Friday, September 7, 2012

ಕೆರೆಯ ಕಲ್ಪನೆಯ ಹಮ್ಮು

ನಿಂತ ನೀರದು ಬಿಂಬ ತೋರಲು
ಹರಿವ ನೀರದು ಬಿಂಕ ತೋರುವುದು
ಎರಡಕ್ಕೂ ಅದರದೇ ಆದ ಹೆಮ್ಮೆ
ಇದಕ್ಕೆ ನಿಂತದ್ದೇ ಆದರೆ ಅದಕ್ಕೆ ಹರಿದದ್ದೆ

ಮನುಜನ ಜಡವನ್ನೆಲ್ಲ ಒಂದೆಡೆ
ಗುಡ್ಡೆ ಮಾಡಿ ಅವಿಸಿಬಿಡುವ ಚಾಣಾಕ್ಷತನ
ಕೊಳಕನ್ನೆಲ್ಲ ತನ್ನೊಡಲಲ್ಲಿ ತುಂಬಿಕೊಂಡು
ಹೂಳೆತ್ತಿಸಿಕೊಳ್ಳದೆ ತುಂಬು ಬಸುರಿಯಾದ ಹೆಮ್ಮೆ
ನಿಂತ ನೀರಿಗಾದರೆ

ಕಾಡೆನದೆ ಮೇಡೆನದೆ ಬೆಟ್ಟದಲಿ ಗುಡ್ಡದಲಿ
ತೆವಳುತಾ ಕುಂಟುತಾ ಗುದ್ದಾಡಿ ಹೊಡೆದಾಡಿ
ಕಲ್ಲುಗಳ ಪುಡಿಮಾಡಿ ಮರಳಿನ ಖನಿ ಮಾಡಿ
ಮನುಜನಿಗೆ ನೆರವಾಗಿ ಸಾಗರವ ಸೇರುವ ಹೆಮ್ಮೆ
ಹರಿವ ನೀರಿಗಿದೆ

ನಿಂತ ಕೆರೆಯಾಗದೆ ಹರಿವ ನದಿಯಾಗು ಗೆಳೆಯ
ನೋವಿನ ಕಾಡನು ಎದುರಿಸಿ ಮುಂದೆನಡಿ
ಕಷ್ಟಗಳ ಕೋಟಲೆಯ ಧೈರ್ಯದಲಿ ಮಾಡು ಪುಡಿ
ಸ್ವಂತಿಕೆಯ ಎತ್ತಿ ಹಿಡಿ ಸಂಘದಲಿ ನೀನು ದುಡಿ
ಗುರಿಯ ಸೇರುವ ಸಮಯ ಹೆಮ್ಮೆಯಿರಲಿ ನಿನಗೆ
ನಿಂತ ನೀರಾಗದೆ ಹರಿವ ನದಿಯಾದೆನೆಂದು
ನಿಂತ ನೀರಾಗದೆ ಹರಿವ ನದಿಯಾದೆನೆಂದು

ಪವನ್ ಪಾರುಪತ್ತೇದಾರ :-

ಗುರಿ...??

ತಲೆಗೂದಲು ಕೆದರಿ
ಮುಖವೆಲ್ಲವೂ ಬೆವರಿದೆ
ಗುರಿಯೆಂಬುದು ಇನ್ನೂ ಮರೀಚಿಕೆ
ದಾರಿಯೇ ಇನ್ನೂ ನಿಶ್ಚಯವಾಗಿಲ್ಲ
ಏಕಾಂಗಿಯ ಈ ಪಯಣದಲಿ
ಗುರಿ ಮುಟ್ಟಿದರೆ ಸಾಕು ಸಾರ್ಥಕ
ಸತ್ತರೂ ಸರಿಯೆ ಸೋಲು ಬೇಕಿಲ್ಲ
ಕಿರಾತಕರು ಅಲ್ಲಲ್ಲಿ ಕೀಟಲೆಯ ಮಾಡಿಹರು
ಅಂಕುಡೊಂಕಿನ ದಾರಿಯಿದು ಡೊಂಕಾಗಿ ನಡೆ ಎಂದು
ಬುದ್ಧಿಜೀವಿಗಳೆಲ್ಲ ದಡ್ಡರಾಗಿಹರು
ಅಡ್ಡದಾರಿಯ ನನ್ನಂತ ಯುವಕರಿಗೆ ತೋರಿಹರು
ಆದರೂ ಹೊರೆಟಿಹೆನು ವಿಧಿಯ ಒಮ್ಮೆಲೆ ನಂಬಿ
ಅನಿಸುತಿದೆ ಗುರಿಯೆಡೆಗೆ ಸಾಗುತಿಹೆನೆಂದು
ಧ್ಯೇಯವನು ಮರೆಯದೇ ಧೃಢವಾಗಿ ಅವುಚಿರಲು

ಕಲ್ಲುಮುಳ್ಳುಗಳಿಲ್ಲಿ ಹೆಜ್ಜೆ ಹೆಜ್ಜೆಗೆ ನೂರು
ನಂಬಿಕೆಯ ಚಪ್ಪಲಿಯೂ ಮೋಸ ಮಾಡಿದೆ ಈಗ
ಹುಡುಕಿದರೂ ಸಿಗದಲ್ಲ ನಂಬಿಕೆಯ ಅಂಗಡಿ
ಮಾರುವವರಾರು ಇಲ್ಲ ಜಗದಲ್ಲಿ
ಜೀವವೂ ನಂಬದು ಬಡಿಯುವ ಹೃದಯವ
ಗೊತ್ತಾಗದದಕೆ ಎಂದು ನಿಲ್ಲಿಸುವುದೆಂದು
ಆದರೂ ನಂಬಿರುವೆ ಈ ನನ್ನ ವಿಧಿಯನ್ನು
ಅನಿಸುತಿದೆ ಗುರಿಯೆಡೆಗೆ ಸಾಗುತಿಹೆನೆಂದು
ಧ್ಯೇಯವನು ಮರೆಯದೇ ಧೃಢವಾಗಿ ಅವುಚಿರಲು

ಪವನ್ ಪಾರುಪತ್ತೇದಾರ :-