Thursday, June 14, 2012

ವೈತರಣಿ


ಎಷ್ಟು ಪವಿತ್ರನಾಗಿದ್ದ ಅವನು
ಕಷ್ಟದಲಿ ಇದ್ದರೂ ನಿಷ್ಠನಾಗಿದ್ದ
ಹಿರಿಯರಿಗೆ ಗೌರವ ಕಿರಿಯರಿಗೆ ಮನ್ನಣೆ
ಹೆಂಗಳೆಯರೆಂದರೆ ಅಮ್ಮನದೇ ಅಕ್ಕರೆ

ಎಷ್ಟು ಮುಗ್ಧನಾಗಿದ್ದ ಅವನು
ಮಗುವೂ ಒಮ್ಮೊಮ್ಮೆ ನಾಚುವಂತಿದ್ದ
ಎಲ್ಲವನು ತಿಳಿದು ಏನನ್ನು ತೋರದೆ
ಲೋಕದಲಿ ತಾನಿನ್ನೂ ವಿದ್ಯಾರ್ಥಿ ಎಂದಿದ್ದ

ಇಂದು ಹಾಗಿಲ್ಲ
ನದಿಯು ದಿಕ್ಕ ಬದಲಿಸಿದಂತೆ
ಹುಣ್ಣಿಮೆ ಕಳೆದು ಅಮವಾಸ್ಯೆ ಬಂದಂತೆ
ತೋರ್ಪಡಿಕೆ ಅಸೂಯೆಯ ಕಲ್ಮಶವ ತುಂಬುವ
ವೈತರಣಿಯಾದನಲ್ಲ

ಬರಬಾರದಿತ್ತೇನೋ ಆಸ್ತಿ ಐಶ್ವರ್ಯ
ಬರಬಾರದಿತ್ತೇನೋ ಹೆಸರು ಮರ್ಯಾದೆ
ಒಳ್ಳೆತನ ಹರಿಸಿ ದಣಿವಾಯಿತೇನೊ ಮನವು
ನಿಂತು ಸುಖ ಪಡುವ ಮನಸು ಮಾಡಿದನಲ್ಲ

ವೈತರಣಿಯಾದನಲ್ಲ

ಪವನ್ ಪಾರುಪತ್ತೇದಾರ :-

ಎಡಗೈಯ ಹಿಡಿಯಷ್ಟು ಪುಟ್ಟದೊಂ ಹೃದಯ

ಎಡಗೈಯ ಹಿಡಿಯಷ್ಟು ಪುಟ್ಟದೊಂ ಹೃದಯ
ಮತ್ತೊಂದು ಹೃದಯವ ಹುಡುಕುತಲಿ ಸುತ್ತಿತ್ತು
ಇರಲಿಲ್ಲ ಅದಕೆಂದು ಅಂತಸ್ತಿನ ಹಂಗು
ಸುಳಿದಿಲ್ಲ ಚಿಂತೆಯದು ಜಾತಿಗೀತಿಯದು
ಮಿಡಿಯುತಾ ಬಡಿಯುತಾ
ನಿಮಿಷಕೆಪ್ಪತ್ತೆರಡು ಬಾರಿ
ಜೊತೆಗಾಗಿ ನಿರ್ಮಲ ಹೃದಯವ ತಡಕಿತ್ತು

ಬಂದವು ಹೃದಯಗಳು ನೂರಾರು ನೂರಾರು
ಹತ್ತಿರ ಬಂದೊಡನೆ ಬಡಿತವೂ ಜೋರು
ಒಂದೊಂದು ಹೃದಯಕ್ಕೆ ಒಂದೊಂದು ಆಸೆ
ಕೇಳಿತೊಂ ಹೃದಯ ಯಾವ ಕಾರಿದೆ
ಮತ್ತೊಂದು ಕೇಳಿತು ನಿನ್ನಮನೆ ಹೇಗಿದೆ

ಹೆದರಿಯೇ ಉತ್ತರಿಸಿತು ಈ ಪುಟ್ಟ ಹೃದಯ

ಹಿಡಿಯಷ್ಟು ಹೃದಯದ ತುಂಬೆಲ್ಲ ಪ್ರೀತಿ
ಅದ ಬಿಟ್ಟು ಬೇರೆ ಏನಿಲ್ಲ ಒಡತಿ
ಸರಿದವು ಹೃದಯಗಳು ಈ ಮಾತ ಕೇಳಿ
ಕಾರು ಮನೆ ಅಷ್ಟೆ ಬದುಕೆಂದು ಹೇಳಿ

ಆಗಲೆ ಸಿಕ್ಕಿತ್ತು ಮುದ್ದಾದ ಹೃದಯ
ಹಿಡಿಯಷ್ಟು ಹೃದಯದ ಪ್ರೀತಿ ಸಾಕೆಂದು
ಇಟ್ಟಿತದು ಒಂದು ಪುಟ್ಟನೆಯ ಷರತ್ತು
ಬಂದು ಕೇಳೆಂದು ತನ್ನಪ್ಪ ಹೃದಯವನು

ಅಪ್ಪನ ಮನೆಯದೋ ದಟ್ಟನೆಯ ಕಾಡು
ಆಸೆಯೆಂಬ ಮುಳ್ಳಿನ ಪೊದೆಗಳ ನಡುವೆ
ಒಪ್ಪಿಸಲಪ್ಪನಾ ಹೃದಯವ ನುಗ್ಗಿತಾ ಪೊದೆಯಲಿ
ಹಿಡಿಯಷ್ಟು ಹೃದಯಕೆ ನೆಟ್ಟಿತು ಮುಳ್ಳಲಿ

ನೋವಲೆ ಕೇಳಿತು ಮುದ್ದಾದ ಮರಿ ಹೃದಯ
ಒಪ್ಪಲಿಲ್ಲವಲ್ಲ ಆ ಕಟುವಾದ ಹಿರಿ ಹೃದಯ
ಮುಳ್ಳುಗಳ ನಡುವಲಿ ನೋವಿನಲಿ ಮಿಡಿಯುತ
ಮತ್ತೆ ಮರಳಿತು ತನ್ನ ಎದೆಯ ಮನೆಗೂಡಿಗೆ

ಮತ್ತದೇ ಬಡಿತ ಮತ್ತದೇ ಮಿಡಿತ
ಎಪ್ಪತ್ತೆರಡು ಲೆಕ್ಕವದು ಇಂದಿಗೂ ತಪ್ಪಿಲ್ಲ
ಪ್ರತಿ ಬಾರಿ ಬಡಿತದಲು ನೋವ ಹಿಮ್ಮೇಳ
ಪ್ರಿಯತಮೆಯು ಕೊಟ್ಟ ಪ್ರೀತಿ ಬಹುಮಾನ

ಪ್ರಿಯತಮೆಯು ಕೊಟ್ಟ ಪ್ರೀತಿ ಬಹುಮಾನ.....!

Monday, June 11, 2012

ಉತ್ತರವಿಲ್ಲದ ಪ್ರಶ್ನೆ


ಪ್ರೀತಿ ಎಂದರೇನು
ಪ್ರತಿಯೊಬ್ಬ ಮನುಜನಿಗು ಕಾಡುವ ಪ್ರಶ್ನೆ
ಹೆತ್ತಾಗ ಕಂಡಿಲ್ಲ
ಹೊತ್ತಾಗ ಕಂಡಿಲ್ಲ
ಬಿದ್ದಾಗ ಬಿಕ್ಕಳಿಸಿ ಅತ್ತಾಗ ಕಂಡಿಲ್ಲ
ಕಂಡುಕೊಂಡೆಯಾ ಗೆಳೆಯ ಪ್ರೀತಿಯ ಅರ್ಥ
ಪ್ರೇಯಸಿಯು ಒಮ್ಮೆ ಕಿರು ನಗೆಯ ಕೊಟ್ಟಾಗ

ಅಕ್ಕರೆಯ ಮಾತು ಆಡಿದಾಗ ಕಂಡಿಲ್ಲ
ಮುದ್ದಾಗಿ ಮೆಚ್ಚುಗೆಯ ಕೊಟ್ಟಾಗ ಕಂಡಿಲ್ಲ
ಸೋತಾಗ ಬೆನ್ನು ತಟ್ಟಿದಾಗ ಕಂಡಿಲ್ಲ
ಗೆದ್ದಾಗ ಹೆಮ್ಮೆಯಲಿ ಅಪ್ಪಿದರು ಕಂಡಿಲ್ಲ
ಕಂಡುಕೊಂಡೆಯಾ ಗೆಳೆಯ ಪ್ರೀತಿಯ ಅರ್ಥ
ಪ್ರೇಯಸಿಯು ಒಮ್ಮೆ ಕಿರುನಗೆಯ ಕೊಟ್ಟಾಗ

ನಿನಗಾಗಿ ಜೀವವನು ತೇಯ್ದಾಗ ಕಂಡಿಲ್ಲ
ನಿನ್ನಾಸೆ ತೀರಿಸಿದ ತ್ಯಾಗದಲು ಕಂಡಿಲ್ಲ
ನಿನ್ನೊಲವ ಒಪ್ಪಿದರು ಪ್ರೀತಿ ಅದು ಕಂಡಿಲ್ಲ
ನಿನ್ನವರ ಪ್ರೀತಿ ನಿನಗೆಂದು ಕಂಡಿಲ್ಲ
ಕಂಡುಕೊಂಡೆಯಾ ನೀನು ಪ್ರೀತಿಯ ಅರ್ಥ
ಪ್ರೇಯಸಿಯು ಒಮ್ಮೆ ಕಿರುನಗೆಯ ಕೊಟ್ಟಾಗ

ಕಂಡಿಲ್ಲ ನಾನು ಪ್ರೀತಿ ಎಂದರೇನು
ನಿನ್ನ ನಗುವಲ್ಲೇ ಅದು ಅಡಗಿರುವುದೋ ಏನು
ಎಂದಾಗ ನಿನ್ನವಳು ಮತ್ತೊಮ್ಮೆ ನಗಬಹುದು
ಆ ನಗುವು ನಿನಗಷ್ಟು ಖುಷಿ ಕೊಡಲು ಬಹುದು
ಸುಳ್ಳಿನ ಲೋಕವದು ಸೃಶ್ಠಿಸಿಹೆ ಗೆಳೆಯ
ಹೆತ್ತವರ ಪ್ರೀತಿಯ ಮರೆತಿರುವೆ ಗೆಳೆಯ

ಪವನ್ ಪಾರುಪತ್ತೇದಾರ :-

Monday, June 4, 2012

ಅವರಮ್ಮನ ಕಣ್ಣಲ್ಲಿ ನನ್ನಮ್ಮ

ಮಾಗಿದ ಕಣ್ಣುಗಳು
ಪಿಳಿ ಪಿಳಿ ನೋಟ
ಮುಖವೆಲ್ಲ ಸುಕ್ಕು
ನೆನಪು ಸರಿಯಿಲ್ಲ
ನೆನ್ನೆಯದ ನೆನೆಯಲು ಬಲು ಕಷ್ಟ ಅವಳಿಗೆ
ಆದರು ಮರೆತಿಲ್ಲ ನನ್ನಮ್ಮನ ಅವಳಮ್ಮ

ಮತ್ತದೇ ಮಾತು ನನ್ನಮ್ಮನ ಬಗ್ಗೆ
ಆಡಿದ್ದು ಹಾಡಿದ್ದು ಕುಣಿದಿದ್ದು ಬಿದ್ದಿದ್ದು
ಅಪ್ಪನ ಕೈಲಿ ಬೈಸಿಕೊಂಡಿದ್ದು
ತಮ್ಮಂದಿರ ಕೂಡ ಜಗಳವಾಡಿದ್ದು

ಈಗಲೂ ಬೈಗುಳ ಎಷ್ಟು ಸಲೀಸವಳಿಗೆ
ಮಗಳೆಂಬ ಸಲುಗೆಗೆ ಬೇಲಿ ಬೇಕೇನು
ಅಮ್ಮ ಕಲಿಯುವ ವಿಷಯ ಬಹಳಾನೆ ಬಾಕಿ ಇದೆ
ಅವಳಮ್ಮ ಹೇಳಿಕೊಡಲೆಷ್ಟು ವಿನಯ

ನೋಡಿರಲಿಲ್ಲ ಅಮ್ಮನನು ಪುಟ್ಟ ಮಗುವಾಗೆಂದು
ಅವರಮ್ಮನ ಮುಂದೆ ಮುದ್ದು ಮಗು ಇವಳು
ಹಿಂದಿಂದೆ ಹಿಂದಿಂದೆ ಅವರಮ್ಮನ ಹಿಂದೆ
ಕಾದಿಹಳು ಕಾಳಜಿಯ ಸೆರಗನ್ನು ಹಿಡಿದು

ಅಮ್ಮನಿಗೆ ಎಳ್ಳಷ್ಟು ಬೇಸರವೆ ಇಲ್ಲ
ಇದ್ದಳಲ್ಲ ಹಿಂದೆಯೂ ಅವರಮ್ಮ ಹೀಗೆಯೆ
ಅವರಮ್ಮನಿಗೊಂದಷ್ಟೂ ಭಯವಂತು ಇಲ್ಲ
ಮಗಳೆಂಬ ಸಂಬಂಧಕಂತ್ಯವದು ಸಾಧ್ಯವೆ