Monday, October 15, 2012

ಹೇಗಿರಲಿ ಗೆಳತಿ ನಿನ್ನಗಲಿ

ಹೇಗಿರಲಿ ಗೆಳತಿ ನಿನ್ನಗಲಿ
ನಿನ್ನ ನಲ್ಮೆಯ ಮಾತುಗಳಿಲ್ಲದೆ
ನಿನ್ನ ಪ್ರೀತಿಯ ಬೈಗುಳಗಳಿಲ್ಲದೆ
ನಿನ್ಮುಂದೆ ದಡ್ಡತನ ತೋರಿಸಿಕೊಳ್ಳದೆ
ನಿನ್ನೊಡನೆ ನನ್ನ ಮನ ಬೆಸೆದುಕೊಳ್ಳದೆ
ಹೇಗಿರಲಿ ಗೆಳತಿ ನಿನ್ನಗಲಿ

ಅಂದು ನಾ ಕೇಳಿದ್ದೆ
ಏನು ಬೇಕೆಂದು ನಿನಗೆ
ಭೂರಮೆಯ ಕಂಗೊಳಿಸಿ ಹಾಲ್ಚೆಲ್ಲಿದಂತ
ಹುಣ್ಣಿಮೆ ಚಂದ್ರನೇ ಸಾಕಾ
ತಂದಿಡಲು ಸಿದ್ಧವಿದ್ದೆ ನಾ ನಿನ್ನ ಮನೆಮುಂದೆ
ಅದಕೆ ನೀ ಮುಗುಳ್ನಗುತ
ನನ್ನ ಗಲ್ಲವನು ಹಿಡಿದು
ಅಮಾವಾಸ್ಯೆಯಂದೂ ನಗುವ ಈ ಚಂದಿರನೆ ಸಾಕೆಂದಾಗ
ಕಳೆದುಹೋಗಿದ್ದ ನನ್ನ ಹುಡುಕಲು
ಅಮವಾಸ್ಯೆಯನ್ನೆ ಮರೆತೆಯಲ್ಲ ಗೆಳತಿ
ಈಗ ನೀ ಹೀಗೆ ಒಮ್ಮೆಲೆ ಮರೆಯಾದರೆ
ನನ್ನ ಬದುಕೂ ಸಹ ಅಮವಾಸ್ಯೆ ಆದೀತು
ಹೇಗಿರಲಿ ಗೆಳತಿ ನಿನ್ನಗಲಿ

ಒಮ್ಮೆ ಬೈದೊಡನೆ ನಿನ್ನ ಮುಖ ಕಾದ ಕೆಂಡ
ಮತ್ತೊಮ್ಮೆ ಹೊಗಳಿದರೆ ನಾಚುವ ಗುಲಾಬಿ
ಹೀಯಾಳಿಸಿದಾಗೆಲ್ಲ ಮೂತಿ ತಿರುಗಿಸುವಾಟ
ಹೀಗೆಳೆದು ಬಿಟ್ಟರೆ ಬಿಡುತಿದ್ದೆ ಊಟ
ಬಂದುಬಿಡು ಗೆಳತಿ ಅಗಲಿರಲಾರೆ ನಿನ್ನ
ಕಾದ ಕೆಂಡದ ಮೇಲೆ ಅಡುಗೆ ಮಾಡಿ ಬಡಿಸುವೆ
ನಾಚಿದ ಗುಲಾಬಿಯನ್ನು ನಿನ್ನ ಮುಡಿಯಲ್ಲಿ ಮುಡಿಸುವೆ
ತಿರುಗಿತಿಹ ಮೂತಿಯನು ತಡೆಹಿಡಿದು ನಿಲ್ಲಿಸುವೆ
ಪ್ರೀತಿಯ ಪದಗಳಲಿ ನಿನ್ನ ಮನ ತಣಿಸುವೆ
ಹೇಗಿರಲಿ ಗೆಳತಿ ನಿನ್ನಗಲಿ

ಪವನ್ ಪಾರುಪತ್ತೇದಾರ

photo courtecy : weirdlyrandom.tumblr.com

************************************************

1 comment:

  1. ಮಧುರವಾದ ಭಾವಗಳನ್ನು ಹದವಾಗಿ ಹರಿಯಬಿಟ್ಟಿದ್ದೀರಿ ಪವನಣ್ಣ. ಪ್ರೇಮಿಯ ಮನದ ತಳದಲ್ಲಿ ನೆಲೆನಿಂತ ಭಾವಗಳನ್ನು ನೆನಪುಗಳಿಂದ ಕಲಕಿ ಹೋಗುವ ನಲ್ಲೆಯನ್ನು ಮತ್ತೆ ಅಹ್ವಾನಿಸಿದ ನಿಮ್ಮ ಪರಿ ಮೆಚ್ಚುವಂತದ್ದು. :) ತಂಗಾಳಿಯಲ್ಲಿ ಬಂದು ನಿಮ್ಮನ್ನಪ್ಪಲಿ ನಿಮ್ಮ ನಲ್ಲ. ಮತ್ತೆ ಬಂದಾಗ ಬಿಗಿಯಾಗಿ ಬಂಧಿಸಿಕೊಳ್ಳಿ, ಚಳಿಯಲ್ಲೂ ಬೆಚ್ಚಗಿರುತ್ತೀರಿ. ;)

    ReplyDelete