Tuesday, January 17, 2012

ಬುದ್ಧಿ ಮಾತು


ಚಪ್ಪಲಿಯ ಕೊನೆಯು ಕಿತ್ತು ಹೋಗಿತ್ತು
ಹಿಮ್ಮಡಿ ಅರ್ಧ ನೆಲವ ನೆಕ್ಕಿತ್ತು
ಅಂಗಿಯಲಿ ಆಕಾಶ ನೋಡ ಬಹುದಿತ್ತು
ಅರಮನೆ ತುಸು ದೂರ ನಡೆಯಬಹುದಿತ್ತು
ಆಸೆಯ ಹೊರೆಯಂತು ಹೆಗಲ ಮೇಲಿತ್ತು

ಸಗಣಿ ನೀರನು ರಾಚಿ ಅಂಗಳವ ತೊಳೆದರು
ರಂಗೋಲಿ ತುಂಬೆಲ್ಲ ಬಣ್ಣಗಳ ತುಂಬಿದರು
ಅಸೆ ಪಟ್ಟಿಯ ಎಲ್ಲ ದೇವರುಗಳ ಮುಂದಿಟ್ಟರು
ನಿನ್ನದಷ್ಟೇ ನಿನಗೆ ಲಭ್ಯವೋ ಮನುಜ

ಕೊಟ್ಟಿದ್ದು ತನಗೆಂದು ನಂಬಿ ಕೂರಲೆ ಬೇಡ
ಹೆಚ್ಚಾಗಿ ಎಂದಿಗೂ ಬಚ್ಚಿಡಲು ಬೇಡ
ಕೊಡೆ ಹಿಡಿಸಿಕೊಳ್ಳೋ ಜನರೇನೆ ಎಲ್ಲ
ಹತ್ತಿದ ಏಣಿಗೆ ಮರ್ಯಾದೆ ಇಲ್ಲ
ಸಹಕಾರ ಉಪಕಾರ ನೆನೆಯೊರೆ ಇಲ್ಲ
ಊರಿನ ಉಸಾಬರಿ ನಿನಗೆ ಬೇಕಿಲ್ಲ

ಸುಮ್ನೆ ಹೀಗೆ ಬುದ್ಧಿ ಮಾತು ಪವನ್ :-

Monday, January 9, 2012

ಬದುಕಿನ ರಂಗಮಂಚ


ನೋಡದಿರಲಿ ಯಾರು,
ಮುಖವೆಲ್ಲ ಕಪ್ಪು ಮಚ್ಚೆ
ಅಲ್ಲಲ್ಲಿ ತರಚಿದ ಗಾಯ
ಅಜ್ಞಾನದ ಅತಿರೇಕ
ಹುಚ್ಚೆದ್ದು ಕುಣಿಯಲು ಹೋಗಿ
ಬಿದ್ದ ಮೇಲಿನ ಸೂತಕ

ಕುಣಿದಿದ್ದು ಸಭೆಯಲೇ ಆದರು
ರಂಗ ಮಂಚದಲಲ್ಲ
ಬದುಕಿನ ಪುಸ್ತಕದ ಮೇಲೆ
ಪ್ರೇಕ್ಷಕರು ಕೋಟಿ ಜನ
ಎಲ್ಲರು ಹೇಳಿದರು ತಪ್ಪು ನಿನದೆಂದು
ಒಂದಷ್ಟು ಮೂಢರು
ನಿನ್ನ ಬೆಳವಣಿಗೆ ಸಹಿಸದೆ
ಬದುಕಿನ ಬೆಂಕಿಗೆ ತುಪ್ಪವನ್ನು ಹೊಯ್ದರು

ನಿನ್ನ ಬುದ್ದಿಯು ಆಗ ಲದ್ದಿ ತಿಂತಿತ್ತೆ
ಒಮ್ಮೆ ನೀ ಅರಿತವರ ನಂಬಬೇಕಿತ್ತೆ
ಮುದ್ದಿನ ಮುಖದಲೀಗ ಕಪ್ಪಗಿನ ಮಚ್ಚೆಗಳು
ಬದುಕ ಪುಟಗಳು ಈಗ ಹರಿದ ಹಾಳೆಗಳು
ಒತ್ತಾಸೆಯಾಗಿದ್ದ ಜನರು ಈಗಿಲ್ಲ
ಮೂಢರ ಸಂತೆಗೆ ನೀನೀಗ ಬೇಕಿಲ್ಲ
ತಿಳಿದಿಕೋ ಜಗವನು
ಕುಣಿಯುವ ಜಾಗವನು

ತಪ್ಪು ನಿರ್ಧಾರಗಳು ಬದುಕಿನ ದಿಕ್ಕನ್ನೇ ಬದಲಿಸುತ್ತವೆ ಪವನ್ :-

Friday, January 6, 2012

ಸರಿ ಶ್ರುತಿಯೋ ಅಪಶ್ರುತಿಯೋ


ತಂತಿ ಮೀಟುವಾಗೆಲ್ಲ ಬರಲೇಬೇಕೇನು ಇಂಪಾದ ರಾಗ
ಬದುಕಿನ ಅರಿವಿಲ್ಲದೆ ಬದುಕ ವೀಣೆ ನುಡಿಸಲು ಹೊರಟಾಗ
ಬದುಕ ವೀಣೆಯಲಿ ನೀ ಎಷ್ಟೇ ಪಳಗಿದರು
ಅಪಶ್ರುತಿಯ ರಾಗಗಳು ಮೂಡುವುದು ಹಲವಾರು
ಕಿತ್ತು ಹೋಗದು ತಂತಿ ನೀ ಹೇಗೆ ಮೀಟಿದರು
ರಾಗ ಹೊಮ್ಮುವುದಷ್ಟೇ ಅದರ ಕೆಲಸ
ಸರಿ ಶ್ರುತಿಯೋ ಅಪಶ್ರುತಿಯೋ ನುಡಿಸಿದರೆ ನೀನು
ಬೈಗುಳವೋ ಹೊಗಳಿಕೆಯೋ ಕಾಯುವುದೇ ಕೆಲಸ

ಅಭಿಮಾನ ಉಳ್ಳವರು ಅಪಶ್ರುತಿಯ ಕೇಳಿದರೂ
ಪಕ್ಕವಾದ್ಯವ ಬೆರಸಿ ಗೆಲುವನ್ನು ಕೊಡಿಸುವರು
ಅನುಮಾನ ಉಳ್ಳವರು ನೋಡಿ ನೋಡದಂತಿರುವರು
ಸರಿಶ್ರುತಿಯು ಕಂಡಾಗ ಹಿಂದೆಯೇ ಬರುವರು
ಅಹಂಕಾರ ಉಳ್ಳವರು ನಿನ್ನ ಕಡೆ ನೋಡರು
ನೀ ಒಮ್ಮೆ ಗೆದ್ದಾಗ ಧಗ ಧಗನೆ ಉರಿಯುವರು

ನಿನ್ನ ರಾಗವ ನೀನು ಸರಿಯಾಗಿ ತಿಳಿದಿಕೋ
ಜೀವನದ ತಾಳವನ್ನು ಸರಿಯಾಗಿ ಹಾಕಿಕೋ
ನಿರ್ಧಾರಗಳನ್ನೇ ಶ್ರುತಿಪೆಟ್ಟಿಗೆಯ ಮಾಡಿಕೋ
ಸರಿಯಾದ ಶ್ರುತಿಯನ್ನು ಬದುಕಿನಲಿ ತಂದುಕೋ
ರಾಗದ ಹೊಳೆಯೇ ಹರಿಯುವುದು ಬದುಕಿನಲಿ
ಸಂಗೀತದಂತೆ ಹಿತವಿಹುದು ನಿನ್ನ ಈ ಬಾಳಲಿ

ಬದುಕಿನ ರಾಗ ತಾಳ ತಪ್ಪದಿರಿ ಗೆಳೆಯರೆ ಪವನ್ :-

Monday, January 2, 2012

ಕಣ್ಣಭಾಷೆಯ ಪ್ರೀತಿಪಾಠ


ಬೇಕಿಲ್ಲ ನಿನ್ನ ಹುಸಿನೋಟ
ಬಹಳಾನೆ ತಿಳಿದಿರುವೆ ಕಣ್ಣ ಭಾಷೆಯನು
ಅರಿಯಬಲ್ಲೆನು ನಿನ್ನ ಹೃದಯದ ಕ್ರೌರ್ಯವನು

ಅಂದು ನಾ ಹೀಗಿರಲಿಲ್ಲ ಬಲು ಮುಗ್ಧನಾಗಿದ್ದೆ
ನಿನ್ನಯಾ ನೋಟಕ್ಕೆ ಮರಳಾಗಿ ಹೋಗಿದ್ದೆ
ಕಿರುನಗೆಯ ಕಾಣಿಕೆಗೆ ಕರಗಿ ನೀರಾಗಿದ್ದೆ
ಅರಿಯದೇ ಮೋಹದಲಿ ಮರೆಯಾಗಿ ಹೋಗಿದ್ದೆ

ಬಣ್ಣಬಣ್ಣದ ಮಾತು ನನಗಂತು ಹೊಸತು
ನಿನ್ನಂತೇ ನಟಿಸಲು ನನಗೆ ಬರಲಿಲ್ಲ
ಹೊರಗಡೆ ನಗುಮೊಗ ಗೆದ್ದಂತೆ ಇತ್ತು ಜಗ
ಹುಸಿನಗೆಯ ಆಯಧ ನನ್ನಲ್ಲಿ ಇರಲಿಲ್ಲ

ಬಣ್ಣಕ್ಕೆ ಬಿದ್ದಿದ್ದೆ ಬಲೆಯಲ್ಲಿ ಸಿಕ್ಕಿದ್ದೆ
ಭರವಸೆಯ ಬಾಳಿನಲಿ ಅನುಮಾನ ಇರಲಿಲ್ಲ
ನನ್ನನ್ನೇ ಮರೆತಿದ್ದೆ ನಿನ್ನನ್ನೇ ನಂಬಿದ್ದೆ
ನೀನ್ಯಾಕೋ ನಂಬಿಕೆಗೆ ಅರ್ಹಳಾಗಿಲ್ಲ

ದಿನಗಳು ಕಳೆದಾಯ್ತು ನಿಜಬಣ್ಣ ತಿಳಿದಾಯ್ತು
ಬಿಳುಪ ಹಿಂದಿನ ಕಪ್ಪು ನೀನು ಎಂದಾಯ್ತು
ನಂಬಿಕೆಟ್ಟಿಲ್ಲ ನಾನು ಬದುಕ ತಿಳಿಸಿದೆ ನೀನು
ಪ್ರೀತಿ ಪಾಠವ ಕಲಿಸಿದ ಕಹಿ ಜೇನು ನೀನು

ಯುವ ಪ್ರೇಮಿಗಳಿಗಾಗಿ ಪವನ್ :-

Thursday, December 29, 2011

ಮನವ ಕಲಕುವ ಬೇಸರ ಏಕೆ ನೀಡಿದೆ ಗೆಳೆಯ

ಮನವ ಕಲಕುವ ಬೇಸರ ಏಕೆ ನೀಡಿದೆ ಗೆಳೆಯ
ಜೊತೆಯಲ್ಲಿ ಬಿದ್ದು ಜೊತೆಯಲ್ಲಿ ಎದ್ದು
ಜಂಗುಳಿಯ ನಡುವೆ ನಮ್ಮದೇ ಸದ್ದು
ನಿನ್ನ ಅಂದಿನ ಮಾತು ಇನ್ನೂ ಗುನುಗುನಿಸುತಿದೆ
ಆ ಮಾತು ಸುಳ್ಳೆಂದು ಲೋಕ ಹಂಗಿಸುತಿದೆ
 
ಹೋಗನೆಂದೆ ದೂರ ನನ್ನ ಸ್ನೇಹವ ಬಿಟ್ಟು
ಹಣದ ದಾಹಕ್ಕೆ ಸಾಗರವ ದಾಟಿ ಹೋದೆ
ಹೇಳಿದ್ದೆ ಬಹಳಷ್ಟು ನಿನ್ನ ಬಳಿ ಗುಟ್ಟು 
ಮತ್ತೆ ಕೇಳಲು ಅಸೆ ನನಗೆ ನೀ ಇಲ್ಲವಾದೆ  
ಬದುಕು ನಿನ್ನದೆಂಬುದು ನನಗೂನು ಗೊತ್ತು
ಮರೆತುಬಿಟ್ಟೆಯ ನಿನ್ನಮ್ಮ ಕೊಟ್ಟ ಕೈ ತುತ್ತು
 
ನೀ ಅಂದು ಹೊರಟಾಗ ಬಹಳ ಖುಷಿಯಾಗಿದ್ದೆ
ಮತ್ತೆ ಬರೆನೆಂದಾಗ ಕುಗ್ಗಿ ಹೋಗಿದ್ದೆ 
ನನ್ನ ಚಿಂತೆ ನನಗೇನು ಇಲ್ಲವೋ ಗೆಳೆಯ 
ನಿನ್ನಂತ ಗೆಳೆಯರು ಇರುವರು ನೂರು 
ಸ್ವಲ್ಪ ಅಹಂಕಾರ ನನಗೆ ಆದರು ತರವಿಲ್ಲ 
ನನ್ನಂತಹ ಗೆಳೆಯರು ನಿನಗೆ ಸಿಗಲಾರು   
ನನ್ನ ನೋಡಲು ನೀನು ಮತ್ತೆ ಬರಬೇಡ
ಅಮ್ಮನ ಪ್ರೀತಿಯನು ಮರೆತು ಇರಬೇಡ
 
ಹಾಸಿಗೆಯ ಅಂಚಿನಲಿ ಜವರಾಯ ಕಾದಿಹನು 
ಮಗ ಬರುವನೆಂದು ನಿನ್ನಮ್ಮ ಹೇಳಿಹಳು
ಅವಳ ಬಿನ್ನಹವಕೆ ಬೆಲೆ ನೀಡಿ ಕುಳಿತಿಹನು  
ನಿನ್ನ ಬರುವಿಕೆ ಕಾದು ನಿನ್ನಮ್ಮ ಮಲಗಿಹಳು
ಉಸಿರ ಬುಗ್ಗೆಯ ಹಿಡಿದು ಎದುರು ನೋಡುತಿಹಳು
ಜವಾರಯನಿಗಿರುವ ಕರುಣೆ ನಿನ್ನಲಿಲ್ಲವ ಗೆಳೆಯ 
ಇದ್ದರೆ ಬಂದುಬಿಡು ಇಗಲೇ ಇನ್ನಿಲ್ಲ ಸಮಯ
 
ವಿದೇಶಗಳಲ್ಲಿದ್ದು ತಂದೆ ತಾಯಿಯರ ಸಾವಿಗೂ ಬರಲಾಗದಂತಹ ನತದೃಷ್ಟ ಮಕ್ಕಳಿಗೆ.....
 
ಪವನ್ :-

Tuesday, December 27, 2011

ಹಾಸ್ಯ ಕಲಾವಿದ

ನಗುವ ಹೊನಲ ಹರಿಸುವ ತವಕದಲಿ
ಕಾಲ್ ಕೆಳಗೆ ಮತ್ತು ತಲೆ ಮೇಲೆ ಮಾಡಿ
ನನ್ನನ್ನೇ ನಾ ಗೇಲಿಯಲಿ ತೊಡಗಿಸಿ
ಒಮ್ಮೊಮ್ಮೆ ಬಿದ್ದು
ಮರುಕ್ಷಣವೇ ಎದ್ದು
ನೋವನ್ನು ತಡೆದೆ ಬಿದ್ದಾಗ ಗುದ್ದು

ಮನೆಯವರ ನೆನಪು ನನಗಾಗಲಿಲ್ಲ
ಅಣಕಿಸಿದಾಗ ನನ್ನ ಮನ ನೋಯಲಿಲ್ಲ
ನನ್ನಂದ ನನಗಿಲ್ಲಿ ಹೆಮ್ಮೆಯೇನಿಲ್ಲ
ನೀವು ನಕ್ಕರೆ ಸಾಕು ಬೇರೇನೂ ಬೇಕಿಲ್ಲ

ತಿಳಿದವರು ನನ್ನ ತರಲೆ ಎಂದರು
ತನುಮನದಿ ನನ್ನಯ ಟೀಕೆಯಲಿ ತೊಡಗಿದರು
ತತ್ವ ಜ್ಞಾನವ ತಿಳಿಸುವ ಶಕ್ತಿ ನನಗಿಲ್ಲ
ವಿದ್ಯೆಯ ಮದವು ನೆತ್ತಿ ಹತ್ತಿಲ್ಲ

ಅರಿತಷ್ಟೇ ತಿಳಿಸಲು ಹೆದರಲ್ಲ ನಾನು
ಹೆಚ್ಚು ತಿಳಿದ ನೀನು ಮಾಡಿದ್ದಾದರೂ ಏನು
ನಿನ್ನನ್ನೇ ನೀ ಮಾಡ್ಕೊಂಡೆ ಹಣ ಮಾಡೋ ಯಂತ್ರ
ನನಗಿಲ್ಲಿ ಗೊತ್ತಿದೆ ನಗು ಹರಿಸೋ ತಂತ್ರ

ಹಾಸ್ಯ ಕಲಾವಿದರಿಗೆ ಸಣ್ಣ ನುಡಿ ನಮನ

ಪವನ್ :-

Wednesday, December 21, 2011

ಬದುಕ ಕೆತ್ತನೆ


ಕೆತ್ತು ಬಾ ಜೀವನ ಶಿಲ್ಪಿಯೆ
ಸುಂದರವಾದ ಶಿಲ್ಪವ ನನ್ನ ಬದುಕಿನಲಿ
ಬಿಗಿಯಾದ ಕಲ್ಲು ಹೃದಯವ
ಸಡಿಲ ಮಾಡು ಬಾ
ಕಲ್ಪನೆಯಲಿ ಕಾಯುತಿರುವೆ ನಾ
ಬದುಕ ಹೇಗೆ ಕೆತ್ತುವೆಯೆಂದು ಪ್ರತಿಯೊಂದು ಏಟಲು ನೀತಿ ಹೇಳು ನೀ
ತಪ್ಪಿಗೊಂದು ಏಟು ನೀಡುವ ಗುರುವಿನಂತೆ
ಎಗ್ಗುತಗ್ಗುಗಳು ಇರಲಿ ಶಿಲ್ಪದಲಿ
ನನ್ನಂದ ಕೆಡದಂತೆ
ಜನರಿಗೆಲ್ಲ ಬೆರಗಾಗಲಿ ನನ್ನ ನೋಡಿ
ಇವನಂತೆ ಇರಬೇಕೆಂದು
ಅಹಂ ಮುಡದಿರಲಿ ಮನದ ಕೋಣೆಯಲ್ಲಿ

ನಿನ್ನ ಪ್ರತಿಯೊಂದು ಏಟು
ನನಗೆ ಒಂದೊಂದು ನೀತಿ ಪಾಠ
ಅಲ್ಲಲ್ಲಿ ತಿದ್ದು ನೀ ತನ್ನತನ ಮರೆತಾಗ
ನಾಜೂಕಿರಲಿ ತಪ್ಪುಗಳ ತಿದ್ದುವಾಗ
ನಾ ತಿದ್ದಿಕೊಳ್ಳದಿದ್ದರೆ ಕೋಪಿಸಿಕೊಳ್ಳಬೇಡ
ನಿನ್ನ ಕೋಪದಿ ನಾ ಪುಡಿಯಾಗಿ ಬಿಟ್ಟೇನು
ಪುಡಿಯಾದ ಬದುಕ ಕಟ್ಟುವ ಶಕ್ತಿ ನನಗಿಲ್ಲ

ಪವನ್ :-