Thursday, October 4, 2012

ಪ್ರೀತಿಯ ಹುಚ್ಚಾಟಗಳು

ಅದು ಹೊಸ ಟಚ್ ಸ್ಕ್ರೀನ್ ಮೊಬೈಲ್ ಇರಬಹುದು ರಸ್ತೆಯ ಮೇಲೆ ತರಚುತ್ತ ೫೦ ಅಡಿ ದೂರದಲ್ಲಿ ಬಿದ್ದಿತ್ತು. ಪಲ್ಸರ್ ೨೨೦ ಮೂತಿ ಒಡೆದು ಹ್ಯಾಂಡಲ್ ಬಂದು ಸೀಟಿನ ಮೇಲೆ ಬಿದ್ದಿತ್ತು. ಅಲ್ಲೇ ನಿಂತಿದ್ದ ಪ್ರವೀಣನ ಮುಖವೆಲ್ಲ ಬೆವರು, ನಿಂತಲ್ಲೆ ನಡುಗುತಿದ್ದ, ಬಂದವರೆಲ್ಲ ಏನಾಯ್ತು ಏನಾಯ್ತು ಅಂತ ಘಾಬರಿಯಿಂದ ಕಥೆ ಕೇಳುವುದು ಪ್ರವೀಣನಿಗೆ ಬಯ್ಯೋದು ಆಗುತಿತ್ತು. ಪ್ರತಿ ಸಾರಿ ಬೈಸಿಕೊಳ್ಳುವಾಗಲೂ ತನ್ನಿಂದಾದ ತಪ್ಪಿಗೆ ತನ್ನನ್ನು ತಾನೇ ಶಪಿಸಿಕೊಳ್ಳುತಿದ್ದ.ಕಣ್ಣೀರ ಧಾರೆ ಗಳಗಳನೆ ಹರಿಯುತಿತ್ತು. ಅಷ್ಟರಲ್ಲೆ ಯಾರೋ ಆಂಬುಲನ್ಸ್ ಗೆ ಫೋನ್ ಮಾಡ್ರಿ ಅಂದ್ರು ಮತ್ತೊಬ್ರು ೧೦೮ ಕರೆ ಮಾಡಿದ್ದೀವಿ ಇನ್ನೈದು ನಿಮಿಷದಲ್ಲಿ ಬರುತ್ತೆ ಅಂದ್ರು.ಇಷ್ಟಕ್ಕೆಲ್ಲ ಕಾರಣ ಪಕ್ಕದಲ್ಲೇ ರಕ್ತದ ಮಡುವಲ್ಲಿ ಬಿದ್ದಿದ್ದ ಕಾವ್ಯ ಎಂದು ಹೇಳಿದರೂ ಯಾರೂ ನಂಬದ ಪರಿಸ್ಥಿತಿ. ಹೇಳಿಯಾದರೂ ಏನು ಉಪಯೋಗ, ಆಗಿದ್ದು ಆಗೋಗಿದೆ ಇನ್ನು ಮುಂದಿನ ಕೆಲಸ ನೋಡ್ಬೇಕು, ಪ್ರವೀಣನಿಗು ತನಗೇ ಗೊತ್ತಿಲ್ಲದಂತೆ ಹಣೆಯ ಮೇಲಿಂದ ಮಂಡಿ ಮತ್ತು ಮುಂಗೈಗಳಿಂದ ರಕ್ತ ಸುರಿಯುತಿತ್ತು.ಅಷ್ಟರಲ್ಲೆ ಗುಯ್ಯ್ ಗುಟ್ಟುತ್ತ ಆಂಬುಲನ್ಸ್ ಬಂತು, ಕಾವ್ಯಳಂತೆ ನಾನು ಸಹ ಹೀಗೆ ಬಿದ್ದಿದ್ದರೆ ಚೆನ್ನಾಗಿರುತಿತ್ತು ಅಂದುಕೊಂಡು ಪ್ರವೀಣ ಅಂಬುಲನ್ಸ್ ಹತ್ತಿದ.ಟಚ್ ಸ್ಚ್ರೀನ್ ಕೆಲಸ ಮಾಡುತ್ತಿರಲಿಲ್ಲ, ಕಾವ್ಯಳ ಜೀನ್ಸ್ ಪ್ಯಾಂಟಿನ ಜೇಬಿನಿಂದ ಹಳೇ ಮೊಬೈಲ್ ಒಂದು ತೆಗೆದ ಅದು ಕೂಡ ಅಲ್ಲೆ ನಜ್ಜಾಗಿತ್ತು, ಆದರು ಕೀ ಪ್ಯಾಡ್ ಕೆಲಸ ಮಾಡುತಿದ್ದರಿಂದ ಸ್ವಲ್ಪ ನೆಮ್ಮದಿಯಾಯ್ತು, ಆತುರಾತುರವಾಗಿ ಯಾವುದೋ ಸಂಖ್ಯೆಗೆ ಕರೆ ಮಾಡಿದ, ಆಕಡೆ ಹೆಲೋ ಎಂದೊಡನೆ ಪ್ರವೀಣನ ಹೃದಯದ ಬಡಿತ ಹೆಚ್ಚಾಗಿ ಕಾಲ್ ಕಟ್ ಮಾಡಿಬಿಟ್ಟ, ಏನು ಮಾಡೋದು ಹೇಗೆ ಹೇಳೋದು ಅಂದ್ಕೋಳೋ ಅಷ್ಟ್ರಲ್ಲೆ ಅದೇ ನಜ್ಜುಗುಜ್ಜಾದ ಮೊಬೈಲ್ ಗೆ ಕರೆ ಬಂತು. ಹಾಳಾದ ಡಿಸ್ಪ್ಲೇ ಲಿ ಡಾಡ್ ಅಂತ ಬ್ಲಿಂಕ್ ಆಗ್ತಾ ಇತ್ತು, ಇನ್ನೇನು ಡಿಸ್ಕನೆಕ್ಟ್ ಆಗಬೇಕು ಅಷ್ಟ್ರಲ್ಲಿ ಫೋನ್ ರಿಸೀವ್ ಮಾಡಿದ, ಕಾವ್ಯಳ ಅಪ್ಪ ಹಲೋ ಕಾವ್ಯ ಯಾಕಮ್ಮ ಡಿಸ್ಕನೆಕ್ಟ್ ಮಾಡಿದೆ? ಏನ್ ಸಮಾಚಾರ ಎಲ್ಲಿದ್ದೀಯಮಾ ಪ್ರಾಜೆಕ್ಟ್ ವರ್ಕ್ ಕೆಲಸ ಎಲ್ಲ ಆಯ್ತ ಅಂದ್ರು, ಪ್ರವೀಣನಿಗೆ ಮಾತನಾಡೋ ಧೈರ್ಯ ಬಂದಿಲ್ಲ, ಮತ್ತೆ ಡಿಸ್ಕನೆಕ್ಟ್ ಮಾಡಿದ, ಕರೆ ಮಾಡಿದ್ದ ಅಪ್ಪನಿಗೆ ಏನೋ ಗೊಂದಲವಾಗಿದೆ ಅನ್ನಿಸಿತ್ತು. ಪ್ರವೀಣನಿಗೆ ಕಾವ್ಯಳ ನರಳಾಟ ಮತ್ತಷ್ಟು ಭಯ ಉಂಟುಮಾಡಿತ್ತು.

ಆಂಬುಲನ್ಸ್ ಆಸ್ಪತ್ರೆಗೆ ಬಂತು, ಅಷ್ಟ್ರಲ್ಲೆ ಪ್ರವೀಣ ಕಾವ್ಯಳ ಮೊಬೈಲ್ ಇಂದ ಕೆಲವು ಸ್ನೇಹಿತರಿಗೆ ಕರೆ ಮಾಡಿ ವಿಷಯ ತಿಳ್ಸಿದ್ದ, ಅವ್ರಿಗೆ ಹೇಗಾದ್ರು ಕಾವ್ಯಳ ಅಪ್ಪ ಅಮ್ಮಂಗೆ ವಿಷಯ ತಿಳಿಸಿಬಿಡಿ ಅಂತ ಹೇಳಿದ್ದ, ಆಸ್ಪತ್ರೆಗೆ ಬರುವಷ್ಟರಲ್ಲೇ ಒಂದಷ್ಟು ಪ್ರವೀಣ ಮತ್ತು ಕಾವ್ಯಳ ಗೆಳೆಯರು ಗೆಳತಿಯರು ಬಂದಿದ್ದರು. ಕಾವ್ಯಳ ಸ್ಥಿತಿ ನೋಡಿದ ಅವಳ ಕ್ಲೋಸ್ ಗೆಳತಿ ಪ್ರಿಯಾ ಅಲ್ಲೇ ಮೂರ್ಛೆ ಹೋದಳು, ಪ್ರವೀಣನಿಗೆ ತನಗಾದ ಗಾಯಗಳ ಬಗ್ಗೆ ಅರಿವಿಲ್ಲದಿದ್ರು ಅವನ ಗೆಳೆಯರು ಗಮನಿಸಿದ್ರು, ಏನ್ ಮಗ ಎಷ್ಟೊಂದು ರಕ್ತ ಸೋರ್ತಿದೆ ಹಾಗೆ ಇದ್ಯಲ್ಲೋ ನಡೀ ಮೊದಲು ಡ್ರೆಸ್ಸಿಂಗ್ ಮಾಡುಸ್ಕೋ ಅಂದ್ರು, ಆ ಗಾಯಗಳಿಂತ ಪ್ರವೀಣನಿಗೆ ಕಾವ್ಯಳ ತಂದೆ ತಾಯಿಯರ ಬಗ್ಗೆ ಚಿಂತೆ ಇತ್ತು, ಅವ್ರಿಗೆ ವಿಷಯ ತಿಳಿದ್ರೆ ಏನಾಗುತ್ತೋ ಅನ್ನೋ ಭಯ ಕೂಡ.ಕಾವ್ಯ ತಂದೆ ಗೆ ವಿಷಯ ತಿಳಿಸಿದ್ರ ಅಂದ, ಗೆಳೆಯರ ಗುಂಪಿಂದ ಒಬ್ರು ಹಾ ಬರ್ತಾ ಇದ್ದಾರೆ ಅಂದ. ಕಾವ್ಯಾನ ಎಮೆರ್ಜೆನ್ಸಿ ವಾರ್ಡಿಗೆ ಕರ್ಕೊಂಡೋದ್ರು. ಪ್ರವೀಣನ ಗಾಯಗಳಿಗೂ ಒಂದಷ್ಟು ಟಿಂಚರ್ ಬಿತ್ತು.

ಪ್ರವೀಣ ಕಾವ್ಯ ಒಂದೇ ಕಾಲೇಜ್,ಲವರ್ಸ್ ಕೂಡ, ಮನೇಲಿ ಪ್ರಾಜೆಕ್ಟ್ ವರ್ಕ್ ಅಂತ ಸುಳ್ಳು ಹೇಳಿ ಬಂದಿದ್ರು,ಕಾವ್ಯಳಿಗೆ ಸ್ಪೀಡ್ ಅಂದ್ರೆ ತುಂಬಾ ಇಷ್ಟ, ಪ್ರವೀಣ ಯಾವುದೇ ಬೈಕ್ ತಂದ್ರು ಅದ್ರಲ್ಲಿ ಸ್ಪೀಡಾಗಿ ಓಡ್ಸು ಅಂತ ಕಾಟ ಕೊಡ್ತಿದ್ಲು, ಈ ನಡುವೇನೆ ಪ್ರವೀಣನಿಗೆ ಅವ್ರಪ್ಪ ಪಲ್ಸರ್ ೨೨೦ ತೆಗೆದುಕೊಟ್ಟಿದ್ರು.ಹೊಸ ಬೈಕ್ ನ ಸ್ಪೀಡ್ ಕುರಿತು ಪ್ರವೀಣ ಹೇಳ್ಕೊಂಡಿದ್ದ, ಅದಕ್ಕೆ ಕಾವ್ಯ ಇನ್ನು ಸ್ಪೀಡ್ ಆಗಿ ಓಡ್ಸು ಇನ್ನು ಸ್ಪೀಡ್ ಅಂತ ಪ್ರವೀಣನ ಹುರಿದುಂಬಿಸಿದ್ದಳು ಆ ಪ್ರಯತ್ನದಲ್ಲೇ ಅಪಘಾತವಾಯ್ತು, ಈಗ ಪ್ರವೀಣನಿಗೆ ತನ್ನಿಂದಾದ ತಪ್ಪಿಗೆ ಕಾವ್ಯಳ ಕುಮ್ಮಕ್ಕು ಮಾತ್ರ ಕಾರಣವಲ್ಲ, ತನ್ನ ಬೈಕ್ ಸಹ ಅನಿಸಿಬಿಟ್ಟಿದೆ, ಜೊತೆಯಲ್ಲೇ ಭಯವೂ ಕೂಡ.

ಪ್ರವೀಣನ ತಂದೆ ತಾಯಿ ಬಂದ್ರು, ಕಾವ್ಯಳ ತಂದೆ ತಾಯಿ ಸಹ ಬಂದ್ರು, ಪ್ರಾಜೆಕ್ಟ್ ವರ್ಕ್ ಇರ್ಲಿಲ್ಲ ಸುಳ್ಳು ಹೇಳಿ ಬಂದಿರೋದು ಅಂತ ಎರಡು ಕುಟುಂಬಗಳಿಗು ತಿಳೀತು. ಕಾವ್ಯಳ ತಂದೆ ಪ್ರವೀಣನ ತಂದೇನ ಮಕ್ಳನ್ನ ಹೇಗೆ ಬೆಳೆಸ್ಬೇಕು ಅಂತ ಗೊತ್ತಾಗಲ್ವೇನ್ರಿ ಓದೋ ಹುಡುಗನಿಗೆ ಇಂತ ಗಾಡಿ ಎಲ್ಲ ತೆಕ್ಕೊಟ್ಟಿದ್ದೀರಲ್ಲ, ಈಗ ನನ್ ಮಗಳ ಪ್ರಾಣಕ್ಕೇನಾದ್ರು ಹೆಚ್ಚು ಕಮ್ಮಿ ಆದ್ರೆ ಏನ್ರಿ ಮಾಡೋದು ಅಂದ್ರು, ಪ್ರವೀಣನ ತಂದೆ, ನಿಮ್ಮಗಳು ಸುಳ್ಳು ಹೇಳಿ ಮನೆಯಿಂದ ಹೊರಗೆ ಬಂದಿದ್ದಾಳಲ್ಲ ಅವ್ಳಿಗೆ ನೀವು ಇದೇನ ಬುದ್ದಿ ಕಲ್ಸಿರೋದು ಅಂದ್ರು ಅವರಿಬ್ಬರ ಮಾತುಗಳು ಜಗಳಗಳಾಗಿದ್ದವು, ಆಸ್ಪತ್ರೆಯಲ್ಲೇ ಒಬ್ಬರ ಮೇಲೊಬ್ಬರು ಕಿರುಚಾಡುತ್ತಿದ್ದರು, ಡಾಕ್ಟರ್ ಬಂದು ಇದು ಆಸ್ಪತ್ರೆ ನಿಮ್ಮ ಜಗಳಗಳೇನಾದ್ರು ಇದ್ರೆ ಆಚೆ ಇಟ್ಕೊಳಿ ಈಗ ಆಪರೇಷನ್ ಆಗ್ಬೇಕು ತುಂಬಾ ಬ್ಲೀಡಿಂಗ್ ಆಗಿದೆ ಅಂದ್ರು.

ಪ್ರವೀಣನ ತಂದೆ ತಾಯಿ ಎಲ್ಲ ಸುಮ್ಮನಾದರು ಒಂದು ಸಂತೆ ತತ್ಕ್ಷಣ ಸ್ಥಬ್ಧವಾದಂತಾಯಿತು, ಪ್ರವೀಣ ತನ್ನ ಪ್ರೀತಿಯ ದಿನಗಳನ್ನು ನೆನೆಯುತ್ತಾ, ಐಸ್ ಕ್ರೀಮ್ ತಿಂದಿದ್ದು, ಚಾಟ್ಸ್ ತಿಂದಿದ್ದು ಜಗಳಗಳಾಡಿದ್ದು ಸ್ಪೀಡ್ ಸ್ಪೀಡ್ ಎಂದು ಹಿಂದಿನ ಸೀಟಿನಿಂದ ಅರಚಿದ್ದು ಎಲ್ಲವನ್ನೂ ನೆನೆಯುತ್ತಾ ಒಂದು ಮೂಲೇಲಿ ಕೂತ, ಆಪರೇಷನ್ ಸಕ್ಸೆಸ್ ಆಗಿ ನನ್ನ ಗೆಳತಿ ಮತ್ತೆ ನನ್ನೊಡನೆ ಬರಲಿ ಎಂದಷ್ಟೇ ಅವನ ಆಶಯವಾಗಿತ್ತು, ಲೋಕದ ಇನ್ಯಾವ ಶಬ್ಧಗಳೂ ಅವನ ಕಿವಿ ಹೊಕ್ಕಿರಲಿಲ್ಲ, ಕಾವ್ಯಳ ನೆನಪಷ್ಟೇ ಅವನ ಕಣ್ಮುಂದೆ ಮತ್ತೆ ಮತ್ತೆ ತೇಲುತಿತ್ತು, ಅವಳ ಮಾತುಗಳಷ್ಟೇ ಇವನ ಕಿವಿಯಲ್ಲಿ ಗುಯ್ಯ್ ಗುಡುತಿತ್ತು.
ಅಷ್ಟರಲ್ಲೇ ಡಾಕ್ಟರ್ ಹೊರಗೆ ಬಂದ್ರು, ಇಲ್ಲಿ ಪ್ರವೀಣ್ ಅಂದ್ರೆ ಯಾರು ಅಂದ್ರು, ಕಾವ್ಯಳ ಲೋಕದಲ್ಲಿ ಕಳೆದು ಹೋಗಿದ್ದ ಪ್ರವೀಣನನ್ನ, ಗೆಳೆಯನೊಬ್ಬ ಹೆ ಪ್ರವೀಣ್ ನೋಡೋ ಡಾಕ್ಟರ್ ಕರೀತಿದ್ದಾರೆ ಅಂತ ಎಚ್ಚರಿಸಿದ, ತತ್ಕ್ಷಣ ಪ್ರವೀಣ ಡಾಕ್ಟರ್ ಬಳಿ ಏನಾಯ್ತು ಡಾಕ್ಟರ್ ಅಂತ ಭಯದಿಂದ ಕೇಳಿದ, ಆಗ ಡಾಕ್ಟರ್ ಏನಿಲ್ಲಪ ಕಾವ್ಯ ಆಪರೇಶನ್ ಸಕ್ಸಸ್ ಆಗಿದೆ, ನಿನ್ ಹತ್ರ ಮಾತಾಡಬೇಕಂತೆ ಹೋಗಿ ನೋಡು ಅಂದ್ರು, ಬೇರೆ ಎಲ್ಲ ಒಟ್ಟಿಗೆ ಹೋಗೋಕೆ ಹೊರಟ್ರು, ಆಗ ಡಾಕ್ಟರ್ ಇವ್ನೊಬ್ಬನ್ನೇ ನೋಡ್ಬೇಕಂತೆ, ನೀವೆಲ್ಲ ಆಮೇಲೆ ಹೋಗಿ ನೋಡಿ ಅಂದ್ರು,

ಪ್ರವೀಣ ಆಪರೇಷನ್ ಕೋಣೆಯೊಳಗೆ ಹೋದ, ಹೋದೊಡನೆ ಕಾವ್ಯ ಸಾರಿ ಕಣೋ ಮಗಾ ನನ್ನಿಂದಾನೆ ನೀನು ಅಷ್ಟು ಸ್ಪೀಡಾಗಿ ಗಾಡಿ ಓಡ್ಸಿದ್ದು ಅಂದ್ಲು, ಪ್ರವೀಣ ಹೋಗ್ಲಿ ಬಿಡೆ ಆದ್ರೆ ಈ ವಿಷ್ಯಾನ ಯಾರಿಗೂ ಹೇಳ್ಬೇಡ ನಿನ್ನ ಬೈಯ್ಯೋದು ನಂಗಿಷ್ಟ ಇಲ್ಲ ಎಂದು, ನಿಂಗೇನಾದ್ರು ಆಗಿದ್ರೆ ನಾ ಕೂಡ ಸತ್ತೋಗ್ತಿದ್ದೆ ಕಾವ್ಯ  ಅಂದ, ಕಾವ್ಯ ಹೇ ಮುಚ್ಚೋ ಬಾಯಿ ನೀನು ಸತ್ತು ನಾನು ಸತ್ರೆ ನನ್ನ ಡುಕಾಟಿ ಬೈಕಲ್ಲಿ ಟಾಪ್ ಸ್ಪೀಡಲ್ಲಿ ರೌಂಡ್ ಹೊಡ್ಸೋರು ಯಾರು ಅಂದ್ಲು, ಪ್ರವೀಣನ ಮುಖದಲ್ಲು ನಗುವ ಬುಗ್ಗೆ ಒಡೆದಿತ್ತು, ಗಲ್ಲದ ಬಳಿ ಗಾಯ ಆಗಿ ನೋಯುತಿದ್ದರೂ ನಗುವಿಗೆ ಅದರ ಅರಿವಾಗಲಿಲ್ಲ...

ಪ್ರೀತಿ ಮಾಡೋ ವಯಸಲ್ಲಿ ಸ್ವಲ್ಪ ಇಂತಹ ಹುಚ್ಚಾಟಗಳು ಇರ್ಲೇಬೇಕು ಅಲ್ವ ಗೆಳೆಯರೆ ;)

No comments:

Post a Comment