Wednesday, May 23, 2012

ಎಂಜಲೆಲೆ

ಕಿತ್ತಾಟ ನಡೆಯುತಿತ್ತಲ್ಲಿ
ಅಸ್ತಿತ್ವದ ಹುಡುಕಾಟ ನಡೆಯುತಿತ್ತು
ತನ್ನವರ ನಡುವೆಯೇ ಹೊಡೆದಾಟ
ಕೂಗಾಟ ಎಳೆದಾಟ ರಂಪಾಟ
ಹಿರಿತನದ ಬಡಿದಾಟ

ಮೊದಲು ನಾ ಬಂದಿರುವೆ ಆಮೇಲೆ ನೀ
ನಾ ಮೊದಲು ಬಂದಿದ್ದು ಆದ್ಯತೆಯು ನನಗೆ
ನಿನ್ನದೀ ಸ್ಥಳವಲ್ಲ ಏಕೆ ಬಂದಿರುವೆ
ಹಿರಿಯನು ನಾನಿಲ್ಲಿ ಕೊಡಿ ಎನಗೆ ಅವಕಾಶ
ನಮ್ಮಕಡೆ ಜನ ಜಾಸ್ತಿ ಹೊರಡು ಏಕಿರುವೆ

ನಿಂತಲ್ಲಿನಿಂದಲೇ ಬೆದರಿಕೆಯ ಮಾತು
ಎಲ್ಲರಿಗೂ ಹಸಿವು ಹೊಟ್ಟೆಬಾಕರು ಎಲ್ಲ
ತಮ್ಮ ಹೊಟ್ಟೆಯಷ್ಟೇ ತುಂಬಿದರೂ ಬಿಡರು
ನಾಳೆಗೂ ನಾಳಿದ್ದಿಗೂ ಕೂಡಿಡುವ ಆಸೆ

ಕೊಬ್ಬ ಬೆಳೆಸಿಕೊಂಡು ಬೀಗುವ ಹಂಬಲ
ಮಕ್ಕಳು ಮರಿಮಕ್ಕಳಿಗೂ ಪಾಲು ನೀಡುವಾಸೆ
ತಾನೇ ಎಲ್ಲವನ್ನೆಳೆದು ಮನೆಗೆ ಹೋಗುವಾಸೆ
ಗಬಗಬನೆ ಮಡಚಿಟ್ಟು ಇನ್ನೇನು ಹೊರಡಲು

ಛತ್ರದ ಕಾವಲುಗಾರ ಬಂದ ದೊಣ್ಣೆಯನು ಹಿಡಿದು
ಓಡಿದವು ನಾಯಿಗಳು ಎಂಜಲೆಲೆಗಳ ಬಿಟ್ಟು


ಪವನ್ ಪಾರುಪತ್ತೇದಾರ

No comments:

Post a Comment