Sunday, January 29, 2012

ಭಾವ ಬಿಂದಿಗೆಯ ಭಿಕ್ಷೆ ನೀಡಮ್ಮ ಶಾರದೆ


ಭಾವ ಬಿಂದಿಗೆಯ ಭಿಕ್ಷೆ ನೀಡಮ್ಮ ಶಾರದೆ
ತುಂಬಿರಲಿ ಬಿಂದಿಗೆ ಹಲವು ಭಾವಗಳ ಜೊತೆಗೆ
ಹಾಸ್ಯದ ಮಿತಿಯಿರಲಿ ವಿರಹದ ಕುರುಹಿರಲಿ
ಸ್ನೇಹದ ಅರಿವಿರಲಿ ಪ್ರೀತಿಯ ಪರಿವಿರಲಿ
ನೋವಿನ ಲೇಪವು ಆಗಾಗ ಅಗುತಲಿ
ಕಲ್ಪನೆಯ ಶಿಲೆಯಾಗಿ ಕೆತ್ತುವ ತಂತ್ರವ
ಕಲಿಸಿ ಕೊಡು ಬಾರಮ್ಮ ಶಾರದೆ
ಭಾವ ಬಿಂದಿಗೆಯ ಭಿಕ್ಷೆ ನೀಡಮ್ಮ ಶಾರದೆ
ನೋವಿನ ಮನಸಿಗೆ ಸಾಂತ್ವಾನ ನೀಡಲಿ
ನಲಿವಿನ ಕ್ಷಣಗಳಿಗೆ ಸಾಕ್ಷಿಯೂ ಅಗಲಿ
ದಾರಿ ತಪ್ಪಿದ ಮನಕೆ ದಿಕ್ಸೂಚಿ ತೋರಲಿ 
ದಣಿದ ಹೃದಯಕ್ಕೆ ಹಿಡಿ ಧೈರ್ಯ ನೀಡಲಿ
ಎಲ್ಲ ಭಾವಗಳನು ಪದಗಳಲಿ ತುಂಬುವ  
ಭಾವ ಬಿಂದಿಗೆಯ ಭಿಕ್ಷೆ ನೀಡಮ್ಮ ಶಾರದೆ
ನೋವಾಗದಿರಲಿ ನನ್ನ ಭಾವಗಳಿಂದ
ಮಗುವಷ್ಟೇ ಮುಗ್ಧತೆ ಅಡಕವಾಗಿರಲಿ
ಅತಿರೇಕ ಎಂದಿಗೂ ಮುಟ್ಟದೆ ಇರಲಿ 
ಅರ್ಥವಾಗದ ಭಾವ ವ್ಯರ್ಥವಾದೀತು    
ಆಗದಿರಲಿ ಸೀಮಿತ ನನಗಷ್ಟೇ ನನ ಭಾವ
ಎಲ್ಲರ ಹೃದಯದಳು ಬಂಧಿಯಾಗಿರಲಿ
ಸಾಗರವ ಮೀರಿಸುವ ಅಪರಿಮಿತ ಶಕ್ತಿಯ 
ಭಾವ ಬಿಂದಿಗೆಯ ಭಿಕ್ಷೆ ನೀಡಮ್ಮ ಶಾರದೆ
ತಾಯಿ ಶಾರದೆ ಎಲ್ಲರನ್ನು ಆಶೀರ್ವದಿಸಲಿ 
ಪವನ್ :-  

Tuesday, January 24, 2012

ಅಲೆಯ ಅರ್ಭಟ


ಬಂದು ಹೋಗುವಾಗೆಲ್ಲ
ಹೊತ್ತು ಹೋಗುವೀ ಒಂದಷ್ಟು
ನೆನಪಿನ ಮರಳು
ಆಗಾಗ ಹೊತ್ತು ತರುವೆ
ಪ್ರೀತಿಯ ಕಪ್ಪೆಚಿಪ್ಪು ಶಂಖ
ಮತ್ತೊಮ್ಮೆ ಮುಳ್ಳು ಮೀನುಗಳ
ಉರುಳಿಸುತ ಬರುವೆ
ನನ್ನ ಆಸೆಗಳ ಆಕೃತಿಯ
ಚುಚ್ಚಿ ನೋಯಿಸಲು

ಹಿಡಿದಿಟ್ಟುಕೊಳ್ಳುವಾಸೆ ನನಗೆ
ಹಿಡಿದು ಬುದ್ದಿ ಹೇಳಿ
ಪ್ರೀತಿಯ ಕಪ್ಪೆ ಚಿಪ್ಪುಗಳ
ಯಾವಾಗಲು ತರಿಸಿಕೊಳ್ಳುವಾಸೆ    
ಮುಳ್ಳುಗಳ ಉರುಳಿಸುವಾಗಲೆಲ್ಲ 
ನಂಬಿಕೆಯ ಬಲೆ ಬೀಸಿ   
ಆಕೃತಿಗಳ ಉಳಿಸಿಕೊಳ್ಳುವಾಸೆ   

ಕೇಳಲು ನೀನು ನನ್ನ ಆಳಲ್ಲ
ಅಳುವ ಜನರಿಗೂ ನಡುಕ
ತರಬಲ್ಲ ನವ ಯುವಕ
ಒಮ್ಮೆ ನೀ ನುಗ್ಗಿ ಬಂದರೆ
ಮರಳು ಹೊತ್ತೊಯ್ಯುವ ರೀತಿ
ಮನುಕುಲವ ಎತ್ತೊಯ್ಯುವೆ

ಇಂದು ನಾ ನಿನಗೆ ಅವಕಾಶ ಕೊಡುವೆ
ಸಾಧ್ಯವಾದರೆ ಎತ್ತೊಯ್ಯಿ
ಮೆಚ್ಚುಗೆಯ ಬಹುಮಾನ ಕೊಡುವೆ

ಅಹಂ ನ ಕೋಟೆಯಿದೆ
ಆಸೆಯ ಮೂಟೆಯಿದೆ    
ಬರಿದು ಮಾಡಿಬಿಡು ನನ್ನ ಮನವ
ಅವನ್ನು ಇಟ್ಟುಕೊಳ್ಳಲು ನನಗು ಮನಸಿಲ್ಲ
ಜೋರಾಗಿ ಬಂದು
ಛಿದ್ರಗೊಳಿಸಿದರು ಚಿಂತೆಯಿಲ್ಲ
ನೆಮ್ಮದಿಯ ಸುಖ ಪಡೆವೆ

ಸ್ನೇಹಿತರ ಪ್ರೀತಿಯಿದೆ
ಹೆತ್ತವರ ಅಸೆ ಇದೆ
ಬಲವಾದ ನಂಬಿಕೆ ಮನವೆಲ್ಲ ತುಂಬಿದೆ  
ನೀ ಹತ್ತಾರು ಪಟ್ಟು ಜೋರಾಗಿ ನುಗ್ಗಿದರು
ನಿನ್ನಯಾ ಸೈನ್ಯವೇ ಒಟ್ಟಾಗಿ ಬಂದರೂ
ನನ್ನೀ ಆಕೃತಿಗಳು ಅಲುಗಾಡೋದಿಲ್ಲ   

ಸಾಗರದಲೆಗೆ ಸವಾಲ್ ಪವನ್ :-

Monday, January 23, 2012

ಐಶ್ವರ್ಯ ಕಳೆದು ಹೋದಾಗ….!!

ಪವನ್ ಪಾರುಪತ್ತೇದಾರ

ಪುಟ್ಟನಿಗೆ ಕ್ರಿಕೆಟ್ ಎಂದರೆ ಪ್ರಾಣ, ಹರಿದ ಚಡ್ಡಿ ಹಾಕಿಕೊಂಡು ತೂತು ಬನಿಯನ್ನಲ್ಲೇ ಮರದ ತುಂಡೊಂದನ್ನು ಹಿಡಿದು ಆಡಲು ಹೋಗುತಿದ್ದ. ಕೈಗೆ ಸಿಕ್ಕಿದ ಉದ್ದಗಿನ ವಸ್ತುಗಳೆಲ್ಲಾ ಅವನ ಕೈಲಿ ಬ್ಯಾಟ್ ಆಗಿಬಿಡುತಿತ್ತು. ಅದಕ್ಕೆ ಬಹಳಾನೆ ಉದಾಹರಣೆಗಳು. ತೆಂಗಿನ ಮೊಟ್ಟೆ, ಮರದ ರಿಪೀಸು, ಅಷ್ಟೇ ಯಾಕೆ ಅಮ್ಮನ ಮುದ್ದೆ ಕೆಲಕುವ ಕೋಲನ್ನು ಬಿಡುತ್ತಿರಲಿಲ್ಲ. ಪುಟ್ಟನ ಅಪ್ಪ ರೈತ, ಪಾರ್ಟ್ ಟೈಮ್ ಎಲೆಕ್ಟ್ರಿಕ್ ಕೆಲಸ ಸಹ ಮಾಡುತಿದ್ದರು. ಮನೆಲಿ ೨ ಸೀಮೆ ಹಸುಗಳು ಸಹ ಇದ್ದವು, ಅಪ್ಪ ಎಲೆಕ್ಟ್ರಿಕ್ ಕೆಲಸಕ್ಕೆ ಸಾಮಾನ್ಯವಾಗಿ ಸಂಜೆ ಹೋಗುತಿದ್ದರು
ಪುಟ್ಟ ಅಷ್ಟು ಹೊತ್ತಿಗೆ ಶಾಲೆಯಿಂದ ಮನೆಗೆ ಬರುತಿದ್ದ. ಬರುವಾಗಲೇ ಆಟದ ಕನಸು ಹೊತ್ತು ಬರುತಿದ್ದ ಪುಟ್ಟ ಅಪ್ಪ ಲೋ ಮಗ ನಾನು ಕೆಲಸಕ್ಕೆ ಹೋಗ್ತಾ ಇದ್ದೇನೆ ಹಸುಗಳನ್ನ ಚೆನ್ನಾಗಿ ನೋಡ್ಕೋ ಅಂತ ಹೇಳುತಿದ್ದರು. ಅಪ್ಪನ ಮಾತಿಗೆ ಇಲ್ಲ ಎನ್ನದೆ ಮುಖ ಸೊಟ್ಟಗೆ ಮಾಡ್ಕೊಂಡು ಆಯ್ತು ಅಂತಿದ್ದ. ಆಗ ಅಪ್ಪ ಲೋ ಮಗನೆ ನಿಮ್ಮೊಳ್ಳೇದಕ್ಕೆ ಕಣೋ ದುಡೀತಾ ಇರೋದು ಬೇಜಾರು ಮಾಡ್ಕೋಳದೆ ಹೋಗೋ ಅನ್ನೋರು. ಪುಟ್ಟ ಸಹ ಸ್ವಲ್ಪ ಮೂತಿ ಸೊಟ್ಟ ಮಾಡ್ಕೊಂಡು ಹಸು ಮೇಸಕ್ಕೆ ಕೆರೆ ಬಯಲಿಗೆ ಹೋಗ್ತಾ ಇದ್ದ.
ಕೆರೆ ಬಯಲಲ್ಲಿ ಪುಟ್ಟನ ತರಹವೇ ಇನ್ನೂ ಸುಮಾರು ಹುಡುಗರು ಬರುತಿದ್ದರು. ಹಸುಗಳನ್ನು ಬಯಲಲ್ಲಿ ಬಿಟ್ಟು ಎಲ್ಲರೂ ಸೇರಿ ಕಲ್ಲನ್ನು ವಿಕೆಟ್ನಂತೆ ಜೋಡಿಸಿ ತಮ್ಮಲ್ಲೇ ತಂಡಗಳನ್ನಾಗಿ ಮಾಡಿಕೊಂಡು ಸೂರ್ಯ ಬೈದು ಮನೇಗೆ ಹೋಗ್ರೋ ಅನ್ನೋವರೆಗು ಆಡುತಿದ್ದರು. ಪುಟ್ಟ ಒಳ್ಳೆಯ ಬೌಲರ್ ಆಗಿದ್ದ. ಬಹಳ ದೂರದಿಂದ ಓಡಿ ಬರದಿದ್ದರೂ ವೇಗವಾಗಿ ಚೆಂಡು ಎಸೆಯುವ ತಂತ್ರಗಾರಿಕೆ ಅವನಲ್ಲಿತ್ತು. ಆಗಾಗ ಲೆಗ್ ಸ್ಪಿನ್ ಹಾಕುತಿದ್ದ ಇದ್ದಕ್ಕಿದ್ದಂತೆ ಆಫ್ ಸ್ಪಿನ್ ಹಾಕುತಿದ್ದ. ಅವನ ಎಸತದಲ್ಲೇ ವೇಗವಾಗಿ ಸ್ಪಿನ್ ಆಗತಿದ್ದುದ್ದನ್ನು ಆಡಲಾಗದೆ ಬ್ಯಾಟಿಂಗ್ ಮಾಡುತ್ತಿರುವರೆಲ್ಲ ತತ್ತರಿಸುತಿದ್ದರು. ಎಲ್ಲಾ ಆಡಿದ ನಂತರ ಎಲ್ಲರೂ ತಮ್ಮ ತಮ್ಮ ಮನೆಗಳಿಗೆ ಹಸುಗಳನ್ನು ಕರೆದುಕೊಂಡು ಮನೆಗೆ ಮರಳುತಿದ್ದರು.
ಒಂದು ದಿನ ಫಲವಾಗಿದ್ದ  ಪುಟ್ಟನ ಒಂದು ಮನೆಯಲ್ಲಿನ ಹಸು ಕರು ಹಾಕಿತ್ತು, ಮನೆಯವರೆಲ್ಲ ಬಹಳ ಖುಷಿಯಾಗಿದ್ದರು. ಹೆಣ್ಣು ಕರು ಬೇರೆ, ಮನೆಯವರೆಲ್ಲ ಏನು ಹೆಸರಿಡಬೇಕೆಂದು ಚಿoತಿಸುತಿದ್ದರು ಅಮ್ಮ ಗೌರಿ ಎಂದಿಡೋಣ ಎಂದರು. ಅಪ್ಪ ಬೇಡ ಲಕ್ಸ್ಮಿ ಅನ್ನೋಣ ಎಂದರು. ಆಗ ಪುಟ್ಟ ಐಶ್ವರ್ಯ ಎಂದಿಡೋಣ ಅಂದ. ಅದಕ್ಕೆ ಅವರಪ್ಪ ಯಾರೋ ಅದು ಐಶ್ವರ್ಯ ಅಂದ್ರು. ಅಪ್ಪ ನಿಂಗೊತ್ತಿಲ್ವಾ, ಸಕ್ಕತ್ತಾಗಿದೆ ಹೆಸರು, ಇ ನಡುವೆ ಎಲ್ಲ ಸಿನಿಮಾಲು ಹಿರೋಯಿನ್ ಅವಳೇ, ಅಮ್ಮ ಲಕ್ಸ್ ಜಾಹಿರಾತು ನೋಡಿಲ್ವಮ ಅದರಲಿ ಬರ್ತಳಲ್ಲ ಅವಳೇ ಅಂದ, ಇದೇ ಇಡಣ ಇದೇ ಇಡಣ ಅಂತ ಹಠ ಮಾಡಿದ. ಆಗಲಿ ಎಂದು ಅಪ್ಪ ಅಮ್ಮ ಸಹ ಹೂಗುಟ್ಟಿದರು. ಐಶ್ವರ್ಯ ಅಮ್ಮನ ಬಳಿಯೇ ಇರುತಿದ್ದಳು ಯಾವಾಗಲು. ಇವನು ಮಾತನಾಡಿಸಲು ಹೋದಾಗಲೆಲ್ಲ ನೆಕ್ಕುತ್ತಿದ್ದಳು. ವರಟಾದ ನಾಲಿಗೆಯಿಂದ ನೆಕ್ಕುವಾಗ, ಪುಟ್ಟ ಖುಷಿಯಾಗಿ ಹಸು ಮನೆಯಿಂದಲೇ ಅಮ್ಮನ ಕೂಗಿ ಹೇಳುತಿದ್ದ, ಅಮ್ಮ ಐಶ್ವರ್ಯ ಅಮ್ಮ ಅದನ್ನ ನೆಕ್ಕಿದ್ರೆ ಐಶ್ವರ್ಯ ನನ್ನ ನೆಕ್ತಾ ಇದೆ ಅಂತ. ಶಾಲೆಯಲ್ಲೂ ಅದೇ ಮಾತು. ಲೋ ಮಾದೇಶ ನಮ್ಮನೆ ಹಸು ಕರು ಹಾಕೈತೆ ಗೊತ್ತ? ಹೆಸರೇನು ಹೇಳು ಐಶ್ವರ್ಯ ಗೊತ್ತಾ ಅಂದಾಗ ಮಾದೇಶ ಐಶ್ವರ್ಯನ! ಅಂತ ಬಾಯಿ ಬಿಟ್ಕೊಂಡು ಇರ್ಲಿ ಬಿಡೋಲೋ ನಮ್ಮ ಮನೆ ಹಸು ಕೂಡ ಫಲ ಆಗಿದೆ ಅದು ಕರು ಹಾಕ್ದಾಗ ಐಶ್ವರ್ಯ ಅಂತಾನೆ ಹೆಸರಿಡ್ತಿವಿ ಅಂದಿದ್ದ.
ಹೀಗೆ ಒಂದು ವಾರ ಕಳೆದಾಯ್ತು ಆಗ ಐಶ್ವರ್ಯ ಆಚೆ ಓಡಾಡೋ ಹಂತಕ್ಕೆ ಬಂದಿದ್ದಳು. ಹೊರಗೆ ಪುಟ್ಟ ಹಗ್ಗ ಕಟ್ಟಿ ಪುಟ್ಟ ಹಿಡಿದು ಬೀದಿಗೆ ಕರೆತಂದರೆ ರಸ್ತೆಯಲ್ಲಿನ ಪುಟ್ಟ ಮಕ್ಕಳೆಲ್ಲ ಬಂದು, ಐ ಹೊಸ ಕರು ಏನೋ ಪುಟ್ಟ ಇದರ ಹೆಸರು ಎಂದು ಕೇಳುತಿದ್ದರು ಪುಟ್ಟ ಐಶ್ವರ್ಯ ಅಂತ ಹೆಮ್ಮೆಯಿಂದ ಹೇಳಿಕೊಳ್ಳುತಿದ್ದ. ಇದೇ ಭರಾಟೆಯಲ್ಲಿ ಒಂದೆರಡು ಸಲಿ ಪುಟ್ಟನ ಕಾಲು ತುಳಿದಿದ್ದು ಆಗಿದೆ. ಮುಂದೆ ಸಂಜೆ ಅಪ್ಪ ಎಲ್ಲಾದರೂ ಕೆಲಸಕ್ಕೆ ಹೋದರು ಬಹಳಾ ಉತ್ಸಾಹದಿಂದ ಆಡಲು ಹೋಗುತಿದ್ದ. ಒಂದೆರಡು ಸಲಿ ಆಡುವ ಗಮನದಲ್ಲಿ ಐಶ್ವರ್ಯನ ಕಡೆ ಗಮನ ಕೊಡದೆ ಅದು ಅವರಮ್ಮನ ಬಳಿ ಹಾಲು ಕುಡಿದು ಅಪ್ಪನ ಹತ್ತಿರ ಬೈಸಿಕೊಂಡಿದ್ದ ಕೂಡ.
ಹೀಗೆ ಒಮ್ಮೆ ಪುಟ್ಟನ ಅಪ್ಪ ಎಲೆಕ್ಟ್ರಿಕ್ ಕೆಲಸ ಮಾಡಲು ಹೊರಗಡೆ ಹೋಗಬೇಕಾದ ಅನಿವಾರ್ಯತೆ ಬಂದಿತ್ತು. ಅದೇ ದಿನ ಪುಟ್ಟನ ಕ್ರಿಕೆಟ್ ತಂಡ ಬೇರೆ ಕೆರೆ ಬಯಲಿನ ಹುಡುಗರ ಜೊತೆ ಕ್ರಿಕೆಟ್ ಪಂದ್ಯ ಇಟ್ಟುಕೊಂಡಿದ್ದರು. ಶಾಲೆಯಿಂದ ಮನೆಗೆ ಬಂದೊಡನೆ ಅಪ್ಪ ಮನೆಯಲ್ಲಿ ಇಲ್ಲದಿರುವುದು ತಿಳಿಯಿತು. ನೀನೆ ಹಸುಗಳನ್ನು ಹೊತ್ತು ಮುಳುಗೊತನಕ ಮೇಯಿಸಿ ಮನೆಗೆ ಕರ್ಕೊಂಡ್ ಬರಬೇಕಂತೆ ಅಪ್ಪ ಹೇಳಿದ್ದಾರೆ ಅಂತ ಅಮ್ಮ ಹೇಳಿದರು. ವಿಷಯ ಕೇಳಿ ಸಪ್ಪೆಯಾಗಿ ಕೆರೆ ಬಯಲಿಗೆ ಹೋದ. ಅಲ್ಲಿ ಪುಟ್ಟನ ಗೆಳೆಯರೆಲ್ಲ ತಯಾರಾಗಿ ಹೊರಡಲು ಸಿದ್ದವಾಗಿದ್ದರು. ಪುಟ್ಟ ಇಲ್ಲ ಕಣ್ರೋ ನೀವು ಹೋಗಿ ಆಡಿ ನಾ ಬರಲು ಆಗಲ್ಲ. ಐಶ್ವರ್ಯ ಬೇರೆ ಬಂದಿದ್ದಾಳೆ ಈಗ ಎಲ್ಲಂದರಲ್ಲಿ ಓಡುತ್ತಾಳೆ, ಜಿಗಿಯುತ್ತಾಳೆ. ಆಮೇಲೆ ಎಲ್ಲಾದರು ಹೋದ್ರೆ ನಮಪ್ಪ ನನ್ನ ಚರ್ಮ ಸುಲಿಯುತ್ತಾರೆ ಅಂದ. ಆಗ ಗೆಳೆಯರೆಲ್ಲ ನೀನೇನು ಹೆದರಬೇಡ ಪುಟ್ಟ ಗಟ್ಟಿಯಾಗಿ ಕಟ್ಟಿ ಹಾಕೋಣ ನೀನೆ ನಮ್ಮ ತಂಡದ ಮುಖ್ಯ ಆಟಗಾರ ನೀನೆ ಬರಲಿಲ್ಲ ಅಂದರೆ ನಾವು ಗೆಲ್ಲಕ್ಕೆ ಆಗಲ್ಲ ಅಂತ ಬಲವಂತ ಮಾಡಿದರು. ಮೊದಲೇ ಕ್ರಿಕೆಟ್ ಎಂದರೆ ಪ್ರಾಣ ಅಲ್ವೇ ಪುಟ್ಟನಿಗೆ, ಐಶ್ವರ್ಯಳನ್ನು ಗಟ್ಟಿಯಾಗಿ ಕಟ್ಟಿ ಹೊರಟೆ ಬಿಟ್ಟ. ಅಲ್ಲಿ ಹೋಗಿ ಚೆನ್ನಾಗಿ ಆಡಿ ಗೆದ್ದು ಬಂದರು.
ಬಂದು ನೋಡುವಷ್ಟರಲ್ಲಿ ಐಶ್ವರ್ಯಳ ಅಮ್ಮ ಪದೇ ಪದೇ ಅಮ್ಮ ಅಮ್ಮ ಎಂದು ಕೂಗುತಿದ್ದ ಶಬ್ದ ಸ್ವಲ್ಪ ಗೊಂದಲ ಮೂಡಿಸಿತ್ತು. ಹತ್ತಿರ ಬಂದು ನೋಡುವಷ್ಟರಲ್ಲಿ, ಐಶ್ವರ್ಯ ಕಾಣಿಸುತ್ತಿರಲಿಲ್ಲ. ಪುಟ್ಟ ಪದರಿಬಿಟ್ಟಿದ್ದ. ತನಗೆ ಅರಿವಿಲ್ಲದೇನೆ ಕಣ್ಣಲ್ಲಿ ನಿರು ಸುರಿಯಲು ಶುರುವಾಯಿತು. ಪುಟ್ಟನ ಗೆಳೆಯರು ಸಹ ಅವನ ಜೊತೆ ಹುಡುಕಿದರೂ ಸಿಗಲಿಲ್ಲ. ಅಷ್ಟರಲ್ಲೇ ಸೂರ್ಯ ಮುಳುಗಿದ್ದರಿಂದ ಪುಟ್ಟನ ಗೆಳೆಯರೆಲ್ಲ ತಮ್ಮ ತಮ್ಮ ದನಕರುಗಳನ್ನು ಮನೆ ಕಡೆ ಹೊಡೆದು ಕೊಂಡು ಹೋದರು. ಪುಟ್ಟನ ತಂದೆ ಎಷ್ಟು ಹೊತ್ತಾದರೂ ಪುಟ್ಟ ಮನೆಗೆ ಬಂದಿಲ್ಲ ಅಂತ ಹುಡುಕಿ ಕೊಂಡು ಬಂದರು. ಬಂದು ಇಲ್ಲಿನ ಅವಸ್ತೆ ನೋಡಿ ಮಿಕ್ಕ ಎರಡು ಹಸುಗಳನ್ನು ಮನೆಗೆ ಕರೆದು ಕೊಂಡು ಪುಟ್ಟನ್ನು ಜೊತೆಗೆ ಕರೆ ತಂದು, ಮನೆಯಲ್ಲಿ ಚೆನ್ನಾಗಿ ಬಾರಿಸಿದರು. ಹಸು ಮೆಸೋ ಅಂದ್ರೆ ಕ್ರಿಕೆಟ್ ಆಡಲು ಹೋಗಿದ್ದ ಜ್ಞಾನ ಇಲ್ವಾ ಮೈಮೇಲೆ, ಅಂತ ಬಿದಿರಿನ ಕೋಲು ಮುರಿದು ಹೋಗುವರೆಗೂ ಹೊಡೆದರು. ಅತ್ತು ಅತ್ತು ಪುಟ್ಟನ ಕಣ್ಣು ಬತ್ತಿ ಹೋಗಿತ್ತು. ಹಸು ಮನೆಯಿಂದ ಐಶ್ವರ್ಯಳ ತಾಯಿ ಅಮ್ಮ ಅಮ್ಮ ಅಂತ ಕುಗುತ್ತಲೇ ಇತ್ತು. ಪುಟ್ಟನ ಅಮ್ಮ ಬಂದು ಪುಟ್ಟನನ್ನು ಸಮಾಧಾನ ಮಾಡಿ ಹೋಗ್ಲಿ ಬಿಡಪ್ಪ ಇನ್ನು ಅಳಬೇಡ. ಸಾಕು ಬಿಡ್ರಿ ಮಗುನ ಎಷ್ಟು ಹೊಡಿತಿರ ಅಂತ ಪುಟ್ಟನ ತಂದೆ ಮೇಲೆ ಸಹ ರೇಗಿದರು. ಆಗ ಪುಟ್ಟ ಪರವಾಗಿಲ್ಲ ಬಿಡಮ್ಮ ನನಗೆ ಅಳು ಬರ್ತಾ ಇರೋದು ಅಪ್ಪ ಹೊಡೆದಿದ್ದಕ್ಕಲ್ಲ ಪಾಪ ತಾಯಿ ಮಗುನ ಬೇರೆ ಮಾಡಿ ಬಿಟ್ಟನಲ್ಲ ಅನ್ನೋ ವಿಷಯಕ್ಕೆ ಅಂದಾಗ ಪುಟ್ಟನ ಅಪ್ಪ ಅಮ್ಮನಿಗೂ ಒಂದು ಕ್ಷಣ ಕಣ್ಣು ಒದ್ದೆಯಾಗಿತ್ತು. ಹಸುಮನೆಯಿಂದ ಅಮ್ಮ ಅಮ್ಮ ಎಂಬ ಧ್ವನಿ ಕೇಳಿದಾಗಲೆಲ್ಲ ಪುಟ್ಟನ ಅಳು ಇನ್ನು ಹೆಚ್ಚಾಗುತ್ತಲೇ ಇತ್ತು…….

******************

Wednesday, January 18, 2012

ಮನದ ಸುಕ್ಕು

ಸುಕ್ಕು ಶುರುವಾಗಿದೆ
ಹೊಳೆಯುವ ಮೊಗವೀಗ
ನಿಜ ಬಣ್ಣ ತೆರೆಯುತಿದೆ     ಸುಕ್ಕು ಶುರುವಾಗಿದೆ
ಚಂದನವ ಮೆಲ್ಲಗೆ ಮುಖವೆಲ್ಲ ಹಚ್ಚಿ
ನಿಂಬೆ ರಸದೊಂದಿಗೆ ನಯವಾಗಿ ತೊಳೆದು
ಅರೈಕೆಗಂತ್ಯವೇ ಇಲ್ಲದಂತಾದರು
ಮನದಮೇಲೆ ಸುಕ್ಕು ಶುರುವಾಗಿದೆ

ಅಪನಂಬಿಕೆಯ ಸುಕ್ಕುಅಗ್ನಾನದ ಸುಕ್ಕು
ಆಸೆಯ ಸುಕ್ಕುನಿರಾಸೆಯ ಸುಕ್ಕು
ಮುಖದ ನರಗಳನು ಬಿಗಿ ಹಿಡಿದು
ಮನದ ಮೇಲೆ ಗೀಟುಗಳನು ಎಳೆದು
ಗೊತ್ತಿಲ್ಲದಂತೆ ಮೋಸ ಶುರು ಮಾಡಿದೆ
ಸುಕ್ಕು ಶುರುವಾಗಿದೆ

ಪ್ರತಿಯೊಂದು ತಪ್ಪಿಗು ಕಾರಣ ಹೇಳಿ
ಪ್ರತಿಯೊಂದು ಮಾತಿಗು ತೇಪಯ ಹಚ್ಚಿ
ತನ್ನ ತಾನೇ ಆಡಂಭರಿಸುವ ಆಸೆಯಲಿ
ಗೆಳೆಯರ ಬಳಗದ ಮೆಟ್ಟಿ ಮೇಲೇರುತ
ನನ್ನದೇ ಗೆಲುವೆಂದು ಗರ್ವವನು ತೋರುವ
ಸುಕ್ಕು ಶುರುವಾಗಿದೆ ಸುಕ್ಕು ಶುರುವಾಗಿದೆ

ಜೀವನ ಹೀಗೆ ಅಲ್ವ ಪವನ್ :-

Tuesday, January 17, 2012

ಬುದ್ಧಿ ಮಾತು


ಚಪ್ಪಲಿಯ ಕೊನೆಯು ಕಿತ್ತು ಹೋಗಿತ್ತು
ಹಿಮ್ಮಡಿ ಅರ್ಧ ನೆಲವ ನೆಕ್ಕಿತ್ತು
ಅಂಗಿಯಲಿ ಆಕಾಶ ನೋಡ ಬಹುದಿತ್ತು
ಅರಮನೆ ತುಸು ದೂರ ನಡೆಯಬಹುದಿತ್ತು
ಆಸೆಯ ಹೊರೆಯಂತು ಹೆಗಲ ಮೇಲಿತ್ತು

ಸಗಣಿ ನೀರನು ರಾಚಿ ಅಂಗಳವ ತೊಳೆದರು
ರಂಗೋಲಿ ತುಂಬೆಲ್ಲ ಬಣ್ಣಗಳ ತುಂಬಿದರು
ಅಸೆ ಪಟ್ಟಿಯ ಎಲ್ಲ ದೇವರುಗಳ ಮುಂದಿಟ್ಟರು
ನಿನ್ನದಷ್ಟೇ ನಿನಗೆ ಲಭ್ಯವೋ ಮನುಜ

ಕೊಟ್ಟಿದ್ದು ತನಗೆಂದು ನಂಬಿ ಕೂರಲೆ ಬೇಡ
ಹೆಚ್ಚಾಗಿ ಎಂದಿಗೂ ಬಚ್ಚಿಡಲು ಬೇಡ
ಕೊಡೆ ಹಿಡಿಸಿಕೊಳ್ಳೋ ಜನರೇನೆ ಎಲ್ಲ
ಹತ್ತಿದ ಏಣಿಗೆ ಮರ್ಯಾದೆ ಇಲ್ಲ
ಸಹಕಾರ ಉಪಕಾರ ನೆನೆಯೊರೆ ಇಲ್ಲ
ಊರಿನ ಉಸಾಬರಿ ನಿನಗೆ ಬೇಕಿಲ್ಲ

ಸುಮ್ನೆ ಹೀಗೆ ಬುದ್ಧಿ ಮಾತು ಪವನ್ :-

Monday, January 9, 2012

ಬದುಕಿನ ರಂಗಮಂಚ


ನೋಡದಿರಲಿ ಯಾರು,
ಮುಖವೆಲ್ಲ ಕಪ್ಪು ಮಚ್ಚೆ
ಅಲ್ಲಲ್ಲಿ ತರಚಿದ ಗಾಯ
ಅಜ್ಞಾನದ ಅತಿರೇಕ
ಹುಚ್ಚೆದ್ದು ಕುಣಿಯಲು ಹೋಗಿ
ಬಿದ್ದ ಮೇಲಿನ ಸೂತಕ

ಕುಣಿದಿದ್ದು ಸಭೆಯಲೇ ಆದರು
ರಂಗ ಮಂಚದಲಲ್ಲ
ಬದುಕಿನ ಪುಸ್ತಕದ ಮೇಲೆ
ಪ್ರೇಕ್ಷಕರು ಕೋಟಿ ಜನ
ಎಲ್ಲರು ಹೇಳಿದರು ತಪ್ಪು ನಿನದೆಂದು
ಒಂದಷ್ಟು ಮೂಢರು
ನಿನ್ನ ಬೆಳವಣಿಗೆ ಸಹಿಸದೆ
ಬದುಕಿನ ಬೆಂಕಿಗೆ ತುಪ್ಪವನ್ನು ಹೊಯ್ದರು

ನಿನ್ನ ಬುದ್ದಿಯು ಆಗ ಲದ್ದಿ ತಿಂತಿತ್ತೆ
ಒಮ್ಮೆ ನೀ ಅರಿತವರ ನಂಬಬೇಕಿತ್ತೆ
ಮುದ್ದಿನ ಮುಖದಲೀಗ ಕಪ್ಪಗಿನ ಮಚ್ಚೆಗಳು
ಬದುಕ ಪುಟಗಳು ಈಗ ಹರಿದ ಹಾಳೆಗಳು
ಒತ್ತಾಸೆಯಾಗಿದ್ದ ಜನರು ಈಗಿಲ್ಲ
ಮೂಢರ ಸಂತೆಗೆ ನೀನೀಗ ಬೇಕಿಲ್ಲ
ತಿಳಿದಿಕೋ ಜಗವನು
ಕುಣಿಯುವ ಜಾಗವನು

ತಪ್ಪು ನಿರ್ಧಾರಗಳು ಬದುಕಿನ ದಿಕ್ಕನ್ನೇ ಬದಲಿಸುತ್ತವೆ ಪವನ್ :-

Friday, January 6, 2012

ಸರಿ ಶ್ರುತಿಯೋ ಅಪಶ್ರುತಿಯೋ


ತಂತಿ ಮೀಟುವಾಗೆಲ್ಲ ಬರಲೇಬೇಕೇನು ಇಂಪಾದ ರಾಗ
ಬದುಕಿನ ಅರಿವಿಲ್ಲದೆ ಬದುಕ ವೀಣೆ ನುಡಿಸಲು ಹೊರಟಾಗ
ಬದುಕ ವೀಣೆಯಲಿ ನೀ ಎಷ್ಟೇ ಪಳಗಿದರು
ಅಪಶ್ರುತಿಯ ರಾಗಗಳು ಮೂಡುವುದು ಹಲವಾರು
ಕಿತ್ತು ಹೋಗದು ತಂತಿ ನೀ ಹೇಗೆ ಮೀಟಿದರು
ರಾಗ ಹೊಮ್ಮುವುದಷ್ಟೇ ಅದರ ಕೆಲಸ
ಸರಿ ಶ್ರುತಿಯೋ ಅಪಶ್ರುತಿಯೋ ನುಡಿಸಿದರೆ ನೀನು
ಬೈಗುಳವೋ ಹೊಗಳಿಕೆಯೋ ಕಾಯುವುದೇ ಕೆಲಸ

ಅಭಿಮಾನ ಉಳ್ಳವರು ಅಪಶ್ರುತಿಯ ಕೇಳಿದರೂ
ಪಕ್ಕವಾದ್ಯವ ಬೆರಸಿ ಗೆಲುವನ್ನು ಕೊಡಿಸುವರು
ಅನುಮಾನ ಉಳ್ಳವರು ನೋಡಿ ನೋಡದಂತಿರುವರು
ಸರಿಶ್ರುತಿಯು ಕಂಡಾಗ ಹಿಂದೆಯೇ ಬರುವರು
ಅಹಂಕಾರ ಉಳ್ಳವರು ನಿನ್ನ ಕಡೆ ನೋಡರು
ನೀ ಒಮ್ಮೆ ಗೆದ್ದಾಗ ಧಗ ಧಗನೆ ಉರಿಯುವರು

ನಿನ್ನ ರಾಗವ ನೀನು ಸರಿಯಾಗಿ ತಿಳಿದಿಕೋ
ಜೀವನದ ತಾಳವನ್ನು ಸರಿಯಾಗಿ ಹಾಕಿಕೋ
ನಿರ್ಧಾರಗಳನ್ನೇ ಶ್ರುತಿಪೆಟ್ಟಿಗೆಯ ಮಾಡಿಕೋ
ಸರಿಯಾದ ಶ್ರುತಿಯನ್ನು ಬದುಕಿನಲಿ ತಂದುಕೋ
ರಾಗದ ಹೊಳೆಯೇ ಹರಿಯುವುದು ಬದುಕಿನಲಿ
ಸಂಗೀತದಂತೆ ಹಿತವಿಹುದು ನಿನ್ನ ಈ ಬಾಳಲಿ

ಬದುಕಿನ ರಾಗ ತಾಳ ತಪ್ಪದಿರಿ ಗೆಳೆಯರೆ ಪವನ್ :-

Monday, January 2, 2012

ಕಣ್ಣಭಾಷೆಯ ಪ್ರೀತಿಪಾಠ


ಬೇಕಿಲ್ಲ ನಿನ್ನ ಹುಸಿನೋಟ
ಬಹಳಾನೆ ತಿಳಿದಿರುವೆ ಕಣ್ಣ ಭಾಷೆಯನು
ಅರಿಯಬಲ್ಲೆನು ನಿನ್ನ ಹೃದಯದ ಕ್ರೌರ್ಯವನು

ಅಂದು ನಾ ಹೀಗಿರಲಿಲ್ಲ ಬಲು ಮುಗ್ಧನಾಗಿದ್ದೆ
ನಿನ್ನಯಾ ನೋಟಕ್ಕೆ ಮರಳಾಗಿ ಹೋಗಿದ್ದೆ
ಕಿರುನಗೆಯ ಕಾಣಿಕೆಗೆ ಕರಗಿ ನೀರಾಗಿದ್ದೆ
ಅರಿಯದೇ ಮೋಹದಲಿ ಮರೆಯಾಗಿ ಹೋಗಿದ್ದೆ

ಬಣ್ಣಬಣ್ಣದ ಮಾತು ನನಗಂತು ಹೊಸತು
ನಿನ್ನಂತೇ ನಟಿಸಲು ನನಗೆ ಬರಲಿಲ್ಲ
ಹೊರಗಡೆ ನಗುಮೊಗ ಗೆದ್ದಂತೆ ಇತ್ತು ಜಗ
ಹುಸಿನಗೆಯ ಆಯಧ ನನ್ನಲ್ಲಿ ಇರಲಿಲ್ಲ

ಬಣ್ಣಕ್ಕೆ ಬಿದ್ದಿದ್ದೆ ಬಲೆಯಲ್ಲಿ ಸಿಕ್ಕಿದ್ದೆ
ಭರವಸೆಯ ಬಾಳಿನಲಿ ಅನುಮಾನ ಇರಲಿಲ್ಲ
ನನ್ನನ್ನೇ ಮರೆತಿದ್ದೆ ನಿನ್ನನ್ನೇ ನಂಬಿದ್ದೆ
ನೀನ್ಯಾಕೋ ನಂಬಿಕೆಗೆ ಅರ್ಹಳಾಗಿಲ್ಲ

ದಿನಗಳು ಕಳೆದಾಯ್ತು ನಿಜಬಣ್ಣ ತಿಳಿದಾಯ್ತು
ಬಿಳುಪ ಹಿಂದಿನ ಕಪ್ಪು ನೀನು ಎಂದಾಯ್ತು
ನಂಬಿಕೆಟ್ಟಿಲ್ಲ ನಾನು ಬದುಕ ತಿಳಿಸಿದೆ ನೀನು
ಪ್ರೀತಿ ಪಾಠವ ಕಲಿಸಿದ ಕಹಿ ಜೇನು ನೀನು

ಯುವ ಪ್ರೇಮಿಗಳಿಗಾಗಿ ಪವನ್ :-