Thursday, December 27, 2012

ಪವನ್'s ಡೈರೀಸ್ - ೧

ಕಾಲೇಜೆಂದರೆ ಹುಡುಗಿಯರು, ಸ್ನೇಹಿತರು, ಸಿನಿಮಾ, ಹೊಡೆದಾಟ ಇಷ್ಟೇ ಎಂದುಕೊಂಡಿದ್ದ ವಯಸ್ಸು, ಶಾಲೆಯಲ್ಲಾದರೆ ಒಂದು ಮಧ್ಯಾಹ್ನ ತಪ್ಪಿಸಿಕೊಂಡರೆ ವದೆ ಬೀಳುತಿತ್ತು, ಮನೆಯಿಂದ ಅಪ್ಪ ಅಮ್ಮನ ಕರೆದು ಕೊಂಡು ಬಾ ಎಂಬ ಆರ್ಡರ್ ಕೂಡ ಇರುತಿತ್ತು. ಆದ್ರೆ ಕಾಲೇಜಿನಲ್ಲಿ ಅದೆಲ್ಲ ಇಲ್ಲ, ನಮಗಿಷ್ಟಾ ಬಂದಿದ್ದೇ ಮಾಡಬಹುದು. ನಮ್ ಕಾಲೇಜು ಹಾಗೆ ಇತ್ತು ಬಿಡಿ, ಪ್ರಾಕ್ಸಿ ಹಾಕಲೇ ಒಂದಷ್ಟು ಪಂಡಿತರಿದ್ದರು, ಪರೇಶ, ಪ್ರಕಾಶ, ಪವನ, ಪ್ರವೀಣ, ಪ್ರದೀಪ ಎಲ್ರುಗೂ ಒಬ್ಬನೇ ಪ್ರೆಸೆಂಟ್ ಸರ್ ಅಂತಿದ್ದ.ಆ ತರಹ ಪಂಡಿತರು ಐದಾರು ಜನ ಇದ್ರು ನಮ್ ಕ್ಲಾಸಲ್ಲಿ, ಕ್ಲಾಸಲಿ ಕೂರಲಿ ಇಷ್ಟವಿಲ್ಲದಿದ್ರೆ ಮಗಾ ಪ್ರಾಕ್ಸಿ ಹಾಕ್ಬಿಡೋ ಅಂತ ಹೇಳಿ ಹೋಗೋದಷ್ಟೆ, ಒಬ್ಬ ಪಂಡಿತ ಇಲ್ಲ ಮಗ ನಾನು ಪ್ರದೀಪಂಗೆ ಹಾಕ್ತಾ ಇದ್ದೀನಿ ಅಂದ್ರೆ ಇನ್ನೊಬ್ಬ ಪಂಡಿತ ಸಿಕ್ತಾ ಇದ್ದ. ಒಟ್ನಲ್ಲಿ ನಾನು ಕ್ಲಾಸಲ್ಲಿ ಕೂರದೆ ಇದ್ರು ಅಟ್ಟೆಂಡನ್ಸ್ ಮಾತ್ರ ಪಕ್ಕ ಇರ್ತಿತ್ತು.

ಯಾವ ಕ್ಲಾಸಿಗೆ ಬಂಕ್ ಹೊಡೆದ್ರು ಸಂಸ್ಕೃತ ಕ್ಲಾಸಿಗೆ ಮಾತ್ರ ತಪ್ಪದೆ ಅಟ್ಟೆಂಡ್ ಆಗ್ತಿದ್ದೆ. ಅದಕ್ಕೆ ಕಾರಣ ಸಹ ಇತ್ತು. " ಕವಿತ ". ಅವಳೊಂಥರಾ ಬೊಂಬೆ ಇದ್ದಹಾಗಿದ್ಲು, ಮುದ್ದು ಮುದ್ದು ಮುಖ, ಸ್ವಲ್ಪ ಅಗಲವಾದ ಕಣ್ಣುಗಳು, ಹಾಲಿನ ಥರ ಬಿಳುಪು,ಅವಳ ವರ್ಣನೆ ಮಾಡಕ್ಕೆ ಪದಗಳೇ ಇಲ್ಲ, ಅವಳೊಂಥರಾ ಹಾಲೋಜೆನ್ ಬಲ್ಬು ಇದ್ದಹಾಗೆ very attractive. ನನ್ನದು 'ಬಿ' ಸೆಕ್ಷನ್ ಅವಳದು 'ಎ' ಸೆಕ್ಷನ್, ಆದ್ರೆ ಇಬ್ರುದು ಸಂಸ್ಕೃತ ಮೊದಲನೇ ಆಯ್ಕೆಯ ಭಾಷೆ. ಸಂಸ್ಕೃತ ಕ್ಲಾಸಿನಲ್ಲಿ ಎ ಮತ್ತು ಬಿ ಸೆಕ್ಷನ್ ನ ಕಂಬೈನ್ ಮಾಡ್ತಿದ್ರು. ಆಗ ಅವಳನ್ನ ನೋಡಬಹುದು ಅನ್ನೋದಕ್ಕೆ ನಾನು ಆ ಕ್ಲಾಸ್ ಅಟೆಂಡ್ ಮಾಡ್ತಿದ್ದಿದ್ದು.

ಅವಳನ್ನ ಮಾತಾಡ್ಸೋ ಧೈರ್ಯ ಯಾವತ್ತು ಬರ್ಲಿಲ್ಲ, ಅವ್ಳು ಮೊದಲನೆ ಬೆಂಚಲ್ಲೆ ಕೂರೋವ್ಳು ನಾನು ಸಹ ಹುಡುಗರ ಸಾಲಲ್ಲಿ ಮೊದಲನೆ ಬೆಂಚಲ್ಲಿ ಕೂರ್ತಿದ್ದೆ. ಶ್ರೀ ರಾಂ ಭಟ್ಟರು ಸಂಸ್ಕೃತ ಕ್ಲಾಸ್ ಮಾಡ್ತಿದ್ರೆ ನಾ ಕವಿತಳನ್ನ ನೋಡ್ತಾ ಕೂರ್ತಿದ್ದೆ. ಒಂದಿನ ಕ್ಲಾಸಲ್ಲಿ ಶ್ರೀ ರಾಂ ಭಟ್ರು ಇದ್ದಕಿದ್ದಹಾಗೆ ನನ್ನ ಹೆಸರು ಕೂಗಿದ್ರು, ಕವಿತ ನ ನೋಡ್ತಾ ನೋಡ್ತಾ ಕನಸಿನಲ್ಲಿ ಕಳೆದು ಹೋಗಿದ್ದ ನನಗೆ ಯಾರೋ ಮೊಟಕಿದ ಹಾಗಾಯಿತು. ಪಕ್ಕದಲ್ಲೇ ಕೂತಿದ್ದ ನನ್ನ ಗೆಳೆಯ ವಿಜಯ್ ಕನಸಿನಿಂದ ವಾಪಸ್ ಕರೆ ತಂದಿದ್ದ. ಮೇಷ್ಟ್ರು ನಿನ್ನ ಪ್ರಶ್ನೆ ಕೇಳ್ತಿದ್ದಾರೆ ಏಳೋ ಅಂದ, ಮೇಷ್ಟ್ರು ಯಾವದೋ ಪ್ರಶ್ನೆ ಕೇಳಿ ಇದು ಯಾವ ವಿಭಕ್ತಿ ಹೇಳು ಅಂದ್ರು. ನನ್ನ ಭಕ್ತಿ ಎಲ್ಲ ಕವಿತ ಮೇಲಿರೋವಾಗ ಇದ್ಯಾವದೋ ವಿಭಕ್ತಿ ಯಾರಿಗೆ ಗೊತ್ತಾಗ್ಬೇಕು, ಉತ್ತರ ಗೊತ್ತಿಲ್ದೆ ಚಡಪಡಿಸ್ತಾ ಕವಿತ ಕಡೆ ನೋಡಿದೆ. ಅವಳ ಕೋಮಲವಾದ ಎರಡೂ ಕೈಗಳಿಂದ ನಾಲ್ಕು ನಾಲ್ಕು ಬೆರಳು ಹೊರಮಾಡಿ ಸನ್ನೆ ಮಾಡಿದ್ಲು, ಏನೋ ಸಾಧಿಸಿದ ಹಾಗೆ ಅಷ್ಟಮ ವಿಭಕ್ತಿಃ ಅಂದೆ, ಭೇಶ್ ಸರ್ಯಾಗಿ ಹೇಳಿದ್ಯ ಕೂತ್ಕೋ ಅಂದ್ರು. ಅಬ್ಬ ಪ್ರಪಂಚ ಯುದ್ಧ ಗೆದ್ದಷ್ಟು ಸಂತೋಷ ನಾನೆ ಉತ್ತರ ಕೊಟ್ಟಿದ್ರು ಅಷ್ಟು ಸಂತೋಷ ಆಗ್ತಿರ್ಲಿಲ್ಲ ಅವಳು ಹೇಳಿಕೊಟ್ಟಲಲ್ಲ ಅದೇ ವಿಶೇಷ.

ಇದನ್ನೆಲ್ಲ ಸೂಕ್ಷ್ಮವಾಗಿ ಗಮನಿಸಿದ ವಿಜಯ್ ಏನ್ ಮಗಾ ಡವ್ ಹೊಡೀತಾ ಇದ್ಯ ಅಂದ, ಆಗಷ್ಟೆ ಕಾಲೇಜಿಗೆ ಸೇರಿದ್ದಿದ್ದು ಇಂತಹ ವಿಷಯಗಳ ಕಡೆ ಗಮನವೇ ಇರ್ಲಿಲ್ಲ, ಇಲ್ಲ ಮಗಾ ಸುಮ್ನೆ ಚೆನ್ನಾಗಿದ್ದಾಳಲ್ಲ ನೋಡ್ತಿದ್ದೆ ಅಂದೆ, ಅದಕ್ಕವನು ಅದನ್ನೇ ಮಗಾ ಡವ್ ಅನ್ನೋದು ಅಂದ. ಸ್ವಲ್ಪ ನಾಚಿಕೆಯಾದರು ಒಪ್ಪಿಕೊಂಡು ಹೌದು ಮಗಾ ಹೆಲ್ಪ್ ಮಾಡೋ ಅಂದೆ. ಡವ್ ಅಂದ್ರೆ ಸುಮ್ ಸುಮ್ನೆ ಆಗಲ್ಲ ಮಗಾ ದುಡ್ ಖರ್ಚ್ ಮಾಡ್ಬೇಕು, ಗಿಫ್ಟುಗಳು ಕೊಡಬೇಕು ಸುಮ್ ಸುಮ್ನೆ ಯಾವ್ ಹುಡುಗೀನು ಡವ್ ಹೊಡ್ಯಲ್ಲ ಅಂದ. ಅಂದಿನಿಂದಲೇ ಉಳಿತಾಯ ಮಾಡಿ ದಿನಾ ಊಟಕ್ಕೆ ಅಂತ ಕೊಡುತಿದ್ದ ದುಡ್ಡೆಲ್ಲ ಉಳಿಸಿ ಗಿಫ್ಹ್ಟುಗಳ ಕೊಂಡೆ.

ನನ್ನ ಮೊದಲನೇ ಗಿಫ್ಟ್ ವಾಲೆ. ಮುದ್ದಾದ ವಾಲೆಯನ್ನ ವಿಜಯ್ ಕೈಗೆ ಕೊಟ್ಟು ನನ್ ಹೆಸರೇಳಿ ಕೊಟ್ಟುಬಿಡು ಮಗ ಅಂದೆ, ನನ್ನೆದುರೇ ಅದನ್ನ ಅವಳಿಗೆ ತಲುಪಿಸಿದ. ತುಸು ದೂರ ನಿಂತು ಅವಳ ಮೊಗದಲ್ಲಿ ವಾಲೆ ಕಂಡೊಡನೆ ಮೂಡಿದ ಮಂದಹಾಸ ನೋಡಿ ಖುಷಿ ಪಟ್ಟಿದ್ದೆ. ಹೀಗೆ ಹಣ ಉಳಿಸಿ ಆಗಾಗ ಒಂದೊಂದು ಗಿಫ್ಟು ಕೊಡುತಿದ್ದೆ ವಿಜಯ್ ಅದನ್ನು ತಲುಪಿಸುತಿದ್ದ. ಹಾಗೆಯೇ ಅವಳ ಹುಟ್ಟಿದ ದಿನ ಬಂತು, ಅಂದು ಹುಡುಗಿಯರಿಗೆ ಸಾಮಾನ್ಯವಾಗಿ ಇಷ್ಟ ಆಗುವ ಟೆಡ್ಡಿಬೇರ್ ತೆಗೆದು ಕೊಂಡು ಬಂದಿದ್ದೆ. ಅಂದು ಕೂಡ ವಿಜಯ್ ಕೈಗೆ ಕೊಟ್ಟು ಕೊಡಲು ಹೇಳಿದೆ. ದೂರದಲ್ಲಿ ನಿಂತು ಅವಳ ಪ್ರತಿಕ್ರಿಯೆಯನ್ನು ನೋಡ್ತಾ ಇದ್ದೆ. ಟೆಡ್ಡಿ ಕಂಡೊಡನೆ ಅಪ್ಪಿ ಮುದ್ದಾಡ ತೊಡಗಿದಳು. ನನ್ನಾನ್ನೇ ಅಪ್ಪಿದಷ್ಟು ಸಂತೋಷ, ಅದೇ ಖುಷಿಯಿಂದ ನೋಡನೋಡುತ್ತಲೇ ವಿಜಯ್ ನು ಅಪ್ಪಿದಳು. ಒಂದು ಕ್ಷಣ ಎದೆ ಝಲ್ಲೆಂದುಬಿಟ್ಟಿತ್ತು ಗುಂಡಿಗೆಯೆಲ್ಲ ನೀರಾದಂತೆ ಭಾಸ. ಆ ದೃಶ್ಯ ಕಂಡೊಡನೆ ಕಣ್ಣುಗಳಲಿ ನೀರು ಸುರಿಯಲಾರಂಬಿಸಿತು. ಏನೋ ಬಹಳ ಮುಖ್ಯವಾದುದೊಂದು ಕಳೆದು ಹೋದಂತ ಅನುಭವ. ಒಂದು ಕ್ಷಣ ಅಲ್ಲಿ ನಿಲ್ಲದ ಮನೆ ತಲುಪಿದೆ.

ಆಗೆಲ್ಲ ಮೊಬೈಲ್ ಫೋನುಗಳಿರಲಿಲ್ಲ, ವಿಜಯ್ ಲ್ಯಾಂಡ್ ಲೈನಿಗೆ ಕರೆ ಮಾಡಿದ್ದ. ಮಗಾ ಸಾರಿ ಲೆ ನಂಗೆ ಆ ಹುಡುಗಿ ತುಂಬ ಇಷ್ಟ ಆಗಿದ್ಲು. ನಿನ್ ಗಿಫ್ಟುಗಳನ್ನೆಲ್ಲ ನಾನೆ ಕೊಟ್ಟಹಾಗೆ ಪೋಸುಕೊಟ್ಟು ಅವಳಿಗೆ ಪ್ರಪೋಸ್ ಮಾಡಿದೆ ಒಪ್ಕೊಂಡ್ ಬಿಟ್ಲು ಮಗ, ಬೇಜಾರ್ ಮಾಡ್ಕೋಬೇಡ ಮಗ, ಕಾಲೇಜಿನಲ್ಲಿ ಯಾವ ಹುಡುಗೀನಾದ್ರು ತೋರ್ಸು ನಾನು ನಿಂಗೆ ಹೆಲ್ಪ್ ಮಾಡ್ತೀನಿ ಲವ್ ಮಾಡಕ್ಕೆ ಅಂದ. ಘಾಸಿಯಾದ ಹೃದಯಕ್ಕೆ ಇದೆಂತಹ ಸಾಂತ್ವನ? ಮರು ಮಾತನಾಡದೆ ರಿಸೀವರನ್ನು ಕುಕ್ಕಿದೆ. ಅಮ್ಮ ಒಳಗಿಂದ ಯಾಕೋ ಪವನ್ ಫೋನ್ ಹಾಗೆ ಕುಕ್ಕುತಾ ಇದ್ಯ? ನಿಮಪ್ಪ ಪಾಪ ಕಷ್ಟ ಪಟ್ಟು ದುಡಿದು ತಂದಿರೋದೋ  ಅದು ಅಂದ್ರು. ನನಗನ್ನಿಸಿತು, ಅವಳಿಗಾಗಿ ತಂದ ಗಿಫ್ಟುಗಳಿಗೆ ವ್ಯಯಿಸಿದ ಹಣ ನಂದಲ್ಲ ನಮ್ಮಪ್ಪನ ಕಷ್ಟಾರ್ಜಿತ. ನಮ್ಮಪ್ಪನ ಕಷ್ಟಾರ್ಜಿತ ಇನ್ನೊಬ್ಬನ ಪ್ರೀತಿಗೆ ಉಪಯೋಗವಾಯ್ತು.

ಮುಂದೆ ಆ ಕಾಲೇಜಿನಲ್ಲಿ ಬೇರೆ ಯಾವ ಹುಡುಗಿಯನ್ನು ಇಷ್ಟ ಪಡಬೇಕನಿಸಲೇ ಇಲ್ಲ......
ಪವನ್ ಪಾರುಪತ್ತೇದಾರ

1 comment:

  1. Pavan, tumba chennag baritya.. Mundvarsu :)

    ReplyDelete