Monday, December 24, 2012

ತಿರುಪತಿ ಪ್ರಸಂಗ


ಇಂಜಿನಿಯರಂಗ್ ಏಳನೆಯ ಸೆಮಿಸ್ಟರ್ ಪರೀಕ್ಷೆಯ ಕಡೆಯ ದಿನ. ಮೊದಲು ನಿರ್ಧರಿಸಿದಂತೆ ಗೆಳೆಯರೆಲ್ಲರ ತಿರುಪತಿ ಪ್ರಯಾಣ. ನನ್ನ ಗೆಳೆಯನ ತಂಗಿಯ ಮದುವೆ ಇದ್ದರಿಂದ ನಾನು ಬಸ್ಸಿನಲ್ಲಿ ಲೇಟಾಗಿ ಹೊರಡುವುದು ಮತ್ತು ನನ್ನ ಸಹಪಾಠಿಗಳೆಲ್ಲ ರೈಲಿನಲ್ಲಿ ಪ್ರಯಾಣ ಮಾಡುವುದು ಎಂದು ಮೊದಲೇ ನಿರ್ಧರಿಸಿದ್ದೆವು. ಅಂದುಕೊಂಡಂತೆ ಪರೀಕ್ಷೆ ಮುಗಿದೊಡನೆ ಎಲ್ಲ ರೈಲಿನಲ್ಲಿ ಹೊರಟರು, ನಾನು ನನ್ನ ಗೆಳೆಯನ ತಂಗಿ ಮದುವೆ ಮುಗಿಸಿ ಸುಮಾರು 10:30 ಕ್ಕೆ ಮೆಜೆಸ್ಟಿಕ್ ತಲುಪಿದೆ. ಅಂದು ಶುಕ್ರವಾರವಾದ್ದರಿಂದ ಎಲ್ಲ ಬಸ್ಸುಗಳು ತುಂಬಿ ಹೋಗಿದ್ದವು. ರಿಸರ್ವೇಶನ್ ಸೀಟುಗಳೇ ಹೆಚ್ಚಿದ್ದವು. ಅಂತೂ ಇಂತು ಆಂದ್ರದ ಕಂಡಕ್ಟರ್ ಅನ್ನಯ್ಯ ಒಬ್ಬನಿಗೆ 50 ಹೆಚ್ಚಿಗೆ ಕೊಟ್ಟು ಸೀಟು ಗಿಟ್ಟಿಸಿದೆ. ಮೆಜೆಸ್ಟಿಕ್ಕಿನಲ್ಲಿ ಇಂತಹ ಧಂಧೆಯೇ ನಡೆಯುತ್ತದೆ. ಸೀಟು ಹಿಡಿದು ಕೊಡುವುದು. ಮೊದಲೆ ಕಂಡಕ್ಟರ್ ಹತ್ರ ಡೀಲ್ ಕುದುರಿಸಿ ಟಿಕೆಟ್ ಖರೀದಿಸಿ ನಂತರ ಆ ಟಿಕೆಟ್ಟನ್ನು ಬೇರೆಯವರಿಗೆ ಮಾರುವುದು ಇವೆಲ್ಲ. ಹೇಗೋ ಉದರ ನಿಮಿತ್ತಂ ಬಹುಕೃತ ವೇಷಃ ಅಂದುಕೊಂಡು ಪ್ರಯಾಣ ಶುರು ಮಾಡಿದೆ.

ಬೆಳಿಗ್ಗೆ ತಿರುಪತಿ ಸೇರುವಷ್ಟರಲ್ಲಿ ನನ್ನ ಸ್ನೇಹಿತರೆಲ್ಲ ಸೇರಿದ್ದರು. ಅಲ್ಲಿ ಯಾರಿಗೂ ತೆಲುಗು ಬರುತ್ತಿರಲಿಲ್ಲ. ಪಾಪ ರೈಲ್ವೇ ನಿಲ್ದಾಣದಲ್ಲಿ ಬಕಪಕ್ಷಿಗಳಂತೆ ನನ್ನೇ ಎದುರು ನೋಡುತಿದ್ದರು. ನಾ ಬಂದೊಡನೆ ಎಲ್ಲರ ಕಣ್ಣಲ್ಲೂ 500ಕ್ಯಾಂಡಲ್ ಬಲ್ಬ್ ಹೊಳೆದಂತಾಯಿತು. ನನಗೊಬ್ಬನಿಗೇ ತೆಲುಗು ಬರುತಿದ್ದರಿಂದ ಅಲ್ಲಿ ನಾನೆ ಬಾಸು.ನಡೀರೋ ಹೋಗೋಣ ಬೆಟ್ಟದ ಮೇಲಕ್ಕೆ ಅಂತ ಎಲ್ಲರೂ ನಮ್ಮ ಬ್ಯಾಗುಗಳನ್ನ ಹೆಗಲಿಗೆ ಹಾಕಿಕೊಂಡು ತಿರುಪತಿಯ ರೋಡಿನಕ್ಕಪಕ್ಕದಲ್ಲಿರುವ ಸಿನಿಮಾ ಪೋಸ್ಟರ್ರುಗಳನ್ನ ನೋಡುತ್ತ ಬಸ್ ಸ್ಟಾಂಡ್ ಸೇರಿದೆವು.ಜೊತೆಯಲ್ಲಿ ಬಂದಿದ್ದ ಸುನೀಲ, ಮಗಾ ಬೆಟ್ಟ ನಡೆದು ಹತ್ತಣ ಮಗ ಅಂದ. ನನಗೋ ಸಂಬೇರಿತನ, ಅಷ್ಟು ದೂರ ನಡೆಯುವುದೇಕೆ ಮುಚ್ಕೊಂಡು ಬಸ್ಸಲ್ಲಿ ಹೋಗೋಣ ನಡಿ ಎಂದೆ. ಈ ವಿಷ್ಯ ಹೊರಡೋಕೆ ಮುಂಚೆ ಸಹ ಚರ್ಚೆಯಾಗಿ ನಾ ಬೇಡವೇ ಬೇಡ ಅಂದಿದ್ದೆ. ಪಾಪ ಮರು ಮಾತಿಲ್ಲದೆ ಎಲ್ಲರೂ ಸುಮ್ಮನಾದರು.

ಅಲ್ಲೇ ಹತ್ತಿರದಲ್ಲೊಬ್ಬ ವ್ಯಕ್ತಿ ನಿಂತಿದ್ದ, ಸುಮಾರು ೪೦ ವರ್ಷದವನಿರಬಹುದು, ನಾನು ಅವನ ಬಳಿ ಹೋಗಿ ತೆಲುಗಿನಲ್ಲಿ ಇಲ್ಲಿ ದರ್ಶನ ಟಿಕೆಟ್ ಕೊಡ್ತಾರಲ್ಲ ಎಲ್ಲಿ ಅಂತ ಕೇಳ್ದೆ, ಒಮ್ಮೆ ನನ್ನನ್ನೆ ದಿಟ್ಟಿಸಿ ನೋಡಿದ ಅವನು, ಎಷ್ಟ್ ಜನ ಇದ್ದೀರ ಎಂದು ಕನ್ನಡದಲ್ಲಿ ಕೇಳಿದೆ. ನನಗೆ ಸಡನ್ ಶಾಕ್. ಇವನಿಗೆ ನಾನು ಕನ್ನಡದವನು ಅಂತ ಹೇಗ್ ಗೊತ್ತಾಯ್ತು ಅಂತ. ಸ್ವಲ್ಪ ತಡವರಿಸಿಕೊಂಡು 6 ಜನ ಸಾರ್, ನಿಮಗೆ ಕನ್ನಡ ಚೆನ್ನಾಗ್ ಬರುತ್ತೆ ಅನ್ಸುತ್ತೆ ಹೇಗೆ ಗೊತ್ತಾಯ್ತು ನಾವು ಕನ್ನಡದವ್ರು ಅಂತ ಅಂದೆ. ಅದಕ್ಕವ, ನಮ್ಗೆ ಎಲ್ಲಾ ಗೊತ್ತಾಗುತ್ರಿ, ಬನ್ನಿ ನನ್ ಜೊತೆ ದರ್ಶನ ಟಿಕೆಟ್ ಕೊಡಿಸ್ತೀನಿ ಅಂದ. ತಿರುಪತೀಲಿ ಇಂತ ಬ್ರೋಕರ್ ಗಳು ಬಹಳ ಸಿಗ್ತಾರೆ, ಅದ್ರಲ್ಲಿ ಕೆಲವ್ರು ಕಳ್ರು ಇರ್ತಾರೆ, ಅದಕ್ಕೆ ನಾನು ಪರ್ವಾಗಿಲ್ಲ ಅಡ್ರೆಸ್ ಹೇಳಿ ನಾವ್ ಹೋಗ್ತೀವಿ ಅಂದೆ. ಆತ ನಾನೇನು ಕಳ್ಳ ಅಲ್ಲ ಬನ್ರಿ ಯೋಚನೆ ಮಾಡ್ಬೇಡಿ ಅಂದುಬಿಟ್ಟ. ಏನ್ ಗುರು ಇವ್ನು ನಾನ್ ಮನ್ಸಲ್ಲಿ ಅಂದುಕೊಂಡಿದ್ದು ಹಾಗೆ ಹೇಳ್ತಾನೆ ಅಂದುಕೊಂಡು ಸರಿ ನಡೀರಿ ಹೋಗೋಣ ಅಂತ ಅವನಿಂದೆ ಹೆರೆಟೆವು.

ಬಸ್ ಸ್ಟ್ಯಾಂಡ್ ಪಕ್ಕದ ಶ್ರೀ ವೆಂಕಟೇಶ್ವರ ಕ್ಯೂ ಕಾಂಪ್ಲೆಕ್ಸ್ ಎಂಬ ಜಾಗಕ್ಕೆ ಕರೆದೊಯ್ದ ನಮಗೆ, ಇಲ್ಲೇ ಸ್ನಾನ ಮಾಡಿ, ತಿಂಡಿ ಎದ್ರುಗಡೆ ಇರೋ ಡಬ್ಬ ಅಂಗಡೀಲಿ ತಿನ್ನಿ ಚೆನ್ನಾಗಿರುತ್ತೆ, ಅಷ್ಟರಲ್ಲಿ ನಾನು ಬರ್ತೀನಿ ಒಟ್ಗೆ ಟಿಕೆಟ್ ತೊಗೋಳಾಣ ಅಂದ. ನಮ್ ಹುಡ್ಗ ಒಬ್ಬ ನೀವು ಜಾಗ ತೋರ್ಸಿ ಸಾಕು ನಾವೆ ತೊಗೋತೀವಿ ಅಂದ, ಆ ವ್ಯಕ್ತಿ ನಾನು ದೇವರ ದರ್ಶನ ಮಾಡಿ ತುಂಬಾ ದಿನ ಆಯ್ತು ನಿಮ್ ಜೊತೆ ನಾನು ಬರ್ತೀನಿ ಅಂದ. ನಮಗೆಲ್ಲ ಒಂದು ರೀತಿಯ ಗಾಬರಿ, ಇವನು ಕಳ್ಳ ಇರ್ಬೇಕು ನಮ್ಮ ಬಳಿ ದೋಚಕ್ಕೆ ಏನೋ ಪ್ಲಾನ್ ಮಾಡ್ತಿದ್ದಾನೆ ಅಂತ. ಸರೀ ಹೇಗಾದ್ರು ತಪ್ಪಿಸ್ಕೋಬೇಕು ಅಂತ ಸರಿ ನೀವು ಎಲ್ಲೋ ಹೊರಟಿದ್ದೀರ ಹೋಗಿ ಬನ್ನಿ ಅಷ್ಟರಲ್ಲಿ ನಾವು ರೆಡಿ ಆಗ್ತೀವಿ ಅಂದು ಅವನ್ನ ಕಳಿಸಿದೆ. ಎಲ್ಲ ಕಾರ್ಯಗಳನ್ನು ಅಲ್ಲಿ ಮುಗಿಸಿ ಇನ್ನೇನು ತಪ್ಪಿಸ್ಕೋಬೇಕು ಎಲ್ಲಿದ್ನೋ ಗೊತ್ತಿಲ್ಲ ಆಸಾಮಿ ಎದುರು ನಿಂತ, ಹೊರಡೋಣ ಟಿಕೆಟ್ ತೊಗೋಳಕ್ಕೆ  ಅಂತ.
ವಿಧಿ ಇಲ್ಲ ಹೇಗಾದ್ರು ತಪ್ಪಿಸ್ಕೋಬೇಕು ಐಡಿಯಾ ಬರ್ತಿಲ್ಲ. ಪಕ್ಕದಲ್ಲಿ ಯಾರೋ ಒಬ್ರು ನಡೆದುಕೊಂಡು ಹತ್ತೋವ್ರಿಗೆ ದಾರಿಲೆ ಟಿಕೆಟ್ ಕೊಡ್ತಾರಂತೆ, ಅದ್ರಲ್ಲಿ ದರ್ಶನ ಬೇಗ ಆಗುತ್ತಂತೆ ಅಂತ ಮಾತಾಡ್ಕೊಂಡಿದ್ದು ಕೇಳಿಸ್ತು. ಹಾಗೆ ಒಂದು ಉಪಾಯ ಬಂತು ಟಿಕೆಟ್ ಕ್ಯೂ ಬಳಿ ಹೋಗ್ತಿದ್ದ ನಾವು ಒಮ್ಮೆ ನಿಂತು, ಸಾರ್ ನಾವು ನಡೆದುಕೊಂಡು ಹತ್ತೀವಿ, ದಾರಿಲೆ ಟಿಕೆಟ್ ತೊಗೋತೀವಿ ಅಂದೆ. ಒಮ್ಮೆ ಮಾರ್ಮಿಕವಾಗಿ ನಕ್ಕು ಹೋ ಹೌದಾ, ಒಳ್ಳೇದೆ ಆಯ್ತು ನಡೀರಿ ನಿಮ್ ಜೊತೆ ನಾನು ನಡೆದೇ ಬರ್ತೀನಿ ಅಂದುಬಿಡೋದೆ. ನಡೆದು ಹತ್ತುತೀವಿ ಅಂದ್ರೆ ಬರಲ್ಲ ಇವ್ನಿಂದ ತಪ್ಪಿಸ್ಕೊಳ್ಳಬಹುದು ಅಂದ್ಕೊಂಡ್ರೆ ಅಲ್ಲು ಪ್ಲಾನ್ ಉಲ್ಟಾ, ಸುತರಾಂ ಬೆಟ್ಟ ನಡೆದು ಹತ್ತೋದು ಬೇಡ ಅಂದಿದ್ದ ನನ್ನ ಬಾಯಿಂದಲೇ ನಡೆದು ಹತ್ತೋಣ ಅನ್ನೋ ಮಾತು ಬಂತು.

ಕ್ಯೂ ಕಾಂಪ್ಲೆಕ್ಸಿನಿಂದ 5 ರೂ ಪ್ರತಿ ತಲೆಗೆ ಎಂಬಂತೆ ಆತನೆ ಒದು ಜೀಪ್ ಅಲಿಪಿರಿಗೆ ಮಾಡಿದ. ಅಲಿಪಿರಿ ಇಂದಲೆ ಬೆಟ್ಟವನ್ನು ನಡೆದು ಹತ್ತುವ ಯಾತ್ರಿಗಳು ಶುರುಮಾಡುವುದು. ತನ್ನ ಪಾಲಿನ 5 ರೂ ತಾನೇ ಕೊಟ್ಟ. ಬೆಟ್ಟ ಹತ್ತುವ ಮುಂಚೆ ಒಂದು ಕವರ್ ತೆಗೆದುಕೊಂಡು ಚಪ್ಪಲಿಗಳನ್ನೆಲ್ಲ ಅದರಲ್ಲಿ ಹಾಕಿ ಬಿಸಾಡಿದ್ದಾಯಿತು. ಮೊದಲನೇ ಮೆಟ್ಟಿಲ ಹತ್ತುವ ಮುಂಚೆ ವೆಂಕಟರಮಣ ಗೋವಿಂದಾ ಗೋವಿಂದ ಎಂದು ಕೂಗು ಹಾಕಿ ಶುರು ಮಾಡಿದ್ದು ಆಯಿತು.

ಜೊತೆಯಲ್ಲೇ ಇದ್ದ ಆತನ, ನಿಮ್ಮ ಹೆಸರೇನು ಸಾರ್ ಅಂದೆ ಗೋವಿಂದಪ್ಪ ಅಂದ, ಏನು ಕೆಲಸ ನಿಮಗಿಲ್ಲಿ ಎಂದೆ. ಹಸಿದವ್ರಿಗೆ ಊಟ ಹಾಕೋದು ಅಂದ, ಹುಬ್ಬುಗಳ ಗಂಟಿಕ್ಕಿಕೊಂಡು ಒಮ್ಮೆ ಅವನ ಮಖ ನೋಡಿದೆ. ನಗುತ್ತಾ ಅಡುಗೆ ಕೆಲಸ ಕಣಪ್ಪ, ಒಬ್ಬ ಕಾಂಟ್ರಾಕ್ಟರ್ ಹತ್ರ ಕೆಲಸ ಮಾಡ್ತಾ ಇದ್ದೀನಿ ಇವತ್ತು ರಜ ಇತ್ತು, ಅದಕ್ಕೆ ದೇವರ ದರ್ಶನ ಮಾಡಣ ಅಂದುಕೊಂಡೆ ಅಂದ. ಸುಮಾರು 500 ಮೆಟ್ಟಿಲಾಯ್ತು ನಾವೆಲ್ಲರೂ ಒಟ್ಟಿಗೆ ಹತ್ತುತಿದ್ದೆವು. ಸುಸ್ತಾಗಿ ಒಂದು ಕಡೆ ಕೂತು ಹೊರಡುವಾಗ, ಜೊತೆಯಲ್ಲಿದ್ದ ಮುರುಳಿ ಮಗಾ ಎಲ್ಲೋ ಗೋವಿಂದಪ್ಪ ಅಂದ. ನಮ್ ಜೊತೇನೆ ಮಾತಾಡ್ಕೊಂಡು ಬರ್ತಿದ್ದ ಇದ್ದಕ್ಕಿದ್ದಂಗೆ ಎಲ್ಲಿ ಹೋದ ಅಂತ ಗಾಬರಿ ಆಯ್ತು. ತಕ್ಷಣ ಮೇಲೆ ವೇಗವಾಗಿ ಹತ್ತುತ್ತಾ ಹೋದ್ವಿ ಸಿಗ್ಲಿಲ್ಲ, ಒಂದು ಜಾಗದಲ್ಲಿ ಸುಮಾರು ಒಂದು ಘಂಟೆ ಕೂತು ಕಾದ್ವಿ ಬಂದಿಲ್ಲ. ಎಲ್ಲರ ಮನಸಲ್ಲು ಒಂಥರಾ ಭಯ ಎಲ್ಲಿ ಹೋದ ವ್ಯಕ್ತಿ  ಅಂತ. ಹಾಗೂ ಹೀಗು ಸುಮಾರು 3900 ಮೆಟ್ಟಿಲು ಹತ್ತಿ ದರ್ಶನ ಮಾಡುತ್ತಿರುವಾಗ ವೆಂಕಟರಮಣ ನನ್ನ ನೋಡಿ ನಗುತ್ತ ನಗುತ್ತಾ ಏನಪ್ಪ ಬೆಟ್ಟ ನಡೆದುಕೊಂಡು ಹತ್ತಲ್ಲ ಅಂತಿದ್ದೆ ಅಂತ ಅಂದಹಾಗಾಯ್ತು. ಹೊರಬಂದು ಕೂತಿದ್ದಾಗ. ಬೆಟ್ಟ ಹತ್ತಿದ್ದ ಆಯಾಸವೆಲ್ಲ ಮುಕ್ತವಾಗಿತ್ತು. ಒಂಥರಾ ನಿರಾಳ ಮನೋಭಾವ, ಆ ಜನ ಜಂಗುಳಿಯಲ್ಲೂ ಸಹ ವಿಚಿತ್ರವಾದ ಪ್ರಶಾಂತತೆ. ಹಾಗೆ ಗೋವಿಂದಪ್ಪ ನ ಬರುವಿಕೆ ನಮ್ಮ ಕೈಲಿ ಬೆಟ್ಟ ಹತ್ತಿಸುವಿಕೆ ಇವೆಲ್ಲ ನಮ್ಮ ಚರ್ಚೆಯ ವಿಷಯಗಳಾಗಿ ಮಾತ್ರವಲ್ಲದೆ ಭಕ್ತಿಯ ರೂಪಕಗಳಾಗಿದ್ದವು.

1 comment:

  1. ನಾನೆ ತಿರುಪತಿಗೆ ಹೋಗಿ ಬಂದ್ ಹಾಗಾಯ್ತು.. ಒಳ್ಳೆ ಅನುಭವ ಕಥನ..
    ಕೊನೆಗೂ ಆ ಗೋವಿಂದಪ್ಪ ಎನಾದ ಅಂತ ಗೊತ್ತೇ ಆಗ್ಲಿಲ್ಲ.?!

    ReplyDelete