ಬಿದ್ದಿತ್ತೊಂದು ತಗಡಿನ ಡಬ್ಬ
ಶೆಟ್ಟಿ ಅಂಗಡಿಯ ಹೊರಗೆ
ಎಷ್ಟು ಸಾವಿರ ಕಿಲೋ ಅಕ್ಕಿ ಹಿಡಿದಿತ್ತೋ
ಎಷ್ಟು ಸಾವಿರ ಕಿಲೋ ಬೇಳೆ ತುಂಬಿತ್ತೋ
ಇಂದದಕೆ ಮರಣ ಶಯ್ಯೆ
ಇನ್ನೇನು ಪೀರ್ ಸಾಬಿ ಸುತ್ತಿಗೆಯೊಂದಿಗೆ ಬರುವ
ಜಜ್ಜಿ ಕುಟ್ಟಿ ಪುಟ್ಟಗೆ ಮಡಚಿ
ಶೆಟ್ಟಿಗೊಂದಷ್ಟು ಕೈ ಬೆಚ್ಚಗೆ ಮಾಡಿ
ಶಿವಾಜಿನಗರದ ಗುಜರಿಗೆ ಸೇರಿಸಬಹುದು
ಶಿವಾಜಿನಗರವೆಂಬ ತಗಡು ಶವಾಗಾರದಲ್ಲಿ
ತಗಡಿನ ಡಬ್ಬಕ್ಕೊಂದು ಮರುಹುಟ್ಟು
ವಿಕಾರವಾದರೂ ಹೊಸ ಆಕಾರ
ತುಕ್ಕು ಹಿಡಿದ ಜಾಗಕ್ಕೆಲ್ಲ ಲಪ್ಪದ ಆಧಾರ
ಹೊಸಬಣ್ಣ ಹೊಸರೂಪು ಹೊಸಜಾಗದ ಪ್ರಯಾಣಕ್ಕೆ
ಶೆಟ್ಟಿ ಅಂಗಡಿಯ ತಗಡಿನ ಡಬ್ಬ ಮತ್ತೆ ಈಗ ಸಿದ್ಧ
ಅದೇ ದಿನ ಶೆಟ್ಟಿಯಂಗಡಿಯ ಹೊರಗೊಂದು ದೇಹ
ಸಿಂಗಾರ ಮಾಡಿತ್ತು ಬಣ್ಣ ಬಣ್ಣದ ಹೂಗಳಿಂದ
ಅದಕ್ಕೆಂದೆ ಹೊಸದಾದ ವಾಹನ
ಸುತ್ತಲೂ ಜನರು ಅದರ ಬಗ್ಗೆಯೇ ಮಾತು
ತಮಟೆಯ ನಿನಾದ ಮನೆಯವರ ಆಕ್ರಂದನ
ನಡುವೆಯೇ ತೆರಳಿತ್ತು ಸುಡುಗಾಡ ಕಡೆಗೆ
ಕಟ್ಟಿಗೆಯ ಸಿಂಹಾಸಸ ಬೆರಣಿಗಳ ಒಡವೆಗಳು
ತುಪ್ಪ ಸುರಿಯುತಿಯರು ದೇಹದ ಮೇಲೆಲ್ಲ
ಮಂತ್ರ ಓದುವನೊಬ್ಬ ಮಡಿಕೆ ಹಿಡಿಯುವನೊಬ್ಬ
ಕೊಳ್ಳಿ ಇಟ್ಟು ದೇಹಸುಟ್ಟು ಭಸ್ಮಮಾಡಿಹರಿಲ್ಲಿ
ಶೆಟ್ಟಿಯಂಗಡಿಯಿಂದ ಒಂದೇ ದಿನಕ್ಕೆ ಇಬ್ಬರು ಹೊರಗೆ
ತಗಡಿನ ಡಬ್ಬ ಮತ್ತು ಮನುಜನ ದೇಹ
ದೇಹ ಮಣ್ಣಿಗಾದರೆ ಡಬ್ಬ ಮತ್ತೆ ಕೆಲಸಕ್ಕೆ
ನೇತ್ರದಾನವಾದರೂ ಮಾಡಿ, ಪವನ್ ಪಾರುಪತ್ತೇದಾರ....!
No comments:
Post a Comment