ಎಷ್ಟು ಪವಿತ್ರನಾಗಿದ್ದ ಅವನು
ಕಷ್ಟದಲಿ ಇದ್ದರೂ ನಿಷ್ಠನಾಗಿದ್ದ
ಹಿರಿಯರಿಗೆ ಗೌರವ ಕಿರಿಯರಿಗೆ ಮನ್ನಣೆ
ಹೆಂಗಳೆಯರೆಂದರೆ ಅಮ್ಮನದೇ ಅಕ್ಕರೆ
ಎಷ್ಟು ಮುಗ್ಧನಾಗಿದ್ದ ಅವನು
ಮಗುವೂ ಒಮ್ಮೊಮ್ಮೆ ನಾಚುವಂತಿದ್ದ
ಎಲ್ಲವನು ತಿಳಿದು ಏನನ್ನು ತೋರದೆ
ಲೋಕದಲಿ ತಾನಿನ್ನೂ ವಿದ್ಯಾರ್ಥಿ ಎಂದಿದ್ದ
ಇಂದು ಹಾಗಿಲ್ಲ
ನದಿಯು ದಿಕ್ಕ ಬದಲಿಸಿದಂತೆ
ಹುಣ್ಣಿಮೆ ಕಳೆದು ಅಮವಾಸ್ಯೆ ಬಂದಂತೆ
ತೋರ್ಪಡಿಕೆ ಅಸೂಯೆಯ ಕಲ್ಮಶವ ತುಂಬುವ
ವೈತರಣಿಯಾದನಲ್ಲ
ಬರಬಾರದಿತ್ತೇನೋ ಆಸ್ತಿ ಐಶ್ವರ್ಯ
ಬರಬಾರದಿತ್ತೇನೋ ಹೆಸರು ಮರ್ಯಾದೆ
ಒಳ್ಳೆತನ ಹರಿಸಿ ದಣಿವಾಯಿತೇನೊ ಮನವು
ನಿಂತು ಸುಖ ಪಡುವ ಮನಸು ಮಾಡಿದನಲ್ಲ
ವೈತರಣಿಯಾದನಲ್ಲ
ಪವನ್ ಪಾರುಪತ್ತೇದಾರ :-