Thursday, June 23, 2011

ನನ್ನ ಇಂಜಿನಿಯರಿಂಗ್ ಬದುಕಿನ ಕಡೆಯ 22 ಘಂಟೆಗಳು...............!!!

            ಅಂದು ದಿನಾಂಕ ಜೂನ್ 16 2011 ಮಧ್ಯಾಹ್ನ 2   ಘಂಟೆ ಆಗಿತ್ತು ಇಂಜಿನಿಯರಿಂಗ್ ಬದುಕಿನ ಕಟ್ಟ ಕಡೆಯ ಪರೀಕ್ಷೆಗೆ ಕೇವಲ 22 ಘಂಟೆ ಮಾತ್ರ ಉಳಿದಿತ್ತು, ೪ ವರ್ಷಗಳ ಕಠಿಣ ಪರಿಶ್ರಮದ ನಂತರ ಕೊನೆಯ ಸೆಮಿಸ್ಟರ್ ನ ಪ್ರಾಜೆಕ್ಟ್ ವರ್ಕ್ ನಮ್ಮ ಭವಿಷ್ಯವನ್ನು ನಿರ್ಧಾರ ಮಾಡುವುದು. ಅದನ್ನು ಬಹಳ ಕಷ್ಟ ಪಟ್ಟು ಜಯನಗರದಲ್ಲಿನ ಒಂದು consultacy ಅಲ್ಲಿ ಮಾಡಿದ್ದೆವು. ಸಮಾಜದಲ್ಲಿ ಮತದಾನ ಮಾಡುವುದರಲ್ಲಿ ಆಗುವ ಲೋಪದೋಷಗಳನ್ನು ಸರಿಪಡಿಸಲೆಂದು ನಾವು finger print recognisation sensor ಉಪಯೋಗಿಸಿ ಒಂದು ಮಾಡೆಲ್ ರೆಡಿ ಮಾಡಿದ್ದೆವು.ನಾನು ಸಂದೀಪ್ ರಘು ಮತ್ತು ಮಂಜು ಸೇರಿ ಈ ಮಾಡೆಲ್ ಮಾಡಿದ್ದೆವು.

           ಮಧ್ಯಾಹ್ನ ಅಮ್ಮ ಮಾಡಿದ ರಾಗಿಮುದ್ದೆ ಮತ್ತು ಸೊಪ್ಪು ಹುಳಿ ಸವಿಯುತ್ತ ಇದ್ದ ನನಗೆ ಮೊಬೈಲ್ ರಿಂಗಣಿಸಿದ್ದು ತಿಳಿಯಲೇ ಇಲ್ಲ, ಕಡೆಗೆ ಅಮ್ಮ ಪವನ್ ಆಗ್ಲಿಂದ ಮೊಬೈಲ್ ಬಡ್ಕೊತಿದೆ ನೋಡೋ ಅಂದಾಗ ರಾಗಿಮುದ್ದೆಯ ಕಡೆಯ ತುಂಡು ನನ್ನ ಬಾಯಲಿತ್ತು. ಹಾ ನೋಡ್ತಿನಮ್ಮ ಎಂದು ಮೊಬೈಲ್ ಬಳಿಗೆ ಹೋಗುವಷ್ಟರಲ್ಲಿ ಕಾಲ್ ಮತ್ತೆ ಕಟ್ ಆಗಿತ್ತು. ಮೊಬೈಲ್ ನ ದಿಸ್ಪ್ಳಿ, 5 missed calls ಎಂದು ತೋರಿಸುತಿತ್ತು. ನೋಡಿದರೆ 4 ಮಿಸ್ ಕಾಲ್ ಸಂದೀಪ್ ಮತ್ತು ಒಂದು ಮಂಜುದು ಆಗಿತ್ತು.
ನಾನು ಸಂದೀಪ್ ಗೆ ಕರೆ ಮಾಡಿದೆ, ಸಂದೀಪ್ ಒಂಥರಾ ಗಾಬರಿ ಹುಡುಗ, ನೋಡಲು ಸದೃಢ ಮತ್ತು ಇರೋದು ಶಿವಾಜಿನಗರದಂತ ಸುಂದರ ಏರಿಯದಲ್ಲಿ.ಮನೆಯಲ್ಲಿ ತೆಲುಗು ಭಾಷೆ ಮಾತನಾಡುವರಾದರು ಶಿವಾಜಿನಗರ ಅವನನ್ನು ಅರ್ಧ ತಮಿಳಿಗನಾಗಿ ಮಾಡಿದೆ ಮತ್ತು ಅಲ್ಲಿನ ವಾತಾವರಣ ಅವನನ್ನು ಶಾರ್ಟ್ temperd ಮಾಡಿದೆ. ಸಂದೀಪ್ ಕರೆ recieve  ಮಾಡುತ್ತಲೇ ಮಚ್ಚ...... ಅಂತ ಅರಚಿದ, ನಾನು ಏನೋ, ಏನಾಯ್ತೋ, ರಿಪೋರ್ಟ್ ಚೆನ್ನಾಗಿ ಓದಿ ರೆಡಿ ಆಗಿ ಬಾ ನಾಳೆ ಸೆಮಿನಾರ್ ಗೆ ಅಂದೆ. ಅದಕ್ಕವನು ಮಾಡೆಲ್ ಇಲ್ಲಿ ಎಕ್ಕುಟ್ಟಿ ಹೋಗಿದೆ ಇನ್ನು ಸೆಮಿನಾರ್ ಎಲ್ಲಿಂದ ಕೊಡೋದೋ ಅಂದ. ಅ ಮಾತು ಕೇಳಿದ ಒಡನೆ ಇನ್ನೊಂದು ರಾಗಿಮುದ್ದೆ  ತಿನ್ನಬೇಕೆನಿಸಿದ್ದ ನನ್ನ ಅಸೆ ಹಾಗೆ ಕರಗಿ ಹೋಯ್ತು 2 ಲೋಟ ನೀರು ಗಟಗಟ ಕುಡಿದು ನಂತರ ಮಾತಿಗಿಳಿದೆ. 

           ನೆನ್ನೆ ತನಕ ಸರಿಯಾಗಿದ್ದ ಪ್ರಾಜೆಕ್ಟ್ ಇದ್ದಕಿದ್ದಂತೆ ಏನಾಯ್ತೋ ಮಗ ಅಂದೆ, ಅದಕ್ಕೆ ಅವನು ಗೊತ್ತಿಲ್ಲ ಕಣೋ ಮನೆಯಲ್ಲಿ ಟೆಸ್ಟ್ ಮಾಡಣ ಅಂತ ನೋಡಿದೆ, ಆದ್ರೆ ಇದ್ದಕಿದ್ದಂತೆ adaptor ಢಂ ಅಂತು ನಂತರ ಬೇರೆ adaptor ಹಾಕಿ ಆನ್ ಮಾಡಿದ್ರೆ sensor detect ಆಗ್ತಿಲ್ಲ display ಬರ್ತಿಲ್ಲ ಅಂದ. ನಮ್ಮ ಪ್ರಾಜೆಕ್ಟ್ ನಲ್ಲಿ ಸೆನ್ಸಾರ್ ಮತ್ತು display ನೆ ಜೀವಾಳ, ಅವೆರಡೆ ಇಲ್ಲದೆ ಹೋದ್ರೆ ನಾಳಿನ exam ಗೋವಿಂದ ಗೋವಿಂದ. ಅವನಿಗೆ ಮತ್ತೆ ಕರೆ ಮಾಡುವೆ ಎಂದು ತಿಳಿಸಿ ಜಯನಗರದ ನಮ್ಮ consultancy ಗೆ ಫೋನಾಯಿಸಿದೆ. ಅಲ್ಲಿ ಕರೆ recieve ಮಾಡಿಲ್ಲ ನಂತರ ನಮ್ಮ ಪ್ರಾಜೆಕ್ಟ್ ರೆಡಿ ಮಾಡಿಕೊಟ್ಟ ವ್ಯಕ್ತಿಗೆ ಕರೆ ಮಾಡಿದೆ not reachable ಎಂದು ಕ್ಯಾಕರಿಸಿ ಉಗಿದಂತೆ ಒಂದು ಹೆಣ್ಣು ಧ್ವನಿ ಹೇಳಿತು. ನನಗೆ ಬಹಳ ಭಯ ಮತ್ತು ಗೊಂದಲ ಉಂಟಾಯ್ತು. ಹಿಂದೊಮ್ಮೆ ಪ್ರಾಜೆಕ್ಟ್ ಮಾಡುವಾಗ consultancy ಅಲ್ಲಿ ಕೆಲಸ ಮಾಡುವ ಒಬ್ಬ ಹುಡುಗನ ಮೊಬೈಲ್ ನಂಬರ್ ಪಡೆದಿದ್ದೆ ಅ ನಂಬರ್ ಗೆ ಕರೆ ಮಾಡಿದೆ ಅದೃಷ್ಟವಶಾತ್ ಅದು ರಿಂಗಾಯಿತು recieve ಮಾಡಿದ ಅ ಹುಡುಗ ಯಾರು ಬೇಕಿತ್ತು ಎಂದ ನಾನು ಸರ್ ನಾನು ಪವನ್ ನಿಮ್ಮ ಬಳಿ ಪ್ರಾಜೆಕ್ಟ್ ಮಾಡಿದ್ದೆ ನೆನಪಿದ್ಯ ಅಂದೆ ಅದಕ್ಕವನು ಓಒ ಹೇಳಿ ಏನ್ ಸಮಾಚಾರ ಅಂದ ಸಧ್ಯ ಗುರುತಿದೆಯಲ್ಲ ಅಂತ ನಿಟ್ಟುಸಿರು ಬಿಟ್ಟು ಸರ್ ಪ್ರಾಜೆಕ್ಟ್ problem ಆಗಿದೆ ದೊಡ್ಡ ಸರ್ phone notreachabe ಮೇಡಂ recieve ಮಾಡ್ತಿಲ್ಲ ಅಂದೆ. ಅದಕ್ಕವನು ರೀ ಪವನ್ ಇ consultancy ಗಳ ಕಥೆನೇ ಇಷ್ಟು ಕಣ್ರೀ ಅವರಿಗೆನಿದ್ರು ದುಡ್ಡು ಬಂದ್ರೆ ಸಾಕು ಅಮೇಲ್ ನಿಮ್ಮನ್ನ ಕ್ಯಾರೆ ಅನ್ನಲ್ಲ. ನಾನು ಆಫೀಸ್ ನಲ್ಲೆ ಇದ್ದೀನಿ ನೀವು ಯಾವ ಫೋನ್ ಮಾಡಬೇಡಿ ಡೈರೆಕ್ಟ್ ಆಗಿ ಇಲ್ಲಿಗೆ ಬಂದುಬಿಡಿ ರೆಡಿ ಮಾಡಿಕೊಡೋಣ ಅಂದ.ಇನ್ನೇನು ಕರೆ ಕೊನೆ ಮಾಡಬೇಕು ಅಷ್ಟರಲ್ಲಿ ರೀ ಒಂದು ನಿಮಿಷ ಅಂದ ಏನು ಹೇಳಿ ಅಂತ ಕೇಳಿದೆ ಅದಕ್ಕವನು ಯಾವುದೇ ಕಾರಣಕ್ಕೂ ನನಗೆ ಕಾಲ್ ಮಾಡಿದ ವಿಷಯ ನಾನು ಬನ್ನಿ ಎಂದು ಹೇಳಿದ ವಿಷಯ ಮೇಡಂ ಗೆ ಅಗಲಿ ಸರ್ ಗೆ ಅಗಲಿ ಹೇಳಬೇಡ್ರಿ ಅಂದ. ಸಧ್ಯ ಯಾವುದೊ ಒಂದು ದಾರಿ ತೋರಿಸಿದೆಯಲ್ಲ ಪುಣ್ಯಾತ್ಮ ಎಂದು ಸರಿ ಹಾಗೆ ಅಗಲಿ ಎಂದು ಫೋನ್ disconnect ಮಾಡಿದೆ.

         ಜಯನಗರದ ಪ್ರಯಾಣದ ಬಗ್ಗೆ ಚಿಂತಿಸುತ್ತಿರುವಾಗಲೇ ನೆನಪಾದ ನನ್ನ ನೆಚ್ಚಿನ ಗೆಳೆಯ ಶಿವ, ನಾನು ಎಂದು ಅವನ ಹೊಸ ಬೈಕ್ ಕೇಳಿದರು ಇಲ್ಲ ಎನ್ನುವುದಿಲ್ಲ, ಅವನಿಗೆ ಕರೆ ಮಾಡಿದೆ. ಅವನು ಕೋಲಾರದ ಜಮೀನುದಾರ ರೆಡ್ಡಿ ಕುಟುಂಬದ ಹುಡುಗ. ಅವನನ್ನ ನಾನು ಬಿಡ್ದ ಎಂದೇ ಯಾವಾಗಲು ಸಂಭೋಧಿಸುವುದು, ಅವನು ನನ್ನ ಜೋತೆಯವನಾದ್ರು ಬಾಸ್ ಅಂತಾನೆ ನನ್ನ.ಕರೆ ಮಾಡಿದ ಒಡನೆ ಕಾಲ್ recieve ಮಾಡಿದ ಶಿವ ಹೇಳಿ ಬಾಸ್ ಅಂದ. ನಾನು ಬಿಡ್ದ, ಪ್ರಾಜೆಕ್ಟ್ ಹಾಳಾಗಿದೆ ನಾಳೆ ಸೆಮಿನಾರ್ ಇದೆ ಬಹಳ ಜರೂರಾಗಿ ನಿನ್ನ ಬೈಕ್ ಬೇಕು ಅಂದೆ. ಅವ್ನು ಪರೀಕ್ಷೆಯ ತರಾತುರಿಯಲ್ಲಿದ್ದ, ಆದರು ಬಾಸ್ ಏನು ತಲೆ ಕೆಡಿಸಿಕೊಳ್ಳಬೇಡ ನೀನು ಎಲೆಕ್ಟ್ರೋನಿಕ್ ಸಿಟಿ ಗೆ ಬಂದು ಬಿಡು ಗಾಡಿ ಕೊಡ್ತೀನಿ ಅಂದ. ಇನ್ನೇನು ಹೋರಡಬೇಕು ಅನ್ನುವಷ್ಟರಲ್ಲೇ consultancy ಇಂದ ಕರೆ ಬಂತು. ಕರೆ ಮಾಡಿದ್ದು ಅಲ್ಲಿ ಕೆಲಸ ಮಾಡುವ ಮತ್ತೊಬ್ಬ ಹುಡುಗ,  ಸರ್ ನಿಮ್ಮ ಪ್ರಾಜೆಕ್ಟ್ ರೆಡಿ ಮಾಡಿಕೊಡ್ತಿವಿ ಆದರೆ ನಮ್ಮ ಬಾಸ್ ಹೇಳಿದ್ರು 1500 ರು ಖರ್ಚಾಗುತ್ತದೆ ಅಂತ ಅಂದ. ಮನೆಯಲ್ಲಿ ಈಗಾಗಲೇ ಪ್ರಾಜೆಕ್ಟ್ ಹೆಸರಿನಲ್ಲಿ ಬೇಜಾನ್ ಹಣ ತೆಗೆದುಕೊಂಡು ಖರ್ಚು ಮಾಡಿದ್ದೆ, ಮತ್ತೆ ಅಪ್ಪನ ಹತ್ರ  ಕೇಳುವ ಧೈರ್ಯ ಇಲ್ಲದಿದ್ದರೂ ಕೇಳಿದೆ. ಅಪ್ಪ..! ನನಗೆ 1500 ಬೇಕು ಪ್ರಾಜೆಕ್ಟ್ ಹಾಳಾಗಿದೆ ರಿಪೇರಿ ಮಾಡಿಸಬೇಕು ಅಂದೆ. ಅದಕ್ಕೆ ನನ್ನಪ್ಪ ಏನೋ ಮಗನೆ ಎಷ್ಟೋ ಖರ್ಚ ಮಾಡ್ತ್ಯ ಇ ಪ್ರಾಜೆಕ್ಟ್ ಗೋಸ್ಕರ ಅಂತ 1500 ಕೊಟ್ರು. ಸರಿ ಎಲೆಕ್ಟ್ರೋನಿಕ್ ಸಿಟಿಗೆ ನಮ್ಮೂರಿಂದ ಅರ್ಧ ಘಂಟೆಯ ಪ್ರಯಾಣ ಹೋಗುವಷ್ಟರಲ್ಲಿ ಶಿವ ಬಸ್ ಸ್ಟಾಪ್ ಅಲ್ಲಿ ಕಾಯುತಿದ್ದ, ಹೋದೊಡನೆ ನನಗೆ ಬೈಕ್ ಕೊಟ್ಟು ಧೈರ್ಯ ಹೇಳಿ ಕಡೆಗೆ ಒಂದು ಬಾಂಬ್ ಸಿಡಿಸಿದ, ಬಾಸ್ ಗಾಡಿಯಲ್ಲಿ ಪೆಟ್ರೋಲ್ ಇಲ್ಲ ಹಾಕಿಸಿಕೊ ಅಂತ... 

         ಸಧ್ಯ ಈಗ ರುಪಾಯಿ ರುಪಾಯಿಗೂ ಪರದಾಡುವ ಸಮಯದಲ್ಲಿ 150 ರು ಗಳಿಗೆ ಮತ್ತೆ ಕುತ್ತು ಬಂದಿತ್ತು. ಸರಿ ಏನೋ ನೋಡುವ ಸಂದೀಪ್ ಬರುತ್ತಾನೆ ಅವನ ಬಳಿ ಇರುತ್ತೆ ಅಂತ ಬೈಕ್ ಗೆ ತೈಲ ನೆವೇದನೆ ಮಾಡಿ ಎಲೆಕ್ಟ್ರೋನಿಕ್ ಸಿಟಿ fly over ಹತ್ತಿದೆ. ಅದಕ್ಕೂ 20 ರು ಚಾರ್ಜ್. fly over ಮೇಲೆ 80 km ಸ್ಪೀಡ್ ಅಲ್ಲಿ ಬೈಕ್ ಓಡಿಸೋವಾಗ ನಮ್ಮ ಗುರುಗಳು ಹೇಳಿದ ಮಾತು ನೆನಪಿಗೆ ಬಂತು " ಪ್ರಾಜೆಕ್ಟ್ ಯಾವಾಗಲು ಸ್ವಂತದ್ದಾಗಿರಬೇಕು ಆಗ ಯಾವುದೇ ಸಮಯದಲ್ಲೂ ಅದನ್ನು ನಾವೇ ರೆಪೇರಿ ಮಾಡಿಕೊಳ್ಳಬಹುದಾದ ಸಾಮರ್ಥ್ಯ ನಮ್ಮಲ್ಲಿರುತ್ತದೆ ". ಆದರೆ ನಮ್ಮ ಉಡಾಫೆ ದುಡ್ಡು ಕೊಟ್ಟರೆ ಮಾಡೆಲ್ ರೆಡಿ ಮಾಡಿ ಕೊಡುವ consultancy ಗಳಿಂದ ಇನ್ನಷ್ಟು ಹೆಚ್ಚಾಗಿತ್ತು. ಸೋಂಬೇರಿತನ 8ನೇ ಸೆಮಿಸ್ಟರ್ ಪ್ರಾರಂಭದಲ್ಲೇ ಇಂಜಿನಿಯರಿಂಗ್ ಮುಗಿದೇಹೋಗಿದೆ ಎಂದು ಮೈ ಮುರಿಸುತಿತ್ತು.. ಅದರಲ್ಲೂ theory exam ಮುಗಿದ ಮೇಲಂತೂ ಪ್ರಾಜೆಕ್ಟ್ exam ಯಾವ ಲೆಕ್ಕ ಎಂಬ ಬೇಕಾಬಿಟ್ಟಿ ಮನಸ್ಥಿತಿ ಉಂಟುಮಾಡಿತ್ತು. ಆದರೆ ಈಗ ಅನುಭವಿಸುತ್ತಿರುವ ಈ ಗೊಂದಲ ನನ್ನ ಜೀವನದಲ್ಲಿ ಬಹು ದೊಡ್ಡ ಪಾಠ ಎಂಬುದು ತಿಳಿದು ಕೊಳ್ಳಲು ಬಹಳ ಸಮಯ ಬೇಕಾಗಿರಲಿಲ್ಲ....

         ಆಗ ಸಮಯ ಸಂಜೆ 4 ಘಂಟೆ ಆಗಿತ್ತು, ಇನ್ನು 20 ಘಂಟೆ ಮಾತ್ರ ಉಳಿದಿದೆ ನನ್ನ exam ಗೆ.  consultancy ಬಳಿ ಬಂದಾಯ್ತು, ಸಂದೀಪ್ ಕಾಯುತಿದ್ದ. ಅವನು ಪಾಪ ಎಲ್ಲೆಲ್ಲೋ ಓಡಾಡಿ ಅವನ ಗೆಳೆಯರ ಬಳಿಯಿದ್ದ ಮತ್ತೊಂದು ಸೆನ್ಸಾರ್ ತಂದಿದ್ದ. ಅವರು ಸಹ ನಮ್ಮ ತರಹದ್ದೇ ಪ್ರಾಜೆಕ್ಟ್ ಮಾಡಿದ್ದರು ಅದ್ದರಿಂದ ಅವರ ಸೆನ್ಸಾರ್ ನಮಗೆ ಉಪಯೋಗಕ್ಕೆ ಬರುತಿತ್ತು. ಸರಿ ಮಾಡೆಲ್ ತೆಗೆದುಕೊಂಡು consultancy ಒಳಗೆ ಹೋದೆವು ಒಳಗೆ ಮೇಡಂ ಇರಲಿಲ್ಲ ಮೈಸೂರ್ ಗೆ ಹೋಗಿದ್ದಾರೆ 7-30 ಗೆ ಬರುತ್ತಾರೆ ಅಂದ್ರು ಅಲ್ಲಿನ ಕೆಲಸದ ಹುಡುಗರು. ಅಷ್ಟರಲ್ಲೇ ಅವರ ಬಾಸ್ ಇಂದ ಫೋನ್ ಬಂತು troubleshoot ಮಾಡಿ ನೋಡಿ circuit ನ ಅಂತ. ಅದರ ಜೊತೆಗೆ 1500 ಮೊದಲು ತೊಗೊಂಡು ನಂತರ troubleshoot ಮಾಡಿ ಎಂಬ ಆರ್ಡರ್ ಸಹ ಬಂದಿತ್ತು. ನನ್ನ ಬಳಿ ಬರಿ 1330ರು ಅಷ್ಟೇ ಇತ್ತು. ಸಂದೀಪ್ ಮುಖ ನೋಡಿದೆ, ಅವನು ತನ್ನಲ್ಲಿದ್ದ 200ರೂ ಕೊಟ್ಟ ತೆಗೆದುಕೊಂಡು ನನ್ನ 30 ನಾನು ಜೇಬಿಗಿಳಿಸಿದೆ. ಅಷ್ಟರಲ್ಲೇ ನಮ್ಮ ಹಣವನ್ನೇ ಬಕ ಪಕ್ಷಿಗಳಂತೆ ನೋಡುತಿದ್ದ ಅವರಿಗೆ 1500 ರು ಕೊಟ್ಟೆ. ಕೊಟ್ಟ ತಕ್ಷಣ ಮಾಡೆಲ್ ತೆಗೆದುಕೊಂಡು power suppy connect ಮಾಡಿ multimeter ಕೈಲಿ ಹಿಡಿದು ಒಂದೊಂದೇ ಪಾರ್ಟ್ ಟೆಸ್ಟ್ ಮಾಡುತ್ತ ಬಂದ. ಒಂದೊಂದು ಪಾರ್ಟ್ ಟೆಸ್ಟ್ ಮಾಡುವಾಗಲು ನಮ್ಮ ಎದೆಯ ಬಡಿತ ತುಸು ಹೆಚ್ಚಾಗುತ್ತಾ ಹೋಗುತಿತ್ತು. ಅ ವ್ಯಕ್ತಿ ಟೆಸ್ಟ್ ಮಾಡುತ್ತ ಮಾಡುತ್ತ regulator ಹೋಗಿದೆ, display ಹೋಗಿದೆ, controller ಹೋಗಿದೆ ಅಂದ. ಹಾಗೆ ಮುಂದುವರೆಸುತ್ತಾ ಇವೆಲ್ಲ 1500 ರಲ್ಲಿ ಬರುತ್ತೆ. ಆದರೆ ಸೆನ್ಸಾರ್ ಹೋದ್ರೆ 9000ರು ಆಗುತ್ತೆ, ನೋಡಣ ಸೆನ್ಸಾರ್ ಕಥೆ ಎನಾಗಿದ್ಯೋ ಅಂತ multimeter ಎತ್ತಿ ಇಟ್ಟು  ಚೆಕ್ ಮಾಡಿದ. ನನಗೆ ನೋಡುವ ಧೈರ್ಯ ಇರಲಿಲ್ಲ, ಆದರು ಮುಖ ಕೈಯಿಂದ ಮುಚ್ಚಿಕೊಂಡು ಕೈ ಬೆರಳುಗಳ ಮಧ್ಯದಿಂದ reading ನೋಡಿದೆ ಅಲ್ಲಿ 11.56 ಎಂದಿತ್ತು. ಕುಕ್ಕರಗಾಲಲ್ಲಿ ಕೂತು reading ನೋಡುತಿದ್ದ ನಾನು ಹಾಗೆಯೆ ಕುಸಿದುಬಿದ್ದೆ ಸೆನ್ಸಾರ್ ಕೇವಲ 5volts ಮಾತ್ರ ತಡೆದುಕೊಳ್ಳುವ ಸಾಮರ್ಥ್ಯ ಇರುವಂಥದ್ದು. ಅದಕ್ಕೆ 11volt voltage ಹೋದರೆ ಒಂದು ಸೆಕೆಂಡ್ ನಲ್ಲಿ ಹಾಳಾಗುತ್ತದೆ ಇನ್ನು ಇದು ಹಲಗದೆ ಇರುವ ಸಾಧ್ಯತೆ ಇಲ್ಲವೇ ಇಲ್ಲ.    ಅಷ್ಟರಲ್ಲೇ ಟೆಸ್ಟ್ ಮಾಡುತಿದ್ದವನು ಹೇಳಿದ ಸೆನ್ಸಾರ್ ಕೂಡ ಢಮಾರ್ ಆಗಿದೆ ಅಲ್ರಿ ಪವನ್ ಅಂತ. ಸಂದೀಪ್ ಮಚ್ಚ, ನನ್ನ ಫ್ರೆಂಡ್ ಹತ್ರ ತಂದಿದ್ದ ಸೆನ್ಸಾರ್ ಹಾಕಿ ನೋಡೋಣ ತಡಿ, ಎಂದು ಅದನ್ನ connect ಮಾಡಿದ ಆದರೆ ಅದನ್ನು ಸಹ circuit detect ಮಾಡಿಲ್ಲ. ಇಷ್ಟು ದಿನದ ಪರಿಶ್ರಮ ಹಾಳಾಗುತ್ತೇನೋ ಅನ್ನೋ ಭಯ ನನ್ನನ್ನು ಆವರಿಸಿತ್ತು.....    

        ಮೊದಲು ಪ್ರಾಜೆಕ್ಟ್ ಮಾಡಬೇಕೆಂದು ಬಂದಾಗ ಬಳುಕುತ್ತ ಕೂತಿದ್ದ ಮಾಡೆಮ್ ಇರಲಿಲ್ಲ. ಮತ್ತು ಬಹಳ ಬುದ್ಧಿವಂತನದ ಮಾತನಾಡಿದ ಸರ್ ಸಹ ಇರಲಿಲ್ಲ. ಹೋಗಲಿ ಕರೆ ಮಾಡಿದ್ರೆ receive ಸಹ ಮಾಡುತ್ತಿರಲಿಲ್ಲ.ಅವರ ಹುಡುಗರ calls ಮಾತ್ರ recieve ಮಾಡುತಿದ್ದರು. ನಮ್ಮನ್ನು ಯಾವುದೊ ಬೇರೆ ಗ್ರಹಗಳ ಪ್ರಾಣಿಗಳಂತೆ ಕಾಣುತಿದ್ದರು ಅನಿಸುತ್ತೆ. ಸರಿ ಅವರ ಆಫೀಸ್ ಹುಡುಗ ಕಾಲ್ ಮಾಡಿದ. ಅಕಡೆಗೆ ಎಲ್ಲ ವರದಿ ನೀಡಿದ. ಅವರು ನಾವೇ ಬಂದು ನೋಡ್ತಿವಿ ರಾತ್ರಿ 9 ಘಂಟೆ ಆಗುತ್ತದೆ ಅಂದರು. ನಾವು ಮಾತಾಡುತ್ತೇವೆ ಎಂದಾಗ ಅ ಹುಡುಗ ಅವಕಾಶ ಕೊಡಲಿಲ್ಲ. ಅವರೇ ಬರ್ತಾರೆ ಈಗ ಮಾಡೆಲ್ ಇಲ್ಲೇ ಇಟ್ಟು ಹೋಗಿ, 7-30 ಗೆ ಮಾಡೆಮ್ ಬರ್ತಾರೆ, 9ಕ್ಕೆ ಸರ್ ಬರ್ತಾರೆ ಅಂದ. ನಾವು ಸರಿ ಹಾಗೆ ಅಗಲಿ ಎಂದು ಮಾಡೆಲ್ ಅಲ್ಲಿಟ್ಟು ಸೆನ್ಸಾರ್ ಮಾತ್ರ ತೆಗೆದುಕೊಂಡು ಹೊರಟೆವು....

         ಆಗ ಸಮಯ ಸಂಜೆ ೬ ಆಗಿತ್ತು, ಜಯನಗರ ೪ನೇ ಬ್ಲಾಕ್ ನಲ್ಲಿನ ಶಾಪಿಂಗ್ complex, ಮಯೂರ ಬೇಕರಿ, hotchips, cooljoint, ಪುಟ್ಟಣ್ಣ ಥಿಯೇಟರ್ ಮಹಡಿ ಮೇಲಿನ airlines ಹೋಟೆಲ್, ನೂತನವಾಗಿ ನಿರ್ಮಾಣವಾಗಿರುವ ಬಸ್ stand,  ಕಚೋರಿ ಸಮೋಸ ವಡಾಪಾವ್ ಅಂಗಡಿಗಳು, ಕೈ ಬಿಸಿ ಕರೆಯುತಿತ್ತು. ಹಾಗೆಯೆ ಒಳಗೊಳಗೇ ಅವುಗಳು ಹಿಂದೆಲ್ಲ ಕಾಲೇಜ್ ಗೆ ಬಂಕ್ ಮಾಡಿ ಇಲ್ಲಿ ಬಂದು, ಅಲೆದಾಡಿ ಟೈಮ್ ಪಾಸು ಮಾಡುತಿದ್ದ ದಿನಗಳನ್ನು ನೆನೆಸುತಿದ್ದವು. ಪಕ್ಕದಲ್ಲೇ ಇದ್ದ ಸಂದೀಪ್ ಮಚ್ಚ ನೆನಪಿದ್ಯ? ರಘು ಬರ್ತಡೆ ಪಾರ್ಟಿ ಇಲ್ಲೇ ಪವಿತ್ರ ಹೋಟೆಲ್ ಮಹಡಿ ಮೇಲಿರುವ B11 pub ಅಲ್ಲಿ ಮಾಡಿದ್ದು ಅಂದ. ಹೌದು ಮಚ್ಚ, ಅದರ ಜೊತೇಲೆ ನೆನೆಪು ಮಾಡ್ಕೋ, ಅವತ್ತು microcontroller ಕ್ಲಾಸ್ 2hours ಕ್ಲಾಸ್ ಇತ್ತು. ಮೇಡಂ ಪ್ರೊಗ್ರಾಮ್ ಹೇಗೆ ಬರಿಯೋದು ಅನ್ನೋ techniques ಹೇಳಿಕೊಡ್ತೀನಿ ಅಂದಿದ್ರು ಅಂದೆ. ಪೆಚ್ಚುಮೊರೆಯೊಂದಿಗೆ ಸಂದೀಪ್ ಹೌದೋ, ಅಂದು ನಾವು classes attend ಮಾಡಿ ಸರಿಯಾಗಿ ಕಲಿತಿದ್ದರೆ ಇಂದು ಬೇರೆಯರ ಬಳಿ ನಮ್ಮ ಪ್ರಾಜೆಕ್ಟ್ ಗೆ ಪ್ರೊಗ್ರಾಮ್ ಬರೆಸುವ ಅವಶ್ಯಕತೆ ಇರ್ತ ಇರ್ಲಿಲ್ಲ. ಅವರಿಗಾಗಿ ನಾಯಿಗಳಂತೆ ಕಾಯುವ ಗೋಜು ಇರುತ್ತಿರಲಿಲ್ಲ ಅಂದ. ಜಯನಗರದಲ್ಲಿ ಕಣ್ಣ ಮುಂದೆ ಕಂಡದ್ದೆಲ್ಲ ಕೊಂಡು ತಿನ್ನುತಿದ್ದ ನಾವು ಅಂದು  1ರುಪಾಯಿ ಗೆ ಎರಡು ಬರುವ ಕಚ್ಚ ಮ್ಯಾಂಗೋ ಚಾಕಲೇಟ್ ಸಹ ತಿಂದಿಲ್ಲ..........

         ಸಮಯ 7-15 ಆಯಿತು, ಹೊರೆಟೆವು ಮತ್ತೆ consultancy ಕಡೆಗೆ. ಅಲ್ಲಿ ಇನ್ನು ಮೇಡಂ ಬಂದಿರಲಿಲ್ಲ ಅಲ್ಲಿನ ಹುಡುಗರು ಕರೆ ಮಾಡಿದ್ರು recieve ಮಾಡುತ್ತಿರಲಿಲ್ಲ, ನಾನು ಒಂದು 50 ರಿಂದ 60 ಸರಿ ಕಾಲ್ ಮಾಡಿದೆ. ರಿಂಗ್ ಆಯಿತೋ ಹೊರತು receive ಮಾಡಿಲ್ಲ. ಕಾಲ್ ಮಾಡಿ ಮಾಡಿ ನನಗೆ ಸಂದೀಪ್ ಗೆ ಬೇಜಾರಾಯಿತು. ಸಮಯ 8 ಆಯಿತು. ಅ ಹುಡುಗರು ಹೊರಟು   ಬಿಟ್ಟರು. ಇಲ್ಲೇ ಕಾಯ್ತಾ ಇರಿ, ಸರ್ ಅಗಲಿ, ಮೇಡಂ ಅಗಲಿ ಬಂದೆ ಬರುತ್ತಾರೆ ಅಂದ್ರು. ನಮಗೆ ನಂಬಿಕೆ ಇಲ್ಲದಿದ್ದರೂ ನಂಬಲೇ ಬೇಕಾದ ಅನಿವಾರ್ಯತೆ ಇತ್ತು. ಹಾಗಾಗಿ ಆಯಿತು ಎಂದು ಹೇಳಿ cosultancy ಮುಂದಿನ ರಸ್ತೆಯಲ್ಲಿ ಓಡಾಡುತಿದ್ದೆವು. ಮೊದಲೇ ಅದು ಜಯನಗರದ ಪ್ರಸಿದ್ಧ ಬಡಾವಣೆ, ಅಲ್ಲಿನ ಜನರೆಲ್ಲಾ ನಮ್ಮನ್ನು ಕಳ್ಳರಂತೆ ನೋಡುತಿದ್ದರು. ಯಾರದ್ರು  ಏನಾದ್ರು ಅಂದುಕೊಳ್ಳಲಿ ಎಂದು ರೋಡಲ್ಲೇ ಓಡಾಡುತಿದ್ದೆವು. ಅಲ್ಲಿಯವರೆಗೂ ಇರದಿದ್ದ ಹೊಟ್ಟೆ ಒಳಗಿದ್ದ ಕಿರ್ ಕಿರ್ ಮಾಮ ಕಿರುಚಲು ಪ್ರಾರಂಭಿಸಿದ್ದ. ನನ್ನ ಬಳಿ ೩೦ರು ಮಾತ್ರ ಇತ್ತು ಅಲ್ಲಿ ಒಂದು ತಳ್ಳೋ ಗಾಡಿಯ ಮೇಲೆ ಇಡ್ಲಿ ಮಾರುತಿದ್ದರು. ೪ ಇಡ್ಲಿ ಗೆ ೨೦ರುಪಾಯಿ, ಬೆಂಗಳೂರಿನ ಮಟ್ಟಿಗೆ ಬಹಳ ಕಡಿಮೆ ಅ ರೇಟು. ೬ ಇಡ್ಲಿ ತೆಗೆದುಕೊಂಡು ೩ ನಾನು ೩ ಸಂದೀಪ್ ತಿನ್ನುತಿದ್ದೆವು,  ಅಷ್ಟರಲ್ಲಿ ೯ ಘಂಟೆ ಆಗಿತ್ತು. ನಮ್ಮ consultancy ownwer ಅಲ್ಲಿ ಬೈಕ್ ನಲ್ಲಿ pass ಅದ ಹಾಗೆ ಅನಿಸಿತು. ನೋಡಿದೊಡನೆ ತಿನ್ನುತಿದ್ದ ಕಡೆಯ ಇಡ್ಲಿಯ ಅರ್ಧ ಉಳಿದಿತ್ತು. ಅಷ್ಟನ್ನು ಒಟ್ಟಿಗೆ ಬಾಯಿಗೆ ಹಾಕಿಕೊಂಡು ಓಡಿದೆವು.....

          ಸರ್ ಸರ್ ಎಂದು consultancy ಒಳಗೆ ಮಕ್ಕಳಂತೆ ಓಡಿದೆವು. ನಮ್ಮನ್ನು ನೋಡಿದ ಅವನು ಸ್ವಲ್ಪ ಅಸಡ್ಡೆಯಿಂದ, ಹಂಗಿಸುವ ರೀತಿಯಲ್ಲಿ, ಏನ್ರಿ ಪವನ್, ಏನ್ರಿ ಆಯಿತು ನಿಮ್ಮ ಪ್ರಾಜೆಕ್ಟ್ ಗೆ ಅಂದ. ಗೊತ್ತಿಲ್ಲ ಸರ್, ಏನಾಯಿತೋ ಇದ್ದಕಿದ್ದಂಗೆ ವರ್ಕ್ ಆಗ್ತಿಲ್ಲ ಅಂದೆ. ಯಾರ ಹತ್ರ ಇತ್ತು ಮಾಡೆಲ್ ಅಂದ. ನಾನು ಸಂದೀಪ್ ಹತ್ರ ಸರ್ ಅಂದೆ, ರೀ ಇವರು ಮೊದಲೇ ಸ್ವಲ್ಪ ಗಾಬರಿ ವ್ಯಕ್ತಿ ಅವರ ಹತ್ರ ಏನಕ್ರಿ ಕೊಟ್ರಿ ಅಂದ. ಸಂದೀಪ್ ಗೆ ಕೋಪ ನೆತ್ತಿಗೇರಿತ್ತು, ನಿಜ ಹೇಳಬೇಕೆಂದರೆ ಸಂದೀಪ್ ೬ ಅಡಿ ಎತ್ತರದ ಅಜಾನುಬಾಹು, ಅವ ತಿರುಗಿ ಒಂದೇ ಒಂದು ಏಟು ಬಲವಾಗಿ ಕೊಟ್ಟರೆ consultancy owner ಗೊಟಕ್ ಎಂದುಬಿಡುತಿದ್ದ. ಆದರೆ ನಮಗೆ ಅವನಿಂದ ಕೆಲಸ ಆಗಬೇಕಿತ್ತು. ನಮ್ಮಗಳ ಭವಿಷ್ಯ ಅ ವ್ಯಕ್ತಿ ರೆಡಿ ಮಾಡಿಕೊಡುವ ಮಾಡೆಲ್ ಮೇಲಿತ್ತು, ಅದ್ದರಿಂದ ಸಂದೀಪ್ ಹಲ್ಲುಗಳನ್ನು ಬಿಗಿಯಾಗಿ ಕಡಿಯುತ್ತ adopter ನಲ್ಲಿ  ಹೈ voltage ಬಂದು ಹೀಗಾಯಿತು ಸರ್ ಅಂದ. ಆದ್ರೆ ಏನ್ರಿ ಮಾಡೋದಿವಾಗ, ಒಟ್ಟು 9000 ಖರ್ಚಾಗುತ್ತದೆ ಅಂದ.ಅದಕ್ಕೆ ಸರ್, ನಮ್ಮ ಸೆನ್ಸಾರ್ ಒಂದು ಸರಿ ನೋಡಿ ಸರ್ ಅಂದೆ. ಅದಕ್ಕವನು, ರೀ ನಾವು ಲೋಕಲ್ ಪ್ರಾಜೆಕ್ಟ್ ಮಾಡೋದೇ ಇಲ್ಲ ರೀ, ನಂದು high resolution ಸೆನ್ಸಾರ್ ಅದಕ್ಕೆ ತಕ್ಕ ಹಾಗೆ ಪ್ರೊಗ್ರಾಮ್ ಮಾಡಿದ್ದೇವೆ ಇವೆಲ್ಲ ಆಗಲ್ಲ ಅಂದ. ಆಗಾಗಲೇ ೧೦ ಘಂಟೆ ಆಗಿತ್ತು ಸರ್ ಹಣ ಬೆಳಿಗ್ಗೆ ತಂದು ಕೊಡೋದ ಸರ್ ಅಂದೆ. ಅದಕ್ಕೆ ಅವನು ಏನು ತೊಂದರೆ ಇಲ್ಲ ಬೆಳಿಗ್ಗೆ 8 ಘಂಟೆಗೆ ತಂದುಕೊಡಿ, ನಿಮಗೆ ಮಾಡೆಲ್ ೧೨ ಘಂಟೆ ಅಷ್ಟರಲ್ಲಿ ರೆಡಿ ಮಾಡಿ ಕೊಡ್ತೀನಿ ಅಂದ. ಸರ್ 12 ಘಂಟೆಗೆ ಪರೀಕ್ಷೆ ಸರ್ ನನಗೆ ಅಂದೆ. ಅದಕ್ಕೆ ನಾ ಏನ್ರಿ ಮಾಡಕ್ಕಾಗುತ್ತೆ, ಸೆನ್ಸಾರ್ ತುಂಬಾ sensitive ಅಂತ ಗೊತ್ತಲ್ಲ, ಹುಷಾರಾಗಿ ಇಟ್ಟುಕೊಳ್ಳುವುದು ನಿಮ್ಮ ಜವಾಬ್ದಾರಿ, ಹೆಚ್ಚೆಂದರೆ 11 ಗಂಟೆಗೆ  ಕೊಡ್ತೀನಿ ಅಂದ. ಇನ್ನೇನು ಮಾಡಲು ಸಾಧ್ಯವಾಗದ ಪರಿಸ್ಥಿತಿ ನಮ್ಮದು, ಸರಿ ಸರ್ ಹಾಗೆ ಅಗಲಿ ಎಂದು ತಲೆ ಆಡಿಸುತ್ತ ಮನೆಗಳಿಗೆ ಹೊರೆಟೆವು. ಜಯನಗರದಿಂದ ನಮ್ಮನೆಗೆ 40km. ಸಂದೀಪ್ ಶಿವಾಜಿನಗರ್ ಗೆ ಹೊರಟ, ನಾನು ನಮ್ಮನೆಗೆ ಹೊರಟೆ ದಾರಿಯಲ್ಲಿ ಗಾಡಿ ಓಡಿಸುತ್ತಲೇ ನನ್ನ ಬೇರೆ batchmate ಗಳಾದ ರಘು ಮತ್ತು ಮಂಜುಗೆ ಫೋನ್ ಮಾಡಿದೆ. ರಘು ಮಗಾ ಈಗ ಹಣ ಇಲ್ಲ ನೀನು ಅಡ್ಜಸ್ಟ್ ಮಾಡಿರು ನಾ ಮತ್ತೆ ಕೊಡ್ತೀನಿ ಅಂದ ಮಂಜು 3 ಸಾವಿರ ಇದೆ ಕೊಡ್ತೀನಿ ಅಂದ. ನನ್ನ ಬಳಿ ಅಪ್ಪ ಕೊಟ್ಟಿದ್ದ ಹಣದಲ್ಲಿ 1000 ಇತ್ತು. ಏನು ಮಾಡುವುದು ಎಂದು ಯೋಚಿಸುತ್ತಿರುವಾಗಲೇ ಸಾಗರ್ ನೆನಪಾದ, ಪ್ರೀತಿಯ ಗೆಳೆಯ ಸಾಗರ್ ಗೆ ಕರೆ ಮಾಡಿದೆ. ಅವನು ಏನೋ ಮಗ ಇಷ್ಟ ಹೊತ್ತಲ್ಲಿ ಅಂದ, ಸಾಗರ್ ವ್ಯವಹಾರಸ್ಥ, ಚೀಟಿ ಗಿಟಿ ಏನೇನೋ ಬಿಸಿನೆಸ್ ನಡೆಸ್ತಾನೆ. ನಾನು ಮಗ ಸಾಗರ್ ತುಂಬಾ ದೊಡ್ಡ ಪ್ರಾಬ್ಲಮ್ ಅಲ್ಲಿ ಸಿಕ್ಕಿ ಹಾಕಿಕೊಂಡಿದ್ದೀನಿ ಅರ್ಜೆಂಟ್ ಆಗಿ 5 ಸಾವಿರ ಬೇಕು ಅಂದೆ. ಸ್ವಲ್ಪವು ಯೋಚನೆ ಮಾಡದೇ ಗೆಳೆಯ ಸಾಗರ್ ಬೆಳಿಗ್ಗೆ 6 ಘಂಟೆ ಒಳಗೆ ಮನೆಗೆ ಬಾ ಮಗ ಕೊಡ್ತೀನಿ ಆಮೇಲೆ ನಾ ಹೊಸಕೋಟೆಗೆ ಹೋಗಬೇಕು ಅಂದ. ಅ ಕ್ಷಣದಲ್ಲಿ ನನಗೆ ಸಾಗರ್ ಒಬ್ಬ ಗೆಳೆಯ ಮಾತ್ರ ಅಲ್ಲ ದೇವರಾಗಿಬಿಟ್ಟಿದ್ದ. ಮನೆಗೆ ಹೋಗೋ ಅಷ್ಟರಲ್ಲಿ ಸಮಯ ೧೧-೩೦ ಆಗಿತ್ತು. ಅಮ್ಮ ಊಟ ಮಾಡೋ ಅಂದ್ರು, ಬೇಡಮ್ಮ ಮನಸಿಲ್ಲ ಅಂತ ರೂಮೊಳಗೆ ಹೊಕ್ಕು ಮಲಗಿದೆ. ನಿದ್ದೆ ಬಾರದಿದ್ದರೂ ಅ ದಿನ ಅಷ್ಟೆಲ್ಲ ಓಡಾಡಿದ್ದ strain ನನಗೆ ಘಾಢವಾದ ನಿದಿರೆಯನ್ನು ತರಿಸಿತ್ತು.  

          ಬೆಳಿಗ್ಗೆ 5-00ಘಂಟೆ, ನಿದಿರೆಯಿಂದ ಏಳುವ ಮನಸಿರಲಿಲ್ಲ, ಆದರೆ ಇದ್ದಕಿದ್ದಂತೆ ಪ್ರಾಜೆಕ್ಟ್ ನೆನಪಾಗಿ ಥಟ್ ಎಂದು ಎದ್ದು ಕೂತೆ.ಎದ್ದೊಡನೆ ಸ್ನಾನ ಮಾಡಿ ರೆಡಿ ಆಗಿ 5-45 ಕ್ಕೆ ಮನೆ ಬಿಟ್ಟೆ. ಅಪ್ಪ ಮಾತನಾಡಿಸಿದರು, ಏನಾಯಿತೋ ಮಗನೆ ಪ್ರಾಜೆಕ್ಟ್ ಅಂದರು. ನಡೆದ ಕಥೆಯನ್ನೆಲ್ಲ ಹೇಳಿದೆ ನನ್ನ ಕಷ್ಟ ನೋಡಲಾರದೆ ಹಣ ಬೇಕೇನೋ ಅಂದ್ರು. ಹಣ ಬೇಕಿತ್ತು, ಆದರು ನನ್ನ ಸ್ವಾಭಿಮಾನ ಬೇಡ ಎಂದು ಹೇಳಿತು.ಸಾಗರ್ ಮನೆ ಬಳಿ ಹೋಗಿ ಹಣ ಪಡೆದುಕೊಂಡೆ, ಮಂಜು ರೂಂ ಬಳಿ ಹೋಗಿ ಅಲ್ಲೂ ಹಣ ಪಡೆದುಕೊಂಡೆ. ಮತ್ತೆ ಗಾಡಿಗೆ 200ರು ಪೆಟ್ರೋಲ್ ತುಂಬಿಸಿಕೊಂಡು 8 ಘಂಟೆ ಒಳಗೆ consultancy reach ಆದೆ. ಸಂದೀಪ್ ಸಹ ಅ ಸಮಯಕ್ಕೆ ಬಂದ. ಹೋಗಿ ನೋಡಿದರೆ ನಮ್ಮ consultancy ಸರ್ ಇನ್ನು ಮಲಗಿದ್ದ, ನಾನು ಬಾಗಿಲು ಬಡಿದು ಎಬ್ಬಿಸಿದೆ. ಏನ್ರಿ ಇಷ್ಟ ಬೇಗ ಬಂದುಬಿತ್ತಿದ್ದಿರ ಅಂದ ಆಕಳಿಸುತ್ತಾ, ಮನಸಲ್ಲೇ ನನ್ ಮಗನೆ ನನ್ನ ಜಾಗದಲ್ಲಿ ನಿನಿದ್ದಿದ್ರೆ ಗೊತ್ತಿರೋದು ಅಂದುಕೊಂಡು ಸರ್, exam ಗೆ ಇನ್ನು ಬರಿ 4 ಘಂಟೆ ಮಾತ್ರ ಉಳಿದಿದೆ ಸರ್. ದಯವಿಟ್ಟು ರೆಡಿ ಮಾಡಿಕೊಡಿ ಸರ್ ಅಂದೆ. ಸರಿ ನೀವು 11-30ಗೆ ಬನ್ನಿ, ನಾನು ರೆಡಿ ಮಾಡಿ ಇಟ್ಟಿರುತ್ತೇನೆ ಅಂದ. ಸರ್ 12ಕ್ಕೆ ಪರೀಕ್ಷೆ ಸರ್ 10-30 ಅಷ್ಟರಲ್ಲಿ ಕೊಡಿ ಪ್ಲೀಸ್ ಎಂದು ಅಂಗಲಾಚಿದೆವು. ಸರಿ ನೀವು ಬನ್ನಿ ನೋಡೋಣ ಅಂದ. ದೇವರನ್ನು ನೆನೆಯುತ್ತ ಸರಿ ಸರ್ ಅಂತ ಹೊರಟ್ವಿ, ಅಷ್ಟರಲ್ಲಿ ರೀ ಪವನ್ ಅಂದ. ಸರ್ ಏನ್ ಸರ್ ಅಂದೆ ದುಡ್ಡು ಕೊಡ್ರೀ, ಹಾಗೆ ಹೊರಟುಬಿಟ್ರೆ ಸೆನ್ಸಾರ್ ಹೇಗೆ ತರೋದು ಅಂದ. ಅ ಕ್ಷಣದಲ್ಲಿ ನನ್ನ ಕಣ್ಣಿಗೆ ಅವ ಕುರಿ ಕಡಿಯುವ ಕಟುಕನಂತೆ, ನಾವೆಲ್ಲ ಅವನ ಮುಂದೆ ಬಗ್ಗಿ ನಿಂತ ಅಮಾಯಕ ಕುರಿಗಳಂತೆ ಅನ್ನಿಸಿತು. ಜೇಬಿನಲ್ಲಿದ್ದ 9000 ವನ್ನು ಕೊಟ್ಟೆ, ನಿಮ್ಮ ಕೆಲಸ ಆಯಿತು ಅಂದ್ಕೊಳ್ರಿ 10-30ಗೆ ಬನ್ನಿ ಅಂದ. ಸರಿ ಅಂತ ಅಲ್ಲಿಂದ ಹೊರಗೆ ದೇವರನ್ನು ನೆನೆಯುತ್ತ ಹೊರೆಟೆವು. 

          ಸಮಯ 10 ಆಗಿತ್ತು,  ಅಷ್ಟರಲ್ಲಿ ರಘು ಮತ್ತು ಮಂಜು ಕಾಲೇಜ್ ಬಳಿ ಹೋಗಿ slides ಓದುತಿದ್ದರು. ನಾನು ಮತ್ತು ಸಂದೀಪ್ ಕೂಡ ಜಯನಗರದ ಒಂದು ಗಣಪತಿ ದೇವಾಲಯದ ಆವರಣದಲ್ಲಿ ಕೂತು, ಭಗವಂತನನ್ನು ಪ್ರಾರ್ಥಿಸುತ್ತ ರಿಪೋರ್ಟ್ ಓದುತ್ತಿದ್ದೆವು. ಸೆಮಿನಾರ್ ಗೆ ಪ್ರಿಪೇರ್ ಆಗುತ್ತಿದ್ದೆವು. ಆಗಾಗ ಗಡಿಯಾರ ನೋಡುತ್ತಾ, 10 -30 ಆಗುವುದನ್ನೇ ಎದುರು ನೋಡುತಿದ್ದೆವು. 10 -30 ಆಯಿತು ತಕ್ಷಣ ಎದ್ದು ಓಡಿದೆವು consultancy ಕಡೆಗೆ, ಆದರೆ ಅಲ್ಲಿ ಇನ್ನು ಸರ್ ಬಂದಿರಲಿಲ್ಲ. 
ಒಂದು 10 ಸಲಿ ಕರೆ ಮಾಡಿದೆ. ಒಮ್ಮೆ recieve ಮಾಡಿ ಬರ್ತಾ ಇದೀನಿ ಅರ್ಜೆಂಟ್ ಮಾಡಬೇಡಿ ಮಾಡಿದ್ರೆ, ಕೆಲಸ ಆಗೋದು ಕಷ್ಟ ಅಂದ. ಆಯಿತು ಸರ್ ಬೇಗ ಬನ್ನಿ disturb ಮಾಡಲ್ಲ ಅಂದೆ. ಮತ್ತೆ ಕಾಯುತ್ತ ಗಡಿಯಾರ ನೋಡುತ್ತಾ ಕೂತಿದ್ದೆವು. ಸಮಯ 11 ಘಂಟೆ ಆಯಿತು exam ಗೆ ಇನ್ನು ಕೇವಲ 1 ಘಂಟೆ ಮಾತ್ರ ಉಳಿದಿತ್ತು. ನಮ್ಮ ಕಾಲೇಜ್ ಗೆ ಅಲ್ಲಿಂದ ನನ್ನ ಡ್ರೈವಿಂಗ್ನಲ್ಲಿ ಅ heavy traffic ನಲ್ಲಿ 1 ಘಂಟೆ 15 ನಿಮಿಷ ಬೇಕೇಬೇಕು. ಅಷ್ಟರಲ್ಲೇ ಸರ್ ಮತ್ತು ಮೇಡಂ ಬಂದರು ಬಂದೊಡನೆ ಎಲ್ಲ ಪಾರ್ಟ್ಸ್ replace ಮಾಡಿ, ಮತ್ತೊಮ್ಮೆ microcontroller ಗೆ ಪ್ರೊಗ್ರಾಮ್ dump ಮಾಡಿದರು. ಮೂರೂ ನಾಲ್ಕು ಸಾರಿ  dump ಮಾಡಿದರೂ ವರ್ಕ್ ಆಗಲಿಲ್ಲ. ನಾ ಒಮ್ಮೆ ಸಂಕಟ ಬಂದಾಗ ವೆಂಕಟ ರಮಣ ಎಂಬಂತೆ ಅಪ್ಪ ವೆಂಕಟೇಶ, ಮಾಡೆಲ್ ವರ್ಕ್ ಅಗಲಿ ಬಂದು ಮುಡಿ ಕೊಡುತ್ತೇನೆ ಎಂದು ಹರಕೆ ಮಾಡಿಕೊಂಡೆ. ಮತ್ತೊಮ್ಮೆ dump ಮಾಡಿದಾಗ ಇದ್ದಕಿದ್ದಂತೆ ಮಾಡೆಲ್ ವರ್ಕ್ ಮಾಡಲು ಶುರು ಮಾಡಿತು.  ಒಂದು ಸಾರಿ ಪ್ರಪಂಚವೇ ಗೆದ್ದಂತ ಅನುಭವ ಆಗಿತ್ತು, ನನಗೆ ಅತ್ತಕಡೆ ರಘು ಪದೆಪದೆ ಫೋನ್ ಮಾಡುತಿದ್ದ, ಅವನಿಗೆ ಫೋನ್ ಮಾಡಿ ಮಾಡೆಲ್ ರೆಡಿ ಆಗಿದೆ ಒಂದು ಅರ್ಧ ಘಂಟೆ ಲೇಟ್ ಆಗಿ ಬರಲು permission ತೊಗೋ ಅಂತ ಹೇಳ್ದೆ. ಅವನು ಅಲ್ಲಿ external ಹತ್ರ ಮಾತಾಡಿ ನಮ್ಮ ಕಷ್ಟವನ್ನ ವಿವರಿಸಿದ್ದಾನೆ, ಅವರು ಕರುಣೆ ತೋರಿಸಿ ಆಯಿತು ಎಂದಿದ್ದಾರೆ. ಇಷ್ಟೆಲ್ಲಾ ಆಗಿ ಹೊರಡುವಷ್ಟರಲ್ಲಿ ಸಮಯ 11 -50 ಆಗಿತ್ತು, ಇನ್ನು 10 ನಿಮಿಷದಲ್ಲಿ ಕಾಲೇಜ್ ಸೇರುವುದು ಅಸಾಧ್ಯವಾದ ಮಾತು. ಶಿವಾಜಿನಗರದ ಗಲ್ಲಿ ಗಲ್ಲಿಯಲ್ಲೂ ತಿರುಗಿಸಿ ಗಾಡಿ ಓಡಿಸಿದ ಅನುಭವ ಇದ್ದ ಸಂದೀಪ್ ಗೆ ಗಾಡಿ ಓಡಿಸುವ ಹೊಣೆ ಕೊಟ್ಟೆ. ಜೀವವನ್ನು ಕೈಯಲ್ಲಿ ಇಟ್ಟುಕೊಂಡು ಒಮ್ಮೆ ಅಂಜನೇಯ ಎಂದು ಕೂಗಿದೆವು, ಸಂದೀಪ್ ಗಾಡಿಯ ಕಿಕ್ಕರ್ ಬಲವಾಗಿ ಒದ್ದ, ಒಂದೇ ಕಿಕ್ಕಿಗೆ ಗಾಡಿ ಶುರು ಆಯಿತು.ಜಯನಗರದ ಗಲ್ಲಿಗಳಲ್ಲಿ ಸರ್ರ್ ಸರ್ರನೆ ತಿರುಗಿಸಿ ಹೊರಟ ಸಂದೀಪ್ ಅ ಕ್ಷಣದಲ್ಲಿ ಒಂದು ಕಡೆ ಮ್ರುತ್ಯುವಾಗಿಯೂ, ಮತ್ತೊಂದು ಕಡೆ ರಕ್ಷಕನಾಗಿಯು ಕಂಡಿದ್ದ......  
      
            ನಮ್ಮ batch ನ ಇತರ ಹುಡುಗರು ಪರೀಕ್ಷೆಗೆ ಹೊರಟು ಬಿಟ್ಟಿದ್ದರು. ಸಂದೀಪ್ NH 7 highway ಗೆ ಬಂದ,  ಆಗ ಸಮಯ 12-10 ಆಗಿತ್ತು ಇನ್ನು 20 ನಿಮಿಷದಲ್ಲಿ 30km, ಅದು ಹೇಗೆ ಓಡಿಸುತ್ತಾನೋ ಗೊತ್ತಿಲ್ಲ. ಎಲೆಕ್ಟ್ರೋನಿಕ್ ಸಿಟಿ flyover ಮೇಲಿನ ವೇಗದ ಮಿತಿ 80, ಆದರೆ ಒಂದು ಸೆಕೆಂಡ್ ಸಹ 110ಕಿಂತ ಕಡಿಮೆ ಮಾಡಿಲ್ಲ ಸಂದೀಪ್.  flyover ಕೆಳಗಿನ ಟೋಲ್ ನಲ್ಲಿ ಸಾಲು ವಾಹನಗಳು ನಿಂತಿದ್ದವು, ಓಡಿ ಹೋಗಿ ಟೋಲ್ ಬೂತ್ ಅಲ್ಲಿ ಕೂತಿದ್ದ ವ್ಯಕ್ತಿಗೆ, ಅಣ್ಣ ಪರೀಕ್ಷೆ ಇದೆ ಸೈಡ್ ಅಲ್ಲಿ ಹೋಗ್ತಿವಿ ಟಿಕೆಟ್ ನೋಡಿ ಅಂದೆ.ಅವನಿಗೆ ಕರುಣೆ ಉಕ್ಕಿ ಬಂದು ಸೈಡ್ ಅಲ್ಲಿ ಜಾಗ ಮಾಡಿಕೊಟ್ಟ. ಅಲ್ಲಿಂದ ಹೊರಗೆ ಬಂದಮೇಲೆ  ಮತ್ತೆ ಲಾರಿಗಳ ಬಸ್ಸುಗಳ ಮಧ್ಯ, ಸೊಂದಿಗೊಂದಿಯಲ್ಲೆಲ್ಲ ತೂರಿಸಿ ಸಂದೀಪ್ 12 -30 ಕ್ಕೆ ಕಾಲೇಜ್ ಗೇಟ್ ಬಳಿ ಸೇರಿಸಿದ. ನಾ ಎಂದು ಅಷ್ಟು ರಿಸ್ಕ್ ತೆಗೆದುಕೊಂಡು ಡ್ರೈವ್ ಮಾಡಿಲ್ಲ, ಅಂತ ಡ್ರೈವರ್ ಗಳ ಹಿಂದೆ ಕೂರುವುದಕ್ಕೂ ಭಯ ನನಗೆ, ಆದರೆ   ಅ ಕ್ಷಣದಲ್ಲಿ ನಾನು ಮತ್ತು ಸಂದೀಪ್ ನಮ್ಮ ತಂದೆ ತಾಯಂದಿರಿಗೆ ಒಬ್ಬೊಬ್ಬರೇ ಮಕ್ಕಳು ಅನ್ನೋದು ಮರೆತು ಹೋಗಿತ್ತು. ಗಾಡಿ ನಂದಲ್ಲ ಶಿವುದು ಅನ್ನೋದು ಮರೆತುಹೋಗಿತ್ತು. ಇವೆಲ್ಲದರ ನಡುವೆ  exam ಹಾಲ್ ಗೆ ಹೋಗುವಷ್ಟರಲ್ಲಿ ೧೨-೪೦ ಆಗಿತ್ತು. ಅಷ್ಟರಲ್ಲಿ ನಮ್ಮ batch ನ ಹುಡುಗರು ಸೆಮಿನಾರ್ ಶುರು ಮಾಡಿದ್ದರು, ಬೇರೆ batch ನ ಹುಡುಗರು ನಮ್ಮನ್ನು ಹೀರೋ ಗಳಂತೆ ಸ್ವಾಗತಿಸಿದರು. ಹೆಬ್ಬರಳನ್ನು ಉದ್ದಗೆ ಮಾಡಿ welldone ಅಂದರು. ನಾವು ಸಹ ಸೆಮಿನಾರ್ ಚೆನ್ನಾಗಿ ಕೊಟ್ಟೆವು, ಮಾಡೆಲ್ ಚೆನ್ನಾಗಿ ವರ್ಕ್ ಆಯಿತು. ನಮ್ಮ presentation ಸಹ ಚೆನ್ನಾಗಿ ಇತ್ತು. external ಇಂಟರ್ನಲ್  ಇಬ್ಬರು ಖುಷಿಯಾದರು. ನಮ್ಮ batch ಗೆಲ್ಲ ಬಹಳ ಸಂತೋಷವಾಯಿತು, ನನಗು ಕೂಡ ಇಂಜಿನಿಯರಿಂಗ್ ಮುಗಿಯಿತೆಂಬ ಖುಷಿ ಆಯಿತು. ಅ ಖುಷಿಯಲ್ಲೇ ಸಮಾಧಾನದ ನಿಟ್ಟುಸಿರು ಬಿಟ್ಟಿದ್ದೆ. ಆದರೆ ಅ ನಿಟ್ಟುಸಿರಿನಲ್ಲಿ ಇನ್ನು ಮುಂದೆ ಎಂದು consultancy ಗಳ ಸಹವಾಸ ಬೇಡ ಅನಿಸಿತ್ತು. ನನ್ನ ಪರೀಕ್ಷೆ ಬಗ್ಗೆ ಕೇಳಿದ ಕೆಲವು juniors ಗು ಅದೇ ಹೇಳಿದೆ. ಎಷ್ಟೇ ಆದರು " ನಾವು ಕಷ್ಟ ಪಟ್ಟು ಕೆಲಸ ಮಾಡದೇ ಹೋದರೆ ದೇವರೇ ಕಷ್ಟ ಕೊಟ್ಟು ಕೆಲಸ  ಮಾಡಿಸುತ್ತಾನೆ " ಎಂಬುದಕ್ಕೆ ನನ್ನ  ಈ 22 ಘಂಟೆಗಳೇ ಒಂದು ಅಧ್ಬುತವಾದ ಉದಾಹರಣೆ, ಇನ್ನೊಂದು ವಿಷಯ ಗೆಳೆಯರೇ ಅಂದಹಾಗೆ ನಾನು ತಿರುಪತಿ ಗೆ ಹೋಗಿ ಬಂದಿದ್ದು ಆಯಿತು ಮುಡಿ ಕೊಟ್ಟಿದ್ದು ಆಯಿತು ಈಗ ನಾನು ಬೋಡಗುಂಡ ಹೆಹೆಹೆ  :) :)

ಓದುಗ ಮಿತ್ರರಿಗೆ ನನ್ನೊಂದು ಪ್ರಶ್ನೆ, ನೀವು ಇಂಜಿನಿಯರಿಂಗ್ ಮಾಡಿದ್ದಲ್ಲಿ ನಿಮ್ಮ ಪ್ರಾಜೆಕ್ಟ್ ಸ್ವಂತದ್ದ ?? consultancy ದ???


         *****************************************************************     
              
        


  

2 comments:

  1. 22gangtegal anubhava .. e article jannake karanavagide..

    Ondara..muktaya..mathondra nandi ge karan..

    Article tumba channagi mudi bandide..
    All THE BEST ... WELCOME TO WORK LIFE

    ReplyDelete
  2. Ha ha..super..
    Nan kathenu sumaaraagi heege... Nimmastu kasta pattilla aste!

    chennagi bardiddira pavan.. :)

    ReplyDelete