Tuesday, January 24, 2012

ಅಲೆಯ ಅರ್ಭಟ


ಬಂದು ಹೋಗುವಾಗೆಲ್ಲ
ಹೊತ್ತು ಹೋಗುವೀ ಒಂದಷ್ಟು
ನೆನಪಿನ ಮರಳು
ಆಗಾಗ ಹೊತ್ತು ತರುವೆ
ಪ್ರೀತಿಯ ಕಪ್ಪೆಚಿಪ್ಪು ಶಂಖ
ಮತ್ತೊಮ್ಮೆ ಮುಳ್ಳು ಮೀನುಗಳ
ಉರುಳಿಸುತ ಬರುವೆ
ನನ್ನ ಆಸೆಗಳ ಆಕೃತಿಯ
ಚುಚ್ಚಿ ನೋಯಿಸಲು

ಹಿಡಿದಿಟ್ಟುಕೊಳ್ಳುವಾಸೆ ನನಗೆ
ಹಿಡಿದು ಬುದ್ದಿ ಹೇಳಿ
ಪ್ರೀತಿಯ ಕಪ್ಪೆ ಚಿಪ್ಪುಗಳ
ಯಾವಾಗಲು ತರಿಸಿಕೊಳ್ಳುವಾಸೆ    
ಮುಳ್ಳುಗಳ ಉರುಳಿಸುವಾಗಲೆಲ್ಲ 
ನಂಬಿಕೆಯ ಬಲೆ ಬೀಸಿ   
ಆಕೃತಿಗಳ ಉಳಿಸಿಕೊಳ್ಳುವಾಸೆ   

ಕೇಳಲು ನೀನು ನನ್ನ ಆಳಲ್ಲ
ಅಳುವ ಜನರಿಗೂ ನಡುಕ
ತರಬಲ್ಲ ನವ ಯುವಕ
ಒಮ್ಮೆ ನೀ ನುಗ್ಗಿ ಬಂದರೆ
ಮರಳು ಹೊತ್ತೊಯ್ಯುವ ರೀತಿ
ಮನುಕುಲವ ಎತ್ತೊಯ್ಯುವೆ

ಇಂದು ನಾ ನಿನಗೆ ಅವಕಾಶ ಕೊಡುವೆ
ಸಾಧ್ಯವಾದರೆ ಎತ್ತೊಯ್ಯಿ
ಮೆಚ್ಚುಗೆಯ ಬಹುಮಾನ ಕೊಡುವೆ

ಅಹಂ ನ ಕೋಟೆಯಿದೆ
ಆಸೆಯ ಮೂಟೆಯಿದೆ    
ಬರಿದು ಮಾಡಿಬಿಡು ನನ್ನ ಮನವ
ಅವನ್ನು ಇಟ್ಟುಕೊಳ್ಳಲು ನನಗು ಮನಸಿಲ್ಲ
ಜೋರಾಗಿ ಬಂದು
ಛಿದ್ರಗೊಳಿಸಿದರು ಚಿಂತೆಯಿಲ್ಲ
ನೆಮ್ಮದಿಯ ಸುಖ ಪಡೆವೆ

ಸ್ನೇಹಿತರ ಪ್ರೀತಿಯಿದೆ
ಹೆತ್ತವರ ಅಸೆ ಇದೆ
ಬಲವಾದ ನಂಬಿಕೆ ಮನವೆಲ್ಲ ತುಂಬಿದೆ  
ನೀ ಹತ್ತಾರು ಪಟ್ಟು ಜೋರಾಗಿ ನುಗ್ಗಿದರು
ನಿನ್ನಯಾ ಸೈನ್ಯವೇ ಒಟ್ಟಾಗಿ ಬಂದರೂ
ನನ್ನೀ ಆಕೃತಿಗಳು ಅಲುಗಾಡೋದಿಲ್ಲ   

ಸಾಗರದಲೆಗೆ ಸವಾಲ್ ಪವನ್ :-

2 comments:

  1. ಮನದೊಳಗೆ ಕವಿದ ಕಲ್ಮಷದ ಮರಳುಗಳನ್ನು ಅಲೆಯ ಬಾಯಿಗೆ ತುತ್ತಾಗಿಸುವ ಆಶಯ ಕವನದಲಿ ಆರ್ಭಟಿಸಿದೆ. ಪ್ರೀತಿ, ಮಮತೆಯ ಕಪ್ಪೆಚಿಪ್ಪಿನೊಳಗೆ ಮಲಗುವ ಬಯಕೆ ಮನಕೆ ನಾಟುತ್ತದೆ ಪವನ್. ಸುಂದರ ಹೆಣಿಗೆ.

    ReplyDelete
  2. ಪವನಣ್ಣ ಒಂದು ಉತ್ಕೃಷ್ಟವಾದ ಕವಿತೆ.. ನಿಮ್ಮ ಕಾವ್ಯ ಪ್ರೌಢಿಮೆಯನ್ನು ಸಮತೂಕದಲ್ಲಿ ಧಾರೆ ಎರೆದು ಕಡೆದು ಮತಿಸಿದ ನಂತರ ಬಿಟ್ಟುಕೊಂಡ ಕಾವ್ಯ ಸಾರ ಈ ಕವಿತೆ.. ನಿಜವಾಗಲೂ ನಿಮ್ಮ ಸೃಜನಾತ್ಮಕ ಕವಿತೆ ಕಂಡು ಒಂದು ನಮನ ಸಲ್ಲಿಸುವ ಮನಸ್ಸಾಗಿದೆ.. ನಿಮಗೊಂದು ನಮನ.. ಸುಂದರವಾಗಿ ಸಾಗರದ ಪ್ರತಿಮೆ ಕಣ್ಣ ಮುಂದೆ ತಾನೇ ತಾನಾಗಿ ನಿಂತಂತಿದೆ.. ಸಾಗರದ ಒಡಲಾಳಗಳನ್ನು ಕವಿತೆಯ ವಿಷಯಕ್ಕೊಗ್ಗಿಸಿ ಮನುಷ್ಯನ ಜೀವನವನ್ನು ಸಾಗರದ ವಸ್ತುವಿನೊಂದಿಗೆ ಅನುಸಂಧಾನಗೊಳಿಸಿ ಕವಿತೆ ಸಾಗರ ಮತ್ತು ಅದರ ಅಗಾಧತೆಯನ್ನು ಮೀರಿ ಮಾನವನ ಜೀವನದ ಮೌಲ್ಯಗಳು ಮತ್ತು ಅವುಗಳ ಬಂಧನಗಳಲ್ಲಿರುವ ಸಶಕ್ತತೆಯ ಬಗ್ಗೆ ಬೆಳಕು ಚೆಲ್ಲುತ್ತದೆ ಕವಿತೆ.. ಸಾಗರವನ್ನು ಮೀರಿ ಮಾನವೀಯ ಸಂಬಂಧಗಳ ಮೇಲೆ ಬೆಳಕು ಚೆಲ್ಲುತ್ತದೆ.. ಕವಿತೆ ತುಂಬಾ ಇಷ್ಟವಾಯ್ತು..:)))

    ReplyDelete