Thursday, December 13, 2012

ನೊರೆಗುಳ್ಳೆಯ ಬದುಕು

ಪ್ರತಿಕ್ಷಣವೂ ನಮ್ಮದು ನೊರೆಗುಳ್ಳೆಯ ಬದುಕು
ಸಾವಿನಾಕ್ರಮಣ ಎಲ್ಲಿಂದ ಬರುವುದೊ
ಡಾಂಬರು ರಸ್ತೆಯೋ ಹರಿವ ನದಿಯೋ
ಸುಟ್ಟು ಕರಕಲಾಗಿಸೋ ಬೆಂಕಿಯೋ
ಮರೆಯಾಗಬಹುದು ಜೀವ ಅರಿಯದಂತೆ ಒಡೆದು

ಪ್ರತಿಕ್ಷಣವೂ ನಮ್ಮದು ನೊರೆಗುಳ್ಳೆಯ ಬದುಕು
ಕಟ್ಟಡದೊಳು ನಿದ್ರಿಸುವ ನೆಮ್ಮದಿಯೆ ಇಲ್ಲ
ಆಗಬಹುದದು ನೆಲಸಮ ಕ್ಷಣಮಾತ್ರದಲ್ಲಿ
ಹರಿಯುವ ನದಿಯಲಿ ಈಜುವಂತಿಲ್ಲ
ಪ್ರವಾಹದ ಪರಿಯದು ಎಂದು ನುಗ್ಗುವುದೋ
ಮರೆಯಾಗಬಹುದು ಜೀವ ಅರಿಯದಂತೆ ಒಡೆದು

ಪ್ರತಿಕ್ಷಣವೂ ನಮ್ಮದು ನೊರೆಗುಳ್ಳೆಯ ಬದುಕು
ಬೆಳಕ ನೀಡುವ ವಿದ್ಯುತ್ ಕೋಪಗೊಳ್ಳಲುಬಹುದು
ಬಿಸಿನೀರ ಬದಲು ಸಾವು ಸುರಿಸಲುಬಹುದು
ವೇಗದಲಿ ವಾಹನವ ಚಲಿಸುತಿದ್ದಾಗ
ಒಮ್ಮೆಲೆಯೆ ಬ್ರೇಕುಗಳು ಕೆಲಸ ಮರೆಯಲುಬಹುದು
ಮರೆಯಾಗಬಹುದು ಜೀವ ಅರಿಯದಂತೆ ಒಡೆದು

ಪ್ರತಿಕ್ಷಣವೂ ನಮ್ಮದು ನೊರೆಗುಳ್ಳೆಯ ಬದುಕು
ಹತ್ತನೆಯ ಮಹಡಿಯೊಳು ಲಿಫ್ಟಿನಲೊಮ್ಮೆ
ಇಹಲೋಕಕು ಕೂಡ ಲಿಫ್ಟು ಪಡೆಯಲುಬಹುದು
ಚರಮಗೀತೆಯ ಹಾಡಲು ಸಂಗೀತ ಬೇಕಿಲ್ಲ
ವಿಧಿಯ ಸಾಹಿತ್ಯದೊಳು ನಮ್ಮ ಹೆಸರು ಇದ್ದರೆ ಸಾಕು
ಮರೆಯಾಗಬಹುದು ಜೀವ ಅರಿಯದಂತೆ ಒಡೆದು

ಪವನ್ ಪಾರುಪತ್ತೇದಾರ :-

No comments:

Post a Comment