Wednesday, March 21, 2012

ನಗು ಉಕ್ಕಿ ಬಂದಿತ್ತು


ನಗು ಉಕ್ಕಿ ಬಂದಿತ್ತು
ಮತ್ತೇನು ತೋಚದ ಮನಸ್ಸು
ಮತ್ತಷ್ಟು ಮೊಗವನ್ನರಳಿಸಿ
ಕಣ್ಣಿನಲ್ಲೊಂದು ಮಿಂಚು ಹರಿಸಿ
ಮೊಗದ ನರಗಳನೆಲ್ಲ ನಾಟ್ಯಮಾಡಿಸಿತ್ತು
ನಗು ಉಕ್ಕಿ ಬಂದಿತ್ತು

ಸಲುಗೆಯ ಮಿತಿ ನಾವು ದಾಟಿರಲೇ ಇಲ್ಲ
ಸುಮ್ಮನೆ ಇನ್ನೊಬ್ಬರ ಕೊಂಕಿಸಿಯೂ ಇಲ್ಲ
ಹೀಯಾಳಿಸುವಾಸೆ ಇಬ್ಬರಿಗು ಇರಲಿಲ್ಲ
ಕಣ್ಣಿನ ಮಾತುಗಳೆ ಇಬ್ಬರಿಗು ತಿಳಿದು
ತಂಪಿನ ಸಂಜೆಯನೂ ನಾಚಿಸುವಂತಹ
ನಗು ಉಕ್ಕಿ ಬಂತಿತ್ತು

ಹಿಂದಿನದ ನೆನೆದವು ಇಂದಿನದ ನೆನೆದವು
ನಡುವಿನ ಸಮಯದ ಮೆಲುಕು ಮೂಡಿತ್ತು
ಕಿತ್ತಾಟ ಪರದಾಟ ಹೊಡೆದಾಟ ನೆನೆದು
ಮಾತು ಬಿಟ್ಟಂತಹ ಕಹಿ ಘಳಿಗೆ ಕೂಡ
ಸಿಹಿಯಾಗಿ ಮನವನ್ನು ತಣಿಸಿಬಿಟ್ಟಿತ್ತು
ನಗುವು ಉಕ್ಕಿ ಬಂದಿತ್ತು

ಸಣ್ಣ ನಗು ಶತ್ರುವನ್ನೂ ಮಿತ್ರನನ್ನಾಗಿ ಮಾಡುತ್ತದೆ
ಪವನ್ ಪಾರುಪತ್ತೇದಾರ :) :)

ಆಡಂಬರದ ಅಬ್ಬರ


ಅಂಗುಷ್ಠದ ಕೊನೆಯಿಂದ
ಜುಟ್ಟಿನ ತುದಿಯವರೆಗೂ
ತುಂಬಿತ್ತು ಆಡಂಬರದ ಆಭರಣ
ಹೊರಗಣ ಅಂದದ ನೆಪಮಾತ್ರ
ಒಳಗಣ ಸುಪ್ತದಲಿ ಅಡಗಿತ್ತು
ಆಡಂಬರದ ಅಬ್ಬರ

ನೋಡಿದವರೆಲ್ಲ ಮೆಚ್ಚಿದರು
ಕೆಲೆವರು ಹೊಟ್ಟೆಕಿಚ್ಚಿದರು
ಇನ್ನು ಕೆಲವರು ಚುಚ್ಚಿದರು ಕೂಡ
ತಮ್ಮ ಆಡಂಬರವ ಮೆರೆದು

ಬಂಧು ಮನದಲ್ಲಿ ಪ್ರೀತಿ ಇರಲಿಲ್ಲ
ಬಂಧಿಸಿಟ್ಟಿತ್ತು ಅವರ ಮನವ
ನಿನ್ನ ಆಡಂಬರದ ವೇಷ
ಗೆಳೆಯರಲಿ ಗೆಲುವಿಲ್ಲ
ಬೆರೆಯುವ ಮನವಿಲ್ಲ
ಆಡಂಬರ ಸ್ನೇಹಕೆ ಪರದೆ ಹೆಣೆದಿತ್ತು

ತೊಟ್ಟರೆ ನೀನು ಮುಗುಳ್ನಗೆಯ ಆಭರಣ
ಗೆಳೆತನದ ಬೆಳೆಗೆ ಇಳುವರಿ ಹೆಚ್ಚು
ಹಂಚಿದಷ್ಟೂ ಕರಗಲ್ಲ ಹಣ ನೀಡಬೇಕಿಲ್ಲ
ನಿರ್ಮಿಸುವುದು ನಗುವು ಗೆಳೆತನದ ಸೇತುವೆ

ಸಮಾನ್ಯರಾಗಿರಿ ಆಡಂಬರದ ಅಬ್ಬರ ಬೇಡ

ಪವನ್ ಪಾರುಪತ್ತೇದಾರ:-

ಡಾಂಬರು ಬೇಕಿತ್ತು ಮನಕೆ

ಧೂಳು ಕೊಡವುತ್ತಾ ಸಾಗಿತ್ತು
ಜೀವನವೆಂಬ ವಾಹನ
ಅಸಮಾಧಾನದ ಧೂಳು
ಪರರ ಕಣ್ಣನು ತುಂಬಿ ಬಿಟ್ಟಿತ್ತು

ವೇಗವೇನೋ ಹೆಚ್ಚು ಹೆಚ್ಚು
ಹುಚ್ಛು ಕುದುರೆಯು ಹೆಂಡ ಕುಡಿದಂತೆ
ಇರಲಿಲ್ಲ ಚಿಂತೆ ಲೋಕದೆಡೆಗೆ
ನಡೆದಿದ್ದೇ ದಾರಿಯಾಗಿತ್ತು ಆನೆಯಂತೆ

ಅಡ್ಡ ಬಂದ ದಡ್ಡರೆಲ್ಲರ
ಹಿಂದೆ ಹಾಕಿ ಮುಂದೆ ನುಗ್ಗಿತ್ತು
ಬದುಕ ದಾರಿಯು ಸೆವೆಸುವಾಗ
ಎಗ್ಗು ತಗ್ಗುಗಳ ನುಗ್ಗಿ ನಡೆದಿತ್ತು

ಬದುಕ ದಾರಿ ತೊಳಲಾಟವಾಗಿತ್ತು
ಹಳ್ಳ ಕೊಳ್ಳಗಳ ಬೀಡಿನಂತಿತ್ತು
ಗೆಲುವೇನೋ ಸಿಗುತಿತ್ತು
ಆದರೆ ಧೂಳಿನ ಲೋಕದಲಿ
ಮುದ್ದು ಮನ ಮುಚ್ಚಿಹೋಗಿತ್ತು

ಡಾಂಬರು ಬೇಕಿತ್ತು
ಜೀವನವೆಂಬ ವಾಹನಕ್ಕೆ
ಬದುಕೆಂಬ ರಸ್ತೆಯಲಿ
ಸರಾಗವಾಗಿ ಗುಡುಗಲು
ಪ್ರೀತಿ,ಸ್ನೇಹದ ಡಾಂಬರು ಬೇಕಿತ್ತು

ಪವನ್ ಪಾರುಪತ್ತೇದಾರ :-

Thursday, March 15, 2012

ಕೊಳಾಯಿ ಆಗು ನೀನು

ಬೇಕಾದಾಗ ನಿನ್ನ ಭಾವನೆಗಳ ಧಾರೆ ಹರಿಸಿ
ಬೇಡದ್ದಾಗ ಮನದ ಕೊಳವೆಯಲಿ ಬಂಧಿಸಿಬಿಡು
ತಲೆಮೇಲೊಂದು ತಿರುಗವ ಚಕ್ರವಿಟ್ಟುಕೊ
ಯಾರಿಗೆಷ್ಟು ಭಾವ ಬೇಕೋ
ಅಷ್ಟು ಮಾತ್ರವೆ ತಿರುಗಿಸಿ ಕೊಡು

ಆಗಾಗ ಕಟ್ಟುವುದು ಕಲ್ಮಷದ ಗೂಡು
ನಿಲ್ಲಿಸದಿರು ಭಾವನೆಗಳ ಹರಿವ
ಕೊಡವಿಕೊಂಡು ಸಣ್ಣ ಧಾರೆಯಾಗಾದರು ಸುರಿ
ಕಡ್ಡಿ ತಿವಿದು ಮನ ಶುದ್ಧಿ ಮಾಡಲು
ನಿನಗಿದೆ ಒಳ್ಳೆಯ ಗೆಳೆಯರ ಬಳಗ

ನೋವ ಕೊಳವೆಯಲೆಂದು ತುಂಬಿಕೊಳ್ಳದಿರು
ಕಲ್ಮಷಕೆ ಕಾರಣ ನೋವ ನೆನಪುಗಳು
ತಲೆಮೇಲಿನ ಚಕ್ರಕೆ ಒಮ್ಮೆ ಓಘವ ನೀಡು
ಹರಿದು ಸೇರಲಿ ದೂರದ ಕಲ್ಮಷದ ಕಡಲು

ಶುದ್ಧವಾಗಿರಲಿ ನಿನ್ನ ಈ ಮನದ ಕೊಳವೆ
ದೂರವಿರಲಿ ದುರಭಿಮಾನದ ದುರ್ನಾತದಿಂದ
ಪ್ರೀತಿ ಹರಿಯಲಿ ಕೊಳವೆ ಮೂಲೆ ಮೂಲೆಯಲ್ಲಿ
ಸ್ನೇಹ ಹರಿಸು ನೀ ಮನದ ಕೊಳಾಯಲ್ಲಿ

ಪವನ್ ಪಾರುಪತ್ತೇದಾರ :-










Monday, March 12, 2012

ಅಲ್ಪ ವಿರಾಮವಿರಲಿ ಬದುಕಿನಲಿ

ಅಲ್ಪ ವಿರಾಮವಿರಲಿ ಬದುಕಿನಲಿ
ಅತಿವೇಗಕ್ಕಿರಲಿ ಕಡಿವಾಣ
ಹಿಂಜರಿಕೆ ಇರಲಿ ನಿರ್ಧಾರಗಳಿಗೆ
ಹೆದರಿಕೆಯು ಇರಲಿ ಫಲಿತಾಂಶಗಳೆಡೆಗೆ

ಈಜು ಬರುವುದು ಎಂದು ಕಡೆಗಣಿಸದಿರು ಸಾಗರವ
ಕೈ ಕಾಲು ಸೋತರೆ ನಿನ್ನುಸಿರು ನಿಂತಂತೆ
ದೇಹವೆಲ್ಲವು ಜಲಚರದ ಆಹಾರ
ನಿನ್ನ ಛಲದ ಮಂಟಪ ನೀಲಿಗಟ್ಟಾಯ್ತು

ಪ್ರಿಯತಮೆಯ ಮಾಯೆಯಲಿ ಅತಿಪ್ರೀತಿ ತೋರದಿರು
ಅತಿಯಾದ ಅಮೃತವು ವಿಷವಾಗಬಹುದು
ಅತಿ ಎಂಬ ಆಕೃತಿಯ ಛಾಯೆ ಪ್ರೀತಿಗೆ ನೀಡಿ
ಮುರಿದು ಬೀಳದಿರಲಿ ಗೆಳೆಯ ಪ್ರೀತಿಯ ಪ್ರತಿಮೆ

ರಥದ ಹಿಡಿತವು ನಿನಗೆ ಕರಗತವೆ ಆಗಿರಲಿ
ಸಣ್ಣ ಮೊಳೆಯೇ ಸಾಕು ಅಂತ್ಯ ಗೊಳಿಸಲು ಓಟ
ರಥದ ಚಕ್ರಕೆ ಹೊಸ ಚಕ್ರ ಬದಲಿಸಬಹುದು
ಬದುಕ ಚಕ್ರಕೆ ಗೆಳೆಯ ಉಂಟೆ ಬದಲು

ಕೋಟೆ ನಿರ್ಮಿಸದಿರು ಅಹಂ ನ ಇಟ್ಟಿಗೆಯಲಿ
ಸೋಲಿನ ಪನ್ನೀರಿಗೆ ಕರಗಿ ನೀರಾದೀತು
ಕಾಲ ಯಾವಾಗಲೂ ನಿನ್ನ ಯಜಮಾನ
ನಿಂತು ಗೌವರವಿಸು ಅದಕೆ ಆತುರವ ಬಿಟ್ಟು

ಅಲ್ಪ ವಿರಾಮವಿರಲಿ ಬದುಕಿನಲಿ

ಪವನ್ ಪಾರುಪತ್ತೇದಾರ :-

chitrakrupe : safestart-safetrack.com

ಹಿರಿಗೋಡೆ ಉರುಳಿದೆ

ಹಲವು ವರುಷಗಳಿಂದ
ಬಿಸಿಲೆನದೆ ಮಳೆಯೆನದೆ
ನೊಂದಾಯ್ತು ಬೆಂದಾಯ್ತು
ಕಡೆಗೊಮ್ಮೆ ವಯಸಿನ
ಪಾಷದಲಿ ಸಿಲುಕಿ
ಹಿರಿಗೋಡೆ ಉರುಳಿದೆ

ಶತ್ರುವಿನ ಶೂಲ ಎಷ್ಟು ತಾಕಿದೆಯೋ
ಹಿತಶತ್ರುವಿನ ಮಾತು ಎಷ್ಟು ನೋಯಿಸಿದೆಯೋ
ಸುತ್ತಲಿನ ಗೋಡೆಗಳು ಶಕ್ತಿ ಕುಂದಾಯ್ತು
ಒಂಟಿ ಗೋಡೆಯಿಂದ ಮನೆ ಸಾಧ್ಯವೇನು
ಎಲ್ಲಕ್ಕೂ ಉತ್ತರವ ಇಷ್ಟು ದಿನ ನೀಡಿತ್ತು
ಗೋಡೆಯಲಿ ಶಕ್ತಿ ಇದ್ದರೂ ಕುಸಿದಿತ್ತು

ಒಂದೊಂದು ಇಟ್ಟಿಗೆಯಲು ಅಡಗಿದೆ ನಿನ್ನ ಶ್ರಮ
ಇಷ್ಟು ವರುಷಗಳಾದರು ಇನ್ನು ಕರಗಿಲ್ಲ
ದೇಶದೆಡಗಿನ ನಿನ್ನಯ ಪ್ರೀತಿ ಅಭಿಮಾನ
ಕೊನೆ ಉಸಿರಿನೊರೆಗು ಕಡಿಮೆ ಆಗಲ್ಲ
ತಂಡದಲಿ ನೀನಿಂದು ಇಲ್ಲದಿರಬಹುದು
ಕಲೆಯೆಂದು ಕುಗ್ಗಲ್ಲ ಕನ್ನಡದ ಹುಡುಗ

ರಾಹುಲ್ ದ್ರಾವಿಡ್ ವಿದಾಯಕ್ಕಾಗಿ, ಪವನ್ ಪಾರುಪತ್ತೇದಾರ :-

Thursday, March 8, 2012

ಹೊಗಳುಭಟ್ಟ

ಒಂದು ಕಾಲವಿತ್ತಂತೆ
ಬಹುಪರಾಕಿಗೆ ಬಹುಮಾನ ಇತ್ತಂತೆ
ಅಸೂಯೆಯ ಅಳುಕಿಗು ಅವಮಾನದ ನೋವಿಗೂ
ಬಹುಪರಾಕ್ ಹೇಳಿದರೆ ಸಾಕಂತೆ
ಬಹುಮಾನ ಇತ್ತಂತೆ

ಅಂತರಂಗದ ಸಂತೆಯ ನೋಡುವವರಿರಲಿಲ್ಲ
ಒಳ್ಳೆಯವ ಕೆಟ್ಟವ ಎನ್ನೊ ಹಂಗಿಲ್ಲ
ತನ್ನತನ ಕಳೆದರು ಚಿಂತೆಯೇ ಇಲ್ಲ
ಎದುರಿನವ ಅಟ್ಟದಲಿ ಕೂರಬೇಕಲ್ಲ,
ಬಹುಮಾನವಷ್ಟೆ ಮೊದಲ ಆದ್ಯತೆ ನಿನಗೆ

ಕ್ರೂರಿಯೋ ದ್ರೋಹಿಯೋ ಅರಿವು ನಿನಗಿಲ್ಲ
ಪಾಪದಲಿ ಪಾಲು ನಿನಗು ಬಂತಲ್ಲ
ಬಹುಮಾನವಷ್ಟೆ ಮೊದಲ ಆದ್ಯತೆ ನಿನಗೆ

ಅಂತರಂಗದ ಸಂತೆಯಲಿ ಬಹಳಷ್ಟು ವಸ್ತುಗಳು
ಮೂಲೆಗುಂಪಾಗಿದೆ ಒಳ್ಳೆತನದಿಂದ
ತನ್ನತನ ತಾನೆ ಕಳೆದಿದೆ ಆಸೆಯಿಂದ
ಕ್ರೂರಿಗಳು ದ್ರೋಹಿಗಳು ಮೆರೆಯುವರು ನಿನ್ನಿಂದ
ಪಾಪವದು ಸುತ್ತುತಿದೆ ಹೊಗಳಿಕೆಯ ಸುಳಿಯಿಂದ

ಕೊನೆಗೂಮ್ಮೆ ನಿನಗೆ ಲಭಿಸಿದ ಫಲವೇನು??
ಬಹುಪರಾಕಿಗೊಂದು ಬಹುಮಾನ
ಹೊಗಳುಭಟ್ಟನೆಂಬ ಬಿರುದು....... !

ಪವನ್ ಪಾರುಪತ್ತೇದಾರ :-