Friday, April 5, 2013

ಪವನ್'s ಡೈರೀಸ್ - 4

ಒಮ್ಮೊಮ್ಮೆ ಒಂದು ಏಟು ನಮ್ಮ ಪೂರ್ತಿ ಅಹಂಕಾರವನ್ನೇ ಇಳಿಸಿಬಿಡುತ್ತೆ ಅನ್ನಿಸುತ್ತೆ. ಅಪ್ಪ ಕೊಡೋ ಏಟು, ಅಮ್ಮ ಕೊಡೋ ಏಟು, ಗೆಳೆಯನಿಗಾಗಿ ಇನ್ನ ಯಾರ ಹತ್ರಾನೋ ತಿನ್ನೋ ಏಟು, ಮೇಷ್ಟ್ರು ಕೊಡೋ ಏಟು, ಹೀಗೆ ಏಟುಗಳು ಮನುಷ್ಯನನ್ನ ಕಠಿಣವಾಗಿಸದೆ ಮೃದುವಾಗಿಸುವಂತಿದ್ದರೆ ಆ ಏಟುಗಳಿಗೆ ಮಹತ್ವ ಬಹಳಾನೆ ಬಂದುಬಿಡುತ್ತದೆ. ಇಂತಹದೇ ಒಂದು ಏಟು ನನ್ನನ್ನು ಒಬ್ಬ ಜವಾಬ್ದಾರಿಯೆತ ವ್ಯಕ್ತಿಯನ್ನಾಗಿ ಮಾಡಿದೆ. ಆದ್ರೆ ಆ ಏಟು ತಿಂದದ್ದು ಬೇರೆ ಯಾರಿಂದಲೋ ಅಲ್ಲ ಒಬ್ಬ ಪೋಲೀಸಣ್ಣನಿಂದ!!

ಬೆಂಗಳೂರಿನಲ್ಲಿ ದಿನದ ಪಾಸುಗಳ ಪರಿಚಯ ಹೊಸತು. ಯಾವನು ಸೈನ್ ಮಾಡುತ್ತಿರಲಿಲ್ಲ ಚೆಕ್ಕು ಸರಿಯಾಗಿ ಮಾಡುತ್ತಿರಲಿಲ್ಲ. ಪಾಸು ಬಳಸಿ ಊರೆಲ್ಲ ತಿರುಗಿ ಮತ್ತೆ ಊರು ಸೇರಿ ಎಳನೀರ ಅಂಗಡಿಯವನಿಗೆ ಕೊಟ್ರೆ 5 ರೂಪಾಯಿ ಕೊಡುತಿದ್ದ. ಮತ್ತದೇ ಪಾಸನ್ನು ಇನ್ನೊಬ್ಬರಿಗೆ 10 ರೂ ಗೆ ಮಾರುವುದನ್ನ ನನ್ನ ಕಣ್ಣಾರೆ ಬಹಳ ಸಲ ನೋಡಿದ್ದೀನಿ. ಆ ರೀತಿ 10 ಅಥವಾ 15 ರೂ ಕೊಟ್ಟು ಪಾಸು ಕೊಂಡವರಲ್ಲಿ ನಾನು ಸಹ ಒಬ್ಬ.

ಪಕ್ಕದೂರಿನ ಕೇಬಲ್ ರಮೇಶಣ್ಣನವರ ಮಗನಿಗೆ ಉಪನಯನ ಕಾರ್ಯಕ್ರಮ ರಾಗಿಗುಡ್ಡ ದೇವಸ್ಥಾನದ ಛತ್ರದಲ್ಲಿ ಆಯೋಜಿಸಲಾಗಿತ್ತು. ದಿನದ ಪಾಸಿನಲ್ಲೇ ಅಲ್ಲಿಯವರೆಗೆ ಪ್ರಯಾಣ ಮಾಡಿ ಗಡತ್ತಾಗಿ ತಿಂದು ಮನೆಗೆ ವಾಪಸ್ ಬರುವಾಗ ದಿನದ ಪಾಸಿರುವ ಗುಂಗಿನಲ್ಲಿ ಸಿಕ್ಕ ಸಿಕ್ಕ ಬಸ್ಸುಗಳನ್ನ ಹತ್ತಿ ಫುಟ್ ಬೋರ್ಡೀನ ಮೇಲೆ ಓಲಾಡುತ ಮನೆಗೆ ಹೊರಟಿದ್ದೆ. ಆಗೆಲ್ಲ ಸ್ವಲ್ಪ ಸಹವಾಸ ಜೋರಾಗೆ ಇತ್ತು ಬಿಡಿ, ಕಂಡಕ್ಟರಿಗಿಂತ ನಾನೆ ಹೆಚ್ಚು ಡ್ಯೂಟಿ ಮಾಡ್ತಿದ್ದೆ. ನನಗಿಂತ ಕೆಳಗಿನ ಮೆಟ್ಟಿಲಲ್ಲಿ ನಿಂತವರಿಗೆ ಆವಾಸ್ ಹಾಕಿ ಒಳಗೆ ಕಳ್ಸೋದು,ಕಾಲರ್ ಮೇಲಕ್ಕೆತ್ತಿಕೊಂಡು ಕೈಗೆ ತಾಮ್ರದ ಬಳೆ ಜೊತೆಗೊಂದಷ್ಟು ಕಲರ್ ಕಲರ್ ದಾರಗಳು, ಕತ್ತಿಗೆ ಮಣಿ ಸರ, ಕೈಗೊಂದು ಮಣಿಸರ, ಕಾಲರ್ ಮೇಲೆ ಕೆಂಪು ಬಣ್ಣದ ಕರ್ಚೀಪು, ಅಬ್ಬಬ್ಬ ನನ್ ಲುಕ್ಕೇ ಒಂತರ ವಿಚಿತ್ರವಾಗಿರ್ತಿತ್ತು.ಯಾವ್ದಾದ್ರು ಕಾಲ್ ಬಂದ್ರೆ ಏನೋ ಮಚ್ಚ, ಅಡ್ಡದಲ್ಲಿ ಸಿಕ್ಕಣ ಬಿಡು, ಆ ನನ್ ಮಗನಿಗೆ ಸರ್ಯಾಗಯ್ತೆ ಅಂತೆಲ್ಲ ಬರೀ ಶೋಕಿ ಮಾತುಗಳು.

ಹೀಗೆ ಬಸ್ಸಿನಿಂದ ಬಸ್ಸಿಗೆ ಎಗರಾಡ್ತ ಯಾವ್ದೊ ಒಂದು ಬಸ್ಸಿನ ಫುಟ್ ಬೋರ್ಡಿನಲ್ಲಿ ನಿಂತಿದ್ದೆ. ಬಂದ ಕಂಡಕ್ಟರ್ ಟಿಕೆಟ್ ಟಿಕೆಟ್ ಅಂದ, ಪಾಪ ಉತ್ತರ ಕರ್ನಾಟಕದವನು, ಪಾಸ್ ಅಂದೆ, ತೋರಿಸ್ರಿ ಅಂದ, ಸ್ಟೈಲ್ ಆಗಿ ಪಾಸ್ ಎತ್ತಿ ಅವನ ಕೈಗಿಟ್ಟೆ, ಸರಿ ಒಳಗ್ ಬಾರೋ ಡೋರ್ ನಾಗ ಎದಕ್ ಸಾಯ್ತಿದ್ದಿ ಅಂದ. ಯಾಕೋ ಅವನ ಏಕವಚನ ನನ್ನ ಬಿಲ್ಡಪ್ಪಿಗೆ ಅಹಂಕಾರಕ್ಕೆ ಸರಿ ಅನ್ಸಿಲ್ಲ. ನಂಗಿಂತ ಸುಮಾರು 10 ವರ್ಷ ದೊಡ್ಡ ವ್ಯಕ್ತಿ ಇರ್ಬೋದು, ಯಾವನಿಗೆ ಬಾರೋ ಹೋಗೋ ಅಂತ್ಯ ಅಂತ ಮೇಲೆ ಹತ್ತಿ ಬಂದು ತಳ್ಳೇಬಿಟ್ಟೆ. ಸ್ವಲ್ಪ ಹಿಂದೆ ಸರಿದವ್ನೆ ನನ್ನೇ ಹೊಡ್ಯಾಕ್ ಬರ್ತೀ, ಅಂತ ಕೈ ಎತ್ತಲು ಹೋದ ಅಷ್ಟರಲ್ಲಿ ಎಲ್ಲಿತ್ತೋ ಆವೇಶ ಮುಷ್ಟಿ ಮಾಡಿ ಒಂದು ಏಟು ಮೂತಿಗೆ ಕೊಟ್ಟುಬಿಟ್ಟಿದ್ದೆ. ಯಪ್ಪೋ ನನ್ನ ಕೊಂದು ಬಿಡ್ತಾನೋ ಅಂತ ಕಿರುಚಿ ಬಸ್ಸು ನಿಲ್ಸಿಬಿಟ್ಟ. ನನಗೆ ದಿಕ್ಕೇ ತೋಚದಂತಾಯಿತು, ಭಯದಿಂದ ತಟಸ್ಥನಾಗಿ ನಿಂತುಬಿಟ್ಟೆ. ಮುಂದೆಯಿಂದ ಯಾರೋ ಬಂದಂಗಾಯಿತು. ಬಂದ ಬಂದವರೇ ನನ್ನ ಕಪಾಳಕ್ಕೆ ಛಿಟೀರ್ ಎಂದು ಬಿಟ್ಟಿದ್ದರು. ಒಂದು ಕ್ಷಣ ಸಾವಿನ ಮನೆಯಲ್ಲಿನಂತಹ ಮೌನ, ಕಿವಿಯಲ್ಲಿ ಕುಯ್ಯ್ಯ ಎಂಬ ತಂತಿಯ ನಾದ. ನಿಂತ ಜಾಗದಲ್ಲೇ ಕುಸಿದು ಕುಂತುಬಿಟ್ಟೆ.

ಅಷ್ಟರಲ್ಲೇ ಒಂದಷ್ಟು ಜನ ತಿರುಗಿಸ್ರೀ ಸ್ಟೇಷನ್ ಗೆ ಬಸ್ಸು ಅಂದ್ರು, ನನ್ನ ಹೊಡೆದಾತ, ಓಯ್ ಯಾವೂರೋ ಅಂದ ಸಾರ್ ಆನೇಕಲ್ಲು ಸಾರ್ ಅಂದೆ. ಏನ್ ಮಾಡ್ತಿದ್ಯ ಅಂದ, ಸಾರ್ ಇಂಜಿನಿಯರಿಂಗ್ ಓದ್ತಾ ಇದ್ದೀನಿ ಸಾರ್ ಅಂದೆ. ಏನೋ ನಿಂದು ಅವತಾರ? ರೌಡಿ ಏನೋ ನೀನು? ಏನಿದು ಕೈಗೆ ಅಷ್ಟೊಂದು ದಾರ, ಮಣಿ, ಕತ್ತಿಗೆ ಮಣಿ ಸರ, ತಾಮ್ರದ ಕಡಗ ಎಲ್ಲ ಅಂದ. ಸಾರ್ ಎಲ್ಲ ದೇವ್ರುದು ಸಾರ್ ಮಂತ್ರಾಲಯ, ತಿರುಪತಿ, ಧರ್ಮಸ್ಥಳ ಅಂದೆ. ಓದೋ ಹುಡುಗ ಇಂತಾ ಶೋಕಿಗಳೆಲ್ಲ ಮಾಡ್ತಿದ್ಯಲ್ಲ ನಾಚಿಕೆ ಆಗಲ್ವ ಅಂದ. ಸಾರಿ ಸಾರ್ ತಪ್ಪಾಯ್ತು ಅಂದೆ. ಅಷ್ಟರಲ್ಲೇ ಯಾರೋ ಸಾರ್ ಇಂತವ್ರನ್ನೆಲ್ಲ ಪೋಲೀಸ್ನೋರಿಗೆ ಹಿಡ್ಕೊಡ್ಬೇಕು ಸಾರ್, ಗವರ್ನಮೆಂಟ್ official ಮೇಲೆ ಕೈ ಮಾಡಿದ್ದಾನೆ ಅಂದ್ರು. ಆಗ ನನ್ನ ಹೊಡೆದ ವ್ಯಕ್ತಿ,ಅಲ್ರೀ ಆ ಹುಡುಗ ಫುಟ್ ಬೋರ್ಡ್ ಮೇಲೆ ನಿಂತಿದ್ದಾಗ ಮಾತಾಡಿಲ್ಲ, ಕಂಡಕ್ಟರ್ ಜೊತೆ ಸುಮ್ ಸುಮ್ನೆ ಜಗಳ ಆಡಿದಾಗ ಮಾತಾಡಿಲ್ಲ, ಈಗ ಬಂತೇನ್ರಿ ನಿಮ್ಮ ಧ್ವನಿ, ಹೋಗಿ ಕೆಲ್ಸ ನೋಡ್ಕೋಳ್ರಿ ಅಂತ ಬೈದ, ನಂತರ ಮುಂದಿನ ಸ್ಟಾಪಲ್ಲಿ ಇಳಿದ. ಸ್ಟಾಪಿನ ಬಳಿಯಲ್ಲೇ ಇದ್ದ ಪೋಲೀಸ್ ಸ್ಟೇಷನ್ ಕಡೆ ಹೋಗುತಿದ್ದಾಗ ಆತನ ಕಾಕಿ ಪ್ಯಾಂಟು ಮತ್ತು ಕನ್ನಡಕದಿಂದ ಗಮನಕ್ಕೆ ಬಂತು ಆತ ಸಹ ಪೋಲೀಸಣ್ಣನೇ ಅಂತ.
ಅವತ್ತು ನನಗೆ ಏಟು ಕೊಡದಿದ್ದರೆ, ಅಥವಾ ಸ್ಟೇಷನ್ನಿಗೆ ಒಯ್ದಿದ್ದರೆ, ನಾನಿಂದು ನಿಮ್ಮ ಮುಂದೆ ಬರೆಯಲಾಗುತ್ತಿರಲಿಲ್ಲ.

ಪವನ್ ಪಾರುಪತ್ತೇದಾರ

ಪವನ್'s ಡೈರೀಸ್ - 3

ಡಿಪ್ಲೋಮಾ ಸಮಯ. ಹುಡುಗೀರು ಮೊದಲನೇ ಬೆಂಚು ನಂತರದ ಎರಡು ಬೆಂಚು ಖಾಲಿ ಅಮೇಲೆ ಹುಡುಗ್ರು ಇದು ನಮ್ ಕ್ಲಾಸಿನ ಕೂತ್ಕೋಳೋ ಆರ್ಡರ್. ಕಾಲೇಜಿಗೆ ಸೇರಿ ಸುಮಾರು 6 ತಿಂಗಳಾಯ್ತು ಮೊದಲನೇ ಸೆಮಿಸ್ಟೆರ್ ಮುಗಿದಿತ್ತು. introduction ಕ್ಲಾಸ್ ಆದ್ಮೇಲೆ ಒಮ್ಮೆ ಸಹ ಅವ್ರ ಹೆಸರು ಕ್ಲಾಸಲ್ಲಿ ಅಟ್ಟೆಂಡನ್ಸ್ ಹಾಕೋವಾಗ ಗಂಡು ಮೇಷ್ಟ್ರ ಬಾಯಲ್ಲಿ ಬಿಟ್ಟು ಒಬ್ಬ ಹುಡುಗನ ಬಾಯಲ್ಲೂ ಕೇಳಿಲ್ಲ.ಅದೇ ನಾವ್ ನಾವೆ ಹುಡುಗ್ರು ಇದ್ದಾಗ ಮಾತ್ರ ಮಗ ಅವ್ಳುನ ಅವರಪ್ಪ ಕಾಲೇಜ್ ಹತ್ರ ಡ್ರಾಪ್ ಮಾಡೋದು ನೋಡಿದೆ. ಮಗಾ ಇವ್ಳು ಸ್ನೇಹಾ ಇದ್ದಾಳಲ್ಲ ಅವ್ಳಿಗೆ ಡವ್ ಇದ್ದಾನಂತೆ, ಇಂತ ಮಾತುಗಳೆಲ್ಲ ಆಡ್ತಾ ಇದ್ವಿ.
ನಂಗೂ ಇವೆಲ್ಲ ನೋಡಿ ನೋಡಿ ತಲೆ ಕೆಟ್ಟುಹೋಗಿತ್ತು. ಅದೇನೆ ಆಗ್ಲಿ ಇವತ್ತು ಆ ಹುಡುಗೀರ ಜೊತೆ ಮಾತಾಡೆ ಆಡ್ತೀನಿ ಮಗಾ ಕ್ಯಾಟು ಅಂತ ಪಕ್ಕದಲ್ಲಿ ಕೂತಿದ್ದ ಕ್ಯಾಟ್ ವೆಂಕಿ ತೊಡೆ ಮೇಲೆ ಛಿಟೀರ್ ಅಂತ ಬಿಟ್ಟಿದ್ದೆ. ಅದಕ್ಕವ್ನು ಮಗಾ ಮೀಟರ್ ಇದ್ರೆ ಮಾತಾಡೋ ನೋಡೋಣ ರಾಘವೇಂದ್ರ ಭವನ್ ಮಸಾಲೆ ದೋಸೆ ಚಿತ್ರಾನ್ನ ಕೊಡುಸ್ತೀನಿ ಅಂದಿದ್ದ. ದೋಸೆ ಚಿತ್ರಾನ್ನ ನನ್ನ ಸೀದ ಖಾಲಿ ಇದ್ದ ಹುಡುಗಿಯರ ಹಿಂದಿನ ಎರಡನೆ ಬೆಂಚಿಗೆ ಕರ್ಕೊಂಡೋಗಿ ಕೂಡಿಸಿತ್ತು.

ಸಿನ ಬೇರೆ ಹುಡುಗ್ರುಗೆಲ್ಲ ಗಲಿಬಿಲಿ. ಮೇಷ್ಟ್ರು ಬಂದು ನೋಡಿದವ್ರೆ ಆಶ್ಚರ್ಯದಿಂದ ಒಂದು ತುಂಟ ನಗು ಕೂಡ ಕೊಟ್ರು. ಕ್ಲಾಸ್ ಪಾಡಿಗೆ ಕ್ಲಾಸ್ ನಡೀತಿತ್ತು ನನ್ನ ಮಾತಾಡ್ಸೋ ಸ್ಕೆಚ್ ನಾನು ಮಾಡ್ತಾ ಇದ್ದೆ. ನಾನೊಬ್ಬನೆ ಎರಡನೆ ಬೆಂಚು ಮುಂದೆ ಐದು ಹುಡುಗೀರು ಅವ್ರಿಗೂ ಒಂಥರ ಸಡಗರ ಒಂಥರ ಭಯ, ಈ ನನ್ಮಗ ಏನಕ್ಕೆ ಹಿಂದೆ ಬಂದು ಕೂತ ಅಂತ. ಕ್ಲಾಸ್ ನಡೀತಾ ಇರೋವಾಗ್ಲೆ ಎರಡು ಸಾರಿ ಸ್ಕೇಲನ್ನು ಮುಂದೆ ಬೆಂಚಿನ ಬಳಿ ಬೀಳಿಸಿದೆ. ಕೊನೆಯಲ್ಲಿ ಕೂತಿದ್ದ ರಶ್ಮಿ ಗಮನಾನೆ ಕೊಡ್ಲಿಲ್ಲ, ಅಲಾ ಇವ್ಳಾ ಏನ್ ಮಾಡೋದು ಅಂದುಕೊಳ್ಳೋ ಅಷ್ಟ್ರಲ್ಲೆ, ಅವಳ ಪಕ್ಕ ಕೂತಿದ್ದ ದಿವ್ಯ ಹೇ ರಶ್ಮಿ ನಿನ್ ಪಕ್ಕ ಸ್ಕೇಲ್ ಬಿದ್ದಿದೆ ಎತ್ಕೊಡೆ ಅಂದ್ಲು, ಅವ್ಳು ಅದನ್ನ ನೋಡಿ ಬೇಕಾದ್ರೆ ಅವ್ನೆ ಕೇಳ್ತಾನೆ ಬಿಡೆ ಅಂದುಬಿಟ್ಲು. ಸಿಕ್ಕಿದ್ದೇ ಛಾನ್ಸು ಅಂತ ರಶ್ಮಿ ಅವರೆ ಸ್ಕೇಲ್ ತೆಗೆದು ಕೊಡ್ತೀರ ಅಂದೆ ಮರ್ಯಾದೆ ಇಂದ, ಸ್ಕೇಲ್ ತೆಗೆದು ಕೈಲಿಟ್ಟು ಇಂಥಾ ಮರ್ಯಾದೆ ಎಲ್ಲ ಬೇಡ್ವೋ ರಶ್ಮಿ ಅಂದ್ರೆ ಸಾಕು ಅಂದ್ಲು. ಸಿಕ್ಕಿದ್ದೆ ಛಾನ್ಸು ಮತ್ತೆ ಸ್ಕೇಲ್ ಬಿಸಾಕ್ದೆ, ಹೇ ರಶ್ಮಿ ಸ್ಕೇಲ್ ತೆಕ್ಕೊಡೆ ಅಂದೆ. ಮತ್ತೆ ತೆಕ್ಕೊಟ್ಲು ಹಾಗೆ ಶುರುವಾಗಿದ್ದು ಅವತ್ತಿನ ಕೊನೆ ಅಷ್ಟರಲ್ಲಿ ಫೋನ್ ನಂಬರ್ exchange ಕೂಡ ಆಗೋಯ್ತು, ಮೆಸೇಜುಗಳು ಶುರು ಆಗೋಯ್ತು.

ಆದ್ರೆ ಕಾಲೇಜಲ್ಲಿ ಎಲ್ಲ ಓಕೆ ಆದ್ರೆ ಮನೆ ರೀಚ್ ಆದ್ಮೇಲು ಕಾಲ್ ಅಂಡ್ ಮೆಸೇಜುಗಳು, ಅಲ್ಲೇ ಆಗಿದ್ದು ಎಡವಟ್ಟು.ಮೊದಲೇ ಆಗೆಲ್ಲ ನಮ್ಮ network providers ಛಾಲೆಂಜ್ ಮೇಲೆ ಬಿಟ್ಟಿ ಮೆಸೇಜುಗಳು ಕೊಡ್ತಾ ಇದ್ರು ಎಲ್ಲ ಹುಡುಗ ಹುಡುಗೀರ್ನ ಹಾಳು ಮಾಡಕ್ಕೆ, ಅದೇ ಹಳ್ಳಕ್ಕೆ ನಾನು ಬಿದ್ದಿದ್ದೆ, ದಿನಾ ಮೆಸೇಜು ಮೆಸೇಜು ಮೆಸೇಜು. ಕಾಲ್ ಮಾಡೋದು ಇಲ್ವೇ ಇಲ್ಲ ಬರೀ ಮೆಸೇಜು, ಕಾಲ್ ಮಾಡೆ ಅಂದ್ರೆ ಏನೋ ಒಂದು ನೆಪ, ಮೆಸೇಜಲ್ಲೇ ಮಾತಾಡು ಅಂತ. ಪ್ರಾಬ್ಲಮ್ ಏನಂದ್ರೆ ಮೆಸೇಜಲ್ಲಿ ಕಾಲೇಜ್ ಬಗ್ಗೆ ಮಾತೆ ಇಲ್ಲ, ನೋಟ್ಸ್ ರೆಕಾರ್ಡ್ ಅಂದ್ರೆ ಅವೆಲ್ಲ ಏನಕ್ಕೆ ಈಗ ಅಂತ ಬೇರೆ. ಕಾಲೇಜಲ್ಲಿ ಮಾತ್ರ ಸಿಕ್ಕಾಗ ನೋಟ್ಸು ರೆಕಾರ್ಡ್ ಇವೆಲ್ಲ. ಒಂದು ಘಂಟೆ ಅಕಸ್ಮಾತ್ ಒಂದೂ ಮೆಸೇಜ್ ಮಾಡದೆ ಇದ್ರೆ ಘನಘೋರ ಅಪರಾಧ ಮತ್ತೆ ಜಗಳ. ಎಲ್ಲವೂ ಅಯೋಮಯವಾಗಿರಬೇಕಾದ್ರೆನೆ ಒಂದು ಸಲಿ ರಶ್ಮಿನ ಕೇಳಿಬಿಟ್ಟೆ, ಯಾಕೆ ಮನೇಲಿರಬೇಕಾದ್ರೆ ಕಾಲ್ ಮಾಡಿದ್ರೆ ರಿಸೀವೆ ಮಾಡಲ್ಲ ಮಾತಾಡಲ್ಲ ಅಂತ, ಒಂದು ಕ್ಷಣ ಶಾಕ್ ಆದಂತಾಗಿ ಏನು ಕಾಲಾ ಅಂದ್ಲು ! ಹೌದು ಮೆಸೇಜ್ ಮಾತ್ರ ಮಾಡ್ತಾ ಇರ್ತ್ಯಾ ಕಾಲ್ ಮಾಡಿದ್ರೆ ರಿಸೀವ್ ಮಾಡಲ್ಲ ಅಂದೆ, ತಕ್ಷಣ ಯಾವ ನಂಬರ್ ಗೆ ಅಂದ್ಲು ಅದಕ್ಕೆ ನಾನು ಅದೆ ಆವತ್ತು ನೀನು ಕೊಟ್ಟಿದ್ಯಲ್ಲ ಆ ನಂಬರ್ ಗೆ ಅಂದೆ.

ಒಂದು ಕ್ಷಣ ಏನೋ ಒಂದು ರೀತಿಯ ಅವಘಡವಾದಂತೆ ಸುಮ್ಮನಿದ್ದು, ಅದು ನಮಕ್ಕನ ನಂಬರ್, ಅವತ್ತು ಒಂದು ದಿನ ಕಾಲೇಜಿಗೆ ಮೊಬೈಲ್ ತಂದಿದ್ದೆ so ಕೊಟ್ಟೆ, ಆಮೇಲೆ ನಮಕ್ಕಂಗೂ ಹೇಳಿದ್ದೆ ನನ್ friend ಮೆಸೇಜ್ ಮಾಡಿದ್ರೆ ಕಾಲ್ ಮಾಡಿದ್ರೆ ಹೇಳು ಅಂತ, ಆದ್ರೆ ಅವ್ಳು ನಂಗೆ ಈ ವಿಷಯದ ಬಗ್ಗೆ ಯಾವತ್ತು ಒಂದು ವಿಷಯಾನು ಹೇಳಿಲ್ಲ ಅಂದ್ಲು.
ನನಗೇ ಅರಿವಿಲ್ಲದಂತೆ ನಾನು ಯಾವುದೋ ವ್ಯೂಹದಲ್ಲಿ ಬಂಧಿಯಾದಂತೆ ಅನಿಸಿತು, ಅಂದು ಕಾಲೇಜು ಮುಗಿಸಿ ಹೊರಟ ರಶ್ಮಿ ಅವರ ಅಕ್ಕನ ಬಳಿ ಈ ವಿಷಯ ಎಲ್ಲ ವಿಚಾರಿಸಿದ್ದಾಳೆ, ಅವರಕ್ಕ ನನ್ನ ಮೆಸೇಜುಗಳನ್ನು ಬಿಟ್ಟು ಇರಲಾಗದ ಪರಿಸ್ಥಿತಿ ತಲುಪಿ ಬಿಟ್ಟಿದ್ದಾಳೆ, ಇದರಿಂದ ರಶ್ಮಿ ಮನನೊಂದು ನನ್ನೊಡನೆ ಮಾತೇ ಬಿಟ್ಟಿದ್ದಳು, ಅವಳ ಆ ಪರಿಸ್ಥಿತಿಯನ್ನು ನನಗೆ ಮತ್ತೊಬ್ಬ ಗೆಳತಿ ವಿವರಿಸಿದ್ದಳು. ದಾರಿ ಕಾಣದೆ ನನ್ನ ಸಿಮ್ ಕಾರ್ಡನ್ನು deactivate ಮಾಡಿಸಿಬಿಟ್ಟೆ, ಆಮೇಲೆ ಸ್ವಲ್ಪ ದಿನಗಳ ನಂತರ ರಶ್ಮಿ ನಾರ್ಮಲ್ ಆದ್ಲು, ಅವರಕ್ಕ ಏನಾದ್ಲೋ ಗೊತ್ತಿಲ್ಲ. ಮುಂದಿನ ನನ್ನ ಡಿಪ್ಲೋಮಾ ಬದುಕಿನಲ್ಲಿ ಎಂದೂ ರಶ್ಮಿಯ ಅಕ್ಕನ ಕುರುತು ಮಾತನಾಡಲಿಲ್ಲ.

ಇತ್ತೀಚೆಗೆ ಅವಳು ಸಪ್ತಪದಿ ತುಳಿದಳಂತೆ ರಶ್ಮಿ ಕರೆದಿದ್ದಳು, ನಾ ಹೋಗಿಲ್ಲ....

ಮಾತುಗಳು ಮುಗಿದವೆ??

ನೆನ್ನೆ ಮೊನ್ನೆಯವರೆಗೂ ಹೀಗಿರಲಿಲ್ಲ
ನೀ ಕೊಟ್ಟ ಮೊಬೈಲ್ ಫೋನು
ಕಿವಿಗೆ ಕಿಸ್ಸು ಕೊಡುವುದ ನಿಲ್ಲಿಸಿರಲಿಲ್ಲ
ಹುಚ್ಚನಂತೆ ಕಿವಿಗೆ ಹೆಡ್ಸೆಟ್ಟು ತಗುಲಿಸಿಕೊಂಡು
ರೋಡಲಿ ಇದ್ದಕ್ಕಿದ್ದಂತೆ ನಗುವ ಘೀಳು
ಸ್ವಲ್ಪವೂ ಕಮ್ಮಿಯಾಗಿರಲಿಲ್ಲ
ಇಂದ್ಯಾಕೋ ಅನಿಸುತಿದೆ
ನಮ್ಮೊಳಗಿನ ಮಾತುಗಳು ಮುಗಿದವೆ?

ಬೀಪ್ ನಾದ ಮೊಬೈಲಿನಿಂದ ಹೊಮ್ಮಿದಾಗೆಲ್ಲ
ಎದೆಬಡಿತಕ್ಕೂ ಕ್ಷಣ ನಿಂತು ಓದುವ ಕಾತುರ
ನಿನ್ನ ಸಂದೇಶ ಬಂದಿರಬಹುದೆಂದು
ನಿನ್ನ ಸಂದೇಶವಲ್ಲವೆಂದೊಡನೆ
ನಿನಗಾಗಿ ಕಾಯುವ ಉಸಿರ ಉಳಿಸುವ ಕೆಲಸ
ಮೊದಲು ಹೀಗಿರಲಿಲ್ಲ
ಉಚಿತ ಸಂದೇಶದ ಮಿತಿ ಅರಿವು ಇರುತಿರಲಿಲ್ಲ
ಇಂದ್ಯಾಕೋ ಅನಿಸುತಿದೆ
ನಮ್ಮೊಳಗಿನ ಮಾತುಗಳು ಮುಗಿದವೆ?

ಇಂದು ಮಾತಿಗಿಳಿದರೆ ಮೌನದ್ದೇ ಪಾರುಪತ್ಯ
ಇನ್ನೇನು ಸಮಾಚಾರ ಎಂಬ ಒಕ್ಕಣೆ ಬೇರೆ
ಸುಮ್ಮನಿದ್ದರೂ ಇರಲಾಗದ ಮನಸ್ಥಿತಿ
ಕರೆಯಲಿದ್ದರೂ ಮಾತು ಇಲ್ಲದ ಪರಿಸ್ಥಿತಿ
ಮೊದಲು ಹೀಗಿರಲಿಲ್ಲ ಮಾತಿನ ಮಹಲಿಗೆ
ಮೆಟ್ಟಿಲೇ ಹತ್ತದೆ ಮಹಡಿ ಮೇಲಿರುತ್ತಿದ್ದೆವು
ಇಂದ್ಯಾಕೋ ಅನಿಸುತಿದೆ
ನಮ್ಮೊಳಗಿನ ಮಾತುಗಳು ಮುಗಿದವೆ?

ಮಾತು ಮುಗಿದರೇನಂತೆ
ನಾಲಿಗೆಗೆ ಸ್ವಲ್ಪ ಬ್ರೇಕು ಸಿಕ್ಕಂತಾಯ್ತು
ಮನಸಿಗೆ ಮಾತೇಕೆ ಬೇಕು ಪ್ರೀತಿ ಇರುವಾಗ
ಮೌನದಲೇ ಮತ್ತಷ್ಟು ಮಗುದಷ್ಟು ಪ್ರೀತಿಸುವ
ಮಾತಿಗಿಂತಲೂ ಮೌನಕ್ಕೆ ಬೆಲೆ ಹೆಚ್ಚು
ನಮ್ಮೊಳಗಿನ ಮಾತುಗಳು ಮುಗಿದಿರಬಹುದು
ಮೌನದಲೇ ನಿನಗೊಂದು ಮಾತ ಹೇಳುವೆ ಕೇಳು
ಈ ಪ್ರೀತಿಯೆಂದಿಗೂ ಮುಗಿಯದೇ ಗೆಳೆತಿ
ಈ ಪ್ರೀತಿಯೆಂದಿಗೂ ಮುಗಿಯದೇ ಗೆಳೆತಿ

ಪವನ್ ಪಾರುಪತ್ತೇದಾರ

ರವಿ ಅಣ್ಣನ ನೆನಪಿಗಾಗಿ

ಹೇಳದೇ ಅಸ್ತಮಿಸಿದ ಮೂರ್ನಾಡಿನ ಸೂರ್ಯ

ಸುಸ್ತಾಗಿರಲಿಲ್ಲ ಸೂರ್ಯನಿಗೆ
ಬಡತನದ ಬಾಧೆಗೆ ಮುಲಾಮು ಹುಡುಕುತ
ತನ್ನವರ ಜೀವನಕೆ ಬೆಳಕನ್ನು ತರಲು
ಕೂತಿದ್ದ ಅಷ್ಟೆ ದೂರದ ಕ್ಯಾಮೊರಾನಿನಲ್ಲಿ
ಇಂದು ಅಸ್ತಮಿಸಿಬಿಟ್ಟಿದ್ದಾನೆ
ಯಾರಿಗೂ ಹೇಳದೆ ನಿರ್ಲಿಪ್ತನಾಗಿ

ಸುಸ್ತಾಗಿರಲಿಲ್ಲ ಸೂರ್ಯನಿಗೆ
ಬೆಳಕಾಗಿದ್ದ ಆ ಸೂರ್ಯ ಹಲವಾರು ಕವಿಗಳಿಗೆ
ತನ್ನ ಪ್ರಖರ ಸಾಹಿತ್ಯದ ಶಾಖದ ಪಾಲನ್ನು ನೀಡಿ
ಕನ್ನಡ ಸಾಹಿತ್ಯಕ್ಕೆ ಮತ್ತಷ್ಟು ಮೆರುಗು ನೀಡಿ
ಸರಿ ತಪ್ಪುಗಳನು ತಿದ್ದುವ ಗುರುವಾಗಿದ್ದ
ಇಂದು ಅಸ್ತಮಿಸಿಬಿಟ್ಟಿದ್ದಾನೆ
ಯಾರಿಗೂ ಹೇಳದೆ ನಿರ್ಲಿಪ್ತನಾಗಿ

ಸುಸ್ತಾಗಿರಲಿಲ್ಲ ಸೂರ್ಯನಿಗೆ
ದೂರ ಇದ್ದಕ್ಕೆ ಅವಮಾನ ಬಹಳಷ್ಟು ಸಹಿಸಿದ್ದ
ಒರಟು ನಾಲಿಗೆಗಳಿಗೆ ಆಹಾರವಾಗಿದ್ದ
ಯಾರಿಗೂ ಹೇಳದೆ ಕೊಡುಗೆ ಕೊಡುತಿದ್ದ
ಬರಹಗಾರರ ಬೆಳೆಸುತ ಸಾಹಿತ್ಯ ಸೇವೆಗೆ
ಇಂದು ಅಸ್ತಮಿಸಿಬಿಟ್ಟಿದ್ದಾನೆ
ಯಾರಿಗೂ ಹೇಳದೆ ನಿರ್ಲಿಪ್ತನಾಗಿ

ಪವನ್ ಪಾರುಪತ್ತೇದಾರ..

ಒಂದು ಕವಿತೆ

ಕಾಗುಣಿತ ಕುಣಿಸುತ ಪದಗಳನು ಪೋಣಿಸಿ
ಕವಿತೆಯ ಹಾರವನು ಸೃಷ್ಠಿಸಿದರೆ ಸಾಕೆ
ಓದುಗನ ಮನಸಿಗೆ ತೊಡಿಸಬೇಕಲ್ಲವೆ
ಪಾಯಸವ ಮಾಡಿ ಚಮಚದಲಿ ಹಿಡಿದು
ದೂರದಿಂದಲೆ ಅದನ ಮೂಸಿ ಎಂದರೆ ಸಾಕೆ
ತಿನ್ನುಗನ ಎಲೆಯಲ್ಲಿ ಧಾರಾಳವಾಗ್ಬಡಿಸಿ
ಚಪ್ಪರಿಸೋ ಅಂದವ ನೋಡಬೇಕಲ್ಲವೇ

ಇಷ್ಟಕಷ್ಟಗಳ ಇಟ್ಟಿಗೆಯ ಕೂಡಿಸಿ
ಬಿನ್ನ ಭಾವಗಳ ಮರಳನ್ನು ಮಿಶ್ರಿಸಿ
ಕಾವ್ಯದಲೆ ಮನೆಯನ್ನು ಕಟ್ಟಿದರೆ ಸಾಕೆ
ಪರರನ್ನು ಕರೆದು ಓರೆಕೋರೆಗಳ ತಿಳಿದು
ಮೆಚ್ಚುಗೆಯ ಮಾತುಗಳ ಮುದವನ್ನು ಪಡೆದು
ಮನೆಯ ಬಗ್ಗೆ ತಾ ಗರ್ವ ಪಡಬೇಕಲ್ಲವೇ

ಒಂದೊಂದು ಚಕ್ರಕೂ ಕಲ್ಪನೆಯ ಬೆಸೆದು
ಮುಗಿದೋದ ಕಾಲವನು ಮತ್ತೆ ಮರುಸೆಳೆದು
ಒಳಗೊಳಗೆ ಹುದುಗಿಟ್ಟು ಕೂರುವುದು ಸಾಕೆ
ಓದುಗರ ಮುಂದೆ ಧೈರ್ಯದಲಿ ಇಟ್ಟು
ಪ್ರೀತಿಯ ತೈಲವನು ಸಾಲದಲಿ ಪಡೆದು
ಬರಹದ ಬಂಡಿಯಲಿ ಚಲಿಸಬೇಕಲ್ಲವೇ
ಬರಹದ ಬಂಡಿಯಲಿ ಚಲಿಸಬೇಕಲ್ಲವೇ

ಪವನ್ ಪಾರುಪತ್ತೇದಾರ

ಪವನನ ಕವನ

ಚಿಲ್ಲರೆ

ಕೊಟ್ಟುಬಿಡು ಗೆಳತಿ
ನಿನ್ನ ಪ್ರೀತಿಯ ಬಸ್ಸಿನಲಿ
ಮನಸಿನ ಟಿಕೇಟು ಮೇಲೆ
ಗೀಚಿರುವ ಸಂತೋಷವೆಂಬ
ಚಿಲ್ಲರೆಯನು
ಕೊಟ್ಟುಬಿಡು

ಪ್ರೀತಿ ಕಾನೂನು
...
ಪ್ರೀತಿ ರಸ್ತೆಯ ಕಾನೂನು
ಅಪಘಾತವಾಗುವ ಮೊದಲು ಹುಚ್ಚ
ಆದಮೇಲೆ ಮುಗ್ಧ
ಏನು ಆಗದಿದ್ದರೆ ಬುದ್ಧಿವಂತ
ರಸ್ತೆ ಬದಲಿಸಿದರೆ ಅತೀ ಬುದ್ಧಿವಂತ

ಒಡವೆ

ಮೈ ಮೇಲೆ ನಲಿಯುವುದಕಿಂತ
ಬೀರುವಲಿ ಮಲಗುವುದೇ ಹೆಚ್ಚು

ಪವನನ ಕವನ ;)