ಮೊನ್ನೆ ಬಹಳಾ ದಿನಗಳಾದ ಮೇಲೆ ಭಟ್ಟ ಫೋನ್ ಮಾಡಿದ್ದ, ನಾನು ತುಂಬಾ ಸಾರಿ ಅವ್ನಿಗೆ ಫೋನ್ ಮಾಡಿದ್ದೆ ಆದ್ರು ರಿಸೀವ್ ಮಾಡಿರ್ಲಿಲ್ಲ, ನಾ ಫೋನ್ ಎತ್ತಿದೊಡನೆ ಲೇ ಡಿ ಕೇ ಬೋಸ್, ಎಲ್ಲಿ ಹಾಳಾಗೋಗಿದ್ಯ ಅಂದೆ. ಒಂದು ಫೋನ್ ರಿಸೀವ್ ಮಾಡ್ಲಿಕ್ಕಾಗಲ್ವ ಅಂತ ಬೈದೆ, ಏನ್ ಮಾಡೋದು ಮಗಾ ಕೆಲಸ ಸಿಕ್ಕಾಪಟ್ಟೆ ಕಷ್ಟ ಐತಿ, ನಿಲ್ಲಂಗಿಲ್ಲ ಕೂರಂಗಿಲ್ಲ, ಮಕ್ಳು ಬಿಡೋಂಗೆ ಇಲ್ಲ, ಭಾರಿ ಕಷ್ಟ್ ಕೊಡ್ತಾರೆ ಅಂದ, ನಾನು ಸರಿ ಮಗನ ಅಂತ ಕಷ್ಟದ್ ಕೆಲ್ಸ ಏನ್ಲೆ ಮಾಡ್ತಿದ್ಯ ಅಂದೆ, ಆಗ ಭಟ್ಟನ ಉತ್ತರ ಕೇಳಿ ಮನಸ್ಸಿಗೆ ಬಹಳಾ ನೋವಾಯ್ತು, ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ಪ್ರಥಮ ದರ್ಜೆಯಲ್ಲಿ ಮುಗಿಸಿದ್ದ ಭಟ್ಟ, ವೆಂಟಿಲೇಶನ್ ರಿಪೇರಿ ಮಾಡುವ ಕೆಲಸ ಮಾಡುತಿದ್ದ, ಅವನೇ ಹೇಳಿದ ಪ್ರಕಾರ, ವೆಂಟಿಲೇಶನ್ ಕೆಲಸ ಇಲ್ದೆ ಇದ್ರೆ ಅವರ ಕಂಪನಿಯ ಆಫೀಸ್ ಬಾಯ್ ಕೂಡ ಅವನೆ, ಆ ಬ್ಯಾಂಕಿಗೆ ಹೋಗಿ ಚೆಕ್ ಹಾಕಿ ಬಾ, ಅಲ್ಲೆಲ್ಲೋ ಹೋಗಿ ಆರ್ಡರ್ ಕಾಪಿ ತೆಗೆದುಕೊಂಡು ಬಾ, ಹೀಗೆ ಎಲ್ಲ ರೀತಿಯಲ್ಲು ಅವ್ನನ್ನ ಬಳಸಿಕೊಳ್ಳುತಿದ್ದರು.
ಭಟ್ಟ ಓದಿದ್ದೆಲ್ಲ ಹುಬ್ಬಳ್ಳಿಯಲ್ಲಿ, ಕೆ.ಎಲ್.ಇ. ಶಾಲೆಯ ಬೋರ್ಡುಗಳಲ್ಲಿ ಕನ್ನಡ ಮೀಡಿಯಂ ಓದಿ ಬೆಳೆದ ಹುಡುಗ, ಅಂತಹ ದಡ್ಡ ಹುಡುಗನೇನಲ್ಲ, ಡಿಪ್ಲೋಮದಲ್ಲಿ ಮತ್ತು ಇಂಜಿನಿಯರಿಂಗ್ನಲ್ಲಿ ಮೊದಲನೆ ದರ್ಜೆಯಲ್ಲಿ ಪಾಸಾಗಿದ್ದಾನೆ. ಮನೆಯ ಕಷ್ಟಗಳನ್ನೆಲ್ಲ ಮೂಲೆಯಲ್ಲಿ ಬಿಸಾಕಿ ಅವರಪ್ಪ ಸಾಲ ಸೋಲ ಮಾಡಿ ಓದಿಸಿದ್ದಾರೆ, ಎಜುಕೇಶನ್ ಲೋನ್ ಕಟ್ಟಲೇ ಬೇಕಾದ ಅನಿವಾರ್ಯತೆ ಅವನ್ನ ಈ ಕೆಲಸಕ್ಕೆ ದೂಡಿದೆ. ಈ ಮಧ್ಯೆ ಆ ಕೋರ್ಸು ಈ ಕೋರ್ಸು ಅಂತ ಹೇಳಿದವರ ಮಾತು ಕೇಳಿ ಟೆಸ್ಟಿಂಗ್ ಕೋರ್ಸ್ ಸಹ ಮಾಡಿದ್ದಾನೆ.ಆದ್ರು ಕೆಲಸ ಇಲ್ಲಿವರೆಗೂ ಸರಿಯಾದ ಕೆಲಸ ಮಾತ್ರ ಸಿಕ್ಕಿಲ್ಲ. ಇದು ಬರೀ ನನ್ನೊಬ್ಬ ಗೆಳೆಯನ ಕಥೆಯಲ್ಲ, ಭಟ್ಟ ಎಂಬುದು ಇಲ್ಲಿ ಪಾತ್ರವಷ್ಟೇ, ಇಂತಹ ಸಾವಿರಾರು ಹುಡುಗರು ಚೆನ್ನಾಗಿ ಓದಿಯೂ ಉತ್ತಮ ಅಂಕಗಳು ಪಡೆದೂ ಸಹ, ಎಂತ ಎಂತಹುದೋ ಕೆಲಸಗಳನ್ನು ಮಾಡುತಿದ್ದಾರೆ, ವೆಂಟಿಲೇಶನ್ ಸೆರ್ವೀಸ್ ಮಾಡುವುದೇ ಆಗಿದ್ದರೆ ಭಟ್ಟ ಐ.ಟಿ.ಐ ಓದಿದ್ದರೆ ಸಾಕಾಗಿತ್ತು, ಇಂಜಿನಿಯರಿಂಗ್ ಅವಶ್ಯಕತೆಯೇ ಇರಲಿಲ್ಲ, ವಿ.ಟಿ.ಯು. ಅಡಿಯಲ್ಲಿ ಸುಮಾರು ೨೦೦ ಕಾಲೇಜುಗಳಿವೆ ಅಂದರೆ ಪ್ರತಿ ವರ್ಷ ಹೊರಬರುವ ಇಂಜಿನಿಯರುಗಳೆಷ್ಟು, ಮತ್ತು ಅವರಲ್ಲಿ ಕೆಲಸಗಳಿಗೆ ಸೇರುವರೆಷ್ಟು? ನಿಜಕ್ಕು ಅಂಕಿ ಅಂಶಗಳ ನೋಡಲು ಹೋದರೆ ಭಯವಾಗುತ್ತದೆ.
ಇನ್ನು ನಮ್ಮ ಕನ್ನಡದ ಹುಡುಗರಿಗೆ ಐ.ಟಿ. ಕಂಪನಿಗಳಲ್ಲಿ ಕೆಲಸ ಸಿಗುವುದು ಕಷ್ಟ ಆದ್ರೆ ಹೊರ ರಾಜ್ಯದವರಿಗೆ ಮಾತ್ರ, ಅದರಲ್ಲು ಫ್ರೆಷೆರ್ಸ್ ಗಳಿಗೆ ಹೇಗೆ ಕೆಲಸ ಸಿಗುತ್ತದೆ ಅನ್ನೋದು ಒಂದು ಆಶ್ಚರ್ಯ, ಅದಕ್ಕೆ ಕಾರಣ ಹೀಗೂ ಇರಬಹುದು,ಸಾಮಾನ್ಯ ಐ.ಟಿ.ಪಿ.ಎಲ್, ಮಾರುತ್ತಹಳ್ಳಿ ಇಲ್ಲೆಲ್ಲ ತೆಲುಗಿನ ಜನ ಬಾಡಿಗೆಗೆ ಇರುವುದು ಹೆಚ್ಚು, ಮತ್ತು ಬಿ.ಟಿ.ಎಂ ಲೇಔಟ್ ಸುತ್ತ ಮುತ್ತ ಉತ್ತರ ಭಾರತೀಯರು ಹೆಚ್ಚು, ಗಾರೆಪಾಳ್ಯ ಇಂತಹ ಜಾಗದಲ್ಲಿ ತಮಿಳಿಗರು,ಎಲ್ಲರೂ ಸಾಮಾನ್ಯ ಮನೆ ಮಾಡಿಕೊಂಡು ಒಂದೊಂದು ಮನೆಯಲ್ಲಿ ೫ ಜನ ೬ ಜನ ಇರ್ತಾರೆ. ೬ ಜನ ಅಂದ್ರೆ ಆರು ಬೇರೆ ಬೇರೆ ಕಂಪನಿಗಳು, ಅಲ್ಲಿ ಯಾರಾದ್ರು ಒಬ್ಬ ತನ್ನ ತಮ್ಮನೋ ಗೆಳೆಯನೋ ಕೆಲಸ ಹುಡುಕುತಿದ್ದಾನೆ ಎಂದರೆ, ಮಿಕ್ಕ ೬ ಜನ ರೂಂ ಮೇಟ್ ಗಳಿಗೆ ತಿಳಿಸುತ್ತಾನೆ, ಆಗ ಕೆಲಸ ಹುಡುಕುತ್ತಿರುವವನಿಗೆ ೬ ಅವಕಾಶಗಳು ಸಿಕ್ಕಂತೆ ಅಲ್ವೆ?? ಬೇರೆ ರಾಜ್ಯಗಳಿಂದ ಬಂದ ಅವರುಗಳ ನಡುವೆ ಒಂದು ರೀತಿಯ ಎಮೋಶಿನಲ್ ಬಾಂಡಿಂಗ್ ಮೂಡಿರುತ್ತದೆ. ಇದರಿಂದ ಲಾಭ ಅವ್ರವರ ರಾಜ್ಯದ ಹುಡುಗರಿಗೆ, ಅದಕ್ಕೆ ಎಲ್ಲಿ ನೋಡಿದರು ಮಲ್ಲುಗಳು ಎನ್ನಡಗಳು ಸಾಲೆಗಳು ತುಂಬಿರುವುದು.
ಇನ್ನು ನಮ್ಮ ಕನ್ನಡಿಗರು.ಅದ್ರಲ್ಲು ಐ.ಟಿ. ಬದುಕಿನವರು ತೀರಾ ಶುದ್ದ ಹಸ್ತರು, ತಮ್ಮ ಹತ್ತಿರದವರಿಗೇ ಆದ್ರು ಸಹಾಯ ಮಾಡುವುದಿಲ್ಲ, ಕೇಳಿದ್ರೆ ನಿನಗೆ ಟಾಲೆಂಟ್ ಇದ್ರೆ ಸಿಗುತ್ತೆ ಇಲ್ಲ ಅಂದ್ರೆ ಇಲ್ಲ ಅಂತ ಜಾರಿ ಕೊಳ್ತಾರೆ. ಎಷ್ಟೋ ಸರಿ ಕಳುಹಿಸಿದ ರೆಸೂಮ್ ಗಳನ್ನು ಹೆಚ್.ಅರ್. ತಂಡಕ್ಕೆ ಫಾರ್ವರ್ಡ್ ಸಹ ಮಾಡುವ ಗೋಜಿಗೆ ಹೋಗುವುದಿಲ್ಲ. ಇಂಟರ್ವ್ಯೂ ಅಲ್ಲಿ ಕನ್ನಡದ ಕ್ಯಾಂಡಿಡೇಟ್ ಗಳಿಗೆ ಸಾಫ್ಟ್ ಕಾರ್ನರ್ ತೋರಿಸೋದಿಲ್ಲ, ಕಾರಣ ಪ್ರೊಫೆಶಿನಲ್ ಎಥಿಕ್ಸ್ ಅಂತಾರೆ. ಹೀಗೆ ಆದ್ರೆ ನಮ್ಮ ಕನ್ನಡದ ಹುಡುಗರ ಕಥೆ ಏನು ಪಾಪ. ಎಲ್ಲರೂ ಕ್ಯಾಂಪಸ್ ಅಲ್ಲೇ ಪ್ಲೇಸ್ ಆಗುವಷ್ಟು ಬುದ್ಧಿವಂತರಿರುವುದಿಲ್ಲ, ಎಲ್ಲರಿಗೂ ಕಾಂಟಾಕ್ಟ್ಸ್ ಇರುವುದಿಲ್ಲ. ಕೆಲಸ ಹೇಗೆ ಹುಡುಕಬೇಕು ಅನ್ನೋದು ತಿಳಿದಿರುವುದಿಲ್ಲ. ಈಗೀಗ ಕನ್ನಡಿಗರ ವೇದಿಕೆಗಳು ಅಂತರ್ಜಾಲದಲ್ಲಿ ಬಹಳಷ್ಟು ಮೂಡುತ್ತಿವೆ, ದಯವಿಟ್ಟು ಎಲ್ಲ ಆ ವೇದಿಕೆಗಳಿಗೆ ಸಹಕರಿಸಿ, ಮತ್ತು ನಮ್ಮ ಕನ್ನಡಿಗರಿಗೆ ಕೆಲಸ ಕೊಡಿಸಲು ಪ್ರಯತ್ನಿಸಿ. ನಿಮ್ಮ ಕಛೇರಿಯಲ್ಲಿ ಯಾವುದೇ ಕೆಲಸ ಖಾಲಿ ಇದ್ರು ತಿಳಿಸಿ, ಕನ್ನಡಿಗನಿಗೆ ಉಪಯೊಗವಾಗಲಿ.
ಕಡೇಮಾತು : ಎಲ್ಲ ಮಕ್ಳನ್ನು ಇಂಜಿನಿಯರೇ ಮಾಡ್ಬೇಕು ಅನ್ನೋ ಅಪ್ಪ ಅಮ್ಮನ ಆಸೆಗೆ ಇವತ್ತು ಬಹಳಷ್ಟು ಕೂಸುಗಳು ಬಡವಾಗ್ತಿವೆ.
********************************************************************************************
ಲೇಖನ ತುಂಬಾ ಖುಷಿ ಆಯಿತು.ಅದು ನಿಜವಾಗಿ ಬರೆದ ಮಾತುಗಳಿಗೆ ತಲೆದೂಗುತ್ತೇನೆ. ತುಂಬಾ ಚೆನ್ನಾಗಿ ಬರೆಯಬಲ್ಲೀರಿ. ಆದರೆ ಆಸೆಯನ್ನು ಇನ್ನಷ್ಟು ಜೀವಂತವಿರಿಸಿದ್ದೇನೆ. ಅದು ನೆರವೇರಬೇಕು.
ReplyDelete--------------------------------------------------
ಎಲ್ಲ ಮಕ್ಳನ್ನು ಇಂಜಿನಿಯರೇ ಮಾಡ್ಬೇಕು ಅನ್ನೋ ಅಪ್ಪ ಅಮ್ಮನ ಆಸೆಗೆ ಇವತ್ತು ಬಹಳಷ್ಟು ಕೂಸುಗಳು ಬಡವಾಗ್ತಿವೆ.
------------------------------------------------