Sunday, May 27, 2012

ಅಲ್ಪತೃಪ್ತನಿವನು


ಸ್ಪರ್ಷದಲೆ ಸುಖದ ಸುಪ್ಪತ್ತಿಗೆಯನೇರುವ
ಅಶ್ಲೀಲ ನೋಟದಲಿ ಅಂದವನು ಕೆಣಕುವ
ನಾಚಿಕೆಯೆ ಇಲ್ಲದ ಬೈಗುಳವ ಪಡೆಯುವ
ಕೊಳಕನ್ನು ಮನವೆಲ್ಲ ತುಂಬಿಕೊಂಡಿರುವ
ಅಲ್ಪತೃಪ್ತನಿವನು

ಜಂಗುಳಿಯ ನಡುವೆ ನುಗ್ಗಿ ತಾ ಬರುವ
ಮಹಿಳೆಯರ ಮಧ್ಯದಲಿ ನುಗ್ಗಿ ಮಜ ಪಡೆವ
ಅಂಟಿದಂತೆಯೆ ನಿಂತು ಸುಖದ ಸೆರೆ ಹಿಡಿವ
ನಾರಿಯರ ಮನಸುಗಳ ಘಾಸಿ ಮಾಡಿರುವ
ಹೆಣ್ಣ ಮನವದನು ಗೆಲ್ಲಲಾಗದಿರುವ
ಅಲ್ಪತೃಪ್ತನಿವನು

ಮಹಿಳೆಯರ ಆಸನವ ಆಕ್ರಮಿಸಿ ಬಿಡುವ
ಅಕ್ಕ ಅಮ್ಮನ ನಡುವೆ ವ್ಯತ್ಯಾಸ ಮರೆವ
ವಿಕೃತಿಯ ಮನವೆಲ್ಲ ತುಂಬಿಕೊಂಡಿರುವ
ಸ್ವಚ್ಛಂದ ಪ್ರೀತಿಯ ಬೆಲೆ ತಿಳಿಯದಿರುವ
ಮೈಮೇಲೆ ಬೀಳುವ ಮೃಗವಾಗಿ ವರ್ತಿಸುವ
ಅಲ್ಪತೃಪ್ತನಿವನು

ಬದಲಿಸಿಕೊ ಓ ಮನುಜ ನಿನ್ನ ಈ ರೀತಿಯನು
ದೇವತೆಯು ಹೆಣ್ಣು ಆಟಿಕೆಯು ಅಲ್ಲ
ಪ್ರೀತಿ ಪಡಿ ಅವಳಿಂದ
ಸ್ನೇಹದಿಂದಿರವಳ ಜೊತೆ
ಅಲ್ಪತೃಪ್ತನಾಗದಿರು ಬರಿ ಸ್ಪರ್ಷದಿಂದ
ಅಲ್ಪತೃಪ್ತನಾಗದಿರು ಬರಿ ಸ್ಪರ್ಷದಿಂದ

ಇವತ್ತು ಸಿಟಿ ಬಸ್ಸಿನಲ್ಲಿ ಒಬ್ಬ ವ್ಯಕ್ತಿಯ ನಡವಳಿಕೆ ಈ ನನ್ನ ಈ ಬರಹಕ್ಕೆ ಕಾರಣ..
ಪವನ್ ಪಾರುಪತ್ತೇದಾರ

Wednesday, May 23, 2012

ಎಂಜಲೆಲೆ

ಕಿತ್ತಾಟ ನಡೆಯುತಿತ್ತಲ್ಲಿ
ಅಸ್ತಿತ್ವದ ಹುಡುಕಾಟ ನಡೆಯುತಿತ್ತು
ತನ್ನವರ ನಡುವೆಯೇ ಹೊಡೆದಾಟ
ಕೂಗಾಟ ಎಳೆದಾಟ ರಂಪಾಟ
ಹಿರಿತನದ ಬಡಿದಾಟ

ಮೊದಲು ನಾ ಬಂದಿರುವೆ ಆಮೇಲೆ ನೀ
ನಾ ಮೊದಲು ಬಂದಿದ್ದು ಆದ್ಯತೆಯು ನನಗೆ
ನಿನ್ನದೀ ಸ್ಥಳವಲ್ಲ ಏಕೆ ಬಂದಿರುವೆ
ಹಿರಿಯನು ನಾನಿಲ್ಲಿ ಕೊಡಿ ಎನಗೆ ಅವಕಾಶ
ನಮ್ಮಕಡೆ ಜನ ಜಾಸ್ತಿ ಹೊರಡು ಏಕಿರುವೆ

ನಿಂತಲ್ಲಿನಿಂದಲೇ ಬೆದರಿಕೆಯ ಮಾತು
ಎಲ್ಲರಿಗೂ ಹಸಿವು ಹೊಟ್ಟೆಬಾಕರು ಎಲ್ಲ
ತಮ್ಮ ಹೊಟ್ಟೆಯಷ್ಟೇ ತುಂಬಿದರೂ ಬಿಡರು
ನಾಳೆಗೂ ನಾಳಿದ್ದಿಗೂ ಕೂಡಿಡುವ ಆಸೆ

ಕೊಬ್ಬ ಬೆಳೆಸಿಕೊಂಡು ಬೀಗುವ ಹಂಬಲ
ಮಕ್ಕಳು ಮರಿಮಕ್ಕಳಿಗೂ ಪಾಲು ನೀಡುವಾಸೆ
ತಾನೇ ಎಲ್ಲವನ್ನೆಳೆದು ಮನೆಗೆ ಹೋಗುವಾಸೆ
ಗಬಗಬನೆ ಮಡಚಿಟ್ಟು ಇನ್ನೇನು ಹೊರಡಲು

ಛತ್ರದ ಕಾವಲುಗಾರ ಬಂದ ದೊಣ್ಣೆಯನು ಹಿಡಿದು
ಓಡಿದವು ನಾಯಿಗಳು ಎಂಜಲೆಲೆಗಳ ಬಿಟ್ಟು


ಪವನ್ ಪಾರುಪತ್ತೇದಾರ

Wednesday, May 16, 2012

ಯಂತ್ರವಾದೆಯಾ ಅಮ್ಮ


ಮಡಿಲದು ಪ್ರೀತಿಯ ಧಾರೆ ಹರಿಸಲು ಇರಲು
ಗರ್ಭದಲಿ ಮುದ್ದಾದ ಮಗುವೊಂದು ಇರಲು
ಬೇಡವಂದು ಹೀಗೆಳದು ಕೊಲ್ಲುವಾಗಲು ಕೂಡ
ನೋವ ನುಂಗಿ ಕರುಳ ಕಿವುಚಿಕೊಂಡು
ಕಣ್ಣೀರು ಸುರಿಸುವ ಯಂತ್ರವಾದೆಯಾ ಅಮ್ಮ

ಅವನಂತು ಅವಿವೇಕಿ ನೀ ಅಸಹಾಯಕಿ
ಪರಿವಾರಕಿಲ್ಲ ನಿನ್ನ ಮಗುವಿನ ಮೇಲೆ ಪ್ರೀತಿ
ಅವರಿಗೆ ಬೇಕಿತ್ತು ವಂಶೋಧ್ಧಾರಕ
ಉದ್ದಾರವಾಗಲು ಗಂಡು ಮಗುವೇ ಬೇಕ
ನೀನಾದರೊಂದಷ್ಟು ಒರಟುತನ ಮಾಡದೆ
ಹೆದರಿ ಬಲಿ ಕೊಡುವ ಯಂತ್ರವಾದೆಯೇನಮ್ಮ

ಕೇಳಬಾರದಿತ್ತೇನು ಮರು ಪ್ರಶ್ನೆಯನ್ನು
ಹೆಣ್ಣ ಬೇಡವೆನ್ನುವರ ಹೆತ್ತವಳು ಹೆಣ್ಣೇ ಅಲ್ಲವೆ
ಮನದ ಕುರುಡಿಗೆ ಸ್ವಲ್ಪ ಔಷಧಿಯ ನೀಡುವ
ಜಗದ ಕಣ್ಣುಗಳಿಗೆ ಈ ಕುರುಡರ ತೋರುವ
ಜಗ್ಗದ ಕುಗ್ಗದ ನಾರಿ ನೀನಾಗಮ್ಮ
ಯಂತ್ರವಾಗದಿರಮ್ಮ
ಬೆಳೆಸಿ ಬಲಿ ಕೊಡುವ ಯಂತ್ರವಾಗದಿರಮ್ಮ

ಸತ್ಯಮೇವ ಜಯತೆ ಮೊದಲ ಕಂತು ನೋಡಿದಾಗನಿಸಿದ್ದು

ಪವನ್ ಪಾರುಪತ್ತೇದಾರ

ಆಸೆ ಅಂಗಡಿ

ಅಪ್ಪಿತಪ್ಪಿಯೂ ಒಪ್ಪದಿರಿ
ಆಸೆಯೆಂಬ ಅಂಗಡಿಯ ಸರಕ
ತೂಕವದು ಹೆಚ್ಚಿಹದು
ಅಗ್ಗದಲಿ ಸಿಗಬಹುದು
ಮಾಡಬಹುದದು ನಿಮ್ಮ ಮನದ ಮೇಲ್ಗಾಯ

ಕಣ್ಣಿಗೊಂದಷ್ಟು ತಂಪನೆರಬಹುದು
ಮನದ ಮೂಲೆಯಲಿ ಕ್ಷಣಿಕ ಸುಖವನೀಯಬಹುದು
ಹೆಮ್ಮೆಯಲಿ ಕೊಂಡು ತೋರ್ಪಡಿಸಿಕೊಂಡು
ಪರರ ಮುಂದಷ್ಟು ಬೀಗಿ ಹಿಗ್ಗಬಹುದು

ಮುಂದೊಮ್ಮೆ ಮುಗಿವುದು ಸರಕಿನ ಸಾರ
ಆಸೆಯಂಗಡಿಯ ಸರಕು ಶಾಶ್ವತ ಅಲ್ಲ
ತಂದು ಒಡ್ಡೀತು ನಿಮಗೆ ನಿರಾಸೆಯ ಭಾವ
ನೀಡಬಹುದು ನಿಮ್ಮ ಮನಸಿಗೆ ನೋವ

ಪವನ್ ಪಾರುಪತ್ತೇದಾರ

ಬದುಕಿನ ಬಂಡಿ

ಕಾಡುತಿದೆ ಮನದಲೇನೋ ದುಗುಡ
ಮರೆತು ಬಿಡುವೆನೋ ಏನೋ ಎಂಬ ಭಯ
ಸಿಂಬಳವ ಒರೆಸಿ ಸಿಹಿಯಾದ ಮಾತಾಡಿ
ಮುದ್ದಾದ ಪದ್ಯಗಳ ನಮ್ಮುಂದೆ ಹಾಡಿ
ಬದುಕ ಬಂಡಿಗೆ ಮೊದಲ ಗೇರು ಹಾಕಿದವರ
ಮರೆತು ಬಿಡುವೆನೋ ಏನೋ ಎಂಬ ಭಯ

ರಾಶಿ ಮನೆಕೆಲಸವ ಕೊಟ್ಟು
ತಪ್ಪು ಮಾಡಿದಾಗೆಲ್ಲ ಪೆಟ್ಟು ಕೊಟ್ಟು
ಬರೆಯದೇ ಬಂದಾಗ ಬರೆಯಿಟ್ಟು
ಗೆಣ್ಣುಗಳ ಊದಿಸಿ ತೊಡೆಪಾಯಸವ ನೀಡಿ
ಬದುಕ ಬಂಡಿಗೆ ಎರಡನೇ ಗೇರು ಹಾಕಿದವರ
ಮರೆತು ಬಿಡುವೆನೋ ಏನೋ ಎಂಬ ಭಯ

ಜಿಪ್ಪು ಹಾಕದಿದ್ದಾಗ ಗುಟ್ಟಾಗಿ ಹೇಳಿ
ಶಾಲೆ ತಪ್ಪಿಸಿದಾಗ ಜೊತೆಯಲ್ಲಿ ತಿರುಗಿ
ಈಜಾಡಿ ನಲಿದಾಡಿ ಆಗಾಗ ಹೊಡೆದಾಡಿ
ಅಗಲಿಕೆಯ ಕಣ್ಣೀರ ಈಗಲು ಸುರಿಸುತಿಹ
ಬದುಕ ಬಂಡಿಗೆ ಮೂರನೇ ಗೇರು ಹಾಕಿದವರ
ಮರೆತು ಬಿಡುವೆನೋ ಏನೋ ಎಂಬ ಭಯ

ಒಲವೇ ನೀನು ಮಂದಾರವೆಂದೂ
ಕಾಣುವೆ ಅಷ್ಟೆ, ಕೈಗೆಟಕದೆಂದು
ತನ್ನತನ ತಾನೇ ಕಳೆದುಕೊಂಡಾಗಿ
ಕಣ್ಣೀರ ಪಾಠವನು ಪ್ರೀತಿಯಲಿ ತಿಳಿಸಿದ
ಬದುಕ ಬಂಡಿಗೆ ನಾಲ್ಕನೇ ಗೇರು ಹಾಕಿದವರ
ಮರೆತು ಬಿಡುವೆನೋ ಏನೋ ಎಂಬ ಭಯ

ಅಡಿಗಡಿಗೆ ನಮಸ್ಕಾರ ಆಗಾಗ ಅಲಂಕಾರ
ತೀರ್ಥ ಪ್ರಸಾದಗಳಂತೂ ಲೆಕ್ಕವೇ ಇಲ್ಲ
ಮನೆಯಲ್ಲು ದೇವರು ಗುಡಿಯಲ್ಲು ದೇವರು
ಬದುಕ ಬಂಡಿಗೆ ಐದನೇ ಗೇರು ಹಾಕಿದವರ
ಬಂಡಿಯ ವೇಗವ ಶರವೇಗ ಮಾಡಿದವರ
ಮರೆತು ಬಿಡುವೆನೋ ಏನೋ ಎಂಬ ಭಯ

ಒಮ್ಮೆ ನಿಮ್ಮ ಬದುಕ ಬಂಡಿ ರೆವೆರ್ಸ್ ಗೇರ್ ಹಾಕಿ ನೋಡಿ ಸ್ನೇಹಿತರೆ, ನಿಮ್ಮ ಕಣ್ಣು ಒದ್ದೆ ಆಗದೆ ಇರದು....

ಪವನ್ ಪಾರುಪತ್ತೇದಾರ :-