Thursday, June 14, 2012

ಎಡಗೈಯ ಹಿಡಿಯಷ್ಟು ಪುಟ್ಟದೊಂ ಹೃದಯ

ಎಡಗೈಯ ಹಿಡಿಯಷ್ಟು ಪುಟ್ಟದೊಂ ಹೃದಯ
ಮತ್ತೊಂದು ಹೃದಯವ ಹುಡುಕುತಲಿ ಸುತ್ತಿತ್ತು
ಇರಲಿಲ್ಲ ಅದಕೆಂದು ಅಂತಸ್ತಿನ ಹಂಗು
ಸುಳಿದಿಲ್ಲ ಚಿಂತೆಯದು ಜಾತಿಗೀತಿಯದು
ಮಿಡಿಯುತಾ ಬಡಿಯುತಾ
ನಿಮಿಷಕೆಪ್ಪತ್ತೆರಡು ಬಾರಿ
ಜೊತೆಗಾಗಿ ನಿರ್ಮಲ ಹೃದಯವ ತಡಕಿತ್ತು

ಬಂದವು ಹೃದಯಗಳು ನೂರಾರು ನೂರಾರು
ಹತ್ತಿರ ಬಂದೊಡನೆ ಬಡಿತವೂ ಜೋರು
ಒಂದೊಂದು ಹೃದಯಕ್ಕೆ ಒಂದೊಂದು ಆಸೆ
ಕೇಳಿತೊಂ ಹೃದಯ ಯಾವ ಕಾರಿದೆ
ಮತ್ತೊಂದು ಕೇಳಿತು ನಿನ್ನಮನೆ ಹೇಗಿದೆ

ಹೆದರಿಯೇ ಉತ್ತರಿಸಿತು ಈ ಪುಟ್ಟ ಹೃದಯ

ಹಿಡಿಯಷ್ಟು ಹೃದಯದ ತುಂಬೆಲ್ಲ ಪ್ರೀತಿ
ಅದ ಬಿಟ್ಟು ಬೇರೆ ಏನಿಲ್ಲ ಒಡತಿ
ಸರಿದವು ಹೃದಯಗಳು ಈ ಮಾತ ಕೇಳಿ
ಕಾರು ಮನೆ ಅಷ್ಟೆ ಬದುಕೆಂದು ಹೇಳಿ

ಆಗಲೆ ಸಿಕ್ಕಿತ್ತು ಮುದ್ದಾದ ಹೃದಯ
ಹಿಡಿಯಷ್ಟು ಹೃದಯದ ಪ್ರೀತಿ ಸಾಕೆಂದು
ಇಟ್ಟಿತದು ಒಂದು ಪುಟ್ಟನೆಯ ಷರತ್ತು
ಬಂದು ಕೇಳೆಂದು ತನ್ನಪ್ಪ ಹೃದಯವನು

ಅಪ್ಪನ ಮನೆಯದೋ ದಟ್ಟನೆಯ ಕಾಡು
ಆಸೆಯೆಂಬ ಮುಳ್ಳಿನ ಪೊದೆಗಳ ನಡುವೆ
ಒಪ್ಪಿಸಲಪ್ಪನಾ ಹೃದಯವ ನುಗ್ಗಿತಾ ಪೊದೆಯಲಿ
ಹಿಡಿಯಷ್ಟು ಹೃದಯಕೆ ನೆಟ್ಟಿತು ಮುಳ್ಳಲಿ

ನೋವಲೆ ಕೇಳಿತು ಮುದ್ದಾದ ಮರಿ ಹೃದಯ
ಒಪ್ಪಲಿಲ್ಲವಲ್ಲ ಆ ಕಟುವಾದ ಹಿರಿ ಹೃದಯ
ಮುಳ್ಳುಗಳ ನಡುವಲಿ ನೋವಿನಲಿ ಮಿಡಿಯುತ
ಮತ್ತೆ ಮರಳಿತು ತನ್ನ ಎದೆಯ ಮನೆಗೂಡಿಗೆ

ಮತ್ತದೇ ಬಡಿತ ಮತ್ತದೇ ಮಿಡಿತ
ಎಪ್ಪತ್ತೆರಡು ಲೆಕ್ಕವದು ಇಂದಿಗೂ ತಪ್ಪಿಲ್ಲ
ಪ್ರತಿ ಬಾರಿ ಬಡಿತದಲು ನೋವ ಹಿಮ್ಮೇಳ
ಪ್ರಿಯತಮೆಯು ಕೊಟ್ಟ ಪ್ರೀತಿ ಬಹುಮಾನ

ಪ್ರಿಯತಮೆಯು ಕೊಟ್ಟ ಪ್ರೀತಿ ಬಹುಮಾನ.....!

No comments:

Post a Comment