Monday, April 30, 2012

ಚಂದ್ರಮನ ಪ್ರೀತಿ

ಆಗ ತಾನೆ ಅರಳಿದ ಹೂ
ಕಾನನದ ನಡುವೆ ರಾತ್ರಿಯಲಿ ಜನ
ಸುತ್ತಲಿನ ಪರಿಸರ ಸಂತಸದಿ ನಗುತಿತ್ತು
ಬಳ್ಳಿಯಮ್ಮನಿಗೆ ಹೂ ಹೆತ್ತ ಖುಶಿಯಿತ್ತು
ಗಿಡ ಗುಂಟೆ ಪ್ರಾಣಿ ಪಕ್ಷಿ ಎಲ್ಲವೂ ಹೊಸತು
ತಲೆ ಎತ್ತಿ ನೋಡಿದರೆ ಆಗಸದ ಪರಿವಿಲ್ಲ
ಚಂದ್ರಮನ ಅಂದಕೆ ಮಿತಿಯೆಂಬುದಿಲ್ಲ

ಚಂದ್ರಮನ ನೋಡೊಡನೆ ಸಕ್ಕಿತ್ತು ಆ ಹೂವು
ಕಪ್ಪು ಮಚ್ಚೆಗಳೂ ಕೂಡ ಮುದ್ದಾಗಿ ಕಂಡಿತ್ತು
ಹಿಡಿಯಲಾದೀತೇನು ಚಂದ್ರಮನ ಸೊಬಗ
ಚಂದ್ರನಂತೆ ಅರಳಿತ್ತು ಈ ಹೂವಿನ ಮೊಗ

ದಿನ ದಿನಕು ಅರಳುವಿಕೆ ಹೆಚ್ಚೆಚ್ಚು ಆಗಲು
ಪ್ರೀತಿ ನಿವೇದನೆಗೆ ಕ್ಷಣ ಗಣನೆ ಮಾಡಲು
ಹೂವ ಗಂಧವ ಸೂಸಿ ಚಂದ್ರನಿಗೆ ಕೊಡಲು

ಚಂದಿರನು ದುಂಬಿಗಳ ವರವ ಕೊಟ್ಟಿದ್ದ
ದುಂಬಿಯದು ಹೂವಿನ ಪ್ರೀತಿ ಪಡೆದಿತ್ತು

ಇಂದು ಆ ಹೂವಿಗೆ ವಯಸು ಹೆಚ್ಚಾಗಿ
ಘಮ್ಮೆನುವ ಗಾನವು ನಿಂತುಬಿಟ್ಟಾಗಿ
ಚಂದಿರನ ನೋಡಲು ಕಷ್ಟವಾಗಿತ್ತು
ಹೂವ ಶಿರವದು ಈಗ ನೆಲವ ನೋಡಿತ್ತು
ಚಂದಿರನ ಪ್ರೀತಿ ಕಡಿಮೆಯಾಗಿತ್ತು
ದುಂಬಿಗಳ ಸ್ನೇಹ ಮುರಿದು ಬಿಟ್ಟಿತ್ತು

ವಿರಹದ ಬೇಗೆಯಲಿ ಹೂವದು ಸುಡಲು
ವಯ್ಯಾರ ಬಿನ್ನಾಣ ಮುಕ್ತವಾಗಿರಲು
ಹೂವದು ಅವಸಾನ ನೋಡಿಯಾಗಿತ್ತು
ಪ್ರೀತಿಯದು ಅಮರವಾಗುಳಿದು ಬಿಟ್ಟಿತ್ತುಪವನ್ ಪಾರುಪತ್ತೇದಾರ್ :-Saturday, April 28, 2012

ಕನ್ನಡಿಗನಿಗೆ ಕನ್ನಡಿಗನೇ ಸಾರಥಿ


ಮೊನ್ನೆ ಬಹಳಾ ದಿನಗಳಾದ ಮೇಲೆ ಭಟ್ಟ ಫೋನ್ ಮಾಡಿದ್ದ, ನಾನು ತುಂಬಾ ಸಾರಿ ಅವ್ನಿಗೆ ಫೋನ್ ಮಾಡಿದ್ದೆ ಆದ್ರು ರಿಸೀವ್ ಮಾಡಿರ್ಲಿಲ್ಲ, ನಾ ಫೋನ್ ಎತ್ತಿದೊಡನೆ ಲೇ ಡಿ ಕೇ ಬೋಸ್, ಎಲ್ಲಿ ಹಾಳಾಗೋಗಿದ್ಯ ಅಂದೆ. ಒಂದು ಫೋನ್ ರಿಸೀವ್ ಮಾಡ್ಲಿಕ್ಕಾಗಲ್ವ ಅಂತ ಬೈದೆ, ಏನ್ ಮಾಡೋದು ಮಗಾ ಕೆಲಸ ಸಿಕ್ಕಾಪಟ್ಟೆ ಕಷ್ಟ ಐತಿ, ನಿಲ್ಲಂಗಿಲ್ಲ ಕೂರಂಗಿಲ್ಲ, ಮಕ್ಳು ಬಿಡೋಂಗೆ ಇಲ್ಲ, ಭಾರಿ ಕಷ್ಟ್ ಕೊಡ್ತಾರೆ ಅಂದ, ನಾನು ಸರಿ ಮಗನ ಅಂತ ಕಷ್ಟದ್ ಕೆಲ್ಸ ಏನ್ಲೆ ಮಾಡ್ತಿದ್ಯ ಅಂದೆ, ಆಗ ಭಟ್ಟನ ಉತ್ತರ ಕೇಳಿ ಮನಸ್ಸಿಗೆ ಬಹಳಾ ನೋವಾಯ್ತು, ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ಪ್ರಥಮ ದರ್ಜೆಯಲ್ಲಿ ಮುಗಿಸಿದ್ದ ಭಟ್ಟ, ವೆಂಟಿಲೇಶನ್ ರಿಪೇರಿ ಮಾಡುವ ಕೆಲಸ ಮಾಡುತಿದ್ದ, ಅವನೇ ಹೇಳಿದ ಪ್ರಕಾರ, ವೆಂಟಿಲೇಶನ್ ಕೆಲಸ ಇಲ್ದೆ ಇದ್ರೆ ಅವರ ಕಂಪನಿಯ ಆಫೀಸ್ ಬಾಯ್ ಕೂಡ ಅವನೆ, ಆ ಬ್ಯಾಂಕಿಗೆ ಹೋಗಿ ಚೆಕ್ ಹಾಕಿ ಬಾ, ಅಲ್ಲೆಲ್ಲೋ ಹೋಗಿ ಆರ್ಡರ್ ಕಾಪಿ ತೆಗೆದುಕೊಂಡು ಬಾ, ಹೀಗೆ ಎಲ್ಲ ರೀತಿಯಲ್ಲು ಅವ್ನನ್ನ ಬಳಸಿಕೊಳ್ಳುತಿದ್ದರು.


ಭಟ್ಟ ಓದಿದ್ದೆಲ್ಲ ಹುಬ್ಬಳ್ಳಿಯಲ್ಲಿ, ಕೆ.ಎಲ್.ಇ. ಶಾಲೆಯ ಬೋರ್ಡುಗಳಲ್ಲಿ ಕನ್ನಡ ಮೀಡಿಯಂ ಓದಿ ಬೆಳೆದ ಹುಡುಗ, ಅಂತಹ ದಡ್ಡ ಹುಡುಗನೇನಲ್ಲ, ಡಿಪ್ಲೋಮದಲ್ಲಿ ಮತ್ತು ಇಂಜಿನಿಯರಿಂಗ್ನಲ್ಲಿ ಮೊದಲನೆ ದರ್ಜೆಯಲ್ಲಿ ಪಾಸಾಗಿದ್ದಾನೆ. ಮನೆಯ ಕಷ್ಟಗಳನ್ನೆಲ್ಲ ಮೂಲೆಯಲ್ಲಿ ಬಿಸಾಕಿ ಅವರಪ್ಪ ಸಾಲ ಸೋಲ ಮಾಡಿ ಓದಿಸಿದ್ದಾರೆ, ಎಜುಕೇಶನ್ ಲೋನ್ ಕಟ್ಟಲೇ ಬೇಕಾದ ಅನಿವಾರ್ಯತೆ ಅವನ್ನ ಈ ಕೆಲಸಕ್ಕೆ ದೂಡಿದೆ. ಈ ಮಧ್ಯೆ ಆ ಕೋರ್ಸು ಈ ಕೋರ್ಸು ಅಂತ ಹೇಳಿದವರ ಮಾತು ಕೇಳಿ ಟೆಸ್ಟಿಂಗ್ ಕೋರ್ಸ್ ಸಹ ಮಾಡಿದ್ದಾನೆ.ಆದ್ರು ಕೆಲಸ ಇಲ್ಲಿವರೆಗೂ ಸರಿಯಾದ ಕೆಲಸ ಮಾತ್ರ ಸಿಕ್ಕಿಲ್ಲ. ಇದು ಬರೀ ನನ್ನೊಬ್ಬ ಗೆಳೆಯನ ಕಥೆಯಲ್ಲ, ಭಟ್ಟ ಎಂಬುದು ಇಲ್ಲಿ ಪಾತ್ರವಷ್ಟೇ, ಇಂತಹ ಸಾವಿರಾರು ಹುಡುಗರು ಚೆನ್ನಾಗಿ ಓದಿಯೂ ಉತ್ತಮ ಅಂಕಗಳು ಪಡೆದೂ ಸಹ, ಎಂತ ಎಂತಹುದೋ ಕೆಲಸಗಳನ್ನು ಮಾಡುತಿದ್ದಾರೆ, ವೆಂಟಿಲೇಶನ್ ಸೆರ್ವೀಸ್ ಮಾಡುವುದೇ ಆಗಿದ್ದರೆ ಭಟ್ಟ ಐ.ಟಿ.ಐ ಓದಿದ್ದರೆ ಸಾಕಾಗಿತ್ತು, ಇಂಜಿನಿಯರಿಂಗ್ ಅವಶ್ಯಕತೆಯೇ ಇರಲಿಲ್ಲ, ವಿ.ಟಿ.ಯು. ಅಡಿಯಲ್ಲಿ ಸುಮಾರು ೨೦೦ ಕಾಲೇಜುಗಳಿವೆ ಅಂದರೆ ಪ್ರತಿ ವರ್ಷ ಹೊರಬರುವ ಇಂಜಿನಿಯರುಗಳೆಷ್ಟು, ಮತ್ತು ಅವರಲ್ಲಿ ಕೆಲಸಗಳಿಗೆ ಸೇರುವರೆಷ್ಟು? ನಿಜಕ್ಕು ಅಂಕಿ ಅಂಶಗಳ ನೋಡಲು ಹೋದರೆ ಭಯವಾಗುತ್ತದೆ.

ಇನ್ನು ನಮ್ಮ ಕನ್ನಡದ ಹುಡುಗರಿಗೆ ಐ.ಟಿ. ಕಂಪನಿಗಳಲ್ಲಿ ಕೆಲಸ ಸಿಗುವುದು ಕಷ್ಟ ಆದ್ರೆ ಹೊರ ರಾಜ್ಯದವರಿಗೆ ಮಾತ್ರ, ಅದರಲ್ಲು ಫ್ರೆಷೆರ್ಸ್ ಗಳಿಗೆ ಹೇಗೆ ಕೆಲಸ ಸಿಗುತ್ತದೆ ಅನ್ನೋದು ಒಂದು ಆಶ್ಚರ್ಯ, ಅದಕ್ಕೆ ಕಾರಣ ಹೀಗೂ ಇರಬಹುದು,ಸಾಮಾನ್ಯ ಐ.ಟಿ.ಪಿ.ಎಲ್, ಮಾರುತ್ತಹಳ್ಳಿ ಇಲ್ಲೆಲ್ಲ ತೆಲುಗಿನ ಜನ ಬಾಡಿಗೆಗೆ ಇರುವುದು ಹೆಚ್ಚು, ಮತ್ತು ಬಿ.ಟಿ.ಎಂ ಲೇಔಟ್ ಸುತ್ತ ಮುತ್ತ ಉತ್ತರ ಭಾರತೀಯರು ಹೆಚ್ಚು, ಗಾರೆಪಾಳ್ಯ ಇಂತಹ ಜಾಗದಲ್ಲಿ ತಮಿಳಿಗರು,ಎಲ್ಲರೂ ಸಾಮಾನ್ಯ ಮನೆ ಮಾಡಿಕೊಂಡು ಒಂದೊಂದು ಮನೆಯಲ್ಲಿ ೫ ಜನ ೬ ಜನ ಇರ್ತಾರೆ. ೬ ಜನ ಅಂದ್ರೆ ಆರು ಬೇರೆ ಬೇರೆ ಕಂಪನಿಗಳು, ಅಲ್ಲಿ ಯಾರಾದ್ರು ಒಬ್ಬ ತನ್ನ ತಮ್ಮನೋ ಗೆಳೆಯನೋ ಕೆಲಸ ಹುಡುಕುತಿದ್ದಾನೆ ಎಂದರೆ, ಮಿಕ್ಕ ೬ ಜನ ರೂಂ ಮೇಟ್ ಗಳಿಗೆ ತಿಳಿಸುತ್ತಾನೆ, ಆಗ ಕೆಲಸ ಹುಡುಕುತ್ತಿರುವವನಿಗೆ ೬ ಅವಕಾಶಗಳು ಸಿಕ್ಕಂತೆ ಅಲ್ವೆ?? ಬೇರೆ ರಾಜ್ಯಗಳಿಂದ ಬಂದ ಅವರುಗಳ ನಡುವೆ ಒಂದು ರೀತಿಯ ಎಮೋಶಿನಲ್ ಬಾಂಡಿಂಗ್ ಮೂಡಿರುತ್ತದೆ. ಇದರಿಂದ ಲಾಭ ಅವ್ರವರ ರಾಜ್ಯದ ಹುಡುಗರಿಗೆ, ಅದಕ್ಕೆ ಎಲ್ಲಿ ನೋಡಿದರು ಮಲ್ಲುಗಳು ಎನ್ನಡಗಳು ಸಾಲೆಗಳು ತುಂಬಿರುವುದು.

ಇನ್ನು ನಮ್ಮ ಕನ್ನಡಿಗರು.ಅದ್ರಲ್ಲು ಐ.ಟಿ. ಬದುಕಿನವರು ತೀರಾ ಶುದ್ದ ಹಸ್ತರು, ತಮ್ಮ ಹತ್ತಿರದವರಿಗೇ ಆದ್ರು ಸಹಾಯ ಮಾಡುವುದಿಲ್ಲ, ಕೇಳಿದ್ರೆ ನಿನಗೆ ಟಾಲೆಂಟ್ ಇದ್ರೆ ಸಿಗುತ್ತೆ ಇಲ್ಲ ಅಂದ್ರೆ ಇಲ್ಲ ಅಂತ ಜಾರಿ ಕೊಳ್ತಾರೆ. ಎಷ್ಟೋ ಸರಿ ಕಳುಹಿಸಿದ ರೆಸೂಮ್ ಗಳನ್ನು ಹೆಚ್.ಅರ್. ತಂಡಕ್ಕೆ ಫಾರ್ವರ್ಡ್ ಸಹ ಮಾಡುವ ಗೋಜಿಗೆ ಹೋಗುವುದಿಲ್ಲ. ಇಂಟರ್ವ್ಯೂ ಅಲ್ಲಿ ಕನ್ನಡದ ಕ್ಯಾಂಡಿಡೇಟ್ ಗಳಿಗೆ ಸಾಫ್ಟ್ ಕಾರ್ನರ್ ತೋರಿಸೋದಿಲ್ಲ, ಕಾರಣ ಪ್ರೊಫೆಶಿನಲ್ ಎಥಿಕ್ಸ್ ಅಂತಾರೆ. ಹೀಗೆ ಆದ್ರೆ ನಮ್ಮ ಕನ್ನಡದ ಹುಡುಗರ ಕಥೆ ಏನು ಪಾಪ. ಎಲ್ಲರೂ ಕ್ಯಾಂಪಸ್ ಅಲ್ಲೇ ಪ್ಲೇಸ್ ಆಗುವಷ್ಟು ಬುದ್ಧಿವಂತರಿರುವುದಿಲ್ಲ, ಎಲ್ಲರಿಗೂ ಕಾಂಟಾಕ್ಟ್ಸ್ ಇರುವುದಿಲ್ಲ. ಕೆಲಸ ಹೇಗೆ ಹುಡುಕಬೇಕು ಅನ್ನೋದು ತಿಳಿದಿರುವುದಿಲ್ಲ. ಈಗೀಗ ಕನ್ನಡಿಗರ ವೇದಿಕೆಗಳು ಅಂತರ್ಜಾಲದಲ್ಲಿ ಬಹಳಷ್ಟು ಮೂಡುತ್ತಿವೆ, ದಯವಿಟ್ಟು ಎಲ್ಲ ಆ ವೇದಿಕೆಗಳಿಗೆ ಸಹಕರಿಸಿ, ಮತ್ತು ನಮ್ಮ ಕನ್ನಡಿಗರಿಗೆ ಕೆಲಸ ಕೊಡಿಸಲು ಪ್ರಯತ್ನಿಸಿ. ನಿಮ್ಮ ಕಛೇರಿಯಲ್ಲಿ ಯಾವುದೇ ಕೆಲಸ ಖಾಲಿ ಇದ್ರು ತಿಳಿಸಿ, ಕನ್ನಡಿಗನಿಗೆ ಉಪಯೊಗವಾಗಲಿ.
 ಕಡೇಮಾತು : ಎಲ್ಲ ಮಕ್ಳನ್ನು ಇಂಜಿನಿಯರೇ ಮಾಡ್ಬೇಕು ಅನ್ನೋ ಅಪ್ಪ ಅಮ್ಮನ ಆಸೆಗೆ ಇವತ್ತು ಬಹಳಷ್ಟು ಕೂಸುಗಳು ಬಡವಾಗ್ತಿವೆ.

********************************************************************************************

Tuesday, April 24, 2012

ಅವಿವೇಕಿ ಮಿತ್ರನಿಗಿಂತ ವಿವೇಕಿ ಶತ್ರು ಮೇಲು


ಪ್ರವೀಣ ಓದೋ ವಿಷಯದಲ್ಲಿ ಯಾವಾಗ್ಲೂ ಸೋಂಬೇರಿ,ಅಪ್ಪ ಅಮ್ಮ ಎಷ್ಟು ಬೈದರೂ ತನ್ನ ಲೋಕದಲ್ಲೇ ಮಗ್ನ, ಸ್ನೇಹಿತರ ಜೊತೆ ಯಾವಾಗ್ಲೂ ತಿರುಗಾಡೋದು, ಅಪ್ಪ ಅಮ್ಮನ ಹತ್ರ ಹಣ ತೆಗೆದುಕೊಂಡು ಸಿನಿಮಾ ನೋಡೋದು, ಭಾನುವಾರ ಬಂದ್ರೆ ಸಾಕು ಬೆಳಿಗ್ಗೆ ಇಂದ ಸಂಜೆಯವರೆಗೂ ಬೆಟ್ಟಿಂಗ್ನಲ್ಲಿ ಕ್ರಿಕೆಟ್ ಆಡೋದು ಇದೇ ಕೆಲಸ, ಅಪ್ಪ ಅಮ್ಮನಿಗೂ ಬುದ್ಧಿ ಹೇಳಿ ಹೇಳಿ ಸುಸ್ತಾಗಿತ್ತು. ಹುಡುಗ್ರ ಸಹವಾಸ ಬರೀ ಆಡುವುದಕ್ಕೆ ಸೀಮಿತವಾಗದೆ ದುಶ್ಚಟಗಳ ಕಡೆಯೂ ಸಹ ವಾಲಿತ್ತು. ಮನೆಗೆ ಬಂದಾಗ ಒಮ್ಮೆ ಧೂಮಪಾನದ ಘಮಲು ಅಮ್ಮನ ಮೂಗು ಬಡಿದಿತ್ತು. ಆಗಾಗ ಅಪ್ಪನ ಜೇಬಿನಿಂದ ನೋಟುಗಳು ಸಹ ಕಾಣೆಯಾಗುತಿದ್ದವು. ಅಪ್ಪ ಅಮ್ಮ ಇಬ್ಬರು ಚರ್ಚಿಸಿ ಏನು ಮಾಡುವುದು ಎಂದು ಯೋಚಿಸಿ ಒಂದು ನಿರ್ಧಾರಕ್ಕೆ ಬಂದರು.

ಮರುದಿನ ಭಾನುವಾರ ಪ್ರವೀಣ ಎಂದಿನಂತೆ ಹೇಳದೆ ಕೇಳದೆ ಕ್ರಿಕೆಟ್ ಆಡಲು ಹೊರಟು ಬಿಟ್ಟ, ಅಪ್ಪ ಅಮ್ಮ ಸೀದ ಅವರಪ್ಪನ ಮನೆಗೆ ಹೋಗಿ ಪ್ರವೀಣನ ತಾತನನ್ನು ಕರೆ ತಂದರು. ತಾತನಿಗೆ ವಯಸ್ಸು ಸುಮಾರು ೭೦ ಆಗಿದ್ದರು ಬಹಳ ಚುರುಕು, ಕಾಲ ಕಾಲಕ್ಕೆ ತಾನು ಸಹ ಬದಲಾಗಿದ್ದಂತಹ ಘಾಟಿ ಮುದುಕ. ಕಂಪ್ಯೂಟರ್, ಕ್ರಿಕೆಟ್, ಸಿನಿಮಾ ಎಲ್ಲಾದ್ರಲ್ಲು ಎತ್ತಿದ ಕೈ. ಕ್ರಿಕೆಟ್ ಆಡಲು ಹೋಗಿದ್ದ ಪ್ರವೀಣ ಎಂದಿನಂತೆ ಮನೆಗೆ ಬಂದ, ಬಂದೊಡನೆ ತಾತನನ್ನು ನೋಡಿ ಆಶ್ಚರ್ಯ ಚಕಿತನಾದ, ತಾತನ ಕಾಲಿಗೆ ನಮಸ್ಕಾರ ಮಾಡೋ ಅಂತ ಅಪ್ಪ ಹೇಳೋ ತನಕ ಇವ್ನಿಗೆ ತೋಚಲಿಲ್ಲ, ಮಾಡ್ತೀನಿ ಕೈ ಕಾಲು ತೊಳ್ಕೊಂದು ಬಂದೆ ಅಂತ ಸ್ನಾನದ ಮನೆಗೆ ಹೋಗಿ ಟೂತ್ ಪೇಸ್ಟ್ ನ ಒಂದಷ್ಟು ಬಾಯಿಗೆ ಹಾಕಿಕೊಂಡು ಮುಕ್ಕಳಿಸಿ ಬಂದ, ಬಂದೊಡನೆ ನಮಸ್ಕಾರ ಮಾಡಿದಾಗ ತಾತನಿಗೆ ಧೂಮಪಾನದ ಘಮಲು ತಿಳಿದು ಬಿಡ್ತು. ಅದೂ ಅಲ್ದೆ ಮೊದಲೇ ಪ್ರವೀಣನ ಅಪ್ಪ ಅಮ್ಮ ತಮ್ಮ ಮಗ ದಾರಿ ತಪ್ತಾ ಇದ್ದಾನೆ ಅನ್ನೋ ವಿಷಯ ಬೇರೆ ಮೊದಲೇ ಹೇಳಿದ್ರು. ವಿಷಯ ಗೊತ್ತಾದ್ರು ತಾತ ಮುಗುಮ್ಮನೆ ಇದ್ದರು.

ಮಾರನೆ ದಿನ ಪ್ರವೀಣ ಕಾಲೇಜಿಗೆ ಅಂತ ಹೊರಟಾಗ, ತಾತ ಸಹ ತಯಾರಾಗಿ ಮೊಮ್ಮಗನೊಂದಿಗೆ ಹೊರಡಲು ಸಿದ್ದರಾಗಿದ್ದರು, ಪ್ರವೀಣ ತಾತ ಹಾಗೆಲ್ಲ ನಿಮ್ಮನ್ನ ಕಾಲೇಜಿಗೆ ಬಿಡಲ್ಲ, ಬಹಳಾ ಶಿಸ್ತು ಅಲ್ಲಿ ಅಂತೆಲ್ಲ ಹೇಳ್ದ, ಅದಕ್ಕೆ ತಾತ ನಾ ನೋಡದೇ ಇರೋ ಕಾಲೇಜೇನೋ ಅದು, ನೀನ್ ಓದ್ತಾ ಇರೋ ಕಾಲೇಜು ನನ್ನ ಫೇಸ್ಬುಕ್ ಗೆಳೆಯ ಪ್ರಕಾಶ್ ರಾಜು ದು, ಅವರು ನಾನು ಇಲ್ಲಿಗೆ ಬಂದಿರೋ ಸ್ಟೇಟಸ್ ನೋಡಿದ್ರಂತೆ, ಫೋನ್ ಮಾಡಿದ್ರು ಅದಕ್ಕೆ ಬರ್ತಾ ಇದ್ದೀನಿ ಅಂತ ಪ್ರವೀಣಂಗೆ ಒಳ್ಳೆ ಟಾಂಗ್ ಕೊಟ್ಟ್ರು. ಪ್ರವೀಣನ ಮೊಬೈಲ್ ಗೆ ಅವನ ಗೆಳೆಯನ ಫೋನ್ ಬಂತು, ಏನ್ ಮಗಾ ಸಿನಿಮಾಗೆ ಟಿಕೆಟ್ ತೊಗೊಂಡು ಕಾಯ್ತಾ ಇದ್ದೀವಿ ಎಲ್ಲಿದ್ಯ ಇನ್ನ?? ಪ್ರವೀಣ,ತಾತನ ಜೊತೆ ಇದ್ದೀನಿ ಮಗಾ ಆಮೇಲೆ ಫೋನ್ ಮಾಡ್ತೀನಿ ಅಂದ. ಫೋನ್ ಕಟ್ ಆದ ಮೇಲೆ ತಾತ ಕೇಳಿದ್ರು ಏನು ಸಿನಿಮಾಗೆ ಹೋಗ್ಬೇಕ ಅಂತ, ಅದಕ್ಕೆ ಪ್ರವೀಣ ಹೌದು ನಿಮಗೆ ಹೇಗೆ ಗೊತ್ತಾಯ್ತು ತಾತ ಅಂದ, ಅದಕ್ಕೆ ರಾತ್ರಿ ನೀನು ನಿನ್ನ ಗೆಳೆಯನ ಜೊತೆ ಫೋನಲ್ಲಿ ಮಾತಾಡ್ತಾ ಇದ್ದಲ್ಲ ಆಗ ಕೇಳಿಸ್ತು ನಂಗೆ ಅಂದ್ರು. ಆದ್ರೆ ಕಾಲೇಜಿಗೆ ಚಕ್ಕರ್ ಹೊಡೆದು ಸಿನಿಮಾ ನೋಡೋದು ತಪ್ಪಲ್ವ ಅಂದ್ರು. ಪ್ರವೀಣನಿಗೆ ಉತ್ತರ ಕೊಡಲು ಆಗ್ಲಿಲ್ಲ, ಕಡೆಗೆ ತಾತ, ನಿನ್ ಸ್ನೇಹಿತನಿಗೆ ಫೋನ್ ಮಾಡಿ ಹೇಳು ನನಗೂ ಒಂದು ಟಿಕೆಟ್ ತೊಗೊ ಅಂತ ನಾನು ಬರ್ತೀನಿ ಅಂದ್ರು. ಪ್ರವೀಣನಿಗೆ ಒಂದು ಕಡೇ ಖುಷಿ ಆಯ್ತು ಮತ್ತೆ ಭಯ ಸಹ ಆಯ್ತು ಮನೇಲಿ ಹೇಳಿಬಿಟ್ರೆ ಅಂತ ಅಷ್ಟ್ರಲ್ಲಿ ತಾತ, ನೀನೇನು ಯೋಚಿಸ ಬೇಡ ಮನೇಲಿ ನಾ ಏನು ಈ ವಿಷಯ ತಿಳಿಸಲ್ಲ ಅಂದಾಗ ಸ್ವಲ್ಪ ಸಮಾಧಾನ ಆಯ್ತು.

ಸಿನಿಮಾಗೆ ತಾತ ಮೊಮ್ಮಗ ಜೊತೆಗೇ ಹೋದ್ರು, ಅಲ್ಲಿ ಅವನಿಗಾಗಿ ಕಾದಿದ್ದ ಹುಡುಗರೆಲ್ಲ ತಾತನ ನೋಡಿ ಘಾಬರಿ ಆದ್ರು, ಪ್ರವೀಣನ ಮಾತು ಕೇಳಿ ಸುಮ್ಮನಾದ್ರು. ಜೊತೆಯಲ್ಲಿದ್ದ ಹುಡುಗರ ನಡವಳಿಕೆಗಳ ಮೇಲೆ ಗಮನವಿಟ್ಟಿದ್ದ ತಾತ, ಎಲ್ಲರ ಸರಿಯಾಗಿ ಗಮನಿಸುತಿದ್ದರು. ಇಂಟರ್ವೆಲ್ ಬಿಟ್ಟಾಗ ಪ್ರವೀಣನ ಗೆಳೆಯರೆಲ್ಲ ಟಾಯ್ಲೆಟ್ಟಿನ ಪಕ್ಕ ನಿಂತು ಧೂಮಪಾನ ಮಾಡುತಿದ್ದರು, ಜೊತೆಯಲ್ಲಿ ಪ್ರವೀಣನನ್ನು ಕರೆದೊಯ್ದಿದ್ದರಿಂದ ಅವನೂ ಅವರೊಡನೆ ಭಯ ಭಯದಿಂದ ಎಲ್ಲಿ ತಾತ ಬಂದು ನೋಡುಬಿಡುತ್ತಾರೋ ಅಂದುಕೊಂಡು ಸೇದುತಿದ್ದ, ಎಲ್ಲ ಗಮನಿಸಿದ ತಾತ ಸುಮ್ಮನೆ ಏನು ನೋಡದಿದ್ದಂತೆ ಅಂಗಡಿ ಬಳಿ ಹೋಗಿ ಚಿಪ್ಸ್ ಮತ್ತು ತಂಪು ಪಾನೀಯ ತಂದರು. ಸಿನಿಮಾ ಮತ್ತೆ ಶುರುವಾಯ್ತು, ತಾತ ಪ್ರವೀಣನನ್ನು ಏನಪ್ಪ ನಿನ್ನ ಸ್ನೇಹಿತರು ಧೂಮಪಾನ ಮಾಡ್ತಾರೇನು, ವಾಸನೆ ಬರುತ್ತಿದೆ ಅಂದ್ರು, ಅದಕ್ಕೆ ಪ್ರವೀಣ ಯಾವಾಗ್ಲು ಇಲ್ಲ ತಾತ ಯಾವಾಗ್ಲಾದ್ರು ಒಮ್ಮೊಮ್ಮೆ ಅಷ್ಟೆ ಅಂದ. ಚಿಪ್ಸ್ ಮತ್ತೆ ತಂಪು ಪಾನೀಯ ಸವಿಯುತ್ತ ಸಿನಿಮ ಪಯಣ ಮುಂದುವರೆಯಿತು, ತಾತ ಮತ್ತೆ ಪ್ರವೀಣನನ್ನು ಪ್ರಶ್ನೆ ಕೇಳಿದರು, ನಿನ್ನ ಸ್ನೇಹಿತರು ಏನು ಹೇಳಿದ್ರು ಮಾಡ್ತೀಯಲ್ಲ, ಅವರು ಅಷ್ಟು ಒಳ್ಳೆಯವರೇ?? ನಿನ್ನ ಕಷ್ಟ ಕಾಲದಲ್ಲಿ ಸಹಾಯಕ್ಕೆ ಬರುವಂಥವರೇ?? ಪ್ರವೀಣ ಹೌದು ತಾತ ಬಹಳಾ ಒಳ್ಳೇ ಹುಡುಗರು, ನನಗೋಸ್ಕರ ಸ್ನೇಹಕ್ಕೋಸ್ಕರ ಪ್ರಾಣ ಬೇಕಾದ್ರು ಕೊಡ್ತಾರೆ ಅಂದ. ತಾತ ಒಮ್ಮೆ ಮನದೊಳಗೆ ನಕ್ಕು ಸುಮ್ಮನಾದರು.

ಸಿನಿಮಾ ಮುಗಿಯಿತು ಶುಭಂ ತೋರಿಸಿದರು, ಎಲ್ಲರು ಹೊರಡಲು ಶುರು ಮಾಡಿದರು, ಅಷ್ಟರಲ್ಲೆ ಮುಂದಿನ ಸೀಟಿನಲ್ಲಿದ್ದ ಒಬ್ಬ ವ್ಯಕ್ತಿ ಇದ್ದಕ್ಕಿದ್ದಂತೆ ಅಯ್ಯೊ ನನ್ನ ಪರ್ಸ್ ಕಾಣಿಸ್ತಿಲ್ಲ ಅಂತ ಕಿರುಚಲು ಶುರು ಮಾಡಿದ, ಅಲ್ಲಿದ್ದ ಜನ ಎಲ್ಲ ಗುಂಪು ಕಟ್ಟಿದರು, ಗುಂಪಿನಲ್ಲಿದ್ದ ಒಬ್ಬ ವ್ಯಕ್ತಿ ಯಾರ ಮೇಲಾದ್ರು ಅನುಮಾನ ಇದ್ಯ ಸರ್ ಅಂದ, ಆಗ ಪರ್ಸು ಕಳೆದುಕೊಂಡ ವ್ಯಕ್ತಿ ಪ್ರವೀಣನನ್ನು ತೋರಿಸಿ ಈ ಹುಡುಗನ ಮೇಲೆ ಅನುಮಾನ ನಂಗೆ ಆಗ್ಲೆ ನನ್ನ ಹಿಂದೆ ಕೈ ಹಾಕಿದ ಅನುಭವ ಆಯ್ತು ಅಂದ.ಪ್ರವೀಣನಿಗೆ ಮತ್ತು ಅವನ ಸ್ನೇಹಿತರಿಗೆ ನಡುಕ ಶುರುವಾಗಿತ್ತು. ಪ್ರವೀಣನ ಜೇಬು ಮತ್ತು ಬ್ಯಾಗ್ ಪರೀಕ್ಷೆ ಮಾಡಿದಾಗ ಪರ್ಸ್ ಸಹ ಬ್ಯಾಗಿನಲ್ಲಿತ್ತು. ಅವನ ಗೆಳೆಯರನ್ನು ಅಲ್ಲಿದ್ದವರು ಕಳ್ ನನ್ ಮಕ್ಳಾ ನೀವೇನೇನ್ ಕದ್ದೀದೀರ ತೆಗೀರಿ ಎಂದು ದಬಾಯಿಸಿದರು, ಆಗ ಪ್ರವೀಣನ ಗೆಳೆಯನಲ್ಲೊಬ್ಬ, ಸರ್ ಇವನ್ಯಾರು ಅಂತ ನಮಗೆ ಗೊತ್ತೇ ಇಲ್ಲ, ನಾವು ಸಿನಿಮಾ ನೋಡಕ್ ಬಂದಿದ್ದೀವಿ ಹೋಗ್ತೀವಿ ಅಂತ ಜಾಗ ಖಾಲಿ ಮಾಡಿಬಿಟ್ಟರು. ಅಲ್ಲಿದ್ದ ಅಷ್ಟೂ ಜನರ ಕೋಪ ಪ್ರವೀಣನ ಮೇಲೆ ತಿರುಗಿತ್ತು, ಇನ್ನೇನು ಧರ್ಮದೇಟು ಬೀಳಬೇಕು ಅನ್ನೋ ಅಷ್ಟರಲ್ಲಿ, ಪರ್ಸು ಕಳೆದುಕೊಂಡ ವ್ಯಕ್ತಿ, ಜನರ ಮುಂದೆ ನಿಂತು, ರೀ ಪರ್ಸು ಕಳ್ಕೊಂಡೋನು ನಾನು, ನಾನು ಇವನಿಗೆ ಬುದ್ಧಿ ಹೇಳ್ತೀನಿ, ಇವನನ್ನ ಪೋಲೀಸರಿಗೆ ಕೊಡ್ತೀನಿ ಅಂತ ಹೇಳಿ ತಾತನ ಜೊತೆಯಲ್ಲೇ ಚಿತ್ರ ಮಂದಿರದಿಂದ ಹೊರ ನಡೆದ.

ಹೊರಬಂದ ಮೇಲೆ ತಾತ ದಯವಿಟ್ಟು ಬಿಟ್ಟುಬಿಡಿ, ಏನೋ ಚಿಕ್ಕ ಹುಡುಗ ತಪ್ಪು ಮಾಡಿದ್ದಾನೆ ಅಂತ ಕೇಳಿಕೊಂಡರು, ಆಗ ಆ ವ್ಯಕ್ತಿ ಹಾಗೆಆಗಲಿ, ಹುಡುಗರ್ನ ಚೆನ್ನಾಗಿ ನೋಡ್ಕೋಳಿ ಹಾಳಾಗಕ್ಕೆ ಬಿಡ್ಬೇಡಿ ಎಂದು ಹೇಳಿ ಹೊರಟುಬಿಟ್ಟ. ಮನೆಗೆ ಹೋಗುವಾಗ ಪ್ರವೀಣ ತಾತನಿಗೆ, ತಾತ ನನ್ನ ಕ್ಷಮಿಸಿಬಿಡು ತಾತ, ನನ್ನ ಸ್ನೇಹಿತರನ್ನು ನಂಬಿ ನಾ ತಪ್ಪು ಮಾಡಿಬಿಟ್ಟೆ ಎಂದ, ಅದಕ್ಕೆ ತಾತ ನೀನು ನಂಬಿಕೆಗೆ ಅರ್ಹರಾದ ಸ್ನೇಹಿತರನ್ನು ಮಾಡಿಕೊಂಡಿಲ್ಲ ನನ್ನ ಮುದ್ದಿನ ಮೊಮ್ಮಗನೆ ಅದಕ್ಕೆ ಈ ರೀತಿ ಆಗಿದೆ, ಸ್ನೇಹಿತರನ್ನು ಆಯ್ದುಕೊಳ್ಳುವಾಗ ಬಹಳಾ ಹುಷಾರಾಗಿರಬೇಕು ಎಂದು ಬುದ್ಧಿವಾದ ಹೇಳಿದರು. ತಾತ ನಾನು ನಿಜವಾಗ್ಲು ಆ ಪರ್ಸ್ ಕದ್ದಿಲ್ಲ ತಾತ ದಯವಿಟ್ಟು ಮನೇಲಿ ಹೇಳ್ಬೇಡಿ ಅಂದ ಪ್ರವೀಣ, ಅದಕ್ಕೆ ತಾತ ಸುಮ್ಮನೆ ನಕ್ಕು ನೀನೇನು ಯೋಚಿಸಬೇಡಾ ನಾ ಹೇಳಲ್ಲ ಇನ್ಮೇಲೆ ಓದಿನ ಕಡೆ ಗಮನ ಕೊಡು ಇಂತಹ ಜನರ ಸಹವಾಸ ಮಾಡಬೇಡ ಅಂದ್ರು.

ಮಾರನೆಯ ದಿನ ಮುಂಜಾನೆ ಮತ್ತೆ ತಾತ ಹೊರಡಲು ಸಿದ್ಧರಾಗಿದ್ದರು.ಪ್ರವೀಣ ಸಹ ಬೀಳ್ಕೊಡಲು ಅಪ್ಪ ಅಮ್ಮನ ಜೊತೆ ಬಾಗಿಲಲಿ ನಿಂತ, ಚೆನ್ನಾಗಿ ಓದು,ಕೆಟ್ಟ ಹುಡುಗರ ಸಹವಾಸ ಮಾಡಬೇಡ ಅಂತೆಲ್ಲ ಬುದ್ಧಿಮಾತು ಹೇಳಿದ ತಾತ ಕಾರ್ ಬರುವುದನ್ನೇ ಎದುರು ನೋಡ್ತಾ ಇದ್ರು. ಕಾರ್ ಬಂತು ಕಾರಿಂದ ಡ್ರೈವರ್ ಇಳಿದು ಬಂದು ತಾತನ ಕಿಟ್ ಬ್ಯಾಗ್ ಎತ್ತುಕೊಂಡು ಹೋಗಿ ಡಿಕ್ಕಿಯಲ್ಲಿ ಹಾಕಿದ. ಪ್ರವೀಣನಿಗೆ ಇದ್ದಕ್ಕಿದ್ದಂತೆ ಶಾಕ್ ಹೊಡೆದಂತಾಯಿತು. ತಾತ ನ ಮಖ ನೋಡಿದ,ಹತ್ತಿರ ಬಂದು ಮೆಲ್ಲಗೆ ಕಿವಿಯಲ್ಲಿ ತಾತ ನೆನ್ನೆ ಇವನ ಪರ್ಸೆ ನನ್ ಬ್ಯಾಗಲ್ಲಿ ಬಂದಿದ್ದು, ಅಪ್ಪ ಅಮ್ಮನಿಗೆ ಈಗ ಹೇಳಿಬಿಟ್ರೆ ಅಂದ. ತಾತ ನಗುನಗುತ್ತ ಇವ್ನು ನಮ್ಮ ಡ್ರೈವರ್ ಸೋಮಣ್ಣ ಕಣೋ ನೆನ್ನೆ ಸಿನಿಮಾ ನೋಡ್ಬೇಕು ಅಂತಿದ್ದ ನಾನೆ ಕಾಸು ಕೊಟ್ಟು ಕಳಿಸಿದ್ದೆ ಅಂತ ಸೋಮಣ್ಣನ ಮಖ ನೋಡಿದ, ಒಮ್ಮೆ ಸೋಮಣ್ಣ ಮತ್ತೆ ತಾತ ಜೋರಾಗಿ ನಕ್ಕರು.ಪ್ರವೀಣ ತಾತನ ಇಂಟೆಲಿಜನ್ಸ್ ನೋಡಿ ದಂಗಾಗಿ ಬಿಟ್ಟಿದ್ದ. ಪ್ರವೀಣನಿಗೆ ಟಾಟಾ ಮಾಡುತ್ತ ತಾತ ಒಂದು ಮಾತು ಹೇಳಿದ್ರು, ಅದನ್ನ ಪ್ರವೀಣ ಎಂದಿಗೂ ಮರೆಯೋಹಾಗಿಲ್ಲ
" ಅವಿವೇಕಿ ಮಿತ್ರನಿಗಿಂತ ವಿವೇಕಿ ಶತ್ರು ಮೇಲು "
ಚಿತ್ರಕೃಪೆ : istockphoto.com
***********************************************************************************************

Monday, April 16, 2012

ಕೋವಿಯ ಮಾತು

ಶರವೇಗ ನನ್ನುಗುಳು
ಒಂದೊಂದು ಉಗುಳಿಗೂ ಒಂದೊಂದು ಜೀವ
ಯಾರ ಸಾವಿನ ನಾದವೋ ಹಿಡಿದವನೆ ಬಲ್ಲ
ನಿಶ್ಯಭ್ದಕ್ಕು ಬದ್ದ ನಾನು
ಸದ್ದು ಮಾಡುವುದರಲ್ಲೂ ಮುಂದು
ನಿಪುಣ ನಾ ನಿರಪರಾಧಿ ಕೂಡ
ಕೊಲ್ಲುವುದು ನನ್ನುಗುಳಾದರು ತಪ್ಪು ನನದಲ್ಲ

ನನ್ನ ಹಿಡಿಯುವವನ ಮನಸು
ಶಾಂತಿಯ ಗುಡಿಸಿಲಿನಲಿ ಇಲ್ಲ
ಕೋಪ ತಾಪಗಳ ಸೆರೆಮನೆಯಲುಂಟು
ಉದ್ವೇಗ ಮನವೆಲ್ಲ ಮೂಡಿಬಂದಿರಲು
ನಾನು ನಾನೆಂಬ ಅಹಂನ ಹಂಗಿನಲ್ಲುಂಟು
ಜೀವ ತೆಗೆದರಷ್ಟೇ ಸಮಾಧಾನ ಅವನಿಗೆ
ಸಾಯುವ ತನುಗಿಂತ ಕವಡೆಗೆ ಬೆಲೆಯುಂಟು

ಎಷ್ಟು ಸಾವು ನೋಡಿಹೆನೋ ಲೆಕ್ಕವೇ ಇಲ್ಲ
ಹೊಗೆಯಾಗಿ ನಿಟ್ಟುಸಿರ ಬಿಟ್ಟಿರುವೆ ಕೂಡ
ಮದ ಮತ್ಸರವು ನನಗಿಲ್ಲ
ನನ್ನ ಹಿಡಿದವನ ಸೊತ್ತು ಅದು
ಕೊಂದವನು ನಿರ್ದಯಿ ಸಾಯುವವ ದುರ್ದೈವಿ
ಕೋವಿಯು ನಾ ಮೂಕ ಸಾಕ್ಷಿಯಿಲ್ಲಿ
ಕೋವಿಯು ನಾ ಮೂಕ ಸಾಕ್ಷಿಯಿಲ್ಲಿ

ಹೊಸ ಪ್ರಯತ್ನ :)

ಪವನ್ ಪಾರುಪತ್ತೇದಾರ :-

Monday, April 9, 2012

ದುರಂತದ ದುರಾಸೆ


ನೂರಿದ್ದ ಜೇಬು ಸೂರಿದ್ದ ಮನೆ
ಸಾಕಾಗಿತ್ತು ಆ ಬಡಪಾಯಿಗೆ
ಆಸೆ ಎಂಬ ಮರೀಚಿಕೆಯ ಹಾದಿ
ಹೆದ್ದಾರಿಯಾಗಿ ಕಂಡಿತ್ತು
ಕಲ್ಲುಮುಳ್ಳುಗಳು ಹೂಗಳಂತೆ ಕಂಡವು
ಶತ್ರುಗಳೆಲ್ಲ ಮಿತ್ರರಂತೆ ಕಂಡರು

ಸಾವಿರದ ಆಸೆ ಬೆನ್ನು ಹತ್ತಿತ್ತು
ಸೂರು ತಾರಸಿಯಾಗುವ ಕನಸು ಹತ್ತಿತ್ತು
ನೂರು ಬರಿದಾಗಬಹುದೆಂಬ ಚಿಂತೆ ಇರಲಿಲ್ಲ
ಸೂರು ಬಿದ್ದರೆ ನೆರಳಿಲ್ಲವೆಂಬ ಅರಿವು ಇರಲಿಲ್ಲ
ದುರಾಸೆ ಎಂಬ ಭೂತ
ಮೆದುಳ ಮೇಲೆ ಸವಾರಿ ಮಾಡಿತ್ತು

ಕಂಡ ಕಂಡವರ ಬಳಿ ಕೈಚಾಚಬೇಕಾಯ್ತು
ಕರುಣೆಯ ಕನ್ನಡಿ ಒಡೆಯಬೇಕಾಯ್ತು
ನಾಚಿಕೆ ಮರ್ಯಾದೆ ಮರೆಯಬೇಕಾಯ್ತು
ತನ್ನವರ ದೂರಕ್ಕೆ ತಳ್ಳಬೇಕಾಯ್ತು

ಕಡೆಗೊಮ್ಮೆ

ಸಾವಿರವೂ ತಾರಸಿಯೂ ಸಿದ್ದವಾಗಿತ್ತು
ಸಂಬಂಧದ ಸೇತುವೆ ಒಡೆದು ಬಿಟ್ಟಿತ್ತು
ದುರಾಸೆಯು ದುರಂತವಾಗಿಬಿಟ್ಟಿತ್ತು....

ಸಂಬಂಧಗಳು ಹಣ ಕಾಸು ಮನೆ ಇವೆಲ್ಲಕ್ಕಿಂಥ ಮಿಗಿಲಾದದ್ದು, ಹಣ ಕಾಸು, ಬಂಗಲೆಯಿಂದಲೇ ಸಂಬಂಧ ಬೆಸೆದಿದ್ದರೆ ಅದು ಎಂದಿಗೂ ಶಾಶ್ವತವಲ್ಲ......

ಪವನ್ ಪಾರುಪತ್ತೇದಾರ :-

ಉಗಾದಿಯ ಜೂಜಾಟ

ಕಳೆಬಂದಿತ್ತು ಹಳ್ಳಿಯ ತೋಪಿಗೆ
ಯುಗಾದಿಯ ಜೂಜು ಹುರುಪು ತಂದಿತ್ತು
ಊರ ಯುವಕರ ಜೊತೆಗೊಬ್ಬ ಸಂಸಾರಿ
ಆಡ ಆಡುತಲೆ ಕಳೆದ ಬದುಕಿನ ಬೆಲೆಯ

ಮರದಡಿಯೆ ಮುದುಡಿದೆ ಸಂಸಾರಿ ಸಂಸಾರ
ಮಾಂಸದ ಹಣ ಕೂಡ ಜೂಜು ಪಾಲಾಯ್ತಲ್ಲ
ಹೊಸಬಟ್ಟೆ ಆಸೆಯಲಿ ಕಾದಿಹರು ಮಕ್ಕಳು
ಉಟ್ಟಬಟ್ಟೆಯೂ ಇಲ್ಲಿ ಕಳೆದುಕೊಂಡಿಹೆಯಲ್ಲ

ಮುಂಜಾನೆ ಹರಳೆಣ್ಣೆ ಮೈಯಲ್ಲ ತಿಕ್ಕುತ್ತ
ದೇಗುಲಕೆ ಹೋಗೋಣ ಎಂದಿದ್ದ ಹೆಂಡತಿಗೆ
ನಿನ್ನದೇ ಬರುವಿಕೆಗೆ ಕಾಯುತಿಯ ಅಮ್ಮನಿಗೆ
ಏನೆಂದು ಉತ್ತರವ ನೀಡುವೆಯೋ ಗೆಳೆಯ

ಮರದಡಿಯ ಆಟದ ಮರ್ಮವ ತಿಳಿಸುವೆಯ
ಮಕ್ಕಳಿಗು ಜೂಜಿನ ಪಾಲನ್ನು ನೀಡುವೆಯ
ಅಡಮಾನ ಇಡಲಲ್ಲಿ ಇನ್ನೇನು ಉಳಿದಿಲ್ಲ
ಮಾನವನೆ ಅಡಮಾನ ಇಟ್ಟು ಬರುವೆಯಾ??

ಉಗಾದಿಯಂದು ಜೂಜಾಡುತಿದ್ದ ಕೆಲವು ಅಡ್ಡೆಗಳ ತಿರುಗಿ ಬಂದೆ, ಕಳೆದುಕೊಂಡವರೆಷ್ಟೋ :(

ಪವನ್ ಪಾರುಪತ್ತೇದಾರ:-

ಆಸ್ಪತ್ರೆ

ಅದೊಂದು ಮೂಲೆಯಿಂದ ಗೂರಲಿನ ಶಬ್ಧ
ಯಾವಾಗ ತೇಲಿಹೋಗುತ್ತೋ ಆ ಬಡಪಾಯಿ ಜೀವ
ಶಕ್ತಿಯಿತ್ತೊ ಇಲ್ಲವೋ ತಿಳಿಯದು
ಅಗಾಧವಾದ ನೋವದು ಮೂಡುತಿತ್ತು
ಗೂರಲಿನ ಶಬ್ಧದಿಂದಲೇ

 ಸೂಜಿಗಳಿಗಲ್ಲಿ ತಿವಿಯುವುದಷ್ಟೇ ಕೆಲಸ
ರಕ್ತಚಿಮ್ಮುವಾಗೆಲ್ಲ ಹೊಸ ಹೊಸ ನರಚ್ಛೇದ
ಕೆಂಪು ಬಣ್ಣದ ಹತ್ತಿಯುಂಡೆ ಎಲ್ಲ ಬುಟ್ಟಿಯಲ್ಲು
ರಕ್ತ ನೆಕ್ಕುವುದಷ್ಟೇ ಹತ್ತಿಯ ಕೆಲಸ

ನೋವು ಚೀತ್ಕಾರಗಳು ಆಗಾಗ ಮಾಮೂಲು
ಕಣ್ಣೀರು ಹರಿದಿದೆ ಎಲ್ಲೆಲ್ಲೂ
ಹಣವಿದ್ದರೂ ಇಲ್ಲಿ ಬಡವರೇ ಎಲ್ಲ
ಕಿರುಚಿದಾಗೆಲ್ಲ ಹರಿಯುವುದು ಗಂಟಲೇ
ಉಸಿರಿಗಿಲ್ಲಿ ಬೆಲೆ ಒಂದೇ
ಹಣವಣ್ತನುಸಿರು ಬಂಗಾರವಲ್ಲ
ಬಡವನಾ ಉಸಿರು ಕಬ್ಬಿಣವೇನಲ್ಲ

ಪವನ್ ಪಾರುಪತ್ತೇದಾರ :-