Monday, January 23, 2012

ಐಶ್ವರ್ಯ ಕಳೆದು ಹೋದಾಗ….!!

ಪವನ್ ಪಾರುಪತ್ತೇದಾರ

ಪುಟ್ಟನಿಗೆ ಕ್ರಿಕೆಟ್ ಎಂದರೆ ಪ್ರಾಣ, ಹರಿದ ಚಡ್ಡಿ ಹಾಕಿಕೊಂಡು ತೂತು ಬನಿಯನ್ನಲ್ಲೇ ಮರದ ತುಂಡೊಂದನ್ನು ಹಿಡಿದು ಆಡಲು ಹೋಗುತಿದ್ದ. ಕೈಗೆ ಸಿಕ್ಕಿದ ಉದ್ದಗಿನ ವಸ್ತುಗಳೆಲ್ಲಾ ಅವನ ಕೈಲಿ ಬ್ಯಾಟ್ ಆಗಿಬಿಡುತಿತ್ತು. ಅದಕ್ಕೆ ಬಹಳಾನೆ ಉದಾಹರಣೆಗಳು. ತೆಂಗಿನ ಮೊಟ್ಟೆ, ಮರದ ರಿಪೀಸು, ಅಷ್ಟೇ ಯಾಕೆ ಅಮ್ಮನ ಮುದ್ದೆ ಕೆಲಕುವ ಕೋಲನ್ನು ಬಿಡುತ್ತಿರಲಿಲ್ಲ. ಪುಟ್ಟನ ಅಪ್ಪ ರೈತ, ಪಾರ್ಟ್ ಟೈಮ್ ಎಲೆಕ್ಟ್ರಿಕ್ ಕೆಲಸ ಸಹ ಮಾಡುತಿದ್ದರು. ಮನೆಲಿ ೨ ಸೀಮೆ ಹಸುಗಳು ಸಹ ಇದ್ದವು, ಅಪ್ಪ ಎಲೆಕ್ಟ್ರಿಕ್ ಕೆಲಸಕ್ಕೆ ಸಾಮಾನ್ಯವಾಗಿ ಸಂಜೆ ಹೋಗುತಿದ್ದರು
ಪುಟ್ಟ ಅಷ್ಟು ಹೊತ್ತಿಗೆ ಶಾಲೆಯಿಂದ ಮನೆಗೆ ಬರುತಿದ್ದ. ಬರುವಾಗಲೇ ಆಟದ ಕನಸು ಹೊತ್ತು ಬರುತಿದ್ದ ಪುಟ್ಟ ಅಪ್ಪ ಲೋ ಮಗ ನಾನು ಕೆಲಸಕ್ಕೆ ಹೋಗ್ತಾ ಇದ್ದೇನೆ ಹಸುಗಳನ್ನ ಚೆನ್ನಾಗಿ ನೋಡ್ಕೋ ಅಂತ ಹೇಳುತಿದ್ದರು. ಅಪ್ಪನ ಮಾತಿಗೆ ಇಲ್ಲ ಎನ್ನದೆ ಮುಖ ಸೊಟ್ಟಗೆ ಮಾಡ್ಕೊಂಡು ಆಯ್ತು ಅಂತಿದ್ದ. ಆಗ ಅಪ್ಪ ಲೋ ಮಗನೆ ನಿಮ್ಮೊಳ್ಳೇದಕ್ಕೆ ಕಣೋ ದುಡೀತಾ ಇರೋದು ಬೇಜಾರು ಮಾಡ್ಕೋಳದೆ ಹೋಗೋ ಅನ್ನೋರು. ಪುಟ್ಟ ಸಹ ಸ್ವಲ್ಪ ಮೂತಿ ಸೊಟ್ಟ ಮಾಡ್ಕೊಂಡು ಹಸು ಮೇಸಕ್ಕೆ ಕೆರೆ ಬಯಲಿಗೆ ಹೋಗ್ತಾ ಇದ್ದ.
ಕೆರೆ ಬಯಲಲ್ಲಿ ಪುಟ್ಟನ ತರಹವೇ ಇನ್ನೂ ಸುಮಾರು ಹುಡುಗರು ಬರುತಿದ್ದರು. ಹಸುಗಳನ್ನು ಬಯಲಲ್ಲಿ ಬಿಟ್ಟು ಎಲ್ಲರೂ ಸೇರಿ ಕಲ್ಲನ್ನು ವಿಕೆಟ್ನಂತೆ ಜೋಡಿಸಿ ತಮ್ಮಲ್ಲೇ ತಂಡಗಳನ್ನಾಗಿ ಮಾಡಿಕೊಂಡು ಸೂರ್ಯ ಬೈದು ಮನೇಗೆ ಹೋಗ್ರೋ ಅನ್ನೋವರೆಗು ಆಡುತಿದ್ದರು. ಪುಟ್ಟ ಒಳ್ಳೆಯ ಬೌಲರ್ ಆಗಿದ್ದ. ಬಹಳ ದೂರದಿಂದ ಓಡಿ ಬರದಿದ್ದರೂ ವೇಗವಾಗಿ ಚೆಂಡು ಎಸೆಯುವ ತಂತ್ರಗಾರಿಕೆ ಅವನಲ್ಲಿತ್ತು. ಆಗಾಗ ಲೆಗ್ ಸ್ಪಿನ್ ಹಾಕುತಿದ್ದ ಇದ್ದಕ್ಕಿದ್ದಂತೆ ಆಫ್ ಸ್ಪಿನ್ ಹಾಕುತಿದ್ದ. ಅವನ ಎಸತದಲ್ಲೇ ವೇಗವಾಗಿ ಸ್ಪಿನ್ ಆಗತಿದ್ದುದ್ದನ್ನು ಆಡಲಾಗದೆ ಬ್ಯಾಟಿಂಗ್ ಮಾಡುತ್ತಿರುವರೆಲ್ಲ ತತ್ತರಿಸುತಿದ್ದರು. ಎಲ್ಲಾ ಆಡಿದ ನಂತರ ಎಲ್ಲರೂ ತಮ್ಮ ತಮ್ಮ ಮನೆಗಳಿಗೆ ಹಸುಗಳನ್ನು ಕರೆದುಕೊಂಡು ಮನೆಗೆ ಮರಳುತಿದ್ದರು.
ಒಂದು ದಿನ ಫಲವಾಗಿದ್ದ  ಪುಟ್ಟನ ಒಂದು ಮನೆಯಲ್ಲಿನ ಹಸು ಕರು ಹಾಕಿತ್ತು, ಮನೆಯವರೆಲ್ಲ ಬಹಳ ಖುಷಿಯಾಗಿದ್ದರು. ಹೆಣ್ಣು ಕರು ಬೇರೆ, ಮನೆಯವರೆಲ್ಲ ಏನು ಹೆಸರಿಡಬೇಕೆಂದು ಚಿoತಿಸುತಿದ್ದರು ಅಮ್ಮ ಗೌರಿ ಎಂದಿಡೋಣ ಎಂದರು. ಅಪ್ಪ ಬೇಡ ಲಕ್ಸ್ಮಿ ಅನ್ನೋಣ ಎಂದರು. ಆಗ ಪುಟ್ಟ ಐಶ್ವರ್ಯ ಎಂದಿಡೋಣ ಅಂದ. ಅದಕ್ಕೆ ಅವರಪ್ಪ ಯಾರೋ ಅದು ಐಶ್ವರ್ಯ ಅಂದ್ರು. ಅಪ್ಪ ನಿಂಗೊತ್ತಿಲ್ವಾ, ಸಕ್ಕತ್ತಾಗಿದೆ ಹೆಸರು, ಇ ನಡುವೆ ಎಲ್ಲ ಸಿನಿಮಾಲು ಹಿರೋಯಿನ್ ಅವಳೇ, ಅಮ್ಮ ಲಕ್ಸ್ ಜಾಹಿರಾತು ನೋಡಿಲ್ವಮ ಅದರಲಿ ಬರ್ತಳಲ್ಲ ಅವಳೇ ಅಂದ, ಇದೇ ಇಡಣ ಇದೇ ಇಡಣ ಅಂತ ಹಠ ಮಾಡಿದ. ಆಗಲಿ ಎಂದು ಅಪ್ಪ ಅಮ್ಮ ಸಹ ಹೂಗುಟ್ಟಿದರು. ಐಶ್ವರ್ಯ ಅಮ್ಮನ ಬಳಿಯೇ ಇರುತಿದ್ದಳು ಯಾವಾಗಲು. ಇವನು ಮಾತನಾಡಿಸಲು ಹೋದಾಗಲೆಲ್ಲ ನೆಕ್ಕುತ್ತಿದ್ದಳು. ವರಟಾದ ನಾಲಿಗೆಯಿಂದ ನೆಕ್ಕುವಾಗ, ಪುಟ್ಟ ಖುಷಿಯಾಗಿ ಹಸು ಮನೆಯಿಂದಲೇ ಅಮ್ಮನ ಕೂಗಿ ಹೇಳುತಿದ್ದ, ಅಮ್ಮ ಐಶ್ವರ್ಯ ಅಮ್ಮ ಅದನ್ನ ನೆಕ್ಕಿದ್ರೆ ಐಶ್ವರ್ಯ ನನ್ನ ನೆಕ್ತಾ ಇದೆ ಅಂತ. ಶಾಲೆಯಲ್ಲೂ ಅದೇ ಮಾತು. ಲೋ ಮಾದೇಶ ನಮ್ಮನೆ ಹಸು ಕರು ಹಾಕೈತೆ ಗೊತ್ತ? ಹೆಸರೇನು ಹೇಳು ಐಶ್ವರ್ಯ ಗೊತ್ತಾ ಅಂದಾಗ ಮಾದೇಶ ಐಶ್ವರ್ಯನ! ಅಂತ ಬಾಯಿ ಬಿಟ್ಕೊಂಡು ಇರ್ಲಿ ಬಿಡೋಲೋ ನಮ್ಮ ಮನೆ ಹಸು ಕೂಡ ಫಲ ಆಗಿದೆ ಅದು ಕರು ಹಾಕ್ದಾಗ ಐಶ್ವರ್ಯ ಅಂತಾನೆ ಹೆಸರಿಡ್ತಿವಿ ಅಂದಿದ್ದ.
ಹೀಗೆ ಒಂದು ವಾರ ಕಳೆದಾಯ್ತು ಆಗ ಐಶ್ವರ್ಯ ಆಚೆ ಓಡಾಡೋ ಹಂತಕ್ಕೆ ಬಂದಿದ್ದಳು. ಹೊರಗೆ ಪುಟ್ಟ ಹಗ್ಗ ಕಟ್ಟಿ ಪುಟ್ಟ ಹಿಡಿದು ಬೀದಿಗೆ ಕರೆತಂದರೆ ರಸ್ತೆಯಲ್ಲಿನ ಪುಟ್ಟ ಮಕ್ಕಳೆಲ್ಲ ಬಂದು, ಐ ಹೊಸ ಕರು ಏನೋ ಪುಟ್ಟ ಇದರ ಹೆಸರು ಎಂದು ಕೇಳುತಿದ್ದರು ಪುಟ್ಟ ಐಶ್ವರ್ಯ ಅಂತ ಹೆಮ್ಮೆಯಿಂದ ಹೇಳಿಕೊಳ್ಳುತಿದ್ದ. ಇದೇ ಭರಾಟೆಯಲ್ಲಿ ಒಂದೆರಡು ಸಲಿ ಪುಟ್ಟನ ಕಾಲು ತುಳಿದಿದ್ದು ಆಗಿದೆ. ಮುಂದೆ ಸಂಜೆ ಅಪ್ಪ ಎಲ್ಲಾದರೂ ಕೆಲಸಕ್ಕೆ ಹೋದರು ಬಹಳಾ ಉತ್ಸಾಹದಿಂದ ಆಡಲು ಹೋಗುತಿದ್ದ. ಒಂದೆರಡು ಸಲಿ ಆಡುವ ಗಮನದಲ್ಲಿ ಐಶ್ವರ್ಯನ ಕಡೆ ಗಮನ ಕೊಡದೆ ಅದು ಅವರಮ್ಮನ ಬಳಿ ಹಾಲು ಕುಡಿದು ಅಪ್ಪನ ಹತ್ತಿರ ಬೈಸಿಕೊಂಡಿದ್ದ ಕೂಡ.
ಹೀಗೆ ಒಮ್ಮೆ ಪುಟ್ಟನ ಅಪ್ಪ ಎಲೆಕ್ಟ್ರಿಕ್ ಕೆಲಸ ಮಾಡಲು ಹೊರಗಡೆ ಹೋಗಬೇಕಾದ ಅನಿವಾರ್ಯತೆ ಬಂದಿತ್ತು. ಅದೇ ದಿನ ಪುಟ್ಟನ ಕ್ರಿಕೆಟ್ ತಂಡ ಬೇರೆ ಕೆರೆ ಬಯಲಿನ ಹುಡುಗರ ಜೊತೆ ಕ್ರಿಕೆಟ್ ಪಂದ್ಯ ಇಟ್ಟುಕೊಂಡಿದ್ದರು. ಶಾಲೆಯಿಂದ ಮನೆಗೆ ಬಂದೊಡನೆ ಅಪ್ಪ ಮನೆಯಲ್ಲಿ ಇಲ್ಲದಿರುವುದು ತಿಳಿಯಿತು. ನೀನೆ ಹಸುಗಳನ್ನು ಹೊತ್ತು ಮುಳುಗೊತನಕ ಮೇಯಿಸಿ ಮನೆಗೆ ಕರ್ಕೊಂಡ್ ಬರಬೇಕಂತೆ ಅಪ್ಪ ಹೇಳಿದ್ದಾರೆ ಅಂತ ಅಮ್ಮ ಹೇಳಿದರು. ವಿಷಯ ಕೇಳಿ ಸಪ್ಪೆಯಾಗಿ ಕೆರೆ ಬಯಲಿಗೆ ಹೋದ. ಅಲ್ಲಿ ಪುಟ್ಟನ ಗೆಳೆಯರೆಲ್ಲ ತಯಾರಾಗಿ ಹೊರಡಲು ಸಿದ್ದವಾಗಿದ್ದರು. ಪುಟ್ಟ ಇಲ್ಲ ಕಣ್ರೋ ನೀವು ಹೋಗಿ ಆಡಿ ನಾ ಬರಲು ಆಗಲ್ಲ. ಐಶ್ವರ್ಯ ಬೇರೆ ಬಂದಿದ್ದಾಳೆ ಈಗ ಎಲ್ಲಂದರಲ್ಲಿ ಓಡುತ್ತಾಳೆ, ಜಿಗಿಯುತ್ತಾಳೆ. ಆಮೇಲೆ ಎಲ್ಲಾದರು ಹೋದ್ರೆ ನಮಪ್ಪ ನನ್ನ ಚರ್ಮ ಸುಲಿಯುತ್ತಾರೆ ಅಂದ. ಆಗ ಗೆಳೆಯರೆಲ್ಲ ನೀನೇನು ಹೆದರಬೇಡ ಪುಟ್ಟ ಗಟ್ಟಿಯಾಗಿ ಕಟ್ಟಿ ಹಾಕೋಣ ನೀನೆ ನಮ್ಮ ತಂಡದ ಮುಖ್ಯ ಆಟಗಾರ ನೀನೆ ಬರಲಿಲ್ಲ ಅಂದರೆ ನಾವು ಗೆಲ್ಲಕ್ಕೆ ಆಗಲ್ಲ ಅಂತ ಬಲವಂತ ಮಾಡಿದರು. ಮೊದಲೇ ಕ್ರಿಕೆಟ್ ಎಂದರೆ ಪ್ರಾಣ ಅಲ್ವೇ ಪುಟ್ಟನಿಗೆ, ಐಶ್ವರ್ಯಳನ್ನು ಗಟ್ಟಿಯಾಗಿ ಕಟ್ಟಿ ಹೊರಟೆ ಬಿಟ್ಟ. ಅಲ್ಲಿ ಹೋಗಿ ಚೆನ್ನಾಗಿ ಆಡಿ ಗೆದ್ದು ಬಂದರು.
ಬಂದು ನೋಡುವಷ್ಟರಲ್ಲಿ ಐಶ್ವರ್ಯಳ ಅಮ್ಮ ಪದೇ ಪದೇ ಅಮ್ಮ ಅಮ್ಮ ಎಂದು ಕೂಗುತಿದ್ದ ಶಬ್ದ ಸ್ವಲ್ಪ ಗೊಂದಲ ಮೂಡಿಸಿತ್ತು. ಹತ್ತಿರ ಬಂದು ನೋಡುವಷ್ಟರಲ್ಲಿ, ಐಶ್ವರ್ಯ ಕಾಣಿಸುತ್ತಿರಲಿಲ್ಲ. ಪುಟ್ಟ ಪದರಿಬಿಟ್ಟಿದ್ದ. ತನಗೆ ಅರಿವಿಲ್ಲದೇನೆ ಕಣ್ಣಲ್ಲಿ ನಿರು ಸುರಿಯಲು ಶುರುವಾಯಿತು. ಪುಟ್ಟನ ಗೆಳೆಯರು ಸಹ ಅವನ ಜೊತೆ ಹುಡುಕಿದರೂ ಸಿಗಲಿಲ್ಲ. ಅಷ್ಟರಲ್ಲೇ ಸೂರ್ಯ ಮುಳುಗಿದ್ದರಿಂದ ಪುಟ್ಟನ ಗೆಳೆಯರೆಲ್ಲ ತಮ್ಮ ತಮ್ಮ ದನಕರುಗಳನ್ನು ಮನೆ ಕಡೆ ಹೊಡೆದು ಕೊಂಡು ಹೋದರು. ಪುಟ್ಟನ ತಂದೆ ಎಷ್ಟು ಹೊತ್ತಾದರೂ ಪುಟ್ಟ ಮನೆಗೆ ಬಂದಿಲ್ಲ ಅಂತ ಹುಡುಕಿ ಕೊಂಡು ಬಂದರು. ಬಂದು ಇಲ್ಲಿನ ಅವಸ್ತೆ ನೋಡಿ ಮಿಕ್ಕ ಎರಡು ಹಸುಗಳನ್ನು ಮನೆಗೆ ಕರೆದು ಕೊಂಡು ಪುಟ್ಟನ್ನು ಜೊತೆಗೆ ಕರೆ ತಂದು, ಮನೆಯಲ್ಲಿ ಚೆನ್ನಾಗಿ ಬಾರಿಸಿದರು. ಹಸು ಮೆಸೋ ಅಂದ್ರೆ ಕ್ರಿಕೆಟ್ ಆಡಲು ಹೋಗಿದ್ದ ಜ್ಞಾನ ಇಲ್ವಾ ಮೈಮೇಲೆ, ಅಂತ ಬಿದಿರಿನ ಕೋಲು ಮುರಿದು ಹೋಗುವರೆಗೂ ಹೊಡೆದರು. ಅತ್ತು ಅತ್ತು ಪುಟ್ಟನ ಕಣ್ಣು ಬತ್ತಿ ಹೋಗಿತ್ತು. ಹಸು ಮನೆಯಿಂದ ಐಶ್ವರ್ಯಳ ತಾಯಿ ಅಮ್ಮ ಅಮ್ಮ ಅಂತ ಕುಗುತ್ತಲೇ ಇತ್ತು. ಪುಟ್ಟನ ಅಮ್ಮ ಬಂದು ಪುಟ್ಟನನ್ನು ಸಮಾಧಾನ ಮಾಡಿ ಹೋಗ್ಲಿ ಬಿಡಪ್ಪ ಇನ್ನು ಅಳಬೇಡ. ಸಾಕು ಬಿಡ್ರಿ ಮಗುನ ಎಷ್ಟು ಹೊಡಿತಿರ ಅಂತ ಪುಟ್ಟನ ತಂದೆ ಮೇಲೆ ಸಹ ರೇಗಿದರು. ಆಗ ಪುಟ್ಟ ಪರವಾಗಿಲ್ಲ ಬಿಡಮ್ಮ ನನಗೆ ಅಳು ಬರ್ತಾ ಇರೋದು ಅಪ್ಪ ಹೊಡೆದಿದ್ದಕ್ಕಲ್ಲ ಪಾಪ ತಾಯಿ ಮಗುನ ಬೇರೆ ಮಾಡಿ ಬಿಟ್ಟನಲ್ಲ ಅನ್ನೋ ವಿಷಯಕ್ಕೆ ಅಂದಾಗ ಪುಟ್ಟನ ಅಪ್ಪ ಅಮ್ಮನಿಗೂ ಒಂದು ಕ್ಷಣ ಕಣ್ಣು ಒದ್ದೆಯಾಗಿತ್ತು. ಹಸುಮನೆಯಿಂದ ಅಮ್ಮ ಅಮ್ಮ ಎಂಬ ಧ್ವನಿ ಕೇಳಿದಾಗಲೆಲ್ಲ ಪುಟ್ಟನ ಅಳು ಇನ್ನು ಹೆಚ್ಚಾಗುತ್ತಲೇ ಇತ್ತು…….

******************

No comments:

Post a Comment