Sunday, June 2, 2013

ಪವನ್'ಸ್ ಡೈರೀಸ್ - 6

ಆಶಾಡದ ಗಾಳಿ ಬೀಸಲು ಶುರುವಾಗಿದ್ದ ಕಾಲ, ಶಾಲೆ ಬಿಟ್ಟರೆ ಸಾಕು ಮನೆಕಡೆ ಓಡಿ ಗಾಳಿಪಟ ಹಾರಿಸೋ ಕಾಲ.
ಕಡೆಯ ಪೀರಿಯಡ್ಡಿನ ಉದ್ದನೆ ಕಿರ್ರ್ ಎಂಬ ಬೆಲ್ಲು ಮುಗಿಯುವಷ್ಟರಲ್ಲೇ ಅರ್ಧ ಮನೆಯ ದಾರಿ ತಲುಪುವಷ್ಟು ಓಡಿಬಿಡುತಿದ್ದೆ ಅಷ್ತು ಹತ್ತಿರವೈತ್ತು ನಮ್ಮನೇಗು ಶಾಲೆಗು. ಮನೆಗೆ ಬಂದು ಗಾಳಿಪಟ ಹೊತ್ತು ಬೀದಿಯಲ್ಲೆ ಹಾರಿಸಲು ಶುರು, ಆದರೆ ಪ್ರತಿ ದಿನ ಒಂದಲ್ಲ ಒಂದು ತೊಡರು, ಕರೆಂಟ್ ತಂತಿಗೋ ಎದುರು ಮನೆ ನೀಲಗಿರಿ ಮರಕ್ಕೊ ಅಥವಾ ನಮ್ಮನೆ ತೆಂಗಿನ ಮರಕ್ಕೋ ಪಟ ಸಿಕ್ಕಿ ಹಾಕಿಕೊಂ...ಡುಬಿಡುತಿತ್ತು. ಅದನ್ನ ಬಿಡಿಸಿಕೊಳ್ಳೋ ಪ್ರಯತ್ನದಲ್ಲಿ ಪಛರಿದು ಹೋಗ್ತಿತ್ತು. ಮತ್ತೆ ಪ್ರಜಾವಾಣಿಯ ಹಾಳೆ ಸ್ವಲ್ಪ ಅನ್ನದ ಅಗುಳು ಮತ್ತು ಎರಡು ತೆಂಗಿನ ಕಡ್ಡಿ ಹೊತ್ತು ಮೂಲೆ ಮನೆ ನಾಗಣ್ಣನ ಹತ್ರ ಓಡ್ತಿದ್ದೆ.

ನಾಗಣ್ಣ ನೇಯ್ಗೆ ಕೆಲಸಗಾರ, ಗಾಳಿಪಟ ಹಬ್ಬದ ದಿನ ವಿಚಿತ್ರವಾದ ಗಾಳಿಪಟಗಳನ್ನೆಲ್ಲಾ ಹಾರಿಸ್ತಾ ಇದ್ದ, ಅದಕ್ಕೆ ನಮಪ್ಪನ್ನ ಸಹ ನಾನು ಯಾವತ್ತು ಗಾಳಿಪಟ ಮಾಡಿಕೊಡು ಅಂತ ಕೇಳ್ತಿರ್ಲಿಲ್ಲ. ನಾಗಣ್ಣನ ಹತ್ರ ಹೋಗಿ ಗಾಳಿಪಟಕ್ಕೆ ಬೇಕಾದ ವಸ್ತುಗಳನ್ಢ ಹಿಡಿದು ನಿಂತರೆ ಸಾಕು, ಲಟ ಪಟ ಲಟ ಪಟ ಎಂದು ಬಡಿಯುವ ಮಗ್ಗಕ್ಕೆ ಲಾಳಿ ಬದಲಿಸಿ ಮತ್ತೊಂದು ಬಾಬಿನ್ ಕೇಳುವಷ್ಟ್ರರಲ್ಲಿ ನಂಗೊಂದು ಗಾಳಿಪಟ ಮಾಡಿಕೊಡ್ತಿದ್ದ. ನಾಗಣ್ಣ ಲಾಂಡಾ ಬೇಡ ನೆತ್ತಿ ಸೂತ್ರ ಹಾಕ್ಕೊಡು ಅಂತ ಹಾಕುಸ್ಕೊಂಡು ಪಟ ಹಿಡ್ಕೊಂಡು ಅಮ್ಮನ ಬಳಿ ಓಡಿಬರ್ತಿದ್ದೆ. ಅಮ್ಮ ಯಾವುದೋ ಹಳೇ ಪಂಚೆ ಸೀರೆ ಹರಿದು ಬಾಲಂಗೋಸಿಗೆ ಅಂತ ಕೊಡೋರು, ಅದನ್ನ ಪಟಕ್ಕೆ ಕಟ್ಟಿ ನೈಲಾನ್ ದಾರ ಸೇರ್ಸಿ ಹತ್ತಿಸಿ ಇನ್ನೇನು ನನ್ನ ಗಾಳಿಪಟ ಮುಗಿಲು ಮುಟ್ಟುತ್ತದೆ ಅನ್ನೋ ಅಷ್ಟ್ರಲ್ಲೇ ಕರೆಂಟು ಕಂಬಕ್ಕೋ ತೆಂಗಿನ ಮರಕ್ಕೋ ಸಿಕ್ಕಿ ಹರಿದು ಹೋಗ್ತಿತ್ತು.

ಹಬ್ಬ ಹತ್ತಿರ ಬರ್ತಿತ್ತು ಈ ಸಲಿ ಏನಾದ್ರು ಆಗಲಿ ನನ್ನ ಪಟ ಆಕಾಶಕ್ಕೆ ಹಾರಲೇ ಬೇಕು ಅನ್ನೋ ಆಸೆ ಇತ್ತು ನನಗೆ, ಆದರೆ ಪೇಪರ್ ಗಾಳಿಪಟ ಅಷ್ಟು ಮೇಲೆ ಹೋಗೋ ನಂಬಿಕೆ ಇರಿಲ್ಲ ನನಗೆ, ಅಪ್ಪನ ಹತ್ರ ಕಾಡಿಬೇಡಿ ೧೦ ರೂ ಅಮ್ಮನ ಹತ್ರ ೧೦ ರೂ ತಾತನ ಹತ್ರ ೫ ರೂ ಪಡೆದಿದ್ದೆ. ಬರೀ ನೈಲಾನ್ ದಾರವಾದ್ರೆ ಪಟ ಮೇಲೆ ಹಾರಿದಾಗ ಗಾಳಿಯ ರಭಸ ಹೆಚ್ಚಾಗಿ ದಾರ ಕತ್ತರಿಸೋ ಸಾಧ್ಯತೆ ಇತ್ತು ಅದಕ್ಕೆಂದೇ ನಾಗಣ್ಣನ ಪುಸಲಾಯಿಸಿ ದಾರಕ್ಕೆ ಮಾಂಜಾ ಹಾಕಿಕೊಡಲು ಒಪ್ಪಿಸಿದ್ದೆ. ಗಾಳಿಪಟ ಹಾರಿಸುವಾಗ ಮಾಂಜಾದಾರ ಬಹಳಾ ಅವಶ್ಯ, ನಮ್ಮ ಪಟ ಹಾರಿಸಿದಾಗ ಆಕಾಶದಲ್ಲೆ ಗಾಳಿಪಟದ ಯುದ್ಧಗಳು ನಡೆಯುತ್ತವೆ, ಪೇಂಚ್ ಹಾಕೋದು ಅಂತಾರೆ ಅದನ್ನ, ಪೇಂಚ್ ಹಾಕಿ ನಮ್ಮ ಪಟದ ದಾರವನ್ನು ಬೇರೆಯವರು ತಮ್ಮ ಕಡೆ ಎಳೆದುಕೊಳ್ತಾರೆ, ಅಕಸ್ಮಾತ್ ಎಳೆಯೋ ಭರದಲ್ಲಿ ನಮ್ಮ ಪಟದ ದಾರ ಪುಸಕಲಾಗಿದ್ದಲ್ಲಿ ಮಾಂಜಾ ಇಲ್ಲದಿದ್ದಲ್ಲಿ ಪಟ ಕಟ್ ಆಗಿ ಹೋಗುತ್ತದೆ. ಅದಕ್ಕೆ ಹಬ್ಬಕ್ಕೆ ಮಾಂಜಾದಾರವನ್ನೇ ಬಳಸಬೇಕು ಅಂತ ಮೊದಲೇ ನಿರ್ಧಾರ ಮಾಡಿದ್ದೆ.

ಮಾಂಜಾ ದಾರ ಮಾಡೋದು ಒಂದು ರೀತಿಯ ಕಲೆ, ನಗರ್ತರ ಪೇಟೆಯಲ್ಲಿ 3 ರೂನ ದೊಡ್ಡ ಗಾಳಿಪಟದ ಜೊತೆ ಮಾಂಜಾ ಗಡ್ಡೆಗಳು ಮತ್ತೆ ಒಮ್ದು ದೂಡ್ಡ ಬಾಬಿನ್ ನೈಲಾನ್ ದಾರ ತಂದಿದ್ದೆ. ಹಾಗೆ ಪಾಂಪುಟ್ಟಿಗಳ ( ಪೇಪರ್ ಆಯುವವರು ಅಥವಾ ಹಕ್ಕಿಪಿಕ್ಕಿಗಳು) ಸಹಾಯದಿಂದ ಬಿಸಾಕಿರುವ ಟ್ಯೂಬ್ಲೈಟನ್ನು ನುಣ್ಣಗೆ ಪುಡಿ ಮಾಡಿಸಿಕೊಂಡು ಬಂದಿದ್ದೆ, ಅದಕ್ಕೆ ಅವರಿಗೆ 2 ಕೊಟ್ಟಿದ್ದೆ ಕೂಡ. ಪಟ ಜೋಪಾನವಾಗಿ ಮನೆಯೊಳಗಿಟ್ಟು ಮಾಂಜಾ ಗಡ್ಡೆಗಳನ್ನ ಮತ್ತು ದಾರವನ್ನ ಹೊತ್ತು ನಾಗಣ್ಣನ ಬಳಿ ಹೋಗಿದ್ದೆ, ನಾಗಣ್ಣ ಅಲ್ಲೆ ಮನೆ ಪಕ್ಕ ಖಾಲಿಜಾಗದಲ್ಲಿದ್ದ ಒಮ್ದಷ್ಟು ಸೊಪ್ಪುಸೆದೆ ಆಯ್ದು ಬೆಂಕಿಹಚ್ಚಿ ಅದರೆ ಮೇಲೆ ಮಡಿಕೆ ಇಟ್ಟು ಎರಡು ಕೋಳಿಮೊಟ್ಟೆ ಮಾಂಜಾ ಗಡ್ಡೆ ಜೊತೆ ಸ್ವಲ್ಪವೇ ಸ್ವಲ್ಪ ನೀರು ಬೆರೆಸಿ ಕುದಿಸಿದ. ಸ್ವಲ್ಪ ಹೊತ್ತು ಕುದ್ದಮೇಲೆ ನೈಲಾನ್ ದಾರವನ್ನು ಅದರಲ್ಲಿ ಅದ್ದಿ ಎರಡು ಮರಗಳ ನಡುವೆ ಪೂರ್ತಿ ಬಾಬಿನ್ ದಾರವನ್ನು ಸುತ್ತಿದ. ನಂತರ ಟ್ಯೂಬ್ಲೈಟ್ ಪುಡಿಯನ್ನು ಕೈಗೆ ಕವರ್ ಹಾಕಿಕೊಂಡು ತೆಗೆದುಕೊಂಡು ಪೂರ್ತಿ ದಾರಕ್ಕ ಮೆತ್ತಿದ. ಅದು ಆರಲು ಸುಮಾರು ೩ ಘಂಟೆಗಳ ಕಾಲ ಬೇಕು, ಅಲ್ಲಿವರೆಗು ಅಲ್ಲೇ ಕಾದಿದ್ದೆ. ಆಮೇಲೆ ದಾರ ಪೂರ್ತಿ ನಾಗಣ್ಣ ಮತ್ತೆ ಬಾಬಿನ್ನಿಗೆ ಸುತ್ತಿ ಕೊಟ್ಟ, ಅಬ್ಬ ಅಂತು ಇಂತು ಮಾಂಜಾ ದಾರ ರೆಡಿ, ಯಾವುದೋ ಆಯುಧ ಕೈಗೆ ಸಿಕ್ಕಂತಾಯ್ತು. ಮನಸಲ್ಲೇ ಈಗ ಹಾಕ್ಲಿ ನನ್ನ ಪಟಕ್ಕೆ ಪೇಂಚು, ಯಾವನ್ ಹಾಕ್ತಾನೋ ಅವ್ನ ದಾರಾನೆ ಕಟ್ಟು ಅಂದುಕೊಂಡು ಮನೇಗೆ ಮರಳಿದೆ.

ಗಾಳಿಪಟದ ಹಬ್ಬ ಬಂದಾಯ್ತು, ಈ ಸಲಿ ನಾಗಣ್ಣ ತನ್ನ ತರಾವರಿ ಗಾಳಿಪಟದ ಸಿದ್ಧತೆಯಲ್ಲಿದ್ದ, ಅದಕ್ಕೆ ನನ್ನ ಪಟಕ್ಕೆ ನಾನೆ ನಾಗಣ್ಣನ ಬಳಿ ನೋಡಿ ಕಲಿತಿದ್ದ ನೆತ್ತಿ ಸೂತ್ರ ಹಾಕ್ಕೊಂಡಿದ್ದೆ. ಯಾವುದೇ ಮರಗಿಡಗಳಿಗೆ ಕರೆಂಟ್ ಕಂಬಕ್ಕೆ ಸಿಕ್ಕಬಾರದೆಂದು ಮನೆಯ ಮಾಡಿ ಮೇಲಿನಿಂದ ಪಟ ಹಾರಿಸಲು ಸಿದ್ಧತೆ ಮಾಡಿಕೊಂಡಿದ್ದೆ. ಅಂದು ಗಾಳಿಪಟದ ಹಬ್ಬ ಬೇರೆ, ಆಕಾಶದ ತುಂಬೆಲ್ಲ ಪಟಗಳ ಚಿತ್ತಾರ, ಅವುಗಳ ನಡುವೆಯೇ ನನ್ನ ಪಟ ಸಹ ಹಾರಿಸಿದ್ದೆ, ನನ್ನ ಅದೃಷ್ಟವೋ ಏನೋ ಎಂಬುವಂತೆ ಯಾವುದೇ ಲೈಟು ಕಂಬ ತೆಂಗಿನ ಮರ ನೀಲಗಿರಿ ಮರಕ್ಕೆ ಸಿಕ್ಕಿಕೊಳ್ಳದೆ ಪಟ ಮೇಲೆ ಹಾರುತಿತ್ತು. ಅಕ್ಕ ಪಕ್ಕದ ಮನೆ ಗೆಳೆಯರು ಸಹ ನನ್ನ ಪಟದ ಓಘ ನೋಡಿ ಮಹಡಿ ಮೇಲೆ ಬಂದರು, ನಾನು ಮಾಂಜಾ ದಾರದ ಪೂರ್ತಿ ಡೀಲ್ ಬಿಟ್ಟಿದ್ದೆ, ಬಂದ ಗೆಳೆಯರು ಲೋ ಎಲ್ಲೋ ನಿನ್ನ ಪಟ ಎಂದು ಕೇಳುವಾಗ ಅಕೋ ಅಲ್ಲಿ ಚಿಕ್ಕದಾಗಿ ಸೂರ್ಯನ ತರ ಡಿಸೈನ್ ಇದ್ಯಲ್ಲ ಅದೇ ಅಂತ ತೋರುಸ್ತಿದ್ದೆ, ನನ್ನ ಆನಂದಕ್ಕೆ ಪಾರವೇ ಇರಲಿಲ್ಲ. ನಡುವೆಯೇ ಯಾರೋ ಪೇಂಚು ಹಾಕಿದರು, ಮಾಂಜಾ ಪ್ರಭಾವ ನಾ ಒಂದೆರಡು ಸಲಿ ಜಗ್ಗಿದ್ದಕ್ಕೆ ಅವರ ದಾರವೇ ಕಟ್ ಆಗಿತ್ತು. ನನ್ನೊಡನೆ ನನ್ನ ಪಟ ನೋಡುತಿದ್ದ ಗೆಳೆಯನೊಬ್ಬ ಪಟ ಕಟ್ಟು ಅಂತ ಕಟ್ ಆದ ಗಾಳಿಪಟದ ಬೆನ್ನೇರಿ ಹೊರಟ. ನನ್ನ ಗಾಳಿಪಟ ಮುಗಿಲ ಚುಂಬಿಸಿ ನರ್ತಿಸುತಿತ್ತು. ಅಪ್ಪ ಅಮ್ಮ ಎಲ್ಲರನ್ನು ಕರೆದು ತೋರಿಸಿದೆ ಪೇಪರ್ ಚೂರುಗಳನ್ನು ದಾರದಲ್ಲಿ ಸೇರಿಸಿ ಜಗ್ಗಿ ಜಗ್ಗಿ ಸಂದೇಶವನ್ನು ನನ್ನ ಪಟಕ್ಕೆ ಕಳುಹಿಸುತಿದ್ದೆ.

ಇದ್ದಕ್ಕಿದ್ದಂತೆ ಯಾಕೋ ನನ್ನ ಕೈ ಸಡಿಲವಾದಂತನಿಸಿತು, ನೋಡಿದರೆ ನನ್ನ ಗಾಳಿಪಟದ ದಾರ ಕಟ್ಟಾಗಿಬಿಟ್ಟಿತ್ತು, ನನ್ನ ಪಕ್ಕದಲ್ಲಿದ್ದ ಗೆಳೆಯನೊಬ್ಬ ಪಟ ಕಟ್ಟು ಎಂದು ಕಿರುಚಿದ, ನನ್ನ ಕಣ್ಮುಂದೆಯೇ ನನ್ನ ನನಸಾಗಿದ್ದಂತಹ ಕನಸು ಒಡೆದು ಹೋಗಲು ಶುರುವಾಗಿಬಿಟ್ಟಿತ್ತು, ಪಟವನ್ನೇ ದಿಟ್ಟಿಸಿ ನೋಡುತ್ತ ಅದರ ಹಿಂದೆ ಓಡಲು ಶುರು ಮಾಡಿದೆ, ಓಡಿದೆ ಓಡಿದೆ ಓಡುತ್ತಲೇ ಇದ್ದೀನಿ, ಇಂದಿಗೂ ಸಹ ನನ್ನ ಆ ಗಾಳಿಪಟ ಸಿಕ್ಕಲೇ ಇಲ್ಲ. ಹುಡುಕುತ್ತಲೇ ಇದ್ದೀನಿ ಕಳೆದು ಹೋದ ನನ್ನ ಬಾಲ್ಯದ ಆ ಸಿಹಿ ನೆನಪುಗಳನ್ನ, ಎಲ್ಲಿಯೂ ಸಿಗುತ್ತಿಲ್ಲ. ನೀವು ಸಹ ಆ ಕನಸುಗಳ ಹಿಂದೆ ಓಡುತಿದ್ದೀರಿ ಅಲ್ಲವೇ ಗೆಳೆಯರೆ??

ಪ್ರೀತಿಯಿಂದ

ಪವನ್ ಪಾರುಪತ್ತೇದಾರ.

2 comments:

  1. ಶೈಲಿ ಓಡಿಸಿಕೊಂಡೊ ಹೋಯಿತು. ನಿಮ್ಮ ಕಡೆಯ ಸಾಲು ನಿಜ ಪವನ "ನೀವು ಸಹ ಆ ಕನಸುಗಳ ಹಿಂದೆ ಓಡುತಿದ್ದೀರಿ ಅಲ್ಲವೇ ಗೆಳೆಯರೆ??"

    ReplyDelete
  2. Naanu nanna snehitaru gaalipata haarisida nenapugalu gnapaka bantu... Maanja, Landa pata, balangochi, sutra.. Ah! Good old days! Tummba chennagide Pavan, baravanige..

    ReplyDelete