Tuesday, November 29, 2011

ಕೆಟ್ಟವರ ಕಿಸೆಗೊಂದು ಕನ್ನವ ಹಾಕೋಣ


ಕೆಟ್ಟವರ ಕಿಸೆಗೊಂದು ಕನ್ನವ ಹಾಕೋಣ
ಕೋಟಿಯ ಕೋಟೆಯನು ಬರಿದು ಮಾಡೋಣ
ಮೋಸವ ನೆತ್ತರಲಿ
ದ್ವೇಷದ ಮಾಂಸದಲಿ
ಸುಳ್ಳಿನ ಎಲುಬಿನಲಿ
ಮೆರೆಯುತಿಹ ಮುರ್ಖರ ಮನೆಯ ಕೆಡುವೋಣ

ಉಸಿರಿನ ಏರಿಳಿತ
ಏರುತಿದೆ ಎದೆ ಬಡಿತ
ಕಷ್ಟದ ಕವಲುಗಳು ನಷ್ಟಗಳ ಸಹಿತ
ಇನ್ನಷ್ಟು ಹೊತ್ತರೂ
ಇವನಿಲ್ಲಿ ಸತ್ತರೂ
ಏರದು ಇವನ ಆಸ್ತಿಗಳ ಕಡತ

ಬಡವನಿಗೆ ಬವಣೆ
ಹೋಗುತಿದೆ ಸಹನೆ
ಉಳ್ಳವರ ತೋರ್ಪಡಿಕೆ ಭಾವವ ನೋಡಿ
ಹರಿಸಿ ಬೆವರಕೋಡಿ
ನೀರಸವಾಗಿದೆ ನಾಡಿ
ಆದರು ನಿಲ್ಲದು ಉಳ್ಳವನ ರಾಡಿ

ಪವನ್ :-

ನನ್ನ ಮನಸು


ಕುರೂಪವಾಗಿದೆ ನನ್ನ ಮನಸು
ಕನ್ನಡಿಯ ಛಾಯೆಯನು ಹಿಡಿಯುವ ತವಕದಲಿ
ಗತವನ್ನು ಮೇಳೈಸೊ ಮೂರ್ಖ ಬುದ್ಧಿಯಲಿ
ನನ್ನನ್ನೇ ನಾ ಮೇಲು ಎಂಬ ಅಹಂ ಭಾವದಲಿ
ಕುರೂಪವಾಗಿದೆ ನನ್ನ ಮನಸು
...
ಅಂದು ನಾ ಹಾಗಿದ್ದೆ ರಾಜನ ಹಾಗೆ
ಬೆಳ್ಳಿ ತಟ್ಟೆಯಲಿ ಊಟ
ಸುತ್ತಲೂ ಬೆಂಗಾವಲು
ವಿಧ ವಿಧದ ಬಾಣಸಿಗರು
ರುಚಿ ರುಚಿಯ ಅಡುಗೆ
ಬಣ್ಣ ಬಣ್ಣದ ಉಡುಗೆ
ಇಂದಿಲ್ಲ ಅವೆಲ್ಲ ಆದರು ಯಾಕೋ
ಹೇಳಿಕೊಳ್ಳುವ ತವಕ ನಿಮ್ಮ ಬಳಿ ಯಾಕೋ

ಕೊಂಕಣಕೆ ಪಲ್ಲಕ್ಕಿ ಏರಿ ಹೋಗಿದ್ದೆ
ಸೈನಿಕರ ಕಾವಲಲಿ ಹಿಗ್ಗಿಹೊಗಿದ್ದೆ
ಸುಂದರಿಯರು ಸುತ್ತಲೂ
ಚಂದನವ ಮೆತ್ತಲೂ
ಸ್ವರ್ಗದಲ್ಲಿರುವಂತ ಸುಗ್ಗಿಯಲ್ಲಿದ್ದೆ
ಹಿಂದಿನಿಂದ್ಯಾರೋ ಕಿರುಚಿದಂತಾಯ್ತು
ಎದ್ದೇಳು ಸಾಕು ಘಂಟೆ ಎಂಟಾಯ್ತು

ಪಟಪಟನೆ ವೇಗದಿ ಜಳಕವ ಮುಗಿಸಿ
ಚಿತ್ರಾನ್ನ ಗಬಗಬನೆ ನಾ ತಿಂದು ಮುಗಿಸಿ
ಲೋಕಲ್ಲು ಬಸ್ಸನು ಓಡೋಗಿ ಹತ್ತಿ
ಆಫೀಸು ಮೆಜನು ಓಡೋಗಿ ಮುತ್ತಿ
ಕಡತಗಳ ಓದುವಿಕೆ ಶುರುವಾಯಿತಿನ್ನು
ಕನಸಲ್ಲೇ ಕಳೆದೋಯ್ತು ಕುರೂಪವಿನ್ನು...

ಪವನ್ :-

Friday, November 11, 2011

ಗೆಲುವೆಂಬುದು ನಿನ್ನತ್ತೆ ಮನೆಯಲ್ಲ


ಗೆಲುವೆಂಬುದು ನಿನ್ನತ್ತೆ ಮನೆಯಲ್ಲ
ಸುಮ್ಮನೆ ನಿನಗೆಂದು ರಾಜ ಮರ್ಯಾದೆ ಇಲ್ಲ
ಒಮ್ಮೊಮ್ಮೆ ನೀ ಹೊಸಲಲ್ಲೆ ಎಡವುವೆ
ಒಮ್ಮೆಮ್ಮೆ ಸನಿಹಕ್ಕೆ ಓಡಿ ಬಂದು ನಿಲ್ಲುವೆ
ಹಿಂದಿನಿಂದ ಯಾರಾದ್ರು ತಳ್ಳಿದರೂ ನೀ ಹೋಗಲ್ಲ
ನನಗೇನು ಗೆದ್ದುಬಿಡುವೆ ಎಂಬ ಅಹಂ ಬಾವ ಸರಿಯಲ್ಲ

ನಿನ್ನಂತೆ ಅತ್ತೆ ಮನೆಗೆ ಹತ್ತಾರು ಅಳಿಯಂದಿರು
ಒಬ್ಬಬ್ಬರು ಒಂದೊಂದು ವಿಷೇಶತೆ ಹೊಂದಿರುವರು
ಒಬ್ಬ ಇಲ್ಲಿ ಹಾರ್ಡ್ವೇರು ಮತ್ತೊಬ್ಬ ಸಾಪ್ಟ್ವೇರು
ಇನ್ನಷ್ಟು ಜನರ ಬಳಿ ಇದೆ ಹಳೆಯಳಿಯನ ಹೆಸರು
ಕಟ್ಟುವನೊಬ್ಬ ಲಂಚದ ಬಹುಮಹಡಿ ಕಟ್ಟಡ
ಇನ್ನೊಬ್ಬ ಬರುತಾನೆ ಕೂಗುತಲಿ ಎನ್ನಡ ಎನ್ನಡ

ಸ್ವಲ್ಪ ಸೊಂಬೇರಿಯಾದರು ನಿನಗಿಲ್ಲ ಉಳಿಗಾಲ
ನಿನ್ನತ್ತೆ ಮನೆ ಸೇರಲಷ್ಟು ಸುಲಭವೇನಲ್ಲ
ಮರೆಯದಿರು ಗೆಲುವಿಗೆ ನೂರೆಂಟು ಮೆಟ್ಟಿಲು
ತಯಾರಾಗು ಎಲ್ಲರೊಂದಿಗೆ ನೀ ಕೂಡ ನುಗ್ಗಲು
ಕೆಡದಿರು ಧೃತಿಯನ್ನು ಒಮ್ಮೆ ನೀ ಸೋತಾಗ
ಹೆಚ್ಚು ಸೋಲು ಕಂಡವರಿಗೆ ಗೆಲುವು ಸರಾಗ

ನಿನಗವರೊಬ್ಬರೆ ಅತ್ತೆಯಾಗಿರಬಹುದು
ಅವರಿಗೆ ನೀ ಒಬ್ಬನೆ ಅಳಿಯನಾಗಬೇಕೆಂದೇನಿಲ್ಲ

ಕೆಲಸದ ಹುಡುಕಾಟದಲ್ಲಿರುವ ಗೆಳೆಯರಿಗೆ, ಪವನ್ :-

ನೋಡು ಕನ್ನಡಮ್ಮ ನಿನ್ನ ಮಕ್ಕಳ ಕಥೆ ಮತ್ತು ವ್ಯಥೆಯ


ನೋಡು ಕನ್ನಡಮ್ಮ ನಿನ್ನ ಮಕ್ಕಳ ಕಥೆ ಮತ್ತು ವ್ಯಥೆಯ
ಆರು ಕೋಟಿ ಜನರ ವಿಷಯ ಹೇಳಲಾಗುವುದಿಲ್ಲ
ಪುಟ ತುಂಬಿಸುವಷ್ಟು ಸಮಯ ನನ್ನಲ್ಲಿಲ್ಲ
ಅಮ್ಮನಲ್ಲಿ ಸುಳ್ಳು ಹೇಳುವನು ನಾನಲ್ಲ
ಕೊಡುವೆ ನಿನಗೆ ಇಂದು ಬಹಳಷ್ಟು ಖುಷಿ ಒಂದಷ್ಟು ಫಿರ್ಯಾದು
ಕೇಳು ಕನ್ನಡಮ್ಮ ನಿನ್ನ ಮಕ್ಕಳ ಕಥೆ ಮತ್ತು ವ್ಯಥೆಯ

ಕನ್ನಡದ ಕ್ರಿಕೆಟ್ ಗೋಡೆಯು ನಿವೃತ್ತಿಯಾದ
ಪ್ರಪಂಚದ ಕ್ರಿಕೆಟಿಗರಿಗೆ ಮಾದರಿಯಾದ
ಕನ್ನಡಿಗ ವಿಶ್ವದಲೇ ಹೆಸರುವಾಸಿಯಾದ
ಮದಿರೆಯ ಲೋಕಕ್ಕೆ ಸರದಾರನಾದ
ವೇಗದ ಆಟಕ್ಕೆ ಭಾರತದಲಿ ಮುನ್ನುಡಿಯ ಬರೆದ

ಎಡ್ಡಿ ರೆಡ್ಡಿಗಳು ಕಂಬಿಯನು ಎಣಿಸುತ್ತ ಕುಂತರು
ತಾವು ಮಾಡಿದ ತಪ್ಪಿಗೆ ಶಿಕ್ಷೆ ಇದು ಅಂದರು
ಆಪರೇಷನ್ ಕಮಲಕ್ಕೆ ಬಿದ್ದಿಲ್ಲ ಬ್ರೇಕು
ಕರಡಿ ಕೊಟ್ಟಿತು ದಳಕ್ಕೆ ಶಾಕು
ರಾಜಕೀಯದ ತಪ್ಪುಗಳಿಗೆ ಲೆಕ್ಕವೇ ಇಲ್ಲ
ಹೇಳುತ್ತಾ ಹೋದರೆ ಪುಟಗಳೇ ಸಾಲಲ್ಲ

ಚಂಪರಿಗೆ ಕೊಟ್ಟವರೇ ಪಂಪ ಪ್ರಶಸ್ತಿ
ಸಾಹಿತಿಗೆ ಇದಕಿಂತ ಇನ್ನೇನು ಬೇಕು ಅಸ್ತಿ
ರಾಜ್ಯೋತ್ಸವ ಪ್ರಶಸ್ತಿ ೫೦ ಕ್ಕೆ ಸೀಮಿತ
ಅರ್ಹರಿಗೆ ಸಿಕ್ಕರೆ ಎಲ್ಲರಿಂದಲೂ ಸ್ವಾಗತ

ಬರೆಯುವುದು ಬಹಳಷ್ಟು ಬಾಕಿ ಇದೆ
ಅದಕ್ಕಾಗಿ ನಮ್ಮ ಕನ್ನಡ ಬ್ಲಾಗು ಇದೆ
ನನ್ನಂತ ಕನ್ನಡ ಸೇವಕರ ಬಳಗ ಇದೆ
ಬಂದು ನೋಡಮ್ಮ ಒಮ್ಮೆ ನಮ್ಮ ಕನ್ನಡ ಸೇವೆಯ
ಮೆಚ್ಚುವೆ ನೋಡಿ ನೀ ನಮ್ಮ ನಿನ್ನ ಮೇಲಿನ ಪ್ರೀತಿಯ
ನೋಡು ಕನ್ನಡಮ್ಮ ನಿನ್ನ ಮಕ್ಕಳ ಕಥೆ ಮತ್ತು ವ್ಯಥೆಯ
ಕೇಳು ಕನ್ನಡಮ್ಮ ನಿನ್ನ ಮಕ್ಕಳ ಕಥೆ ಮತ್ತು ವ್ಯಥೆಯ

ಕನ್ನಡ ರಾಜ್ಯೋತ್ಸವ ಶುಭಾಶಯಗಳೊಂದಿಗೆ ಪವನ್ :-

ನಾ ಕೆಟ್ಟವನಾ.......


ನಾ ಕೆಟ್ಟವನಾ.......
ಇನ್ನೊಬ್ಬರ ಕಷ್ಟ ಕಾರ್ಪಣ್ಯಗಳಲಿ
ಭಾಗವಾಗುವ ಆಸೆಯಲಿ
ಕಣ್ಣೀರ ಧಾರೆಯನು ಒರೆಸುವ ತವಕದಲಿ
ನನ್ನೆದಯ ಭಾವನೆಗೆ ಒಂದಿಷ್ಟು ಬೆಲೆಕೊಡದೆ
ಆಸೆಗಳ ಅಮುಕುತಲಿ ಸ್ವಲ್ಪವು ಧ್ರುತಿಗೆಡದೆ
ಮೋಸದ ಲೋಕದಲಿ ನನ್ನ ಮನವನ್ನಿರಿಸಿ
ಪರರ ಸುಖದಲ್ಲಿ ನನ್ನ ನಲಿವನ್ನ ಮರೆತಿರುವ
ನಾ ಕೆಟ್ಟವನಾ.......

ಪವನ್ :-

ಮಂಜಿನ ಮಂಟಪ


ಮಂಜಿನ ಮಂಟಪದಲಿ
ಪವನನ ನಾದದಲಿ
ವರುಣನ ಢೋಲಿನಲಿ
ಗುಡುಗು ಸಿಡಿಲಿನ ಪಕ್ಕವಾದ್ಯದಲಿ
ಇಬ್ಬನಿಯ ಬೆಳಕಿನಲಿ
ಹಕ್ಕಿಗಳ ಚಿಲಿಪಿಲಿ ಮಂತ್ರದಲಿ
ಪ್ರಾಣಿಗಳ ಗತ್ತಿನ ಸಮ್ಮುಖದಲಿ
ನಡೆದಿದ ಅರುಣ ಮತ್ತು ಭುವಿಯ ಮದುವೆ
ಭುವಿಯ ಸೇರು ಬಾ ನೀ ಅರುಣನೆ ಮಳೆಯ ವಸ್ತ್ರವ ಧರಿಸಿ

ಕಟ್ಟುತಿಹನು ಅರುಣ ತಾಳಿಯನು ಮಳೆ ಹನಿಯ ದಾರದಲಿ
ಆನಂದದಿ ಕುಣಿದಹರು ರೈತರು ಹೊಲಗಳಲಿ
ನದಿಗಳಿಗೆ ನರ ನರಗಳಲು ಮೈತುಂಬಿದ ಆನಂದ
ಮರ ಹೇಳಿತು ಗಿಡಗಳಿಗೆ ಹಬ್ಬವಿದು ಕಂದ
ಋತುಗಳಿಗೆ ಹೊಸಬರನು ಕರೆತರುವ ಆತುರ
ಸಾಗರಕೆ ಹೊಸ ಬಳಗ ಸ್ವಾಗತಿಸುವ ಕಾತುರ
ಭುವಿಯ ಸೇರು ಬಾ ನೀ ಅರುಣನೆ ಮಳೆಯ ವಸ್ತ್ರವ ಧರಿಸಿ

ಪವನ್ :-

ಗೆದ್ದವರ ಮುಂದೆ ಸೋತವರು ಯಾರು


ಗೆದ್ದವರ ಮುಂದೆ ಸೋತವರು ಯಾರು
ಸೋತವರ ಮುಂದೆ ಗೆದ್ದವರು ಯಾರು
ಉಂಡವರ ಮುಂದೆ ಹಸಿದವರು ಎಷ್ಟೋ
ಹಸಿದವರ ಮುಂದೆ ಉಂಡವರು ಎಷ್ಟೋ

ಗೆದ್ದವನದು ಒಂದು ರೀತಿಯ ಬದುಕು
ಸೋತವನದು ಒಂದು ರೀತಿಯ ಬದುಕು
ಗೆದ್ದವನಿಗೆ ಸಾಧಿಸಿದೆನೆಂಬ ಸಂತಸ
ಸೋತವನಿಗೆ ಗೆಲ್ಲಲಿಲ್ಲವೆಂಬ ಸಂಕಟ

ಬೀಗಿ ಬೀಗಿ ಬೆಳೆದವನು ಒಬ್ಬ
ಬಾಗಿ ಬಾಗಿ ತುಳಿಸಿಕೊಂಡವನು ಒಬ್ಬ
ಸುತ್ತಲಿನ ಜನರೆಲ್ಲ ಸೋತವನ ನಿಂದಿಸಿ
ಗೆದ್ದವನ ಹೊಗಳಿಕೆಯ ಅಟ್ಟಕ್ಕೆ ಏರಿಸಿ
ಸೋತವನು ಇನ್ನೇನು ಸತ್ತನು ಎಂದರು
ಸೋತವನ ಹೃದಯವ ಚೂರಾಗಿ ಮಾಡಿದರು

ಗೆದ್ದವನಿಗೆ ಉಳಿದಿದ್ದೆ ಒಂದೇ ಒಂದು ದಾರಿ
ಸೋತವನಿಗೆ ತೆರೆದಿತ್ತು ಸಾವಿರಾರು ದಾರಿ
ಹೃದಯದ ಪ್ರತಿಯೊಂದು ಚೂರನ್ನು ಹುಡುಕಿ
ಅದರೊಳಗೆ ಮತ್ತಷ್ಟು ವಿಶ್ವಾಸ ಕೆಲಕಿ
ನೂರಾರು ಪುಟಗಳಲಿ ವಿಷಯಗಳ ಕೆದಕಿ
ತಲೆಯೊಳಗೆ ಮತ್ತಷ್ಟು ಮಾಹಿತಿಯ ತುರುಕಿ
ಸೋತಿದ್ದು ಅಂದು ನಾನಲ್ಲವೆಂದು
ಗೆದ್ದು ಸಾರಿದನು ಮೇಲ್ದನಿಯಲಿ ಇಂದು

ಆದರೆ
ವಧಿಯ ಸೋತು ಗೆಲ್ಲುವ ಈ ಆಟದಲ್ಲಿ
ಹುಟ್ಟಿದನು ಮತ್ತೊಬ್ಬ ಸೋತವನು ಇಲ್ಲಿ
ಗೆದ್ದವರ ಮುಂದೆ ಸೋತವರು ಯಾರು
ಸೋತವರ ಮುಂದೆ ಗೆದ್ದವರು ಯಾರು......

ಸೋತವರಿಗೆ ಎಲ್ಲವೂ ಮುಗಿದಿಲ್ಲ ಎಂದು ಹೇಳುತ ಪವನ್ :-