೇಜಿಗೆ ಬಿಡಲ್ಲ, ಬಹಳಾ ಶಿಸ್ತು ಅಲ್ಲಿ ಅಂತೆಲ್ಲ ಹೇಳ್ದ, ಅದಕ್ಕೆ ತಾತ ನಾ ನೋಡದೇ ಇರೋ ಕಾಲೇಜೇನೋ ಅದು, ನೀನ್ ಓದ್ತಾ ಇರೋ ಕಾಲೇಜು ನನ್ನ ಫೇಸ್ಬುಕ್ ಗೆಳೆಯ ಪ್ರಕಾಶ್ ರಾಜು ದು, ಅವರು ನಾನು ಇಲ್ಲಿಗೆ ಬಂದಿರೋ ಸ್ಟೇಟಸ್ ನೋಡಿದ್ರಂತೆ, ಫೋನ್ ಮಾಡಿದ್ರು ಅದಕ್ಕೆ ಬರ್ತಾ ಇದ್ದೀನಿ ಅಂತ ಪ್ರವೀಣಂಗೆ ಒಳ್ಳೆ ಟಾಂಗ್ ಕೊಟ್ಟ್ರು. ಪ್ರವೀಣನ ಮೊಬೈಲ್ ಗೆ ಅವನ ಗೆಳೆಯನ ಫೋನ್ ಬಂತು, ಏನ್ ಮಗಾ ಸಿನಿಮಾಗೆ ಟಿಕೆಟ್ ತೊಗೊಂಡು ಕಾಯ್ತಾ ಇದ್ದೀವಿ ಎಲ್ಲಿದ್ಯ ಇನ್ನ?? ಪ್ರವೀಣ,ತಾತನ ಜೊತೆ ಇದ್ದೀನಿ ಮಗಾ ಆಮೇಲೆ ಫೋನ್ ಮಾಡ್ತೀನಿ ಅಂದ. ಫೋನ್ ಕಟ್ ಆದ ಮೇಲೆ ತಾತ ಕೇಳಿದ್ರು ಏನು ಸಿನಿಮಾಗೆ ಹೋಗ್ಬೇಕ ಅಂತ, ಅದಕ್ಕೆ ಪ್ರವೀಣ ಹೌದು ನಿಮಗೆ ಹೇಗೆ ಗೊತ್ತಾಯ್ತು ತಾತ ಅಂದ, ಅದಕ್ಕೆ ರಾತ್ರಿ ನೀನು ನಿನ್ನ ಗೆಳೆಯನ ಜೊತೆ ಫೋನಲ್ಲಿ ಮಾತಾಡ್ತಾ ಇದ್ದಲ್ಲ ಆಗ ಕೇಳಿಸ್ತು ನಂಗೆ ಅಂದ್ರು. ಆದ್ರೆ ಕಾಲೇಜಿಗೆ ಚಕ್ಕರ್ ಹೊಡೆದು ಸಿನಿಮಾ ನೋಡೋದು ತಪ್ಪಲ್ವ ಅಂದ್ರು. ಪ್ರವೀಣನಿಗೆ ಉತ್ತರ ಕೊಡಲು ಆಗ್ಲಿಲ್ಲ, ಕಡೆಗೆ ತಾತ, ನಿನ್ ಸ್ನೇಹಿತನಿಗೆ ಫೋನ್ ಮಾಡಿ ಹೇಳು ನನಗೂ ಒಂದು ಟಿಕೆಟ್ ತೊಗೊ ಅಂತ ನಾನು ಬರ್ತೀನಿ ಅಂದ್ರು. ಪ್ರವೀಣನಿಗೆ ಒಂದು ಕಡೇ ಖುಷಿ ಆಯ್ತು ಮತ್ತೆ ಭಯ ಸಹ ಆಯ್ತು ಮನೇಲಿ ಹೇಳಿಬಿಟ್ರೆ ಅಂತ ಅಷ್ಟ್ರಲ್ಲಿ ತಾತ, ನೀನೇನು ಯೋಚಿಸ ಬೇಡ ಮನೇಲಿ ನಾ ಏನು ಈ ವಿಷಯ ತಿಳಿಸಲ್ಲ ಅಂದಾಗ ಸ್ವಲ್ಪ ಸಮಾಧಾನ ಆಯ್ತು.

ಸಿನಿಮಾಗೆ ತಾತ ಮೊಮ್ಮಗ ಜೊತೆಗೇ ಹೋದ್ರು, ಅಲ್ಲಿ ಅವನಿಗಾಗಿ ಕಾದಿದ್ದ ಹುಡುಗರೆಲ್ಲ ತಾತನ ನೋಡಿ ಘಾಬರಿ ಆದ್ರು, ಪ್ರವೀಣನ ಮಾತು ಕೇಳಿ ಸುಮ್ಮನಾದ್ರು. ಜೊತೆಯಲ್ಲಿದ್ದ ಹುಡುಗರ ನಡವಳಿಕೆಗಳ ಮೇಲೆ ಗಮನವಿಟ್ಟಿದ್ದ ತಾತ, ಎಲ್ಲರ ಸರಿಯಾಗಿ ಗಮನಿಸುತಿದ್ದರು. ಇಂಟರ್ವೆಲ್ ಬಿಟ್ಟಾಗ ಪ್ರವೀಣನ ಗೆಳೆಯರೆಲ್ಲ ಟಾಯ್ಲೆಟ್ಟಿನ ಪಕ್ಕ ನಿಂತು ಧೂಮಪಾನ ಮಾಡುತಿದ್ದರು, ಜೊತೆಯಲ್ಲಿ ಪ್ರವೀಣನನ್ನು ಕರೆದೊಯ್ದಿದ್ದರಿಂದ ಅವನೂ ಅವರೊಡನೆ ಭಯ ಭಯದಿಂದ ಎಲ್ಲಿ ತಾತ ಬಂದು ನೋಡುಬಿಡುತ್ತಾರೋ ಅಂದುಕೊಂಡು ಸೇದುತಿದ್ದ, ಎಲ್ಲ ಗಮನಿಸಿದ ತಾತ ಸುಮ್ಮನೆ ಏನು ನೋಡದಿದ್ದಂತೆ ಅಂಗಡಿ ಬಳಿ ಹೋಗಿ ಚಿಪ್ಸ್ ಮತ್ತು ತಂಪು ಪಾನೀಯ ತಂದರು. ಸಿನಿಮಾ ಮತ್ತೆ ಶುರುವಾಯ್ತು, ತಾತ ಪ್ರವೀಣನನ್ನು ಏನಪ್ಪ ನಿನ್ನ ಸ್ನೇಹಿತರು ಧೂಮಪಾನ ಮಾಡ್ತಾರೇನು, ವಾಸನೆ ಬರುತ್ತಿದೆ ಅಂದ್ರು, ಅದಕ್ಕೆ ಪ್ರವೀಣ ಯಾವಾಗ್ಲು ಇಲ್ಲ ತಾತ ಯಾವಾಗ್ಲಾದ್ರು ಒಮ್ಮೊಮ್ಮೆ ಅಷ್ಟೆ ಅಂದ. ಚಿಪ್ಸ್ ಮತ್ತೆ ತಂಪು ಪಾನೀಯ ಸವಿಯುತ್ತ ಸಿನಿಮ ಪಯಣ ಮುಂದುವರೆಯಿತು, ತಾತ ಮತ್ತೆ ಪ್ರವೀಣನನ್ನು ಪ್ರಶ್ನೆ ಕೇಳಿದರು, ನಿನ್ನ ಸ್ನೇಹಿತರು ಏನು ಹೇಳಿದ್ರು ಮಾಡ್ತೀಯಲ್ಲ, ಅವರು ಅಷ್ಟು ಒಳ್ಳೆಯವರೇ?? ನಿನ್ನ ಕಷ್ಟ ಕಾಲದಲ್ಲಿ ಸಹಾಯಕ್ಕೆ ಬರುವಂಥವರೇ?? ಪ್ರವೀಣ ಹೌದು ತಾತ ಬಹಳಾ ಒಳ್ಳೇ ಹುಡುಗರು, ನನಗೋಸ್ಕರ ಸ್ನೇಹಕ್ಕೋಸ್ಕರ ಪ್ರಾಣ ಬೇಕಾದ್ರು ಕೊಡ್ತಾರೆ ಅಂದ. ತಾತ ಒಮ್ಮೆ ಮನದೊಳಗೆ ನಕ್ಕು ಸುಮ್ಮನಾದರು.

ಸಿನಿಮಾ ಮುಗಿಯಿತು ಶುಭಂ ತೋರಿಸಿದರು, ಎಲ್ಲರು ಹೊರಡಲು ಶುರು ಮಾಡಿದರು, ಅಷ್ಟರಲ್ಲೆ ಮುಂದಿನ ಸೀಟಿನಲ್ಲಿದ್ದ ಒಬ್ಬ ವ್ಯಕ್ತಿ ಇದ್ದಕ್ಕಿದ್ದಂತೆ ಅಯ್ಯೊ ನನ್ನ ಪರ್ಸ್ ಕಾಣಿಸ್ತಿಲ್ಲ ಅಂತ ಕಿರುಚಲು ಶುರು ಮಾಡಿದ, ಅಲ್ಲಿದ್ದ ಜನ ಎಲ್ಲ ಗುಂಪು ಕಟ್ಟಿದರು, ಗುಂಪಿನಲ್ಲಿದ್ದ ಒಬ್ಬ ವ್ಯಕ್ತಿ ಯಾರ ಮೇಲಾದ್ರು ಅನುಮಾನ ಇದ್ಯ ಸರ್ ಅಂದ, ಆಗ ಪರ್ಸು ಕಳೆದುಕೊಂಡ ವ್ಯಕ್ತಿ ಪ್ರವೀಣನನ್ನು ತೋರಿಸಿ ಈ ಹುಡುಗನ ಮೇಲೆ ಅನುಮಾನ ನಂಗೆ ಆಗ್ಲೆ ನನ್ನ ಹಿಂದೆ ಕೈ ಹಾಕಿದ ಅನುಭವ ಆಯ್ತು ಅಂದ.ಪ್ರವೀಣನಿಗೆ ಮತ್ತು ಅವನ ಸ್ನೇಹಿತರಿಗೆ ನಡುಕ ಶುರುವಾಗಿತ್ತು. ಪ್ರವೀಣನ ಜೇಬು ಮತ್ತು ಬ್ಯಾಗ್ ಪರೀಕ್ಷೆ ಮಾಡಿದಾಗ ಪರ್ಸ್ ಸಹ ಬ್ಯಾಗಿನಲ್ಲಿತ್ತು. ಅವನ ಗೆಳೆಯರನ್ನು ಅಲ್ಲಿದ್ದವರು ಕಳ್ ನನ್ ಮಕ್ಳಾ ನೀವೇನೇನ್ ಕದ್ದೀದೀರ ತೆಗೀರಿ ಎಂದು ದಬಾಯಿಸಿದರು, ಆಗ ಪ್ರವೀಣನ ಗೆಳೆಯನಲ್ಲೊಬ್ಬ, ಸರ್ ಇವನ್ಯಾರು ಅಂತ ನಮಗೆ ಗೊತ್ತೇ ಇಲ್ಲ, ನಾವು ಸಿನಿಮಾ ನೋಡಕ್ ಬಂದಿದ್ದೀವಿ ಹೋಗ್ತೀವಿ ಅಂತ ಜಾಗ ಖಾಲಿ ಮಾಡಿಬಿಟ್ಟರು. ಅಲ್ಲಿದ್ದ ಅಷ್ಟೂ ಜನರ ಕೋಪ ಪ್ರವೀಣನ ಮೇಲೆ ತಿರುಗಿತ್ತು, ಇನ್ನೇನು ಧರ್ಮದೇಟು ಬೀಳಬೇಕು ಅನ್ನೋ ಅಷ್ಟರಲ್ಲಿ, ಪರ್ಸು ಕಳೆದುಕೊಂಡ ವ್ಯಕ್ತಿ, ಜನರ ಮುಂದೆ ನಿಂತು, ರೀ ಪರ್ಸು ಕಳ್ಕೊಂಡೋನು ನಾನು, ನಾನು ಇವನಿಗೆ ಬುದ್ಧಿ ಹೇಳ್ತೀನಿ, ಇವನನ್ನ ಪೋಲೀಸರಿಗೆ ಕೊಡ್ತೀನಿ ಅಂತ ಹೇಳಿ ತಾತನ ಜೊತೆಯಲ್ಲೇ ಚಿತ್ರ ಮಂದಿರದಿಂದ ಹೊರ ನಡೆದ.

ಹೊರಬಂದ ಮೇಲೆ ತಾತ ದಯವಿಟ್ಟು ಬಿಟ್ಟುಬಿಡಿ, ಏನೋ ಚಿಕ್ಕ ಹುಡುಗ ತಪ್ಪು ಮಾಡಿದ್ದಾನೆ ಅಂತ ಕೇಳಿಕೊಂಡರು, ಆಗ ಆ ವ್ಯಕ್ತಿ ಹಾಗೆಆಗಲಿ, ಹುಡುಗರ್ನ ಚೆನ್ನಾಗಿ ನೋಡ್ಕೋಳಿ ಹಾಳಾಗಕ್ಕೆ ಬಿಡ್ಬೇಡಿ ಎಂದು ಹೇಳಿ ಹೊರಟುಬಿಟ್ಟ. ಮನೆಗೆ ಹೋಗುವಾಗ ಪ್ರವೀಣ ತಾತನಿಗೆ, ತಾತ ನನ್ನ ಕ್ಷಮಿಸಿಬಿಡು ತಾತ, ನನ್ನ ಸ್ನೇಹಿತರನ್ನು ನಂಬಿ ನಾ ತಪ್ಪು ಮಾಡಿಬಿಟ್ಟೆ ಎಂದ, ಅದಕ್ಕೆ ತಾತ ನೀನು ನಂಬಿಕೆಗೆ ಅರ್ಹರಾದ ಸ್ನೇಹಿತರನ್ನು ಮಾಡಿಕೊಂಡಿಲ್ಲ ನನ್ನ ಮುದ್ದಿನ ಮೊಮ್ಮಗನೆ ಅದಕ್ಕೆ ಈ ರೀತಿ ಆಗಿದೆ, ಸ್ನೇಹಿತರನ್ನು ಆಯ್ದುಕೊಳ್ಳುವಾಗ ಬಹಳಾ ಹುಷಾರಾಗಿರಬೇಕು ಎಂದು ಬುದ್ಧಿವಾದ ಹೇಳಿದರು. ತಾತ ನಾನು ನಿಜವಾಗ್ಲು ಆ ಪರ್ಸ್ ಕದ್ದಿಲ್ಲ ತಾತ ದಯವಿಟ್ಟು ಮನೇಲಿ ಹೇಳ್ಬೇಡಿ ಅಂದ ಪ್ರವೀಣ, ಅದಕ್ಕೆ ತಾತ ಸುಮ್ಮನೆ ನಕ್ಕು ನೀನೇನು ಯೋಚಿಸಬೇಡಾ ನಾ ಹೇಳಲ್ಲ ಇನ್ಮೇಲೆ ಓದಿನ ಕಡೆ ಗಮನ ಕೊಡು ಇಂತಹ ಜನರ ಸಹವಾಸ ಮಾಡಬೇಡ ಅಂದ್ರು.

ಮಾರನೆಯ ದಿನ ಮುಂಜಾನೆ ಮತ್ತೆ ತಾತ ಹೊರಡಲು ಸಿದ್ಧರಾಗಿದ್ದರು.ಪ್ರವೀಣ ಸಹ ಬೀಳ್ಕೊಡಲು ಅಪ್ಪ ಅಮ್ಮನ ಜೊತೆ ಬಾಗಿಲಲಿ ನಿಂತ, ಚೆನ್ನಾಗಿ ಓದು,ಕೆಟ್ಟ ಹುಡುಗರ ಸಹವಾಸ ಮಾಡಬೇಡ ಅಂತೆಲ್ಲ ಬುದ್ಧಿಮಾತು ಹೇಳಿದ ತಾತ ಕಾರ್ ಬರುವುದನ್ನೇ ಎದುರು ನೋಡ್ತಾ ಇದ್ರು. ಕಾರ್ ಬಂತು ಕಾರಿಂದ ಡ್ರೈವರ್ ಇಳಿದು ಬಂದು ತಾತನ ಕಿಟ್ ಬ್ಯಾಗ್ ಎತ್ತುಕೊಂಡು ಹೋಗಿ ಡಿಕ್ಕಿಯಲ್ಲಿ ಹಾಕಿದ. ಪ್ರವೀಣನಿಗೆ ಇದ್ದಕ್ಕಿದ್ದಂತೆ ಶಾಕ್ ಹೊಡೆದಂತಾಯಿತು. ತಾತ ನ ಮಖ ನೋಡಿದ,ಹತ್ತಿರ ಬಂದು ಮೆಲ್ಲಗೆ ಕಿವಿಯಲ್ಲಿ ತಾತ ನೆನ್ನೆ ಇವನ ಪರ್ಸೆ ನನ್ ಬ್ಯಾಗಲ್ಲಿ ಬಂದಿದ್ದು, ಅಪ್ಪ ಅಮ್ಮನಿಗೆ ಈಗ ಹೇಳಿಬಿಟ್ರೆ ಅಂದ. ತಾತ ನಗುನಗುತ್ತ ಇವ್ನು ನಮ್ಮ ಡ್ರೈವರ್ ಸೋಮಣ್ಣ ಕಣೋ ನೆನ್ನೆ ಸಿನಿಮಾ ನೋಡ್ಬೇಕು ಅಂತಿದ್ದ ನಾನೆ ಕಾಸು ಕೊಟ್ಟು ಕಳಿಸಿದ್ದೆ ಅಂತ ಸೋಮಣ್ಣನ ಮಖ ನೋಡಿದ, ಒಮ್ಮೆ ಸೋಮಣ್ಣ ಮತ್ತೆ ತಾತ ಜೋರಾಗಿ ನಕ್ಕರು.ಪ್ರವೀಣ ತಾತನ ಇಂಟೆಲಿಜನ್ಸ್ ನೋಡಿ ದಂಗಾಗಿ ಬಿಟ್ಟಿದ್ದ. ಪ್ರವೀಣನಿಗೆ ಟಾಟಾ ಮಾಡುತ್ತ ತಾತ ಒಂದು ಮಾತು ಹೇಳಿದ್ರು, ಅದನ್ನ ಪ್ರವೀಣ ಎಂದಿಗೂ ಮರೆಯೋಹಾಗಿಲ್ಲ
" ಅವಿವೇಕಿ ಮಿತ್ರನಿಗಿಂತ ವಿವೇಕಿ ಶತ್ರು ಮೇಲು "
ಚಿತ್ರಕೃಪೆ : istockphoto.com
***********************************************************************************************

No comments:

Post a Comment