Sunday, June 2, 2013

ಪವನ್'ಸ್ ಡೈರೀಸ್ - 6

ಆಶಾಡದ ಗಾಳಿ ಬೀಸಲು ಶುರುವಾಗಿದ್ದ ಕಾಲ, ಶಾಲೆ ಬಿಟ್ಟರೆ ಸಾಕು ಮನೆಕಡೆ ಓಡಿ ಗಾಳಿಪಟ ಹಾರಿಸೋ ಕಾಲ.
ಕಡೆಯ ಪೀರಿಯಡ್ಡಿನ ಉದ್ದನೆ ಕಿರ್ರ್ ಎಂಬ ಬೆಲ್ಲು ಮುಗಿಯುವಷ್ಟರಲ್ಲೇ ಅರ್ಧ ಮನೆಯ ದಾರಿ ತಲುಪುವಷ್ಟು ಓಡಿಬಿಡುತಿದ್ದೆ ಅಷ್ತು ಹತ್ತಿರವೈತ್ತು ನಮ್ಮನೇಗು ಶಾಲೆಗು. ಮನೆಗೆ ಬಂದು ಗಾಳಿಪಟ ಹೊತ್ತು ಬೀದಿಯಲ್ಲೆ ಹಾರಿಸಲು ಶುರು, ಆದರೆ ಪ್ರತಿ ದಿನ ಒಂದಲ್ಲ ಒಂದು ತೊಡರು, ಕರೆಂಟ್ ತಂತಿಗೋ ಎದುರು ಮನೆ ನೀಲಗಿರಿ ಮರಕ್ಕೊ ಅಥವಾ ನಮ್ಮನೆ ತೆಂಗಿನ ಮರಕ್ಕೋ ಪಟ ಸಿಕ್ಕಿ ಹಾಕಿಕೊಂ...ಡುಬಿಡುತಿತ್ತು. ಅದನ್ನ ಬಿಡಿಸಿಕೊಳ್ಳೋ ಪ್ರಯತ್ನದಲ್ಲಿ ಪಛರಿದು ಹೋಗ್ತಿತ್ತು. ಮತ್ತೆ ಪ್ರಜಾವಾಣಿಯ ಹಾಳೆ ಸ್ವಲ್ಪ ಅನ್ನದ ಅಗುಳು ಮತ್ತು ಎರಡು ತೆಂಗಿನ ಕಡ್ಡಿ ಹೊತ್ತು ಮೂಲೆ ಮನೆ ನಾಗಣ್ಣನ ಹತ್ರ ಓಡ್ತಿದ್ದೆ.

ನಾಗಣ್ಣ ನೇಯ್ಗೆ ಕೆಲಸಗಾರ, ಗಾಳಿಪಟ ಹಬ್ಬದ ದಿನ ವಿಚಿತ್ರವಾದ ಗಾಳಿಪಟಗಳನ್ನೆಲ್ಲಾ ಹಾರಿಸ್ತಾ ಇದ್ದ, ಅದಕ್ಕೆ ನಮಪ್ಪನ್ನ ಸಹ ನಾನು ಯಾವತ್ತು ಗಾಳಿಪಟ ಮಾಡಿಕೊಡು ಅಂತ ಕೇಳ್ತಿರ್ಲಿಲ್ಲ. ನಾಗಣ್ಣನ ಹತ್ರ ಹೋಗಿ ಗಾಳಿಪಟಕ್ಕೆ ಬೇಕಾದ ವಸ್ತುಗಳನ್ಢ ಹಿಡಿದು ನಿಂತರೆ ಸಾಕು, ಲಟ ಪಟ ಲಟ ಪಟ ಎಂದು ಬಡಿಯುವ ಮಗ್ಗಕ್ಕೆ ಲಾಳಿ ಬದಲಿಸಿ ಮತ್ತೊಂದು ಬಾಬಿನ್ ಕೇಳುವಷ್ಟ್ರರಲ್ಲಿ ನಂಗೊಂದು ಗಾಳಿಪಟ ಮಾಡಿಕೊಡ್ತಿದ್ದ. ನಾಗಣ್ಣ ಲಾಂಡಾ ಬೇಡ ನೆತ್ತಿ ಸೂತ್ರ ಹಾಕ್ಕೊಡು ಅಂತ ಹಾಕುಸ್ಕೊಂಡು ಪಟ ಹಿಡ್ಕೊಂಡು ಅಮ್ಮನ ಬಳಿ ಓಡಿಬರ್ತಿದ್ದೆ. ಅಮ್ಮ ಯಾವುದೋ ಹಳೇ ಪಂಚೆ ಸೀರೆ ಹರಿದು ಬಾಲಂಗೋಸಿಗೆ ಅಂತ ಕೊಡೋರು, ಅದನ್ನ ಪಟಕ್ಕೆ ಕಟ್ಟಿ ನೈಲಾನ್ ದಾರ ಸೇರ್ಸಿ ಹತ್ತಿಸಿ ಇನ್ನೇನು ನನ್ನ ಗಾಳಿಪಟ ಮುಗಿಲು ಮುಟ್ಟುತ್ತದೆ ಅನ್ನೋ ಅಷ್ಟ್ರಲ್ಲೇ ಕರೆಂಟು ಕಂಬಕ್ಕೋ ತೆಂಗಿನ ಮರಕ್ಕೋ ಸಿಕ್ಕಿ ಹರಿದು ಹೋಗ್ತಿತ್ತು.

ಹಬ್ಬ ಹತ್ತಿರ ಬರ್ತಿತ್ತು ಈ ಸಲಿ ಏನಾದ್ರು ಆಗಲಿ ನನ್ನ ಪಟ ಆಕಾಶಕ್ಕೆ ಹಾರಲೇ ಬೇಕು ಅನ್ನೋ ಆಸೆ ಇತ್ತು ನನಗೆ, ಆದರೆ ಪೇಪರ್ ಗಾಳಿಪಟ ಅಷ್ಟು ಮೇಲೆ ಹೋಗೋ ನಂಬಿಕೆ ಇರಿಲ್ಲ ನನಗೆ, ಅಪ್ಪನ ಹತ್ರ ಕಾಡಿಬೇಡಿ ೧೦ ರೂ ಅಮ್ಮನ ಹತ್ರ ೧೦ ರೂ ತಾತನ ಹತ್ರ ೫ ರೂ ಪಡೆದಿದ್ದೆ. ಬರೀ ನೈಲಾನ್ ದಾರವಾದ್ರೆ ಪಟ ಮೇಲೆ ಹಾರಿದಾಗ ಗಾಳಿಯ ರಭಸ ಹೆಚ್ಚಾಗಿ ದಾರ ಕತ್ತರಿಸೋ ಸಾಧ್ಯತೆ ಇತ್ತು ಅದಕ್ಕೆಂದೇ ನಾಗಣ್ಣನ ಪುಸಲಾಯಿಸಿ ದಾರಕ್ಕೆ ಮಾಂಜಾ ಹಾಕಿಕೊಡಲು ಒಪ್ಪಿಸಿದ್ದೆ. ಗಾಳಿಪಟ ಹಾರಿಸುವಾಗ ಮಾಂಜಾದಾರ ಬಹಳಾ ಅವಶ್ಯ, ನಮ್ಮ ಪಟ ಹಾರಿಸಿದಾಗ ಆಕಾಶದಲ್ಲೆ ಗಾಳಿಪಟದ ಯುದ್ಧಗಳು ನಡೆಯುತ್ತವೆ, ಪೇಂಚ್ ಹಾಕೋದು ಅಂತಾರೆ ಅದನ್ನ, ಪೇಂಚ್ ಹಾಕಿ ನಮ್ಮ ಪಟದ ದಾರವನ್ನು ಬೇರೆಯವರು ತಮ್ಮ ಕಡೆ ಎಳೆದುಕೊಳ್ತಾರೆ, ಅಕಸ್ಮಾತ್ ಎಳೆಯೋ ಭರದಲ್ಲಿ ನಮ್ಮ ಪಟದ ದಾರ ಪುಸಕಲಾಗಿದ್ದಲ್ಲಿ ಮಾಂಜಾ ಇಲ್ಲದಿದ್ದಲ್ಲಿ ಪಟ ಕಟ್ ಆಗಿ ಹೋಗುತ್ತದೆ. ಅದಕ್ಕೆ ಹಬ್ಬಕ್ಕೆ ಮಾಂಜಾದಾರವನ್ನೇ ಬಳಸಬೇಕು ಅಂತ ಮೊದಲೇ ನಿರ್ಧಾರ ಮಾಡಿದ್ದೆ.

ಮಾಂಜಾ ದಾರ ಮಾಡೋದು ಒಂದು ರೀತಿಯ ಕಲೆ, ನಗರ್ತರ ಪೇಟೆಯಲ್ಲಿ 3 ರೂನ ದೊಡ್ಡ ಗಾಳಿಪಟದ ಜೊತೆ ಮಾಂಜಾ ಗಡ್ಡೆಗಳು ಮತ್ತೆ ಒಮ್ದು ದೂಡ್ಡ ಬಾಬಿನ್ ನೈಲಾನ್ ದಾರ ತಂದಿದ್ದೆ. ಹಾಗೆ ಪಾಂಪುಟ್ಟಿಗಳ ( ಪೇಪರ್ ಆಯುವವರು ಅಥವಾ ಹಕ್ಕಿಪಿಕ್ಕಿಗಳು) ಸಹಾಯದಿಂದ ಬಿಸಾಕಿರುವ ಟ್ಯೂಬ್ಲೈಟನ್ನು ನುಣ್ಣಗೆ ಪುಡಿ ಮಾಡಿಸಿಕೊಂಡು ಬಂದಿದ್ದೆ, ಅದಕ್ಕೆ ಅವರಿಗೆ 2 ಕೊಟ್ಟಿದ್ದೆ ಕೂಡ. ಪಟ ಜೋಪಾನವಾಗಿ ಮನೆಯೊಳಗಿಟ್ಟು ಮಾಂಜಾ ಗಡ್ಡೆಗಳನ್ನ ಮತ್ತು ದಾರವನ್ನ ಹೊತ್ತು ನಾಗಣ್ಣನ ಬಳಿ ಹೋಗಿದ್ದೆ, ನಾಗಣ್ಣ ಅಲ್ಲೆ ಮನೆ ಪಕ್ಕ ಖಾಲಿಜಾಗದಲ್ಲಿದ್ದ ಒಮ್ದಷ್ಟು ಸೊಪ್ಪುಸೆದೆ ಆಯ್ದು ಬೆಂಕಿಹಚ್ಚಿ ಅದರೆ ಮೇಲೆ ಮಡಿಕೆ ಇಟ್ಟು ಎರಡು ಕೋಳಿಮೊಟ್ಟೆ ಮಾಂಜಾ ಗಡ್ಡೆ ಜೊತೆ ಸ್ವಲ್ಪವೇ ಸ್ವಲ್ಪ ನೀರು ಬೆರೆಸಿ ಕುದಿಸಿದ. ಸ್ವಲ್ಪ ಹೊತ್ತು ಕುದ್ದಮೇಲೆ ನೈಲಾನ್ ದಾರವನ್ನು ಅದರಲ್ಲಿ ಅದ್ದಿ ಎರಡು ಮರಗಳ ನಡುವೆ ಪೂರ್ತಿ ಬಾಬಿನ್ ದಾರವನ್ನು ಸುತ್ತಿದ. ನಂತರ ಟ್ಯೂಬ್ಲೈಟ್ ಪುಡಿಯನ್ನು ಕೈಗೆ ಕವರ್ ಹಾಕಿಕೊಂಡು ತೆಗೆದುಕೊಂಡು ಪೂರ್ತಿ ದಾರಕ್ಕ ಮೆತ್ತಿದ. ಅದು ಆರಲು ಸುಮಾರು ೩ ಘಂಟೆಗಳ ಕಾಲ ಬೇಕು, ಅಲ್ಲಿವರೆಗು ಅಲ್ಲೇ ಕಾದಿದ್ದೆ. ಆಮೇಲೆ ದಾರ ಪೂರ್ತಿ ನಾಗಣ್ಣ ಮತ್ತೆ ಬಾಬಿನ್ನಿಗೆ ಸುತ್ತಿ ಕೊಟ್ಟ, ಅಬ್ಬ ಅಂತು ಇಂತು ಮಾಂಜಾ ದಾರ ರೆಡಿ, ಯಾವುದೋ ಆಯುಧ ಕೈಗೆ ಸಿಕ್ಕಂತಾಯ್ತು. ಮನಸಲ್ಲೇ ಈಗ ಹಾಕ್ಲಿ ನನ್ನ ಪಟಕ್ಕೆ ಪೇಂಚು, ಯಾವನ್ ಹಾಕ್ತಾನೋ ಅವ್ನ ದಾರಾನೆ ಕಟ್ಟು ಅಂದುಕೊಂಡು ಮನೇಗೆ ಮರಳಿದೆ.

ಗಾಳಿಪಟದ ಹಬ್ಬ ಬಂದಾಯ್ತು, ಈ ಸಲಿ ನಾಗಣ್ಣ ತನ್ನ ತರಾವರಿ ಗಾಳಿಪಟದ ಸಿದ್ಧತೆಯಲ್ಲಿದ್ದ, ಅದಕ್ಕೆ ನನ್ನ ಪಟಕ್ಕೆ ನಾನೆ ನಾಗಣ್ಣನ ಬಳಿ ನೋಡಿ ಕಲಿತಿದ್ದ ನೆತ್ತಿ ಸೂತ್ರ ಹಾಕ್ಕೊಂಡಿದ್ದೆ. ಯಾವುದೇ ಮರಗಿಡಗಳಿಗೆ ಕರೆಂಟ್ ಕಂಬಕ್ಕೆ ಸಿಕ್ಕಬಾರದೆಂದು ಮನೆಯ ಮಾಡಿ ಮೇಲಿನಿಂದ ಪಟ ಹಾರಿಸಲು ಸಿದ್ಧತೆ ಮಾಡಿಕೊಂಡಿದ್ದೆ. ಅಂದು ಗಾಳಿಪಟದ ಹಬ್ಬ ಬೇರೆ, ಆಕಾಶದ ತುಂಬೆಲ್ಲ ಪಟಗಳ ಚಿತ್ತಾರ, ಅವುಗಳ ನಡುವೆಯೇ ನನ್ನ ಪಟ ಸಹ ಹಾರಿಸಿದ್ದೆ, ನನ್ನ ಅದೃಷ್ಟವೋ ಏನೋ ಎಂಬುವಂತೆ ಯಾವುದೇ ಲೈಟು ಕಂಬ ತೆಂಗಿನ ಮರ ನೀಲಗಿರಿ ಮರಕ್ಕೆ ಸಿಕ್ಕಿಕೊಳ್ಳದೆ ಪಟ ಮೇಲೆ ಹಾರುತಿತ್ತು. ಅಕ್ಕ ಪಕ್ಕದ ಮನೆ ಗೆಳೆಯರು ಸಹ ನನ್ನ ಪಟದ ಓಘ ನೋಡಿ ಮಹಡಿ ಮೇಲೆ ಬಂದರು, ನಾನು ಮಾಂಜಾ ದಾರದ ಪೂರ್ತಿ ಡೀಲ್ ಬಿಟ್ಟಿದ್ದೆ, ಬಂದ ಗೆಳೆಯರು ಲೋ ಎಲ್ಲೋ ನಿನ್ನ ಪಟ ಎಂದು ಕೇಳುವಾಗ ಅಕೋ ಅಲ್ಲಿ ಚಿಕ್ಕದಾಗಿ ಸೂರ್ಯನ ತರ ಡಿಸೈನ್ ಇದ್ಯಲ್ಲ ಅದೇ ಅಂತ ತೋರುಸ್ತಿದ್ದೆ, ನನ್ನ ಆನಂದಕ್ಕೆ ಪಾರವೇ ಇರಲಿಲ್ಲ. ನಡುವೆಯೇ ಯಾರೋ ಪೇಂಚು ಹಾಕಿದರು, ಮಾಂಜಾ ಪ್ರಭಾವ ನಾ ಒಂದೆರಡು ಸಲಿ ಜಗ್ಗಿದ್ದಕ್ಕೆ ಅವರ ದಾರವೇ ಕಟ್ ಆಗಿತ್ತು. ನನ್ನೊಡನೆ ನನ್ನ ಪಟ ನೋಡುತಿದ್ದ ಗೆಳೆಯನೊಬ್ಬ ಪಟ ಕಟ್ಟು ಅಂತ ಕಟ್ ಆದ ಗಾಳಿಪಟದ ಬೆನ್ನೇರಿ ಹೊರಟ. ನನ್ನ ಗಾಳಿಪಟ ಮುಗಿಲ ಚುಂಬಿಸಿ ನರ್ತಿಸುತಿತ್ತು. ಅಪ್ಪ ಅಮ್ಮ ಎಲ್ಲರನ್ನು ಕರೆದು ತೋರಿಸಿದೆ ಪೇಪರ್ ಚೂರುಗಳನ್ನು ದಾರದಲ್ಲಿ ಸೇರಿಸಿ ಜಗ್ಗಿ ಜಗ್ಗಿ ಸಂದೇಶವನ್ನು ನನ್ನ ಪಟಕ್ಕೆ ಕಳುಹಿಸುತಿದ್ದೆ.

ಇದ್ದಕ್ಕಿದ್ದಂತೆ ಯಾಕೋ ನನ್ನ ಕೈ ಸಡಿಲವಾದಂತನಿಸಿತು, ನೋಡಿದರೆ ನನ್ನ ಗಾಳಿಪಟದ ದಾರ ಕಟ್ಟಾಗಿಬಿಟ್ಟಿತ್ತು, ನನ್ನ ಪಕ್ಕದಲ್ಲಿದ್ದ ಗೆಳೆಯನೊಬ್ಬ ಪಟ ಕಟ್ಟು ಎಂದು ಕಿರುಚಿದ, ನನ್ನ ಕಣ್ಮುಂದೆಯೇ ನನ್ನ ನನಸಾಗಿದ್ದಂತಹ ಕನಸು ಒಡೆದು ಹೋಗಲು ಶುರುವಾಗಿಬಿಟ್ಟಿತ್ತು, ಪಟವನ್ನೇ ದಿಟ್ಟಿಸಿ ನೋಡುತ್ತ ಅದರ ಹಿಂದೆ ಓಡಲು ಶುರು ಮಾಡಿದೆ, ಓಡಿದೆ ಓಡಿದೆ ಓಡುತ್ತಲೇ ಇದ್ದೀನಿ, ಇಂದಿಗೂ ಸಹ ನನ್ನ ಆ ಗಾಳಿಪಟ ಸಿಕ್ಕಲೇ ಇಲ್ಲ. ಹುಡುಕುತ್ತಲೇ ಇದ್ದೀನಿ ಕಳೆದು ಹೋದ ನನ್ನ ಬಾಲ್ಯದ ಆ ಸಿಹಿ ನೆನಪುಗಳನ್ನ, ಎಲ್ಲಿಯೂ ಸಿಗುತ್ತಿಲ್ಲ. ನೀವು ಸಹ ಆ ಕನಸುಗಳ ಹಿಂದೆ ಓಡುತಿದ್ದೀರಿ ಅಲ್ಲವೇ ಗೆಳೆಯರೆ??

ಪ್ರೀತಿಯಿಂದ

ಪವನ್ ಪಾರುಪತ್ತೇದಾರ.

ಪವನ್'s ಡೈರೀಸ್ - ೫

ನಂದೂ ಮತ್ತೊಂದು ಪ್ರೀತಿ ಹುಡುಕುತಿದ್ದ ಕಾಲ, ಓದಿನಲ್ಲಿ ಅಂತಹ ಹಿಂದೆ ಏನಿರಲಿಲ್ಲ ಬಿಡಿ. ನಾ ಮಾಡಿದ್ದ ತಪ್ಪುಗಳಿಂದ ಪಾಠ ಕಲಿತು ವಿದ್ಯೆ ನೈವೇದ್ಯೆ ಮಾಡಿಕೊಳ್ಳುವ ಬದಲು ಒಂದು ತಹಬದಿಗೆ ತಂದ್ ನಿಲ್ಲಿಸಿದ್ದೆ. ಕ್ರಿಕೆಟ್ ಆಡೋದು ಅಂದ್ರೆ ಅದೇನೋ ಒಂದು ರೀತಿಯ ಅಮಲಿನ ಹಾಗೆ ಕಾಲೇಜ್ ಮುಗಿಸಿಕೊಂಡು 4.30 ಕ್ಕೆ ಪ್ರತಿ ದಿನ ಕ್ರಿಕೆಟ್ ಪ್ರಾರಂಭಿಸಲಿಲ್ಲ ಅಂದ್ರೆ ಬದುಕಿನಲ್ಲಿ ಏನೋ ಮಿಸ್ ಮಾಡಿಕೊಂಡಂತಹ ಅನುಭವ. ಪ್ರತಿದಿನ ಕ್ರಿಕೆಟ್ ಆಡಿದ ಮೇಲೆ ವಯಸ್ಸಿಗೆ ತಕ್ಕಂತಹ ಚರ್ಚೆ ...ಅಡ್ಡದಲ್ಲಿ ಕೂತು ಮಾಡೋದು ಸರ್ವೇ ಸಾಮಾನ್ಯ, ಮಗಾ ಕೆಳಗಡೆ ತೇರು ಬೀದಿಲಿ ಒಬ್ಳು ಇದ್ದಾಳೆ ನೋಡಿದ್ಯ, ಸಕ್ಕತ್ತಾಗಿದ್ದಾಳೆ. ಹೇ ಮಗಾ ಚರ್ಚ್ ಪಕ್ಕದ ಮನೆ ಹುಡುಗೀನ ನೋಡಿದ್ಯ ಅವ್ಳು ಮೊನ್ನೆ ಬಸ್ ಸ್ಟಾಪಲ್ಲಿ ಸ್ಮೈಲ್ ಕೊಟ್ಲು, ಹೀಗೆ ವಯೋಗುಣದ ಮಾತುಗಳು, ನಾವೆಲ್ಲ ಆಗ ಸುಮಾರು 18 ರಿಂದ 20 ಸುಮಾರಿನವರು. ಹೀಗೆ ಮಾತು ಮಾತಲ್ಲಿ ಯಾರೋ, ಹೇ ನಮ್ ರಾಜೇಶ ಗೊತ್ತ, ಅವ್ನು ಒಂದು ಹುಡುಗೀಗೆ ಕಾಳಾಕ್ತಾ ಅವ್ನೆ ಹುಡಿಗಿ ಇರೋದು ಮಡಿಕೆ ಮಾರ್ತಾರಲ್ಲ ಸಂತೇಲಿ, ಅವ್ರ ಎದ್ರು ಮನೆ ಮಾಡಿ ಮೇಲೆ. ದಿನಾ ರಾಜೇಶ ಜಿಮ್ ಗೆ ಹೋಗಿ ಬರೋವಾಗ ಆ ಹುಡುಗೀ ಮನೆ ಮುಂದೆ ಸ್ವಲ್ಪ ಹೊತ್ತು ನಿಂತ್ಕೊಂಡು ಸೈಟ್ ಹಾಕ್ಕೊಂಡ್ ಬರ್ತಾನೆ ಅಂದ್ರು.ರಾಜೇಶ ನಂಗೂ ಒಳ್ಳೆಯ ಸ್ನೇಹಿತ, ಈ ವಿಷಯ ಯಾವತ್ತು ನನ್ನ ಬಳಿ ಹಂಚ್ಕೊಂಡೇ ಇರ್ಲಿಲ್ಲ. ಆವತ್ತು ಅವ್ನು ಆಡಕ್ಕೆ ಬಂದಿರ್ಲಿಲ್ಲ, ಅದಕ್ಕೆ ಅವನ ವಿಷಯ ಪ್ರಸ್ತಾಪ ಆಯ್ತು ಅನ್ಸುತ್ತೆ. ಎಲ್ಲೋಗ್ತಾನೆ ನನ್ಮಗ ಸಿಕ್ಕಾಗ ವಿಚಾರಿಸ್ಕೊಳ್ಳೋಣ ಅಂತ ಸುಮ್ನಾದೆ.

ಮಾರನೆಯ ದಿನ ರಾಜೇಶ ಸಿಕ್ದ, ಸ್ವಲ್ಪ ವಿಚಾರಿಸ್ಕೊಂಡೆ ನನ್ ಮಗನೆ ಏನು ಮಾಟೆರ್ರು, ನನ್ ಹತ್ರ ಹೇಳೆ ಇಲ್ಲ ನಾವೆಲ್ಲ ಅಷ್ಟು ಬೇಡವಾಗೋದ್ವ ಅಂತ, ಆಗ ಎಲ್ಲ ವಿಷಯ ಬಿಡಿಸಿ ಬಿಡಿಸಿ ಹೇಳಿದ. ಆ ಹುಡುಗೀನ ಸುಮಾರು 3 ವರ್ಷದಿಂದ ಪ್ರೀತಿಸುತಿದ್ದಾನೆಂದು, ಪ್ರತಿ ದಿನ ಜಿಮ್ ಮುಗಿಸಿ ಬರೋವಾಗ ಅವರ ಮನೆ ಮುಂದೆ ಹೋಗಿ ನಿಲ್ತಾನೆಂದು, ಆಗೆಲ್ಲಾ ಆ ಹುಡುಗಿ ಆಚೆ ಬಂದು ಸ್ಮೈಲ್ ಮಾಡ್ತಾಳೆಂದು ಹೇಳ್ಕೊಂಡ. ಆ ಹುಡುಗಿಯ ಸ್ಮೈಲ್ ಬಗ್ಗೆ ಹೇಳ್ಕೊಳ್ಳೋವಾಗ ರಾಜೇಶನ ಮುಖದ ಮೇಲೆ ಮೂಡಿದ ಗೆಲುವು ಎಷ್ಟು ಕ್ಯಾಂಡಲ್ ಬಲ್ಬ್ ಹಚ್ಚಿದರೂ ಸಿಗದು. ನನಗಾಗಲೇ ಮುಂದಿನ ಪ್ರಶ್ನೆ ನಿಶ್ಚಯವಾಗಿತ್ತು. ನಿನ್ ಪ್ರೀತಿ ವಿಶ್ಯ ಹೇಳಿದ್ಯ ಅಂತ ಕೇಳ್ದೆ, ಇಲ್ಲ ಮಗಾ, ಅಮ್ಮಂಗೆ ಹೇಳಿದ್ದೀನಿ ಮದ್ವೆ ಆದ್ರೆ ಆ ಹುಡುಗೀನೆ ಆಗೋದು ಅಂತ, ಅಮ್ಮ ಕೂಡ ನೋಡಿ ಒಪ್ಪಿದ್ದಾರೆ ಅಂದ. ಹಾಗಾದ್ರೆ ನಡಿ ಆ ಹುಡುಗೀಗೆ ಹೇಳಣ ಅಂದೆ. ಭಯಾ ಆಗುತ್ತೆ ಮಗಾ, ಅಂತ ಪೇಚಾಡುತಿದ್ದ, ಏನು ಹೆದ್ರಬೇಡ ನಡೀ ಹೇಳನ ಅಂತ ಬಲಂತ ಮಾಡಿದೆ. ಸರಿ ನಾಳೆ ಕಾಲೇಜಿಗೆ ಹೋಗೋವಾಗ ಅವಳ ಬಸ್ಸಲ್ಲೇ ಹೋಗಿ ಹೇಳೋಣ ಅಂತ ಡಿಸೈಡ್ ಮಾಡಾಯ್ತು.

ಮಾರನೆದಿನ ಟಿಪ್ಟಾಪಾಗಿ ರಾಜೇಶ ರೆಡಿ ಆಗಿ ಬಂದಿದ್ದ, ನಾನು ನನ್ನ ಕಾಲೇಜಿನ ಯೂನಿಫಾರಂ ಧರಿಸಿ ಬಂದಿದ್ದೆ. ನಮ್ಮದು ಕೆಂಪು ಬಸ್ಸು ಮೂರು ಸೀಟಿನ ಬಳಿ ಆ ಹುಡುಗಿ ಕೂತ್ರೆ ಇಬ್ಬರು ಹೋಗಿ ಅವಳ ಪಕ್ಕ ಕೂರೋದು ಅನ್ನೋ ನಿಶ್ಚಯ ಆಯ್ತು, ಎರಡು ಸೀಟಿನ ಬಳಿ ಕೂತರೆ, ರಾಜೇಶ ಹೋಗಿ ಪಕ್ಕದಲ್ಲಿ ಕೂರೋ ಹಾಗೆ ನಿರ್ಧಾರ ಆಯ್ತು. ನನ್ನ ದುರಾದೃಷ್ಟವೋ ಅಥವಾ ರಾಜೇಶನ ಅದೃಷ್ಟವೋ ಎರಡು ಸೀಟಿನ ಸೀಟಲ್ಲಿ ಕೂತಳು ಆ ಹುಡುಗಿ. ರಾಜೇಶ ಕೂಡ ಪಕ್ಕದಲ್ಲಿ ಧೈರ್ಯವಾಗಲ್ಲದಿದ್ದರೂ ನಾಚಿಕೆಯಿಂದಲೇ ಕೂತ. ಆಗೆಲ್ಲ ಮೊಬೈಲ್ ಇರಲಿಲ್ಲ, ನಾನು ಅವನ ಪಕ್ಕದ ಕಾರ್ನರ್ ಸೀಟಲ್ಲಿ ಕೂತು ಮಾತಾಡು ಮಾತಾಡು ಎಂದು ತಿವಿಯುತಿದ್ದೆ. ಆದ್ರೆ ಡಬ್ಬಾ ನನ್ಮಗ ರಾಜೇಶ atleast ಹಾಯ್ ಎಂದು ಸಹಾ ಹೇಳಲಿಲ್ಲ, ಅವನ ಪಕ್ಕದ ಹುಡುಗಿಯನೊಮ್ಮೆ ನೋಡಿದೆ, ಅವಳಲ್ಲೂ ಏನೋ ಒಂದು ರೀತಿಯ ಕಾತುರ ಇತ್ತು. ಪಕ್ಕದಲ್ಲಿರುವನನ್ನು ಬಹಳ ದಿನಗಳಿಂದ ಬಲ್ಲಂತಹ ಒಂದು confidence ಆ ಹುಡುಗೀಲಿ ಇತ್ತು. ಆ ಹುಡುಗಿಯ ಕಾಲೇಜ್ ಸ್ಟಾಪ್ ಬಂತು ಅವಳ ಪಾಡಿಗೆ ಅವ್ಳು ಇಳಿದು ಹೋಗೇ ಬಿಟ್ಲು, ಹೋಗುವಾಗೊಮ್ಮೆ ರಾಜೇಶನ ಮುಖ ನೋಡಿ ಕಿಸಕ್ಕೆಂದುಕೊಂಡು ಹೋಗಿದ್ದು ಯಾರು ಗಮನಿಸಿಲ್ಲ ನನ್ನ ಬಿಟ್ಟು. ರಾಜೇಶ ತನ್ನಲ್ಲಿನ ಪ್ರೀತಿಯನ್ನು 40 ನಿಮಿಷ ಹುಡುಗೀನ ಪಕ್ಕದಲ್ಲಿ ಕೂಡ್ಸುದ್ರು ಹೇಳಕ್ಕಾಗಿಲ್ಲ

ಅದೂ ನಿಜಾನೆ ಬಿಡಿ ಪ್ರೀತಿ ಹೇಳ್ಕೊಳಕ್ಕೆ, ಹುಡುಗೀ ಪಕ್ಕದಲ್ಲಿದ್ರೂ 40 ನಿಮಿಷ ಅಲ್ಲ 40 ವರ್ಷ ಆದ್ರು ಕೆಲವೊಮ್ಮೆ ಆಗಲ್ಲ, ಒಂದು ರೀತಿಯ insecureness ಕಾಡುತ್ತೆ, ರಾಜೇಶಂಗೂ ಅದೇ ಆಯ್ತು,ಆ ಹುಡುಗಿ ಬೈದುಬಿಟ್ರೆ, ಬಸ್ಸಲ್ಲಿ ಎಲ್ರ ಮುಂದೆ ಅವಮಾನ ಮಾಡಿಬಿಟ್ರೆ, ಜಿಮ್ ಮುಗಿಸಿ ಬರೋವಾಗ ಸಿಗ್ತಿದ್ದ ಸ್ಮೈಲ್ ಮಿಸ್ ಆಗಿಬಿಟ್ರೆ, ನನ್ನ ಬಗ್ಗೆ ಕೆಟ್ಟದಾಗಿ ತಿಳ್ಕೊಂಡುಬಿಟ್ರೆ, ಹೀಗೆಲ್ಲ ಬಹಳಾ ಪ್ರಶ್ನೆಗಳು ರಾಜೇಶನ್ನ ಕಾಡಿಬಿಟ್ಟಿದ್ದವು, ಅದನ್ನೆಲ್ಲ ನನ್ನ ಬಳಿ ಹೇಳ್ಕೊಂಡು ಕಣ್ಣಲ್ಲಿ ಗಂಗೆಯ ತರಿಸಿಬಿಟ್ಟಿದ್ದ. ಈಗೇನು ಮಾಡೋದು ನೀನೆ ಹೇಳಪ್ಪ ನಿಧಾನ ಆದ್ರೆ ಆ ಹುಡುಗಿ ನಿಂಗೆ ಸಿಗಲ್ಲ, ಪ್ರೀತಿನ ಎದೆಯಲ್ಲಿ ಅವುಚಿಟ್ಟುಕೊಂಡಷ್ಟು ನಿಂಗೆ ಡೇಂಜರ್ ಅಂದೆ. ರಾಜೇಶನಿಗೆ ಏನು ಮಾಡಬೇಕು ಅನ್ನೋದು ಗೊತ್ತಾಗ್ತಿಲ್ಲ. ಕಡೇಗೆ ಹೇಳ್ದ, ಮಗಾ ನೀನೇನಾದ್ರು ಮಾಡು ನನ್ನ ಬಗ್ಗೆ ಅವಳ ಮನಸಿನಲ್ಲೇನಿದೆ ಅನ್ನೋದು ನಾನು ತಿಳಿಬೇಕು, ನಾನು ಕೆಟ್ಟವನಾಗಬಾರದು, ಅಕಸ್ಮಾತ್ ಅವಳು ನನ್ನ ಪ್ರೀತಿ ಒಪ್ಪದಿದ್ರು ಪರ್ವಾಗಿಲ್ಲ ನಾನು ಅವಳ ಮನಸಲ್ಲಿ ಒಳ್ಳೆಯವನಾಗಿರ್ಬೇಕು ಅಷ್ಟೆ ಅಂದ. ಡಬ್ಬಾ ನನ್ಮಗನೆ ಪ್ರೀತಿ ಉಳಿಸ್ಕೋಳೊ ಅಂದ್ರೆ ಏನೇನೋ ಪುರಾಣ ಹೇಳ್ತ್ಯಲ್ಲೋ ಅಂದು, ಏನಾದ್ರು ಪ್ಲಾನ್ ಮಾಡೋಣ ಬಿಡು ಅಂತ ಹೇಳಿ, ಪಂಚೆ ಮೇಷ್ಟ್ರ ಗಣಿತ ಕ್ಲಾಸ್ ಗೆ ಅರ್ಧ ಘಂಟೆ ಲೇಟಾಗಿ ಹೊರಟೆ.

ಸಂಜೆ ಕಾಲೇಜು ಬಿಡುವಷ್ಟರಲ್ಲಿ ನನ್ನ ತಲೇಗೆ ಒಂದು excellent ಅನ್ನಿಸುವಂತಹ ಐಡಿಯ ಹೊಳೆದಿತ್ತು. ಅಂದು ಕ್ರಿಕೆಟ್ ಆಡ್ಕೊಂಡು ರಾಜೇಶನ ಜೊತೆ ನಾನು ಜಿಮ್ ಗೆ ಹೋದೆ, ಮುಗಿಸಿ ಬರೀವಾಗ ಸೈಟ್ ಹೊಡೆಯಲು ನಾನು ಸಹ ರಾಜೇಶನ ಜೊತೆ ನಿಂತೆ, ಹುಡುಗಿ ಬಂದ್ಲು ಸ್ವಲ್ಪ ಹೊತ್ತು ನಿಂತ್ಲ್ಯ್ ಸ್ಮೈಲ್ ಕೊಟ್ಲು, ರಾಜೇಶ ನನ್ನ ಬಳಿ ಹೇಳಿಕೊಂಡಿದ್ದಕ್ಕಿಂತ ಹೆಚ್ಚಾಗೆ ಸ್ಮೈಲ್ ಕೊಟ್ಲು. ನಾನು ರಾಜೇಶನ ಪಕ್ಕ ನಿಂತು ಹಾಯ್ ಮಾಡಿದೆ, ಅವಳು ಹ್ಯಾಂಡ್ ವೇವ್ ಮಾಡಿದ್ಲು, ರಾಜೇಶನಿಗೆ ಖುಷಿಯೋ ಖುಷಿ, ನಂತರ ಒಂದು ಪೇಪರ್ರಿನಲ್ಲಿ tomorrow same bus same time but 3 seat ಎಂದು ಬರೆದು ಒಳಗೊಂದು ಕಲ್ಲು ಹಾಕಿ ಸುತ್ತಿ ಅವಳ ಬಳಿ ಎಸೆದೆ. ಮರು ಕ್ಷಣ ನಿಲ್ಲದೆ ಸೀದ ನಮ್ಮ ದಾರಿ ನಾವಿ ಹಿಡಿದೆವು.

ಮಾರನೆ ದಿನ ಬಂದ್ಲು ಎಲ್ಲವೂ ಅಂದುಕೊಂಡಂತಯೇ ಆಯ್ತು, ಮೂರು ಸೀಟು ಆದ್ರೆ ಈ ಸಲಿ ರಾಜೇಶ ಅಲ್ಲ ನಾನು ಪಕ್ಕದಲ್ಲಿ ಕೂತಿದ್ದೆ, ರಾಜೇಶ ಮೊದ್ಲೆ ಹೇಳಿದ್ದ, ತನ್ನ ಪ್ರೀತಿಯ ಬಗ್ಗೆ ತಿಳಿಸಬಾರದು ಅಂತ, ಬರೀ ತನ್ನ ಬಗೆಗಿನ ಅಭಿಪ್ರಾಯವಷ್ಟೆ ಸಾಕು, ನಾನು ಕೆಟ್ಟವನಾಗಬಾರದು ಅವಳ ಮುಂದೆ ಎಂಬೆಲ್ಲ ವೇದಾಂತವನ್ನು ಬಿಟ್ಟಿದ್ದ. ಸರಿ ನಿನ್ನ ವಿಷಯ ಮಾತಾಡಲ್ಲ ಎಂದು ಪಕ್ಕ ಕುಳಿತ ನಾನು ತಕ್ಷಣವೇ ಮಾತು ಶುರು ಮಾಡಿದ್ದೆ, ಹಾಯ್ ನಿಮ್ಮ ಹೆಸರು, ಏನು ಒದ್ತಾ ಇರೋದು, ನಿಮ್ಮ ಡ್ಯಾಡಿ ಏನ್ ಮಾಡ್ತಾರೆ ಹೀಗೆ ಮಾತಾಡ್ತ ಮಾತಾಡ್ತ, ನಾನು ನಿಮ್ಮನ್ನ ಪ್ರೀತಿಸ್ತಾ ಇದ್ದೀನಿ ಒಪ್ಪಿಗೆ ಇದ್ಯ ಅಂದೆ, ಹುಡುಗಿ ಒಂದು ಕ್ಷಣ ಶಾಕ್ ಆದ್ಲು ಪಕ್ಕದಲ್ಲಿ ರಾಜೇಶ ನನ್ನ ಮಾತನ್ನೇ ಕೇಳ್ತಾ ಇದ್ದೋನು ಗರ ಬಡಿದವನ ಹಾಗೆ ನನ್ನ ಮುಖ ನೋಡಿದ, ಮತ್ತೊಮ್ಮೆ ಕೇಳ್ದೆ, ನೀವು ನನ್ನ ಪ್ರೀತಿಸ್ತೀರ ಅಂತ, ಆ ಹುಡುಗಿ " ಅದೂ.. Actually, ನಿಮ್ಮ friend 3 years ಇಂದ ನಮ್ಮನೆ ಹತ್ರ ಬಂದು ನಿಲ್ತಿದ್ರು, ಅವ್ರು ನನ್ನ ಇಷ್ಟ ಪಡ್ತಿದ್ದಾರೆ ಅಂದ್ಕೊಂಡಿದ್ದೆ, ನಂಗೂ ಅವ್ರಂದ್ರೆ ಸ್ವಲ್ಪ ಇಷ್ಟ ಆಗಿತ್ತು. ನೀವು sudden ಆಗಿ ಬಂದು propose ಮಾಡ್ತಿರೋದು ನಂಗೆ ಏನು ಅರ್ಥ ಆಗ್ತಿಲ್ಲ " ಅಂದ್ಲು, ಅಬ್ಬ ಸದ್ಯ ನಿರಾಳ, ರಾಜೇಶ ಬಾ ಈಕಡೆ ಅಂತ ಸೀಟ್ ಚೇಂಜ್ ಮಾಡಿ ಎಲ್ಲ ವಿಷಯ ಹೇಳಿ, love success ಅಂದು ಬಿಟ್ಟಾಯ್ತು. ರಾಜೇಶ ಮತ್ತು ಆ ಹುಡುಗಿ ಇಬ್ಬರಲ್ಲು ಆ ಕ್ಷಣದಲ್ಲಿ ಸಂತೋಷಕ್ಕೆ ಪಾರವೇ ಇರಲಿಲ್ಲ, ಒಂದು ಲೆಕ್ಕದಲ್ಲಿ ಇಬ್ಬರಿಗೂ ಹೆರಿಗೆಯ ಸಂತಸ, ಇದು ಮೂರು ವರ್ಷದ ಬಸಿರು, ಪ್ರೀತಿಯ ಕೂಸು ಹುಟ್ಟಲು ಮೂರು ನಿಮಿಷ ಸಾಕಾಯ್ತು. ನನಗೂ ಪ್ರೇಮಿಗಳನ್ನು ಸೇರಿಸಿದ ಹೆಮ್ಮೆ..

ಮುಂದೆ ರಾಜೇಶ ಮತ್ತು ಆ ಹುಡುಗಿಯ ಪ್ರೀತಿ ಎರಡು ವರ್ಷ ಚೆನ್ನಾಗಿ ನಡೀತು, ಆಮೇಲೆ ಆ ಹುಡುಗಿ ಯಾರೋ ಬೇರೆಯವರನ್ನ ಮದುವೆ ಆದ್ಲು, ರಾಜೇಂಗೆ ಇನ್ನೂ ಮದ್ವೆ ಆಗಿಲ್ಲ, ಆಗಾಗ ಸಿಗ್ತಾ ಇರ್ತಾನೆ, ನಮ್ಮಿಬ್ಬರ ಮಾತಿನ ಮಧ್ಯೆ ಆ ಹುಡುಗಿಯ ಹೆಸರೂ ಬಂದು ಹೋತಿರುತ್ತದೆ.

ಅಂದಹಾಗೆ ಆ ಹುಡುಗಿ ಹೆಸರು ಏನು ಅಂತ ಮಾತ್ರ ಕೇಳ್ಬೇಡಿ....

ಪವನ್ ಪಾರುಪತ್ತೇದಾರ