Monday, June 13, 2011

ಸ್ವಲ್ಪವಾದರೂ ಸಭ್ಯತೆ ಇರಲಿ.........!!!

         ಬಹಳ ದಿನಗಳ ನಂತರ ಬೆಂಗಳೂರಿನಲ್ಲಿ ಓಡಾಡಬೇಕಾದ ಅನಿವಾರ್ಯತೆ ಬಂದಿತ್ತು. ಪ್ರಾಜೆಕ್ಟ್  ವರ್ಕ್ ಭೂತ ತಲೆಯ ಮೇಲೆ ಕೂತಿತ್ತು ಇಷ್ಟವಿಲ್ಲದಿದ್ದರೂ ಮಾಡಲೇಬೇಕಾದ ಕೆಲಸ ಅದು, ಇಂಜಿನಿಯರಿಂಗ್ ಮುಗಿದು ಹೋಯ್ತು ಅಂತ ಅಂದುಕೊಳ್ಳುತ್ತಿರುವಾಗಲೇ ಇದೊಂದು ಕೆಲಸ ಬಾಕಿ ಇದೆ ಎಂದು ಆಗಾಗ ಮೊಟಕುವ ಕುಟುಕುವ ವಸ್ತು ಈ ಪ್ರಾಜೆಕ್ಟ್ ವರ್ಕ್.
         
         ಅದೇ ಗುಂಗಿನಲ್ಲಿ ಮಡಿವಾಳ ಸಿಲ್ಕ್ ಬೋರ್ಡ್ ಅಲ್ಲಿ 201 no ಬಸ್ ಹತ್ತಿದೆ. ಅದೇನೋ ನನ್ನ ಅದೃಷ್ಟ ಬಸ್ ಖಾಲಿ ಖಾಲಿ ಆಗಿತ್ತು. ಬಂದು ಹಿಂದಿನ ಸೀಟ್ ಅಲ್ಲಿ ಕಿಟಕಿ ಪಕ್ಕ ಕೂತೆ. ೪೦ ರುಪಾಯಿ ಕೊಟ್ಟು ಪಾಸು ತೆಗೆದುಕೊಂಡರೆ ಇಡಿ ಬೆಂಗಳೂರೇ ತಿರುಗಬಹುದಾದ ಒಂದು ಸೌಕರ್ಯ ನಿಮಗೆಲ್ಲ ಗೊತ್ತಿರುವಂತೆ ಇಲ್ಲಿದೆ. ನಾನು ಅ ಪಾಸ್ ಖರೀದಿಸಿಯೇ ಓಡಾಡುತಿದ್ದೆ. ಬಸ್ ನಲ್ಲಿ ಕಡೆಯ ಸೀಟ್ ಅಲ್ಲಿ ಯುವ ಜೋಡಿಯೊಂದು ಕೂತಿತ್ತು.ನನ್ನ ಪಕ್ಕ ಒಬ್ಬ ತಾತ ಬಂದು ಕೂತರು, ಸುತ್ತಲು ಒಂದಷ್ಟು ಹಿರಿಯರು ಇದ್ದರು. ನನಗೋ, ಎಲ್ಲರಿಗು ಇದ್ದಂತೆ ಆ ಯುವ ಜೋಡಿಯನ್ನು ನೋಡುವ ಕುತೂಹಲ, ಅ ಕುತೂಹಲದಿಂದಲೇ ಆಗಾಗ ಮೆಲ್ಲಗೆ ಅವರಿಗೆ ತಿಳಿಯದಂತೆ ಅವರನ್ನು ಗಮನಿಸುತ್ತ ಇದ್ದೆ. ನಾ ಮಾತ್ರ ಅಲ್ಲ ಅಲ್ಲಿದ್ದ ಎಲ್ಲರು ತಮ್ಮ ಗಮನವನ್ನು ಅ ಕಡೆ ಇಟ್ಟುಕೊಂಡೆ ಇದ್ದರು. ಕ೦ಡಕ್ಟರ್ ಟಿಕೆಟ್ ಕೊಡುವ ನೆಪದಲ್ಲಿ ಆಗಾಗ ಹಿಂದೆ ಬಂದು ಮುಖ ಸಿಂಡರಿಸುತ್ತ  ಹೋಗುತಿದ್ದ. ನನಗಂತೂ ಇನ್ನು ಕುತೂಹಲ ಹೆಚ್ಚಾಯಿತು. ಇನ್ನು ಸ್ವಲ್ಪ ಗಮನಿಸಿದೆ ಅ ಹುಡುಗ ಹುಡುಗಿಯ ಹೆಗಲ ಮೇಲೆ ಕೈ ಹಾಕಿಕೊಂಡಿದ್ದ, ಆಗಾಗ ಕಿವಿಯಲ್ಲಿ ಏನೇನೋ ಹೇಳುತಿದ್ದ, ಒಂದೆರಡು ಬರಿ ಮುತ್ತನ್ನು ಕೊಟ್ಟ. ಹೀಗೆ ಒಂದೆರಡು ಸ್ಟಾಪ್ ಆದಮೇಲೆ ಕ೦ಡಕ್ಟರ್ ಬಂದವನೇ, ಎದ್ದೆಲ್ರಿ ಮೇಲೆ ನೀವು ಅಂದ, ಅದಕ್ಕವರು ಯಾಕೆ ಅಂತ ಬಲು ದರ್ಪದಿಂದ ಕೇಳಿದರು ಅದಕ್ಕೆ ನಮ್ಮ ಕ೦ಡಕ್ಟರ್, ನಾನು ನೋಡ್ತಾನೆ ಇದೀನಿ ಆಗ್ಲಿಂದ ಏನು ನೀವು ಮಾಡ್ತಿರೋ ಕೆಲಸ?? ಇದೆಲ್ಲ ಮಾಡೋಹಾಗಿದ್ರೆ ಲಾಲ್ ಭಾಗೋ ಕಬ್ಬನ್ ಪರ್ಕೋ ಹೋಗಿ, BTS ಬಸ್ ಏನು ಬೆಡ್ ರೂಂ ಅಂದುಕೊಂಡಿದ್ದಿರ ಅಂತ ಸರಿಯಾಗಿ ಚಾರ್ಜ್ ತೊಗೊಂಡ. ಅಷ್ಟರಲ್ಲೇ ಅಲ್ಲಿದ್ದ ಜನರು ಕೂಡ ಏನಮ್ಮ , ನಿನಗಾದ್ರು ಮಾನ ಮರ್ಯಾದೆ ಇಲ್ವಾ ಎಲ್ಲಿರೋದು ನಿಮ್ಮ ಮನೆ, ಏನು ನಿಮ್ಮ ತಂದೆ ಹೆಸರು ಅಂತ ಎಲ್ಲ ಪ್ರಶ್ನೆ ಮಾಡಲು ಶುರು ಮಾಡಿದ್ದರು. ಅಷ್ಟರಲ್ಲೇ ಮುಂದಿನ ಸ್ಟಾಪ್ ಬಂದಿತ್ತು ಇಬ್ಬರು ಇಳಿದು ಏನು ಮಾತನಾಡದೆ ಕಾಲುಕಿತ್ತರು. 

         ಅವರಿಬ್ಬರೂ ಪ್ರೆಮಿಗಳಾಗಿರಬಹುದು. ಎರಡು ದೇಹ ಒಂದೇ ಅತ್ಮವಾಗಿರಬಹುದು ಆದರೆ ಅದನ್ನು ತೋರ್ಪಡಿಸಿಕೊಳ್ಳುವಂತ ಸ್ಥಳ ಅದಲ್ಲ.ಸಾರ್ವಜನಿಕ ಸ್ಥಳಗಳಲ್ಲಿ ಅಷ್ಟೊಂದು ಪ್ರೀತಿಯ ನಿವೇದನೆ ಮಾಡಬಾರದು ಅನ್ನುವುದು ನನ್ನ ಅಭಿಪ್ರಾಯ. ಅವರು ಇಳಿದು ಹೋದಮೇಲೆ ಅ ಕ೦ಡಕ್ಟರ್ ಹೇಳಿದರು ಸರ್ ಅವರದ್ದು ಎಲ್ಲಿ ಬೇಕಾದರು ಓಡಾಡಬಹುದಾದಂತ ಪಾಸು, ಕಾಲೇಜ್ ಗೆ ಹೋಗದೆ ಬಸ್ ಗಳಲ್ಲಿ ಕಡೆಯ ಸೀಟ್ ಗಳಲ್ಲಿ ಕೂತು ತಿರುಗಾಡುವುದೇ ಇವರ ಕೆಲಸ. ನಾನು ಆಗಾಗ ನೋಡುತ್ತಿರುತ್ತೇನೆ, ಆದರೆ ನನಗ್ಯಾಕೆ ಅವರಿವರ ತಂಟೆ ಎಂದು ಏನು ಕೇಳುತ್ತಿರಲಿಲ್ಲ. ನನಗೂ  ಅ ಹುಡುಗಿಯದೆ ವಯಸ್ಸಿನ ಮಗಳಿದ್ದಾಳೆ, ಒಮ್ಮೊಮ್ಮೆ ಭಯವಾಗುತ್ತದೆ ಸರ್ ಇಂತವರನ್ನ ನೋಡಿದ್ರೆ ಅಂದ. ಖಂಡಿತ ಅವನ ಮನಸ್ಸಿನ್ನಲಿ ಎಷ್ಟು ಭಯ ಹುಟ್ಟಿರಬಹುದಲ್ವಾ?? 
           
          ಇಂಥಹ ಕೆಲವು ಯುವ ಪ್ರೇಮಿಗಳಿಂದ ಇಡೀ ಪ್ರೇಮಿಗಳ ಸಮಾಜವೇ ಮುಜುಗರಕ್ಕೊಳಗಾಗಬಹುದಲ್ವೆ?? ಪ್ರೀತಿಸುವುದು ತಪ್ಪಲ್ಲ, ಆದರೆ ನಿಮ್ಮ ಪ್ರೀತಿ ತೋರ್ಪಡಿಕೆಯದ್ದಾಗದಿರಲಿ. ನಾಲ್ಕು ಜನ ಇದ್ದಾರೆ ಅವರ ಮುಂದೆ ನನ್ನ ಗೆಳತಿ ಅಥವಾ ಗೆಳೆಯ ನನ್ನ ಮುದ್ದಿಸಬೇಕು, ನನಗೆ ತಿನ್ನಿಸಬೇಕು ಎಂದೆಲ್ಲ ನಿರೀಕ್ಷೆ ಬೇಡ. ಒಂದು ಪಕ್ಷ ಮದುವೆಯಾಗಿದ್ದಲ್ಲಿ  ನಿಮಗಿಷ್ಟ ಬಂದಂತೆ ಇರಬಹುದಂತೇನಲ್ಲ, ಸಾರ್ವಜನಿಕ ಸ್ಥಳಗಳಲ್ಲಿ ಅಕ್ಕ ಪಕ್ಕ ಜನರಿದ್ದಾರೆ ಎಂಬ ತಿಳುವಳಿಕೆಯಿಂದ ವರ್ತಿಸಿದರೆ ಸಾಕು. ಇಷ್ಟು ಮಾತ್ರವಲ್ಲದೆ ಬೆಂಗಳೂರಿನ ಯಾವ ಮಾಲ್ಗಳಿಗೆ ಹೋದರು ಪ್ರೇಮಿಗಳದೆ ಕಾರುಬಾರು, ಯಾವ ಪಾರ್ಕ್ ಗಳಿಗೆ ಹೋದರು ಪ್ರೆಮಿಗಲದೆ ದರ್ಬಾರು. ಇತ್ತೀಚಿಗೆ ಪ್ರೇಮ ಫಲಿಸಲಿ ಎಂದೋ ಏನೋ ದೇವಾಲಯಗಳಲ್ಲೂ ತುಂಬಿಕೊಂಡಿರುತ್ತಾರೆ. ಅವರು ಎಲ್ಲಿ ಬೇಕಾದರೂ ಇರಲಿ ಆದರೆ ಹೇಗೆ ಬೇಕಾದರೂ ಇರುವುದು ಬೇಡ. ನಾ ಇಲ್ಲಿ moral policing  ಮಾಡುತ್ತಿಲ್ಲ. ಸಮಾಜದಲ್ಲಿ ಸ್ವಲ್ಪವಾದರೂ ಸಭ್ಯತೆ ಕಾಣಲಿ ಎಂಬ ಬಯಕೆ ಅಷ್ಟೇ. ಹಾಗಂತ ಎಲ್ಲರು ಹೀಗೆ ಇರುವುದಿಲ್ಲ. ಇರಲಿ ಎಲ್ಲಾ ಕಡೆ  ಪ್ರೇಮಿಗಳು, ಆದರೆ  ಅವರ ಮನಸ್ಸಿನಲ್ಲಿ, ಸುತ್ತಲು ತಮ್ಮ ತಂದೆ ತಾಯಂದಿರ ವಯಸ್ಸಿನ ಜನ ಇರುತ್ತಾರೆ, ತಾತಂದಿರು ಅಜ್ಜಿಯಂದಿರು ಇರುತ್ತಾರೆ, ತಮಗಿಂತ ಪುಟ್ಟ ಮಕ್ಕಳು ಇರುತ್ತಾರೆ ಅವರ ಮೇಲೆ ಯಾವ ರೀತಿ ಪ್ರಭಾವ ಬೀರಬಹುದು ಅವರು ತಮ್ಮ ಬಗ್ಗೆ ಯಾವ ರೀತಿ ಆಲೋಚಿಸಬಹುದು ಎಂಬುದರ ಅರಿವಿರಲಿ. ಅಯ್ಯೋ ಯಾರು ಏನು ಅಂದುಕೊಂಡರೆ ನಮಗೇನು ಎಂಬ ಉಡಾಫೆ ಬೇಡ. ಪ್ರೇಮಿಗಳಿಗೆಲ್ಲ ನನ್ನ ಪ್ರೀತಿಯ ಕಡೆಯ ವಿನಂತಿ,

ಮಿಡಿಯುವ ಮನಸುಗಳು ಎಂದೆಂದು ಇರಲಿ
ಪ್ರೇಮಿಗಳ ಕನಸುಗಳು ನನಸಾಗುತಿರಲಿ
ನಿಮ್ಮಗಳ ಪ್ರೇಮಕ್ಕೆ ಎಂದು ತೊಡಕಾಗದಿರಲಿ   

                                           " ಸ್ವಲ್ಪವಾದರೂ ನಿಮ್ಮ ಪ್ರೇಮದಲ್ಲಿ ಸಭ್ಯತೆ ಇರಲಿ "       

2 comments: