ನೂರಿದ್ದ ಜೇಬು ಸೂರಿದ್ದ ಮನೆ
ಸಾಕಾಗಿತ್ತು ಆ ಬಡಪಾಯಿಗೆ
ಆಸೆ ಎಂಬ ಮರೀಚಿಕೆಯ ಹಾದಿ
ಹೆದ್ದಾರಿಯಾಗಿ ಕಂಡಿತ್ತು
ಕಲ್ಲುಮುಳ್ಳುಗಳು ಹೂಗಳಂತೆ ಕಂಡವು
ಶತ್ರುಗಳೆಲ್ಲ ಮಿತ್ರರಂತೆ ಕಂಡರು
ಸಾವಿರದ ಆಸೆ ಬೆನ್ನು ಹತ್ತಿತ್ತು
ಸೂರು ತಾರಸಿಯಾಗುವ ಕನಸು ಹತ್ತಿತ್ತು
ನೂರು ಬರಿದಾಗಬಹುದೆಂಬ ಚಿಂತೆ ಇರಲಿಲ್ಲ
ಸೂರು ಬಿದ್ದರೆ ನೆರಳಿಲ್ಲವೆಂಬ ಅರಿವು ಇರಲಿಲ್ಲ
ದುರಾಸೆ ಎಂಬ ಭೂತ
ಮೆದುಳ ಮೇಲೆ ಸವಾರಿ ಮಾಡಿತ್ತು
ಕಂಡ ಕಂಡವರ ಬಳಿ ಕೈಚಾಚಬೇಕಾಯ್ತು
ಕರುಣೆಯ ಕನ್ನಡಿ ಒಡೆಯಬೇಕಾಯ್ತು
ನಾಚಿಕೆ ಮರ್ಯಾದೆ ಮರೆಯಬೇಕಾಯ್ತು
ತನ್ನವರ ದೂರಕ್ಕೆ ತಳ್ಳಬೇಕಾಯ್ತು
ಕಡೆಗೊಮ್ಮೆ
ಸಾವಿರವೂ ತಾರಸಿಯೂ ಸಿದ್ದವಾಗಿತ್ತು
ಸಂಬಂಧದ ಸೇತುವೆ ಒಡೆದು ಬಿಟ್ಟಿತ್ತು
ದುರಾಸೆಯು ದುರಂತವಾಗಿಬಿಟ್ಟಿತ್ತು....
ಸಂಬಂಧಗಳು ಹಣ ಕಾಸು ಮನೆ ಇವೆಲ್ಲಕ್ಕಿಂಥ ಮಿಗಿಲಾದದ್ದು, ಹಣ ಕಾಸು, ಬಂಗಲೆಯಿಂದಲೇ ಸಂಬಂಧ ಬೆಸೆದಿದ್ದರೆ ಅದು ಎಂದಿಗೂ ಶಾಶ್ವತವಲ್ಲ......
ಪವನ್ ಪಾರುಪತ್ತೇದಾರ :-
No comments:
Post a Comment