Thursday, December 27, 2012

ಪವನ್'s ಡೈರೀಸ್ - ೧

ಕಾಲೇಜೆಂದರೆ ಹುಡುಗಿಯರು, ಸ್ನೇಹಿತರು, ಸಿನಿಮಾ, ಹೊಡೆದಾಟ ಇಷ್ಟೇ ಎಂದುಕೊಂಡಿದ್ದ ವಯಸ್ಸು, ಶಾಲೆಯಲ್ಲಾದರೆ ಒಂದು ಮಧ್ಯಾಹ್ನ ತಪ್ಪಿಸಿಕೊಂಡರೆ ವದೆ ಬೀಳುತಿತ್ತು, ಮನೆಯಿಂದ ಅಪ್ಪ ಅಮ್ಮನ ಕರೆದು ಕೊಂಡು ಬಾ ಎಂಬ ಆರ್ಡರ್ ಕೂಡ ಇರುತಿತ್ತು. ಆದ್ರೆ ಕಾಲೇಜಿನಲ್ಲಿ ಅದೆಲ್ಲ ಇಲ್ಲ, ನಮಗಿಷ್ಟಾ ಬಂದಿದ್ದೇ ಮಾಡಬಹುದು. ನಮ್ ಕಾಲೇಜು ಹಾಗೆ ಇತ್ತು ಬಿಡಿ, ಪ್ರಾಕ್ಸಿ ಹಾಕಲೇ ಒಂದಷ್ಟು ಪಂಡಿತರಿದ್ದರು, ಪರೇಶ, ಪ್ರಕಾಶ, ಪವನ, ಪ್ರವೀಣ, ಪ್ರದೀಪ ಎಲ್ರುಗೂ ಒಬ್ಬನೇ ಪ್ರೆಸೆಂಟ್ ಸರ್ ಅಂತಿದ್ದ.ಆ ತರಹ ಪಂಡಿತರು ಐದಾರು ಜನ ಇದ್ರು ನಮ್ ಕ್ಲಾಸಲ್ಲಿ, ಕ್ಲಾಸಲಿ ಕೂರಲಿ ಇಷ್ಟವಿಲ್ಲದಿದ್ರೆ ಮಗಾ ಪ್ರಾಕ್ಸಿ ಹಾಕ್ಬಿಡೋ ಅಂತ ಹೇಳಿ ಹೋಗೋದಷ್ಟೆ, ಒಬ್ಬ ಪಂಡಿತ ಇಲ್ಲ ಮಗ ನಾನು ಪ್ರದೀಪಂಗೆ ಹಾಕ್ತಾ ಇದ್ದೀನಿ ಅಂದ್ರೆ ಇನ್ನೊಬ್ಬ ಪಂಡಿತ ಸಿಕ್ತಾ ಇದ್ದ. ಒಟ್ನಲ್ಲಿ ನಾನು ಕ್ಲಾಸಲ್ಲಿ ಕೂರದೆ ಇದ್ರು ಅಟ್ಟೆಂಡನ್ಸ್ ಮಾತ್ರ ಪಕ್ಕ ಇರ್ತಿತ್ತು.

Monday, December 24, 2012

ತಿರುಪತಿ ಪ್ರಸಂಗ


ಇಂಜಿನಿಯರಂಗ್ ಏಳನೆಯ ಸೆಮಿಸ್ಟರ್ ಪರೀಕ್ಷೆಯ ಕಡೆಯ ದಿನ. ಮೊದಲು ನಿರ್ಧರಿಸಿದಂತೆ ಗೆಳೆಯರೆಲ್ಲರ ತಿರುಪತಿ ಪ್ರಯಾಣ. ನನ್ನ ಗೆಳೆಯನ ತಂಗಿಯ ಮದುವೆ ಇದ್ದರಿಂದ ನಾನು ಬಸ್ಸಿನಲ್ಲಿ ಲೇಟಾಗಿ ಹೊರಡುವುದು ಮತ್ತು ನನ್ನ ಸಹಪಾಠಿಗಳೆಲ್ಲ ರೈಲಿನಲ್ಲಿ ಪ್ರಯಾಣ ಮಾಡುವುದು ಎಂದು ಮೊದಲೇ ನಿರ್ಧರಿಸಿದ್ದೆವು. ಅಂದುಕೊಂಡಂತೆ ಪರೀಕ್ಷೆ ಮುಗಿದೊಡನೆ ಎಲ್ಲ ರೈಲಿನಲ್ಲಿ ಹೊರಟರು, ನಾನು ನನ್ನ ಗೆಳೆಯನ ತಂಗಿ ಮದುವೆ ಮುಗಿಸಿ ಸುಮಾರು 10:30 ಕ್ಕೆ ಮೆಜೆಸ್ಟಿಕ್ ತಲುಪಿದೆ. ಅಂದು ಶುಕ್ರವಾರವಾದ್ದರಿಂದ ಎಲ್ಲ ಬಸ್ಸುಗಳು ತುಂಬಿ ಹೋಗಿದ್ದವು. ರಿಸರ್ವೇಶನ್ ಸೀಟುಗಳೇ ಹೆಚ್ಚಿದ್ದವು. ಅಂತೂ ಇಂತು ಆಂದ್ರದ ಕಂಡಕ್ಟರ್ ಅನ್ನಯ್ಯ ಒಬ್ಬನಿಗೆ 50 ಹೆಚ್ಚಿಗೆ ಕೊಟ್ಟು ಸೀಟು ಗಿಟ್ಟಿಸಿದೆ. ಮೆಜೆಸ್ಟಿಕ್ಕಿನಲ್ಲಿ ಇಂತಹ ಧಂಧೆಯೇ ನಡೆಯುತ್ತದೆ. ಸೀಟು ಹಿಡಿದು ಕೊಡುವುದು. ಮೊದಲೆ ಕಂಡಕ್ಟರ್ ಹತ್ರ ಡೀಲ್ ಕುದುರಿಸಿ ಟಿಕೆಟ್ ಖರೀದಿಸಿ ನಂತರ ಆ ಟಿಕೆಟ್ಟನ್ನು ಬೇರೆಯವರಿಗೆ ಮಾರುವುದು ಇವೆಲ್ಲ. ಹೇಗೋ ಉದರ ನಿಮಿತ್ತಂ ಬಹುಕೃತ ವೇಷಃ ಅಂದುಕೊಂಡು ಪ್ರಯಾಣ ಶುರು ಮಾಡಿದೆ.

Thursday, December 13, 2012

ನೊರೆಗುಳ್ಳೆಯ ಬದುಕು

ಪ್ರತಿಕ್ಷಣವೂ ನಮ್ಮದು ನೊರೆಗುಳ್ಳೆಯ ಬದುಕು
ಸಾವಿನಾಕ್ರಮಣ ಎಲ್ಲಿಂದ ಬರುವುದೊ
ಡಾಂಬರು ರಸ್ತೆಯೋ ಹರಿವ ನದಿಯೋ
ಸುಟ್ಟು ಕರಕಲಾಗಿಸೋ ಬೆಂಕಿಯೋ
ಮರೆಯಾಗಬಹುದು ಜೀವ ಅರಿಯದಂತೆ ಒಡೆದು

ಪ್ರತಿಕ್ಷಣವೂ ನಮ್ಮದು ನೊರೆಗುಳ್ಳೆಯ ಬದುಕು
ಕಟ್ಟಡದೊಳು ನಿದ್ರಿಸುವ ನೆಮ್ಮದಿಯೆ ಇಲ್ಲ
ಆಗಬಹುದದು ನೆಲಸಮ ಕ್ಷಣಮಾತ್ರದಲ್ಲಿ
ಹರಿಯುವ ನದಿಯಲಿ ಈಜುವಂತಿಲ್ಲ
ಪ್ರವಾಹದ ಪರಿಯದು ಎಂದು ನುಗ್ಗುವುದೋ
ಮರೆಯಾಗಬಹುದು ಜೀವ ಅರಿಯದಂತೆ ಒಡೆದು

ಪ್ರತಿಕ್ಷಣವೂ ನಮ್ಮದು ನೊರೆಗುಳ್ಳೆಯ ಬದುಕು
ಬೆಳಕ ನೀಡುವ ವಿದ್ಯುತ್ ಕೋಪಗೊಳ್ಳಲುಬಹುದು
ಬಿಸಿನೀರ ಬದಲು ಸಾವು ಸುರಿಸಲುಬಹುದು
ವೇಗದಲಿ ವಾಹನವ ಚಲಿಸುತಿದ್ದಾಗ
ಒಮ್ಮೆಲೆಯೆ ಬ್ರೇಕುಗಳು ಕೆಲಸ ಮರೆಯಲುಬಹುದು
ಮರೆಯಾಗಬಹುದು ಜೀವ ಅರಿಯದಂತೆ ಒಡೆದು

ಪ್ರತಿಕ್ಷಣವೂ ನಮ್ಮದು ನೊರೆಗುಳ್ಳೆಯ ಬದುಕು
ಹತ್ತನೆಯ ಮಹಡಿಯೊಳು ಲಿಫ್ಟಿನಲೊಮ್ಮೆ
ಇಹಲೋಕಕು ಕೂಡ ಲಿಫ್ಟು ಪಡೆಯಲುಬಹುದು
ಚರಮಗೀತೆಯ ಹಾಡಲು ಸಂಗೀತ ಬೇಕಿಲ್ಲ
ವಿಧಿಯ ಸಾಹಿತ್ಯದೊಳು ನಮ್ಮ ಹೆಸರು ಇದ್ದರೆ ಸಾಕು
ಮರೆಯಾಗಬಹುದು ಜೀವ ಅರಿಯದಂತೆ ಒಡೆದು

ಪವನ್ ಪಾರುಪತ್ತೇದಾರ :-

ಕನಸಲ್ಲಿ ಗಿರೀಶ

ಎಡವಿದ್ದೆ ಮೊನ್ನೆ
ಒಸರುತ್ತಿತ್ತೊಂದಷ್ಟು ರಕ್ತ
ಕೃಷ್ಣನ ಹರಿಷಿನದ ಹೆಜ್ಜೆಯಂತೆ
ನಾ ರಕ್ತದೊಳು ಚಿತ್ರಣ ಬಿಡಿಸಿದ್ದೆ
ಹೆಬ್ಬರಳು ಹರಿದು ಹೋಗಿತ್ತು
ಆದರೂ ಮರುದಿನದ ಕಬಡಿಯ ಚಿಂತೆ

ಪಲ್ಟಿ ಹೊಡೆಯುವ ಕನಸು
ಅಂಗಳದಲಿ ಎದುರಾಳಿಯ ಮಣ್ಣುಮುಕ್ಕಿಸುವಾಸೆ
ಎದುರಾಳಿ ಮುತ್ತಿದಾಗ ಛಂಗನೆಗರುವಾಸೆ
ಕನಸ ಕಾಣುತ್ತಲೇ ಎಡವಿಬಿಟ್ಟಿದ್ದೆ
ಹೆಬ್ಬರಳು ಹರಿದು ಹೋಗಿತ್ತು
ಆದರೂ ಮರುದಿನದ ಕಬಡಿಯ ಚಿಂತೆ

ಅಮ್ಮ ಬೈದಿದ್ದಳು ಕದಲದಿರೆಂದು
ಅಪ್ಪನಿಗೂ ನನ್ನ ಬೆರಳಿನದೇ ಚಿಂತೆ
ತಂಗಿಯಂತೂ ಗಾಯ ನೋಡಿದಾಗೆಲ್ಲ ಬೆಚ್ಚು
ವೈದ್ಯ ಮಾಡಿಸಿ ಬಿಳಿಯ ಬಟ್ಟೆ ಹಾಕಿದ್ದಾಯಿತು
ನೋವಿನಲ್ಲೆ ನಿದಿರೆ ಹತ್ತಿಬಿಟ್ಟಿತ್ತು
ಆದರೂ ಮರುದಿನದ ಕಬಡಿಯ ಚಿಂತೆ

ಕನಸಲ್ಲಿ ಗಿರೀಶ ಬಂದಿದ್ದ
ಕಾಲು ಸರಿಯಿಲ್ಲದಿದ್ದರೂ ಒಲಿಂಪಿಕ್ ವಿಜಯಿ
ಹಿಂದೆಯೇ ಮಾಲತಕ್ಕ ಬೇರೆ
ಪೋಲಿಯೋ ಲಸಿಕೆ ಮರೆತಿದ್ದ ಅವರಪ್ಪ
ಅದಕವಳು ಪಡೆದ ಉಡುಗರೆ ಪದ್ಮಶ್ರೀ
ಸತ್ತು ಗೆದ್ದು ಬಂದ ನಿಕೋಲಸ್ ಹೇಳಿದ
ಅಮ್ಮನ ಪ್ರೀತಿಯ ಶಕ್ತಿ ಏನೆಂದು

ಮರುದಿನ ಎದ್ದಾಗ ಹೊಸದೊಂದು ಲೋಕ
ಬೆರಳಿಗಚ್ಚಿದ್ದ ಬಿಳಿಯ ಬಟ್ಟೆ ಬಿಚ್ಚಿಹೋಗಿತ್ತು
ಮನದ ಮೂಲೆಯಲ್ಲಿದ್ದ ನೋವೆಂಬ ಭೂತ
ಹೆದರಿ ನಡುಗಿ ರಾತ್ರಿಯೆ ಮಾಯವಾಗಿತ್ತು
ಜಿಗಿ ಜಿಗಿದು ಹೊರಟೆ ಅಂದು ಕಬಡಿ ಆಡಲು
ಕನಸಲ್ಲಿ ಬಂದ ವೀರರಿಗೆ ಧನ್ಯವಾದ ತಿಳಿಸುತ

ಪವನ್ ಪಾರುಪತ್ತೇದಾರ :-

ಕೊಲ್ಲದಿರು ನನ್ನ

ಕೊಲ್ಲದಿರು ನನ್ನ
ಚೂಪಾದ ನೋಟದಲಿ ದ್ವೇಷವನು ಬೀರದೆ
ಬುಸುಗುಡುವ ನಾಗನಿಗೆ ಪೈಪೋಟಿ ತೋರದೆ
ಅಳಿದುಳಿದ ಉಸಿರನ್ನು ಅಲ್ಲಿಗೇ ನಿಲ್ಲಿಸಿ
ಉಶ್ಚ್ವಾಸ ನಿಶ್ಚ್ವಾಸ ಏನನ್ನು ಮಾಡಿಸದೆ
ಕೊಲ್ಲದಿರು ನನ್ನ

ಕೊಲ್ಲಲು ನಿನಗೇನು ಆಯುಧವು ಬೇಕಿಲ್ಲ
ನಿನ್ನ ಪ್ರೀತಿಯ ಮಾತುಗಳ ನಿಲ್ಲಿಸಿಬಿಡು ಸಾಕು
ಕಿರುನಗೆಯ ಮೆಲ್ಲಗೆ ನಿನ್ನೊಳಗೆ ಬಚ್ಚಿಟ್ಟುಬಿಡು
ಹುಡುಕುತ್ತಾ ಹುಡುಕುತ್ತ ಸತ್ತುಬಿಡುವೆ ನಾನು

ಬದುಕೋದು ಮರೆತಿರುವೆ ನಿನ್ನ ಸಂಗವ ಸೇರಿ
ಒಮ್ಮೊಮ್ಮೆ ಅನುಮಾನ ಬದುಕಲೇನು ಬೇಕೆಂದು
ಆಮ್ಲಜನಕಕೆ ನೀ ಪೈಪೋಟಿ ನೀಡಿರುವೆ
ನಿನ್ನ ಇರುವಿಕೆಯೆ ಸಾಕು ಇನ್ನೇನು ಬೇಕಿಲ್ಲ

ಕೊಲ್ಲದಿರು ನನ್ನ
ಎಲ್ಲ ಗುಟ್ಟನ್ನು ಹೇಳಿಬಿಟ್ಟಿರುವೆ ನಾನು
ನನ್ನ ಕೊಲ್ಲಲಿನ್ನು ಬಹಳ ಸುಲಭ ನಿನಗೆ
ನಿನ್ನ ಬಿಟ್ಟೊಂದು ಕ್ಷಣ ಇರಲಾರದೀ ಜೀವ
ನನ್ನ ನಾ ಹುಡುಕಲು ನಿನ್ನೊಳಗೆ ಬರಬೇಕು
ಕೊಲ್ಲದಿರು ನನ್ನ

ಪವನ್ ಪಾರುಪತ್ತೇದಾರ :-