ಮನವ ಕಲಕುವ ಬೇಸರ ಏಕೆ ನೀಡಿದೆ ಗೆಳೆಯ
ಜೊತೆಯಲ್ಲಿ ಬಿದ್ದು ಜೊತೆಯಲ್ಲಿ ಎದ್ದು
ಜಂಗುಳಿಯ ನಡುವೆ ನಮ್ಮದೇ ಸದ್ದು
ನಿನ್ನ ಅಂದಿನ ಮಾತು ಇನ್ನೂ ಗುನುಗುನಿಸುತಿದೆ
ಆ ಮಾತು ಸುಳ್ಳೆಂದು ಲೋಕ ಹಂಗಿಸುತಿದೆ
ಹೋಗನೆಂದೆ ದೂರ ನನ್ನ ಸ್ನೇಹವ ಬಿಟ್ಟು
ಹಣದ ದಾಹಕ್ಕೆ ಸಾಗರವ ದಾಟಿ ಹೋದೆ
ಹೇಳಿದ್ದೆ ಬಹಳಷ್ಟು ನಿನ್ನ ಬಳಿ ಗುಟ್ಟು
ಮತ್ತೆ ಕೇಳಲು ಅಸೆ ನನಗೆ ನೀ ಇಲ್ಲವಾದೆ
ಬದುಕು ನಿನ್ನದೆಂಬುದು ನನಗೂನು ಗೊತ್ತು
ಮರೆತುಬಿಟ್ಟೆಯ ನಿನ್ನಮ್ಮ ಕೊಟ್ಟ ಕೈ ತುತ್ತು
ನೀ ಅಂದು ಹೊರಟಾಗ ಬಹಳ ಖುಷಿಯಾಗಿದ್ದೆ
ಮತ್ತೆ ಬರೆನೆಂದಾಗ ಕುಗ್ಗಿ ಹೋಗಿದ್ದೆ
ನನ್ನ ಚಿಂತೆ ನನಗೇನು ಇಲ್ಲವೋ ಗೆಳೆಯ
ನಿನ್ನಂತ ಗೆಳೆಯರು ಇರುವರು ನೂರು
ಸ್ವಲ್ಪ ಅಹಂಕಾರ ನನಗೆ ಆದರು ತರವಿಲ್ಲ
ನನ್ನಂತಹ ಗೆಳೆಯರು ನಿನಗೆ ಸಿಗಲಾರು
ನನ್ನ ನೋಡಲು ನೀನು ಮತ್ತೆ ಬರಬೇಡ
ಅಮ್ಮನ ಪ್ರೀತಿಯನು ಮರೆತು ಇರಬೇಡ
ಹಾಸಿಗೆಯ ಅಂಚಿನಲಿ ಜವರಾಯ ಕಾದಿಹನು
ಮಗ ಬರುವನೆಂದು ನಿನ್ನಮ್ಮ ಹೇಳಿಹಳು
ಅವಳ ಬಿನ್ನಹವಕೆ ಬೆಲೆ ನೀಡಿ ಕುಳಿತಿಹನು
ನಿನ್ನ ಬರುವಿಕೆ ಕಾದು ನಿನ್ನಮ್ಮ ಮಲಗಿಹಳು
ಉಸಿರ ಬುಗ್ಗೆಯ ಹಿಡಿದು ಎದುರು ನೋಡುತಿಹಳು
ಜವಾರಯನಿಗಿರುವ ಕರುಣೆ ನಿನ್ನಲಿಲ್ಲವ ಗೆಳೆಯ
ಇದ್ದರೆ ಬಂದುಬಿಡು ಇಗಲೇ ಇನ್ನಿಲ್ಲ ಸಮಯ
ವಿದೇಶಗಳಲ್ಲಿದ್ದು ತಂದೆ ತಾಯಿಯರ ಸಾವಿಗೂ ಬರಲಾಗದಂತಹ ನತದೃಷ್ಟ ಮಕ್ಕಳಿಗೆ.....
ಪವನ್ :-