Friday, September 7, 2012

ಗುರಿ...??

ತಲೆಗೂದಲು ಕೆದರಿ
ಮುಖವೆಲ್ಲವೂ ಬೆವರಿದೆ
ಗುರಿಯೆಂಬುದು ಇನ್ನೂ ಮರೀಚಿಕೆ
ದಾರಿಯೇ ಇನ್ನೂ ನಿಶ್ಚಯವಾಗಿಲ್ಲ
ಏಕಾಂಗಿಯ ಈ ಪಯಣದಲಿ
ಗುರಿ ಮುಟ್ಟಿದರೆ ಸಾಕು ಸಾರ್ಥಕ
ಸತ್ತರೂ ಸರಿಯೆ ಸೋಲು ಬೇಕಿಲ್ಲ
ಕಿರಾತಕರು ಅಲ್ಲಲ್ಲಿ ಕೀಟಲೆಯ ಮಾಡಿಹರು
ಅಂಕುಡೊಂಕಿನ ದಾರಿಯಿದು ಡೊಂಕಾಗಿ ನಡೆ ಎಂದು
ಬುದ್ಧಿಜೀವಿಗಳೆಲ್ಲ ದಡ್ಡರಾಗಿಹರು
ಅಡ್ಡದಾರಿಯ ನನ್ನಂತ ಯುವಕರಿಗೆ ತೋರಿಹರು
ಆದರೂ ಹೊರೆಟಿಹೆನು ವಿಧಿಯ ಒಮ್ಮೆಲೆ ನಂಬಿ
ಅನಿಸುತಿದೆ ಗುರಿಯೆಡೆಗೆ ಸಾಗುತಿಹೆನೆಂದು
ಧ್ಯೇಯವನು ಮರೆಯದೇ ಧೃಢವಾಗಿ ಅವುಚಿರಲು

ಕಲ್ಲುಮುಳ್ಳುಗಳಿಲ್ಲಿ ಹೆಜ್ಜೆ ಹೆಜ್ಜೆಗೆ ನೂರು
ನಂಬಿಕೆಯ ಚಪ್ಪಲಿಯೂ ಮೋಸ ಮಾಡಿದೆ ಈಗ
ಹುಡುಕಿದರೂ ಸಿಗದಲ್ಲ ನಂಬಿಕೆಯ ಅಂಗಡಿ
ಮಾರುವವರಾರು ಇಲ್ಲ ಜಗದಲ್ಲಿ
ಜೀವವೂ ನಂಬದು ಬಡಿಯುವ ಹೃದಯವ
ಗೊತ್ತಾಗದದಕೆ ಎಂದು ನಿಲ್ಲಿಸುವುದೆಂದು
ಆದರೂ ನಂಬಿರುವೆ ಈ ನನ್ನ ವಿಧಿಯನ್ನು
ಅನಿಸುತಿದೆ ಗುರಿಯೆಡೆಗೆ ಸಾಗುತಿಹೆನೆಂದು
ಧ್ಯೇಯವನು ಮರೆಯದೇ ಧೃಢವಾಗಿ ಅವುಚಿರಲು

ಪವನ್ ಪಾರುಪತ್ತೇದಾರ :-

No comments:

Post a Comment