Monday, June 4, 2012

ಅವರಮ್ಮನ ಕಣ್ಣಲ್ಲಿ ನನ್ನಮ್ಮ

ಮಾಗಿದ ಕಣ್ಣುಗಳು
ಪಿಳಿ ಪಿಳಿ ನೋಟ
ಮುಖವೆಲ್ಲ ಸುಕ್ಕು
ನೆನಪು ಸರಿಯಿಲ್ಲ
ನೆನ್ನೆಯದ ನೆನೆಯಲು ಬಲು ಕಷ್ಟ ಅವಳಿಗೆ
ಆದರು ಮರೆತಿಲ್ಲ ನನ್ನಮ್ಮನ ಅವಳಮ್ಮ

ಮತ್ತದೇ ಮಾತು ನನ್ನಮ್ಮನ ಬಗ್ಗೆ
ಆಡಿದ್ದು ಹಾಡಿದ್ದು ಕುಣಿದಿದ್ದು ಬಿದ್ದಿದ್ದು
ಅಪ್ಪನ ಕೈಲಿ ಬೈಸಿಕೊಂಡಿದ್ದು
ತಮ್ಮಂದಿರ ಕೂಡ ಜಗಳವಾಡಿದ್ದು

ಈಗಲೂ ಬೈಗುಳ ಎಷ್ಟು ಸಲೀಸವಳಿಗೆ
ಮಗಳೆಂಬ ಸಲುಗೆಗೆ ಬೇಲಿ ಬೇಕೇನು
ಅಮ್ಮ ಕಲಿಯುವ ವಿಷಯ ಬಹಳಾನೆ ಬಾಕಿ ಇದೆ
ಅವಳಮ್ಮ ಹೇಳಿಕೊಡಲೆಷ್ಟು ವಿನಯ

ನೋಡಿರಲಿಲ್ಲ ಅಮ್ಮನನು ಪುಟ್ಟ ಮಗುವಾಗೆಂದು
ಅವರಮ್ಮನ ಮುಂದೆ ಮುದ್ದು ಮಗು ಇವಳು
ಹಿಂದಿಂದೆ ಹಿಂದಿಂದೆ ಅವರಮ್ಮನ ಹಿಂದೆ
ಕಾದಿಹಳು ಕಾಳಜಿಯ ಸೆರಗನ್ನು ಹಿಡಿದು

ಅಮ್ಮನಿಗೆ ಎಳ್ಳಷ್ಟು ಬೇಸರವೆ ಇಲ್ಲ
ಇದ್ದಳಲ್ಲ ಹಿಂದೆಯೂ ಅವರಮ್ಮ ಹೀಗೆಯೆ
ಅವರಮ್ಮನಿಗೊಂದಷ್ಟೂ ಭಯವಂತು ಇಲ್ಲ
ಮಗಳೆಂಬ ಸಂಬಂಧಕಂತ್ಯವದು ಸಾಧ್ಯವೆ

No comments:

Post a Comment