Thursday, July 26, 2012

ಹೇ ಬೆಡಗಿ ನಿನ್ ಹೆಸರು ಏನು

ಅಂದು ಚಂದ್ರ ರಜೆ ಹಾಕಿದ್ದ
ಬೀದಿ ದೀಪಗಳಿಗೆ ನಿದ್ದೆಯ ಸಮಯ
ಉದ್ದನೆಯ ಡಾಂಬರ ರಸ್ತೆ
ವಾಹನಗಳು ನಿರ್ಜೀವ
ನಿಶ್ಯಬ್ಧಕ್ಕೆ ಸವಾಲೆನ್ನುವ ಮೌನ
ಕಗ್ಗತ್ತಲಲಿ ಒಬ್ಬ ಸುಂದರಿ

ಊರು ಗೊತ್ತಿಲ್ಲ ಕೇರಿ ಗೊತ್ತಿಲ್ಲ
ಕಣ್ಣು ಸ್ವಲ್ಪ ಐಬು ಇರಬಹುದು
ಹೋದ ದಾರಿಯಲ್ಲೆ ಮತ್ತೆ ಪ್ರಯಾಣ
ಆಗಾಗ ಕುಸಿದು ಬೀಳುತಿದ್ದಾಳೆ
ರೋಗಿಯೂ ಕುಂಟಿಯೂ ಆಗಿರಬಹುದು

ಪ್ರತಿಮನೆಯ ಬಾಗಿಲೂ ತಟ್ಟುತಿದ್ದಾಳೆ
ಕೆಲವರು ಒಳಗೆ ಕರೆದರು
ಸ್ವಲ್ಪ ಸಮಯದ ಬಳಿಕ ಈಕೆಯೇ ಹೊರಗೆ
ಕೆಲವರು ಸ್ವಾಗತಿಸುತಿದ್ದಾರೆ
ಈಕೆಗದು ಕೇಳಿಸಲೇ ಇಲ್ಲ
ಈಕೆ ಕಿವುಡಿಯೂ ಆಗಿರಬಹುದು

ನನಗಂತೂ ನಿಲ್ಲದ ಕುತೂಹಲ
ಅವಳಾರು ಅವಳಾರು
ಮನದ ಗೊಂದಲವ ತಡೆಯಲಾಗದೆ ನಾನು
ತಡೆಹಿಡಿದು ಕೇಳಿದೆ ನೀ ಯಾರು ನೀನು

ಮುಗುಳ್ನಗೆಯ ಬೀರುತ ನುಡಿದಳಾ ಬೆಡಗಿ
ನನ್ ಹೆಸರು " ಬದುಕು " ಹುಡುಕುತಿಹೆ ಅವಕಾಶ

ಪವನ್ ಪಾರುಪತ್ತೇದಾರ :)

 

Sunday, July 8, 2012

ತಗಡಿನ ಡಬ್ಬ ಮತ್ತು ದೇಹ


ಬಿದ್ದಿತ್ತೊಂದು ತಗಡಿನ ಡಬ್ಬ
ಶೆಟ್ಟಿ ಅಂಗಡಿಯ ಹೊರಗೆ
ಎಷ್ಟು ಸಾವಿರ ಕಿಲೋ ಅಕ್ಕಿ ಹಿಡಿದಿತ್ತೋ
ಎಷ್ಟು ಸಾವಿರ ಕಿಲೋ ಬೇಳೆ ತುಂಬಿತ್ತೋ
ಇಂದದಕೆ ಮರಣ ಶಯ್ಯೆ
ಇನ್ನೇನು ಪೀರ್ ಸಾಬಿ ಸುತ್ತಿಗೆಯೊಂದಿಗೆ ಬರುವ
ಜಜ್ಜಿ ಕುಟ್ಟಿ ಪುಟ್ಟಗೆ ಮಡಚಿ
ಶೆಟ್ಟಿಗೊಂದಷ್ಟು ಕೈ ಬೆಚ್ಚಗೆ ಮಾಡಿ
ಶಿವಾಜಿನಗರದ ಗುಜರಿಗೆ ಸೇರಿಸಬಹುದು

ಶಿವಾಜಿನಗರವೆಂಬ ತಗಡು ಶವಾಗಾರದಲ್ಲಿ
ತಗಡಿನ ಡಬ್ಬಕ್ಕೊಂದು ಮರುಹುಟ್ಟು
ವಿಕಾರವಾದರೂ ಹೊಸ ಆಕಾರ
ತುಕ್ಕು ಹಿಡಿದ ಜಾಗಕ್ಕೆಲ್ಲ ಲಪ್ಪದ ಆಧಾರ
ಹೊಸಬಣ್ಣ ಹೊಸರೂಪು ಹೊಸಜಾಗದ ಪ್ರಯಾಣಕ್ಕೆ
ಶೆಟ್ಟಿ ಅಂಗಡಿಯ ತಗಡಿನ ಡಬ್ಬ ಮತ್ತೆ ಈಗ ಸಿದ್ಧ

ಅದೇ ದಿನ ಶೆಟ್ಟಿಯಂಗಡಿಯ ಹೊರಗೊಂದು ದೇಹ
ಸಿಂಗಾರ ಮಾಡಿತ್ತು ಬಣ್ಣ ಬಣ್ಣದ ಹೂಗಳಿಂದ
ಅದಕ್ಕೆಂದೆ ಹೊಸದಾದ ವಾಹನ
ಸುತ್ತಲೂ ಜನರು ಅದರ ಬಗ್ಗೆಯೇ ಮಾತು
ತಮಟೆಯ ನಿನಾದ ಮನೆಯವರ ಆಕ್ರಂದನ
ನಡುವೆಯೇ ತೆರಳಿತ್ತು ಸುಡುಗಾಡ ಕಡೆಗೆ

ಕಟ್ಟಿಗೆಯ ಸಿಂಹಾಸಸ ಬೆರಣಿಗಳ ಒಡವೆಗಳು
ತುಪ್ಪ ಸುರಿಯುತಿಯರು ದೇಹದ ಮೇಲೆಲ್ಲ
ಮಂತ್ರ ಓದುವನೊಬ್ಬ ಮಡಿಕೆ ಹಿಡಿಯುವನೊಬ್ಬ
ಕೊಳ್ಳಿ ಇಟ್ಟು ದೇಹಸುಟ್ಟು ಭಸ್ಮಮಾಡಿಹರಿಲ್ಲಿ

ಶೆಟ್ಟಿಯಂಗಡಿಯಿಂದ ಒಂದೇ ದಿನಕ್ಕೆ ಇಬ್ಬರು ಹೊರಗೆ
ತಗಡಿನ ಡಬ್ಬ ಮತ್ತು ಮನುಜನ ದೇಹ
ದೇಹ ಮಣ್ಣಿಗಾದರೆ ಡಬ್ಬ ಮತ್ತೆ ಕೆಲಸಕ್ಕೆ

ನೇತ್ರದಾನವಾದರೂ ಮಾಡಿ, ಪವನ್ ಪಾರುಪತ್ತೇದಾರ....!