Monday, February 13, 2012

ಪ್ರೀತ್ಸೋರ ದಿನ ಪ್ರೀತಿಗಾಗೆ ಇರ್ಲಿ……!!

ಪ್ರವೀಣ್, ನಾ ಒಂದು ವಿಷ್ಯ ಹೇಳಲಾ ನಿಂಗೆ, ಬೇಜಾರ್ ಮಾಡ್ಕೊಬಾರದು, ನಿಂಗೆ ಬೆಜಾರಾಗೋಹಾಗಿದ್ರೆ  ನಾ  ಹೇಳಲ್ಲ ಅಂತ  ಕಾವ್ಯ  ಹೇಳಿದಾಗ  ಪ್ರವೀಣನಿಗೆ ಕಾವ್ಯಾಳ ಮನಸಿನಲ್ಲಿ ನನ್ನ ಬಗ್ಗೆ ನನಗೆ ಬೇಜಾರಾಗುವಂತಹವಿಷಯ  ಏನಿರಬಹುದು  ಎಂಬ  ಕುತೂಹಲ ತುತ್ತ ತುದಿ ಮುಟ್ಟಿತ್ತು. ಅದಕ್ಕೆ  ಕಾವ್ಯಳನ್ನ, ಹೇಳು ಕಾವ್ಯ ನೀನು  ಏನೇ  ಹೇಳಿದರು ನಾನು ಬೇಜಾರು  ಮಾಡಿಕೊಳ್ಳಲ್ಲ ಅಂದ, ಅದಕ್ಕೆ ಕಾವ್ಯ, ಪ್ರವೀಣ್ ನೀನು ಅಷ್ಟೇನೂ  ಚೆನ್ನಾಗಿಲ್ಲ ಕಣೋ, ಕುಳ್ಳ,  ಕಲರ್ ಕಮ್ಮಿ, ಸಣಕಲ ಕೂಡ, ಪೆರ್ಸೋನಾಲಿಟಿನೆ ಇಲ್ಲ ನೀನು, ಒಳ್ಳೆ  ಬಟ್ಟೆ  ಹಾಕ್ಕೊಳಲ್ಲ, ನೀನು ಐರನ್ ಮಾಡಿರೋ ಬಟ್ಟೆ ಹಾಕ್ಕೊಂಡು ಕಾಲೇಜಿಗೆ ಬಂದಿದ್ದಂತೂ  ನಾ ನೋಡೇ ಇಲ್ಲ, ಯಾವಾಗಲು ಗಲೀಜು ಬಟ್ಟೆ ಹಾಕಿರ್ತ್ಯ. ನಮಕ್ಕ ಮೊನ್ನೆ ನಿನ್ ವಿಷ್ಯ ಮನೇಲಿ ಮಾತಾಡೋವಾಗ ಇದೆಲ್ಲ  ಹೇಳಿದಳು, ನಂಗು ಹೌದು ನಿಜ ಅನ್ನಿಸಿತು. ಒಳ್ಳೆ ಮೊಬೈಲ್ ಫೋನ್ ಇಲ್ಲ ಆ  ಡಬ್ಬ  1100  ಎಷ್ಟ್  ಹಳೇದಾಗಿದೆ ನೋಡು. ಕೀ ಪ್ಯಾಡ್ ಎಲ್ಲಾ ಸಮದೋಗಿದೆ. ಪ್ರದೀಪ್ ಹತ್ರ ಟಚ್ ಸ್ಕ್ರೀನ್ ಮೊಬೈಲ್  ಇಸ್ಕೊಂಡು  ಅವನ girlfriend ಮೇಘ ವೀಡಿಯೊ ನೋಡ್ತಾ ಹಾಡು ಕೇಳ್ತಾ ಕೂತಿರ್ತಾಳೆ. ಬೇಕು ಬೇಕು ಅಂತಾನೆ ನಂಗೆ ಈ ಹಾಡು ಕೇಳೆಮ್ಮ, ಈ ವೀಡಿಯೊ ನೋಡೆಮ್ಮ ಅಂತ ತೋರ್ಸಿ ಹೊಟ್ಟೆ ಉರಿಸ್ತಾಳೆ. ಹೋಗ್ಲಿ  ಒಳ್ಳೆ ಬೈಕ್  ಆದರು  ಇಟ್ಕೊಂಡಿದ್ಯ, ಅದೂ ಇಲ್ಲ 2nd ಹ್ಯಾಂಡಲ್, ಸ್ಟಾರ್ಟ್ ಮಾಡಿದ್ರೆ ಇಡೀ ಕಾಲೇಜ್ ಗೆ  ಕೇಳುತ್ತೆ, ಪ್ಲೀಸ್  ಒಂದು  ಹೊಸ ಬೈಕ್ ಮತ್ತೆ ಮೊಬೈಲ್ ತೊಗೊಳೋ, ಇನ್ಮೇಲೆ ಒಳ್ಳೆ ಬಟ್ಟೆ ಹಾಕ್ಕೋ, iron ಮಾಡ್ಕೊಂಡು ಬಟ್ಟೆ ಹಾಕ್ಕೊಂಡು ಬಾ, ಜಿಮ್ ಗೆ ಹೋಗು ಸ್ವಲ್ಪ ದಪ್ಪ ಆಗು, fair  ಅಂಡ್ ಲವ್ಲೀ ಹಾಕ್ಕೋ ಆಯ್ತಾ??.  ನನಗೋಸ್ಕರ  ಇಷ್ಟ  ಮಾಡ್ತ್ಯ  ತಾನೇ  ಅಂದಾಗ  ಪ್ರವೀಣನಿಗೆ ಆ ಕ್ಷಣದಲ್ಲಿ ಏನು ಉತ್ತರ  ಕೊಡಬೇಕು ಗೊತ್ತಾಗಿಲ್ಲ. ಸರಿ ಕಾವ್ಯ ನೀನು ಹೇಳಿದ  ಹಾಗೇ  ಮಾಡ್ತೀನಿ  ಅಂತ ಫೋನ್ ಕಟ್ ಮಾಡಿದ.
ಇಷ್ಟು ನಡೆದಿದ್ದು ಪ್ರವೀಣ ಸ್ನೇಹಿತರ ಜೊತೆ ಅಡ್ಡ ಹೊಡೆಯಲು ಹೋದಾಗ, ಇಷ್ಟು ಮಾತು ಕಥೆ ಮುಗಿಸಿ ಬರೋ ಅಷ್ಟರಲ್ಲಿ ಪ್ರವೀಣನ ಸ್ನೇಹಿತ ರಾಘು, ಮುಗೀತ ಮಗ ನಿಮ್ಮ ಮೊಬೈಲ್ ಪ್ರಣಯ ಅಂತ ಚುಡಾಯಿಸಿದ. ಪ್ರವೀಣನಿಗೆ ಮಾತನಾಡಿಸಬೇಕು ಅನ್ಸಿಲ್ಲ, ಹಾಗೇ ತನ್ನ ಹಳೆ ಬೈಕ್ ನ ಸ್ಟಾರ್ಟ್ ಮಾಡ್ಕೊಂಡು ಮನೆ ಸೇರ್ಕೊಂಡ. ಊಟ ಮುಗಿಸಿ ಮತ್ತೆ ಮೊಬೈಲ್ ಚಾಟಿಂಗ್ ಶುರು ಮಾಡಿದ, ಆಗ ಕಾವ್ಯ, ಹೇ ಪ್ರವೀಣ್ ನಂಗೆ ಮಂತ್ರಿ ಮಾಲ್ ಗೆ ಹೋಗ್ಬೇಕು ಅನ್ನಿಸ್ತಾ ಇದೆ ಈ ಶನಿವಾರ ವ್ಯಾಲಂಟೈನ್ ಡೇ ಅಲ್ವಾ ಕರ್ಕೊಂಡು ಹೋಗೋ ಅಂತ ಮೆಸೇಜ್ ಮಾಡಿದ್ದಳು. ಪ್ರವೀಣನಿಗೆ ಮಂತ್ರಿ ಮಾಲ್ ಅಂದೊಡನೆ ಸ್ವಲ್ಪ ಭಯ ಆಯ್ತು, ಕಮ್ಮಿ ಅಂದ್ರು 500 ರು ಖರ್ಚು ಮಾಡಲೇ ಬೇಕು, ಹಣ ಎಲ್ಲಿಂದ ಬರುತ್ತೆ, ಪ್ರವೀಣ ಇನ್ನೂ ಓದ್ತಾ ಇರೋ ಹುಡುಗ, ಅಪ್ಪನ  ಕೇಳಿದ್ರೆ, ಏನಕ್ಕೆ, ಎಲ್ಲಿಗೊಗ್ಬೇಕು, ಯಾರಜೊತೆ ಅಂತ ನೂರಾ ಎಂಟು ಪ್ರಶ್ನೆ ಕೇಳ್ತಾರೆ. ಅಮ್ಮನ ಹತ್ರ ಈಗಾಗಲೇ ಕೊಡ್ತೀನಿ ಕೊಡಮ್ಮ ಕೊಡ್ತೀನಿ ಕೊಡಮ್ಮ ಅಂತ ಬಹಳ ಸಾರಿ ಕೇಳಿ ತೊಗೊಂಡು ಆಗಿದೆ. ಮತ್ತೆ ಕೇಳಿದ್ರೆ ಇಲ್ಲ ಅನ್ನಲ್ಲ ಆದರು ಮನಸಿಗೆ ಬೇಜಾರು ಅಮ್ಮನಿಗೆ ಸುಳ್ಳು ಹೇಳಿ ಹಣ ತೊಗೊಳಕ್ಕೆ. ಇನ್ನು ಗೆಳೆಯರು ಎಲ್ಲ ತನ್ನತರಾನೇ ಓದ್ತಾ ಇರೋರು. ಒಂದು ಕ್ಷಣ ತಲೆ ದಿಮ್ಮೆಂತಾಗಿ, ಆಗಲಿ ಕಾವ್ಯ ಕರೆದು ಕೊಂಡು ಹೋಗ್ತೀನಿ ಅಂತ ರಿಪ್ಲೈ ಮಾಡಿಬಿಟ್ಟ. ಅದೇ ಚಿಂತೆಯಲ್ಲಿ ಮಲಗಿದ ಪ್ರವೀಣನಿಗೆ ನಿದ್ದೆ ಬಂದಿದ್ದೇ ಗೊತ್ತಾಗಲಿಲ್ಲ.
ಎರಡು ವರ್ಷದ ಹಿಂದೆ ಹೀಗಿರಲಿಲ್ಲ, ಪ್ರವೀಣ ಮತ್ತು ಕಾವ್ಯ ಹೊಸ ಪ್ರೇಮಿಗಳು, ಕಾಲೇಜಿಗೆ ನಂಬರ್ 1 ಜೋಡಿ, ಪ್ರಿನ್ಸಿಪಾಲರಿಂದ ಹಿಡಿದು ಕಸಗುಡಿಸೋ ಮುನಿಯಮ್ಮನ ತನಕ ಎಲ್ಲರಿಗೂ ಇವರ ಪ್ರೀತಿ ವಿಷಯ ಗೊತ್ತಿತ್ತು ಅಂದ್ರೆ ಅರ್ಥ ಮಾಡ್ಕೊಳಿ ಅವರ ಪ್ರೀತಿಯ ಪವರ್ ಹೇಗಿರಬಹುದು ಅಂತ. ಆಗ ಕಾವ್ಯಗೆ ಪ್ರವೀಣ ಕಪ್ಪಗಿದ್ದಾನೆ, ಕುಳ್ಳ ಅನ್ನೋ ಅರಿವಿರ್ತಾ ಇರ್ಲಿಲ್ಲ. ಕಪ್ಪು ಶ್ರೀ ಕೃಷ್ಣನ ಬಣ್ಣ, ಇಷ್ಟಕ್ಕೂ ನೀನೇನು ಅಷ್ಟು ಕಪ್ಪಗಿಲ್ಲ ಬಿಡು ಅಂತ ಇವನ ಪರ ವಹಿಸಿ ಮಾತಾಡ್ತಾ ಇದ್ಲು. ಕೆಲವು ಸಲ ಅಂತು ಅತಿರೇಕಕ್ಕೆ ಹೋಗಿ ದುನಿಯಾ ವಿಜಿ ಕಪ್ಪಗಿಲ್ವಾ ಆದರು ಸ್ಟಾರ್ ತಾನೇ ಅಂದಿದ್ದು ಇದೆ. ಬೈಕ್ ಬಗ್ಗೆ ಅಂತು ಹೊಗಳಿಕೆಯ ಸುರಿಮಳೆ. ನೀನು 1 Km ದೂರ ಇದ್ದಾಗಲೇ ನಿನ್ ಬೈಕ್ ಶಬ್ದ ನನ್ ಹಾರ್ಟ್ ಗೆ ಟಚ್ ಆಗ್ಬಿಡುತ್ತೆ ಕಣೋ ಪ್ರವೀಣ. ನೀನು ಈ ಬೈಕ್ ಸೌಂಡ್ ಚೇಂಜ್ ಮಾಡಕ್ಕೆ ಹೋಗಬೇಡ ಆಯ್ತಾ ಅಂತ ಅವಳೇ ಸಲಹೆ ಸಹ ಕೊಟ್ಟಿದ್ಲು. ದಿನಾ ಸಕತ್ ಒಳ್ಳೆ ಗೆಟಪ್ ಇರತ್ತೆ ನಿಂದು. raw ಲುಕ್ಸ್, rough ಅಂಡ್ tough ಆಗಿ ಕಾಣಿಸ್ತ್ಯ ಅಂತ ಹೇಳಿದ್ ಮೇಲಂತೂ, ಪ್ರವೀಣನ ಅಮ್ಮ ಒಗ್ದಿರೋ ಬಟ್ಟೆ ಹಾಕ್ಕೊಂಡು ಹೋಗೋ ಅಂದ್ರುನು ಹಾಕ್ಕೊಂಡು ಹೋಗ್ತಾ ಇರ್ಲಿಲ್ಲ. ಸಿಕ್ಕ ಸಿಕ್ಕ ಗೆಳೆಯರ ಹತ್ರ ಎಲ್ಲ 20 ರು  30 ರು ಸಹ ಸಾಲ ತೊಗೊತಾ ಇದ್ದ. ಅವಳ ಜೊತೆ ಐಸ್ ಕ್ರೀಂ ತಿನ್ನೋದು, ಮನೇಲಿ ಕೊಟ್ಟ ಪಾಕೆಟ್ ಹಣ ಉಳಿಸಿಕೊಂಡು 15 ದಿನಕ್ಕೊಮ್ಮೆ ಸಿನಿಮಾ ನೋಡೋದು ಎಲ್ಲ ಆಗ್ತಿತ್ತು. ಎರಡು ವರ್ಷ ಆದ್ಮೇಲೆ ಕಾವ್ಯಾಗೆ ಯಾಕೆ ಇವನ plus ಆಗಿದ್ದ ವಿಷಯಗಳೆಲ್ಲ ಮೈನಸ್ ಆಗ್ತಾ ಇದೆ ಅಂತ ಪ್ರವೀಣ ಎಷ್ಟು ತಲೆ ಕೆಡ್ಸ್ಕೊಂದ್ರು ಅರ್ಥ ಆಗ್ಲಿಲ್ಲ.
ಶನಿವಾರ ಬೆಳಿಗ್ಗೆ ಎದ್ದೊಡನೆ ಅಮ್ಮ, ಪ್ರವಿಣನಿಗೆ ಕಾಫೀ ಕೊಟ್ಟು ತಲೆಗೆ ಎಣ್ಣೆ ಇಡಲು ಶುರು ಮಾಡಿದ್ದರು. ಯಾಕಮ್ಮ ಅಂದ್ರೆ ಇವತ್ತು ನಿನ್ನ ಹುಟ್ಟಿದಬ್ಬ ಮಗಾ, ರಥಸಪ್ತಮಿ ಅಂದ್ರು, ಇಂಗ್ಲಿಷ್ ಡೇಟ್ ಪ್ರಕಾರ ನಿನ್ ಹುಟ್ಟಿದಬ್ಬ ಬೇರೆ ದಿನ, ಆದ್ರೆ ನನ್ ಪ್ರಕಾರ ಇವತ್ತೇ ಅಂತ ತಲೆಗೆ ಚೆನ್ನಾಗಿ ಎಣ್ಣೆ ಇಟ್ಟು, ಸ್ನಾನ ಮಾಡಿಸ್ತಾ ಇರ್ಬೇಕಾದ್ರೆ. ಪ್ರವೀಣ ಅಮ್ಮ ನಾ ಕಪ್ಪಗಿದ್ದೀನಿ ಅಲ್ವಮ್ಮ ಅಂದ. ಅಮ್ಮ ಯಾರ್ ಹಾಗ್ ಹೇಳಿದ್ದು ಕರ್ಕೊಂಡ್ ಬಾ ನನ್ ಮುಂದೆ, ಕಪ್ಪು ಶ್ರೀ ಕೃಷ್ಣನ್ ಬಣ್ಣ ಮಗಾ ಆದ್ರೆ ಬಗ್ಗೆ ಯೋಚನೆ ಮಾಡಬಾರದು ಅಂದ್ರು. ಪ್ರವೀಣ ಅಮ್ಮ ನಾ ಕುಳ್ಳ ಇದ್ದೀನಿ  ಅಲ್ವಮ್ಮ ಅಂದ. ಮಗನೆ ದೇಹ ಎಷ್ಟು ಬೆಳೆದರೆ ಏನಪ್ಪಾ ಪ್ರಯೋಜನ? ವ್ಯಕ್ತಿತ್ವ ಮುಖ್ಯ. ನಿನ್ನ ವ್ಯಕ್ತಿತ್ವ, ನಾಲ್ಕು  ಜನಕ್ಕೆ ಮಾದರಿಯಾಗೋ ರೀತಿ ಇದ್ರೆ ಸಾಕು, ಅಂದ್ರು. ಅದಕ್ಕೆ ಪ್ರದೀಪ ಹೌದು ಅಪ್ಪನ ಹತ್ರ ದುಡ್ಡಿಗೇನೂ ಕೊರತೆ ಇಲ್ಲ ಆದರು ನಾ ಹಣ ಕೇಳ್ದಾಗೆಲ್ಲ  ಕೊಟ್ಟು,  ಆಮೇಲೆ ಲೆಕ್ಕ ಕೇಳ್ತಾರೆ ಅದೂ ಸರಿನಾಮ್ಮ? ಮಗ ಅಂತ ಸ್ವಲ್ಪಾನು  ನಂಬಿಕೆ ಇಲ್ಲ ಅವ್ರಿಗೆ ಅಂದ. ತಲೆ ಉಜ್ಜುತ್ತ ಇದ್ದ ಅಮ್ಮ ಹಾಗೆ ಒಮ್ಮೆ ತಲೆ ಮೊಟುಕಿ, ಅಯ್ಯೋ ದಡ್ಡ,  ನಿಮ್ಮಪ್ಪ  ದುಡಿತಾ ಇರೋದು ಎಲ್ಲ ನಿಂಗೋಸ್ಕರಾನೆ ತಾನೇ? ಇನ್ನು ಯಾರಿಗೋ ಕೊಡ್ತಾರೆ?. ಆಸ್ತಿಪಾಸ್ತಿ,  ಹಣಕಾಸು  ವ್ಯವಹಾರದಲ್ಲಿ ಮಗ ಯಾವತ್ತು ಯಾಮಾರದೆ ಇರ್ಲಿ, ತೊಂದ್ರೆಲಿ ಸಿಕ್ಕಿ ಹಾಕ್ಕೊಳ್ದೇ ಇರ್ಲಿ ಅಂತ ಲೆಕ್ಕ  ಕೇಳ್ತಾರೋ ಹೊರತು ನಿನ್ ಮೇಲಿನ ಅಪನಂಬಿಕೆ ಇಂದ ಅಲ್ಲ ಕಣೋ ಅಂದ್ರು. ಸಿಗೆಕಾಯಿ ಹರಳೆಣ್ಣೆಯನ್ನು ತೆಗೆದಂತೆ, ಅಮ್ಮನ ಹಿತನುಡಿಗಳು ಪ್ರವೀಣನ ಮನದೊಳಗಿನ ಕಲ್ಮಶವನ್ನು ತೊಳೆದು ಹಾಕಿತ್ತು.
ಸ್ನಾನ ಅದೊಡನೆ ಹೊಸದಾಗಿ ಅಮ್ಮ ತಂದಿದ್ದ ಬಟ್ಟೆ ಹಾಕ್ಕೊಂಡು, ಮನೆಯಲ್ಲಿದ್ದ ಕ್ಯಾಮೆರಾ ತೊಗೊಂಡು,ಕಾವ್ಯಳನ್ನ ಭೇಟಿ ಮಾಡಕ್ಕೆ ಮುಂಚೆ ಕೆಲವು ಸ್ನೇಹಿತರನ್ನು ಭೇಟಿ ಮಾಡಿದ. ಒಬ್ಬ ಸ್ನೇಹಿತನ ಬಳಿ ಒಳ್ಳೆ ಬೈಕ್ ತೊಗೊಂಡ, ಮತ್ತೊಬ್ಬ ಸ್ನೇಹಿತನ ಬಳಿ ಮೊಬೈಲ್ ಫೋನ್ ತೊಗೊಂಡ. ಮಂತ್ರಿ ಮಾಲ್ ಹೋಗೋದಕ್ಕೆ ಕಾಯ್ತಿದ್ದ ಕಾವ್ಯ ಹೊಸ ಬೈಕ್ ನೋಡಿ ಫುಲ್ ಕುಶ್ ಆಗಿದ್ದಳು. ಬೈಕ್ ಹತ್ತಿಸಿಕೊಂಡು ಮಂತ್ರಿಯ ಬದಲಾಗಿ ಬನ್ನೇರುಘಟ್ಟ ಕಾಡಿಗೆ ಕರೆದು ಕೊಂಡು ಹೋದ. ಲಾಂಗ್ ಡ್ರೈವ್, ಅದೂ ಹೊಸ ಬೈಕಲ್ಲಿ ಅಂತ ಕಾವ್ಯ ಇನ್ನೂ ಖುಷಿಯಾಗಿದ್ದಳು ಕಾಡಿನ ಮಧ್ಯೆ ಗಾಡಿ ನಿಲ್ಲಿಸಿ, ಗಾಡಿಯ ಕೀ ಕಾವ್ಯ ಕೈಗಿಟ್ಟು, ಮೊಬೈಲ್ ಫೋನ್ ಕೊಟ್ಟು ವೀಡಿಯೊ ನೋಡ್ಕೊಂಡು ಕೂತ್ಕೋ, ಫೋಟೋಸ್ ತೆಗೆದು ಕೊಂಡು ಬರ್ತೀನಿ ಅಂತ ಹೇಳಿ ಎಲ್ಲೋ ಹೊರಟು ಬಿಟ್ಟ. ಕಾವ್ಯ ವೀಡಿಯೊ ನೋಡುತ್ತಾ ಹಾಡು ಕೇಳುತ್ತ ಕೂತಳು, ಕತ್ತಲಾಗುವ ಸಮಯ ಆಯಿತು ಆದರು ಪ್ರವೀಣ್ ಬರಲಿಲ್ಲ. ಕಾವ್ಯಾಳಿಗೆ ಭಯ ಶುರುವಾಯ್ತು. ಇದರ ಮಧ್ಯೆ ಕಾಡು ಪ್ರಾಣಿಗಳ ಕೂಗು ಬೇರೆ ಭಯ ಹೆಚ್ಚು ಮಾಡಿತ್ತು. ಹೆದರಿ ಬಳಲಿ ಕುಸಿದಿದ್ದಳು.
ಆಗ  ಪ್ರವೀಣ್ ಅಲ್ಲೇ  ಮರೆಯಲ್ಲಿದ್ದವನು ಎದುರು ಬಂದ, ಕಾವ್ಯ ಓಡಿ ಬಂದವಳೇ ಪ್ರವೀಣನ ತಬ್ಬಿ ಎಲ್ಲಿ ಹೋಗಿ ಬಿಟ್ಟಿದ್ದೆ ಅಂತ ಅತ್ತಳು.ಅದಕ್ಕೆ ಪ್ರವೀಣ್ ನಿನ್ನನ್ನೇ ಹುಡುಕ್ತ ಇದ್ದೆ, ನೀನು ಇಲ್ಲಿದ್ಯ ಇವಾಗ ಸಿಕ್ದೆ ಅಂದ. ಅರ್ಥ ಆಗದ ಕಾವ್ಯ ನೀನೆ ನನ್ನ ಇಲ್ಲಿ ಬಿಟ್ಟು ಹೋಗಿ ನೀನೆ ಮತ್ತೆ ಹುಡುಕುತಿದ್ದೆ ಅಂತಿದ್ದಿಯ ಅಂದ್ಲು. ಅದಕ್ಕೆ ಪ್ರವೀಣ ನಾನು ಬಿಟ್ಟು ಹೋದಾಗ ಇದ್ದ ಕಾವ್ಯಾಗೆ ಒಳ್ಳೆಯ ಗಾಡಿ,  ವೀಡಿಯೊ ಮತ್ತು ಹಾಡು, ಪ್ಲೇ ಮಾಡುವಂತಹ ಮೊಬೈಲ್ ಬೇಕಿತ್ತು. ಆದರೆ ಈ ಕಾವ್ಯಾಗೆ ಪ್ರವೀಣ್ ಬೇಕಾಗಿದೆ ಅಂದಾಗ, ಕಾವ್ಯಾಗೆ ತನ್ನ ತಪ್ಪು ಅರಿವಾಗಿತ್ತು. ಸಾರೀ ಪ್ರವೀಣ್ ಇನ್ನು ಮುಂದೆ ನಾನು ಆ ರೀತಿ ವರ್ತಿಸೋಲ್ಲ ಇಂತಹ ವಸ್ತುಗಳು ಮತ್ತು ಅಂದಕ್ಕಿಂತ ವ್ಯಕ್ತಿ ಮುಖ್ಯ ಅನ್ನೋ ಅರಿವಾಗಿದೆ ಅಂತ ಮನಃ ಪೂರ್ತಿಯಿಂದ ತಬ್ಬಿ ಹ್ಯಾಪಿ ವ್ಯಾಲಂಟೈನ್ ಡೇ ವಿಶ್ ಮಾಡಿದಳು. :) :)

1 comment:

  1. ತುಂಬಾ ಚೆನ್ನಾಗಿದೆ ಸಣ್ಣ ಕಥೆಯ ಒಳಗೆ ಒಳ್ಳೆಯ ಮೆಸೇಜ್ ಗೆಳೆಯ!

    ReplyDelete