Friday, February 1, 2013

ಪವನ್'s ಡೈರೀಸ್ - ೨

ಏನೋ ಕಡೆದು ಕಟ್ಟಿಹಾಕಿಬಿಡುತ್ತೇನೆ ಎಂಬ ದುಸ್ಸಾಹಸಕ್ಕೆ ಪ್ರಯತ್ನ ಪಟ್ಟು ಸೋತು ಹೈರಾಣಾಗಿದ್ದೆ. ಬದುಕು ನನ್ನ ಜೀವನದ ನಾಗಾಲೋಟಕ್ಕೆ ಬ್ರೇಕ್ ಹಾಕಿತ್ತು, ೧೮ ರ ವಯಸ್ಸಿನ ತುಮುಲಗಳು ಗೊಂದಲಗಳು ನನ್ನ ವಿದ್ಯೆಯನ್ನು ಏರುಪೇರು ಮಾಡಿದ್ದವು. ಊರಿನಲ್ಲಿ ಹಸು ಮೇಸ್ಕೊಂಡು ಸಗಣಿ ಎತ್ಕೊಂಡು, ವಾರಕ್ಕೆರಡು ಬಾರಿ ಅವುಗಳನ್ನು ತೊಳೆದು, ರವಿ ಮುಳುಗಿದೊಡನೆ ಪುಸ್ತಕ ಹಿಡಿದು ಕೂರುವುದು ಬಿಟ್ಟು, ಬೆಂಗಳೂರಿನ ಬೆಚ್ಚಗಿನ ಗಾಳಿಯೊಳು ಜಯನಗರ ೪ನೇ ಬ್ಲಾಕಿನ ಪಾನಿಪುರಿ, ವಡಾಪಾವ್ ಮಲ್ಲಿಗೆ ಇಡ್ಲಿ ಅಂಗಡಿಗಳಲ್ಲಿ, ಪುಟ್ಟಣ್ಣ, ನಂದ, ರೇಣುಕಾಪ್ರಸನ್ನ ಥಿಯೇಟರ್ಗಳಲ್ಲಿ ನನ್ನ ಪಿ.ಯು.ಸಿ ದಿನಗಳನ್ನು ಕಳೆದುಬಿಟ್ಟಿದ್ದೆ. ಫಲಿತಾಂಶ ಬಂದು ನಾನು ನಾಲ್ಕು ವಿಷಯಗಳಲ್ಲಿ ಡುಮ್ಕಿ ಹೊಡೆದಿದ್ದೇನೆ ಎಂದು ತಿಳಿದಾಗಲೇ ನನ್ನ ತಪ್ಪಿನ ಅರಿವಾಗಿದ್ದು.
ಮನೆಗೆ ಸೇರಿ ಅಪ್ಪನ ಮುಂದೆ ತಲೆ ತಗ್ಗಿಸಿ ನಾಲ್ಕು ಸಬ್ಜೆಕ್ಟ್ ಫೇಲ್ ಆಗಿದ್ದೀನಿ ಅಪ್ಪ ಅಂದಾಗ, ಸ್ವಲ್ಪವೂ ಬಯ್ಯದೆ, ಸಹನೆಯಿಂದ ಅಯ್ಯೋ ಹೌದಾ? ಪರವಾಗಿಲ್ಲ ಬಿಡು ಮುಂದಿನ ಸಲಿ ಕಟ್ಟಿ ಪಾಸಾಗು ಅಂದಾಗ ನನ್ನ ಮನದಾಳದೊಳಗೆ ಯಾರೋ ಗಟ್ಟಿಯಾಗಿ ಗಿಲ್ಲಿದಂತಾಯಿತು. ಅಂದು ಅಪ್ಪ ಬೈದು ಬಿಟ್ಟಿದ್ರೆ ಪರವಾಗಿರಲಿಲ್ಲ, ಪರವಾಗಿಲ್ಲ ಎಂದರಲ್ಲ ಅದು ನನ್ನ ಮನಸಿನ ಮೇಲೆ ಗಾಢವಾದ ಪ್ರಭಾವ ಬೀರಿಬಿಟ್ಟಿತ್ತು.

ಮತ್ತೆ ಪರೀಕ್ಷೆ ಕಟ್ಟಿ ಓದಲು ಶುರು ಮಾಡಿದ್ದೆ, ನನ್ನ ಹಾಗೆ ಒಂದು ದೊಡ್ಡ ಪಡೆಯೇ ಫೇಲ್ ಆಗಿತ್ತು, ಅವರೆಲ್ಲ ನಮ್ಮೂರಿಂದ ಬೆಂಗಳೂರಿಗೆ ಬೇರೆ ಬೇರೆ ಕಾಲೇಜುಗಳಲ್ಲಿ ಓದುತಿದ್ದವರು. ಬಸ್ಸಿನಲ್ಲಿ ಒಟ್ಟಿಗೆ ಪ್ರಯಾಣ ಮಾಡುತ್ತಾ ಮಾಡುತ್ತಾ ಗೆಳೆತನ ಗಟ್ಟಿಯಾಗಿತ್ತು. ಚಂದನ್, ಮುದ್ದು, ಬಿರ್ಯಾನಿ, ಕೈವಾರ್, ದೀದಿ etc etc.. ಪೂರ್ತಿ ಕ್ರಿಕೆಟ್ ಟೀಮೇ ರೆಡಿಯಾಗಿತ್ತು. ಮತ್ತೆ ಎಲ್ಲರೂ ಎಕ್ಸಾಮ್ ಕಟ್ಟಿದ್ದೆವು. ಇದ್ರಲ್ಲಿ ಕೈವಾರ್ ಡಿಪ್ಲೋಮಾಗೆ ಸೇರಿಯೂ ಬಿಟ್ಟಿದ್ದ. ಫೇಲಾದವರೆಲ್ಲ ಒಟ್ಟಿಗೆ ಕೂತು ಓದಲು ಸಿದ್ಧರಾದೆವು.
ಸುಮಾರು ೮ ಜನ ಒಟ್ಟಿಗೆ ಕೂತು ಓದುವ ಸ್ಥಳ? ಕ್ರಿಕೆಟ್ ಆಡ್ತಾ ನಿರ್ಧಾರ ಮಾಡಿದೆವು, ಬಿರ್ಯಾನಿ ಮನೇನೆ ಬೆಸ್ಟು, ಮನೆಯಿಂದ ಆಚೆ ರೂಂ ಇದೆ, ಯಾರು ಡಿಸ್ಟರ್ಬ್ ಮಾಡಲ್ಲ, ರಾತ್ರಿ ಬಿರ್ಯಾನಿ ಅವರ ಅಮ್ಮ ನಮಗೆ ಅಂತ ಟೀ ಮಾಡಿಕೊಡ್ತಾರೆ. ಹೆಚ್ಚು ಹೊತ್ತು ಎದ್ದಿದ್ದು ಓದಬಹುದು. ಇವೆಲ್ಲ ಯೋಜನೆಗಳೊಂದಿಗೆ ಮತ್ತೆ ಪರೀಕ್ಷೆಗೆ ಸಿದ್ಧರಾಗಲು ಶುರು ಮಾಡಿದೆವು.
ಸಂಜೆ ೪ ರಿಂದ ೭ ರ ತನಕ ಕ್ರಿಕೆಟ್ ಆಡಿ ೮ ಘಂಟೆ ಅಷ್ಟರಲೆಲ್ಲ ಮನೆಯಿಂದ ಊಟ ಮುಗಿಸಿಕೊಂಡು ಬಿರ್ಯಾನಿ ಮನೆ ಸೇರಿಬಿಡುತಿದ್ದೆವು, ಸೇರಿದ ಮೊದಲರ್ಧ ಘಂಟೆ, ಆ ದಿನ ಆಡಿದ ಕ್ರಿಕೆಟ್ ಬಗ್ಗೆ ಚರ್ಚೆ, ಇಂದು ಪುಲ್ ಶಾಟ್ ಚೆನ್ನಾಗಿತ್ತು ಡ್ರೈವ್ ಸೂಪರ್ರಾಗಿತ್ತು, ಸಿ‍ಕ್ಸ್ ಹೊಡೆಯೋಕೆ ಹೋಗಿ ಔಟಾದೆ ಇವೇ ಮಾತುಗಳು. ಒಂದು ಹತ್ತು ನಿಮಿಷ ಹಳೆ ಪ್ರಶ್ನೆ ಪತ್ರಿಕೆ ಬಗ್ಗೆ ಚರ್ಚೆ, ನಾನು ಈ ಆನ್ಸೆರ್ ಸರ್ಯಾಗೆ ಮಾಡಿದ್ದೆ, ನನ್ ಮಗ ಕರೆಕ್ಷನ್ ಸರ್ಯಾಗ್ ಮಾಡಿಲ್ಲ, ಮಗಾ ಈ ಪ್ರಶ್ನೆ ಓದ್ಕೊಂಡೋಗಿದ್ದೆ ಆದ್ರೆ ಎಕ್ಸಾಮ್ ಹಾಲ್ ಅಲ್ಲಿ ಮರ್ತೋಯ್ತು ಹೀಗೆ ಎಲ್ಲ, ಅಷ್ಟರಲ್ಲಿ ಒಂಭತ್ತು ಘಂಟೆ ಆಗ್ತಿತ್ತು, ರೂಂ ಬಾಗಿಲ ಬಳಿ ಬಿರ್ಯಾನಿ ಅವರಮ್ಮ ಬಂದು ವಸೀಮ್ ಚಾಯ್ ಕ ಫ್ಲಾಸ್ಕ್ ರೆಡಿ ಹೈ ಅಂತ ಒಂದು ಕೂಗು ಹಾಕಿ ಹೊರಡೋರು, ತಕ್ಷಣ ಬಿರ್ಯಾನಿ ಚಾಯ್ ಫ್ಲಾಸ್ಕ್ ತಂದು ಬಿಡುತಿದ್ದ.

ಎಂಟು ಜನ್ರೂ ಒಂದು ರೌಂಡ್ ಚಾಯ್ ಕುಡಿದು ಓದಕ್ಕೆ ಕೂತ್ರೆ, ಅವರ ಡೌಟ್ ಇವರು ಇವರ ಡೌಟ್ ಅವ್ರು ಹೀಗೆ ಮಾತಾಡ್ತಾ ಮಾತಾಡ್ತಾ ಯಾರಾದ್ರು ಒಬ್ಬರು ನಿದ್ದೆ ಮಾಡಿಬಿಡ್ತಾ ಇದ್ರು. ಆಮೇಲೆ ಓದ್ತಾ ಇದ್ದೋರೆಲ್ಲ ಬಂದು ಮಲಗಿದ್ದವರ ಮೂಗಿಗೆ ಚಾಕ್ ಪೀಸ್ ತುರುಕೋದು ಮಖದ ಮೇಲೆ ಬಣ್ಣ ಹಚ್ಚೋದು, ಹೊದ್ದಿದ್ದ ಬೆಡ್ ಶೀಟ್ ಎಳೆಯೋದು ಹೀಗೆ ಚೇಷ್ಟೆಗಳು ಮಾಡ್ಕೊಂಡು ಸುಸ್ತಾದ ಮೇಲೆ ಮತ್ತೊಂದು ರೌಂಡ್ ಟೀ ಕುಡಿದು ಮಲಗೋದು. ಇದೇ ನಮ್ಮ ಪ್ರತಿ ದಿನದ ಓದಿನ ದಿನಚರಿಯಾಗೋಗಿತ್ತು. ಬರ್ತಾ ಬರ್ತಾ ಬಿರ್ಯಾನಿ ಮನೆಗೆ ಓದೋಕೆ ಹೋಗೋದ್ರ ಬದಲು ೯ ಘಂಟೆ ಅಷ್ಟರಲ್ಲಿ ಹೋಗಿ ಚಾಯ್ ಕುಡಿದು ಕುಚೇಷ್ಟೆಗಳನ್ನು ಮಾಡಿ ಮಲಗಿಬಿಡೋ ಹಾಗಾಗೋಯ್ತು

ನೋಡು ನೋಡುತ್ತಾ ಪರೀಕ್ಷೆ ಮತ್ತೆ ಬಂದು ಬಿಟ್ಟಿತ್ತು. ಪರೀಕ್ಷೆ ಕೊಠಡಿಯಲ್ಲಿ ಪ್ರಶ್ನೆ ಪತ್ರಿಕೆ ನೋಡಿದಾಗ ಉತ್ತರ ಹೊಳೆಯುವ ಬದಲು ನಾವು ಮಾಡಿದ್ದ ಕುಚೇಷ್ಟೆಗಳೆ ಮರಳಿ ಮರಳಿ ನೆನಪಿಗೆ ಬರುತಿತ್ತು. ಏನೇನು ಬರೆದೆನೋ ಏನೋ ಗೊತ್ತಿಲ್ಲ. ಎಲ್ಲ ಪರೀಕ್ಷೆಗಳು ಮುಗಿದು ಫಲಿತಾಂಶ ಬಂದಾಗ ಮತ್ತೆ ಹಳೆಯ ಫಲಿತಾಂಶವೇ ಮರುಕಳಿಸಿತ್ತು. ಅಪ್ಪನ ಮುಂದೆ ಮತ್ತೆ ನಿಲ್ಲುವ ಧೈರ್ಯವಿರಲಿಲ್ಲ,ನನ್ನೊಳಗಿನ ಆಲಸಿತನ ಅಸಡ್ಡೆ ನನಗೇ ಅಸಹ್ಯ ತರಿಸುವಂತಿತ್ತು. ಆದ್ರೂ ಹೋಗಿ ನಿಂತೆ ಅಪ್ಪ ಮತ್ತೆ ಹಳೆಯ ಫಲಿತಾಂಶವೇ ಬಂದಿದೆ ಒಂದು ಸಬ್ಜೆಕ್ಟ್ ಕೂಡ ಪಾಸಾಗಲಿಲ್ಲ ಎಂದೆ. ಸ್ವಲ್ಪ ಹತಾಶರಾದ ಅಪ್ಪ ಕಂಬೈಂಡ್ ಸ್ಟಡಿ ಎಲ್ಲ ಮಾಡಿದ್ಯಲ್ಲಪ್ಪ ಆದ್ರು ಆಗ್ಲಿಲ್ಲವಾ ಅಂದ್ರು, ಇಲ್ಲಪ್ಪ ಆಗ್ಲಿಲ್ಲ ಸಾರಿ ಅಂದೆ. ಏನ್ ಮಾಡಕ್ಕಾಗಲ್ಲ ಮುಂದಿನ ಸಲಿ ಕಟ್ಕೊಂಡು ಕಷ್ಟ ಪಟ್ಟು ಓದಿ ಪಾಸು ಮಾಡ್ಕೋ ಅಂದ್ರು. ಮತ್ತೆ ಅದೇ ನೋವು ಅದೇ ಹತಾಷೆ ಅವರಿಗೆ ಮುಖ ಕೊಟ್ಟು ಮಾತನಾಡುವ ತಾಕತ್ತು ನನ್ನಲ್ಲಿರಲಿಲ್ಲ. ಅವಮಾನದಿಂದ ತಲೆ ತಗ್ಗಿಸಿ ಅಡುಗೆ ಮನೆ ಕಡೆ ಹೋದೆ. ಅಮ್ಮ ನನ್ನನ್ನೇ ಎದುರು ನೋಡುತಿದ್ದವಳಂತೆ ಹೋದೊಡನೆ ಅಪ್ಪಿ ಯೋಚಿಸಬೇಡ್ವೋ ಪವನ್ ಮುಂದಿನ ಸಲಿ ಪಾಸಾಗ್ತೀಯ ಅಂದ್ರು. ಇದಕ್ಕೆಲ್ಲ ಕಾರಣ ನಾನೆ, ಓದುವ ಸಮಯದಲ್ಲಿ ಓದಿ ಆಡುವ ಸಮಯದಲ್ಲಿ ಆಡಿದ್ದರೆ ನನಗೆ ಈ ಗತಿ ಬರುತ್ತಿರಲಿಲ್ಲ ಎಂದು ಅಮ್ಮನನ್ನು ಗಟ್ಟಿಯಾಗಿ ಅಪ್ಪಿ ಅಳುತ್ತಾ ಪಿ.ಯು.ಸಿ ಯ ಕರಾಳ ದಿನಗಳನ್ನು ಮರೆಯಲು ಪ್ರಯತ್ನಿಸಿದ್ದೆ.

ಮುಂದೆಂದೂ ನಾನು ಪಿ.ಯು.ಸಿ ಪಾಸಾಗಲೇ ಇಲ್ಲ......

Photo courtecy : Google images

No comments:

Post a Comment