ಆಗ ತಾನೆ ಅರಳಿದ ಹೂ
ಕಾನನದ ನಡುವೆ ರಾತ್ರಿಯಲಿ ಜನ
ಸುತ್ತಲಿನ ಪರಿಸರ ಸಂತಸದಿ ನಗುತಿತ್ತು
ಬಳ್ಳಿಯಮ್ಮನಿಗೆ ಹೂ ಹೆತ್ತ ಖುಶಿಯಿತ್ತು
ಗಿಡ ಗುಂಟೆ ಪ್ರಾಣಿ ಪಕ್ಷಿ ಎಲ್ಲವೂ ಹೊಸತು
ತಲೆ ಎತ್ತಿ ನೋಡಿದರೆ ಆಗಸದ ಪರಿವಿಲ್ಲ
ಚಂದ್ರಮನ ಅಂದಕೆ ಮಿತಿಯೆಂಬುದಿಲ್ಲ
ಚಂದ್ರಮನ ನೋಡೊಡನೆ ಸಕ್ಕಿತ್ತು ಆ ಹೂವು
ಕಪ್ಪು ಮಚ್ಚೆಗಳೂ ಕೂಡ ಮುದ್ದಾಗಿ ಕಂಡಿತ್ತು
ಹಿಡಿಯಲಾದೀತೇನು ಚಂದ್ರಮನ ಸೊಬಗ
ಚಂದ್ರನಂತೆ ಅರಳಿತ್ತು ಈ ಹೂವಿನ ಮೊಗ
ದಿನ ದಿನಕು ಅರಳುವಿಕೆ ಹೆಚ್ಚೆಚ್ಚು ಆಗಲು
ಪ್ರೀತಿ ನಿವೇದನೆಗೆ ಕ್ಷಣ ಗಣನೆ ಮಾಡಲು
ಹೂವ ಗಂಧವ ಸೂಸಿ ಚಂದ್ರನಿಗೆ ಕೊಡಲು
ಚಂದಿರನು ದುಂಬಿಗಳ ವರವ ಕೊಟ್ಟಿದ್ದ
ದುಂಬಿಯದು ಹೂವಿನ ಪ್ರೀತಿ ಪಡೆದಿತ್ತು
ಇಂದು ಆ ಹೂವಿಗೆ ವಯಸು ಹೆಚ್ಚಾಗಿ
ಘಮ್ಮೆನುವ ಗಾನವು ನಿಂತುಬಿಟ್ಟಾಗಿ
ಚಂದಿರನ ನೋಡಲು ಕಷ್ಟವಾಗಿತ್ತು
ಹೂವ ಶಿರವದು ಈಗ ನೆಲವ ನೋಡಿತ್ತು
ಚಂದಿರನ ಪ್ರೀತಿ ಕಡಿಮೆಯಾಗಿತ್ತು
ದುಂಬಿಗಳ ಸ್ನೇಹ ಮುರಿದು ಬಿಟ್ಟಿತ್ತು
ವಿರಹದ ಬೇಗೆಯಲಿ ಹೂವದು ಸುಡಲು
ವಯ್ಯಾರ ಬಿನ್ನಾಣ ಮುಕ್ತವಾಗಿರಲು
ಹೂವದು ಅವಸಾನ ನೋಡಿಯಾಗಿತ್ತು
ಪ್ರೀತಿಯದು ಅಮರವಾಗುಳಿದು ಬಿಟ್ಟಿತ್ತು
ಪವನ್ ಪಾರುಪತ್ತೇದಾರ್ :-
No comments:
Post a Comment